ಪಾಠ 14
ದೇವರು ಒಂದು ಸಂಘಟನೆಯ ಏರ್ಪಾಡು ಮಾಡಿರುವುದೇಕೆ?
1. ಪ್ರಾಚೀನ ಇಸ್ರೇಲ್ ಜನಾಂಗವನ್ನು ದೇವರು ಸ್ವಂತ ಜನರನ್ನಾಗಿ ಆರಿಸಿದ್ದೇಕೆ?
ದೇವರು ಪ್ರಾಚೀನ ಕಾಲದಲ್ಲಿ ಅಬ್ರಹಾಮ ಎಂಬವನ ವಂಶವನ್ನು ಆರಿಸಿಕೊಂಡು ನೀತಿನಿಯಮಗಳನ್ನು ಕೊಟ್ಟು ಆ ಜನಾಂಗಕ್ಕೆ “ಇಸ್ರೇಲ್” ಎಂದು ಹೆಸರಿಟ್ಟನು. ಆ ಜನಾಂಗದವರಿಗೆ ಮಾತ್ರ ತನ್ನ ಧರ್ಮಶಾಸ್ತ್ರವನ್ನು ಕೊಟ್ಟು ಸತ್ಯಾರಾಧನೆಯ ಏರ್ಪಾಡು ಮಾಡಿದ್ದನು. (ಕೀರ್ತನೆ 147:19, 20) ಅದಕ್ಕೆ ಕಾರಣವೂ ಇತ್ತು. ಏನೆಂದರೆ ಆ ಜನಾಂಗದಿಂದ ಭೂಮಿಯ ಎಲ್ಲಾ ಜನಾಂಗಗಳು ಆಶೀರ್ವಾದ ಹೊಂದಬೇಕೆಂದೇ.—ಆದಿಕಾಂಡ 22:18 ಓದಿ.
ದೇವರು ಇಸ್ರೇಲ್ ಜನಾಂಗವನ್ನು ಆರಿಸಿಕೊಂಡದ್ದು ತನ್ನ ಕುರಿತು ಇತರ ಜನಾಂಗಕ್ಕೆ ಸಾಕ್ಷಿ ನೀಡುವುದಕ್ಕಾಗಿ. ಪ್ರಾಚೀನ ಇಸ್ರೇಲ್‌ನ ಇತಿಹಾಸವನ್ನು ಕೆದಕುವುದಾದರೆ ದೇವರ ವಿಧಿನಿಯಮಗಳನ್ನು ಪಾಲಿಸುವುದರ ಪ್ರಯೋಜನ ಏನೆಂದು ತಿಳಿಯುತ್ತದೆ. (ಧರ್ಮೋಪದೇಶಕಾಂಡ 4:6) ನಿಜಕ್ಕೂ ಇಸ್ರೇಲ್ ಜನಾಂಗವನ್ನು ನೋಡಿ ಇತರ ಎಲ್ಲಾ ಜನಾಂಗದವರು ಸತ್ಯ ದೇವರಾದ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿತ್ತು.—ಯೆಶಾಯ 43:10, 12 ಓದಿ.
2. ಸತ್ಯ ಕ್ರೈಸ್ತರ ಸಂಘಟನೆ ಏಕಿದೆ?
ಇಸ್ರೇಲ್ ಜನರು ತನ್ನ ಮಾತನ್ನು ಕೇಳದ ಕಾರಣ ಯೆಹೋವ ದೇವರು ಅವರಿಗೆ ಬದಲಾಗಿ ಕ್ರೈಸ್ತ ಸಭೆಯನ್ನು ಆರಿಸಿಕೊಂಡನು. (ಮತ್ತಾಯ 21:43; 23:37, 38) ಈಗ ಇಸ್ರೇಲ್ ಜನಾಂಗವಲ್ಲ ಸತ್ಯ ಕ್ರೈಸ್ತರು ಯೆಹೋವ ದೇವರ ಕುರಿತು ಸಾಕ್ಷಿ ನೀಡುತ್ತಿದ್ದಾರೆ.—ಅಪೊಸ್ತಲರ ಕಾರ್ಯಗಳು 15:14, 17 ಓದಿ.
ಯೇಸು ತನ್ನ ಶಿಷ್ಯರನ್ನು ಕ್ರೈಸ್ತ ಸಭೆಯಾಗಿ ಸಂಘಟಿಸಿದು ಭೂಮಿಯಾದ್ಯಂತ ಎಲ್ಲಾ ಜನರಿಗೆ ಸುವಾರ್ತೆ ತಿಳಿಸಲು ಹಾಗೂ ಶಿಷ್ಯರನ್ನಾಗಿ ಮಾಡಲು. (ಮತ್ತಾಯ 10:7, 11; 24:14; 28:19, 20) ದುಷ್ಟ ಲೋಕದ ಅಂತ್ಯ ಹತ್ತಿರವಾಗಿರುವ ಈ ಸಮಯದಲ್ಲಿ ಆ ಕೆಲಸ ತೀವ್ರಗತಿಯಲ್ಲಿ ಸಾಗುತ್ತಿದೆ. ಮಾತ್ರವಲ್ಲ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ವಿವಿಧ ದೇಶಗಳ ಲಕ್ಷಾಂತರ ಜನರನ್ನು ಐಕ್ಯಗೊಳಿಸಿದೆ. ಅವರೆಲ್ಲರು ಒಂದೇ ಕುಟುಂಬದಂತೆ ಯೆಹೋವ ದೇವರನ್ನು ಆರಾಧಿಸುತ್ತಿದ್ದಾರೆ. (ಪ್ರಕಟನೆ 7:9, 10) ಸತ್ಯ ಕ್ರೈಸ್ತರು ಈ ರೀತಿಯಲ್ಲಿ ಸಂಘಟಿತರಾಗಿ ಇರುವುದು ಪರಸ್ಪರ ಪ್ರೋತ್ಸಾಹ ಹಾಗೂ ನೆರವು ನೀಡುವುದಕ್ಕಾಗಿ. ಪ್ರಪಂಚದಾದ್ಯಂತ ಇರುವ ಇವರ ಸಭೆಗಳಲ್ಲಿ ಒಂದೇ ರೀತಿಯ ಬೈಬಲ್ ಉಪದೇಶ ಕಾರ್ಯಕ್ರಮ ನಡೆಯುತ್ತದೆ.—ಇಬ್ರಿಯ 10:24, 25 ಓದಿ.
3. ನವೀನ ಕಾಲದಲ್ಲಿ ‘ಯೆಹೋವನ ಸಾಕ್ಷಿಗಳ’ ಆರಂಭ ಯಾವಾಗಾಯ್ತು?
ನವೀನ ಕಾಲದಲ್ಲಿ ಯೆಹೋವನ ಸಾಕ್ಷಿಗಳ ಸಂಘಟನೆ ಆರಂಭವಾದದ್ದು ಸುಮಾರು 1870ರ ಸಮಯದಲ್ಲಿ. ದೇವರ ಕುರಿತು ಬೈಬಲ್‌ನಲ್ಲಿರುವ ಅನೇಕಾನೇಕ ಸತ್ಯಗಳು ಮುಚ್ಚಿಹೋಗಿದ್ದ ಆ ಸಮಯದಲ್ಲಿ ಬೈಬಲ್ ವಿದ್ಯಾರ್ಥಿಗಳು ಎಂಬ ಹೆಸರಿನ ಚಿಕ್ಕ ಗುಂಪೊಂದು ಅವನ್ನು ಕಂಡುಕೊಳ್ಳಲು ಪ್ರಯತ್ನಿಸಿತು. ಯೇಸು ಕ್ರಿಸ್ತನು ಕ್ರೈಸ್ತ ಸಭೆಯನ್ನು ಸಂಘಟಿಸಿದು ಸುವಾರ್ತೆ ಸಾರುವ ಕೆಲಸಕ್ಕಾಗಿ ಎನ್ನುವುದನ್ನು ಮನಗಂಡ ಅವರು ಭೂಮಿಯಾದ್ಯಂತ ಸುವಾರ್ತೆ ಸಾರುವ ಕೆಲಸದಲ್ಲಿ ತೊಡಗಿದರು. ಇಸವಿ 1931ರಲ್ಲಿ ಬೈಬಲ್ ಆಧರಿತವಾಗಿ ಯೆಹೋವನ ಸಾಕ್ಷಿಗಳು ಎಂದು ಹೆಸರು ಬದಲಾಯಿಸಿಕೊಂಡರು.—ಅಪೊಸ್ತಲರ ಕಾರ್ಯಗಳು 1:8; 2:1, 4; 5:42 ಓದಿ.
4. ಯೆಹೋವನ ಸಾಕ್ಷಿಗಳು ಹೇಗೆ ಸಂಘಟಿತರಾಗಿದ್ದಾರೆ?
ಒಂದನೇ ಶತಮಾನದಲ್ಲಿ ಎಲ್ಲಾ ಕ್ರೈಸ್ತ ಸಭೆಗಳ ಉಸ್ತುವಾರಿಯನ್ನು ‘ಆಡಳಿತ ಮಂಡಲಿ’ ನೋಡಿಕೊಳ್ಳುತ್ತಿತ್ತು. ಕ್ರೈಸ್ತ ಸಭೆಯ ಶಿರಸ್ಸು ಯೇಸು ಎಂದು ಅದು ಅಂಗೀಕರಿಸಿತ್ತು. (ಅಪೊಸ್ತಲರ ಕಾರ್ಯಗಳು 16:4, 5) ಇಂದು ಸಹ ಭೂಮಿಯಾದ್ಯಂತ ಇರುವ ಯೆಹೋವನ ಸಾಕ್ಷಿಗಳನ್ನು ಆಡಳಿತ ಮಂಡಲಿಯ ಸದಸ್ಯರು ನಿರ್ದೇಶಿಸುತ್ತಾರೆ. ದೇಶವಿದೇಶಗಳಲ್ಲಿ ಇರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್‌ಗಳು ಈ ಆಡಳಿತ ಮಂಡಲಿಯ ಕೆಳಗೆ ಕಾರ್ಯನಿರ್ವಹಿಸುತ್ತವೆ. ಬೈಬಲ್ ಸಲಹೆಗಳಿರುವ ಸಾಹಿತ್ಯಗಳನ್ನು 600ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಿಸಿ ಮುದ್ರಿಸಿ ವಿತರಿಸುವ ಕೆಲಸವನ್ನು ಈ ಬ್ರಾಂಚ್ ಆಫೀಸ್‌ಗಳು ನೋಡಿಕೊಳ್ಳುತ್ತವೆ. ಹೀಗೆ ಆಡಳಿತ ಮಂಡಲಿ ಜಗತ್ತಿನಾದ್ಯಂತ ಇರುವ ಒಂದು ಲಕ್ಷಕ್ಕೂ ಹೆಚ್ಚು ಸಭೆಗಳಿಗೆ ಪ್ರೋತ್ಸಾಹ ಹಾಗೂ ನಿರ್ದೇಶನ ನೀಡುತ್ತಿದೆ. ಪ್ರತಿಯೊಂದು ಸಭೆಯನ್ನು ನೋಡಿಕೊಳ್ಳಲು ಅರ್ಹ ಮೇಲ್ವಿಚಾರಕರು ಇದ್ದಾರೆ. ಅವರನ್ನು ‘ಹಿರಿಯರು’ ಎಂದು ಕರೆಯಲಾಗುತ್ತದೆ. ಇವರು ದೇವಜನರನ್ನು ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ.—1 ಪೇತ್ರ 5:2, 3 ಓದಿ.
ದೇವರ ರಾಜ್ಯದ ಕುರಿತ ಸಿಹಿಸುದ್ದಿ ತಿಳಿಸಲು ಮತ್ತು ಶಿಷ್ಯರನ್ನಾಗಿ ಮಾಡಲು ಯೆಹೋವನ ಸಾಕ್ಷಿಗಳಾದ ನಾವು ಸುಸಂಘಟಿತರು. ಯೇಸುವಿನ ಶಿಷ್ಯರ ಮಾದರಿಯನ್ನು ಅನುಸರಿಸುತ್ತಾ ಮನೆಮನೆಗೆ ಹೋಗಿ ಸುವಾರ್ತೆ ತಿಳಿಸುತ್ತೇವೆ. (ಅಪೊಸ್ತಲರ ಕಾರ್ಯಗಳು 20:20) ಸೃಷ್ಟಿಕರ್ತನ ಬಗ್ಗೆ ಸತ್ಯ ತಿಳಿಯಲಿಚ್ಛಿಸುವ ಜನರಿಗೆ ಬೈಬಲ್ ವಿಷಯಗಳನ್ನು ಕಲಿಸುತ್ತೇವೆ. ಯೆಹೋವನ ಸಾಕ್ಷಿಗಳಾದ ನಮ್ಮದು ಕೇವಲ ಒಂದು ಸಂಘಟನೆ ಅಲ್ಲ. ಪ್ರೀತಿಯ ತಂದೆಯಿರುವ ಒಂದು ವಿಶ್ವಕುಟುಂಬ. ದೇಶ ಭಾಷೆ ಎಂಬ ಭೇದವಿಲ್ಲದೆ ನಾವು ಸೋದರ ಸೋದರಿಯರಂತೆ ಇದ್ದೇವೆ. (2 ಥೆಸಲೊನೀಕ 1:3) ಯೆಹೋವ ದೇವರ ಇಷ್ಟವನ್ನು ಮಾಡಲು ಹಾಗೂ ಪರರಿಗೆ ಸಹಾಯ ಮಾಡಲು ಸಂಘಟಿತರಾಗಿರುವ ಕಾರಣ ಯೆಹೋವನ ಸಾಕ್ಷಿಗಳಂತೆ ಬೇರೊಂದು ಸುಖೀ ಸಮುದಾಯ ಜಗತ್ತಿನಲ್ಲಿ ಇಲ್ಲ.—ಕೀರ್ತನೆ 33:12; ಅಪೊಸ್ತಲರ ಕಾರ್ಯಗಳು 20:35 ಓದಿ.