ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಭ್ರಷ್ಟಾಚಾರಕ್ಕೆ ಕೊನೆ ಇದೆಯಾ?

ದೇವರ ಸರಕಾರ—ಭ್ರಷ್ಟಾಚಾರವಿಲ್ಲದ ಸರಕಾರ

ದೇವರ ಸರಕಾರ—ಭ್ರಷ್ಟಾಚಾರವಿಲ್ಲದ ಸರಕಾರ

ಸರಕಾರದಲ್ಲಿರುವ ಭ್ರಷ್ಟಾಚಾರವನ್ನು ತೆಗೆದುಹಾಕುವುದು ಯಾಕೆ ಅಷ್ಟು ಕಷ್ಟ? ಕಾರಣ, “ಪ್ರಜೆಗಳಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಇದೇ ಪ್ರಜೆಗಳಿಂದ ಸರಕಾರ ರಚಿಸಲಾಗಿರುವುದರಿಂದ ಸರಕಾರಗಳು ಕೂಡ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿವೆ” ಎಂದು ನಿಕಾರಾಗ್ವಾದ ಆಡಿಟ್‌ ಆಫೀಸಿನ ಮುಖ್ಯಸ್ಥರು ಹೇಳಿದ್ದಾರೆ.

ಅವರು ಹೇಳಿದ್ದು ಸರಿ ಎಂದು ನಿಮಗೆ ಅನಿಸುವುದಿಲ್ವಾ? ಮನುಷ್ಯರೇ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವಾಗ, ಅವರಿಂದ ಬಂದ ಸರಕಾರ ಸಹ ಭ್ರಷ್ಟವಾಗಿಯೇ ಇರುತ್ತದೆ ತಾನೇ? ಹಾಗಾದರೆ, ಭ್ರಷ್ಟಾಚಾರ ಇಲ್ಲದ ಸರಕಾರ ಕೇವಲ ಕನಸಾ? ಇಲ್ಲ. ನಿಜವಾಗಲೂ ಅಂಥ ಒಂದು ಸರಕಾರ ಇದೆ. ಅದೇ ದೇವರ ಸರಕಾರ ಅಥವಾ ದೇವರ ರಾಜ್ಯ. ಈ ರಾಜ್ಯಕ್ಕಾಗಿಯೇ ‘ಪ್ರಾರ್ಥಿಸಿ’ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು.—ಮತ್ತಾಯ 6:9, 10.

ದೇವರ ರಾಜ್ಯ ಸ್ವರ್ಗದಿಂದ ಆಡಳಿತ ನಡೆಸುವ ಒಂದು ನಿಜವಾದ ಸರಕಾರ. ಅದು ಎಲ್ಲಾ ಮಾನವ ಸರಕಾರಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿ ತನ್ನ ಆಡಳಿತವನ್ನು ಆರಂಭಿಸುತ್ತದೆ. (ಕೀರ್ತನೆ 2:8, 9; ಪ್ರಕಟನೆ 16:14; 19:19-21) ಆ ಸರಕಾರ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕುತ್ತದೆ. ಯಾಕೆಂದರೆ ಅದು ಮಾನವ ಸರಕಾರಗಳಿಗಿಂತ ಭಿನ್ನವಾಗಿದೆ. ಯಾವ ವಿಧದಲ್ಲಿ ಭಿನ್ನವಾಗಿದೆ? ಬನ್ನಿ, ನೋಡೋಣ.

1. ತೆರಿಗೆ

ಸಮಸ್ಯೆ: ಮಾನವ ಸರಕಾರಗಳಿಗೆ ಜನರ ಅವಶ್ಯಕತೆಗಳನ್ನು ಪೂರೈಸಲು ಹಣ ಬೇಕು. ಈ ಹಣ ಮುಖ್ಯವಾಗಿ ಪ್ರಜೆಗಳು ಕಟ್ಟುವ ತೆರಿಗೆಯಿಂದ ಬರುತ್ತದೆ. ಆದರೆ ಕೆಲವು ಅಧಿಕಾರಿಗಳು ಸರಕಾರದ ಖಜಾನೆಗೆ ಕನ್ನ ಹಾಕುತ್ತಾರೆ. ಅಷ್ಟೇ ಅಲ್ಲದೆ, ತೆರಿಗೆ ಕಟ್ಟಲು ಬಯಸದ ಜನರು ಅಧಿಕಾರಿಗಳಿಗೆ ಲಂಚ ಕೊಟ್ಟು ಸರಕಾರಕ್ಕೆ ಕಟ್ಟಬೇಕಾಗಿರುವ ತೆರಿಗೆಯನ್ನು ಕಡಿಮೆ ಮಾಡುವಂತೆ ತಿಳಿಸುತ್ತಾರೆ. ಇದರಿಂದ ಜನರ ಅವಶ್ಯಕತೆಗಳನ್ನು ಪೂರೈಸಲು ಬೇಕಾದಷ್ಟು ಹಣ ಸರಕಾರದ ಖಜಾನೆಗೆ ಸೇರುವುದಿಲ್ಲ. ಸರಕಾರಕ್ಕೆ ತುಂಬ ನಷ್ಟವಾಗುತ್ತದೆ. ಈ ನಷ್ಟವನ್ನು ಭರ್ತಿ ಮಾಡಲು ಸರಕಾರ ತೆರಿಗೆಯನ್ನು ಹೆಚ್ಚಿಸುತ್ತದೆ. ಆಗ ಭ್ರಷ್ಟಾಚಾರ ಇನ್ನೂ ಹೆಚ್ಚಾಗುತ್ತದೆ. ಕೊನೆಗೆ, ಈ ಸನ್ನಿವೇಶದಲ್ಲಿ, ಪ್ರಾಮಾಣಿಕ ಜನರಿಗೇ ಹೆಚ್ಚು ನಷ್ಟವಾಗುತ್ತದೆ.

ಪರಿಹಾರ: ದೇವರ ಸರಕಾರವನ್ನು ಸರ್ವಶಕ್ತನಾದ ಯೆಹೋವ * ದೇವರೇ ಸ್ಥಾಪಿಸಿದ್ದಾನೆ. (ಪ್ರಕಟನೆ 11:15) ಆತನಿಗೆ ನಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಮತ್ತು ಉದಾರ ಮನಸ್ಸು ಇದೆ. ಆದ್ದರಿಂದ ಮನುಷ್ಯರ ಹತ್ತಿರ ತೆರಿಗೆ ತೆಗೆದುಕೊಳ್ಳುವ ಅಗತ್ಯ ಈ ಸರಕಾರಕ್ಕಿಲ್ಲ.—ಯೆಶಾಯ 40:26; ಕೀರ್ತನೆ 145:16.

2. ಅಧಿಕಾರಿ

ಸಮಸ್ಯೆ: “ಮೊದಲು ಉನ್ನತ ಸ್ಥಾನದ ಅಧಿಕಾರಿಗಳಲ್ಲಿರುವ” ಭ್ರಷ್ಟಾಚಾರವನ್ನು ಕಿತ್ತೆಸೆಯಲು ಸರಕಾರ ಪ್ರಯತ್ನಿಸಬೇಕು ಎಂದು ಹಿಂದಿನ ಲೇಖನದಲ್ಲಿ ತಿಳಿಸಲಾದ ಸೂಸನ್‌ ರೋಸ್‌ ಅಕರ್ಮನ್‍ರವರು ಹೇಳುತ್ತಾರೆ. ಭ್ರಷ್ಟಾಚಾರ ಇರಬಾರದೆಂದರೆ ಮೊದಲು ಉನ್ನತ ಅಧಿಕಾರ ಸ್ಥಾನದಲ್ಲಿರುವವರ ಭ್ರಷ್ಟಾಚಾರವನ್ನು ತೆಗೆದುಹಾಕಬೇಕು. ಅದನ್ನು ಬಿಟ್ಟು ಸಣ್ಣ-ಪುಟ್ಟ ಇಲಾಖೆಗಳಲ್ಲಿರುವ ಭ್ರಷ್ಟಾಚಾರವನ್ನು ತೆಗೆದು ಹಾಕಲು ಪ್ರಯತ್ನಿಸುವುದಾದರೆ ಜನರು ಅಂಥ ಸರಕಾರಕ್ಕೆ ಯಾವುದೇ ಬೆಲೆ, ಗೌರವ ಕೊಡುವುದಿಲ್ಲ. ಒಂದು ವೇಳೆ ಅಧಿಕಾರಿಗಳು ನಿಯತ್ತಾಗಿರಲು ಪ್ರಯತ್ನಿಸಿದರೂ ಅವರು ತಪ್ಪು ಮಾಡೇ ಮಾಡುತ್ತಾರೆ. ಆದ್ದರಿಂದ ‘ಪಾಪಮಾಡದೆ ಒಳ್ಳೆಯದನ್ನೇ ಮಾಡುತ್ತಿರುವ ಒಬ್ಬ ಮನುಷ್ಯನೂ ಲೋಕದಲ್ಲಿ ಇಲ್ಲವೇ ಇಲ್ಲ’ ಎಂದು ಬೈಬಲ್‌ ತಿಳಿಸುತ್ತದೆ.—ಪ್ರಸಂಗಿ 7:20.

ಭಾರೀ ಪ್ರಮಾಣದ ಲಂಚ ಪಡೆದುಕೊಳ್ಳುವ ಶೋಧನೆ ಬಂದರೂ ಯೇಸು ಅದನ್ನು ತಿರಸ್ಕರಿಸಿದನು

ಪರಿಹಾರ: ದೇವರು ಯೇಸುವನ್ನು ತನ್ನ ಸರಕಾರ ಇಲ್ಲವೆ ರಾಜ್ಯದ ಅರಸನಾಗಿ ಮಾಡಿದ್ದಾನೆ. ಅವನು ಮನುಷ್ಯರಂತಲ್ಲ, ಎಷ್ಟೇ ಕಷ್ಟವಾದರೂ ತಪ್ಪು ಮಾಡುವುದೇ ಇಲ್ಲ. ಇದನ್ನು ನಾವು ನಂಬಬಹುದಾ? ಒಮ್ಮೆ ಯೇಸುವಿಗೆ, ಯಾರೂ ಎಂದೂ ಊಹಿಸಿರದಷ್ಟು ಭಾರೀ ಪ್ರಮಾಣದ ಲಂಚ ಪಡೆದುಕೊಳ್ಳುವ ಶೋಧನೆ ಬಂದಿತ್ತು. ಈ ಲೋಕದ ಅಧಿಕಾರಿಯಾದ ಸೈತಾನನು “ಲೋಕದ ಎಲ್ಲ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ಕೊಡುತ್ತೇನೆ ಅಂತ ಆಸೆ ತೋರಿಸಿದನು. ಇದನ್ನು ಪಡೆಯಬೇಕಾದರೆ ಯೇಸು ಕೇವಲ ಒಂದೇ ಒಂದು ಸಲ ಅವನಿಗೆ ಅಡ್ಡಬಿದ್ದು ಆರಾಧಿಸಬೇಕಿತ್ತು. ಆದರೂ ಯೇಸು ಅದನ್ನು ತಿರಸ್ಕರಿಸಿದನು. (ಮತ್ತಾಯ 4:8-10; ಯೋಹಾನ 14:30) ಮನುಷ್ಯರ ಪಾಪವನ್ನು ತೆಗೆಯಲು ಯೇಸು ಹಿಂಸೆಯನ್ನು ಅನುಭವಿಸಿ ಸಾಯಬೇಕಿತ್ತು. ಆದರೆ ಆತನ ಮರಣದ ಸಂದರ್ಭದಲ್ಲಿ ಮದ್ಯವನ್ನು ಕುಡಿಯುವ ಶೋಧನೆ ಬಂತು. ಆ ಮದ್ಯವನ್ನು ಕುಡಿದಿದ್ದರೆ ಅವನ ನೋವು ಕಡಿಮೆಯಾಗುವ ಸಾಧ್ಯತೆ ಇತ್ತು ಅಥವಾ ಅದು ಅವನು ಅನುಭವಿಸುತ್ತಿದ್ದ ನೋವನ್ನು ಗೊತ್ತಾಗದ ಹಾಗೆ ಮಾಡುತ್ತಿತ್ತು. ಆದರೆ ಅಂಥ ಸಂದರ್ಭದಲ್ಲೂ ಅದನ್ನು ಕುಡಿಯದಿರುವ ಮೂಲಕ ತಾನು ನಂಬಿಗಸ್ತನು ಎಂದು ತೋರಿಸಿಕೊಟ್ಟನು. (ಮತ್ತಾಯ 27:34) ಹೀಗೆ ಯೇಸು, ಯಾವುದೇ ಸನ್ನಿವೇಶದಲ್ಲೂ ಭ್ರಷ್ಟನಾಗಲಿಲ್ಲ, ಬದಲಿಗೆ ಒಬ್ಬ ಒಳ್ಳೆಯ ಅಧಿಕಾರಿ ಎಂದು ತೋರಿಸಿಕೊಟ್ಟನು. ಆದ್ದರಿಂದ ದೇವರು ಅವನಿಗೆ ಪುನಃ ಜೀವ ಕೊಟ್ಟು ಸ್ವರ್ಗದಲ್ಲಿ ಅರಸನಾಗಿ ಮಾಡಿದ್ದಾನೆ.—ಫಿಲಿಪ್ಪಿ 2:8-11.

3. ಚುನಾವಣೆ

ಸಮಸ್ಯೆ: ಅನೇಕ ದೇಶಗಳಲ್ಲಿ ಆಗಾಗ ಚುನಾವಣೆ ನಡೆಸುತ್ತಾರೆ. ಭ್ರಷ್ಟ ಅಧಿಕಾರಿಗಳ ಸ್ಥಾನದಲ್ಲಿ ಒಳ್ಳೆಯ ಅಧಿಕಾರಿಗಳನ್ನು ಆರಿಸುವ ಅವಕಾಶ ಜನರಿಗೆ ಸಿಗುತ್ತದೆ ಎಂಬ ಉದ್ದೇಶದಿಂದ ಹೀಗೆ ಮಾಡುತ್ತಾರೆ. ಆದರೆ ಮತಪ್ರಚಾರ, ಮತದಾನ ಮತ್ತು ಚುನಾವಣೆಯಲ್ಲಿಯೂ ಭ್ರಷ್ಟಾಚಾರ ರಾರಾಜಿಸುತ್ತಿದೆ. ಇದು ಪ್ರಗತಿಪರ ದೇಶಗಳಲ್ಲೂ ಸರ್ವೇ ಸಾಮಾನ್ಯವಾಗಿದೆ. ಶ್ರೀಮಂತ ವ್ಯಕ್ತಿಗಳು ಮತಪ್ರಚಾರಕ್ಕಾಗಿ ಹಣ ದಾನ ಅಥವಾ ಇತರ ಸಹಾಯ ಮಾಡುತ್ತಾರೆ. ಹೀಗೆ ಮಾಡುವುದರಿಂದ ಜನರಿಗೆ ಸಹಾಯ ಮಾಡುವ ಪ್ರಾಮಾಣಿಕರನ್ನಲ್ಲ, ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವವರನ್ನು ಅಧಿಕಾರಕ್ಕೆ ತರುತ್ತಾರೆ.

ಅಮೆರಿಕದ ಮುಖ್ಯ ನ್ಯಾಯಾಲಯದ ನ್ಯಾಯಾಧೀಶರಾದ ಜಾನ್‌ ಪೌಲ್‌, ಈ ರೀತಿ ಭ್ರಷ್ಟಾಚಾರ ಇದ್ದರೆ “ಸರಕಾರದಲ್ಲಿ ನ್ಯಾಯ ಕಣ್ಮರೆಯಾಗಿ, ಅದರ ಆಡಳಿತ ಕೀಳ್ಮಟ್ಟಕ್ಕಿಳಿದು, ಅದು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ” ಎಂದು ಬರೆದರು. ಇಂಥ ಪರಿಸ್ಥಿತಿ ಇರುವುದರಿಂದಲೇ ರಾಜಕೀಯ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಇದೆ ಎಂದು ಹೆಚ್ಚಿನ ಜನ ಹೇಳುತ್ತಾರೆ.

ಪರಿಹಾರ: ದೇವರ ಸರಕಾರ ಅಥವಾ ರಾಜ್ಯ ಎಂದೂ ಬಿದ್ದುಹೋಗುವುದಿಲ್ಲ, ಅದು ಶಾಶ್ವತವಾಗಿರುತ್ತದೆ. (ದಾನಿಯೇಲ 7:13, 14) ಈ ರಾಜ್ಯದ ಅರಸನನ್ನು ಸ್ವತಃ ದೇವರೇ ಆರಿಸಿದ್ದಾನೆ. ಆದ್ದರಿಂದ ಈ ಸರಕಾರದಲ್ಲಿ ಚುನಾವಣೆಯ ಅಗತ್ಯವೇ ಇರುವುದಿಲ್ಲ. ಅಂದ ಮೇಲೆ ಮೋಸ ಮಾಡಲೂ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ಯಾರೂ ಈ ರಾಜ್ಯವನ್ನು ಜಯಿಸಲು ಸಾಧ್ಯವಿಲ್ಲ. ಈ ರಾಜ್ಯ ಶಾಶ್ವತವಾಗಿರುವುದರಿಂದ ತನ್ನ ಪ್ರಜೆಗಳ ಒಳಿತಿಗಾಗಿ ಇದು ಮಾಡುವ ಯೋಜನೆಗಳೂ ಶಾಶ್ವತವಾಗಿರುತ್ತವೆ.

4. ನಿಯಮಗಳು

ದೇವರ ರಾಜ್ಯ ಸ್ವರ್ಗದಿಂದ ಆಡಳಿತ ನಡೆಸುವ ಒಂದು ನಿಜವಾದ ಸರಕಾರ

ಸಮಸ್ಯೆ: ಹೊಸ ನಿಯಮಗಳನ್ನು ತರುವುದರಿಂದ ಭ್ರಷ್ಟಾಚಾರ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸಬಹುದು ಎಂದು ಅನೇಕರು ಭಾವಿಸುತ್ತಾರೆ. ಆದರೆ ನಿಯಮಗಳು ಹೆಚ್ಚಾದಂತೆ ಭ್ರಷ್ಟಾಚಾರ ನಡೆಸಲು ಹೆಚ್ಚಿನ ಅವಕಾಶ ಸಿಗುತ್ತದೆ. ಯಾಕೆಂದರೆ, ಆ ನಿಯಮಗಳನ್ನು ಪಾಲಿಸಲು ತಪ್ಪಿಹೋದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಲಂಚ ಕೊಡುತ್ತಾರೆ. ಜೊತೆಗೆ, ಭ್ರಷ್ಟಾಚಾರ ತೆಗೆದು ಹಾಕಲು ಹೊಸ ನಿಯಮಗಳನ್ನು ಮಾಡಿದಾಗೆಲ್ಲಾ ಅದನ್ನು ಕಾರ್ಯರೂಪಕ್ಕೆ ಹಾಕಲು ಖರ್ಚೂ ಹೆಚ್ಚಾಗುತ್ತದೆ.

ಪರಿಹಾರ: ಮಾನವ ಸರಕಾರದ ನಿಯಮಗಳಿಗೆ ಹೋಲಿಸುವಾಗ ದೇವರ ಸರಕಾರದ ನಿಯಮಗಳು ಎಷ್ಟೋ ಉನ್ನತವಾಗಿವೆ. ಹೀಗೆ ಮಾಡಬೇಕು, ಹೀಗೆ ಮಾಡಬಾರದು ಅಂತ ನಿಯಮಗಳ ಉದ್ದ ಪಟ್ಟಿಯನ್ನು ಯೇಸು ಕೊಟ್ಟಿಲ್ಲ. ಬದಲಿಗೆ “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು” ಎಂಬ ಅತ್ಯುತ್ತಮ ನಿಯಮವನ್ನು ಕೊಟ್ಟಿದ್ದಾನೆ. (ಮತ್ತಾಯ 7:12) ದೇವರ ರಾಜ್ಯದ ನಿಯಮಗಳು ನಮ್ಮ ನಡತೆಯನ್ನು ಮಾತ್ರವಲ್ಲ, ನಮ್ಮ ಉದ್ದೇಶ ಅಥವಾ ಯೋಚನೆಗಳನ್ನು ಸಹ ಸರಿಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಉದಾಹರಣೆಗೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದು ಯೇಸು ಹೇಳಿದನು. (ಮತ್ತಾಯ 22:39) ಯೇಸುವನ್ನು ಅರಸನಾಗಿ ನೇಮಿಸಿರುವ ದೇವರಿಗೆ ನಮ್ಮ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಸಾಧ್ಯ. ಆದ್ದರಿಂದಲೇ, ಆತನು ನಮ್ಮ ಯೋಚನೆಗಳನ್ನು ಸರಿಮಾಡಿಕೊಳ್ಳುವಂಥ ಅತ್ಯುತ್ತಮ ನಿಯಮಗಳನ್ನು ಕೊಡುತ್ತಾನೆ.—1 ಸಮುವೇಲ 16:7.

5. ಯೋಚನೆಗಳು

ಸಮಸ್ಯೆ: ಭ್ರಷ್ಟಾಚಾರಕ್ಕೆ ಮುಖ್ಯ ಕಾರಣ ದುರಾಸೆ ಮತ್ತು ಸ್ವಾರ್ಥ. ಸರಕಾರಿ ಅಧಿಕಾರಿಗಳು ಮತ್ತು ಪ್ರಜೆಗಳಲ್ಲಿ ಈ ಕೆಟ್ಟ ಗುಣಗಳು ಸರ್ವೇ ಸಾಮಾನ್ಯವಾಗಿವೆ. ಸೋಲ್‌ ಎಂಬಲ್ಲಿ ಒಂದು ದೊಡ್ಡ ಕಟ್ಟಡ ಕುಸಿದು ಬಿದ್ದದರ ಬಗ್ಗೆ ಹಿಂದಿನ ಲೇಖನದಲ್ಲಿ ಓದಿದ್ದು ನಿಮಗೆ ನೆನಪಿರಬಹುದು. ಕಟ್ಟಡ ನಿರ್ಮಾಣಕ್ಕೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸುವುಕ್ಕಿಂತ ಲಂಚ ಕೊಟ್ಟರೆ ಕಡಿಮೆ ಖರ್ಚಿನಲ್ಲಿ ಎಲ್ಲ ಕೆಲಸ ಮುಗಿಸಬಹುದು ಎಂದು ಅಲ್ಲಿನ ಕಾಂಟ್ರಾಕ್ಟರ್‌ಗಳು ಯೋಚಿಸಿದರು. ಅವರು ಲಂಚ ಕೊಟ್ಟಾಗ ಅಧಿಕಾರಿಗಳು ಅದನ್ನು ತೆಗೆದುಕೊಂಡರು.

ಭ್ರಷ್ಟಾಚಾರವನ್ನು ನಿರ್ಮೂಲ ಮಾಡಬೇಕೆಂದರೆ ಜನರಲ್ಲಿ ಬಲವಾಗಿ ಬೇರೂರಿರುವ ದುರಾಸೆ ಮತ್ತು ಸ್ವಾರ್ಥದಂಥ ಕೆಟ್ಟ ಯೋಚನೆಗಳನ್ನು ಕಿತ್ತು ಹಾಕುವುದು ಹೇಗೆ ಎಂದು ಅವರಿಗೆ ಕಲಿಸಬೇಕು. ಆದರೆ, ಮಾನವ ಸರಕಾರಗಳು ಜನರಿಗೆ ಇಂಥ ಶಿಕ್ಷಣವನ್ನು ಕೊಡಲು ಆಸಕ್ತಿಯೂ ತೋರಿಸುತ್ತಿಲ್ಲ, ಅವರಿಗೆ ಆ ಸಾಮರ್ಥ್ಯವೂ ಇಲ್ಲ.

ಪರಿಹಾರ: ಈ ಕೆಟ್ಟ ಯೋಚನೆಗಳನ್ನು ತೆಗೆದುಹಾಕಲು ದೇವರ ರಾಜ್ಯ ಜನರಿಗೆ ಕಲಿಸುತ್ತದೆ. ಹಾಗೆ ಮಾಡುವ ಮೂಲಕ ಭ್ರಷ್ಟಾಚಾರದ ಬುಡಕ್ಕೇ ಕತ್ತಿ ಹಾಕುತ್ತದೆ. ಹೀಗೆ ಜನರು ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಲು ದೇವರ ರಾಜ್ಯ ಅವರಿಗೆ ಸಹಾಯ ಮಾಡುತ್ತದೆ. (ಎಫೆಸ 4:23) ಫಲಿತಾಂಶವಾಗಿ, ದುರಾಸೆ ಮತ್ತು ಸ್ವಾರ್ಥಕ್ಕೆ ಬದಲಾಗಿ ಇರುವುದರಲ್ಲೇ ತೃಪ್ತಿಪಡುವ ಮತ್ತು ಇತರರಿಗೆ ಒಳಿತನ್ನು ಮಾಡುವ ಗುಣಗಳನ್ನು ತೋರಿಸಲು ಅವರು ಕಲಿಯುತ್ತಾರೆ.—ಫಿಲಿಪ್ಪಿ 2:4; 1 ತಿಮೊಥೆಯ 6:6.

6. ಪ್ರಜೆಗಳು

ಸಮಸ್ಯೆ: ಕೆಲವರು ಒಳ್ಳೇ ಕುಟುಂಬದಲ್ಲಿ ಬೆಳೆದು ಬಂದಿದ್ದರೂ, ಉತ್ತಮ ನೈತಿಕ ಶಿಕ್ಷಣ ಪಡೆದಿದ್ದರೂ ಪ್ರಾಮಾಣಿಕರಾಗಿರುವ ಬದಲಿಗೆ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಆದ್ದರಿಂದ ಭ್ರಷ್ಟಾಚಾರವನ್ನು ತೆಗೆದು ಹಾಕಲು ಮಾನವ ಸರಕಾರಗಳಿಂದ ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ತಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಿದರೆ ಭ್ರಷ್ಟಾಚಾರವನ್ನು ಅಲ್ಪ ಸ್ವಲ್ಪ ಕಡಿಮೆ ಮಾಡಬಹುದೇ ಹೊರತು ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿಲ್ಲ.

ಪರಿಹಾರ: ಭ್ರಷ್ಟಾಚಾರವನ್ನು ತೆಗೆದುಹಾಕಲು ಅನೇಕ ದೇಶಗಳು ಒಟ್ಟಾಗಿ ಸೇರಿ ಮಾಡಿದ ಸಮ್ಮೇಳನದಲ್ಲಿ, ಪ್ರಜೆಗಳು “ನಂಬಿಗಸ್ತರು, ಪ್ರಾಮಾಣಿಕರು ಮತ್ತು ಜವಾಬ್ದಾರಿಯುತರು ಆಗಿರಲು” ಸರಕಾರಗಳು ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕು ಎಂದು ಹೇಳಲಾಯಿತು. ಆದರೆ ದೇವರ ರಾಜ್ಯ ಈ ಗುಣಗಳನ್ನು ತೋರಿಸಲು ಪ್ರಜೆಗಳಿಗೆ ಕೇವಲ ಪ್ರೋತ್ಸಾಹ ನೀಡಿರುವುದಷ್ಟೇ ಅಲ್ಲ, ಇದನ್ನು ಕಡ್ಡಾಯ ಮಾಡಿದೆ. ‘ದುರಾಸೆ ಪಡುವವರು’ ಮತ್ತು ‘ಸುಳ್ಳು ಹೇಳುವವರು’ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ ಅಥವಾ ಅದರ ಪ್ರಜೆಗಳಾಗಲು ಸಾಧ್ಯವಿಲ್ಲ ಎಂದು ಬೈಬಲ್‌ ಹೇಳುತ್ತದೆ.—1 ಕೊರಿಂಥ 6:9-11; ಪ್ರಕಟನೆ 21:8.

ನೀತಿಯ ಇಂಥ ಉನ್ನತ ಮಟ್ಟಗಳನ್ನು ಪಾಲಿಸಲು ಜನರಿಂದ ಸಾಧ್ಯ. ಆರಂಭದಲ್ಲಿದ್ದ ಕ್ರೈಸ್ತರು ಇದನ್ನು ಪಾಲಿಸುತ್ತಿದ್ದರು. ಉದಾಹರಣೆಗೆ, ಸೀಮೋನ ಎಂಬ ವ್ಯಕ್ತಿ ಅಪೊಸ್ತಲರಿಗೆ ಹಣವನ್ನು ಲಂಚವಾಗಿ ಕೊಟ್ಟು ತನಗೆ ದೇವರ ಶಕ್ತಿಯನ್ನು ಕೊಡುವಂತೆ ಕೇಳಿದನು. ಅಪೊಸ್ತಲರು ಅದಕ್ಕೆ ಒಪ್ಪದೆ, “ನಿನ್ನ ಈ ಕೆಟ್ಟತನಕ್ಕಾಗಿ ಪಶ್ಚಾತ್ತಾಪಪಡು” ಎಂದು ಹೇಳಿದರು. ಸೀಮೋನನು ತನ್ನ ದುರಾಸೆಯಿಂದಾಗುವ ಅಪಾಯದ ಕುರಿತು ತಿಳಿದುಕೊಂಡು, ಕೆಟ್ಟ ಗುಣವನ್ನು ಬಿಟ್ಟುಬಿಡಲು ತನಗೋಸ್ಕರ ದೇವರಲ್ಲಿ ಪ್ರಾರ್ಥಿಸುವಂತೆ ಅಪೊಸ್ತಲರನ್ನು ಕೇಳಿಕೊಂಡನು.—ಅಪೊಸ್ತಲರ ಕಾರ್ಯಗಳು 8:18-24.

ದೇವರ ಸರಕಾರದ ಪ್ರಜೆಗಳಾಗುವುದು ಹೇಗೆ?

ನೀವು ಯಾವುದೇ ದೇಶದವರಾಗಿದ್ದರೂ ದೇವರ ರಾಜ್ಯದ ಪ್ರಜೆ ಆಗಬಹುದು. (ಅಪೊಸ್ತಲರ ಕಾರ್ಯಗಳು 10:34, 35) ಈಗಾಗಲೇ ದೇವರ ರಾಜ್ಯದ ಮಾರ್ಗದರ್ಶನದಲ್ಲಿ ಭೂವ್ಯಾಪಕವಾಗಿ ಒಂದು ಶೈಕ್ಷಣಿಕ ಕಾರ್ಯಕ್ರಮ ನಡೆಯುತ್ತಿದೆ. ನೀವು ಆ ರಾಜ್ಯದ ಪ್ರಜೆಗಳಾಗಲು ಏನು ಮಾಡಬೇಕೆಂದು ಅಲ್ಲಿ ತಿಳಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಉಚಿತ ಬೈಬಲ್‌ ಅಧ್ಯಯನವೂ ಒಂದು. ನೀವು ಬಯಸುವುದಾದರೆ ಅದನ್ನು ಹೇಗೆ ನಡೆಸಲಾಗುತ್ತದೆ ಎಂದು ಯೆಹೋವನ ಸಾಕ್ಷಿಗಳು ನಿಮಗೆ ತೋರಿಸುತ್ತಾರೆ. ಇದಕ್ಕಾಗಿ ನೀವು ವಾರದಲ್ಲಿ ಹತ್ತು ನಿಮಿಷ ಕೊಟ್ಟರೂ ಸಾಕು. ಇದರಿಂದ ನೀವು, “ದೇವರ ರಾಜ್ಯದ ಸುವಾರ್ತೆಯ” ಬಗ್ಗೆ ತಿಳಿದುಕೊಳ್ಳಬಹುದು. ಜೊತೆಗೆ, ಈ ರಾಜ್ಯ ಭ್ರಷ್ಟಾಚಾರವನ್ನು ಹೇಗೆ ತೆಗೆದುಹಾಕುತ್ತದೆ ಎನ್ನುವುದರ ಬಗ್ಗೆ ಮತ್ತು ಇನ್ನಿತರ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು. (ಲೂಕ 4:43) ಆದ್ದರಿಂದ ನಿಮಗೆ ಹತ್ತಿರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ jw.org ವೆಬ್‌ಸೈಟ್‌ ನೋಡಿ. ▪ (w15-E 01/01)

ಉಚಿತ ಬೈಬಲ್‌ ಅಧ್ಯಯನ ಪಡೆದುಕೊಳ್ಳಲು ನಿಮಗೆ ಇಷ್ಟವಿದೆಯಾ?

^ ಪ್ಯಾರ. 8 ಬೈಬಲಿನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.