ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಒಳ್ಳೆಯವರಿಗೆ ಯಾಕೆ ಕಷ್ಟ ಬರುತ್ತದೆ?

ಕಷ್ಟಗಳನ್ನು ದೇವರು ಹೇಗೆ ತೆಗೆದುಹಾಕುತ್ತಾನೆ?

ಕಷ್ಟಗಳನ್ನು ದೇವರು ಹೇಗೆ ತೆಗೆದುಹಾಕುತ್ತಾನೆ?

ಸೈತಾನನು ತಂದಿರುವ ಕಷ್ಟಗಳನ್ನು ಯೆಹೋವ ದೇವರು ಯೇಸು ಕ್ರಿಸ್ತನ ಮೂಲಕ ತೆಗೆದುಹಾಕುವನು. ಸೈತಾನನ ಕೆಲಸಗಳನ್ನು ನಿರ್ನಾಮ ಮಾಡಲೆಂದೇ ಯೇಸು ಪ್ರಕಟಗೊಳಿಸಲ್ಪಟ್ಟನು ಎಂದು ಬೈಬಲ್‌ ಹೇಳುತ್ತದೆ. (1 ಯೋಹಾನ 3:8) ಅಂದರೆ ದುರಾಸೆ, ದ್ವೇಷ ಮತ್ತು ಕೆಟ್ಟತನ ತುಂಬಿರುವ ಈಗಿನ ವ್ಯವಸ್ಥೆಯನ್ನು ಯೇಸು ಸಂಪೂರ್ಣವಾಗಿ ನಾಶಮಾಡುವನು. ‘ಈ ಲೋಕದ ಅಧಿಪತಿಯಾದ’ ಸೈತಾನನನ್ನು ‘ಹೊರಗೆ ಹಾಕುವೆನು’ ಎಂದು ಆತನು ಮಾತುಕೊಟ್ಟಿದ್ದಾನೆ. (ಯೋಹಾನ 12:31) ಯೇಸು ಅದನ್ನು ಮಾಡಿದಾಗ ನೀತಿ ತುಂಬಿದ ಶಾಂತಿಯುತ ಹೊಸ ಲೋಕ ಸ್ಥಾಪನೆಗೊಳ್ಳುವುದು, ಅದರ ಮೇಲೆ ಸೈತಾನನಿಗೆ ಹಿಡಿತವಿರುವುದಿಲ್ಲ.—2 ಪೇತ್ರ 3:13.

ಕೆಟ್ಟತನವನ್ನು ಮಾಡುತ್ತಲೇ ಮುಂದುವರಿಯುವ ಮತ್ತು ಬದಲಾಗಲು ಒಪ್ಪದ ಅವಿಧೇಯ ಜನರಿಗೆ ಏನಾಗುವುದು? “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು” ಎಂಬ ಆಶ್ವಾಸನೆಯನ್ನು ಬೈಬಲ್‌ ಕೊಡುತ್ತದೆ. (ಜ್ಞಾನೋಕ್ತಿ 2:21, 22) ಕೆಡುಕರೇ ಇಲ್ಲದ ನಿರಾತಂಕ ವಾತಾವರಣದಲ್ಲಿ ವಿಧೇಯ ಮಾನವರಲ್ಲಿರುವ ಪಾಪಪ್ರವೃತ್ತಿ ಕ್ರಮೇಣ ಇಲ್ಲವಾಗುವುದು.—ರೋಮನ್ನರಿಗೆ 6:17, 18; 8:21.

ಆ ಹೊಸ ಲೋಕದಲ್ಲಿ ಕೆಟ್ಟತನವನ್ನು ತೆಗೆದುಹಾಕಲು ದೇವರು ಏನು ಮಾಡುವನು? ಇದಕ್ಕಾಗಿ ಆತನು ಮಾನವರಿಗಿರುವ ನಿರ್ಣಯ ಮಾಡುವ ಸ್ವಾತಂತ್ರ್ಯವನ್ನು ಕಸಿದುಕೊಂಡು ಅವರನ್ನು ಯಂತ್ರಗಳಂತೆ ಮಾಡುವುದಿಲ್ಲ. ಬದಲಿಗೆ, ತನ್ನ ಮಾರ್ಗಗಳನ್ನು ವಿಧೇಯ ಮಾನವರಿಗೆ ಕಲಿಸುವ ಮೂಲಕ ಅವರಲ್ಲಿರುವ ತಪ್ಪಾದ ಯೋಚನೆ ಮತ್ತು ಕ್ರಿಯೆಗಳನ್ನು ಸರಿಪಡಿಸುವನು.

ದೇವರು ಎಲ್ಲಾ ಕಷ್ಟಗಳನ್ನು ತೆಗೆದುಹಾಕುತ್ತಾನೆ

ದೇವರು ವಿಪತ್ತುಗಳನ್ನು ಹೇಗೆ ನಿಲ್ಲಿಸುವನು? ತನ್ನ ಸರಕಾರ ಬಲು ಬೇಗನೆ ಈ ಭೂಮಿಯ ಮೇಲೆ ಆಳ್ವಿಕೆ ಮಾಡಲಿರುವುದು ಎಂಬ ಆಶ್ವಾಸನೆಯನ್ನು ದೇವರು ಕೊಟ್ಟಿದ್ದಾನೆ. ಆ ಸರಕಾರದ ರಾಜನಾಗಿರುವ ಯೇಸು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದ್ದಾನೆ. (ಮತ್ತಾಯ 14:14) ನೈಸರ್ಗಿಕ ಶಕ್ತಿಯನ್ನೂ ನಿಯಂತ್ರಿಸುವ ಸಾಮರ್ಥ್ಯ ಆತನಿಗಿದೆ. (ಮಾರ್ಕ 4:35-41) ಆದ್ದರಿಂದ ಅನಿರೀಕ್ಷಿತ ಘಟನೆಗಳಿಂದಾಗುವ ಸಾವು-ನೋವು ಇನ್ನಿರುವುದಿಲ್ಲ. (ಪ್ರಸಂಗಿ 9:11) ಕ್ರಿಸ್ತನ ಆಳ್ವಿಕೆಯಲ್ಲಿ ಯಾವ ವಿಪತ್ತೂ ಮಾನವರನ್ನು ಬಾಧಿಸುವುದಿಲ್ಲ.—ಜ್ಞಾನೋಕ್ತಿ 1:33.

ಈಗಾಗಲೇ ಪ್ರಾಣ ಕಳೆದುಕೊಂಡಿರುವ ಲಕ್ಷಾಂತರ ಅಮಾಯಕರ ವಿಷಯವೇನು? ಮೃತನಾದ ತನ್ನ ಸ್ನೇಹಿತ ಲಾಜರನನ್ನು ಬದುಕಿಸುವ ತುಸು ಮುಂಚೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ” ಎಂದು ಯೇಸು ಹೇಳಿದನು. (ಯೋಹಾನ 11:25) ಆದ್ದರಿಂದ ಸತ್ತವರನ್ನು ಪುನಃ ಬದುಕಿಸುವ ಸಾಮರ್ಥ್ಯ ಅಂದರೆ ಪುನರುತ್ಥಾನ ಮಾಡುವ ಸಾಮರ್ಥ್ಯ ಯೇಸುವಿಗಿದೆ.

ಕೆಟ್ಟತನವಿರದ ಲೋಕದಲ್ಲಿ ಜೀವಿಸಲು ನಿಮಗೆ ಇಷ್ಟವಿರುವುದಾದರೆ ಯಾಕೆ ದೇವರ ಬಗ್ಗೆ, ಆತನ ಚಿತ್ತದ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಬಾರದು? ಇದರ ಬಗ್ಗೆ ತಿಳಿಸಲು ಯೆಹೋವನ ಸಾಕ್ಷಿಗಳು ಸದಾ ಸಿದ್ಧರಿರುತ್ತಾರೆ. ಆದ್ದರಿಂದ ಅವರನ್ನು ಭೇಟಿ ಮಾಡುವಂತೆ ಅಥವಾ ಈ ಪತ್ರಿಕೆಯ ಪ್ರಕಾಶಕರನ್ನು ಸಂಪರ್ಕಿಸುವಂತೆ ನಿಮ್ಮನ್ನು ಉತ್ತೇಜಿಸುತ್ತೇವೆ. (w14-E 07/01)