ಪಾಠ 8
ಕೆಟ್ಟಸಂಗತಿಗಳು ನಡೆಯುವಂತೆ ದೇವರೇಕೆ ಬಿಟ್ಟಿದ್ದಾನೆ?
1. ಪ್ರಪಂಚದಲ್ಲಿ ಕೆಟ್ಟಸಂಗತಿ ಹೇಗೆ ಆರಂಭವಾಯಿತು?
ಸೈತಾನನು ಮೊದಮೊದಲು ಸುಳ್ಳು ಹೇಳಿದಾಗ ಆರಂಭವಾಯಿತು. ಅವನೊಬ್ಬ ಪರಿಪೂರ್ಣ ದೇವದೂತನಾಗಿದ್ದನು. ಆದರೆ “ಸತ್ಯದಲ್ಲಿ ನೆಲೆನಿಲ್ಲಲಿಲ್ಲ.” (ಯೋಹಾನ 8:44) ಕಾರಣ, ಅವನಲ್ಲಿ ಮೊಳಕೆಯೊಡೆದ ದುರಾಶೆ. ಜನರು ದೇವರನ್ನಲ್ಲ ತನ್ನನ್ನು ಆರಾಧಿಸಬೇಕೆಂಬ ವಾಂಛೆ ಅವನಲ್ಲಿ ಬೆಳೆಯಿತು. ಅದನ್ನು ಸಾಧಿಸಲು ಪ್ರಪ್ರಥಮ ಸ್ತ್ರೀಯಾದ ಹವ್ವಳನ್ನು ವಂಚಿಸಿದನು. ಆಕೆಗೆ ದೇವರ ಕುರಿತು ಸುಳ್ಳು ಹೇಳಿದನು. ದೇವರನ್ನು ನಂಬದೆ ತನ್ನನ್ನು ನಂಬುವಂತೆ ಮಾಡಿದನು. ಹವ್ವಳ ಗಂಡ ಆದಾಮ ಸಹ ಆಕೆಯೊಂದಿಗೆ ಸೇರಿ ದೇವರ ಮಾತನ್ನು ಉಲ್ಲಂಘಿಸಿದನು. ಅವನ ಈ ಆಯ್ಕೆಯಿಂದಾಗಿ ಮನುಷ್ಯರಿಗೆ ಕಷ್ಟ ಹಾಗೂ ಮರಣ ಬಂತು.—ಆದಿಕಾಂಡ 3:1-6, 19 ಓದಿ.
ದೇವರ ಮಾತನ್ನು ಉಲ್ಲಂಘಿಸುವಂತೆ ಹವ್ವಳಿಗೆ ಕುಮ್ಮಕ್ಕು ನೀಡುವ ಮೂಲಕ ಸೈತಾನನು ದೇವರ ಪರಮಾಧಿಕಾರ ಅಥವಾ ಆಳುವ ಹಕ್ಕನ್ನು ಪ್ರತಿಭಟಿಸಲು ಆರಂಭಿಸಿದನು. ಸೈತಾನನ ಈ ಪ್ರತಿಭಟನೆಗೆ ಪ್ರಪಂಚದ ಬಹುಪಾಲು ಜನ ಕೈಜೋಡಿಸಿ ದೇವರ ಆಳ್ವಿಕೆಯನ್ನು ತಿರಸ್ಕರಿಸಿದರು. ಹೀಗೆ ಸೈತಾನ “ಈ ಲೋಕದ ಅಧಿಪತಿ” ಆದನು.—ಯೋಹಾನ 14:30; 1 ಯೋಹಾನ 5:19 ಓದಿ.
2. ದೇವರು ಮಾಡಿದ ಸೃಷ್ಟಿಯಲ್ಲಿ ಏನಾದರೂ ಲೋಪವಿತ್ತೆ?
ಖಂಡಿತ ಇಲ್ಲ. ದೇವರು ಮಾಡಿದ ಸೃಷ್ಟಿಯಲ್ಲಿ ಲೋಪದೋಷ ಎನ್ನುವುದೇ ಇರಲಿಲ್ಲ. ತನ್ನ ಮಾತನ್ನು ಪಾಲಿಸುವಂಥ ಪರಿಪೂರ್ಣ ಮನಸ್ಥಿತಿಯನ್ನು ದೇವರು ಮನುಷ್ಯರಿಗೆ ಹಾಗೂ ದೇವದೂತರಿಗೆ ಕೊಟ್ಟಿದ್ದನು. (ಧರ್ಮೋಪದೇಶಕಾಂಡ 32:4, 5) ಕೆಟ್ಟ ವಿಷಯಗಳನ್ನು ಮಾಡುವಂತೆ ಆತನೆಂದೂ ಯಾರನ್ನೂ ಪ್ರೇರೇಪಿಸುವುದಿಲ್ಲ. ಒಳ್ಳೇದನ್ನು ಮಾಡಬೇಕೋ ಕೆಟ್ಟದ್ದನ್ನು ಮಾಡಬೇಕೋ ಎಂಬ ಆಯ್ಕೆ ಸ್ವತಃ ನಮ್ಮದಾಗಿದೆ. ನಮಗಿರುವ ಈ ಆಯ್ಕೆಯ ಸ್ವಾತಂತ್ರ್ಯ ನಾವು ದೇವರನ್ನು ಪ್ರೀತಿಸುತ್ತೇವೋ ಇಲ್ಲವೋ ಎಂದು ತೋರಿಸಲು ಅವಕಾಶ ನೀಡುತ್ತದೆ.—ಯಾಕೋಬ 1:13-15; 1 ಯೋಹಾನ 5:3 ಓದಿ.
3. ಕೆಟ್ಟಸಂಗತಿ ನಡೆಯುವಂತೆ ದೇವರೇಕೆ ಇಷ್ಟು ಕಾಲ ಬಿಟ್ಟಿದ್ದಾನೆ?
ತನ್ನ ಪರಮಾಧಿಕಾರದ ವಿರುದ್ಧ ಎದ್ದಿರುವ ಪ್ರತಿಭಟನೆ ಇಷ್ಟು ದೀರ್ಘಕಾಲ ಮುಂದುವರಿಯುವಂತೆ ದೇವರು ಬಿಟ್ಟಿರಲು ಕಾರಣವಿದೆ. ಏನಂದರೆ ತನ್ನ ನೆರವಿಲ್ಲದೆ ಮಾಡುವ ಯಾವ ಆಳ್ವಿಕೆಯೂ ಮಾನವರಿಗೆ ಪ್ರಯೋಜನ ತರದು ಎನ್ನುವುದನ್ನು ರುಜುಪಡಿಸುವುದಕ್ಕಾಗಿಯೇ. (ಪ್ರಸಂಗಿ 7:29; 8:9) ಮಾನವನ ಸೃಷ್ಟಿಯಾಗಿ ಗತಿಸಿರುವ ಈ ಆರು ಸಾವಿರ ವರ್ಷಗಳ ಚರಿತ್ರೆ ಅದನ್ನು ರುಜುಪಡಿಸಿದೆ. ಯುದ್ಧ, ಅನ್ಯಾಯ, ಪಾತಕ, ಕಾಯಿಲೆಗಳನ್ನು ಅಳಿಸಿ ಹಾಕಲು ಯಾವ ಮಾನವ ಸರ್ಕಾರಗಳಿಂದಲೂ ಸಾಧ್ಯವಾಗಿಲ್ಲ.—ಯೆರೆಮೀಯ 10:23; ರೋಮನ್ನರಿಗೆ 9:17 ಓದಿ.
ಆದರೆ ದೇವರ ಆಳ್ವಿಕೆ ಮನುಷ್ಯರಿಗೆ ಊಹಿಸಲಾಗದಷ್ಟು ಪ್ರಯೋಜನ ತರುತ್ತದೆ. (ಯೆಶಾಯ 48:17, 18) ಇನ್ನು ಕೊಂಚ ಸಮಯವಷ್ಟೆ, ಯೆಹೋವ ದೇವರು ಮಾನವ ಸರ್ಕಾರಗಳನ್ನು ನಾಶಮಾಡುವನು. ದೇವರ ಆಳ್ವಿಕೆಗೆ ಬೆಂಬಲ ನೀಡುವವರು ಮಾತ್ರ ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವರು.—ಯೆಶಾಯ 11:9; ದಾನಿಯೇಲ 2:44 ಓದಿ.
ವಿಡಿಯೊ ನೋಡಿ ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?
4. ದೇವರು ಇಷ್ಟು ಕಾಲ ಸಹನೆಯಿಂದ ಇರುವುದು ನಮಗೆ ಯಾವ ಸದವಕಾಶ ಕೊಡುತ್ತದೆ?
ಮನುಷ್ಯರು ಯೆಹೋವ ದೇವರನ್ನು ಆರಾಧಿಸುವುದು ಪ್ರೀತಿಯಿಂದಲ್ಲ ಸ್ವಾರ್ಥ ಲಾಭಕ್ಕಾಗಿ ಎಂದು ಸೈತಾನ ವಾದಿಸುತ್ತಾನೆ. ಆದರೆ ಅದು ಸುಳ್ಳೆಂದು ರುಜುಪಡಿಸಲು ದೇವರ ದೀರ್ಘ ಸಹನೆ ನಮಗೆ ಅವಕಾಶ ಕೊಡುತ್ತದೆ. ನಾವು ದೇವರ ಆಳ್ವಿಕೆಯನ್ನು ಬೆಂಬಲಿಸುತ್ತೇವಾ ಇಲ್ಲವೇ ಮಾನವಾಳಿಕೆಯನ್ನು ಬೆಂಬಲಿಸುತ್ತೇವಾ ಎಂದು ಆಯ್ಕೆ ಮಾಡಬೇಕು. ನಮ್ಮ ಆಯ್ಕೆ ಏನಾಗಿದೆ ಎನ್ನುವುದನ್ನು ನಮ್ಮ ಜೀವನ ರೀತಿಯಲ್ಲಿ ತೋರಿಸಬಹುದು.—ಯೋಬ 1:8-12; ಜ್ಞಾನೋಕ್ತಿ 27:11 ಓದಿ.
5. ದೇವರ ಆಳ್ವಿಕೆಯನ್ನು ಬೆಂಬಲಿಸಲು ನಾವೇನು ಮಾಡಬೇಕು?
ಸೃಷ್ಟಿಕರ್ತ ದೇವರನ್ನು ಸತ್ಯಭಾವದಿಂದ ಆರಾಧಿಸುವುದು ಹೇಗೆಂದು ಬೈಬಲ್ನಿಂದ ಕಲಿತು ಅದೇ ರೀತಿಯಲ್ಲಿ ಆರಾಧಿಸಬೇಕು. (ಯೋಹಾನ 4:23) ಅದೇ ಸಮಯ ನಾವು ಸೈತಾನನ ಆಳ್ವಿಕೆಯನ್ನು ಬೆಂಬಲಿಸಲೇಬಾರದು. ಅಂದರೆ ಯೇಸುವಿನಂತೆ ನಾವು ಸಹ ಈ ಲೋಕದ ರಾಜಕೀಯ ವಿಷಯಗಳಿಗೆ ಮತ್ತು ಯುದ್ಧಗಳಿಗೆ ಬೆಂಬಲ ನೀಡಬಾರದು.—ಯೋಹಾನ 17:14 ಓದಿ.
ಅನೈತಿಕತೆ ಮುಂತಾದ ಕೆಟ್ಟ ವಿಷಯಗಳು ತಪ್ಪಲ್ಲವೆಂದು ಸೈತಾನ ಬಿಂಬಿಸುತ್ತಾನೆ. ಅಂಥ ಕೆಟ್ಟ ವಿಷಯಗಳನ್ನು ಮಾಡಲು ನಾವು ಒಪ್ಪದಿದ್ದಾಗ ಕೆಲವು ಬಂಧುಮಿತ್ರರು ನಮ್ಮನ್ನು ಗೇಲಿ ಮಾಡಬಹುದು, ಒತ್ತಡವನ್ನೂ ಹೇರಬಹುದು. (1 ಪೇತ್ರ 4:3, 4) ಅಂಥ ಸಮಯದಲ್ಲಿ ನಾವು ದೇವರ ಸಲಹೆ ನಿಯಮಗಳನ್ನು ಪಾಲಿಸುವ ಆಯ್ಕೆ ಮಾಡುತ್ತೇವಾ? ದೇವರ ಮಾತನ್ನು ಪಾಲಿಸುವುದಾದರೆ ಮತ್ತು ಆತನನ್ನು ಪ್ರೀತಿಸುವ ಜನರೊಂದಿಗೆ ಒಡನಾಟ ಬೆಳೆಸುವುದಾದರೆ ನಾವು ದೇವರ ಪಕ್ಷ ವಹಿಸುತ್ತೇವೆ. ಮಾತ್ರವಲ್ಲ ವಿರೋಧ ಒತ್ತಡ ಎದುರಾದಾಗ ಮಾನವರು ದೇವರ ಮಾತನ್ನು ಕೇಳದೆ ಸ್ವಂತ ಲಾಭ ನೋಡಿಕೊಳ್ಳುತ್ತಾರೆ ಎನ್ನುವ ಸೈತಾನನ ವಾದ ಸುಳ್ಳೆಂದು ನಿರೂಪಿಸುತ್ತೇವೆ.—1 ಕೊರಿಂಥ 6:9, 10; 15:33 ಓದಿ.
ದೇವರಿಗೆ ಮಾನವರ ಮೇಲೆ ಅತೀವ ಪ್ರೀತಿ ಇರುವುದರಿಂದ ಖಂಡಿತ ಕೆಟ್ಟಸಂಗತಿಗಳನ್ನು ನಿರ್ಮೂಲನ ಮಾಡುವನು. ಆತನ ಮೇಲೆ ನಂಬಿಕೆಯಿಟ್ಟು ಆತನ ಆಳ್ವಿಕೆಯನ್ನು ಬೆಂಬಲಿಸುವವರು ಇದೇ ಭೂಮಿಯಲ್ಲಿ ಸದಾಕಾಲ ಜೀವಿಸುವರು.—ಯೋಹಾನ 3:16 ಓದಿ.