ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಒಳ್ಳೆಯವರಿಗೆ ಯಾಕೆ ಕಷ್ಟ ಬರುತ್ತದೆ?

ಯಾಕೆ ಒಳ್ಳೆಯವರಿಗೆ ಕಷ್ಟ ಬರುತ್ತದೆ?

ಯಾಕೆ ಒಳ್ಳೆಯವರಿಗೆ ಕಷ್ಟ ಬರುತ್ತದೆ?

ಯೆಹೋವ ದೇವರೇ * ಎಲ್ಲವನ್ನೂ ಸೃಷ್ಟಿಸಿದ್ದಾನೆ ಮತ್ತು ಸರ್ವಶಕ್ತನಾಗಿದ್ದಾನೆ, ಆದ್ದರಿಂದ ಈ ಲೋಕದಲ್ಲಿ ನಡೆಯುವ ಪ್ರತಿಯೊಂದಕ್ಕೂ, ಕೆಟ್ಟ ವಿಷಯಗಳಿಗೆ ಸಹ ಆತನೇ ಕಾರಣ ಎಂದು ಅನೇಕರು ನೆನೆಸಬಹುದು. ಆದರೆ ಸತ್ಯ ದೇವರ ಕುರಿತು ಬೈಬಲ್‌ ಏನು ಹೇಳುತ್ತದೆಂದು ಗಮನಿಸಿ:

  •  “ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು.”ಕೀರ್ತನೆ 145:17.

  • “ಆತನು [ದೇವರು] ನಡಿಸುವದೆಲ್ಲಾ ನ್ಯಾಯ; ಆತನು ನಿರ್ವ೦ಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋಪದೇಶಕಾಂಡ 32:4.

  • “ಯೆಹೋವನು ಕೋಮಲವಾದ ಮಮತೆಯುಳ್ಳವನೂ ಕರುಣಾಳುವೂ ಆಗಿದ್ದಾನೆ.”—ಯಾಕೋಬ 5:11.

ದೇವರು ಕೆಟ್ಟದ್ದನ್ನು ಮಾಡುವುದಿಲ್ಲ. ಅಂದ ಮೇಲೆ ಇತರರು ಕೆಟ್ಟದ್ದನ್ನು ಮಾಡುವಂತೆ ಆತನು ಪ್ರಚೋದಿಸುತ್ತಾನಾ? ಖಂಡಿತವಾಗಿಯೂ ಇಲ್ಲ. “ಪರೀಕ್ಷೆಗೆ ಒಳಪಡುವಾಗ ‘ನಾನು ದೇವರಿಂದ ಪರೀಕ್ಷಿಸಲ್ಪಡುತ್ತಿದ್ದೇನೆ’ ಎಂದು ಯಾವನೂ ಹೇಳದಿರಲಿ” ಎಂದು ಬೈಬಲ್‌ ಹೇಳುತ್ತದೆ. ಯಾಕೆ ಹಾಗೆ ಹೇಳಬಾರದು? “ಏಕೆಂದರೆ ಕೆಟ್ಟ ವಿಷಯಗಳಿಂದ ದೇವರನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ, ಆತನು ತಾನೇ ಯಾರನ್ನೂ ಪರೀಕ್ಷಿಸುವುದೂ ಇಲ್ಲ.” (ಯಾಕೋಬ 1:13) ಕೆಟ್ಟ ವಿಷಯಗಳನ್ನು ಮಾಡುವಂತೆ ಯಾರನ್ನೂ ದೇವರು ಪ್ರಚೋದಿಸುವುದೂ ಇಲ್ಲ, ಪರೀಕ್ಷಿಸುವುದೂ ಇಲ್ಲ. ಆತನೂ ಕೆಟ್ಟದ್ದನ್ನು ಮಾಡುವುದಿಲ್ಲ ಇತರರು ಕೆಟ್ಟದ್ದನ್ನು ಮಾಡುವಂತೆ ಪ್ರಚೋದಿಸುವುದೂ ಇಲ್ಲ. ಹಾಗಾದರೆ ಈಗ ನಡೆಯುತ್ತಿರುವ ಕೆಟ್ಟ ವಿಷಯಗಳಿಗೆ ಕಾರಣವೇನಿರಬಹುದು ಅಥವಾ ಯಾರು ಇದಕ್ಕೆಲ್ಲ ಕಾರಣನಾಗಿರಬಹುದು?

ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿರುವುದಾ?

“ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎನ್ನುತ್ತದೆ ಬೈಬಲ್‌. (ಪ್ರಸಂಗಿ 9:11) ಅನಿರೀಕ್ಷಿತ ಘಟನೆಗಳು ಅಥವಾ ಅಪಘಾತಗಳು ಸಂಭವಿಸಿದಾಗ ಒಬ್ಬ ವ್ಯಕ್ತಿ ಅದೇ ಸ್ಥಳದಲ್ಲಿದ್ದರೆ ಅವನಿಗೆ ಹಾನಿಯಾಗುತ್ತದೆ, ಇಲ್ಲದಿದ್ದರೆ ಹಾನಿಯಾಗುವುದಿಲ್ಲ. ಸುಮಾರು 2,000 ವರ್ಷಗಳ ಹಿಂದೆ ಯೇಸು, ಬುರುಜು ಬಿದ್ದು 18 ಮಂದಿ ಸತ್ತ ಒಂದು ದುರಂತದ ಕುರಿತು ಮಾತಾಡಿದನು. (ಲೂಕ 13:1-5) ಅವರ ಜೀವನ ರೀತಿ ಸರಿ ಇರಲಿಲ್ಲ, ಅದಕ್ಕೆ ಅವರಿಗೆ ಹೀಗಾಯಿತೆಂದು ಇದರರ್ಥನಾ? ಖಂಡಿತ ಇಲ್ಲ. ಬುರುಜು ಬೀಳುವಾಗ ಅವರು ಅಲ್ಲಿದ್ದರು. ಆದ್ದರಿಂದಲೇ ಅವರದಕ್ಕೆ ತುತ್ತಾದರು. ಜನವರಿ 2010ರಲ್ಲಿ ಹೇಟೀ ಎಂಬ ಸ್ಥಳದಲ್ಲಿ ಭೀಕರ ಭೂಕಂಪ ಸಂಭವಿಸಿತು. ಅದರಿಂದ 3,00,000ಕ್ಕಿಂತ ಹೆಚ್ಚು ಜನರು ಸತ್ತರೆಂದು ಅಲ್ಲಿನ ಸರಕಾರ ವರದಿಸಿತು. ಆ ಭೂಕಂಪ ಒಳ್ಳೆಯವರು, ಕೆಟ್ಟವರೆನ್ನದೆ ಎಲ್ಲಾ ರೀತಿಯ ಜನರನ್ನೂ ಬಲಿತೆಗೆದುಕೊಂಡಿತು. ಅನಾರೋಗ್ಯ ಸಹ ಯಾವುದೇ ಸಮಯದಲ್ಲಿ ಯಾವುದೇ ವ್ಯಕ್ತಿಯನ್ನು ಬಾಧಿಸಬಹುದು.

ಒಳ್ಳೆಯವರು ವಿಪತ್ತುಗಳಿಗೆ ತುತ್ತಾಗದಂತೆ ದೇವರು ಏಕೆ ತಡೆಯುತ್ತಿಲ್ಲ?

ಇಂತಹ ಮಾರಣಾಂತಿಕ ವಿಕೋಪಗಳನ್ನು ತಡೆಯಲು ದೇವರಿಗೆ ಆಗಲ್ವಾ? ಈ ವಿಪತ್ತುಗಳಿಂದ ಒಳ್ಳೆಯವರನ್ನು ಕಾಪಾಡಲಿಕ್ಕೆ ಆತನಿಗೆ ಸಾಧ್ಯನೇ ಇಲ್ವಾ? ಎಂದು ಕೆಲವರು ಕೇಳಬಹುದು. ಈ ರೀತಿ ಮಾಡಬೇಕೆಂದರೆ ದೇವರಿಗೆ ಮುಂದೆ ಸಂಭವಿಸಲಿರುವ ಕೆಟ್ಟ ವಿಷಯಗಳ ಬಗ್ಗೆ ಮೊದಲೇ ತಿಳಿದಿರಬೇಕು. ಇದನ್ನು ತಿಳಿದುಕೊಳ್ಳುವ ಸಾಮರ್ಥ್ಯ ದೇವರಿಗಿದೆ. ಆದರೆ ಆತನು ಈ ಸಾಮರ್ಥ್ಯವನ್ನು ಎಲ್ಲಾ ಸಂದರ್ಭದಲ್ಲೂ ಉಪಯೋಗಿಸುತ್ತಾನಾ?—ಯೆಶಾಯ 42:9.

“ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾನೆ” ಎಂದು ಬೈಬಲ್‌ ತಿಳಿಸುತ್ತದೆ. (ಕೀರ್ತನೆ 115:3) ಯೆಹೋವನಿಗೆ ಎಲ್ಲವನ್ನೂ ಮಾಡುವ ಸಾಮರ್ಥ್ಯ ಇರುವುದಾದರೂ ಯಾವುದು ಆತನಿಗೆ ಅಗತ್ಯವೆಂದು ಅನಿಸುತ್ತದೋ ಅದನ್ನು ಮಾತ್ರ ಮಾಡುತ್ತಾನೆ. ಭವಿಷ್ಯ ತಿಳಿಯುವ ತನ್ನ ಸಾಮರ್ಥ್ಯವನ್ನು ಉಪಯೋಗಿಸುವಾಗಲೂ ಇದೇ ರೀತಿ ಮಾಡುತ್ತಾನೆ. ಉದಾಹರಣೆಗೆ, ಪುರಾತನ ಸೋದೋಮ್‌ ಮತ್ತು ಗೋಮೋರ ಪಟ್ಟಣಗಳಲ್ಲಿ ದುಷ್ಟ ವಿಷಯಗಳೇ ತುಂಬಿದ್ದಾಗ ದೇವರು ಪೂರ್ವಜನಾದ ಅಬ್ರಾಹಾಮನಿಗೆ ಹೀಗೆ ಹೇಳಿದನು: “ನಾನು ಇಳಿದು ಹೋಗಿ ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ.” (ಆದಿಕಾಂಡ 18:20, 21) ಆ ಪಟ್ಟಣಗಳಲ್ಲಿ ದುಷ್ಟತ್ವ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದು ಯೆಹೋವನು ನಿರ್ದಿಷ್ಟ ಸಮಯದವರೆಗೆ ತಿಳಿದುಕೊಳ್ಳಲಿಲ್ಲ. ಅದೇ ರೀತಿ ಯೆಹೋವನು ಎಲ್ಲ ವಿಷಯಗಳನ್ನು ಮೊದಲೇ ತಿಳಿದುಕೊಳ್ಳಲು ಬಯಸುವುದಿಲ್ಲ. (ಆದಿಕಾಂಡ 22:12) ಇದರರ್ಥ ಯೆಹೋವನು ಅಪರಿಪೂರ್ಣನು, ಬಲಹೀನನು ಎಂದಲ್ಲ. “ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ.” ಅಲ್ಲದೆ ಮಾನವರ ಕೈಯಲ್ಲಿ ತನಗೆ ಬೇಕಾದ್ದನ್ನು ಬಲವಂತದಿಂದ ಮಾಡಿಸಿ ತಾನು ಅಂದುಕೊಂಡದ್ದನ್ನು ನೆರವೇರಿಸಬೇಕೆಂದು ಆತನು ಬಯಸುವುದೂ ಇಲ್ಲ. ಬದಲಿಗೆ, ಮುಂದೆ ನಡೆಯಲಿರುವ ವಿಷಯಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಆತನಿಗೆ ಯಾವಾಗ ಅನಿಸುತ್ತದೋ, ಆಗ ಮಾತ್ರ ಭವಿಷ್ಯತ್ತನ್ನು ನೋಡುತ್ತಾನೆ. * (ಧರ್ಮೋಪದೇಶಕಾಂಡ 32:4) ಇದರಿಂದ ನಮಗೇನು ತಿಳಿಯುತ್ತದೆ? ವಿವೇಚನೆಯಿಂದ ಕೆಲವು ಸಂದರ್ಭಗಳಲ್ಲಿ ಮಾತ್ರ ತನ್ನ ಈ ಸಾಮರ್ಥ್ಯವನ್ನು ಉಪಯೋಗಿಸುತ್ತಾನೆ.

ದೇವರು ಒಳ್ಳೆಯವರನ್ನು ಪಾತಕಿಗಳಿಂದ ಏಕೆ ಕಾಪಾಡುತ್ತಿಲ್ಲ?

ಮಾನವನಾ?

ದುಷ್ಟ ವಿಷಯಗಳಿಗೆ ಮಾನವನೂ ಕಾರಣನೇ. ಒಬ್ಬ ವ್ಯಕ್ತಿ ಕೆಟ್ಟ ಕೆಲಸಗಳನ್ನು ಯಾಕೆ ಮಾಡುತ್ತಾನೆ ಅಂತ ಬೈಬಲ್‌ ತಿಳಿಸುತ್ತದೆ. “ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ; ಅಂತೆಯೇ ಪಾಪವು ಮಾಡಿ ಮುಗಿಸಲ್ಪಟ್ಟಾಗ ಮರಣವನ್ನು ಉಂಟುಮಾಡುತ್ತದೆ.” (ಯಾಕೋಬ 1:14, 15) ಒಬ್ಬ ವ್ಯಕ್ತಿ ತಪ್ಪು ಬಯಕೆಗಳಿಗನುಸಾರ ನಡೆಯುವುದಾದರೆ ಅವನು ಅದರ ಪ್ರತಿಫಲವನ್ನೂ ಅನುಭವಿಸಬೇಕಾಗುತ್ತದೆ. (ರೋಮನ್ನರಿಗೆ 7:21-23) ಮಾನವರು ಭೀಕರ ಕೃತ್ಯಗಳನ್ನು ಮಾಡಿ, ಅತೀವ ಸಾವು-ನೋವುಗಳಿಗೆ ಕಾರಣರಾಗಿದ್ದಾರೆ ಎಂದು ಇತಿಹಾಸದಿಂದ ತಿಳಿದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ಇತರರು ಸಹ ಕೆಟ್ಟದ್ದನ್ನು ಮಾಡುವಂತೆ ಪ್ರಚೋದಿಸುವ ಮೂಲಕ ದುಷ್ಟರು ಕೆಟ್ಟತನಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ.—ಜ್ಞಾನೋಕ್ತಿ 1:10-16.

ಮಾನವರು ಭೀಕರ ಕೃತ್ಯಗಳನ್ನು ಮಾಡಿ, ಅತೀವ ಸಾವು-ನೋವುಗಳಿಗೆ ಕಾರಣರಾಗಿದ್ದಾರೆ

ಜನರು ಕೆಟ್ಟ ವಿಷಯಗಳನ್ನು ಮಾಡದಂತೆ ದೇವರು ಮಧ್ಯೆ ಪ್ರವೇಶಿಸಿ ತಡೆಯಬೇಕಾ? ಮಾನವರನ್ನು ಹೇಗೆ ಸೃಷ್ಟಿಸಲಾಗಿದೆ ಎಂದು ಮೊದಲು ಪರಿಗಣಿಸಿ. ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು ಎಂದು ಬೈಬಲ್‌ ತಿಳಿಸುತ್ತದೆ. ಆದ್ದರಿಂದ ದೇವರ ಗುಣಗಳನ್ನು ತೋರಿಸುವ ಸಾಮರ್ಥ್ಯ ಮನುಷ್ಯರಿಗಿದೆ. (ಆದಿಕಾಂಡ 1:26) ದೇವರು ಮನುಷ್ಯರಿಗೆ ನಿರ್ಣಯಗಳನ್ನು ಮಾಡುವ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾನೆ. ಆದ್ದರಿಂದ ಮನುಷ್ಯರು ಇಷ್ಟಪೂರ್ವಕವಾಗಿ ದೇವರ ದೃಷ್ಟಿಯಲ್ಲಿ ಒಳ್ಳೇದನ್ನು ಮಾಡುವ ಮೂಲಕ ಆತನನ್ನು ಪ್ರೀತಿಸಿ, ಆತನಿಗೆ ನಿಷ್ಟಾವಂತರಾಗಿರುವ ಆಯ್ಕೆಯನ್ನು ಮಾಡಬಹುದು. (ಧರ್ಮೋಪದೇಶಕಾಂಡ 30:19, 20) ಮಾನವರು ನಿರ್ದಿಷ್ಟ ಮಾರ್ಗದಲ್ಲೇ ನಡೆಯಬೇಕೆಂದು ದೇವರು ಒತ್ತಾಯ ಮಾಡುವುದಾದರೆ ಅವರಿಗೆ ಕೊಟ್ಟ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಆಗುತ್ತದಲ್ವಾ? ಇದೇ ರೀತಿ ನಡೆಯಬೇಕೆಂದು ಮೊದಲೇ ಪ್ರೋಗ್ರ್ಯಾಮ್‌ ಮಾಡಿಡಲಾದ ಯಂತ್ರಗಳಂತೆ ನಾವಿರಬೇಕಾ? ಮೊದಲೇ ನಮಗೇನಾಗುತ್ತದೆ ಎಂದು ಹಣೆಬರಹ ಬರೆದಿರುವುದಾದರೆ ನಮಗೂ ಯಂತ್ರಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಸಂತೋಷದ ವಿಷಯವೇನೆಂದರೆ, ಯಾವ ಮಾರ್ಗದಲ್ಲಿ ನಡೆಯಬೇಕೆಂದು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟು ದೇವರು ನಮ್ಮನ್ನು ಗೌರವಿಸಿದ್ದಾನೆ. ಇದರರ್ಥ ಮಾನವರು ತಾವು ಮಾಡಿದ ತಪ್ಪುಗಳಿಂದಾದ ಹಾನಿಯನ್ನು ಶಾಶ್ವತವಾಗಿ ಅನುಭವಿಸುತ್ತಾ ಇರುತ್ತಾರೆಂದಲ್ಲ.

ಹಿಂದಿನ ಜನ್ಮದ ಕರ್ಮನಾ?

ಈ ಪತ್ರಿಕೆಯ ಮುಖಪುಟದಲ್ಲಿರುವ ಪ್ರಶ್ನೆಯನ್ನು ನೀವು ಕೆಲವರಿಗೆ ಕೇಳಿದರೆ, “ಹಿಂದಿನ ಜನ್ಮದಲ್ಲಿ ಅವರು ಮಾಡಿದ ಕರ್ಮದ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತಿದ್ದಾರೆ, ಅದಕ್ಕೇ ಒಳ್ಳೆಯ ಜನರಿಗೆ ಕಷ್ಟ ಬರುತ್ತದೆ” ಎಂದು ಉತ್ತರಿಸಬಹುದು. *

ಮರಣದ ಕುರಿತು ಬೈಬಲ್‌ ಏನನ್ನುತ್ತದೆಂದು ತಿಳಿದುಕೊಂಡರೆ ಕರ್ಮದ ಬೋಧನೆ ಸರಿಯೋ ಅಲ್ಲವೋ ಎಂದು ತೀರ್ಮಾನಿಸಬಹುದು. ಏದೆನ್‌ ತೋಟದಲ್ಲಿ ಮೊದಲ ಮಾನವನಾದ ಆದಾಮನಿಗೆ ಯೆಹೋವ ದೇವರು, “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ” ಎಂದನು. (ಆದಿಕಾಂಡ 2:16, 17) ಆದಾಮನು ದೇವರಿಗೆ ಅವಿಧೇಯನಾಗಿ ಪಾಪ ಮಾಡದೆ ಇದ್ದಿದ್ದರೆ ಶಾಶ್ವತವಾಗಿ ಜೀವಿಸುತ್ತಿದ್ದನು. ದೇವರ ಆಜ್ಞೆಗೆ ಅವಿಧೇಯನಾಗಿದ್ದರಿಂದ ಮರಣ ಎಂಬ ಶಿಕ್ಷೆ ಬಂತು. ಮಕ್ಕಳು ಹುಟ್ಟಿದಾಗ “ಮರಣವು . . . ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮನ್ನರಿಗೆ 5:12) ಹೀಗೆ ‘ಪಾಪದ ಸಂಬಳವಾಗಿ ಮರಣವನ್ನು’ ನಾವೆಲ್ಲರೂ ಪಡೆದೆವು. (ರೋಮನ್ನರಿಗೆ 6:23) “ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನಷ್ಟೆ” ಎಂದು ಸಹ ಬೈಬಲ್‌ ತಿಳಿಸುತ್ತದೆ. (ರೋಮನ್ನರಿಗೆ 6:7) ಅಂದರೆ ಸತ್ತ ನಂತರ ಯಾರೂ ತಮ್ಮ ಪಾಪಗಳಿಗಾಗಿ ಶಿಕ್ಷೆ ಅನುಭವಿಸುವುದಿಲ್ಲ.

ಲಕ್ಷಾಂತರ ಜನರು ಮಾನವ ಸಮಸ್ಯೆಗಳಿಗೆ ಅವರು ಮಾಡಿದ ಕರ್ಮವೇ ಕಾರಣ ಎಂದು ನಂಬುತ್ತಾರೆ. ಇದನ್ನು ನಂಬುವವನು ತನಗೆ ಅಥವಾ ಇತರರಿಗೆ ಕಷ್ಟ ಬಂದಾಗ “ಮಾಡಿದ ಪಾಪದ ಫಲ” ಎಂದು ಸುಮ್ಮನಾಗುತ್ತಾನೆ. ಆದರೆ ಇದನ್ನು ನಂಬಿದವರಿಗೆ ಕಷ್ಟಗಳು ಇಲ್ಲದೇ ಹೋಗುವವು ಎಂಬ ನಿರೀಕ್ಷೆ ಇರೋದಿಲ್ಲ. ಒಬ್ಬ ವ್ಯಕ್ತಿ ಒಳ್ಳೆ ದಾರಿಯಲ್ಲಿ ನಡೆದಾಗ ಮತ್ತು ಆತನಿಗೆ ಜ್ಞಾನೋದಯವಾದಾಗ ಪುನರ್ಜನ್ಮದ ನಿರಂತರ ಚಕ್ರದಿಂದ ಬಿಡುಗಡೆ ಸಿಗುತ್ತದೆಂದೂ, ಆಗಲೇ ಇಂಥ ಕಷ್ಟಗಳಿಂದ ಮುಕ್ತಿ ಎಂದೂ ನಂಬುತ್ತಾರೆ. ಇದು ಬೈಬಲ್‌ ಬೋಧನೆಗೆ ತದ್ವಿರುದ್ಧವಾಗಿದೆ. *

ಮೂಲ ಕಾರಣ

ಕಷ್ಟಗಳಿಗೆ ಮೂಲ ಕಾರಣ ‘ಈ ಲೋಕದ ಅಧಿಪತಿ’ ಸೈತಾನ ಎಂದು ನಿಮಗೆ ಗೊತ್ತಿತ್ತಾ?—ಯೋಹಾನ 14:30

ದುಷ್ಟತನಕ್ಕೆ ಮೂಲ ಕಾರಣ ಮಾನವನಲ್ಲ, ಸೈತಾನ. ಇವನನ್ನು ಪಿಶಾಚ ಎಂದೂ ಕರೆಯಲಾಗುತ್ತದೆ. ಮೊದಲು ದೇವದೂತನಾಗಿದ್ದ ಇವನು “ಸತ್ಯದಲ್ಲಿ ನೆಲೆನಿಲ್ಲಲಿಲ್ಲ” ಮಾತ್ರವಲ್ಲದೆ ಲೋಕಕ್ಕೆ ಪಾಪವನ್ನು ತಂದನು. (ಯೋಹಾನ 8:44) ಏದೆನಿನಲ್ಲಿ ದಂಗೆ ಆರಂಭವಾಗುವಂತೆ ಮಾಡಿದನು. (ಆದಿಕಾಂಡ 3:1-5) ಆದ್ದರಿಂದಲೇ ಯೇಸು ಅವನನ್ನು “ಕೆಡುಕ” “ಈ ಲೋಕದ ಅಧಿಪತಿ” ಎಂದು ಕರೆದನು. (ಮತ್ತಾಯ 6:13; ಯೋಹಾನ 14:30) ಮಾನವರೆಲ್ಲರೂ ಸೈತಾನನ ಮಾತನ್ನು ಕೇಳಿ ಯೆಹೋವನು ತೋರಿಸುವ ಒಳ್ಳೆಯ ಮಾರ್ಗದಿಂದ ದೂರ ಸರಿದಿದ್ದಾರೆ. (1 ಯೋಹಾನ 2:15, 16) “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು 1 ಯೋಹಾನ 5:19 ತಿಳಿಸುತ್ತದೆ. ಇತರ ಕೆಲವು ದೇವದೂತರು ಸಹ ದುಷ್ಟರಾಗಿ ಸೈತಾನನ ಜೊತೆ ಸೇರಿದ್ದಾರೆ. ಇವರು ಇಡೀ ಮಾನವ ಜಾತಿಯನ್ನು ತಪ್ಪುದಾರಿಗೆ ನಡೆಸಿ ಲೋಕಕ್ಕೆ ಕಷ್ಟ ತಂದಿದ್ದಾರೆ. (ಪ್ರಕಟನೆ 12:9, 12) ಆದ್ದರಿಂದ ದುಷ್ಟತನಕ್ಕೆ ಮೂಲ ಕಾರಣ ಪಿಶಾಚನಾದ ಸೈತಾನನೇ.

ಖಂಡಿತವಾಗಿಯೂ ಜನರು ಅನುಭವಿಸುತ್ತಿರುವ ಕೆಟ್ಟ ವಿಷಯಗಳಿಗೆ ದೇವರು ಕಾರಣನಲ್ಲ. ಆದರೆ ಕೆಟ್ಟತನವನ್ನು ತೆಗೆದುಹಾಕುತ್ತೇನೆಂದು ಆತನು ವಾಗ್ದಾನ ಮಾಡಿದ್ದಾನೆ. ಇದನ್ನು ಹೇಗೆ ಮಾಡುತ್ತಾನೆಂದು ಮುಂದಿನ ಲೇಖನದಲ್ಲಿ ನೋಡೋಣ. (w14-E 07/01)

^ ಪ್ಯಾರ. 3 ಬೈಬಲ್‍ನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.

^ ಪ್ಯಾರ. 11 ದುಷ್ಟ ವಿಷಯಗಳನ್ನು ಏಕೆ ಹೀಗೇ ಮುಂದುವರಿಯಲು ಬಿಟ್ಟಿದ್ದಾನೆಂದು ತಿಳಿದುಕೊಳ್ಳಲು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 11ನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 16 ಕರ್ಮ ಎಂದರೇನು, ಈ ನಂಬಿಕೆ ಹೇಗೆ ಹುಟ್ಟಿಕೊಂಡಿತು ಎಂದು ತಿಳಿದುಕೊಳ್ಳಲು ಸತ್ತ ಮೇಲೆ ನಮಗೆ ಏನಾಗುತ್ತದೆ? (ಇಂಗ್ಲಿಷ್‌) ಕಿರುಹೊತ್ತಿಗೆಯ ಪುಟ 8ರಿಂದ 12ನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 18 ಮೃತರ ಸ್ಥಿತಿ ಮತ್ತು ಮೃತರಿಗಿರುವ ನಿರೀಕ್ಷೆಯ ಕುರಿತು ಬೈಬಲ್‌ ಏನು ಬೋಧಿಸುತ್ತದೆಂದು ತಿಳಿದುಕೊಳ್ಳಲು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 6 ಮತ್ತು 7ನ್ನು ನೋಡಿ.