ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದೇವರಿಗೆ ಹೃದಯಾನೇ ಇಲ್ಲ’ ಅಂತ ನಿಮಗನಿಸಿದೆಯಾ?

‘ದೇವರಿಗೆ ಹೃದಯಾನೇ ಇಲ್ಲ’ ಅಂತ ನಿಮಗನಿಸಿದೆಯಾ?

“ನನಗೇ ಯಾಕೆ ಹೀಗಾಯ್ತು? ದೇವರು ಯಾಕೆ ನನ್ನನ್ನು ಕಾಪಾಡಲಿಲ್ಲ?” ಎಂಬ ಪ್ರಶ್ನೆಗಳು ಬ್ರೆಸಿಲ್‍ನಲ್ಲಿನ 24 ವರ್ಷದ ಸೀಡ್ನೇ ಎಂಬ ಯುವಕನನ್ನು ಕಾಡುತ್ತಿದ್ದವು. ಕಾರಣ ಅವನು ನೀರಿನಲ್ಲಿ ಆಟ ಆಡುವಾಗ (ವಾಟರ್‌ ಸ್ಲೈಡ್) ಆತನ ಕಾಲಿಗೆ ಪೆಟ್ಟು ಬಿದ್ದದರಿಂದ ಶಾಶ್ವತವಾಗಿ ಗಾಲಿ ಕುರ್ಚಿಯಲ್ಲಿ (ವ್ಹೀಲ್‌ ಚೇರ್‌) ಓಡಾಡುವ ಪರಿಸ್ಥಿತಿ ಬಂತು.

ಅಪಘಾತ, ಕಾಯಿಲೆ, ಪ್ರಿಯರ ಮರಣ, ನೈಸರ್ಗಿಕ ವಿಪತ್ತು ಮತ್ತು ಯುದ್ಧಗಳಿಂದ ಕಷ್ಟ ಬಂದಾಗ ಸಾಮಾನ್ಯವಾಗಿ ಎಲ್ಲರೂ ‘ದೇವರಿಗೆ ಹೃದಯಾನೇ ಇಲ್ವಾ? ಯಾಕೆ ನಮ್ಮ ಕೈ ಬಿಟ್ಟ?’ ಅಂತ ಬೇಸರಪಡುತ್ತಾರೆ. ಜನ ಹೀಗೆ ಮಾತಾಡೋದೇನು ಹೊಸತಲ್ಲ. ಸಾವಿರಾರು ವರ್ಷಗಳ ಹಿಂದೆ ಯೋಬನೆಂಬವನಿಗೂ ಒಂದರ ನಂತರ ಇನ್ನೊಂದು ಕಷ್ಟಗಳು ಸಾಲಾಗಿ ಬಂದವು. ಕಷ್ಟಗಳಿಂದ ಬೇಸತ್ತು ಹೋದ ಈತ “ದೇವರೇ, ನಾನು ಸಹಾಯಕ್ಕಾಗಿ ಮೊರೆಯಿಡುವೆನು, ಆದರೆ ನೀನು ಉತ್ತರಿಸುವುದಿಲ್ಲ. ನಾನು ಎದ್ದು ನಿಂತು ಪ್ರಾರ್ಥಿಸಿದರೂ ನೀನು ನನಗೆ ಗಮನ ಕೊಡುವುದಿಲ್ಲ. ದೇವರೇ, ನೀನು ನನ್ನ ಪಾಲಿಗೆ ಕ್ರೂರನಾಗಿಬಿಟ್ಟೆ. ನಿನ್ನ ಶಕ್ತಿಯಿಂದ ನನ್ನನ್ನು ನೋಯಿಸುತ್ತಿರುವೆ” ಎಂದು ದೇವರನ್ನು ದೂರಿದ.—ಯೋಬ 30:20, 21, ಪರಿಶುದ್ಧ ಬೈಬಲ್‌. *

ಯೋಬನಿಗೆ ಯಾಕೆ ಕಷ್ಟ ಬಂತು? ಯಾರಿಂದ ಬಂತು? ಅಂತ ಏನೊಂದೂ ಗೊತ್ತಿರಲಿಲ್ಲ. ಆದರೆ, ನಮಗೆ ಕಷ್ಟಗಳು ಯಾಕಿವೆ ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. ಅಷ್ಟೇ ಅಲ್ಲ, ಈ ಕಷ್ಟಗಳನ್ನು ಹೇಗೆ ನಿಭಾಯಿಸಬೇಕು ಅಂತ ಕೂಡ ಹೇಳಿಕೊಡುತ್ತದೆ.

ಮನುಷ್ಯರು ಕಷ್ಟಪಡಬೇಕು ಅನ್ನುವುದೇ ದೇವರ ಉದ್ದೇಶನಾ?

“ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವ೦ಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ” ಎಂದು ಬೈಬಲ್‌ ಹೇಳುತ್ತದೆ. (ಧರ್ಮೋಪದೇಶಕಾಂಡ 32:4) ನಂಬಿಗಸ್ತನೂ ನೀತಿವಂತನೂ ಆಗಿರುವ ದೇವರು ತನ್ನ ಮಕ್ಕಳಂತಿರುವ ಮನುಷ್ಯರು ಕಷ್ಟಪಡಬೇಕಂತ ಬಯಸುತ್ತಾನಾ? ಅಥವಾ ಕಷ್ಟಗಳನ್ನು ಕೊಟ್ಟು ಜನರನ್ನು ಶಿಕ್ಷಿಸಬೇಕಂತ ಯೋಚಿಸುತ್ತಾನಾ?

ಖಂಡಿತ ಇಲ್ಲ, “ಪರೀಕ್ಷೆಗೆ ಒಳಪಡುವಾಗ, ‘ನಾನು ದೇವರಿಂದ ಪರೀಕ್ಷಿಸಲ್ಪಡುತ್ತಿದ್ದೇನೆ’ ಎಂದು ಯಾವನೂ ಹೇಳದಿರಲಿ. ಏಕೆಂದರೆ ಕೆಟ್ಟ ಸಂಗತಿಗಳಿಂದ ದೇವರನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ, ಆತನು ತಾನೇ ಯಾರನ್ನೂ ಪರೀಕ್ಷಿಸುವುದೂ ಇಲ್ಲ” ಎಂದು ಬೈಬಲ್‌ ಖಡಾಖಂಡಿತವಾಗಿ ಹೇಳುತ್ತದೆ. (ಯಾಕೋಬ 1:13) ಮೊದಲ ಮಾನವರಾದ ಆದಾಮ, ಹವ್ವರಿಗೆ ದೇವರು ಸಂತೋಷದ ಜೀವನವನ್ನು ಕೊಟ್ಟನು ಎಂದು ನಮಗೆ ಬೈಬಲಿನಿಂದ ಗೊತ್ತಾಗುತ್ತದೆ. ಅವರು ಖುಷಿಖುಷಿಯಾಗಿರಲು ದೇವರು ಅವರಿಗೆ ಸುಂದರವಾದ ತೋಟ ಕೊಟ್ಟಿದ್ದನು, ಜೀವನಕ್ಕೆ ಬೇಕಾದಂಥ ಎಲ್ಲ ಅಗತ್ಯಗಳನ್ನು ಪೂರೈಸಿದ್ದನು ಮತ್ತು ಮಾಡಲಿಕ್ಕೆ ನೆಮ್ಮದಿಯ ಕೆಲಸ ಕೂಡ ಕೊಟ್ಟಿದ್ದನು. “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದು ಆಶೀರ್ವದಿಸಿದ್ದನು. ಅವರಿಗೆ ದೇವರು ಎಲ್ಲ ಕೊಟ್ಟಿದ್ದರಿಂದ ಅವರು ನಿರಾಶೆಗೊಳ್ಳಲು ಕಾರಣವಿರಲಿಲ್ಲ.—ಆದಿಕಾಂಡ 1:28.

ಅವರಿದ್ದ ಪರಿಸ್ಥಿತಿಗೂ ಇವತ್ತು ನಾವಿರುವ ಪರಿಸ್ಥಿತಿಗೂ ಆಕಾಶ-ಭೂಮಿಗೆ ಇರುವಷ್ಟು ಅಂತರ ಇದೆ. ಇತಿಹಾಸದಲ್ಲೆಲ್ಲಾ ಮನುಷ್ಯನು ಪಟ್ಟಿರುವ ಕಷ್ಟಗಳು ಅಷ್ಟಿಷ್ಟಲ್ಲ. ಆದ್ದರಿಂದಲೇ, “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ” ಎಂದು ಬೈಬಲ್‌ ಹೇಳುವ ಮಾತು ನೂರಕ್ಕೆ ನೂರರಷ್ಟು ಸತ್ಯ. (ರೋಮನ್ನರಿಗೆ 8:22) ಹಾಗಾದರೆ, ಪರಿಸ್ಥಿತಿ ತಲೆಕೆಳಗಾಗಲು ಕಾರಣವೇನು?

ನಮ್ಮ ಕಷ್ಟಗಳಿಗೆ ಕಾರಣವೇನು?

ಕಷ್ಟಗಳಿಗೆ ಕಾರಣವೇನು ಎಂದು ತಿಳಿದುಕೊಳ್ಳಬೇಕೆಂದರೆ ಮೊದಲು ಕಷ್ಟಗಳು ಹೇಗೆ ಆರಂಭವಾದವೆಂದು ತಿಳಿದುಕೊಳ್ಳಬೇಕು. ಸೈತಾನ ಎಂಬ ದಂಗೆಕೋರ ದೇವದೂತನೊಬ್ಬ ‘ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ’ ಹಣ್ಣನ್ನು ತಿನ್ನಬಾರದೆಂದು ಹೇಳಿದ ದೇವರ ಮಾತಿಗೆ ಅವಿಧೇಯರಾಗುವಂತೆ ಆದಾಮ ಹವ್ವರನ್ನು ಪ್ರೇರೇಪಿಸಿದನು. ‘ದೇವರ ಮಾತನ್ನು ಕೇಳದೆ ಹೋದರೆ ನೀವು ಸಾಯಲ್ಲ’ ಎಂದು ಹೇಳುತ್ತಾ ‘ದೇವರು ಸುಳ್ಳುಗಾರ’ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಿದ್ದನು. ಜೊತೆಗೆ, ಮನುಷ್ಯರು ಸ್ವತಂತ್ರವಾಗಿರಲು ದೇವರು ಬಿಡುತ್ತಿಲ್ಲ ಎಂಬ ಆರೋಪವನ್ನೂ ಮಾಡಿದ್ದನು. (ಆದಿಕಾಂಡ 2:17; 3:1-6) ಹೀಗೆ, ದೇವರ ಆಳ್ವಿಕೆ ಇಲ್ಲದೆ ಮನುಷ್ಯರು ಚೆನ್ನಾಗಿ ಜೀವಿಸಬಹುದು ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದನು. ಇವೆಲ್ಲವುಗಳಿಂದ, ದೇವರು ಮನುಷ್ಯರನ್ನು ಆಳಲು ಸಮರ್ಥನಾ? ಎಂಬ ಪ್ರಶ್ನೆ ಬಂತು.

ಸೈತಾನನು ಮನುಷ್ಯರ ಮೇಲೂ ಆರೋಪ ಹೊರಿಸಿದ್ದಾನೆ. ಕೇವಲ ತಮ್ಮ ಸ್ವಾರ್ಥಕ್ಕಾಗಿ ಅವರು ದೇವರನ್ನು ಆರಾಧಿಸುತ್ತಾರೆ ಅಂತ ಹೇಳಿದ್ದಾನೆ. ನಂಬಿಗಸ್ತ ಯೋಬನ ಬಗ್ಗೆ ಸೈತಾನನು ದೇವರಿಗೆ ಹೇಳಿದ್ದು: “ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ . . . ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” (ಯೋಬ 1:10, 11) ಸೈತಾನ ಇಲ್ಲಿ ಹೇಳಿದ ಮಾತುಗಳು ಯೋಬನ ಬಗ್ಗೆ ಆಗಿದ್ದರೂ ಅವು ಎಲ್ಲ ಮನುಷ್ಯರಿಗೂ ಅನ್ವಯಿಸುತ್ತವೆ.

ಈ ಆರೋಪಗಳಿಗೆ ದೇವರ ಉತ್ತರವೇನು?

ಸೈತಾನನ ಈ ಆರೋಪಗಳನ್ನು ಶಾಶ್ವತವಾಗಿ ತೆಗೆದುಹಾಕಲು ಏನು ಮಾಡಿದರೆ ಚೆನ್ನಾಗಿರುತ್ತದೆ ಅಂತ ನಿಮಗನಿಸುತ್ತದೆ? ಮಹಾ ವಿವೇಕಿಯಾದ ಯೆಹೋವ ದೇವರಿಗೆ ಇದನ್ನು ಹೇಗೆ ಬಗೆಹರಿಸುವುದು ಅಂತ ಚೆನ್ನಾಗಿ ಗೊತ್ತಿದೆ. ಇದನ್ನು ಹೇಗೆ ಮಾಡುತ್ತಾನೆಂದು ತಿಳಿದರೆ ನಮ್ಮೆಲ್ಲರಿಗೂ ಖಂಡಿತ ಸಂತೋಷವಾಗುತ್ತದೆ. (ರೋಮನ್ನರಿಗೆ 11:33) ಸೈತಾನನ ಆರೋಪ ಸುಳ್ಳೆಂದು ಸಾಬೀತುಪಡಿಸಲು ಯೆಹೋವನು ಮನುಷ್ಯರಿಗೆ ತಮ್ಮನ್ನು ತಾವೇ ಆಳಿಕೊಳ್ಳಲು ಸ್ವಲ್ಪ ಕಾಲ ಅನುಮತಿಸಿದ್ದಾನೆ. ಇದರಿಂದ ಮನುಷ್ಯರನ್ನು  ಆಳಲು ಯಾರು ಸಮರ್ಥರು? ದೇವರಾ ಅಥವಾ ಮನುಷ್ಯರಾ ಎಂಬ ಅಂಶ ಸ್ಪಷ್ಟವಾಗುತ್ತದೆ.

ದಿನೇ ದಿನೇ ಹದಗೆಡುತ್ತಿರುವ ಭೂಮಿಯ ಪರಿಸ್ಥಿತಿಯಿಂದ ಮನುಷ್ಯನ ಆಳ್ವಿಕೆ ನಿಷ್ಪ್ರಯೋಜಕ ಎಂದು ಸಾಬೀತಾಗಿದೆ. ಮನುಷ್ಯ ಸರಕಾರಗಳು ಶಾಂತಿ, ಭದ್ರತೆ ಮತ್ತು ಸಂತೋಷವನ್ನು ತರಲು ಸೋತುಹೋಗಿರುವುದಷ್ಟೇ ಅಲ್ಲ, ಈ ಸುಂದರ ಭೂಮಿಯನ್ನು ನಾಶನದ ಅಂಚಿಗೆ ತಂದಿವೆ. ಇದರಿಂದ, “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂಬ ಬೈಬಲಿನ ಮಾತು ಸತ್ಯವೆಂದು ತಿಳಿದುಬರುತ್ತದೆ. (ಯೆರೆಮಿಾಯ 10:23) ಮನುಷ್ಯರು ನಿಜ ಶಾಂತಿ, ಸಂತೋಷ ಮತ್ತು ಸಮೃದ್ಧಿಯಿಂದ ಜೀವಿಸಬೇಕೆನ್ನುವುದೇ ದೇವರ ಉದ್ದೇಶ. ಹಾಗಾಗಿ, ಅಂಥ ಪರಿಸ್ಥಿತಿ ದೇವರ ಆಳ್ವಿಕೆಯಲ್ಲಿ ಮಾತ್ರ ಸಿಗುತ್ತದೆ.—ಯೆಶಾಯ 45:18.

ಹಾಗಾದರೆ ದೇವರು ತನ್ನ ಉದ್ದೇಶವನ್ನು ಹೇಗೆ ನೆರವೇರಿಸುತ್ತಾನೆ? ಉತ್ತರ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿಕೊಟ್ಟ ಈ ಪ್ರಾರ್ಥನೆಯಲ್ಲಿದೆ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:10) ತನ್ನ ರಾಜ್ಯದ ಮೂಲಕ ಸರಿಯಾದ ಸಮಯದಲ್ಲಿ ದೇವರು ಕಷ್ಟಕ್ಕೆ ಕಾರಣವಾಗಿರುವ ಎಲ್ಲವನ್ನೂ ತೆಗೆದುಹಾಕುತ್ತಾನೆ. (ದಾನಿಯೇಲ 2:44) ಬಡತನ, ಕಾಯಿಲೆ ಮತ್ತು ಮರಣದ ಮಾತೇ ಇರುವುದಿಲ್ಲ. ‘ಮೊರೆಯಿಡುವ ಬಡವರನ್ನು ದೇವರು ಉದ್ಧರಿಸುವನು’ ಎಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 72:12-14) “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎನ್ನುವ ವಚನ ಕಾಯಿಲೆಗಳೇ ಇಲ್ಲದ ಪರಿಸ್ಥಿತಿ ಬರುತ್ತದೆ ಎಂದು ತೋರಿಸುತ್ತದೆ. (ಯೆಶಾಯ 33:24) ದೇವರ ನೆನಪಿನಲ್ಲಿರುವ ಸತ್ತ ನಂಬಿಗಸ್ತ ವ್ಯಕ್ತಿಗಳು ‘ಸ್ಮರಣೆಯ ಸಮಾಧಿಗಳಿಂದ ಹೊರಗೆ ಬರುವ ಕಾಲ ಬರುತ್ತದೆ” ಎಂದು ಹೇಳುತ್ತದೆ. (ಯೋಹಾನ 5:28, 29) ಇವು ಎಂಥ ಅದ್ಭುತಕರವಾದ ಆಶ್ವಾಸನೆಗಳಲ್ಲವೆ!

ದೇವರ ಮಾತುಗಳಲ್ಲಿ ನಂಬಿಕೆ ಇಟ್ಟರೆ ಆತನ ಮೇಲಿನ ತಪ್ಪಭಿಪ್ರಾಯ ದೂರವಾಗುತ್ತದೆ

ದೇವರ ಕಡೆಗಿರುವ ತಪ್ಪಾದ ಮನೋಭಾವ ಬದಲಾಗಲಿ

ಈ ಲೇಖನದ ಆರಂಭದಲ್ಲಿ ತಿಳಿಸಲಾದ ಸೀಡ್ನೇಗೆ ಅಪಘಾತವಾಗಿ 17 ವರ್ಷಗಳಾದ ನಂತರ ಹೇಳುವುದು: “ನನಗಾದ ಅಪಘಾತಕ್ಕಾಗಿ ನಾನು ಯಾವತ್ತೂ ಯೆಹೋವ ದೇವರನ್ನು ದೂಷಿಸಲಿಲ್ಲ. ಆದರೆ ಮೊದಮೊದಲು ನನಗೆ ದೇವರ ಮೇಲೆ ಬೇಸರವಾಯಿತು. ನನಗೆ ನಡೆಯೋಕಾಗಲ್ಲ ಎಂದು ಯೋಚಿಸಿದಾಗೆಲ್ಲಾ ಅಳುತ್ತೇನೆ, ಕುಗ್ಗಿಹೋಗುತ್ತೇನೆ. ಆದರೆ ಅಪಘಾತಗಳು ದೇವರಿಂದ ಬರುವ ಶಿಕ್ಷೆಯಲ್ಲ ಎಂದು ಬೈಬಲಿನಿಂದ ತಿಳಿದುಕೊಂಡಿದ್ದೇನೆ. ‘ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ’ ಆದ್ದರಿಂದಲೇ ನನಗೆ ಈ ಕಷ್ಟ ಬಂತು. ಯೆಹೋವನಿಗೆ ಪ್ರಾರ್ಥಿಸುವುದರಿಂದ ಮತ್ತು ಕೆಲವು ಬೈಬಲ್‌ ವಚನಗಳನ್ನು ಓದುವುದರಿಂದ ನಾನು ಆಧ್ಯಾತ್ಮಿಕವಾಗಿ ಬಲ ಹೊಂದಿ, ಕುಗ್ಗಿಹೋಗದಿರಲು ಸಾಧ್ಯವಾಗಿದೆ.”—ಪ್ರಸಂಗಿ 9:11; ಕೀರ್ತನೆ 145:18; 2 ಕೊರಿಂಥ 4:8, 9, 16.

ದೇವರು ಕಷ್ಟಗಳನ್ನು ಅನುಮತಿಸಲು ಕಾರಣವೇನು ಮತ್ತು ಆ ಕಷ್ಟಗಳನ್ನು ಆತನು ಹೇಗೆ ತೆಗೆದುಹಾಕುತ್ತಾನೆ ಎಂಬ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ದೇವರ ಮೇಲೆ ನಮಗೆ ಬೇಸರವಿರುವುದಿಲ್ಲ. ‘ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ’ ಎಂಬ ಆಶ್ವಾಸನೆ ಬೈಬಲಿನಲ್ಲಿದೆ. ಆದ್ದರಿಂದ ಆತನಲ್ಲಿ ಮತ್ತು ಆತನ ಮಗನಾದ ಯೇಸುವಿನಲ್ಲಿ ನಂಬಿಕೆ ಇಡುವಂಥ ಎಲ್ಲರಿಗೂ ಖಂಡಿತ ನಿರಾಶೆ ಆಗುವುದಿಲ್ಲ.—ಇಬ್ರಿಯ 11:6; ರೋಮನ್ನರಿಗೆ 10:11. ▪ (w15-E 09/01)

^ ಪ್ಯಾರ. 3 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.