ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಕ್ಕಳಿಗೆ ಶಿಸ್ತನ್ನು ನೀಡುವುದು ಹೇಗೆ?

ನಿಮ್ಮ ಮಕ್ಕಳಿಗೆ ಶಿಸ್ತನ್ನು ನೀಡುವುದು ಹೇಗೆ?

“ಕಾರ್‌ ಶಬ್ದ ಕೇಳಿದಾಗೆಲ್ಲ ನನ್ನ ಮಗ ಬಂದಿರಬಹುದು ಅಂತ ನೋಡಿ ನೋಡಿ ಸಾಕಾಗಿ ಹೋಯ್ತು. ನನ್ನ ಮಗ ಸುಶಾಂತ್‌, ಹೇಳಿದ ಟೈಮಿಗೆ ಸರಿಯಾಗಿ ಬರದೇ ಇರೋದು ಇದೇನು ಮೊದಲನೇ ಸಲ ಅಲ್ಲ. ‘ಅವನು ಎಲ್ಲಿ ಹೋಗಿರಬಹುದು?. . . ಏನಾದರೂ ತೊಂದರೆಯಾಗಿರಬಹುದಾ?. . . ನಾವು ಕಾಯುತ್ತಿರುತ್ತೇವೆ ಅನ್ನುವ ಪರಿಜ್ಞಾನವಾದರೂ ಅವನಿಗಿದೆಯಾ?’ ಅಂತೆಲ್ಲ ಯೋಚಿಸಿದೆ. ಅವನು ಬಂದಾಗ ನನಗೆ ಬರುತ್ತಿದ್ದ ಕೋಪಕ್ಕೆ ಅವನನ್ನು ಚೆನ್ನಾಗಿ ಬೈಯ್ಯಬೇಕೆನಿಸಿತು.”ಪ್ರಕಾಶ್‌.

“ನನ್ನ ಮಗಳು ಕಿರುಚಿದಾಗ ಅವಳಿಗೇನಾಯಿತೋ ಎಂದು ಗಾಬರಿಯಾಯಿತು. ಬಂದು ನೋಡಿದರೆ ಅವಳು ತಲೆಯನ್ನು ಬಿಗಿಯಾಗಿ ಹಿಡಿದುಕೊಂಡು ಅಳುತ್ತಿದ್ದಳು. ನನ್ನ ನಾಲ್ಕು ವರ್ಷದ ಮಗ ಅವಳಿಗೆ ಹೊಡೆದುಬಿಟ್ಟಿದ್ದ.”—ನಿರ್ಮಲ.

“‘ಈ ರಿಂಗ್‌ ನಾನು ಕದ್ದಿದ್ದಲ್ಲ, ನನಗೆ ಸಿಕ್ಕಿದ್ದು!’ ಅಂತ ಆರು ವರ್ಷದ ನನ್ನ ಮಗಳು ನೇಹಾ ಏನೂ ಗೊತ್ತಿಲ್ಲದಿರುವ ತರ ಹೇಳುವಾಗ ನಮ್ಮಿಬ್ಬರಿಗೂ ಅವಳು ಸುಳ್ಳು ಹೇಳುತ್ತಿದ್ದಾಳೆ ಅಂತ ಗೊತ್ತಾಯ್ತು. ಅವಳು ಸುಳ್ಳು ಹೇಳಿದ್ದಕ್ಕೆ ನಮಗೆ ಎಷ್ಟು ಬೇಜಾರಾಯಿತೆಂದರೆ ಅಳುನೇ ಬಂದುಬಿಟ್ಟಿತು.”—ಶಶಿಧರ್‌.

ನಿಮಗೂ ಮಕ್ಕಳಿರುವುದಾದರೆ ಮೇಲೆ ತಿಳಿಸಲಾದ ಮಾತುಗಳಲ್ಲಿರುವ ಭಾವನೆಗಳು ಚೆನ್ನಾಗಿ ಅರ್ಥ ಆಗಿರುತ್ತವೆ. ಅಂಥ ಪರಿಸ್ಥಿತಿಗಳು ಎದುರಾದಾಗ, ನಿಮ್ಮ ಮಕ್ಕಳಿಗೆ ಶಿಸ್ತು ನೀಡಬೇಕಾ? ನೀಡಬೇಕಾದರೆ ಹೇಗೆ ನೀಡಬೇಕು? ಅಷ್ಟಕ್ಕೂ, ಮಕ್ಕಳಿಗೆ ಶಿಸ್ತು ನೀಡುವುದು ತಪ್ಪಾ?

ಶಿಸ್ತು ಎಂದರೇನು?

ಬೈಬಲ್‌ ಪ್ರಕಾರ ಶಿಸ್ತು ಎಂದರೆ ಶಿಕ್ಷೆ ಒಂದೇ ಅಲ್ಲ. ಶಿಸ್ತು ಕೊಡುವುದರಲ್ಲಿ ಸಲಹೆ ಕೊಡುವುದು, ತರಬೇತಿ ನೀಡುವುದು, ತಪ್ಪನ್ನು ತಿದ್ದುವುದೂ ಸೇರಿದೆ. ಕೆಟ್ಟ ಮಾತಿನಿಂದ ಬೈಯ್ಯುವುದನ್ನು ಅಥವಾ ಕ್ರೂರವಾಗಿ ನಡೆದುಕೊಳ್ಳುವುದನ್ನು ಶಿಸ್ತು ಎಂದು ಹೇಳುವುದಿಲ್ಲ.—ಜ್ಞಾನೋಕ್ತಿ 4:1, 2.

ಹೆತ್ತವರು ನೀಡುವ ಶಿಸ್ತನ್ನು ತೋಟಗಾರಿಕೆಗೆ ಹೋಲಿಸಬಹುದು. ತೋಟಗಾರನು ಮಣ್ಣನ್ನು ಹದಮಾಡಿ ಅದರಲ್ಲಿ ಗಿಡವನ್ನು ನೆಟ್ಟು, ನೀರು ಹಾಕಿ ಇನ್ನಿತರ ಪೋಷಣೆಯನ್ನು ಮಾಡುತ್ತಾನೆ. ಕ್ರಿಮಿ ಕೀಟಗಳಿಂದ ಮತ್ತು ಕಳೆಗಳಿಂದಲೂ ಆ ಗಿಡವನ್ನು ಕಾಪಾಡುತ್ತಾನೆ. ಗಿಡವು ಬೆಳೆಯುತ್ತಾ ಬಂದಂತೆ ಅಡ್ಡಾದಿಡ್ಡಿ ಬೆಳೆದ ಅದರ ಕೊಂಬೆಗಳನ್ನು ಸ್ವಲ್ವ ಕತ್ತರಿಸಬೇಕಾಗಬಹುದು. ಹೀಗೆ ಗಿಡ ಸೊಂಪಾಗಿ ಬೆಳೆಯಬೇಕೆಂದರೆ ತೋಟಗಾರನು ಅನೇಕ ವಿಷಯಗಳನ್ನು ಮಾಡುತ್ತಾನೆ. ಅದೇ ರೀತಿ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಅನೇಕ ವಿಧಗಳಲ್ಲಿ ಕಾಳಜಿ ತೋರಿಸುತ್ತಾರೆ. ಆದರೆ ತೋಟಗಾರನು ಗಿಡಗಳ ಕೊಂಬೆಗಳನ್ನು ಕತ್ತರಿಸಿದಂತೆ ಕೆಲವೊಂದು ಸಮಯದಲ್ಲಿ ಹೆತ್ತವರು ಮಕ್ಕಳಿಗೆ ಶಿಸ್ತನ್ನು ಸಹ ನೀಡಬೇಕಾಗುತ್ತದೆ. ಇದು ಮಕ್ಕಳ ತಪ್ಪು ಪ್ರವೃತ್ತಿಯನ್ನು ಆರಂಭದಲ್ಲೇ ತಿದ್ದಿ ಸರಿಯಾದ ಮಾರ್ಗದಲ್ಲಿ ನಡೆಯಲು ಅವರಿಗೆ ಸಹಾಯ ಮಾಡುತ್ತದೆ. ತೋಟಗಾರನು ಕೊಂಬೆಗಳನ್ನು ಕತ್ತರಿಸುವಾಗ ತುಂಬ ಮುತುವರ್ಜಿ ವಹಿಸಬೇಕು. ಇಲ್ಲದಿದ್ದರೆ, ಆ ಗಿಡಕ್ಕೆ ಹಾನಿಯಾಗಬಹುದು. ಅಂತೆಯೇ ಹೆತ್ತವರು ಸಹ ಮಕ್ಕಳಿಗೆ ಶಿಸ್ತು ನೀಡುವಾಗ ತುಂಬ ಮುತುವರ್ಜಿ ವಹಿಸಿ ಪ್ರೀತಿಯಿಂದ ನೀಡಬೇಕು.

ಯೆಹೋವ ದೇವರು * ಶಿಸ್ತು ನೀಡುವ ವಿಷಯದಲ್ಲಿ ಹೆತ್ತವರಿಗೆ ಅತ್ಯುತ್ತಮ ಮಾದರಿಯಾಗಿದ್ದಾನೆ. ಭೂಮಿಯಲ್ಲಿರುವ ತನ್ನ ಆರಾಧಕರಿಗೆ ಆತನು ನೀಡುವ ಶಿಸ್ತು ತುಂಬ ಪ್ರಯೋಜನ ತರುತ್ತದೆ. ಆದುದರಿಂದಲೇ ಅವರು ಆತನ ಶಿಸ್ತನ್ನು ‘ಪ್ರೀತಿಸುತ್ತಾರೆ.’ (ಜ್ಞಾನೋಕ್ತಿ 12:1) ಆತನ ಉಪದೇಶವನ್ನು ಯಾವಾಗಲೂ ಪಾಲಿಸುತ್ತಾರೆ. (ಜ್ಞಾನೋಕ್ತಿ 4:13) ನೀವು ನೀಡುವ ಶಿಸ್ತನ್ನು ನಿಮ್ಮ ಮಕ್ಕಳು ಸ್ವೀಕರಿಸಬೇಕೆಂದರೆ ದೇವರು ಶಿಸ್ತು ನೀಡುವಾಗ ಅನುಸರಿಸುವ ಈ ಮೂರು ಮುಖ್ಯ ವಿಷಯಗಳನ್ನು ನೀವು ನಿಕಟವಾಗಿ ಅನುಕರಿಸಬೇಕು: 1) ಪ್ರೀತಿ 2) ಪರಿಸ್ಥಿತಿಯನ್ನು ಪರಿಗಣಿಸುವುದು 3) ಮಾತಿಗೆ ತಕ್ಕಂತೆ ನಡೆಯುವುದು.

ಪ್ರೀತಿಪರರಾಗಿರಿ

ದೇವರಿಗೆ ನಮ್ಮ ಮೇಲೆ ಪ್ರೀತಿಯಿರುವುದರಿಂದಲೇ ಶಿಸ್ತು ನೀಡುತ್ತಾನೆ. “ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು  ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 3:12) ಜೊತೆಗೆ, “ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ” ಆಗಿದ್ದಾನೆ. (ವಿಮೋಚನಕಾಂಡ 34:6) ಈ ಕಾರಣದಿಂದಲೇ, ಯೆಹೋವ ದೇವರು ಕೆಟ್ಟ ಮಾತಿನಿಂದ ಬೈಯ್ಯುವುದಾಗಲಿ, ಕ್ರೂರವಾಗಿ ನಡೆದುಕೊಳ್ಳುವುದಾಗಲಿ ಮಾಡುವುದಿಲ್ಲ. ಕಠೋರ ಮಾತುಗಳನ್ನಾಡುವುದು, ಯಾವಾಗಲೂ ತಪ್ಪನ್ನೇ ಎತ್ತಿ ಹೇಳುವುದು ಅಥವಾ ಮೂದಲಿಸುವುದು ‘ಕತ್ತಿ ತಿವಿದಂತಿರುತ್ತದೆ.’ ಯೆಹೋವ ದೇವರು ಎಂದಿಗೂ ಈ ರೀತಿ ಮಾಡುವುದಿಲ್ಲ.—ಜ್ಞಾನೋಕ್ತಿ 12:18.

ಕಿವಿಗೊಡಿ

ದೇವರಷ್ಟು ಸ್ವನಿಯಂತ್ರಣ ತೋರಿಸುವುದು ಹೆತ್ತವರಿಗೆ ಅಸಾಧ್ಯ ಎನ್ನುವುದಂತೂ ಸತ್ಯ. ಏಕೆಂದರೆ ತಾಳ್ಮೆ ಕಳೆದುಕೊಳ್ಳುವಂತಹ ಕೆಲವೊಂದು ಸಂದರ್ಭಗಳು ಬರಬಹುದು. ಆದರೆ ನೆನಪಿಡಿ ತಾಳ್ಮೆ ಕಳೆದುಕೊಂಡು, ಕೋಪದಿಂದಿರುವ ಸಂದರ್ಭದಲ್ಲಿ ನೀವು ಕೊಡುವ ಶಿಕ್ಷೆ ಕಠೋರವಾದದ್ದು, ಅತಿರೇಕದವಾದದ್ದು, ಉದ್ದೇಶಿಸಿದ್ದಕ್ಕೆ ವಿರುದ್ಧವಾದ ಪರಿಣಾಮವನ್ನು ತರುವಂಥದ್ದೂ ಆಗಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕೊಡುವ ಶಿಕ್ಷೆಯನ್ನು ಶಿಸ್ತು ಎಂದು ಹೇಳಲಾಗುವುದಿಲ್ಲ. ಅದು ಸ್ವನಿಯಂತ್ರಣದ ಕೊರತೆಯಾಗಿರುತ್ತದಷ್ಟೆ.

ಇನ್ನೊಂದು ಕಡೆ, ನೀವು ಪ್ರೀತಿಯಿಂದ ಮತ್ತು ತಾಳ್ಮೆಯಿಂದ ನೀಡುವ ಶಿಸ್ತು ಒಳ್ಳೇ ಪರಿಣಾಮವನ್ನು ಬೀರುತ್ತದೆ. ಆರಂಭದಲ್ಲಿ ತಿಳಿಸಲಾದ ಪ್ರಕಾಶ್‌ ಮತ್ತು ನಿರ್ಮಲ ತಮಗೆದುರಾದ ಸಮಸ್ಯೆಯನ್ನು ಹೇಗೆ ಬಗೆಹರಿಸಿದರು ಎಂದು ಪರಿಗಣಿಸಿ.

ಪ್ರಾರ್ಥಿಸಿ

“ನನ್ನ ಮಗ ಸುಶಾಂತ್‌ ಮನೆಗೆ ಬಂದಾಗ ನನಗೂ ನನ್ನ ಪತ್ನಿಗೂ ಕೋಪ ನೆತ್ತಿಗೇರಿತ್ತು. ಆದರೂ ಅವನು ಯಾಕೆ ಲೇಟಾಗಿ ಬಂದ ಅಂತ ವಿವರಿಸುವಾಗ ತಾಳ್ಮೆಯಿಂದ ಕೇಳಿಸಿಕೊಂಡೆವು. ತಡರಾತ್ರಿ ಆಗಿದ್ದರಿಂದ, ಅದರ ಬಗ್ಗೆ ಬೆಳಿಗ್ಗೆ ಮಾತಾಡಲು ನಿರ್ಧರಿಸಿ, ಜೊತೆಯಾಗಿ ಪ್ರಾರ್ಥನೆ ಮಾಡಿ ಮಲಗಿದೆವು. ಮಾರನೇ ದಿನ, ಸಮಾಧಾನವಾಗಿ ಮಾತಾಡಿ ಅವನಿಗೆ ತಿಳಿಹೇಳಿದೆವು. ಅವನು ಸಹ ಇನ್ನು ಮುಂದೆ ಲೇಟಾಗಿ ಬರಲ್ಲ ಅಂತ ಹೇಳಿ ತನ್ನ ತಪ್ಪನ್ನು ಒಪ್ಪಿಕೊಂಡ. ನಾವು ಹಾಕಿದ ನಿಯಮಗಳನ್ನು ಪಾಲಿಸುತ್ತೇನೆಂದು ಹೇಳಿದ. ಇದರಿಂದ ಒಂದಂಶವಂತೂ ತಿಳಿದುಬಂತು. ಕೋಪದಲ್ಲಿದ್ದಾಗ ಮಾತಾಡಿದರೆ ಅದರಿಂದೇನೂ ಪ್ರಯೋಜನವಿಲ್ಲ. ಬದಲಿಗೆ ಯಾಕೆ ಈ ರೀತಿ ಆಯಿತು ಎಂದು ಮೊದಲು ವಿಚಾರಿಸಿ ಮಕ್ಕಳು ಹೇಳುವುದನ್ನು ಕೇಳುವಾಗ ಸಮಸ್ಯೆ ನಾವು ಅಂದುಕೊಂಡದ್ದಕ್ಕಿಂತ ಬೇಗನೇ ಪರಿಹಾರವಾಗುತ್ತದೆ.”—ಪ್ರಕಾಶ್‌.

ಮಾತಾಡಿ

“ನನ್ನ ಮಗ ಅಷ್ಟು ಜೋರಾಗಿ ನನ್ನ ಮಗಳಿಗೆ ಹೊಡೆದಿದ್ದನ್ನು ನೋಡಿ ನನಗೆ ತುಂಬಾನೇ ಕೋಪ ಬಂತು. ನಾಲ್ಕು ಹಾಕಬೇಕು ಅಂತ ಅಂದುಕೊಂಡೆ. ಆದರೂ ತಾಳ್ಮೆಯಿಂದಿದ್ದು ಅವನನ್ನು ರೂಮಿಗೆ ಕಳುಹಿಸಿಬಿಟ್ಟೆ. ಏಕೆಂದರೆ ಆ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಕೋಪ ತಣ್ಣಗಾದ ಮೇಲೆ ಹಿಂಸೆ ಮಾಡುವುದು ತಪ್ಪು ಎಂದು ಕಟ್ಟುನಿಟ್ಟಾಗಿ ಹೇಳಿ, ಅಕ್ಕನಿಗೆ ಎಷ್ಟು ನೋವಾಗಿದೆ ಎಂದು ಅರ್ಥ ಮಾಡಿಸಿದೆ. ಈ ರೀತಿ ಅವನಿಗೆ ವಿವರಿಸಿದ್ದು ಒಳ್ಳೆಯದಾಯಿತು. ಅವನು ತನ್ನ ಅಕ್ಕನ ಹತ್ತಿರ ಕ್ಷಮೆ ಕೇಳಿ ಅವಳನ್ನು ಪ್ರೀತಿಯಿಂದ ಅಪ್ಪಿಕೊಂಡ.”ನಿರ್ಮಲ.

ಸರಿಯಾದ ರೀತಿಯಲ್ಲಿ ನೀಡುವ ಶಿಸ್ತಿನಲ್ಲಿ ಶಿಕ್ಷೆಯಿರುವುದಾದರೂ ಅದು ಪ್ರೀತಿಯಿಂದ ಕೂಡಿರುತ್ತದೆ.

ಪರಿಸ್ಥಿತಿಯನ್ನು ಪರಿಗಣಿಸಿ

ಯೆಹೋವನು ನೀಡುವ ಶಿಸ್ತು ಎಂದಿಗೂ ‘ಮಿತಿ ಮೀರುವುದಿಲ್ಲ.’ (ಯೆರೆಮೀಯ 30:11; 46:28) ಆತನು ಪರಿಸ್ಥಿತಿಗಳನ್ನು  ಪರಿಗಣಿಸುತ್ತಾನೆ. ನಮ್ಮ ಗಮನಕ್ಕೆ ಬಾರದಿರುವ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಹೆತ್ತವರು ಇದನ್ನು ಹೇಗೆಮಾಡಬಹುದು? ಆರಂಭದಲ್ಲಿ ತಿಳಿಸಲಾದ ಶಶಿಧರ್‌ ವಿವರಿಸುವುದು: “ರಿಂಗನ್ನು ಕದ್ದಿಲ್ಲ ಎಂದು ನನ್ನ ಮಗಳು ನೇಹಾ ಪದೇ ಪದೇ ಸಮರ್ಥಿಸಿಕೊಳ್ಳುತ್ತಿದ್ದಾಗ ಯಾಕೆ ಈ ರೀತಿ ವರ್ತಿಸುತ್ತಿದ್ದಾಳೆ ಅಂತ ಅರ್ಥವಾಗಲಿಲ್ಲ. ಅವಳು ಮಾಡಿದ್ದು ನಮಗೆ ತುಂಬ ಬೇಜಾರಾಯಿತಾದರೂ ಅವಳ ವಯಸ್ಸು, ಪ್ರೌಢತೆ ಬಗ್ಗೇನೂ ಯೋಚನೆ ಮಾಡಿದೆವು.”

ನಿರ್ಮಲಾಳ ಪತಿ ರಾಕೇಶ್‌, ಸನ್ನಿವೇಶವನ್ನು ಪರಿಗಣಿಸಲು ಪ್ರಯತ್ನಿಸುತ್ತಾನೆ. ಮಕ್ಕಳು ತಪ್ಪಾಗಿ ನಡೆದುಕೊಳ್ಳುವಾಗ ‘ಮಕ್ಕಳು ಈ ರೀತಿ ಮಾಡುತ್ತಿರುವುದು ಇದೇ ಮೊದಲನೇ ಸಲಾನಾ ಅಥವಾ ಯಾವಾಗಲೂ ಹೀಗೆ ಮಾಡುತ್ತಾರಾ? ಸುಸ್ತಾಗಿರಬಹುದಾ ಅಥವಾ ಏನಾದ್ರೂ ಹುಷಾರಿಲ್ಲವಾ? ಈ ರೀತಿ ನಡೆದುಕೊಳ್ಳುವುದಕ್ಕೆ ಏನಾದ್ರೂ ಕಾರಣವಿರಬಹುದಾ?’ ಅಂತ ಪದೇ ಪದೇ ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಾನೆ.

ಪರಿಸ್ಥಿತಿಯನ್ನು ಪರಿಗಣಿಸುವ ಹೆತ್ತವರು, ಮಕ್ಕಳು ಇನ್ನೂ ಮಕ್ಕಳೇ ದೊಡ್ಡವರಲ್ಲ ಎನ್ನುವ ಸತ್ಯವನ್ನು ಅರಿತಿರುತ್ತಾರೆ. ಕ್ರೈಸ್ತನಾದ ಅಪೊಸ್ತಲ ಪೌಲನೂ ಈ ಸತ್ಯವನ್ನು ಒಪ್ಪಿಕೊಂಡ. ಅವನು ಹೇಳಿದ್ದು: “ನಾನು ಮಗುವಾಗಿದ್ದಾಗ ಮಗುವಿನಂತೆ ಮಾತಾಡುತ್ತಿದ್ದೆನು, ಮಗುವಿನಂತೆ ಆಲೋಚಿಸುತ್ತಿದ್ದೆನು.” (1 ಕೊರಿಂಥ 13:11) ರಾಕೇಶ್‌ ಹೇಳುವುದು: “ನಾನು ಚಿಕ್ಕವನಿದ್ದಾಗ ಹೇಗೆ ನಡೆದುಕೊಳ್ಳುತ್ತಿದ್ದೆ ಅನ್ನೋದನ್ನು ಯೋಚಿಸುವುದು ಮಕ್ಕಳ ಬಗ್ಗೆ ಸರಿಯಾದ ನೋಟ ಹೊಂದಿರಲು, ಅವರಿಗೆ ಹೆಚ್ಚು ಶಿಕ್ಷಿಸದಿರಲು ನನಗೆ ಸಹಾಯ ಮಾಡುತ್ತದೆ.”

ಮಕ್ಕಳ ಕೈಲಾಗದ ವಿಷಯಗಳನ್ನು ಮಾಡುವಂತೆ ಬಯಸಬೇಡಿ. ಅದೇ ಸಮಯದಲ್ಲಿ ನಿಮ್ಮ ಮಕ್ಕಳ ತಪ್ಪುಗಳನ್ನು ಮತ್ತು ತಪ್ಪಾದ ನಡವಳಿಕೆಯನ್ನು ಸಮರ್ಥಿಸಬೇಡಿ ಅಥವಾ ನೋಡಿಯೂ ನೋಡದವರಂತೆ ಇರಬೇಡಿ. ನಿಮ್ಮ ಮಕ್ಕಳ ಸಾಮರ್ಥ್ಯಗಳನ್ನು, ಇತಿಮಿತಿಗಳನ್ನು ಮತ್ತು ಪರಿಸ್ಥಿತಿಗಳನ್ನು ಪರಿಗಣಿಸುತ್ತಾ ನ್ಯಾಯವಾದ ರೀತಿಯಲ್ಲಿ ಶಿಸ್ತನ್ನು ನೀಡಿ.

ಮಾತಿಗೆ ತಕ್ಕಂತೆ ನಡೆದುಕೊಳ್ಳಿ

“ಯೆಹೋವನಾದ ನಾನು ಮಾರ್ಪಟ್ಟಿಲ್ಲ,” ಎಂದು ಹೇಳುತ್ತದೆ ಬೈಬಲಿನ ಮಲಾಕಿಯ 3:6. ದೇವರ ಆರಾಧಕರಿಗೆ ಈ ಮಾತು ಸಾಂತ್ವನದಾಯಕವಾಗಿದೆ. ತಪ್ಪು ಮಾಡಿದಾಗ ಶಿಸ್ತು ಖಂಡಿತ ಎಂದು ಮಕ್ಕಳಿಗೆ ಗೊತ್ತಿರಬೇಕು. ನಿಮ್ಮ ಮೂಡ್ ಚೆನ್ನಾಗಿರುವಾಗ ಒಂದು ಥರ ಚೆನ್ನಾಗಿಲ್ಲದಿರುವಾಗ ಇನ್ನೊಂದು ಥರ ನಡೆದುಕೊಂಡರೆ ಮಕ್ಕಳಿಗೆ ಗಲಿಬಿಲಿಯಾಗಬಹುದು, ಒತ್ತಡಕ್ಕೂ ಒಳಗಾಗಬಹುದು.

“ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ” ಎಂದು ಯೇಸು ಹೇಳಿದ್ದಾನೆ. ಆ ಮಾತು ಹೆತ್ತವರಿಗೆ ಸಹ ಅನ್ವಯವಾಗುತ್ತದೆ. (ಮತ್ತಾಯ 5:37) ತಪ್ಪು ಮಾಡಿದಾಗ ಶಿಕ್ಷೆ ಕೊಡ್ತೀನಿ ಎಂದು ನಿಮ್ಮ ಮಕ್ಕಳಿಗೆ ಎಚ್ಚರಿಕೆ ಕೊಟ್ಟಿದ್ದರೆ ಅದರ ಪ್ರಕಾರ ನಡೆದುಕೊಳ್ಳಲೇಬೇಕು. ಆದ್ದರಿಂದ, ಹೇಳಿದ ಮಾತಿನಿಂತೆ ನಡೆದುಕೊಳ್ಳುತ್ತೇವಾ ಎಂದು ಯೋಚನೆ ಮಾಡಿ ಎಚ್ಚರಿಕೆ ಕೊಡಿ.

ಶಿಸ್ತು ನೀಡುವ ವಿಷಯದಲ್ಲಿ ಅಪ್ಪ-ಅಮ್ಮ ಇಬ್ಬರೂ ಮಾತಾಡಿಕೊಳ್ಳುವುದು ತುಂಬ ಪ್ರಾಮುಖ್ಯ. ರಾಕೇಶ್‌ ಹೇಳುವುದು: “ಮಕ್ಕಳ ಬಲವಂತಕ್ಕೆ ಯಾವುದಾದರೂ ವಿಷಯದಲ್ಲಿ ನಾನು ಒಪ್ಪಿಗೆ ಕೊಟ್ಟಿದ್ದರೂ, ಆ ವಿಷಯವನ್ನು ಮಾಡಬೇಡಿ ಎಂದು ನನ್ನ ಪತ್ನಿ ಮಕ್ಕಳಿಗೆ ಹೇಳಿದ್ದಳೆಂದು ನಂತರ ತಿಳಿದುಬರುವುದಾದರೆ, ನಾನು ನನ್ನ ನಿರ್ಧಾರವನ್ನು ಬದಲಾಯಿಸುತ್ತೇನೆ. ನನ್ನ ಪತ್ನಿ ಮಕ್ಕಳಿಗೆ ಇಟ್ಟಿರೋ ನಿಯಮಗಳನ್ನು ನಾನೆಂದಿಗೂ ಬದಲಾಯಿಸುವುದಿಲ್ಲ.” ಶಿಸ್ತು ನೀಡುವ ವಿಷಯದಲ್ಲಿ ಹೆತ್ತವರಿಗೆ ಭಿನ್ನ ಅಭಿಪ್ರಾಯಗಳಿರುವುದಾದರೆ ಇಬ್ಬರೇ ಇರುವಾಗ ಒಬ್ಬರಿಗೊಬ್ಬರು ಮಾತಾಡಿಕೊಂಡು ಒಂದೇ ನಿರ್ಧಾರಕ್ಕೆ ಬರಬೇಕು.

ಶಿಸ್ತು ಅತ್ಯಾವಶ್ಯಕ

ಯೆಹೋವ ದೇವರು ಶಿಸ್ತು ನೀಡುವಾಗ ಪ್ರೀತಿಯಿಂದ, ಪರಿಸ್ಥಿತಿಗಳನ್ನು ಪರಿಗಣಿಸುತ್ತಾ, ಹೇಳಿದ ಮಾತಿಗೆ ತಕ್ಕಂತೆ ನಡೆಯುತ್ತಾನೆ. ಹೆತ್ತವರಾಗಿರುವ ನೀವು ಇವುಗಳನ್ನು ಅನುಕರಿಸುವುದಾದರೆ ನಿಮ್ಮ ಮಕ್ಕಳು ಇದರಿಂದ ಪ್ರಯೋಜನ ಹೊಂದುತ್ತಾರೆ. ನಿಮ್ಮ ಪ್ರೀತಿಯ ಮಾರ್ಗದರ್ಶನ ನಿಮ್ಮ ಮಕ್ಕಳನ್ನು ಪ್ರೌಢರು, ಜವಾಬ್ದಾರಿಯುತ ವ್ಯಕ್ತಿಗಳು, ವಿವೇಕಿಗಳು ಆಗುವಂತೆ ಮಾಡುತ್ತದೆ. ಬೈಬಲ್‌ ಹೇಳಿದಂತೆ “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”—ಜ್ಞಾನೋಕ್ತಿ 22:6. (w14-E 07/01)

^ ಪ್ಯಾರ. 9 ಬೈಬಲ್‍ನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.