ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯ ಪತ್ರ

ಆಡಳಿತ ಮಂಡಲಿಯ ಪತ್ರ

‘ನೀವು ಬೋಧಕರಾಗಿರಬೇಕು.’ (ಇಬ್ರಿ. 5:12) ಇಡೀ ವಿಶ್ವದಲ್ಲೇ ಅತ್ಯುತ್ತಮ ಬೋಧಕನಾಗಿರುವ ಯೆಹೋವನು ತನ್ನ ಬಗ್ಗೆ ಬೇರೆಯವರಿಗೆ ಕಲಿಸಲು ನಮ್ಮನ್ನು ಕರೆಯುತ್ತಿದ್ದಾನೆ. ಇದು ಎಂಥ ಸುಯೋಗ! ಯೆಹೋವನ ಬಗ್ಗೆ ಸತ್ಯವನ್ನು ಮನೆಯಲ್ಲಿ, ಸಭೆಯಲ್ಲಿ, ಸೇವೆಯಲ್ಲಿ ಕಲಿಸುವ ನೇಮಕ ನಮಗೆ ಸಿಕ್ಕಿರುವುದು ಒಂದು ಸುಯೋಗ ಅಷ್ಟೇ ಅಲ್ಲ, ದೊಡ್ಡ ಜವಾಬ್ದಾರಿ ಕೂಡ. ನಾವು ಇದನ್ನು ಹೇಗೆ ಚೆನ್ನಾಗಿ ಮಾಡಬಹುದು?

ಉತ್ತರ ಪೌಲನು ತಿಮೊಥೆಯನಿಗೆ ಬರೆದ ಪತ್ರದಲ್ಲಿದೆ. ಆತನು ಹೇಳಿದ್ದು: “ಸಾರ್ವಜನಿಕ ವಾಚನದಲ್ಲಿಯೂ ಬುದ್ಧಿಹೇಳುವುದರಲ್ಲಿಯೂ ಬೋಧಿಸುವುದರಲ್ಲಿಯೂ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು. . . . ಹೀಗೆ ಮಾಡುವ ಮೂಲಕ ನೀನು ನಿನ್ನನ್ನೂ ನಿನಗೆ ಕಿವಿಗೊಡುವವರನ್ನೂ ರಕ್ಷಿಸುವಿ.” (1 ತಿಮೊ. 4:13, 16) ನೀವು ಸಾರುವ ಸಂದೇಶವು ಜನರ ಜೀವಗಳನ್ನು ರಕ್ಷಿಸಬಹುದು. ಆದ್ದರಿಂದ ನಿಮ್ಮ ವಾಚನ ಮತ್ತು ಬೋಧನೆಗೆ ಗಮನ ಕೊಡುವುದು ಮುಖ್ಯ. ಇದನ್ನು ಮಾಡಲು ಈ ಪ್ರಕಾಶನ ನಿಮಗೆ ಸಹಾಯ ಮಾಡುತ್ತದೆ. ಈ ಪ್ರಕಾಶನದಲ್ಲಿರುವ ಕೆಲವು ವಿಶೇಷತೆಗಳನ್ನು ನೋಡಿ.

ಪ್ರತಿ ಪಾಠಕ್ಕೆ ಒಂದು ವಚನ ಇದೆ. ಆ ವಚನದಲ್ಲಿ ಪಾಠಕ್ಕೆ ಸಂಬಂಧಿಸಿದ ಒಂದು ಬೈಬಲ್‌ ತತ್ವ ಇರುತ್ತದೆ ಅಥವಾ ಪಾಠವನ್ನು ಹೇಗೆ ಅನ್ವಯಿಸುವುದೆಂದು ತೋರಿಸುವ ಉದಾಹರಣೆ ಇರುತ್ತದೆ.

ಯೆಹೋವನು “ಮಹೋನ್ನತ ಬೋಧಕನು.” (ಯೆಶಾ. 30:20, ನೂತನ ಲೋಕ ಭಾಷಾಂತರ) ಒಳ್ಳೇ ಓದುಗರಾಗಲು ಮತ್ತು ಭಾಷಣಗಾರರಾಗಲು ಈ ಪ್ರಕಾಶನ ಸಹಾಯ ಮಾಡುವುದಾದರೂ ನಾವು ಸಾರುವ ಸಂದೇಶದ ಮೂಲನು ಯೆಹೋವನು ಅನ್ನುವುದನ್ನು ಮರೆಯಬೇಡಿ. ಆತನೇ ಜನರನ್ನು ತನ್ನ ಕಡೆಗೆ ಸೆಳೆಯುತ್ತಾನೆ. (ಯೋಹಾ. 6:44) ಆದ್ದರಿಂದ ಪವಿತ್ರಾತ್ಮಕ್ಕಾಗಿ ಆಗಾಗ ಪ್ರಾರ್ಥಿಸಿ. ದೇವರ ವಾಕ್ಯವನ್ನು ಧಾರಾಳವಾಗಿ ಉಪಯೋಗಿಸಿ. ನಿಮ್ಮ ಸ್ವಂತ ಅನಿಸಿಕೆಗಳನ್ನು ಹೇಳಬೇಡಿ. ಕೇಳುಗರು ಯೆಹೋವನ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು ಆತನ ಮೇಲೆ ಅಪಾರ ಪ್ರೀತಿ ಬೆಳೆಸಿಕೊಳ್ಳಲು ಸಹಾಯ ಮಾಡಿ.

ಮಾನವರಿಗೆ ಅತಿ ಪ್ರಾಮುಖ್ಯ ಸಂದೇಶವನ್ನು ಸಾರುವ ಕೆಲಸ ನಿಮಗೆ ಸಿಕ್ಕಿದೆ. ನೀವು ‘ದೇವರು ಒದಗಿಸುವ ಶಕ್ತಿಯ ಮೇಲೆ ಹೊಂದಿಕೊಂಡು’ ಖಂಡಿತ ಜಯಿಸುತ್ತೀರಿ ಎಂಬ ಪೂರ್ಣ ಭರವಸೆ ನಮಗಿದೆ.—1 ಪೇತ್ರ 4:11.

ನಿಮ್ಮ ಜೊತೆ ಬೋಧಕರು,

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ