ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕನ್ನೇ ಬದಲಾಯಿಸಿತು ಬೈಬಲ್‌

ಪಿಸ್ತೂಲ್‌ ಇಲ್ಲದೆ ಹೊರಗೆ ಕಾಲಿಟ್ಟವನೇ ಅಲ್ಲ

ಪಿಸ್ತೂಲ್‌ ಇಲ್ಲದೆ ಹೊರಗೆ ಕಾಲಿಟ್ಟವನೇ ಅಲ್ಲ
  • ಜನನ: 1958

  • ದೇಶ: ಇಟಲಿ

  • ಹಿಂದೆ: ರೌಡಿ

ಹಿನ್ನೆಲೆ:

ನಾನು ಹುಟ್ಟಿ ಬೆಳೆದದ್ದು ರೋಮ್‍ನ ಉಪನಗರವೊಂದರಲ್ಲಿ. ಅದು ಕಡು ಬಡವರಿದ್ದ ಸ್ಥಳ. ಜೀವನ ತುಂಬ ಕಷ್ಟವಾಗಿತ್ತು. ನನ್ನ ಹೆತ್ತತಾಯಿ ಯಾರು ಅಂತ ನನಗೆ ಇಂದಿಗೂ ಗೊತ್ತಿಲ್ಲ, ನನಗೆ ತಂದೆ ಅಂದರೆ ಅಷ್ಟಕ್ಕಷ್ಟೆ. ಒಟ್ಟಿನಲ್ಲಿ ಹೇಳಬೇಕೆಂದರೆ ನಾನು ತುಂಬ ಕಷ್ಟದ ಪರಿಸ್ಥಿತಿಯಲ್ಲಿ ಬೆಳೆದೆ.

ಹತ್ತು ವರ್ಷಕ್ಕೆಲ್ಲಾ ಕದಿಯಲು ಶುರುಮಾಡಿದೆ. 12ರ ಪ್ರಾಯದಲ್ಲಿ ಮನೆ ಬಿಟ್ಟು ಓಡಿಹೋದೆ, ಎರಡು ಮೂರು ಸಾರಿ ನಮ್ಮ ಅಪ್ಪ ಪೋಲೀಸ್‌ ಸ್ಟೇಷನ್‍ನಿಂದ ನನ್ನನ್ನು ಬಿಡಿಸಿಕೊಂಡು ಬಂದಿದ್ದರು. ನಾನು ಎಲ್ಲರ ಮೇಲೂ ಕೋಪ ತೋರಿಸುತ್ತಿದ್ದೆ. ಯಾವಾಗಲೂ ಜಗಳವಾಡುತ್ತಿದ್ದೆ, ಹಿಂಸೆಯಲ್ಲೇ ಮುಳುಗಿಹೋಗಿದ್ದೆ. 14ನೇ ಪ್ರಾಯದಲ್ಲಿ ಮತ್ತೆ ಮನೆ ಬಿಟ್ಟವನು ಪುನಃ ಮನೆಗೆ ಹೋಗಲೇ ಇಲ್ಲ. ನಾನು ಮಾದಕ ವಸ್ತುಗಳ ಚಟಕ್ಕೆ ಬಿದ್ದೆ, ರಸ್ತೆಯೇ ನನ್ನ ಮನೆಯಾಗಿತ್ತು. ಮಲಗಲು ಸ್ಥಳ ಇಲ್ಲದಿದ್ದಾಗ ಯಾವುದಾದರೂ ಕಾರ್‌ನ ಗ್ಲಾಸ್‌ ಒಡೆದು ಅದರೊಳಗೆ ಮಲಗುತ್ತಿದ್ದೆ. ಮುಂಜಾನೆಯೇ ಎದ್ದು ನೀರಿರುವ ಸ್ಥಳ ಹುಡುಕಿಕೊಂಡು ಹೋಗಿ ಅಲ್ಲಿ ಮುಖ ತೊಳೆದುಕೊಳ್ಳುತ್ತಿದ್ದೆ.

ಸ್ವಲ್ಪದರಲ್ಲೇ ಕಳ್ಳತನ ಮಾಡುವುದರಲ್ಲಿ ನಿಪುಣನಾದೆ. ಸಣ್ಣ ಬ್ಯಾಗ್‌ನಿಂದ ಹಿಡಿದು ದೊಡ್ಡ ದೊಡ್ಡ ಮನೆಗಳು ಮತ್ತು ಅಪಾರ್ಟ್‍ಮೆಂಟ್‌ಗಳನ್ನು ದೋಚುವಷ್ಟು ಬೆಳೆದುಬಿಟ್ಟೆ. ನನ್ನ ಕುಖ್ಯಾತಿ ಎಲ್ಲೆಡೆ ಹಬ್ಬಿದ್ದರಿಂದ ನನಗೆ ದರೋಡೆಕೋರರ ಗುಂಪಿಗೆ ಸೇರುವ ಆಮಂತ್ರಣ ಸಿಕ್ಕಿತು. ಈ ಗುಂಪಿಗೆ ಸೇರಿ ಬ್ಯಾಂಕ್‍ಗಳನ್ನು ಲೂಟಿ ಮಾಡಲು ಆರಂಭಿಸಿದೆ. ನಾನು ಕೋಪಿಷ್ಟ, ಕಠೋರ ವ್ಯಕ್ತಿ ಆಗಿದ್ದರಿಂದ ಆ ಗುಂಪಿನಲ್ಲಿ ನನಗೆ ತುಂಬ ಗೌರವ ಸಿಕ್ಕಿತು. ನಾನು ಪಿಸ್ತೂಲಿಲ್ಲದೆ ಹೊರಗೆ ಕಾಲಿಟ್ಟವನೇ ಅಲ್ಲ; ಮಲಗುವಾಗ ಸಹ ಅದನ್ನು ನನ್ನ ತಲೆದಿಂಬಿನ ಕೆಳಗಿಟ್ಟುಕೊಳ್ಳುತ್ತಿದ್ದೆ. ಹಿಂಸೆ, ಮಾದಕ ವಸ್ತು, ಕಳ್ಳತನ, ಕೆಟ್ಟಮಾತು ಮತ್ತು ಅನೈತಿಕತೆ ನನ್ನ ಜೀವನದ ಸಾರವಾಗಿ ಹೋಯಿತು. ಪೋಲೀಸರು ಯಾವಾಗಲೂ ನನಗಾಗಿ ಹುಡುಕಾಡುತ್ತಿದ್ದರು. ಎಷ್ಟೋ ಸಲ ನನ್ನನ್ನು ಬಂಧಿಸಲಾಯಿತು, ಹೀಗೆ ಜೈಲಿಗೆ ಹೋಗುವುದು, ಬರುವುದು ನನಗೆ ಸಾಮಾನ್ಯವಾಗಿಬಿಟ್ಟಿತ್ತು.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ಜೈಲಿನಿಂದ ಹೊರ ಬಂದ ಮೇಲೆ ಒಂದು ಸಾರಿ ನನ್ನ ಚಿಕ್ಕಮ್ಮನನ್ನು ನೋಡಲು ಹೋದೆ. ನನ್ನ ಚಿಕ್ಕಮ್ಮ ಮತ್ತವರ ಇಬ್ಬರು ಮಕ್ಕಳು ಅಷ್ಟೊತ್ತಿಗಾಗಲೇ ಯೆಹೋವನ ಸಾಕ್ಷಿಗಳಾಗಿದ್ದರು. ಸಾಕ್ಷಿಗಳ ಕೂಟಕ್ಕೊಮ್ಮೆ ಹಾಜರಾಗುವಂತೆ ನನ್ನನ್ನು ಕರೆದರು. ಅಲ್ಲಿ ಏನು ನಡೆಯುತ್ತದೆಂದು ನೋಡಬೇಕೆಂಬ ಕುತೂಹಲದಿಂದ ಅವರ ಜೊತೆ ಹೋಗಲು ನಿರ್ಧರಿಸಿದೆ. ಆ ಕೂಟಕ್ಕೆ ಹೋದಾಗ ಬಂದು ಹೋಗುವವರ ಮೇಲೆ ಒಂದು ಕಣ್ಣಿಡಬೇಕೆಂದು ಬಾಗಿಲ ಬಳಿಯಲ್ಲೇ ಕುಳಿತೆ. ಆಗಲೂ ನನ್ನ ಬಳಿ ಪಿಸ್ತೂಲಿತ್ತು.

ಆ ಒಂದು ಕೂಟ ನನ್ನ ಬದುಕನ್ನೇ ಬದಲಾಯಿಸಿಬಿಟ್ಟಿತು, ನಾನ್ಯಾವುದಾದರೂ ಬೇರೆ ಗ್ರಹಕ್ಕೆ ಬಂದಿದ್ದೇನಾ ಅಂತ ಅನಿಸಿತು. ಅಲ್ಲಿನವರು ಪ್ರೀತಿಯಿಂದ ನನ್ನನ್ನು ನಗುನಗುತ್ತಾ ಆಮಂತ್ರಿಸಿದರು, ಅವರಲ್ಲಿದ್ದ ದಯೆ ಮತ್ತು ಅವರ ಕಣ್ಣಲ್ಲಿ ತೋರಿ ಬಂದ ಆ ನಿಷ್ಕಪಟತನ, ಪ್ರಾಮಾಣಿಕತೆ ಈಗಲೂ ನನಗೆ ನೆನಪಿದೆ. ಖಂಡಿತ ನಾನು ಇಷ್ಟು ದಿನ ಜೀವಿಸಿದ ಲೋಕಕ್ಕೆ ಹೋಲಿಸುವಾಗ ಇದು ಬೇರೆ ಲೋಕದಂತಿತ್ತು.

ನಾನು ಸಾಕ್ಷಿಗಳೊಂದಿಗೆ ಅಧ್ಯಯನ ಆರಂಭಿಸಿದೆ. ಅವರೊಂದಿಗೆ ಅಧ್ಯಯನ ಮಾಡುತ್ತಾ ಹೋದಂತೆ ನನ್ನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲೇಬೇಕು ಎಂದು ಸ್ಪಷ್ಟವಾಗಿ ತಿಳಿಯಿತು. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು” ಎಂಬ ಜ್ಞಾನೋಕ್ತಿ 13:20ರ ಮಾತುಗಳು ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದವು. ಆ ದರೋಡೆಕೋರ ಗುಂಪಿನಿಂದ ದೂರವಾಗಲೇಬೇಕು ಎಂದು ನಿರ್ಧರಿಸಿದೆ. ಆದರೆ ಅದು ನಿರ್ಧಾರ ಮಾಡಿದಷ್ಟು ಸುಲಭವಾಗಿರಲಿಲ್ಲ, ಯೆಹೋವನ ಸಹಾಯದಿಂದ ಕೊನೆಗೂ ಆ ಗುಂಪಿನಿಂದ ದೂರವಾದೆ.

ನನ್ನ ಜೀವನದಲ್ಲೇ ಮೊಟ್ಟಮೊದಲ ಬಾರಿಗೆ ನನ್ನನ್ನು ನಾನು ನಿಯಂತ್ರಣದಲ್ಲಿಟ್ಟು ಕೊಳ್ಳಲು ಕಲಿತೆ

ನನ್ನ ತೋರಿಕೆಯನ್ನು ಬದಲಾಯಿಸಿಕೊಂಡೆ, ಧೂಮಪಾನ ಮತ್ತು ಮಾದಕ ವಸ್ತುಗಳ ಸೇವನೆಯನ್ನು ತುಂಬ ಕಷ್ಟಪಟ್ಟು ಬಿಟ್ಟುಬಿಟ್ಟೆ. ಕೂದಲು ಕತ್ತರಿಸಿಕೊಂಡೆ, ಕಿವಿಯೋಲೆ ತೆಗೆದುಹಾಕಿದೆ, ಕೆಟ್ಟಮಾತನ್ನು ನಿಲ್ಲಿಸಿಬಿಟ್ಟೆ. ನನ್ನ ಜೀವನದಲ್ಲೇ ಮೊಟ್ಟಮೊದಲ ಬಾರಿಗೆ ನನ್ನನ್ನು ನಾನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕಲಿತೆ.

ಓದೋದು, ಕಲಿಯೋದು ಅಂದರೆ ನನಗೆ ಸ್ವಲ್ಪನೂ ಇಷ್ಟವಿರಲಿಲ್ಲ. ಆದ್ದರಿಂದ ಬೈಬಲ್‌ ಅಧ್ಯಯನಕ್ಕೆ ಪೂರ್ತಿ ಗಮನಕೊಡಲು ಮತ್ತು ವೈಯಕ್ತಿಕ ಅಧ್ಯಯನ ಮಾಡಲು ತುಂಬ ಕಷ್ಟ ಆಗುತ್ತಿತ್ತು. ಆದರೂ ಬೈಬಲನ್ನು ಅಧ್ಯಯನ ಮಾಡುತ್ತಿದ್ದಂತೆ ಯೆಹೋವನ ಮೇಲೆ ಪ್ರೀತಿ ಬೆಳೆಯಿತು. ಆದರೆ ನನ್ನ ಮನಸಾಕ್ಷಿ ನನ್ನನ್ನು ಚುಚ್ಚಲಾರಂಭಿಸಿತು. ಕೆಲವೊಮ್ಮೆ ನನ್ನ ಬಗ್ಗೆ ನನಗೇ ಕೀಳರಿಮೆ ಆಗುತಿತ್ತು, ನಾನು ಮಾಡಿದ ತಪ್ಪುಗಳನ್ನು ಯೆಹೋವ ದೇವರು ಎಂದಿಗೂ ಕ್ಷಮಿಸುವುದಿಲ್ಲವೇನೋ ಎಂದನಿಸುತಿತ್ತು. ಹಾಗೆ ಅನಿಸಿದಾಗೆಲ್ಲಾ ಯೆಹೋವನು ದಾವೀದನ ಗಂಭೀರ ಪಾಪಗಳನ್ನು ಕ್ಷಮಿಸಿದ್ದರ ಕುರಿತು ಓದಿ ಸಾಂತ್ವನ ಪಡೆದುಕೊಳ್ಳುತ್ತಿದ್ದೆ. —2 ಸಮುವೇಲ 11:1–12:13.

ನನಗೆ ಎದುರಾದ ಮತ್ತೊಂದು ಕಷ್ಟಕರ ಪರಿಸ್ಥಿತಿ ಎಂದರೆ ಮನೆ-ಮನೆ ಸೇವೆ. (ಮತ್ತಾಯ 28:19, 20) ನಾನು ಈ ಹಿಂದೆ ಹಿಂಸಿಸಿದ್ದವರು ಎಲ್ಲಿ ಸಿಕ್ಕಿಬಿಡುತ್ತಾರೋ ಎಂದು ಭಯ ಪಡುತ್ತಿದ್ದೆ. ನಿಧಾನವಾಗಿ ಆ ಭಯ ಇಲ್ಲದೆ ಹೋಯಿತು. ಧಾರಾಳವಾಗಿ ಕ್ಷಮಿಸುವ ನಮ್ಮ ತಂದೆಯಾದ ಯೆಹೋವನ ಬಗ್ಗೆ ಜನರಿಗೆ ತಿಳಿಸುವ ಕೆಲಸದಲ್ಲಿ ಸಂತೃಪ್ತಿ ಪಡೆದೆ.

ಸಿಕ್ಕಿದ ಪ್ರಯೋಜನಗಳು:

ಯೆಹೋವನ ಬಗ್ಗೆ ಕಲಿತಿದ್ದರಿಂದ ನನ್ನ ಜೀವ ಉಳಿಯಿತು. ನನ್ನ ಹಿಂದಿನ ಸ್ನೇಹಿತರಲ್ಲಿ ಅನೇಕರು ಸತ್ತು ಹೋಗಿದ್ದಾರೆ, ಕೆಲವರು ಇನ್ನೂ ಜೈಲಿನಲ್ಲಿದ್ದಾರೆ. ಆದರೆ ನನಗೆ ನೆಮ್ಮದಿಯ ಜೀವನವಿದೆ ಅಷ್ಟೇ ಅಲ್ಲ ಭವಿಷ್ಯದಲ್ಲಿ ಸಂತೋಷದ ನಿರೀಕ್ಷೆಯೂ ಇದೆ. ಈಗ ನಾನು ದೀನತೆ, ವಿಧೇಯತೆಯನ್ನು ತೋರಿಸಲು ಮತ್ತು ಕೋಪವನ್ನು ನಿಯಂತ್ರಿಸಲು ಕಲಿತುಕೊಂಡಿದ್ದೇನೆ. ಇವೆಲ್ಲದರ ಫಲಿತಾಂಶವಾಗಿ ನನ್ನ ಸುತ್ತಲಿನ ಜನರೊಂದಿಗೆ ಸಮಾಧಾನದಿಂದ್ದೇನೆ. ನಾನೂ ನನ್ನ ಪತ್ನಿ ಕಾರ್ಮೆನ್‌ ಬೈಬಲನ್ನು ಕಲಿತುಕೊಳ್ಳಲು ಇತರರಿಗೆ ಸಹಾಯಮಾಡುತ್ತಿದ್ದೇವೆ, ಇದು ನಮಗೆ ಎಣೆ ಇಲ್ಲದ ಸಂತೋಷ ತಂದಿದೆ.

ಈಗಲೂ ನಾನು ಬ್ಯಾಂಕಿಗೆ ಹೋಗುತ್ತೇನೆ. ಲೂಟಿ ಮಾಡಲು ಅಲ್ಲ, ಶುಚಿ ಮಾಡಲು, ಈಗ ಅದೇ ನನ್ನ ಕೆಲಸ! (w14-E 07/01)