ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಚಿಂತೆಗೆ ಚಿಕಿತ್ಸೆ

ಚಿಂತೆಯಿಲ್ಲದ ಮನುಷ್ಯನಿಲ್ಲ!

ಚಿಂತೆಯಿಲ್ಲದ ಮನುಷ್ಯನಿಲ್ಲ!

“ಏನಾದರೂ ಆಹಾರವನ್ನು ಖರೀದಿಸೋಣ ಅಂತ ಅಂಗಡಿಗೆ ಹೋದ್ರೆ ಸಿಕ್ಕಿದ್ದು ಬರೀ ಬಿಸ್ಕತ್ತು. ಅದು ಸಹ ಮಾಮೂಲಿ ಬೆಲೆಗಿಂತ 10,000 ಪಟ್ಟು ಜಾಸ್ತಿ ಬೆಲೆ! ಮಾರನೇ ದಿನವಂತೂ ಒಂದು ಅಂಗಡಿಯಲ್ಲೂ ಆಹಾರ ಸಿಗಲಿಲ್ಲ.”—ಪೌಲ್‌, ಜಿಂಬಾಬ್ವೆ.

“ನನ್ನ ಗಂಡ ನನ್ನನ್ನು, ನಮ್ಮ ಮಕ್ಕಳನ್ನು ಬಿಟ್ಟು ಹೋಗುತ್ತೇನೆಂದು ಹೇಳಿದರು. ಆ ದ್ರೋಹವನ್ನು ನಾನು ಹೇಗೆ ಮರೆಯಲಿ? ನನ್ನ ಮಕ್ಕಳಿಗೆ ಇನ್ಯಾರು ಗತಿ?”—ಜಾನೆಟ್‌, ಅಮೆರಿಕ.

“ಯುದ್ಧದ ಸೈರನ್‌ ಶಬ್ದ ಕೇಳುತ್ತಿದ್ದಂತೆ ತಪ್ಪಿಸಿಕೊಳ್ಳಲು ಒಂದು ಸುರಕ್ಷಿತ ಪ್ರದೇಶಕ್ಕೆ ಓಡಿಹೋದೆ. ಅಷ್ಟರಲ್ಲಿ ಬಾಂಬ್ ಸ್ಫೋಟವಾಯಿತು. ನನಗೆಷ್ಟು ಭಯ ಆಯಿತೆಂದರೆ ಸುಮಾರು ಗಂಟೆಗಳಾದರೂ ನನ್ನ ಕೈ ನಡುಗುತ್ತಲೇ ಇತ್ತು.”—ಅಲೋನಾ, ಇಸ್ರೇಲ್‌.

‘ನಿಭಾಯಿಸಲು ಕಷ್ಟಕರವಾದ ಕಠಿಣ ಸಮಯದಲ್ಲಿ’ ನಾವು ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1) ಹಣದ ಕೊರತೆ, ಒಡೆದುಹೋಗುತ್ತಿರುವ ಕುಟುಂಬ, ಯುದ್ಧ, ಪ್ರಾಣಕ್ಕೆ ಅಪಾಯ ತರುವ ಹೊಸ ಹೊಸ ಕಾಯಿಲೆಗಳು, ನೈಸರ್ಗಿಕ ವಿಪತ್ತುಗಳು, ಮನುಷ್ಯನಿಂದಾಗುತ್ತಿರುವ ಅನಾಹುತಗಳು ಹೀಗೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ಜನರು ಸಿಲುಕಿ ಒದ್ದಾಡುತ್ತಿದ್ದಾರೆ. ಇವುಗಳ ಜೊತೆಗೆ ವೈಯಕ್ತಿಕ ಸಮಸ್ಯೆಗಳ ಬಗ್ಗೇನೂ ಚಿಂತೆ ಮಾಡುತ್ತಾರೆ. ದೇಹದಲ್ಲಿ ಒಂದು ಗಡ್ಡೆ ಕಾಣಿಸಿಕೊಂಡರೆ ‘ಇದು ಕ್ಯಾನ್ಸರ್‌ ಗಡ್ಡೆನಾ?’ ಅಂತಾನೋ ಅಥವಾ ‘ನನ್ನ ಮೊಮ್ಮಕ್ಕಳ ಕಾಲಕ್ಕೆ ಪ್ರಪಂಚ ಹೇಗಿರುತ್ತೋ?’ ಎಂದೆಲ್ಲ ಚಿಂತೆ ಮಾಡುತ್ತಾರೆ.

ಚಿಂತೆ ಮಾಡುವುದು ಸಹಜವೇ. ಪರೀಕ್ಷೆಗೆ ಮುಂಚೆ, ಒಂದು ಕಠಿಣ ಕೆಲಸ ಮಾಡುವ ಮುಂಚೆ ಅಥವಾ ಉದ್ಯೋಗಕ್ಕಾಗಿ ಇಂಟರ್‌ವ್ಯೂಗೆ ಹೋದಾಗ ನಮಗೆ ಚಿಂತೆಯಿರುತ್ತದೆ. ‘ಅಪಾಯ ಎದುರಾಗಬಹುದಾ?’ ಅಂತ ಚಿಂತಿಸುವುದು ಒಳ್ಳೆಯದೇ. ಆದರೆ ಚಿಂತೆ ಅತಿಯಾದಾಗ ಅದು ಚಿತೆಗೆ (ಸಾವು) ನಡೆಸುತ್ತದೆ. 68 ಸಾವಿರಕ್ಕಿಂತ ಹೆಚ್ಚಿನ ಜನರ ಮೇಲೆ ಇತ್ತೀಚೆಗೆ ನಡೆಸಿದ ಅಧ್ಯಯನಗಳಿಂದ ತಿಳಿದು ಬಂದ ಅಂಶವೇನೆಂದರೆ ಸ್ವಲ್ಪ ಚಿಂತೆ ಮಾಡಿದರೂ ಬೇಗನೇ ಮರಣ ಹೊಂದುವ ಸಾಧ್ಯತೆಗಳಿರುತ್ತವೆ. ಆದ್ದರಿಂದಲೇ ಯೇಸು, “ಚಿಂತೆ ಮಾಡುವ ಮೂಲಕ ನಿಮ್ಮಲ್ಲಿ ಯಾರು ತನ್ನ ಆಯುಷ್ಯವನ್ನು ಸ್ವಲ್ಪವಾದರೂ ಹೆಚ್ಚಿಸಿಕೊಳ್ಳಬಲ್ಲನು?” ಅಂತ ಸರಿಯಾಗಿಯೇ ಕೇಳಿದನು. ಚಿಂತೆಯಿಂದ ನಮ್ಮ ಆಯಸ್ಸು ಕಡಿಮೆಯಾಗುತ್ತದೆ. ಹಾಗಾಗಿಯೇ “ಚಿಂತೆ ಮಾಡುವುದನ್ನು ನಿಲ್ಲಿಸಿರಿ” ಎಂದು ಯೇಸು ಸಲಹೆ ಕೊಟ್ಟನು. (ಮತ್ತಾಯ 6:25, 27) ಆದರೆ ಅದನ್ನು ಪಾಲಿಸೋದು ಸಾಧ್ಯನಾ ಎನ್ನುವುದೇ ಪ್ರಶ್ನೆ.

ವಿವೇಚನೆ ತೋರಿಸಿದರೆ, ದೇವರಲ್ಲಿ ನಂಬಿಕೆ ಬೆಳೆಸಿಕೊಂಡರೆ, ಭವಿಷ್ಯದ ಬಗ್ಗೆ ಒಳ್ಳೇ ನಿರೀಕ್ಷೆಯಿಟ್ಟುಕೊಂಡರೆ ಚಿಂತೆ ಮಾಡದೇ ನೆಮ್ಮದಿಯಿಂದಿರಲು ಸಾಧ್ಯ. ‘ನಮಗೆ ಯಾವ ಚಿಂತೇನೂ ಇಲ್ಲ’ ಅಂತ ನಿಮಗನಿಸಬಹುದು. ಆದರೆ ನೆನಪಿಡಿ, ಮುಂದೆ ಯಾವತ್ತಾದರೂ ಒಂದು ಗಂಭೀರ ಸಮಸ್ಯೆ ಬಂದಾಗ ಇಲ್ಲಿ ತಿಳಿಸಲಾದ ಹೆಜ್ಜೆಗಳು ನಿಮಗೆ ತುಂಬ ಸಹಾಯ ಮಾಡುತ್ತವೆ. ಹಾಗಾದರೆ ಈ ಹೆಜ್ಜೆಗಳು ಪೌಲ್‌, ಜಾನೆಟ್‌ ಮತ್ತು ಅಲೋನಾರಿಗೆ ಹೇಗೆ ಸಹಾಯ ಮಾಡಿದವು ಎಂದು ನೋಡೋಣ. (w15-E 07/01)