ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಓದುಗರ ಪ್ರಶ್ನೆ . . .

ಕ್ರಿಸ್ಮಸ್‌ ಆಚರಿಸುವುದು ತಪ್ಪಾ?

ಕ್ರಿಸ್ಮಸ್‌ ಆಚರಿಸುವುದು ತಪ್ಪಾ?

ಅನೇಕ ವರ್ಷಗಳಿಂದ ಕ್ರಿಸ್ಮಸನ್ನು ಕ್ರೈಸ್ತರ ಹಬ್ಬ ಎಂದೇ ಪರಿಗಣಿಸಲಾಗುತ್ತಿದೆ. ಇದನ್ನು ಯೇಸುವಿನ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಅನುಸರಿಸುವ ಅನೇಕ ಪದ್ಧತಿಗಳನ್ನು ನೋಡಿದರೆ ಇದಕ್ಕೂ ಯೇಸುವಿನ ಜನ್ಮದಿನಕ್ಕೂ ಏನು ಸಂಬಂಧ ಎಂದು ಆಶ್ಚರ್ಯವಾಗಬಹುದು.

ಉದಾಹರಣೆಗೆ, ಕ್ರಿಸ್ಮಸ್‌ ತಾತ (ಸ್ಯಾಂಟಾ ಕ್ಲಾಸ್‌). ಕೆಂಪು ಬಣ್ಣದ ಬಟ್ಟೆ ಧರಿಸಿರುವ, ಖುಷಿ ಖುಷಿಯಾಗಿರುವ, ಬಿಳಿಗಡ್ಡದ, ಕೆಂಪು ಕೆನ್ನೆಯ ಈ ತಾತ ಈಗ ಕ್ರಿಸ್ಮಸ್‌ ತಾತ ಎಂದೇ ಜನಪ್ರಿಯ. ಆದರೆ ಅವನನ್ನು ಸೃಷ್ಟಿ ಮಾಡಿದ್ದು 1931ರಲ್ಲಿ, ಉತ್ತರ ಅಮೆರಿಕದ ಪಾನೀಯ ಕಂಪೆನಿಯೊಂದರ ಜಾಹೀರಾತಿಗಾಗಿ. 1950ರ ಸುಮಾರಿಗೆ ಬ್ರೆಜಿಲ್‌ನವರು ಅಲ್ಲಿ ಪ್ರಸಿದ್ಧವಾಗಿದ್ದ ಗ್ರ್ಯಾಂಡ್‌ಪಾ ಇಂಡಿಯನನ್ನು ಕ್ರಿಸ್ಮಸ್‌ ತಾತನ ಸ್ಥಾನದಲ್ಲಿ ತರಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ಸಫಲವಾಗಲಿಲ್ಲ. ಬದಲಿಗೆ ಕ್ರಿಸ್ಮಸ್‌ ತಾತನೇ ಗ್ರ್ಯಾಂಡ್‌ಪಾ ಇಂಡಿಯನ್‌ಗಿಂತ ಪ್ರಸಿದ್ಧನಾದ. ಅಷ್ಟೇಕೆ “ಬಾಲ ಯೇಸುವಿಗಿಂತಲೂ ಪ್ರಸಿದ್ಧನಾಗಿ ಡಿಸೆಂಬರ್‌ 25ರಂದು ನಡೆಯುವ ಕ್ರಿಸ್ಮಸ್‌ ಹಬ್ಬದ ಗುರುತಾಗಿ ಪರಿಣಮಿಸಿದ” ಎಂದು ಪ್ರೊಫೆಸರ್‌ ಕಾರ್ಲೋಸ್‌ ಇ. ಫ್ಯಾಂಟೀನಾಟೀ ಹೇಳುತ್ತಾರೆ. ಹಾಗಾದರೆ ಒಂದು ಪ್ರಶ್ನೆ, ಕ್ರಿಸ್ಮಸ್‌ ದಿನದಂದು ನಡೆಸುವ ಕೆಲವು ಆಚಾರಗಳು ಮಾತ್ರ ತಪ್ಪಾ ಅಥವಾ ಕ್ರಿಸ್ಮಸ್‌ ಆಚರಣೆಯೇ ತಪ್ಪಾ? ಈ ಪ್ರಶ್ನೆಗೆ ಉತ್ತರ ತಿಳಿಯಲು ಆರಂಭದ ಕ್ರೈಸ್ತರು ಏನು ಮಾಡುತ್ತಿದ್ದರೆಂದು ನೋಡೋಣ.

“ಕ್ರೈಸ್ತ ಧರ್ಮ ಆರಂಭವಾದ ಮೊದಲ ಎರಡು ಶತಮಾನಗಳವರೆಗೆ ಯೇಸುವಿನ ಅಥವಾ ಯಾವುದೇ ಹುತಾತ್ಮರ ಜನ್ಮದಿನದ ಆಚರಣೆಯನ್ನು ಕ್ರೈಸ್ತರು ತೀವ್ರವಾಗಿ ವಿರೋಧಿಸುತ್ತಿದ್ದರು” ಎಂದು ಎನ್‌ಸೈಕ್ಲೋಪಿಡಿಯ ಬ್ರಿಟ್ಯಾನಿಕ ತಿಳಿಸುತ್ತದೆ. ಕ್ರೈಸ್ತರು, ಜನ್ಮ ದಿನಾಚರಣೆ ವಿಧರ್ಮಿ ಮೂಲದಿಂದ ಬಂದ ಆಚರಣೆ ಎಂದು ಅದರಿಂದ ದೂರವಿರುತ್ತಿದ್ದರು. ಅಷ್ಟೇ ಏಕೆ, ಬೈಬಲಿನಲ್ಲೆಲ್ಲೂ ಯೇಸು ಹುಟ್ಟಿದ ತಾರೀಖಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಆರಂಭದ ಕ್ರೈಸ್ತರು ಜನ್ಮ ದಿನಾಚರಣೆಯನ್ನು ತೀವ್ರವಾಗಿ ವಿರೋಧಿಸಿದ್ದರೂ ಕ್ರಿ.ಶ. 4ನೇ ಶತಮಾನದಲ್ಲಿ ಕ್ಯಾಥೊಲಿಕ್‌ ಚರ್ಚ್‌ ಕ್ರಿಸ್ಮಸ್‌ ಹಬ್ಬವನ್ನು ಆರಂಭಿಸಿತು. ಆಗಿನ ಸಮಯದಲ್ಲಿ ಚರ್ಚ್‌ ಭದ್ರವಾಗಿ ತಳವೂರಲು ಇದ್ದ ಅಡ್ಡಿ ರೋಮನ್‌ ಧರ್ಮ ಮತ್ತು ಅವರು ಚಳಿಗಾಲದಲ್ಲಿ ಆಚರಿಸುತ್ತಿದ್ದ ಸೂರ್ಯನ ಹಬ್ಬ. ಪ್ರತಿ ವರ್ಷ ಡಿಸೆಂಬರ್‌ 17ರಿಂದ ಜನವರಿ 1ರ ವರೆಗೆ “ಹೆಚ್ಚಿನ ರೋಮನ್ನರು ಹಬ್ಬ ಮಾಡುತ್ತಿದ್ದರು, ಆಟ ಆಡುತ್ತಿದ್ದರು, ಮೆರವಣಿಗೆ ಹೋಗುತ್ತಿದ್ದರು, ತಮ್ಮ ದೇವ-ದೇವತೆಗಳಿಗೆ ಕಾಣಿಕೆಗಳನ್ನು ಕೊಡುತ್ತಿದ್ದರು, ಹೀಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿ ಆಚರಿಸುತ್ತಿದ್ದರು” ಎಂದು ಪೆನೀ ಎಲ್‌. ರೆಸ್ಟಾಡ್‌ರವರು ಬರೆದ ಕ್ರಿಸ್ಮಸ್‌ ಇನ್‌ ಅಮೆರಿಕ ಎಂಬ ಪುಸ್ತಕ ತಿಳಿಸುತ್ತದೆ. ಈ ರೋಮನ್ನರು ಡಿಸೆಂಬರ್‌ 25ರಂದು ಸೂರ್ಯನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅದೇ ದಿನದಂದು ಕ್ರಿಸ್ಮಸ್‌ ಹಬ್ಬವನ್ನು ಆರಂಭಿಸುವ ಮೂಲಕ ಸೂರ್ಯನ ಹುಟ್ಟುಹಬ್ಬದ ಬದಲಿಗೆ ಯೇಸುವಿನ ಹುಟ್ಟುಹಬ್ಬವನ್ನು ಆಚರಿಸುವಂತೆ ಅನೇಕ ರೋಮನ್ನರನ್ನು ಚರ್ಚ್‌ ಪುಸಲಾಯಿಸಿತು. ಇದರಿಂದ ರೋಮನ್ನರು ಕ್ರೈಸ್ತರಾದರೂ “ಚಳಿಗಾಲದಲ್ಲಿ ಆಚರಿಸುವ ಹಬ್ಬವನ್ನು ಆನಂದಿಸಲು ಸಾಧ್ಯವಾಯಿತು” ಎಂದು ಗೆರಿ ಬೋಲರ್‌ರ ಸ್ಯಾಂಟಾ ಕ್ಲಾಸ್‌, ಎ ಬಯಾಗ್ರಫಿ ಎಂಬ ಪುಸ್ತಕ ತಿಳಿಸುತ್ತದೆ. ಇಲ್ಲಿ ನಡೆದದ್ದು ಇಷ್ಟೇ, “ಹಳೇ ಪದ್ಧತಿಗೆ ಹೊಸ ಹೆಸರು ಕೊಡಲಾಯಿತು.”

ಹಾಗಾದರೆ, ಕ್ರಿಸ್ಮಸ್‌ ತಪ್ಪಾದ ಮೂಲದಿಂದ ಬಂದ ಆಚರಣೆಯಾಗಿದೆ ಅನ್ನುವುದು ಸ್ಪಷ್ಟ. ದ ಬ್ಯಾಟಲ್‌ ಫಾರ್‌ ಕ್ರಿಸ್ಮಸ್‌ ಎಂಬ ಪುಸ್ತಕದಲ್ಲಿ ಸ್ಟೀಫನ್‌ ನಿಸ್ಸನ್‌ಬೊನ್‌ರವರು ಕ್ರಿಸ್ಮಸ್‌ “ಕ್ರೈಸ್ತ ಮುಖವಾಡ ಹಾಕಲಾದ ವಿಧರ್ಮಿ ಆಚರಣೆಯಾಗಿದೆ” ಎಂದು ತಿಳಿಸಿದ್ದಾರೆ. ಆದ್ದರಿಂದ ಕ್ರಿಸ್ಮಸ್‌, ದೇವರನ್ನೂ ಆತನ ಮಗನಾದ ಯೇಸು ಕ್ರಿಸ್ತನನ್ನೂ ಅಗೌರವ ಪಡಿಸುತ್ತದೆ. ಇದು ಗಂಭೀರ ವಿಷಯವಲ್ಲ, ಚಿಕ್ಕ ವಿಷಯ ಅಂತ ನಿಮಗನಿಸುತ್ತಾ? ಆದರೆ ಬೈಬಲ್‌, “ನೀತಿಗೂ ಅನೀತಿಗೂ ಮೈತ್ರಿ ಏನು? ಬೆಳಕಿಗೂ ಕತ್ತಲೆಗೂ ಐಕ್ಯವೇನು?” ಎನ್ನುತ್ತದೆ. (2 ಕೊರಿಂಥ 6:14) ವಕ್ರವಾದ ಮರದ ಬುಡವನ್ನು ನೆಟ್ಟಗೆ ಮಾಡಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಕ್ರಿಸ್ಮಸ್‌ ಎಂಬ ತಪ್ಪಾದ ಆಚರಣೆ ಎಷ್ಟು ಬಲವಾಗಿ ಬೇರೂರಿದೆಯೆಂದರೆ ಅದನ್ನು “ಸರಿಮಾಡುವದು ಅಸಾಧ್ಯ.”—ಪ್ರಸಂಗಿ 1:15. ▪ (w15-E 10/01)