ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 13

ಧರ್ಮಗಳ ಭವಿಷ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಧರ್ಮಗಳ ಭವಿಷ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

1. ಎಲ್ಲಾ ಧರ್ಮಗಳೂ ದೇವರನ್ನು ಮೆಚ್ಚಿಸುತ್ತಿವೆಯೇ?

ಪ್ರತಿಯೊಂದು ಧರ್ಮದಲ್ಲೂ ಒಳ್ಳೆಯ ಜನರಿದ್ದಾರೆ. ದೇವರು ಅಂಥವರ ಸುಮನಸ್ಸನ್ನು ನೋಡಿ ಮೆಚ್ಚಿ ಅಕ್ಕರೆ ತೋರಿಸುತ್ತಾನೆ. ಆದರೆ ಇಂದು ಜನರು ಧರ್ಮದ ಹೆಸರಿನಲ್ಲಿ ದುಷ್ಕಾರ್ಯಗಳನ್ನು ಮಾಡುತ್ತಿದ್ದಾರೆ. (2 ಕೊರಿಂಥ 4:3, 4; 11:13-15) ಕೆಲವು ಧರ್ಮಗಳಂತೂ ಉಗ್ರಗಾಮಿ ಚಟುವಟಿಕೆ, ಜನಾಂಗೀಯ ಹತ್ಯೆ, ಯುದ್ಧ, ಮಕ್ಕಳ ದೌರ್ಜನ್ಯ ಮುಂತಾದ ಹೀನ ಕೃತ್ಯಗಳನ್ನು ನಡೆಸುತ್ತಿವೆಯೆಂದು ವರದಿಗಳು ಹೇಳುತ್ತವೆ. ಇವನ್ನೆಲ್ಲ ಕೇಳುವಾಗ ನಿಜವಾದ ಭಕ್ತಿ ಇರುವವರಿಗೆ ಆಘಾತವಾಗದಿರುವುದೇ?​ಮತ್ತಾಯ 24:3-5, 11, 12 ಓದಿ.

ಸತ್ಯ ಧರ್ಮ ದೇವರನ್ನು ಮಹಿಮೆಪಡಿಸುತ್ತದೆ. ಸುಳ್ಳು ಧರ್ಮ ಅಪ್ರಸನ್ನಗೊಳಿಸುತ್ತದೆ. ಏಕೆಂದರೆ ಅದು ಬೈಬಲ್‌ನಲ್ಲಿ ಇಲ್ಲದ ವಿಷಯಗಳನ್ನು ಬೋಧಿಸುತ್ತದೆ. ದೇವರ ಬಗ್ಗೆ ಮತ್ತು ಮೃತರ ಬಗ್ಗೆ ಸುಳ್ಳನ್ನು ಕಲಿಸುತ್ತದೆ. ಆದರೆ ಎಲ್ಲಾ ಧರ್ಮದ ಜನರು ತನ್ನ ಕುರಿತ ಸತ್ಯವನ್ನು ತಿಳಿದುಕೊಳ್ಳಬೇಕು ಎನ್ನುವುದು ಯೆಹೋವ ದೇವರ ಇಚ್ಛೆ.​ಯೆಹೆಜ್ಕೇಲ 18:4; 1 ತಿಮೊಥೆಯ 2:3-5 ಓದಿ.

2. ಧರ್ಮಗಳ ಭವಿಷ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ದೇವರ ಮೇಲೆ ಭಕ್ತಿಯಿದೆ ಎಂದು ಧರ್ಮಗಳು ಹೇಳಿಕೊಳ್ಳುತ್ತವಾದರೂ ವಾಸ್ತವದಲ್ಲಿ ಅವು ಸೈತಾನನ ಲೋಕವನ್ನು ಪ್ರೀತಿಸುತ್ತಿವೆ ಎನ್ನುವುದು ಯೆಹೋವ ದೇವರಿಗೆ ಚೆನ್ನಾಗಿ ಗೊತ್ತಿದೆ. (ಯಾಕೋಬ 4:4) ಆ ಎಲ್ಲಾ ಸುಳ್ಳು ಧರ್ಮಗಳನ್ನು ಬೈಬಲ್‌ “ಮಹಾ ಬಾಬೆಲ್‌” ಎಂದು ಕರೆಯುತ್ತದೆ. ಈ ಸುಳ್ಳು ಧರ್ಮಗಳು ನೋಹನ ಕಾಲದ ಜಲಪ್ರಳಯದ ನಂತರ ಬಾಬೆಲ್‌ ಎಂಬ ಪಟ್ಟಣದಲ್ಲಿ ಉಗಮವಾದವು. ಮಾನವರನ್ನು ವಂಚಿಸಿ ದಬ್ಬಾಳಿಕೆ ಮಾಡುತ್ತಿರುವ ಎಲ್ಲಾ ಧರ್ಮಗಳು ಬೇಗನೆ ಮತ್ತು ಎದುರುನೋಡದ ಕ್ಷಣದಲ್ಲಿ ದೇವರಿಂದ ವಿನಾಶವಾಗುವವು.​ಪ್ರಕಟನೆ 17:1, 2, 5, 16, 17; 18:8 ಓದಿ.

ಬೈಬಲ್‌ ಇನ್ನೊಂದು ಸಿಹಿಸುದ್ದಿ ತಿಳಿಸುತ್ತದೆ. ಏನು ಗೊತ್ತೇ? ಸುಳ್ಳು ಧರ್ಮಗಳಲ್ಲಿರುವ ಒಳ್ಳೇ ಜನರನ್ನು ದೇವರು ಮರೆತುಬಿಟ್ಟಿಲ್ಲ. ಅಂಥವರಿಗೆ ಸತ್ಯ ವಿಷಯಗಳನ್ನು ಕಲಿಸುವ ಏರ್ಪಾಡು ಮಾಡಿ ಸುಳ್ಳು ಧರ್ಮದೊಂದಿಗೆ ವಿನಾಶವಾಗದಿರಲು ಸಹಾಯ ಮಾಡುತ್ತಿದ್ದಾನೆ.​ಮೀಕ 4:2, 5 ಓದಿ.

3. ಸುಮನಸ್ಸುಳ್ಳ ಜನರು ಏನು ಮಾಡಬೇಕು?

ಸತ್ಯಧರ್ಮ ಜನರನ್ನು ಐಕ್ಯಗೊಳಿಸುತ್ತಿದೆ

ನೀತಿ ಸತ್ಯಗಳನ್ನು ಪ್ರೀತಿಸುವಂಥ ಜನರ ಮೇಲೆ ದೇವರಿಗೆ ತುಂಬ ಅಕ್ಕರೆ. ಹಾಗಾಗಿಯೇ ಸುಳ್ಳು ಧರ್ಮವನ್ನು ತೊರೆಯುವಂತೆ ಎಚ್ಚರಿಕೆ ನೀಡುತ್ತಾನೆ. ದೇವರ ಮೇಲೆ ನಿಜವಾದ ಪ್ರೀತಿಯಿರುವ ಜನರು ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧರಿರುತ್ತಾರೆ.​ಪ್ರಕಟನೆ 18:4 ಓದಿ.

ಯೇಸುವಿನ ಶಿಷ್ಯರು ಸುವಾರ್ತೆ ಸಾರಿದಾಗ ಸಹೃದಯದ ಜನರು ಸಂತೋಷದಿಂದ ಆಲಿಸಿದರು. ಭವ್ಯ ಭವಿಷ್ಯತ್ತಿನ ನಿರೀಕ್ಷೆ ನೀಡುವ ಹೊಸ ಜೀವನಮಾರ್ಗ ತಿಳಿದುಕೊಂಡರು. ಇದು ಅವರ ಬದುಕಿಗೊಂದು ಉದ್ದೇಶ ಕೊಟ್ಟಿತು. ಸುವಾರ್ತೆಯನ್ನು ಆಲಿಸಿ ಯೆಹೋವ ದೇವರು ಹೇಳಿದ ವಿಷಯಕ್ಕೆ ಬದುಕಿನಲ್ಲಿ ಪ್ರಾಮುಖ್ಯತೆ ಕೊಟ್ಟ ಅವರ ಮಾದರಿಯನ್ನು ನಾವು ಅನುಕರಿಸಬೇಕು.​1 ಥೆಸಲೊನೀಕ 1:8, 9; 2:13 ಓದಿ.

ಸತ್ಯ ಧರ್ಮವನ್ನು ಅರಸುತ್ತಾ ಸುಳ್ಳು ಧರ್ಮವನ್ನು ತೊರೆಯುವವರಿಗೆ ಯೆಹೋವ ದೇವರು ತನ್ನ ಕುಟುಂಬದ ಸದಸ್ಯರಾಗುವ ಆಮಂತ್ರಣ ನೀಡುತ್ತಾನೆ. ನೀವು ಆ ಆಮಂತ್ರಣವನ್ನು ಸ್ವೀಕರಿಸುವುದಾದರೆ ಯೆಹೋವ ದೇವರ ಗೆಳೆಯರಾಗುವಿರಿ. ಮಾತ್ರವಲ್ಲ ಆತನ ಲಕ್ಷಾಂತರ ಆರಾಧಕರಿಂದ ಕೂಡಿದ ಪ್ರೀತಿ ವಿಶ್ವಾಸ ತುಂಬಿರುವ ಒಂದು ಹೊಸ ಕುಟುಂಬ ನಿಮಗೆ ಸಿಗುವುದು. ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ಆಶೀರ್ವಾದ ನಿಮ್ಮದಾಗುವುದು.​ಮಾರ್ಕ 10:29, 30; 2 ಕೊರಿಂಥ 6:17, 18 ಓದಿ.

4. ಇಡೀ ಭೂಗ್ರಹವನ್ನು ಸಂತೋಷದ ತಾಣವಾಗಿ ಮಾಡಲು ದೇವರು ಏನು ಮಾಡುವನು?

ದೇವರು ಬೇಗನೆ ಸುಳ್ಳು ಧರ್ಮಗಳನ್ನು ಇಲ್ಲವಾಗಿಸಿ ಅವುಗಳ ದಬ್ಬಾಳಿಕೆಯಿಂದ ಜನರನ್ನು ವಿಮುಕ್ತಗೊಳಿಸುವನು. ಮಾನವರನ್ನು ವಂಚಿಸಲು, ಒಡಕು ಉಂಟುಮಾಡಲು ಒಂದೇ ಒಂದು ಸುಳ್ಳು ಧರ್ಮ ಇರುವುದಿಲ್ಲ. ಮಾನವರೆಲ್ಲರೂ ಒಬ್ಬನೇ ಸತ್ಯ ದೇವರಾದ ಯೆಹೋವನನ್ನು ಆರಾಧಿಸುತ್ತಾ ಒಗ್ಗಟ್ಟು ಐಕ್ಯತೆಯಿಂದ ಇರುವರು.​ಪ್ರಕಟನೆ 18:20, 21; 21:3, 4 ಓದಿ.