ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಚಿಂತೆಗೆ ಚಿಕಿತ್ಸೆ

ಕುಟುಂಬ ಸಮಸ್ಯೆಗಳ ಕುರಿತು ಚಿಂತೆ

ಕುಟುಂಬ ಸಮಸ್ಯೆಗಳ ಕುರಿತು ಚಿಂತೆ

“ನನ್ನ ತಂದೆ ತೀರಿಕೊಂಡ ಸ್ವಲ್ಪ ಸಮಯದಲ್ಲೇ ನನ್ನ ಗಂಡ, ‘ಇನ್ನೊಬ್ಬ ಸ್ತ್ರೀಯೊಂದಿಗೆ ಇರಬೇಕು ಅಂತ ನಿರ್ಧಾರ ಮಾಡಿದ್ದೇನೆ’ ಅಂತ ಏನೂ ಹಿಂಜರಿಕೆ ಇಲ್ಲದೆ ಹೇಳಿಬಿಟ್ಟರು. ಹಾಗೆ ಹೇಳಿ ಸ್ವಲ್ಪದರಲ್ಲೇ ಏನೊಂದೂ ಮಾತಾಡದೆ, ಬಟ್ಟೆ-ಬರೆ ಎಲ್ಲವನ್ನು ತಗೊಂಡು ನನ್ನನ್ನು, ನನ್ನ ಮಕ್ಕಳನ್ನು ನಡುನೀರಿನಲ್ಲಿ ಕೈ ಬಿಟ್ಟು ಹೋಗಿಬಿಟ್ಟರು” ಎಂದು ಜಾನೆಟ್‌ ಹೇಳುತ್ತಾಳೆ. ನಂತರ ಜಾನೆಟ್‌ಗ ಕೆಲಸ ಸಿಕ್ಕಿತು, ಆದರೆ ಅವಳಿಗೆ ಬರುತ್ತಿದ್ದ ಸಂಬಳದಲ್ಲಿ ಮನೆ ಸಾಲವನ್ನು ತೀರಿಸಲು ಕಷ್ಟವಾಗುತ್ತಿತ್ತು. ಹಣದ ಸಮಸ್ಯೆಗಿಂತ ಮಾನಸಿಕ ಹಿಂಸೆ ಅವಳನ್ನು ಕಿತ್ತು ತಿನ್ನುತ್ತಿತ್ತು. “ಇದ್ದಕ್ಕಿದ್ದಂತೆ ತುಂಬ ಜವಾಬ್ದಾರಿಗಳು ನನ್ನ ಹೆಗಲ ಮೇಲೆ ಬಿದ್ದವು. ಅವನ್ನು ನಾನೊಬ್ಬಳೇ ನಿಭಾಯಿಸಲು ತುಂಬ ಕಷ್ಟವಾಗಿತ್ತು. ಬೇರೆ ಹೆತ್ತವರು ತಮ್ಮ ಮಕ್ಕಳನ್ನು ನೋಡಿಕೊಳ್ಳುವಷ್ಟು ಚೆನ್ನಾಗಿ ನಾನು ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ ಎನ್ನುವ ಕೊರಗಿತ್ತು. ನನ್ನ ಮದುವೆ ಮುರಿಯದೇ ಇರಲು ನಾನು ಯಾವುದೇ ಪ್ರಯತ್ನ ಮಾಡಲಿಲ್ಲ ಅಂತ ಜನ ಯೋಚಿಸುತ್ತಾರೆ, ನನ್ನನ್ನೂ ನನ್ನ ಮಕ್ಕಳನ್ನೂ ಕೀಳಾಗಿ ನೋಡುತ್ತಾರೆ ಅಂತನಿಸುತ್ತೆ.”

ಜಾನೆಟ್‌

ಇಂಥ ಮಾನಸಿಕ ಹಿಂಸೆಯಿಂದ ಹೊರಬರಲು ಮತ್ತು ದೇವರಿಗೆ ಹೆಚ್ಚು ಆಪ್ತಳಾಗಲು ಜಾನೆಟ್‌ಗ ಸಹಾಯ ಮಾಡಿದ್ದು ಪ್ರಾರ್ಥನೆಯೇ. “ರಾತ್ರಿ ಹೊತ್ತಲ್ಲಿ ನನಗೆ ನಿದ್ದೆ ಬರುತ್ತಿರಲಿಲ್ಲ. ತುಂಬ ಚಿಂತೆಗಳು ನನ್ನನ್ನು ಕಾಡುತ್ತಿದ್ದವು. ಆಗೆಲ್ಲ ಬೈಬಲ್ ಓದಿ, ಪ್ರಾರ್ಥನೆ ಮಾಡುತ್ತಿದ್ದೆ. ಇದರಿಂದ ನಿದ್ದೆ ಮಾಡಲು ಆಗುತ್ತಿತ್ತು. ಬೈಬಲಿನ ಫಿಲಿಪ್ಪಿ 4ನೇ ಅಧ್ಯಾಯದ 6, 7ನೇ ವಚನ ಅಂದರೆ ನನಗೆ ತುಂಬ ಇಷ್ಟ. ‘ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕಾಯುವುದು’ ಅಂತ ಆ ವಚನ ಹೇಳುತ್ತದೆ. ನಾನು ಎಷ್ಟೋ ರಾತ್ರಿ ಪ್ರಾರ್ಥನೆ ಮಾಡುವುದರಲ್ಲೇ ಕಳೆದಿದ್ದೇನೆ, ಆಗೆಲ್ಲ ಯೆಹೋವ ದೇವರು ನನಗೆ ಮನಶ್ಶಾಂತಿಯನ್ನು ಕೊಟ್ಟಿದ್ದಾನೆ.”

ತನ್ನ ಉಪದೇಶವೊಂದರಲ್ಲಿ ಯೇಸು ಪ್ರಾರ್ಥನೆ ಬಗ್ಗೆ ಹೇಳಿದ ಈ ಮಾತು ಎಲ್ಲ ರೀತಿಯ ಚಿಂತೆಯಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ: “ನಿಮ್ಮ ತಂದೆಯಾದ ದೇವರನ್ನು ಕೇಳುವ ಮುಂಚೆಯೇ ನಿಮಗೆ ಯಾವುದರ ಅವಶ್ಯಕತೆ ಇದೆಯೆಂಬುದು ಆತನಿಗೆ ತಿಳಿದಿದೆ.” (ಮತ್ತಾಯ 6:8) ಆದರೂ ನಮಗೇನು ಬೇಕು ಅಂತ ನಾವು ಹೇಳಬೇಕು. ಹೀಗೆ ಪ್ರಾರ್ಥನೆಯಲ್ಲಿ ಹೇಳಿಕೊಳ್ಳುವಾಗ ‘ನಾವು ದೇವರಿಗೆ ಆಪ್ತರಾಗುತ್ತೇವೆ.’ ಪರಿಣಾಮ, ‘ದೇವರೂ ನಮಗೆ ಆಪ್ತನಾಗುತ್ತಾನೆ.’—ಯಾಕೋಬ 4:8.

ಪ್ರಾರ್ಥನೆ ಮೂಲಕ ನಮ್ಮ ಚಿಂತೆ ಹೇಳಿಕೊಂಡರೆ ನಮಗೆ ನೆಮ್ಮದಿಯಷ್ಟೇ  ಅಲ್ಲ ಅದಕ್ಕಿಂತ ಹೆಚ್ಚಿನದ್ದು ಸಿಗುತ್ತದೆ. ಯೆಹೋವ ದೇವರು ‘ಪ್ರಾರ್ಥನೆಯನ್ನು ಕೇಳುತ್ತಾನೆ’ ಮತ್ತು ಯಾರೆಲ್ಲ ನಂಬಿಕೆಯಿಂದ ಪ್ರಾರ್ಥಿಸುತ್ತಾರೋ ಅವರಿಗೆ ಸಹಾಯ ಮಾಡಲು ಸಿದ್ಧನಾಗಿರುತ್ತಾನೆ. (ಕೀರ್ತನೆ 65:2) ಈ ಕಾರಣದಿಂದಲೇ, ಯೇಸು ತನ್ನ ಶಿಷ್ಯರಿಗೆ ‘ಯಾವಾಗಲೂ ಪಟ್ಟುಹಿಡಿದು ಪ್ರಾರ್ಥಿಸಲು’ ಕಲಿಸಿದನು. ನಮ್ಮ ನಂಬಿಕೆಗೆ ತಕ್ಕ ಪ್ರತಿಫಲ ಕೊಡುತ್ತಾನೆ ಎಂಬ ಭರವಸೆಯಿಂದ ದೇವರ ಮಾರ್ಗದರ್ಶನೆಗಾಗಿ ಮತ್ತು ಸಹಾಯಕ್ಕಾಗಿ ನಾವು ಯಾವಾಗಲೂ ಕೇಳಿಕೊಳ್ಳಬೇಕು. ನಮಗೆ ಸಹಾಯ ಮಾಡುವ ಮನಸ್ಸು ಅಥವಾ ಶಕ್ತಿ ದೇವರಿಗೆ ಇದೆಯಾ ಎಂದು ನಾವೆಂದಿಗೂ ಸಂಶಯ ಪಡಬಾರದು. ಹೀಗೆ ‘ಎಡೆಬಿಡದೆ ಪ್ರಾರ್ಥಿಸುವ’ ಮೂಲಕ ನಾವು ಆತನನ್ನು ನಿಜವಾಗಿಯೂ ನಂಬುತ್ತೇವೆಂದು ತೋರಿಸುತ್ತೇವೆ.—1 ಥೆಸಲೋನಿಕ 5:17.

ನಂಬಿಕೆಯನ್ನು ಹೇಗೆ ಬೆಳೆಸಿಕೊಳ್ಳಬಹುದು?

ದೇವರ ಬಗ್ಗೆ ‘ಜ್ಞಾನವನ್ನು ಪಡೆದುಕೊಳ್ಳುವ’ ಮೂಲಕ ಆತನ ಮೇಲೆ ನಂಬಿಕೆಯನ್ನು ಬೆಳೆಸಿಕೊಳ್ಳಬಹುದು. (ಯೋಹಾನ 17:3) ಮೊದಲಿಗೆ, ದೇವರು ಎಂಥವನು ಎಂದು ನಾವು ಬೈಬಲಿನಿಂದ ಓದಿ ತಿಳಿದುಕೊಳ್ಳಬೇಕು. ಆಗ ಆತನು ನಮ್ಮಲ್ಲಿ ಪ್ರತಿಯೊಬ್ಬರನ್ನು ಗಮನಿಸುತ್ತಾನೆ ಮತ್ತು ನಮಗೆ ಸಹಾಯ ಮಾಡಬೇಕೆಂದು ಬಯಸುತ್ತಾನೆ ಎಂದು ಕಲಿಯುತ್ತೇವೆ. ಆದರೆ ದೇವರ ಬಗ್ಗೆ ತಿಳಿದುಕೊಂಡರಷ್ಟೇ ಸಾಲದು. ಆತನೊಂದಿಗೆ ಆಪ್ತ ಸ್ನೇಹವನ್ನೂ ಬೆಳೆಸಿಕೊಳ್ಳಬೇಕು. ಮನುಷ್ಯರ ಸ್ನೇಹ ಹೇಗೆ ದಿನಬೆಳಗಾಗುವುದರಲ್ಲೇ ಆಗುವುದಿಲ್ಲವೋ ಅದೇ ರೀತಿ ದೇವರ ಸ್ನೇಹಿತರಾಗಲು ಸಹ ಸಮಯ ಹಿಡಿಯುತ್ತದೆ. ನಾವು ಯಾವಾಗ ಆತನ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತೇವೋ, ‘ಆತನಿಗೆ ಮೆಚ್ಚಿಕೆಯಾದದ್ದನ್ನು ಮಾಡುತ್ತೇವೋ’, ಆತನ ಸಹಾಯವನ್ನೂ ಅನುಭವಿಸುತ್ತೇವೋ ಆಗ ನಮ್ಮ ‘ನಂಬಿಕೆ ಹೆಚ್ಚಾಗುತ್ತದೆ.’ (2 ಕೊರಿಂಥ 10:15; ಯೋಹಾನ 8:29) ಅಂಥ ನಂಬಿಕೆ ಇದ್ದದರಿಂದಲೇ ಜಾನೆಟ್‌ಗ ತನ್ನ ಚಿಂತೆಯಿಂದ ಹೊರಬರಲು ಸಾಧ್ಯವಾಯಿತು.

ಆಕೆ ಹೇಳುವುದು: “ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಯೆಹೋವನು ನನ್ನ ಜೊತೆ ಇದ್ದದ್ದನ್ನು ನೋಡುವಾಗ ಆತನ ಮೇಲಿದ್ದ ನನ್ನ ನಂಬಿಕೆ ಇನ್ನೂ ಹೆಚ್ಚಾಯಿತು. ಅನೇಕ ಸಲ ಅನ್ಯಾಯಗಳನ್ನು ಅನುಭವಿಸಿದ್ದೇನೆ. ಆಗೆಲ್ಲ ಪ್ರಾರ್ಥನೆ ಮಾಡಿದ್ದರಿಂದ ಯೆಹೋವ ದೇವರು ನನಗೆ ಸಹಾಯ ಮಾಡಿದ್ದಾನೆ. ನಾನೊಬ್ಬಳೇ ಅದನ್ನು ನಿಭಾಯಿಸಲು ಖಂಡಿತ ಆಗುತ್ತಿರಲಿಲ್ಲ. ನಾನು ಆತನಿಗೆ ಕೃತಜ್ಞತೆ ಹೇಳುವಾಗ ನನಗಾಗಿ ಎಷ್ಟೆಲ್ಲ ವಿಷಯಗಳನ್ನು ಆತನು ಮಾಡಿದ್ದಾನೆ ಎಂದು ನೆನಪಾಗುತ್ತದೆ. ಯಾವಾಗೆಲ್ಲ ಸಹಾಯ ಬೇಕಾಗುತ್ತಿತ್ತೋ ಆಗೆಲ್ಲ ಆಪತ್ಬಾ೦ಧವನಂತೆ ಸಹಾಯ ಮಾಡಿದ್ದಾನೆ. ಜೊತೆಗೆ, ಒಳ್ಳೇ ಸ್ನೇಹಿತರಾದ ಕ್ರೈಸ್ತ ಸಹೋದರ-ಸಹೋದರಿಯರನ್ನು ಕೊಟ್ಟಿದ್ದಾನೆ. ಕಷ್ಟ-ಸುಖ ಎಲ್ಲದರಲ್ಲೂ ಅವರು ನನ್ನ ಜೊತೆಯಿದ್ದಾರೆ, ನನ್ನ ಮಕ್ಕಳಿಗೆ ಉತ್ತಮ ಮಾದರಿಯಾಗಿದ್ದಾರೆ.” *

“ಯಾಕೆ ಯೆಹೋವನು ಮಲಾಕಿ 2:16ರಲ್ಲಿ ‘ಪತ್ನಿತ್ಯಾಗವನ್ನು ಹಗೆ ಮಾಡುತ್ತೇನೆ’ ಅಂತ ಹೇಳಿದ್ದಾನೆಂದು ನನಗೆ ಗೊತ್ತು. ಸಂಗಾತಿ ದ್ರೋಹ ಮಾಡಿದಾಗ ಆಗುವ ನೋವು ಬೇರೆಲ್ಲ ನೋವಿಗಿಂತ ದೊಡ್ಡದು. ನನ್ನ ಗಂಡ ಬಿಟ್ಟು ಹೋಗಿ ತುಂಬ ವರ್ಷಗಳಾಗಿದ್ದರೂ ಈಗಲೂ ನಾನು ಒಂಟಿ, ಪ್ರಯೋಜನಕ್ಕೆ ಬಾರದಿರುವವಳು ಅಂತನಿಸುತ್ತದೆ. ಬೇರೆಯವರಿಗೆ ಏನಾದರೂ ಸಹಾಯ ಮಾಡುವ ಮೂಲಕ ಆ ನೋವನ್ನು ಮರೆಯಲು ಪ್ರಯತ್ನಿಸುತ್ತೇನೆ. ಮನಸ್ಸಿಗೆ ಸ್ವಲ್ಪ ಸಮಾಧಾನ ಆಗುತ್ತದೆ.” ಒಂಟಿಯಾಗಿರುವುದು ಒಳ್ಳೆಯದಲ್ಲ ಎನ್ನುವ ಬೈಬಲ್‌ ಮೂಲತತ್ವವನ್ನು ಅನ್ವಯಿಸಿದ್ದರಿಂದ ಜಾನೆಟ್‌ಗೆ ಚಿಂತೆ ಕಡಿಮೆಯಾಗಿದೆ. *ಜ್ಞಾನೋಕ್ತಿ 18:1.

“ದೇವರು ದಿಕ್ಕಿಲ್ಲದವರಿಗೆ ತಂದೆಯೂ ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ.”—ಕೀರ್ತನೆ 68:5

“‘ದೇವರು ದಿಕ್ಕಿಲ್ಲದವರಿಗೆ ತಂದೆಯೂ ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ’ ಅಂತ ಬೈಬಲ್‍ನಲ್ಲಿರುವ ಮಾತು ನನಗೆ ತುಂಬಾನೇ ನೆಮ್ಮದಿ ಕೊಟ್ಟಿದೆ” ಎಂದು ಜಾನೆಟ್‌ ಹೇಳುತ್ತಾಳೆ. (ಕೀರ್ತನೆ 68:5) ‘ಕೆಟ್ಟ ಸಂಗತಿಗಳಿಂದ ದೇವರು ನಮ್ಮನ್ನು ಪರೀಕ್ಷಿಸುವುದಿಲ್ಲ.’ ಬದಲಿಗೆ ನಮ್ಮ ಚಿಂತೆಗಳನ್ನು ನಿಭಾಯಿಸಲು ಬೇಕಾದ ವಿವೇಕವನ್ನು ಮತ್ತು ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ‘ಉದಾರವಾಗಿ ಕೊಡುತ್ತಾನೆ’ ಎಂದು ಜಾನೆಟ್‌ ತನ್ನ ಅನುಭವದಿಂದ ತಿಳಿದಿದ್ದಾಳೆ.—ಯಾಕೋಬ 1:5, 13; 2 ಕೊರಿಂಥ 4:7.

ಆದರೆ ನಮ್ಮ ಜೀವಕ್ಕೆ ಅಪಾಯ ಇದೆ ಅನ್ನುವ ಚಿಂತೆ ಇದ್ದರೆ ಆಗೇನು ಮಾಡುವುದು? (w15-E 07/01)

^ ಪ್ಯಾರ. 10 ಚಿಂತೆಯನ್ನು ನಿಭಾಯಿಸಲು ಇನ್ನಷ್ಟು ಮಾಹಿತಿಗಾಗಿ ಜುಲೈ 2015ರ ಎಚ್ಚರ! ಪತ್ರಿಕೆಯಲ್ಲಿ ಬಂದಿರುವ “ಆರ್‌ ಯು ಇನ್‌ ಕಂಟ್ರೋಲ್‌ ಆಫ್‌ ಯುವರ್‌ ಲೈಫ್‌?” (ಇಂಗ್ಲಿಷ್‌) ಎಂಬ ಮುಖಪುಟ ಲೇಖನಗಳನ್ನು ನೋಡಿ. ಇದು www.jw.org ವೆಬ್‌ಸೈಟ್‍ನಲ್ಲೂ ಲಭ್ಯ.