ಬೈಬಲ್ ಕೊಡುವ ಉತ್ತರ
ಯಾಕೆ ಲೋಕದಲ್ಲಿ ಶಾಂತಿ ಸಮಾಧಾನ ಇಲ್ಲ?
ಇದಕ್ಕೆ ಬೈಬಲ್ ಎರಡು ಕಾರಣ ಕೊಡುತ್ತೆ. ಒಂದು, ಮನುಷ್ಯ ಎಷ್ಟೇ ವಿಸ್ಮಯಕರ ವಿಷಯಗಳನ್ನು ಮಾಡಿದರೂ ದೇವರ ಸಹಾಯವಿಲ್ಲದೆ ಸರಿಯಾದ ದಾರಿಯಲ್ಲಿ ನಡೆಯುವ ಸಾಮರ್ಥ್ಯ ಅವನಿಗಿಲ್ಲ. ಎರಡನೇ ಕಾರಣ “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಅಂದರೆ ಸೈತಾನನ ವಶದಲ್ಲಿ ಬಿದ್ದಿದೆ. ಹಾಗಾಗಿ ಮನುಜ ಎಷ್ಟೇ ಪ್ರಯತ್ನಪಟ್ಟರೂ ಲೋಕದಲ್ಲಿ ಶಾಂತಿ ಸಮಾಧಾನ ಸ್ಥಾಪಿಸಲು ಆಗುತ್ತಿಲ್ಲ.—ಯೆರೆಮೀಯ 10:23; 1 ಯೋಹಾನ 5:19 ಓದಿ.
ಲೋಕದಲ್ಲಿ ಶಾಂತಿ ಇಲ್ಲದಿರುವುದಕ್ಕೆ ಮನುಷ್ಯನ ಸ್ವಾರ್ಥ, ಮಹತ್ವಾಕಾಂಕ್ಷೆ ಕೂಡ ಒಂದು ಕಾರಣ. ಇಡೀ ಭೂಮಿಯಲ್ಲಿ ಒಂದೇ ಒಂದು ಸರ್ಕಾರ ಆಳಬೇಕು ಮತ್ತು ಅದು ಜನರಿಗೆ ಒಳ್ಳೇದನ್ನು ಪ್ರೀತಿಸುವಂತೆ ಮತ್ತು ಬೇರೆಯವರ ಬಗ್ಗೆಯೂ ಯೋಚಿಸಿ ಕಾಳಜಿವಹಿಸುವಂತೆ ಕಲಿಸಿದರೆ ಮಾತ್ರ ಲೋಕದಲ್ಲಿ ಶಾಂತಿ ಸಮಾಧಾನ ಸ್ಥಾಪಿಸಲು ಸಾಧ್ಯ.—ಯೆಶಾಯ 32:17; 48:18, 22 ಓದಿ.
ಭೂಮಿಯಲ್ಲಿ ಯಾರು ಶಾಂತಿ ಸಮಾಧಾನ ಸ್ಥಾಪಿಸುತ್ತಾರೆ?
ಇಡೀ ಭೂಮಿಯನ್ನು ಒಂದೇ ಸರ್ಕಾರ ಆಳುವ ಹಾಗೇ ಮಾಡುತ್ತೇನೆ ಅಂತ ಸರ್ವಶಕ್ತ ದೇವರು ಮಾತುಕೊಟ್ಟಿದ್ದಾನೆ. ಈ ಸರ್ಕಾರ ಎಲ್ಲಾ ಮಾನವ ಸರ್ಕಾರಗಳನ್ನು ತೆಗೆದುಹಾಕುತ್ತೆ. (ದಾನಿಯೇಲ 2:44) ದೇವಪುತ್ರ ಯೇಸುವೇ ಸಮಾಧಾನದ ಪ್ರಭುವಾಗಿ ಆಳ್ವಿಕೆ ಮಾಡುತ್ತಾ ಇಡೀ ಭೂಮಿಯಿಂದ ಕೆಟ್ಟದ್ದನ್ನೆಲ್ಲ ತೆಗೆದುಹಾಕುತ್ತಾನೆ ಮತ್ತು ಶಾಂತಿ ಇರಬೇಕಾದರೆ ಏನು ಮಾಡಬೇಕು ಅಂತ ಜನರಿಗೆ ಕಲಿಸುತ್ತಾನೆ.—ಯೆಶಾಯ 9:6, 7; 11:4, 9 ಓದಿ.
ಈಗಾಗಲೇ ಯೇಸುವಿನ ಮಾರ್ಗದರ್ಶನಕ್ಕೆ ಅನುಸಾರವಾಗಿ ಜಗದಾದ್ಯಂತ ಲಕ್ಷಾಂತರ ಜನರು ದೇವರ ವಾಕ್ಯವಾದ ಬೈಬಲಿನ ಸಹಾಯದಿಂದ ಜನರಿಗೆ ಶಾಂತಿಯಿಂದ ಜೀವಿಸುವುದು ಹೇಗೆ ಅಂತ ಕಲಿಸುತ್ತಿದ್ದಾರೆ. ಇಡೀ ಲೋಕದಲ್ಲಿ ಶಾಂತಿ ತುಂಬುವ ದಿನ ತುಂಬ ದೂರದಲ್ಲಿಲ್ಲ.—ಯೆಶಾಯ 2:3, 4; 54:13 ಓದಿ. (w13-E 06/01)