ದೇವರ ಸಮೀಪಕ್ಕೆ ಬನ್ನಿರಿ
ಯೆಹೋವ ದೇವರಿಗೆ ನನ್ನ ಮೇಲೆ ಕಳಕಳಿ ಇದೆಯಾ?
“ನಾನು ಯಾವುದಕ್ಕೂ ಆಗದವಳು ಅನ್ನೊ ಭಾವನೆಯೇ ನನ್ನನ್ನು ಯೆಹೋವನ ಸಮೀಪಕ್ಕೆ ಹೋಗದಂತೆ ತಡೆದಿದೆ.” ಹೀಗೆ ಹೇಳಿದ್ದು ಯೆಹೋವನಿಗೆ ತನ್ನ ಬಗ್ಗೆಯು ಚಿಂತೆ ಇದೆ ಅಂತ ನಂಬಲು ಕಷ್ಟಪಡುವ ಒಬ್ಬ ಸ್ತ್ರೀ. ನಿಮಗೂ ಹಾಗನಿಸುತ್ತಾ? ಯೆಹೋವನಿಗೆ ತನ್ನ ಒಬ್ಬೊಬ್ಬ ಆರಾಧಕರ ಬಗ್ಗೆಯೂ ಚಿಂತೆ ಇದೆ. ಯೆಹೋವನಿಗೆ ಕಳಕಳಿ ಇದೆ ಅಂತ ಯೇಸುವಿನ ಮಾತುಗಳಿಂದ ನಮಗೆ ತಿಳಿದು ಬರುತ್ತೆ.—ಯೋಹಾನ 6:44 ಓದಿ.
ಯೆಹೋವನ ವ್ಯಕ್ತಿತ್ವ, ಚಿತ್ತದ ಬಗ್ಗೆ ಯೇಸುವಿಗೆ ತಿಳಿದಿರುವಷ್ಟು ಯಾರಿಗೂ ತಿಳಿದಿಲ್ಲ. ಆತನು ಯೆಹೋವ ದೇವರ ಬಗ್ಗೆ ಹೇಳುವುದೇನು? (ಲೂಕ 10:22) “ನನ್ನನ್ನು ಕಳುಹಿಸಿದ ತಂದೆಯು ಸೆಳೆದ ಹೊರತು ಯಾರೊಬ್ಬನೂ ನನ್ನ ಬಳಿಗೆ ಬರಲಾರನು.” ಆದ್ದರಿಂದ ಯೆಹೋವ ದೇವರು ತನ್ನ ಬಳಿ ನಮ್ಮನ್ನು ಸೆಳೆಯದಿದ್ದರೆ ನಾವು ಆತನನ್ನು ಆರಾಧಿಸಲೂ ಆಗುವುದಿಲ್ಲ ಕ್ರಿಸ್ತನ ಹಿಂಬಾಲಕರೂ ಆಗುವುದಿಲ್ಲ. (2 ಥೆಸಲೋನಿಕ 2:13) ದೇವರ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಯೇಸು ಹೇಳಿದ ಮಾತನ್ನು ಅರ್ಥ ಮಾಡಿಕೊಳ್ಳಬೇಕು.
ಯೆಹೋವನು ನಮ್ಮನ್ನು ಸೆಳೆಯುತ್ತಾನೆ ಅಂದರೇನು? “ಸೆಳೆ” ಅನ್ನೋ ಪದಕ್ಕೆ ಬಳಸಲಾಗಿರುವ ಗ್ರೀಕ್ ಪದವನ್ನೇ ಮೀನು ತುಂಬಿರುವ ಬಲೆಯನ್ನು “ಎಳೆ” ಎನ್ನುವುದಕ್ಕೂ ಬಳಸಲಾಗಿದೆ. (ಯೋಹಾನ 21:6, 11) ಇದರ ಅರ್ಥ ಯೆಹೋವನು ನಮ್ಮ ಇಚ್ಛೆಗೆ ವಿರುದ್ಧವಾಗಿ ಆತನ ಕಡೆಗೆ ನಮ್ಮನ್ನು ಬಲವಂತವಾಗಿ ಎಳೆಯುತ್ತಾನೆ ಅಂತನಾ? ಇಲ್ಲ. ಯೆಹೋವನು ನಮಗೆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಬಲವಂತವಾಗಿ ನಮ್ಮನ್ನು ಸೆಳೆದುಕೊಳ್ಳೋದಿಲ್ಲ. (ಧರ್ಮೋಪದೇಶಕಾಂಡ 30:19, 20) ಲೋಕದಲ್ಲಿ ಕೋಟಿ ಕೋಟಿ ಜನರಿದ್ದರೂ ತನ್ನ ಕಡೆಗೆ ತಿರುಗುವ ಹೃದಯವುಳ್ಳ ಒಬ್ಬೊಬ್ಬರನ್ನೂ ಯೆಹೋವನು ಹುಡುಕುತ್ತಾನೆ. (1 ಪೂರ್ವಕಾಲವೃತ್ತಾಂತ 28:9) ಅಂಥವರು ಸಿಕ್ಕಿದಾಗ ಆತನ ಪ್ರತಿಕ್ರಿಯೆ ಮನಮುಟ್ಟುವಂತಿರುತ್ತೆ. ಹೇಗೆ?
“ಯೋಗ್ಯವಾದ ಮನೋಭಾವ” ಇರುವವರ ಕಡೆಗೆ ಯೆಹೋವನ ಪ್ರತಿಕ್ರಿಯೆ ಕೋಮಲವಾಗಿರುತ್ತೆ. (ಅಪೊಸ್ತಲರ ಕಾರ್ಯಗಳು 13:48) ಇದನ್ನಾತನು ಮಾಡುವುದು ಎರಡು ರೀತಿಯಲ್ಲಿ. ಒಂದು ಬೈಬಲ್‌ನಲ್ಲಿರುವ ಸುವಾರ್ತೆ ಮೂಲಕ. ಮತ್ತೊಂದು ಪವಿತ್ರಾತ್ಮ ಎಂಬ ದೇವರ ಶಕ್ತಿ ಮೂಲಕ. ಬೈಬಲ್ ಸತ್ಯಕ್ಕೆ ಒಳ್ಳೇ ರೀತಿ ಸ್ಪಂದಿಸುವ ಜನರನ್ನು ಆತನು ನೋಡಿದಾಗ ಅದನ್ನು ಅರ್ಥಮಾಡಿಕೊಂಡು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳುವಂತೆ ಅವರಿಗೆ ತನ್ನ ಶಕ್ತಿಯನ್ನು ದಯಪಾಲಿಸುತ್ತಾನೆ. (1 ಕೊರಿಂಥ 2:11, 12) ದೇವರ ಸಹಾಯ ಇಲ್ಲ ಅಂದರೆ ಖಂಡಿತ ನಾವು ಯೇಸುವಿನ ಹಿಂಬಾಲಕರಾಗಲಿ ಯೆಹೋವನ ಆರಾಧಕರಾಗಲಿ ಆಗಲು ಸಾಧ್ಯವಿಲ್ಲ.
ಯೆಹೋವನು ನಮಗೆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಬಲವಂತವಾಗಿ ನಮ್ಮನ್ನು ಸೆಳೆದುಕೊಳ್ಳೋದಿಲ್ಲ
ಯೋಹಾನ 6:44 ರಲ್ಲಿ ಯೇಸು ಹೇಳಿರುವ ಮಾತಿಂದ ಯೆಹೋವ ದೇವರ ಬಗ್ಗೆ ನಾವೇನು ಕಲೀಬಹುದು? ಒಬ್ಬ ವ್ಯಕ್ತಿಯಲ್ಲಿ ಏನಾದರೂ ಒಳ್ಳೇದನ್ನು ಯೆಹೋವನು ನೋಡಿದಾಗ ಅವರನ್ನು ತನ್ನ ಕಡೆಗೆ ಸೆಳೆಯುತ್ತಾನೆ ಮತ್ತು ಅವರಿಗಾಗಿ ಕಾಳಜಿ ತೋರಿಸುತ್ತಾನೆ. ಮೊದಲ ಪ್ಯಾರದಲ್ಲಿ ತಿಳಿಸಿದ ಸ್ತ್ರೀಗೆ ಈ ವಿಷಯ ಅರ್ಥವಾದಾಗ ಅವಳಿಗೆ ತುಂಬ ಸಾಂತ್ವನ ಸಿಕ್ಕಿತು. ಅವಳು ಹೇಳಿದ್ದು: “ಯೆಹೋವ ದೇವರ ಆರಾಧಕರಾಗಿರುವುದೇ ಎಲ್ಲಕ್ಕಿಂತ ದೊಡ್ಡ ಅನುಗ್ರಹ. ಆತನ ಸೇವಕಳಾಗುವಂತೆ ನನ್ನನ್ನು ಸೆಳೆದಿದ್ದಾನೆ ಅಂದರೆ ನಾನು ಆತನಿಗೆ ಅಮೂಲ್ಯಳಾಗಿದ್ದೇನೆ.” ನಿಮಗೇನನಿಸುತ್ತೆ? ಯೆಹೋವನು ತನ್ನ ಸೇವಕರ ಬಗ್ಗೆ ಚಿಂತಿಸುತ್ತಾನೆ ಅಂತ ತಿಳಿದುಕೊಳ್ಳುವುದು ಆತನ ಕಡೆಗೆ ಆಪ್ತತೆಯನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಾ? (w13-E 05/01)
ಶಿಫಾರಸು ಮಾಡಲಾಗಿರುವ ಬೈಬಲ್ ವಾಚನ ಭಾಗ