ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬದುಕನ್ನೇ ಬದಲಾಯಿಸಿತು ಬೈಬಲ್‌

ಪ್ರತಿಯೊಂದು ಪ್ರಶ್ನೆಗೂ ಬೈಬಲಿನಿಂದ ಉತ್ತರ ಕೊಟ್ಟರು!

ಪ್ರತಿಯೊಂದು ಪ್ರಶ್ನೆಗೂ ಬೈಬಲಿನಿಂದ ಉತ್ತರ ಕೊಟ್ಟರು!
  • ಜನನ: 1950

  • ದೇಶ: ಸ್ಪೇನ್‌

  • ಹಿಂದೆ: ಕ್ಯಾಥೊಲಿಕ್‌ ನನ್‌

ಹಿನ್ನೆಲೆ:

ನಾನು ಹುಟ್ಟಿದ್ದು ವಾಯುವ್ಯ ಸ್ಪೇನ್‍ನ ಗಲೀಶಿಯಾದ ಹಳ್ಳಿಯೊಂದರಲ್ಲಿ. ಅಲ್ಲಿ ನನ್ನ ಹೆತ್ತವರಿಗೆ ಒಂದು ಸಣ್ಣ ಜಮೀನಿತ್ತು. ಎಂಟು ಮಕ್ಕಳಲ್ಲಿ ನಾನು ನಾಲ್ಕನೆಯವಳು. ನಮ್ಮದು ಸುಖೀ ಸಂಸಾರವಾಗಿತ್ತು. ಒಂದು ಕುಟುಂಬದಲ್ಲಿ ಕಡಿಮೆ ಪಕ್ಷ ಒಂದು ಮಗುವಾದರೂ ಪಾದ್ರಿ ಅಥವಾ ನನ್‌ಗಳಿಗಾಗಿರುವ ತರಬೇತಿಯನ್ನು ಪಡೆದುಕೊಳ್ಳುವುದು ಸ್ಪೇನ್‍ನಲ್ಲಿ ಆಗ ಸಾಮಾನ್ಯವಾಗಿತ್ತು. ನಮ್ಮ ಕುಟುಂಬದಲ್ಲಿ ಮೂವರು ಈ ತರಬೇತಿಯನ್ನು ಪಡೆಯಲು ನಿರ್ಧರಿಸಿದೆವು.

ನನಗೆ ಸುಮಾರು 13 ವರ್ಷವಾದಾಗ ನನ್ನ ಅಕ್ಕ ಇದ್ದ ಮ್ಯಾಡ್ರಿಡ್‍ನ ಒಂದು ಕಾನ್ವೆ೦ಟಿಗೆ ಸೇರಿದೆ. ಆ ಕಾನ್ವೆ೦ಟಿನ ವಾತಾವರಣ ಉಸಿರುಗಟ್ಟಿಸುವಂತಿತ್ತು. ಕೇವಲ ಕಠಿಣ ನಿಯಮಗಳು, ಪ್ರಾರ್ಥನೆಗಳು, ಅತಿಯಾದ ಶಿಸ್ತು ಇತ್ತೇ ಹೊರತು ಸ್ನೇಹಕ್ಕೆ ಜಾಗನೇ ಇರಲಿಲ್ಲ. ನಸುಬೆಳಕಿರುವಾಗಲೇ ಎದ್ದು ಧ್ಯಾನ ಮಾಡಲು ಪ್ರಾರ್ಥನಾಮಂದಿರಕ್ಕೆ ಹೋಗುತ್ತಿದ್ದೆವು. ಆದರೆ ಏನನ್ನು ಧ್ಯಾನಿಸಬೇಕು ಅಂತಾನೇ ನನಗೆ ಗೊತ್ತಾಗುತ್ತಿರಲಿಲ್ಲ. ಧ್ಯಾನದ ನಂತರ, ಲ್ಯಾಟಿನ್‌ ಭಾಷೆಯಲ್ಲಿ ಧಾರ್ಮಿಕ ಗೀತೆಗಳನ್ನು ಹಾಡಿ ಆರಾಧನೆ ಮಾಡುತ್ತಿದ್ದೆವು. ನನಗಂತೂ ಒಂಚೂರು ಅರ್ಥವಾಗುತ್ತಿರಲಿಲ್ಲ. ದೇವರು ನನ್ನಿಂದ ಬಹಳಷ್ಟು ದೂರದಲ್ಲಿದ್ದಾನೆ ಅಂತ ಅನಿಸುತ್ತಿತ್ತು. ಆ ದಿನಗಳಲ್ಲಿ ನನಗೆ ಮಾತಾಡೋದೇ ಮರೆತುಹೋದ ಹಾಗೆ ಅನಿಸುತ್ತಿತ್ತು. ಅಕಸ್ಮಾತ್‌ ನನ್ನ ಅಕ್ಕ ಸಿಕ್ಕಿದರೂ “ಪವಿತ್ರ ಮರಿಯಳಿಗೆ ಸ್ತೋತ್ರ” ಎಂದಷ್ಟೇ ಒಬ್ಬರಿಗೊಬ್ಬರು ಹೇಳಿ ಮುಂದೆ ಹೋಗುತ್ತಿದ್ದೆವು. ಅಲ್ಲಿದ್ದ ನನ್‌ಗಳು ಊಟವಾದ ನಂತರ ಅರ್ಧ ಗಂಟೆ ಮಾತ್ರ ನಾವಿಬ್ಬರು ಮಾತಾಡಲು ಅನುಮತಿಸುತ್ತಿದ್ದರು. ನನ್ನ ಕುಟುಂಬದ ವಾತಾವರಣಕ್ಕೂ ಇಲ್ಲಿಗೂ ಎಷ್ಟು ವ್ಯತ್ಯಾಸ! ಒಂಟಿ ಭಾವನೆ ಕಾಡುತ್ತಿತ್ತು, ಎಷ್ಟೋ ಸಲ ಅಳುತ್ತಿದ್ದೆ.

ನಾನು ದೇವರಿಗೆ ಆಪ್ತಳಾಗಿದ್ದೇನೆ ಅಂತ ಅನಿಸದೆ ಇದ್ದರೂ ನನ್ನ 17ರ ಪ್ರಾಯದಲ್ಲಿ ನನ್‌ ಆಗಲು ದೀಕ್ಷೆ ಪಡೆದೆ. ನನ್ನಿಂದ ಎಲ್ಲರೂ ಏನು ನಿರೀಕ್ಷಿಸುತ್ತಿದ್ದರೋ ಅದನ್ನಷ್ಟೇ ಮಾಡಿದೆ. ಆದರೆ ‘ನಾನು ಇಲ್ಲಿರುವಂತೆ ನಿಜವಾಗಲೂ ದೇವರೇ ನನ್ನನ್ನು ಆರಿಸಿಕೊಂಡಿದ್ದಾರಾ?’ ಅಂತ ಆಗಾಗ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಅಂಥ ಅನುಮಾನ ಇರುವವರು ನರಕಕ್ಕೆ ಹೋಗುತ್ತಾರೆ ಎಂದು ಅಲ್ಲಿದ್ದ ನನ್‌ಗಳು ಹೇಳುತ್ತಿದ್ದರು. ಆದರೂ ಆ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹಾಗೇ ಇದ್ದವು. ಯೇಸು ಒಂಟಿಯಾಗಿ ಇರುವುದರ ಬದಲಿಗೆ ಯಾವಾಗಲೂ ಇತರರಿಗೆ ಬೋಧಿಸುವುದರಲ್ಲಿ, ಸಹಾಯ ಮಾಡುವುದರಲ್ಲೇ ಕಾರ್ಯಮಗ್ನರಾಗಿದ್ದರು ಅಂತ ನನಗೆ ಚೆನ್ನಾಗಿ ಗೊತ್ತಿತ್ತು. (ಮತ್ತಾ. 4:23-25) ನನ್ನ 20ನೇ ವಯಸ್ಸಿನಲ್ಲಿ ನನ್‌ ಆಗಿ ಜೀವಿಸುವುದರಲ್ಲಿ ಯಾವ ಅರ್ಥಾನೂ ಇಲ್ಲ ಅಂತ ನನಗೆ ಮನದಟ್ಟಾಯಿತು. ಆಶ್ಚರ್ಯಕರವಾಗಿ, ನನ್‌ ಆಗಿ ಉಳಿಯಲು ಮನಸ್ಸಿಲ್ಲದಿದ್ದರೆ ತಕ್ಷಣವೇ ಆ ಸ್ಥಳವನ್ನು ಬಿಡುವುದು ಸೂಕ್ತವೆಂದು ಆ ಕಾನ್ವೆ೦ಟಿನ ಮುಖ್ಯಸ್ಥೆ ನನಗೆ ಹೇಳಿದಳು. ನನ್ನ ಪ್ರಭಾವ ಇತರರ ಮೇಲೂ ಬೀರಬಹುದು ಎನ್ನುವ ಭಯ ಆಕೆಗಿದ್ದಿರಬಹುದು. ಹಾಗೆ ಹೇಳಿದ ತಕ್ಷಣ ನಾನು ಕಾನ್ವೆ೦ಟಿನಿಂದ ಬಂದುಬಿಟ್ಟೆ.

ಮನೆಗೆ ವಾಪಸ್‌ ಬಂದಾಗ ನನ್ನ ಹೆತ್ತವರು ಅರ್ಥಮಾಡಿಕೊಂಡು ನನ್ನನ್ನು ಬೆಂಬಲಿಸಿದರು. ಆ ಸಮಯದಲ್ಲಿ ನನ್ನ ತಮ್ಮ ಜರ್ಮನಿಯಲ್ಲಿ ವಾಸಿಸುತ್ತಿದ್ದ. ನಮ್ಮ ಹಳ್ಳಿಯಲ್ಲಿ ಏನೂ  ಕೆಲಸ ಇಲ್ಲದಿದ್ದರಿಂದ ನಾನಲ್ಲಿಗೆ ಸ್ಥಳಾಂತರಿಸಿದೆ. ನನ್ನ ತಮ್ಮ ಗಡೀಪಾರು ಮಾಡಲಾದ ಸ್ಪೇನ್‌ ದೇಶದ ನಿವಾಸಿಗಳ ಕಾರ್ಯನಿರತ ಕಮ್ಯೂನಿಸ್ಟ್‌ ಗುಂಪಿಗೆ ಸೇರಿದ್ದ. ಈ ಗುಂಪಿನಲ್ಲಿದ್ದ ಕೆಲವರು, ಮಹಿಳೆಯರ ಹಕ್ಕು ಮತ್ತು ಸಮಾನತೆಗಾಗಿ ಹೋರಾಡುತ್ತಿದ್ದರು. ಅವರೊಂದಿಗಿನ ಒಡನಾಟ ನನಗೆ ಇಷ್ಟವಾಗುತ್ತಿತ್ತು. ನಾನು ಸಹ ಆ ಕಮ್ಯೂನಿಸ್ಟ್‌ ಗುಂಪಿನ ಸದಸ್ಯಳಾದೆ ಮತ್ತು ಅದೇ ಗುಂಪಿನಲ್ಲಿದ್ದ ಒಬ್ಬರನ್ನು ಮದುವೆಯಾದೆ. ಕಮ್ಯೂನಿಸ್ಟ್‌ ಗುಂಪು ಮುದ್ರಿಸುತ್ತಿದ್ದ ಸಾಹಿತ್ಯಗಳನ್ನು ವಿತರಿಸುವುದರಿಂದ, ಪ್ರತಿಭಟನೆ ಮಾಡುವುದರಿಂದ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದ್ದೇನೆ ಎಂದು ನಂಬಿದ್ದೆ.

ಆದರೆ ಸ್ವಲ್ಪ ಸಮಯದಲ್ಲೇ ನನಗೆ ಮತ್ತೆ ನಿರುತ್ತೇಜನವಾಯಿತು. ಕಮ್ಯೂನಿಸ್ಟರು ಏನನ್ನು ಸಾರುತ್ತಿದ್ದರೋ ಅದನ್ನು ಸ್ವತಃ ಅವರೇ ಪಾಲಿಸುತ್ತಿರಲಿಲ್ಲ ಎಂದನಿಸಿತು. ನನ್ನ ಈ ಅನಿಸಿಕೆ 1971ನೇ ಇಸವಿಯಲ್ಲಿ ಇನ್ನೂ ಬಲವಾಯಿತು. ಕಾರಣ ನಮ್ಮ ಗುಂಪಿನಲ್ಲಿದ್ದ ಕೆಲವು ಯುವಪ್ರಾಯದ ಸದಸ್ಯರು ಫ್ರಾಂಕ್‌ಫರ್ಟ್ನಲ್ಲಿದ್ದ ಸ್ಪೇನ್‍ನ ರಾಯಭಾರಿ ಕಛೇರಿಯನ್ನೇ ಸುಟ್ಟುಬಿಟ್ಟರು. ಸ್ಪೇನ್‌ ದೇಶದ ನಿರಂಕುಶ ಪ್ರಭುತ್ವದಿಂದಾಗುತ್ತಿದ್ದ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಲು ಅಂಥ ಕೆಲಸ ಮಾಡಿದ್ದರು. ಆದರೆ ಅವರಿಗಿದ್ದ ಕೋಪವನ್ನು ಈ ರೀತಿಯಲ್ಲಿ ವ್ಯಕ್ತಪಡಿಸುವುದು ತಪ್ಪೆಂದು ನನಗನಿಸಿತು.

ನನ್ನ ಮೊದಲ ಮಗ ಹುಟ್ಟಿದಾಗ ನನ್ನ ಯಜಮಾನರಿಗೆ ‘ಇನ್ನು ಮುಂದೆ ಕಮ್ಯೂನಿಸ್ಟ್‌ ಕೂಟಗಳಿಗೆ ನಾನು ಬರುವುದಿಲ್ಲ’ ಅಂತ ಹೇಳಿದೆ. ನನ್ನ ಹಳೆಯ ಸ್ನೇಹಿತರು, ನನ್ನನಾಗಲಿ ನನ್ನ ಮಗುವನ್ನಾಗಲಿ ನೋಡಲು ಬರಲೇ ಇಲ್ಲ. ನನಗೆ ತುಂಬ ಬೇಜಾರಾಯಿತು. ಜೀವನದ ಉದ್ದೇಶವೇನು ಅಂತ ಮತ್ತೆ ಯೋಚಿಸಲು ಶುರುಮಾಡಿದೆ. ಸಮಾಜದ ವ್ಯವಸ್ಥೆಯನ್ನು ಸರಿಪಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಅಂತನಿಸಿತು.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌:

ಯೆಹೋವನ ಸಾಕ್ಷಿಗಳಾದ ಒಬ್ಬ ಸ್ಪ್ಯಾನಿಷ್‌ ದಂಪತಿ 1976ರಲ್ಲಿ ಸುವಾರ್ತೆ ಸಾರಲು ನಮ್ಮ ಮನೆಗೆ ಬಂದರು. ಅವರು ಕೊಟ್ಟ ಕೆಲವು ಬೈಬಲ್‌ ಸಾಹಿತ್ಯಗಳನ್ನು ನಾನು ತಗೊಂಡೆ. ಅವರ ಎರಡನೆಯ ಭೇಟಿಯಲ್ಲಿ ಕಷ್ಟಸಂಕಟಗಳ, ಅಸಮಾನತೆಯ ಮತ್ತು ಅನ್ಯಾಯದ ಕುರಿತು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ. ಆದರೆ ನಾನು ಕೇಳಿದ ಪ್ರಶ್ನೆಗಳಿಗೆಲ್ಲ ಅವರು ಬೈಬಲಿನಿಂದ ಉತ್ತರ ಕೊಡುತ್ತಿದ್ದುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಕೂಡಲೇ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡೆ.

ಮೊದಮೊದಲು ಕೇವಲ ಬೈಬಲ್‌ ಬಗ್ಗೆ ತಿಳಿದುಕೊಳ್ಳಬೇಕಂತ ಅಧ್ಯಯನ ಪಡೆದುಕೊಳ್ಳುತ್ತಿದ್ದೆ. ಆದರೆ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನಡೆಯುತ್ತಿದ್ದ ಕೂಟಗಳಿಗೆ ನಾನು ಮತ್ತು ನನ್ನ ಯಜಮಾನರು ಹಾಜರಾಗಲು ಪ್ರಾರಂಭಿಸಿದಾಗ ನನ್ನ ಯೋಚನೆ ಬದಲಾಯಿತು. ಆ ಸಮಯದಲ್ಲಿ ನಮಗೆ ಇಬ್ಬರು ಗಂಡು ಮಕ್ಕಳಿದ್ದರು. ಸಾಕ್ಷಿಗಳು ನಮ್ಮನ್ನು ತಮ್ಮ ಜೊತೆಯಲ್ಲಿ ಕೂಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಮತ್ತು ಕೂಟಗಳು ನಡೆಯುತ್ತಿದ್ದ ಸಮಯದಲ್ಲಿ ನಮ್ಮ ಮಕ್ಕಳನ್ನು ನೋಡಿಕೊಳ್ಳಲು ನೆರವಾಗುತ್ತಿದ್ದರು. ಇವನ್ನೆಲ್ಲ ನೋಡುವಾಗ ಸಾಕ್ಷಿಗಳ ಮೇಲೆ ಇನ್ನೂ ಒಳ್ಳೆ ಅಭಿಪ್ರಾಯ ಮೂಡಿತು.

ಹಾಗಿದ್ದರೂ ಧರ್ಮದ ಬಗ್ಗೆ ಕೆಲವೊಂದು ಪ್ರಶ್ನೆಗಳು ಇನ್ನೂ ನನ್ನ ಮನಸ್ಸಿನಲ್ಲಿತ್ತು. ಅದೇ ಸಮಯದಲ್ಲಿ ನಾನು ಸ್ಪೇನ್‍ನಲ್ಲಿದ್ದ ನಮ್ಮ ಮನೆಗೆ ಹೋದೆ. ನನ್ನ ಚಿಕ್ಕಪ್ಪ ಚರ್ಚಿನ ಪಾದ್ರಿಯಾಗಿದ್ದರು. ನಾನು ಬೈಬಲ್‌ ಅಧ್ಯಯನ ಮಾಡುವುದನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಅಲ್ಲಿನ ಯೆಹೋವನ ಸಾಕ್ಷಿಗಳು ನನಗೆ ತುಂಬ ಸಹಾಯ ಮಾಡಿದರು. ಜರ್ಮನಿಯಲ್ಲಿನ ಸಾಕ್ಷಿಗಳಂತೆ ಇವರು ಸಹ ನಾನು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಬೈಬಲಿನಿಂದ ಉತ್ತರಿಸಿದರು. ಜರ್ಮನಿಗೆ ಹಿಂದಿರುಗಿದ ಕೂಡಲೆ ಬೈಬಲ್‌ ಅಧ್ಯಯನ ಮುಂದುವರಿಸಬೇಕೆಂದು ನಾನು ನಿರ್ಧರಿಸಿದೆ. ಆದರೆ ನನ್ನ ಯಜಮಾನರು ಆಸಕ್ತಿ ತೋರಿಸಲಿಲ್ಲ. ನಾನು ಮಾತ್ರ ನನ್ನ ನಿರ್ಧಾರವನ್ನು ಬಿಡದೆ, 1978ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡು ಯೆಹೋವನ ಸಾಕ್ಷಿಯಾದೆ.

ಸಿಕ್ಕಿದ ಪ್ರಯೋಜನಗಳು:

ಬೈಬಲ್‌ ಸತ್ಯದ ನಿಷ್ಕೃಷ್ಟ ಜ್ಞಾನದಿಂದ ನನ್ನ ಜೀವನಕ್ಕೆ ಸ್ಪಷ್ಟ ಉದ್ದೇಶ ಮತ್ತು ಮಾರ್ಗದರ್ಶನ ಸಿಕ್ಕಿತು. ಉದಾಹರಣೆಗೆ, ತಮ್ಮ ಗಂಡಂದಿರಿಗೆ ‘ಆಳವಾದ ಗೌರವವನ್ನು ತೋರಿಸುತ್ತಾ’ ‘ಅಧೀನರಾಗಿರಬೇಕು’ ಮತ್ತು ‘ದೇವರ ದೃಷ್ಟಿಯಲ್ಲಿ ಅತಿ ಬೆಲೆಯುಳ್ಳ ಸೌಮ್ಯಭಾವವನ್ನು’ ಬೆಳೆಸಿಕೊಳ್ಳಬೇಕೆಂದು ಬೈಬಲಿನ 1 ಪೇತ್ರ 3:1-4 ಹೆಂಡತಿಯರನ್ನು ಉತ್ತೇಜಿಸುತ್ತದೆ. ಇಂಥ ತತ್ವಗಳು ನಾನೊಬ್ಬ ಉತ್ತಮ ಪತ್ನಿ ಮತ್ತು ತಾಯಿಯಾಗಲು ನನಗೆ ಸಹಾಯ ಮಾಡಿತು.

ನಾನು ಯೆಹೋವನ ಸಾಕ್ಷಿಯಾಗಿ ಈಗ ಸುಮಾರು 35 ವರ್ಷಗಳಾಗಿವೆ. ಆಧ್ಯಾತ್ಮಿಕ ಕುಟುಂಬದ ಭಾಗವಾಗಿ ದೇವರ ಸೇವೆ ಮಾಡುವುದರಲ್ಲಿ ನಾನು ಆನಂದವನ್ನು ಕಂಡುಕೊಂಡಿದ್ದೇನೆ. ಜೊತೆಗೆ ನನ್ನ ಐದು ಮಕ್ಕಳಲ್ಲಿ ನಾಲ್ವರು ಯೆಹೋವನ ಸೇವೆ ಮಾಡುತ್ತಿರುವುದನ್ನು ನೋಡುವಾಗ ಸಂತೋಷದಿಂದ ನನ್ನ ಕಣ್ತುಂಬಿ ಬರುತ್ತದೆ. (w14-E 04/01)