ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ದೇವರ ಸಮೀಪಕ್ಕೆ ಬನ್ನಿರಿ

“ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”

“ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”

ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೇ ಆರೋಗ್ಯ, ದೀರ್ಘಾಯುಸ್ಸು ಬಯಸುತ್ತೀರೊ? ನೋವು, ಕಷ್ಟ, ಮರಣ ಇವೆಲ್ಲ ಇಲ್ಲದಿರುವ ಲೋಕವೊಂದರಲ್ಲಿ ಜೀವಿಸಲು ಆಸೆಪಡುತ್ತೀರೊ? ಇಂಥ ಲೋಕ ಬರೀ ಕಲ್ಪನೆಯಲ್ಲ. ಬೇಗನೆ ಅದು ನೈಜವಾಗಲಿದೆ. ಇಂಥ ನೀತಿಯುತ ಹೊಸ ಲೋಕವನ್ನು ತರಲು ಉದ್ದೇಶಿಸಿರುವವನು ಯೆಹೋವ ದೇವರು. ಆತನ ಈ ಉದ್ದೇಶದ ನೆರವೇರಿಕೆಯ ಬಗ್ಗೆ ಪ್ರಕಟನೆ 21:3-5ರಲ್ಲಿ (ಓದಿ) ಕೊಡಲಾಗಿರುವ ವರ್ಣನೆಯನ್ನು ಗಮನಿಸಿ.

“[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕಟನೆ 21:4) ಯಾವ ರೀತಿಯ ಕಣ್ಣೀರನ್ನು ಒರಸಿಹಾಕುವನು? ಆನಂದಬಾಷ್ಪವನ್ನಾಗಲಿ, ಕಣ್ಣುಗಳನ್ನು ಕಾಪಾಡುವ ಕಣ್ಣೀರನ್ನಾಗಲಿ ಅಲ್ಲ. ಕಷ್ಟ, ದುಃಖದಿಂದಾಗಿ ಉಮ್ಮಳಿಸಿ ಬರುವ ಕಣ್ಣೀರಿಗೆ ಆ ವಾಗ್ದಾನ ಸೂಚಿಸುತ್ತದೆ. ಯಾರಿಗೂ ಬೇಡವಾದ ಇಂಥ ಕಣ್ಣೀರನ್ನು ದೇವರು ಒರಸಿಬಿಡುವನು ಮಾತ್ರವಲ್ಲ ಅದಕ್ಕೆ ಕಾರಣವಾಗಿರುವ ಕಷ್ಟ, ನೋವನ್ನೂ ತೆಗೆದುಹಾಕುವನು. ಹೀಗೆ ಅದನ್ನು ಸಂಪೂರ್ಣವಾಗಿ ಅಳಿಸಿಹಾಕುವನು.

“ಇನ್ನು ಮರಣವಿರುವುದಿಲ್ಲ.” (ಪ್ರಕಟನೆ 21:4) ನಮ್ಮೆಲ್ಲರ ಶತ್ರುವಾದ ಮರಣ ಬರಿಸಿರುವಷ್ಟು ಕಣ್ಣೀರನ್ನು ಬೇರಾವುದೂ ಬರಿಸಿಲ್ಲ. ವಿಧೇಯ ಮಾನವರನ್ನು ಮರಣದ ಬಿಗಿಮುಷ್ಠಿಯಿಂದ ಯೆಹೋವನು ಬಿಡಿಸಲಿದ್ದಾನೆ. ಹೇಗೆ? ಮರಣದ ನಿಜ ಕಾರಣವನ್ನು ಅಂದರೆ ಆದಾಮನಿಂದ ಬಾಧ್ಯತೆಯಾಗಿ ಬಂದಿರುವ ಪಾಪವನ್ನು ನಿರ್ಮೂಲಮಾಡುವ ಮೂಲಕ. (ರೋಮನ್ನರಿಗೆ 5:12) ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದ ಆಧಾರದ ಮೇಲೆ ಯೆಹೋವನು ವಿಧೇಯ ಮಾನವರನ್ನು ಪರಿಪೂರ್ಣತೆಗೇರಿಸುವನು. * ಆಗ ಆ ಕೊನೆ ಶತ್ರುವಾದ ಮರಣ ‘ನಿರ್ಮೂಲವಾಗುವುದು.’ (1 ಕೊರಿಂಥ 15:26) ಹೀಗೆ ನಂಬಿಗಸ್ತ ಮಾನವರು ದೇವರು ಉದ್ದೇಶಿಸಿದಂತೆಯೇ ಪರಿಪೂರ್ಣ ಆರೋಗ್ಯದಲ್ಲಿ ಸದಾಕಾಲ ಜೀವಿಸಲು ಶಕ್ತರಾಗುವರು.

‘ನೋವು ಇರುವುದಿಲ್ಲ.’ (ಪ್ರಕಟನೆ 21:4) ಯಾವ ರೀತಿಯ ನೋವು? ಪಾಪ, ಅಪರಿಪೂರ್ಣತೆಯಿಂದಾಗಿ ಬಂದಿರುವ ಎಲ್ಲ ವಿಧದ ಮಾನಸಿಕ, ಭಾವನಾತ್ಮಕ, ದೈಹಿಕ ನೋವು. ಕೋಟಿಗಟ್ಟಲೆ ಜನರ ಬಾಳನ್ನು ದುಸ್ತರಗೊಳಿಸಿರುವ ಆ ನೋವು ಇರುವುದಿಲ್ಲ.

ಕಣ್ಣೀರು, ಮರಣ, ನೋವಿಲ್ಲದ ಜೀವನ ಬೇಗನೆ ಬರಲಿದೆ. ಆದರೆ ನೀವು ಕೇಳಬಹುದು: ‘ಎಲ್ಲಿ ಬರಲಿದೆ? ದೇವರು ಮಾಡಿದ ಆ ವಾಗ್ದಾನ ಸ್ವರ್ಗದಲ್ಲಿನ ಜೀವನದ ಬಗ್ಗೆ ಹೇಳುತ್ತಾ ಇದೆಯಾ?’ ಇಲ್ಲ. ಯಾಕೆಂದು ನೋಡೋಣ. ಮೊದಲನೇದಾಗಿ ಆ ವಾಗ್ದಾನದ ಆರಂಭದ ಮಾತುಗಳು, ‘ದೇವರ ಗುಡಾರವು ಮಾನವಕುಲದೊಂದಿಗೆ ಇದೆ’ ಎಂದಾಗಿವೆ. ಮಾನವಕುಲ ವಾಸಿಸುವುದೆಲ್ಲಿ? ಭೂಮಿಯಲ್ಲಿ ತಾನೇ. (ಪ್ರಕಟನೆ 21:3) ಎರಡನೆಯದಾಗಿ, ಆ ವಾಗ್ದಾನವು ‘ಇನ್ನು ಮರಣವಿರದ’ ಲೋಕದ ಬಗ್ಗೆ ವರ್ಣಿಸುತ್ತದೆ. ಅಂದರೆ ಒಂದೊಮ್ಮೆ ಆ ಲೋಕದಲ್ಲಿ ಮರಣ ಅಸ್ತಿತ್ವದಲ್ಲಿತ್ತು. ಸ್ವರ್ಗದಲ್ಲಂತೂ ಮರಣ ಯಾವತ್ತೂ ಇರಲೇ ಇಲ್ಲ. ಆದರೆ ಭೂಮಿಯ ಮೇಲೆ ಮರಣ ಬಹುಕಾಲದಿಂದ ಅಸ್ತಿತ್ವದಲ್ಲಿದೆ. ಹಾಗಾಗಿ ಉತ್ತಮವಾದ ಜೀವನದ ಕುರಿತ ದೇವರ ವಾಗ್ದಾನ ಇಲ್ಲೇ, ಭೂಮಿಯ ಮೇಲೆ ನೆರವೇರಲಿದೆ ಎಂಬುದು ಸುಸ್ಪಷ್ಟ.

ಕಷ್ಟ, ದುಃಖದಿಂದಾಗಿ ಹರಿದಿರುವ ಕಣ್ಣೀರಧಾರೆಯನ್ನು ದೇವರು ನಿಲ್ಲಿಸಿಬಿಡುವನು

ನೀತಿಯ ಹೊಸ ಲೋಕದ ಕುರಿತ ತನ್ನ ವಾಗ್ದಾನದ ಮೇಲೆ ನಾವು ನಂಬಿಕೆಯಿಡಬೇಕೆಂಬುದು ಯೆಹೋವನ ಅಪೇಕ್ಷೆ. ಮುಂಬರಲಿರುವ ಆಶೀರ್ವಾದಗಳ ಬಗ್ಗೆ ವರ್ಣಿಸಿದ ನಂತರ ತನ್ನ ಆ ವಾಗ್ದಾನಕ್ಕೆ ಖಾತ್ರಿ ಕೊಡುತ್ತಾ “ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ” ಎಂದು ಹೇಳಿದನು. “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ” ಎಂದೂ ಕೂಡಿಸಿ ಹೇಳಿದನು. (ಪ್ರಕಟನೆ 21:5) ದೇವರ ವಾಗ್ದಾನವು ಮಹಿಮಾಭರಿತ ರೀತಿಯಲ್ಲಿ ನಿಜವಾಗುವುದನ್ನು ಆತನ ಸಂತೋಷಭರಿತ ಆರಾಧಕರು ಕಣ್ಣಾರೆ ಕಾಣುವರು. ಅವರ ಮಧ್ಯೆ ನೀವೂ ನಿಮ್ಮ ಪ್ರಿಯ ಜನರೂ ಇರಬೇಕಾದರೆ ಏನು ಮಾಡಬೇಕೆಂದು ಹೆಚ್ಚು ತಿಳಿಯಬಾರದೇಕೆ? (w13-E 12/01)

ಶಿಫಾರಸು ಮಾಡಲಾಗಿರುವ ಬೈಬಲ್ ವಾಚನ ಭಾಗ

1 ಪೇತ್ರ 1ಪ್ರಕಟನೆ 22

^ ಪ್ಯಾರ. 5 ಕ್ರಿಸ್ತನ ವಿಮೋಚನಾ ಯಜ್ಞದ ಕುರಿತು ಹೆಚ್ಚನ್ನು ತಿಳಿದುಕೊಳ್ಳಲಿಕ್ಕಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 5 ನೋಡಿ.