ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಈ ಜಗತ್ತನ್ನು ನಾನು ಬದಲಾಯಿಸಬೇಕಾಗಿಲ್ಲ

ಈ ಜಗತ್ತನ್ನು ನಾನು ಬದಲಾಯಿಸಬೇಕಾಗಿಲ್ಲ
  • ಜನನ: 1966

  • ದೇಶ: ಫಿನ್‌ಲ್ಯಾಂಡ್‌

  • ಹಿಂದೆ: ಸಾಮಾಜಿಕ ಕಾರ್ಯಕರ್ತ

ಹಿನ್ನೆಲೆ:

ನನ್ನ ಊರು ಸೆಂಟ್ರಲ್‌ ಫಿನ್‌ಲ್ಯಾಂಡನಲ್ಲಿರುವ ಯುವಾಸ್ಕುಲ. ಚಿಕ್ಕ ವಯಸ್ಸಿನಿಂದಲೂ ನಾನು ಪ್ರಕೃತಿ ಪ್ರೇಮಿ. ಆಗಾಗ ನಾವು ಕುಟುಂಬವಾಗಿ ಊರಿನ ಸುತ್ತ ಇದ್ದ ಕಾಡುಗಳಿಗೆ, ಕೆರೆಗಳ ಹತ್ತಿರ ಹೋಗಿ ಅಲ್ಲಿನ ಸೌಂದರ್ಯವನ್ನು ನೋಡಿ ಆನಂದಿಸುತ್ತಿದ್ವಿ. ನನಗೆ ಪ್ರಾಣಿಗಳೆಂದರೆ ಪಂಚಪ್ರಾಣ. ಚಿಕ್ಕವನಿದ್ದಾಗ ನಾಯಿ, ಬೆಕ್ಕನ್ನು ನೋಡಿದ ತಕ್ಷಣ ತಬ್ಬಿಕೊಳ್ಳುತ್ತಿದ್ದೆ. ದೊಡ್ಡವನಾದ ಮೇಲೆ ಪ್ರಾಣಿಗಳಿಗೆ ಜನ ಹಿಂಸೆ ಕೊಡುತ್ತಿರುವುದನ್ನು ನೋಡಿ ಮನಸ್ಸಿಗೆ ತುಂಬ ನೋವಾಗುತ್ತಿತ್ತು. ಆಮೇಲೆ ನಾನು ಪ್ರಾಣಿ ಹಕ್ಕುಗಳ ಸಂಸ್ಥೆಗೆ ಸೇರಿಕೊಂಡೆ. ಅಲ್ಲಿ ನನ್ನ ಹಾಗೆ ಪ್ರಾಣಿ ಪ್ರೇಮಿಗಳು ಇದ್ದರು.

ಪ್ರಾಣಿಗಳ ಸಂರಕ್ಷಣೆಗೋಸ್ಕರ ನಾವು ತುಂಬ ಹೋರಾಡಿದೆವು. ಜನಜಾಗೃತಿ ಮೂಡಿಸಿದೆವು, ಪ್ರಾಣಿಗಳ ಕೂದಲಿಂದ ವಸ್ತುಗಳನ್ನು ಮಾಡಿ ಮಾರುತ್ತಿದ್ದ ಅಂಗಡಿಗಳ ಮುಂದೆ ಪ್ರತಿಭಟನೆ ಮಾಡಿದೆವು ಮತ್ತು ಪ್ರಾಣಿಗಳ ಪ್ರಯೋಗಾಲಯಗಳ ವಿರುದ್ಧ ಧಿಕ್ಕಾರ ಕೂಗಿದೆವು. ಪ್ರಾಣಿಗಳ ಸಂರಕ್ಷಣೆಗಾಗಿ ಒಂದು ಹೊಸ ಸಂಸ್ಥೆಯನ್ನು ರಚಿಸಿದೆವು. ನಮ್ಮ ಗುರಿ ಸಾಧಿಸಲಿಕ್ಕೆ ದೊಡ್ಡ ದೊಡ್ಡ ಹೆಜ್ಜೆಗಳನ್ನು ತಕ್ಕೊಂಡೆವು. ಹಾಗಾಗಿ ಅಧಿಕಾರಿಗಳಿಗೂ ನಮಗೂ ಯಾವಾಗಲೂ ಕಿರಿಕ್‌ ಆಗುತ್ತಿತ್ತು. ಇದ್ರಿಂದ ಲೆಕ್ಕನೇ ಇಲ್ಲದಿರುವಷ್ಟು ಸಲ ನಾನು ಜೈಲು ಕಂಬಿ ಎಣಿಸಬೇಕಾಯಿತು. ಕೋರ್ಟ್‌ ಮೆಟ್ಟಿಲು ಹತ್ತಬೇಕಾಯಿತು.

ಅಲ್ಲದೆ ಲೋಕದಲ್ಲಿರೋ ನೂರೆಂಟು ಸಮಸ್ಯೆ ನೋಡಿ ಮನಸ್ಸಿಗೆ ಇನ್ನೂ ನೋವಾಯಿತು. ಹಾಗಾಗಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಮತ್ತು ಗ್ರೀನ್‌ಪೀಸ್‌ ಇಂಥ ಎಷ್ಟೋ ಸಂಸ್ಥೆಗಳಿಗೆ ಸೇರಿಕೊಂಡೆ. ಈ ಸಂಸ್ಥೆಗಳ ಎಲ್ಲ ಚಟುವಟಿಕೆಗಳಿಗೆ ಜೀವನವನ್ನೇ ಧಾರೆ ಎರೆದೆ. ಬಡವರಿಗೆ, ಹೊಟ್ಟೆಗಿಲ್ಲದೆ ನರಳುತ್ತಿರುವ ಜನರಿಗೆ, ಈ ತರ ಬೇರೆ ಬೇರೆ ಕಷ್ಟ ಇರುವವರಿಗೆ ಸಿಗಬೇಕಾದ ಹಕ್ಕುಗಳಿಗೋಸ್ಕರ ಹೋರಾಡುತ್ತಿದ್ದೆ.

ಆ ಸಂಸ್ಥೆಗಳು ಚಿಕ್ಕಪುಟ್ಟ ಸಮಸ್ಯೆಗಳನ್ನು ಸರಿಮಾಡಿದವು. ಆದ್ರೆ ದೊಡ್ಡ ದೊಡ್ಡ ಸಮಸ್ಯೆ ಇನ್ನೂ ದೊಡ್ಡದಾಯಿತು. ಇಡೀ ಪ್ರಪಂಚ ಯಾವುದೋ ದುಷ್ಟಶಕ್ತಿಯ ಕೈಯಲ್ಲಿದೆ ಅಂತ ಅನಿಸಿತು. ಏನೇ ಆದರೂ ಯಾರೂ ಕ್ಯಾರೆ ಅನ್ನುತ್ತಿರಲಿಲ್ಲ. ನಾನು ಸೋತು ಹೋದೆ ಅಂತ ಅನಿಸಿತು. ಜಗತ್ತನ್ನು ಬದಲಾಯಿಸಲು ನನ್ನಿಂದ ಆಗಲ್ಲ ಅಂತ ಗೊತ್ತಾಯಿತು.

ಬದುಕನ್ನೇ ಬದಲಾಯಿಸಿತು ಬೈಬಲ್‌:

ನನ್ನಿಂದ ಏನೂ ಮಾಡಲಿಕ್ಕೆ ಆಗುತ್ತಿಲ್ಲವಲ್ಲಾ ಅನ್ನೋ ಕೊರಗಿನಲ್ಲಿ ದೇವರ ಬಗ್ಗೆ, ಬೈಬಲಿನ ಬಗ್ಗೆ ಯೋಚಿಸಲು ಶುರುಮಾಡಿದೆ. ಹಿಂದೆ ಯಾವಾಗಲೋ ಯೆಹೋವನ ಸಾಕ್ಷಿಗಳು ನನಗೆ ಬೈಬಲ್‌ ಕಲಿಸುತ್ತಿದ್ದರು. ಅವರು ತುಂಬ ದಯೆಯಿಂದ ನಡೆದುಕೊಳ್ಳುತ್ತಿದ್ದರು, ತುಂಬ ಕಾಳಜಿ ತೋರಿಸಿದರು. ಅದೆಲ್ಲ ನನಗೆ ಇಷ್ಟ ಆಯ್ತು. ಆದ್ರೆ ನನ್ನ ಜೀವನದಲ್ಲಿ ಕೆಲವು ಬದಲಾವಣೆ ಮಾಡ್ಕೊಳ್ಳಲು ನನಗೆ ಇಷ್ಟ ಇರಲಿಲ್ಲ. ಈ ಸಲ ನನ್ನ ಸನ್ನಿವೇಶ ಬದಲಾಗಿತ್ತು.

ನಾನು ನನ್ನ ಬೈಬಲ್‌ ತೆಗೆದು ಓದಲು ಶುರು ಮಾಡ್ದೆ. ಅದು ನನಗೆ ಆಗಿರುವ ಗಾಯಕ್ಕೆ ಮದ್ದು ಹಚ್ಚಿದ ಹಾಗಿತ್ತು. ಪ್ರಾಣಿಗಳಿಗೆ ಹಿಂಸೆ ಕೊಡಬಾರದು ಅನ್ನೋ ವಿಷಯ ಬೈಬಲಲ್ಲಿ ಎಷ್ಟೋ ಸಲ ಇರುವುದನ್ನು ಗಮನಿಸಿದೆ. ಉದಾಹರಣೆಗೆ ಜ್ಞಾನೋಕ್ತಿ 12:10 ಹೀಗೆ ಹೇಳ್ತದೆ: “ನೀತಿವಂತನು ತನ್ನ ಪ್ರಾಣಿಗಳಿಗೂ ದಯೆ ತೋರುವನು.” (ಪವಿತ್ರ ಗ್ರಂಥ) ಜಗತ್ತಿನ ಸಮಸ್ಯೆಗಳಿಗೆ ದೇವರು ಕಾರಣ ಅಲ್ಲ ಅಂತನೂ ನನಗೆ ಗೊತ್ತಾಯಿತು. ಸಮಸ್ಯೆಗಳು ಹದಗೆಡುತ್ತಿರುವುದಕ್ಕೆ ಕಾರಣ ಹೆಚ್ಚಿನ ಜನ ದೇವರ ಮಾತು ಕೇಳದೆ ಇರೋದ್ರಿಂದನೇ. ಯೆಹೋವನು ನಮ್ಮನ್ನು ತುಂಬ ಪ್ರೀತಿಸುತ್ತಾನೆ, ತುಂಬ ತಾಳ್ಮೆ ತೋರಿಸುತ್ತಿದ್ದಾನೆ ಎಂದು ಕಲಿತಾಗ ಮನಸ್ಸು ಕರಗಿ ಹೋಯ್ತು.—ಕೀರ್ತನೆ 103:8-14.

ಅದೇ ಸಮಯಕ್ಕೆ ನನಗೊಂದು ಕೂಪನ್‌ ಸಿಕ್ಕಿತು. ಅದನ್ನು ಭರ್ತಿ ಮಾಡಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ಬೇಕು ಅಂತ ಕೇಳಿಕೊಂಡೆ. ಯೆಹೋವನ ಸಾಕ್ಷಿಯಾದ ಗಂಡ-ಹೆಂಡತಿ ಕೆಲವೇ ದಿನದಲ್ಲಿ ನನ್ನ ಮನೆಗೆ ಬಂದು, ಬೈಬಲ್‌ ಸ್ಟಡಿಗೆ ಒಪ್ಪಿಗೆ ಇದೆಯಾ ಎಂದು ಕೇಳಿದ್ರು. ನಾನು ‘ಹಂ’ ಅಂದೆ. ಕೂಟಗಳಿಗೆ ಹೋಗಲಿಕ್ಕೂ ಶುರುಮಾಡ್ದೆ. ಬೈಬಲಿಂದ ಕಲಿಯುತ್ತಿದ್ದ ಸತ್ಯ ನನಗೆ ತುಂಬ ಇಷ್ಟ ಆಯ್ತು.

ಸಿಗರೇಟ್‌ ಸೇದುವುದನ್ನು, ಮಿತಿಮೀರಿ ಕುಡಿಯುವುದನ್ನು ಬಿಟ್ಟುಬಿಟ್ಟೆ. ನನ್ನ ಗೆಟಪನ್ನೇ ಚೇಂಜ್‌ ಮಾಡ್ಕೊಂಡೆ. ಕೆಟ್ಟ ಕೆಟ್ಟದಾಗಿ, ಒರಟಾಗಿ ಮಾತಾಡೋದನ್ನು ಬಿಟ್ಟುಬಿಟ್ಟೆ. ಅಧಿಕಾರಿಗಳ ಜೊತೆ ಜಗಳಕ್ಕೆ ಇಳಿಯುವುದನ್ನೂ ಬಿಟ್ಟುಬಿಟ್ಟೆ. (ರೋಮನ್ನರಿಗೆ 13:1) ಅನೈತಿಕತೆಯಲ್ಲಿ ಮುಳುಗಿ ಹೋಗಿದ್ದ ನಾನು ಅದಕ್ಕೆಲ್ಲ ಗುಡ್‌ಬೈ ಹೇಳಿದೆ. ನಾನು ಇಷ್ಟೆಲ್ಲಾ ಬದಲಾಗಲಿಕ್ಕೆ ಬೈಬಲೇ ಕಾರಣ.

ನಾನು ಸೇರಿಕೊಂಡಿದ್ದ ಸಂಸ್ಥೆಗಳನ್ನು ಬಿಡಬೇಕು ಅಂತ ನಿರ್ಧಾರ ಮಾಡಿದೆ. ಆದ್ರೆ ರಾತ್ರೋರಾತ್ರಿ ಈ ನಿರ್ಧಾರಕ್ಕೆ ಬರಲಿಲ್ಲ. ಇದನ್ನೆಲ್ಲ ಬಿಟ್ಟುಬಿಡೋದು ಅಷ್ಟು ಸುಲಭ ಆಗಿರಲಿಲ್ಲ. ಏಕೆಂದ್ರೆ ಹಾಗೆ ಮಾಡಿದರೆ ಆ ಸಂಸ್ಥೆಗಳಿಗೆ ದ್ರೋಹ ಮಾಡ್ತಿದ್ದೀನಿ ಅಂತ ಅನಿಸಿತು. ದೇವರ ಆಳ್ವಿಕೆ ಬಂದ್ರೆನೇ ಈ ಜಗತ್ತು ಉದ್ಧಾರ ಆಗೋದು ಅಂತ ಅರ್ಥಮಾಡಿಕೊಂಡೆ. ಅದಕ್ಕೇ ನನ್ನಿಂದ ಆದಷ್ಟು ಪ್ರಯತ್ನ ಮಾಡಿ ದೇವರ ಆಳ್ವಿಕೆಗೆ ಬೆಂಬಲ ಕೊಟ್ಟೆ. ಇದರ ಬಗ್ಗೆ ಬೇರೆಯವರಿಗೂ ಕಲಿಸಿದೆ.—ಮತ್ತಾಯ 6:33.

ಸಿಕ್ಕಿದ ಪ್ರಯೋಜನಗಳು:

ಸಾಮಾಜಿಕ ಕಾರ್ಯಕರ್ತನಾಗಿದ್ದಾಗ ಜನರನ್ನು ನೋಡಿದ ತಕ್ಷಣ ‘ಇವರು ಒಳ್ಳೇಯವರು, ಇವರು ಕೆಟ್ಟವರು’ ಅಂತ ತೀರ್ಮಾನ ಮಾಡಿಬಿಡುತ್ತಿದ್ದೆ. ನಾನು ಯಾರನ್ನು ಕೆಟ್ಟವರು ಅಂತ ಅಂದುಕೊಳ್ತಿದ್ದನೋ ಅವರಿಗೆ ಎದುರುಬೀಳ್ತಿದ್ದೆ. ಬೈಬಲ್‌ ಕಲಿತ ಮೇಲೆ ಜನರನ್ನು ದ್ವೇಷಿಸುವುದನ್ನು ಬಿಟ್ಟು ಕ್ರಿಸ್ತನ ಹಾಗೆ ಜನರನ್ನು ಪ್ರೀತಿಸಲು ಪ್ರಯತ್ನಿಸುತ್ತಿದ್ದೇನೆ. (ಮತ್ತಾಯ 5:44) ನಾನು ಈ ಪ್ರೀತಿಯನ್ನು ತೋರಿಸುವ ಒಂದು ವಿಧ, ದೇವರ ಆಳ್ವಿಕೆಯ ಸಿಹಿಸುದ್ದಿಯನ್ನು ಜನರಿಗೆ ಸಾರುವುದೇ. ಈ ಕೆಲಸದಿಂದ ಜನರಿಗೆ ಒಳ್ಳೇದಾಗುತ್ತಿದೆ, ಮನಶ್ಶಾಂತಿ ಸಂತೋಷ ಒಳ್ಳೇ ಭವಿಷ್ಯಕ್ಕೆ ನಿರೀಕ್ಷೆ ಸಿಗ್ತಿದೆ. ಇದನ್ನು ನೋಡಿ ನನಗೆ ತುಂಬ ಖುಷಿ ಆಗುತ್ತದೆ.

ನಾನೀಗ ಎಲ್ಲವನ್ನೂ ಯೆಹೋವನ ಕೈಯಲ್ಲಿ ಬಿಟ್ಟುಬಿಟ್ಟಿದ್ದೇನೆ. ಹಾಗಾಗಿ ನೆಮ್ಮದಿಯಾಗಿ ಇದ್ದೇನೆ. ಮನುಷ್ಯರಿಗೆ ಪ್ರಾಣಿಗಳಿಗೆ ಹಿಂಸೆ ಕೊಡುವುದನ್ನು ಸೃಷ್ಟಿಕರ್ತನಾದ ಆತನು ಸಹಿಸುವುದಿಲ್ಲ, ಅವರನ್ನು ಕಾಪಾಡೇ ಕಾಪಾಡುತ್ತಾನೆ, ಈ ಸುಂದರ ಭೂಮಿ ನಾಶವಾಗಲಿಕ್ಕೆ ಬಿಡಲ್ಲ ಅಂತ ನನಗೆ ಪೂರ್ತಿ ಭರವಸೆ ಇದೆ. ಈಗ ಆಗಿರುವ ಎಲ್ಲ ಹಾನಿಯನ್ನು ಬೇಗನೇ ಆತನು ತನ್ನ ಆಳ್ವಿಕೆಯಲ್ಲಿ ಸರಿಪಡಿಸುತ್ತಾನೆ. (ಯೆಶಾಯ 11:1-9) ಇದನ್ನೆಲ್ಲ ನಾನು ತಿಳಿದುಕೊಂಡಿದ್ದೀನಿ, ಬೇರೆಯವರಿಗೂ ತಿಳಿಸುತ್ತಾ ಇದ್ದೀನಿ. ಹಾಗಾಗಿ ನಾನು ತುಂಬ ಖುಷಿಯಾಗಿ ಇದ್ದೀನಿ. ಈ ಜಗತ್ತನ್ನು ಬದಲಾಯಿಸಬೇಕು ಅಂತ ನನಗೀಗ ಅನಿಸಲ್ಲ.