ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 1

ಏನಿದು ಸಿಹಿಸುದ್ದಿ?

ಏನಿದು ಸಿಹಿಸುದ್ದಿ?

1. ದೇವರು ತಿಳಿಸುವ ಸಿಹಿಸುದ್ದಿ ಏನು?

ಮನುಷ್ಯರು ಭೂಮಿಯಲ್ಲಿ ಸುಖ ನೆಮ್ಮದಿಯಿಂದ ಬದುಕಬೇಕೆಂಬುದು ದೇವರ ಇಚ್ಛೆ. ನಮ್ಮ ಮೇಲೆ ಅವನಿಗೆ ಅಪಾರ ಪ್ರೀತಿ ಇರುವ ಕಾರಣದಿಂದಲೇ ಈ ಸುಂದರ ಭೂಮಿಯನ್ನು ಸೃಷ್ಟಿಸಿದ್ದಾನೆ. ಇನ್ನು ಸ್ವಲ್ಪ ಸಮಯದಲ್ಲಿ ಇಡೀ ಭೂಮಿಯ ಜನರಿಗೆ ಅವನು ಶಾಂತಿನೆಮ್ಮದಿಯ ಉತ್ತಮ ಭವಿಷ್ಯ ಕಲ್ಪಿಸಿಕೊಡುತ್ತಾನೆ. ಜನರನ್ನು ಕಷ್ಟಕಾರ್ಪಣ್ಯಗಳಿಂದ ಮುಕ್ತಿಗೊಳಿಸುತ್ತಾನೆ.​ಯೆರೆಮೀಯ 29:11 ಓದಿ.

ಈವರೆಗೆ ಯಾವ ಸರ್ಕಾರದಿಂದಲೂ ಕಾಯಿಲೆ, ಮರಣ, ಹಿಂಸೆಯನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ. ಆದರೆ ನಿಮಗೊಂದು ಸಿಹಿಸುದ್ದಿ. ದೇವರು ಬಲುಬೇಗನೆ ಎಲ್ಲ ಮಾನವ ಸರ್ಕಾರಗಳನ್ನು ಉರುಳಿಸಿ ತನ್ನ ಸರಕಾರವನ್ನು ಅಧಿಕಾರಕ್ಕೆ ತರುವನು. ಆತನ ಸರ್ಕಾರದಡಿ ಮನುಷ್ಯರಿಗೆ ಪೂರ್ಣ ಆರೋಗ್ಯ, ಶಾಂತಿ ಇರುವುದು.​ಯೆಶಾಯ 25:8; 33:24; ದಾನಿಯೇಲ 2:44 ಓದಿ.

2. ನೀವು ಸಿಹಿಸುದ್ದಿಯನ್ನು ತಿಳಿದುಕೊಳ್ಳುವುದು ಪ್ರಾಮುಖ್ಯವೇಕೆ?

ನಮ್ಮ ಕಷ್ಟಗಳು ತೀರಬೇಕಾದರೆ ಈ ಭೂಮಿಯಲ್ಲಿ ದುಷ್ಟ ಜನರು ಇರಬಾರದು. (ಚೆಫನ್ಯ 2:3) ದೇವರು ದುಷ್ಟ ಜನರನ್ನು ನಾಶ ಮಾಡುವನೇ? ಹೌದು. ಆ ಸಮಯ ತೀರಾ ಹತ್ತಿರದಲ್ಲಿದೆ ಎಂದು ಪ್ರಪಂಚದಲ್ಲಿ ನಡೆಯುತ್ತಿರುವ ಸಂಗತಿಗಳು ತೋರಿಸುತ್ತವೆ. ದೇವರು ದುಷ್ಟ ಜನರನ್ನು ನಾಶಮಾಡುವ ಕಾಲ ಸಮೀಪಿಸುವಾಗ ಲೋಕದಲ್ಲಿ ಯಾವ ಯಾವ ಸಂಗತಿಗಳು ನಡೆಯುತ್ತವೆ ಎಂದು ಬೈಬಲ್‌ನಲ್ಲಿ ಬರೆಯಲಾಗಿದೆ. ಅವು ಇಂದು ನಮ್ಮ ಕಣ್ಣಮುಂದೆ ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ದೇವರು ಸುಂದರ ಭವಿಷ್ಯ ತರಲಿದ್ದಾನೆ.​2 ತಿಮೊಥೆಯ 3:1-5 ಓದಿ.

3. ಸುಂದರ ಭವಿಷ್ಯ ನಿಮ್ಮದಾಗಲು ಏನು ಮಾಡಬೇಕು?

ದೇವರ ಬಗ್ಗೆ ತಿಳಿದುಕೊಳ್ಳಬೇಕು. ದೇವರ ಬಗ್ಗೆ ತಿಳಿದುಕೊಳ್ಳಲು ಬೈಬಲ್‌ ಸಹಾಯ ಮಾಡುತ್ತದೆ. ಅದು ನಮಗೆ ದೇವರು ಪ್ರೀತಿಯಿಂದ ಬರೆದ ಪತ್ರದಂತಿದೆ. ಸುಖನೆಮ್ಮದಿಯಿಂದ ಬದುಕಲು ನಾವೀಗ ಏನು ಮಾಡಬೇಕು ಎಂಬ ವಿಷಯ ಬೈಬಲ್‌ನಲ್ಲಿದೆ. ಅಷ್ಟೆ ಅಲ್ಲ ಮುಂದೆ ಇದೇ ಭೂಮಿಯಲ್ಲಿ ಸಾವೇ ಇಲ್ಲದ ಬದುಕು ಸಿಗುತ್ತದೆಂದು ತಿಳಿಸುತ್ತದೆ. ಆದರೆ ನೀವು ಬೈಬಲ್‌ ಓದುವುದು ಕೆಲವರಿಗೆ ಹಿಡಿಸದೆ ಇರಬಹುದು. ಹಾಗಂತ ದೇವರು ತರಲಿರುವ ಸುಂದರ ಭವಿಷ್ಯವನ್ನು ಕಳೆದುಕೊಳ್ಳಬೇಡಿ.​ಜ್ಞಾನೋಕ್ತಿ 29:25; ಪ್ರಕಟನೆ 14:6, 7 ಓದಿ.