ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬದುಕನ್ನೇ ಬದಲಾಯಿಸಿತು ಬೈಬಲ್‌

“ತುಂಬ ಜನರಿಗೆ ನನ್ನ ಮೇಲೆ ದ್ವೇಷ ಇತ್ತು”

“ತುಂಬ ಜನರಿಗೆ ನನ್ನ ಮೇಲೆ ದ್ವೇಷ ಇತ್ತು”
  • ಜನನ: 1978

  • ದೇಶ: ಚಿಲಿ

  • ಹಿಂದೆ: ತುಂಬ ಹಿಂಸಾತ್ಮಕ ವ್ಯಕ್ತಿ

ಹಿನ್ನೆಲೆ:

ಚಿಲಿ ದೇಶದ ರಾಜಧಾನಿ ಸಾಂಟಿಯಾಗೊದಲ್ಲಿ ಬೆಳೆದೆ. ನಮ್ಮ ಮನೆಯ ನೆರೆಹೊರೆಯಲ್ಲಿ ಗೂಂಡಾ ಗುಂಪುಗಳು ಇದ್ದವು, ಮಾದಕ ವಸ್ತುಗಳ ವ್ಯವಹಾರ, ಅಪರಾಧಗಳು ನಡೆಯುತ್ತಿದ್ದವು. ನಾನು 5 ವರ್ಷದವನಾಗಿದ್ದಾಗ ನನ್ನ ತಂದೆಯ ಕೊಲೆ ಆಯಿತು. ನಂತರ ಅಮ್ಮ ಒಬ್ಬ ಗಂಡಸೊಂದಿಗೆ ಜೀವಿಸತೊಡಗಿದಳು. ಅವನು ತುಂಬ ಕ್ರೂರಿಯಾಗಿದ್ದ. ನನ್ನನ್ನು, ಅಮ್ಮನನ್ನು ಯಾವಾಗಲೂ ಹೊಡೆಯುತ್ತಿದ್ದ. ಇದೆಲ್ಲ ನನ್ನ ಮನಸ್ಸಲ್ಲಿ ಹಾಕಿದ ನೋವಿನ ಬರೆ ಇನ್ನೂ ಮಾಸಿಲ್ಲ.

ಬೆಳೆಯುತ್ತಾ ಹೋದಂತೆ ನಾನು ತುಂಬಾ ಹಿಂಸಾತ್ಮಕ ವ್ಯಕ್ತಿಯಾದೆ. ಇದು ಸುತ್ತಲೂ ಆಗುತ್ತಿದ್ದ ನಕಾರಾತ್ಮಕ ವಿಷಯಗಳಿಗೆ ನನ್ನ ಪ್ರತಿಕ್ರಿಯೆ ಆಗಿತ್ತು. ಹೆವಿ ಮೆಟಲ್‌ ಸಂಗೀತ ಆಲಿಸುತ್ತಿದ್ದೆ. ಕಂಠಪೂರ್ತಿ ಕುಡಿಯುತ್ತಿದ್ದೆ. ಆಗಾಗ್ಗೆ ಮಾದಕ ವಸ್ತು ಸಹ ಸೇವಿಸುತ್ತಿದ್ದೆ. ಮಾದಕ ವಸ್ತು ಮಾರುವವರೊಂದಿಗೆ ನಡೆಯುತ್ತಿದ್ದ ಬೀದಿ ಹೊಡೆದಾಟಗಳಲ್ಲಿ ಯಾವಾಗಲೂ ಇರುತ್ತಿದ್ದೆ. ಅವರು ನನ್ನನ್ನು ತುಂಬ ಸಲ ಸಾಯಿಸಲೂ ನೋಡಿದರು. ಒಮ್ಮೆ ಒಬ್ಬ ಕುಖ್ಯಾತ ಗೂಂಡಾಗೆ ಸುಪಾರಿ ಕೊಟ್ಟು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು. ಆದರೆ ಬಚಾವಾದೆ. ಕತ್ತಿಯಿಂದ ತಿವಿದ ಗಾಯ ಆಯಿತು ಅಷ್ಟೇ. ಇನ್ನೊಂದು ಸಲ ಮಾದಕ ವಸ್ತು ಮಾರಾಟಗಾರರ ಗುಂಪೊಂದು ಕೋವಿಯನ್ನು ನನ್ನ ತಲೆಗೆ ಗುರಿಯಿಟ್ಟು ಹೆದರಿಸಿ ನೇಣು ಹಾಕಿ ಸಾಯಿಸಲೂ ಪ್ರಯತ್ನಿಸಿದರು.

1996ರಲ್ಲಿ ಕ್ಯಾರೊಲಿನಾ ಎಂಬ ಹುಡುಗಿಯನ್ನು ಇಷ್ಟಪಟ್ಟೆ. 1998ರಲ್ಲಿ ನಮ್ಮ ಮದುವೆಯಾಯಿತು. ನಮ್ಮ ಮೊದಲ ಮಗು ಹುಟ್ಟಿದ ಮೇಲೆ ನನಗೊಂದು ರೀತಿ ಭಯ ಆವರಿಸಿತು. ನನ್ನ ಹಿಂಸಾತ್ಮಕ ಕೋಪದಿಂದಾಗಿ ನನ್ನ ಮಲತಂದೆ ಹಾಗೆಯೇ ನಾನೂ ನನ್ನ ಕುಟುಂಬದ ಮೇಲೆ ದೌರ್ಜನ್ಯ ನಡೆಸುವೆನೊ ಏನೊ ಅಂತ ಹೆದರುತ್ತಿದ್ದೆ. ಇದರಿಂದ ಹೊರಬರಲು ವ್ಯಸನ-ಮುಕ್ತ ಕೇಂದ್ರವೊಂದಕ್ಕೆ ಸೇರಿಕೊಂಡೆ. ನನಗಲ್ಲಿ ಚಿಕಿತ್ಸೆ, ಔಷಧೋಪಚಾರ ನೀಡಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ. ಚಿಕ್ಕಚಿಕ್ಕ ವಿಷಯಗಳಿಗೂ ರೇಗಾಡುತ್ತಿದ್ದೆ. ನನ್ನ ಮೇಲೆ ನನಗೆ ನಿಯಂತ್ರಣ ಇರುತ್ತಿರಲಿಲ್ಲ. ನನ್ನಿಂದಾಗಿ ನನ್ನ ಕುಟುಂಬಕ್ಕೆ ಹಾನಿಯಾಗಬಾರದೆಂದು ಆತ್ಮಹತ್ಯೆಯಂಥ ಮಾಡಬಾರದ ಕೆಲಸಕ್ಕೆ ಕೈಹಾಕಿದೆ. ಆದರೆ ಸಫಲನಾಗಲಿಲ್ಲ.

ನಾನು ಅನೇಕ ವರ್ಷಗಳಿಂದ ನಾಸ್ತಿಕನಾಗಿದ್ದೆ. ಆದರೆ ಈಗ ನನಗೆ ದೇವರನ್ನು ನಂಬಬೇಕೆಂದು ಅನಿಸುತ್ತಿತ್ತು. ಆದ್ದರಿಂದ ಸ್ವಲ್ಪ ಸಮಯದ ವರೆಗೆ ಒಂದು ಇವ್ಯಾ೦ಜಲಿಕಲ್‌ ಧರ್ಮಕ್ಕೆ ಸೇರಿದೆ. ಈ ಮಧ್ಯೆ ನನ್ನ ಹೆಂಡತಿಯೊಟ್ಟಿಗೆ ಯೆಹೋವನ ಸಾಕ್ಷಿಗಳು ಬೈಬಲ್‌ ಅಧ್ಯಯನ ಮಾಡುತ್ತಿದ್ದರು. ನನಗೆ ಈ ಸಾಕ್ಷಿಗಳೆಂದರೆ ಆಗುತ್ತಿರಲಿಲ್ಲ. ಎಷ್ಟೋ ಸಲ ಅವರನ್ನು ಹೊಲಸು ಮಾತಿನಿಂದ ಬೈಯುತ್ತಿದ್ದೆ. ಆದರೆ ನಾನವರಿಂದ ಎದುರುನೋಡದೆ ಇದ್ದದ್ದೇ ಆಗುತ್ತಿತ್ತು. ಅವರು ಯಾವಾಗಲೂ ಶಾಂತರಾಗಿರುತ್ತಿದ್ದರು.

ಒಂದಿನ ಕ್ಯಾರೊಲಿನಾ ನನಗೆ ಕೀರ್ತನೆ 83:18ನ್ನು ನನ್ನ ಬೈಬಲಿಂದಲೇ ಓದಲು ಹೇಳಿದಳು. ಯೆಹೋವ ಎನ್ನುವುದು ದೇವರ ಹೆಸರೆಂದು ಆ ವಚನ ಸ್ಪಷ್ಟವಾಗಿ ತಿಳಿಸುತ್ತದೆ. ನನ್ನ ಧರ್ಮದಲ್ಲಿ ದೇವರ ಬಗ್ಗೆ ಕಲಿತಿದ್ದರೂ ಯೆಹೋವನ ಬಗ್ಗೆ ಕಲಿಯದೇ  ಇದ್ದದ್ದು ನನಗೆ ತುಂಬ ಆಶ್ಚರ್ಯ ಅನಿಸಿತು. ಇಸವಿ 2000ದಲ್ಲಿ ಯೆಹೋವನ ಸಾಕ್ಷಿಗಳು ನನ್ನೊಟ್ಟಿಗೆ ಅಧ್ಯಯನ ಮಾಡಲು ನಾನು ಒಪ್ಪಿದೆ.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌:

ಬೈಬಲನ್ನು ಕಲಿಯುತ್ತಾ ಹೋದಂತೆ ಯೆಹೋವನು ಕರುಣೆಯುಳ್ಳ, ಕ್ಷಮಿಸುವ ದೇವರು ಎಂದು ತಿಳಿದುಕೊಂಡೆ. ಇದರಿಂದ ನನಗೆ ತುಂಬ ಸಾಂತ್ವನ ಸಿಕ್ಕಿತು. ಉದಾಹರಣೆಗೆ ವಿಮೋಚನಕಾಂಡ 34:6, 7ರಲ್ಲಿ ಯೆಹೋವನ ಬಗ್ಗೆ ಹೀಗಿದೆ: “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು.”

ನಾನು ಕಲಿತ ವಿಷಯಗಳಿಂದ ಸಾಂತ್ವನ ಸಿಕ್ಕಿದ್ದರೂ ಅದರ ಪ್ರಕಾರ ನಡೆದುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ನನ್ನ ಹಿಂಸಾತ್ಮಕ ಕೋಪವನ್ನು ನಿಯಂತ್ರಣಕ್ಕೆ ತರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿಬಿಟ್ಟಿದ್ದೆ. ಕೋಪಿಸಬಾರದೆಂದು ಪ್ರಯತ್ನಮಾಡಿ ಸೋತಾಗಲೆಲ್ಲ ಕ್ಯಾರೊಲಿನಾ ಪ್ರೀತಿಯಿಂದ ನನ್ನನ್ನು ಪ್ರೋತ್ಸಾಹಿಸಿದಳು. ನಾನು ಮಾಡುತ್ತಿರುವ ಪ್ರಯತ್ನಗಳನ್ನು ಯೆಹೋವನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದಾನೆ ಎಂದು ನೆನಪು ಹುಟ್ಟಿಸುತ್ತಿದ್ದಳು. ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿಯೋ ಅದನ್ನು ಮಾಡಲಿಕ್ಕಾಗಿ ಪ್ರಯತ್ನಿಸುತ್ತಾ ಇರುವಂತೆ ಬೇಕಾದ ಬಲ ಆಕೆಯ ಬೆಂಬಲದಿಂದ ಸಿಕ್ಕಿತು. ಏನು ಮಾಡಿದರೂ ನನ್ನಿಂದ ಬದಲಾಗುವುದಕ್ಕೆ ಸಾಧ್ಯವಿಲ್ಲ ಅಂತ ಅನಿಸಿದಾಗೆಲ್ಲ ನನ್ನ ಬೆನ್ನೆಲುಬಾಗಿ ನಿಂತಳು.

ಒಮ್ಮೆ ನನಗೆ ಬೈಬಲ್‌ ಕಲಿಸುತ್ತಿದ್ದ ಸಹೋದರ ಅಲೆಜಾಂಡ್ರೊ ಗಲಾತ್ಯ 5:22, 23ನ್ನು ಓದುವಂತೆ ಹೇಳಿದರು. “ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ” ಇವು ಪವಿತ್ರಾತ್ಮದಿಂದ ಉಂಟಾಗುವ ಫಲಾಂಶ ಎಂದು ಆ ವಚನಗಳು ತಿಳಿಸುತ್ತವೆ. ಈ ಗುಣಗಳನ್ನು ನನ್ನ ಶಕ್ತಿಯಿಂದಲ್ಲ ಬದಲಾಗಿ ದೇವರ ಪವಿತ್ರಾತ್ಮದ ಸಹಾಯದಿಂದ ಬೆಳೆಸಿಕೊಳ್ಳಬಲ್ಲೆ ಎಂದು ಅಲೆಜಾಂಡ್ರೊ ವಿವರಿಸಿದರು. ಈ ಸತ್ಯ ನನ್ನ ದೃಷ್ಟಿಕೋನವನ್ನು ಪೂರ್ತಿ ಬದಲಿಸಿತು!

ನಂತರ ನಾನು ಯೆಹೋವನ ಸಾಕ್ಷಿಗಳ ಒಂದು ದೊಡ್ಡ ಅಧಿವೇಶನಕ್ಕೆ ಹಾಜರಾದೆ. ಅವರಲ್ಲಿದ್ದ ಶಿಸ್ತು, ಶುಚಿತ್ವ, ಸಹೋದರತ್ವ ನೋಡಿ ಇದೇ ಸತ್ಯ ಧರ್ಮ ಎಂದು ಮನಗಂಡೆ. (ಯೋಹಾನ 13:34, 35) 2001 ಫೆಬ್ರವರಿಯಲ್ಲಿ ದೀಕ್ಷಾಸ್ನಾನ ಪಡೆದೆ.

ಸಿಕ್ಕಿದ ಪ್ರಯೋಜನಗಳು:

ಒಬ್ಬ ಹಿಂಸಾತ್ಮಕ ವ್ಯಕ್ತಿಯಾಗಿದ್ದ ನನ್ನನ್ನು ಯೆಹೋವನು ಶಾಂತ ವ್ಯಕ್ತಿಯನ್ನಾಗಿ ಬದಲಾಯಿಸಿದ್ದಾನೆ. ಕ್ರೂರತನ ತುಂಬಿಕೊಂಡಿದ್ದ ಕೆಸರಿನಂಥ ಜೀವನದಿಂದ ನನ್ನನ್ನು ಹೊರತೆಗೆದಿದ್ದಾನೆ. ತುಂಬ ಜನರಿಗೆ ನನ್ನ ಮೇಲೆ ದ್ವೇಷ ಇತ್ತು. ಆದರೆ ಅದರಲ್ಲಿ ಅವರದ್ದೇನು ತಪ್ಪಿಲ್ಲ. ನಾನಿದ್ದದ್ದೇ ಹಾಗೆ. ಈಗ ನನ್ನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳ ಜತೆ ಶಾಂತಿಯಿಂದ ಯೆಹೋವನನ್ನು ಆರಾಧಿಸುತ್ತಿದ್ದೇನೆ.

ನನ್ನ ಸಂಬಂಧಿಕರು ಮತ್ತು ಹಿಂದಿನ ಸ್ನೇಹಿತರಿಗೆ ನಾನಿಷ್ಟು ಬದಲಾಗಿರುವುದನ್ನು ನೋಡಿ ನಂಬಲಿಕ್ಕೇ ಆಗುವುದಿಲ್ಲ. ಹಾಗಾಗಿ ಅವರಲ್ಲಿ ಅನೇಕರು ಬೈಬಲ್‌ ಸತ್ಯವನ್ನು ಕಲಿಯಲು ಮನಸ್ಸು ಮಾಡಿದ್ದಾರೆ. ಬೇರೆಯವರೂ ಯೆಹೋವನ ಬಗ್ಗೆ ತಿಳಿಯಲು ಸಹಾಯ ಮಾಡುವ ಸುಯೋಗ ನನಗೆ ಸಿಕ್ಕಿದೆ. ಬೈಬಲ್‌ ಅವರ ಬದುಕನ್ನೂ ಬದಲಿಸಿರುವುದನ್ನು ನೋಡುವುದು ತುಂಬ ಸಂತೋಷ ತರುತ್ತದೆ! (w13-E 10/01)