ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಿಮ್ಮನ್ನು ಬಲಪಡಿಸುವನು

ಯೆಹೋವನು ನಿಮ್ಮನ್ನು ಬಲಪಡಿಸುವನು

“ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು [“ಬಲಪಡಿಸುವನು,” ಪವಿತ್ರ ಗ್ರಂಥ ಭಾಷಾಂತರ].”—ಕೀರ್ತ. 41:3.

ಗೀತೆಗಳು: 23, 138

1, 2. (ಎ) ಬೈಬಲ್‌ ಕಾಲಗಳಲ್ಲಿ ಯೆಹೋವನು ಏನು ಮಾಡಿದನು? (ಬಿ) ಅನಾರೋಗ್ಯದಿಂದ ಬಳಲುತ್ತಿರುವ ಕೆಲವರಿಗೆ ಯಾವ ಯೋಚನೆ ಬರಬಹುದು?

ಗಂಭೀರ ಅನಾರೋಗ್ಯದಿಂದ ನೀವು ಬಳಲುತ್ತಿರುವಾಗ ‘ನಾನು ಯಾವತ್ತಾದರೂ ಹುಷಾರಾಗುತ್ತೇನಾ?’ ಎಂದು ಯೋಚಿಸಿರಬಹುದು. ಕುಟುಂಬ ಸದಸ್ಯರೊಬ್ಬರು ಅಥವಾ ಸ್ನೇಹಿತರೊಬ್ಬರಿಗೆ ತುಂಬಾನೇ ಹುಷಾರಿಲ್ಲದಿದ್ದಾಗ ಅವರು ಗುಣವಾಗುತ್ತಾರಾ ಎಂದು ನೀವು ಯೋಚಿಸಿರಬಹುದು. ನಿಮಗೂ ನೀವು ಪ್ರೀತಿಸುವವರಿಗೂ ಒಳ್ಳೇ ಆರೋಗ್ಯ ಇರಬೇಕೆಂದು ಬಯಸುವುದರಲ್ಲಿ ತಪ್ಪೇನಿಲ್ಲ. ತಮಗೆ ಕಾಯಿಲೆ ಇದ್ದದ್ದರಿಂದ ‘ನಾನು ಗುಣವಾಗುತ್ತೇನಾ?’ ಎಂದು ತಿಳಿಯಲು ಬಯಸಿದ ಕೆಲವರ ಬಗ್ಗೆ ಬೈಬಲಿನಲ್ಲಿದೆ. ಉದಾಹರಣೆಗೆ, ಆಹಾಬ ಮತ್ತು ಈಜೆಬೆಲಳ ಮಗನಾದ ರಾಜ ಅಹಜ್ಯ ಅಸ್ವಸ್ಥನಾಗಿದ್ದಾಗ ತಾನು ವಾಸಿಯಾಗುವೆನಾ ಎಂದು ಯೋಚಿಸಿದನು. ಅರಾಮ್ಯರ ಅರಸನಾದ ಬೆನ್ಹದದನು ಸಹ ಅನಾರೋಗ್ಯದಿಂದ ಬಳಲುತ್ತಿದ್ದಾಗ ಗುಣವಾಗುತ್ತೇನಾ ಎಂದು ಕೇಳಿದನು.—2 ಅರ. 1:2; 8:7, 8.

2 ಹಿಂದೆ, ಯೆಹೋವನು ಕೆಲವೊಮ್ಮೆ ಜನರನ್ನು ಒಂದು ಅದ್ಭುತ ಮಾಡಿ ಗುಣಪಡಿಸಿದನು ಮತ್ತು ತನ್ನ ಪ್ರವಾದಿಗಳ ಮೂಲಕ ಸತ್ತವರ ಪುನರುತ್ಥಾನ ಕೂಡ ಮಾಡಿದನು ಎನ್ನುತ್ತದೆ ಬೈಬಲು. (1 ಅರ. 17:17-24; 2 ಅರ. 4:17-20, 32-35) ಇಂದು ಅನಾರೋಗ್ಯದಲ್ಲಿರುವವರು ‘ದೇವರು ನಮಗೂ ಅಂಥದ್ದೇನಾದರೂ ಮಾಡಿ ಗುಣಪಡಿಸುವನಾ?’ ಎಂದು ಯೋಚಿಸಬಹುದು.

3-5. (ಎ) ಯೆಹೋವನಿಗೂ ಯೇಸುವಿಗೂ ಏನು ಮಾಡುವ ಶಕ್ತಿಯಿದೆ? (ಬಿ) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

 3 ಜನರ ಆರೋಗ್ಯವನ್ನು ಕೆಡಿಸುವ, ಗುಣಪಡಿಸುವ ಶಕ್ತಿ ಯೆಹೋವನಿಗಿದೆ. ಆತನು ಅಬ್ರಹಾಮನ ಸಮಯದಲ್ಲಿದ್ದ ಫರೋಹನನ್ನು ಮತ್ತು ಮೋಶೆಯ ಅಕ್ಕ ಮಿರ್ಯಾಮಳನ್ನು ಶಿಕ್ಷಿಸಲು ಅವರಿಗೆ ಅನಾರೋಗ್ಯ ಬರಿಸಿದನು. (ಆದಿ. 12:17; ಅರ. 12:8-10; 2 ಸಮು. 24:15) ಇಸ್ರಾಯೇಲ್ಯರು ಅಪನಂಬಿಗಸ್ತರಾದಾಗ ಅವರಿಗೆ ‘ರೋಗಗಳನ್ನು ವ್ಯಾಧಿಗಳನ್ನು’ ಬರಿಸಿ ಶಿಕ್ಷಿಸಿದನು. (ಧರ್ಮೋ. 28:58-61) ಇನ್ನು ಕೆಲವು ಸಂದರ್ಭಗಳಲ್ಲಿ ಯೆಹೋವನು ತನ್ನ ಸೇವಕರಿಗೆ ಕಾಯಿಲೆ ಬರದಂತೆ ಕಾಪಾಡಿದನು. (ವಿಮೋ. 23:25; ಧರ್ಮೋ. 7:15) ಅವರಲ್ಲಿ ಕೆಲವರನ್ನು ಗುಣಪಡಿಸಿದನು ಸಹ. ಉದಾಹರಣೆಗೆ ಯೋಬನು ತುಂಬ ಅಸ್ವಸ್ಥನಾಗಿದ್ದರಿಂದ ಸಾಯಲು ಬಯಸಿದಾಗ ಯೆಹೋವನು ಅವನನ್ನು ಗುಣಪಡಿಸಿದನು.—ಯೋಬ 2:7; 3:11-13; 42:10, 16.

4 ಅನಾರೋಗ್ಯದಲ್ಲಿ ಇರುವವರನ್ನು ಗುಣಪಡಿಸಲು ಯೆಹೋವನಿಗೆ ಶಕ್ತಿಯಿದೆ ಎಂದು ಖಂಡಿತ ಒಪ್ಪುತ್ತೇವೆ. ಯೇಸುವಿಗೂ ಆ ಶಕ್ತಿಯಿದೆ. ಆತನು ಭೂಮಿಯಲ್ಲಿದ್ದಾಗ ಮೂರ್ಛೆರೋಗ, ಕುಷ್ಠರೋಗವಿದ್ದವರನ್ನು ಗುಣಪಡಿಸಿದನು. ಕುರುಡರನ್ನು ಮತ್ತು ಪಾರ್ಶ್ವವಾಯು ರೋಗಿಗಳನ್ನು ಗುಣಪಡಿಸಿದನು. (ಮತ್ತಾಯ 4:23, 24 ಓದಿ; ಯೋಹಾ. 9:1-7) ಯೇಸು ಹೊಸ ಲೋಕದಲ್ಲಿ ಮಾಡಲಿಕ್ಕಿರುವ ಅನೇಕ ಅದ್ಭುತಗಳನ್ನು ಎದುರುನೋಡಲು ಆ ಅದ್ಭುತಗಳು ನಮಗೆ ಸಹಾಯ ಮಾಡುತ್ತವೆ. ಹೊಸ ಲೋಕದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾ. 33:24.

5 ಆದರೆ ನಮಗೊಂದು ಗಂಭೀರ ಕಾಯಿಲೆ ಬಂದಾಗ ಯೆಹೋವ ಮತ್ತು ಯೇಸು ಈಗ ಅದ್ಭುತ ಮಾಡಿ ನಮ್ಮನ್ನು ಗುಣಪಡಿಸುತ್ತಾರೆಂದು ನಿರೀಕ್ಷಿಸಬೇಕಾ? ಒಂದು ಚಿಕಿತ್ಸೆಯನ್ನು ಆರಿಸಿಕೊಳ್ಳುವಾಗ ಯಾವ ವಿಷಯಕ್ಕೆ ಗಮನಕೊಡಬೇಕು?

ಅನಾರೋಗ್ಯವಿರುವಾಗ ಯೆಹೋವನನ್ನು ಆಶ್ರಯಿಸಿ

6. ಮೊದಲನೇ ಶತಮಾನದಲ್ಲಿ ಕ್ರೈಸ್ತರು ಮಾಡಿದ ಅದ್ಭುತಗಳ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

6 ಮೊದಲನೇ ಶತಮಾನದಲ್ಲಿ ಯೆಹೋವನು ಅಭಿಷಿಕ್ತ ಕ್ರೈಸ್ತರಲ್ಲಿ ಕೆಲವರಿಗೆ ಅದ್ಭುತಗಳನ್ನು ಮಾಡುವ ಸಾಮರ್ಥ್ಯ ಕೊಟ್ಟನು. (ಅ. ಕಾ. 3:2-7; 9:36-42) ಉದಾಹರಣೆಗೆ, ಜನರನ್ನು ವಾಸಿಮಾಡಲು ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡಲು ಅವರಿಂದ ಆಗುತ್ತಿತ್ತು. (1 ಕೊರಿಂ. 12:4-11) ಆದರೆ ನಂತರ ಬೈಬಲಿನಲ್ಲಿ ಹೇಳಿರುವಂತೆ ಆ ವರಗಳು ನಿಂತುಹೋದವು. (1 ಕೊರಿಂ. 13:8) ಹಾಗಾಗಿ ನಮ್ಮನ್ನು ಅಥವಾ ನಾವು ಪ್ರೀತಿಸುವವರನ್ನು ಗುಣಪಡಿಸಲು ದೇವರು ಅದ್ಭುತ ಮಾಡುತ್ತಾನೆಂದು ನಾವು ನಿರೀಕ್ಷಿಸಬಾರದು.

7. ಕೀರ್ತನೆ 41:3 ನಮಗೆ ಯಾವ ಉತ್ತೇಜನ ಕೊಡುತ್ತದೆ?

7 ಆದರೆ ನಿಮಗೆ ಅನಾರೋಗ್ಯವಿರುವಲ್ಲಿ ಯೆಹೋವನು ಹಿಂದಿನ ಕಾಲದಲ್ಲಿ ತನ್ನ ಸೇವಕರಿಗೆ ಬೆಂಬಲ, ಸಾಂತ್ವನ ಕೊಟ್ಟಂತೆ ನಿಮಗೂ ಕೊಟ್ಟೇ ಕೊಡುವನು. ರಾಜ ದಾವೀದನು ಹೀಗೆ ಬರೆದನು: “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು.” (ಕೀರ್ತ. 41:1, 2) ದಿಕ್ಕಿಲ್ಲದವನನ್ನು ಪರಾಂಬರಿಸುವ ಒಳ್ಳೇ ವ್ಯಕ್ತಿ ಸಾಯುವುದೇ ಇಲ್ಲ ಎಂದು ದಾವೀದನ ಮಾತಿನ ಅರ್ಥವಾಗಿರಲಿಲ್ಲ. ಹಾಗಾದರೆ ಆ ಒಳ್ಳೇ ವ್ಯಕ್ತಿಗೆ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ? ದಾವೀದನೇ ವಿವರಿಸಿದ್ದು: ‘ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡುವನು.’ (ಕೀರ್ತ. 41:3) ತನ್ನ ಸೇವಕರು ಯಾವ ಅನಾರೋಗ್ಯದಿಂದ ನರಳುತ್ತಿದ್ದಾರೆಂದು ಯೆಹೋವನಿಗೆ ಚೆನ್ನಾಗಿ ಗೊತ್ತಿದೆ. ಅವರನ್ನು ಆತನೆಂದೂ ಮರೆಯುವುದಿಲ್ಲ. ಧೈರ್ಯ, ವಿವೇಕವನ್ನು ಕೊಡುತ್ತಾನೆ. ಅಷ್ಟೇ ಅಲ್ಲ ಮಾನವ ದೇಹವನ್ನು ಯೆಹೋವನು ಹೇಗೆ ಸೃಷ್ಟಿ ಮಾಡಿದ್ದಾನೆಂದರೆ ಅದು ತನ್ನಿಂದ ತಾನೇ ಗುಣವಾಗುತ್ತದೆ.

8. ದಾವೀದನಿಗೆ ತುಂಬ ಅನಾರೋಗ್ಯದ ಸಮಸ್ಯೆ ಇದ್ದಾಗ ಕೀರ್ತನೆ 41:4 ಕ್ಕನುಸಾರ ಯೆಹೋವನ ಹತ್ತಿರ ಏನೆಂದು ಬೇಡಿಕೊಂಡನು?

8 ಕೀರ್ತನೆ 41ರಲ್ಲಿ ದಾವೀದನು ತಾನು ತುಂಬ ಅನಾರೋಗ್ಯದಲ್ಲಿದ್ದ ಸಮಯದ ಬಗ್ಗೆ ಹೇಳುತ್ತಾನೆ. ಆಗ ಅವನಿಗೆ ತುಂಬ ಹುಷಾರಿರಲಿಲ್ಲ ಮತ್ತು ಅನೇಕ ವಿಷಯಗಳ ಬಗ್ಗೆ ಅವನಿಗೆ ಚಿಂತೆ ಇತ್ತು. ಆ ಸಮಯದಲ್ಲಿ ಅವನ ಮಗನಾದ ಅಬ್ಷಾಲೋಮನು ಅವನ ಸಿಂಹಾಸನವನ್ನು ಕಿತ್ತುಕೊಂಡು ರಾಜನಾಗಲು ಪ್ರಯತ್ನಿಸುತ್ತಿದ್ದ. ದಾವೀದನಿಗೆ ಎಷ್ಟು ಹುಷಾರಿರಲಿಲ್ಲ ಎಂದರೆ ಅಬ್ಷಾಲೋಮನನ್ನು ತಡೆಯಲು ಅವನಿಂದ ಏನೂ ಮಾಡಲು ಆಗುತ್ತಿರಲಿಲ್ಲ. ಬತ್ಷೆಬೆಯೊಟ್ಟಿಗೆ ತಾನು ಮಾಡಿದ ಪಾಪದ ಫಲವೇ ಈ ಕುಟುಂಬ ಸಮಸ್ಯೆಗಳಿಗೆ ಕಾರಣ ಎಂದು  ಅವನಿಗೆ ಗೊತ್ತಿತ್ತು. (2 ಸಮು. 12:7-14) ಆಗ ದಾವೀದನು ಏನು ಮಾಡಿದನು? “ಯೆಹೋವನೇ, ನಿನ್ನ ಆಜ್ಞೆಯನ್ನು ಮಿಾರಿ ಪಾಪಮಾಡಿದ್ದೇನೆ; ನನ್ನನ್ನು ಕರುಣಿಸಿ ಸ್ವಸ್ಥಮಾಡು” ಎಂದು ಪ್ರಾರ್ಥನೆ ಮಾಡಿದನು. (ಕೀರ್ತ. 41:4) ತನ್ನ ಪಾಪವನ್ನು ಯೆಹೋವನು ಕ್ಷಮಿಸಿದ್ದಾನೆಂದು ದಾವೀದನಿಗೆ ಗೊತ್ತಿತ್ತು. ಅನಾರೋಗ್ಯದ ಸಮಯದಲ್ಲಿ ಅವನು ಯೆಹೋವನ ಮೇಲೆ ಆತುಕೊಂಡನು. ಆದರೆ ಯೆಹೋವನು ಅದ್ಭುತ ಮಾಡುವನೆಂದು ದಾವೀದ ನಿರೀಕ್ಷಿಸಿದನಾ?

9. (ಎ) ರಾಜ ಹಿಜ್ಕೀಯನಿಗೆ ಯೆಹೋವನು ಯಾವ ಸಹಾಯ ಮಾಡಿದನು? (ಬಿ) ಯೆಹೋವನಿಂದ ದಾವೀದನು ಏನನ್ನು ನಿರೀಕ್ಷಿಸಿದನು?

9 ಕೆಲವೊಮ್ಮೆ ದೇವರು ತನ್ನ ಜನರನ್ನು ಗುಣಪಡಿಸಲು ಆರಿಸಿಕೊಳ್ಳುತ್ತಾನೆ ನಿಜ. ಉದಾಹರಣೆಗೆ, ರಾಜ ಹಿಜ್ಕೀಯ ಸಾಯುವ ಪರಿಸ್ಥಿತಿಯಲ್ಲಿದ್ದಾಗ ಯೆಹೋವನು ಅವನನ್ನು ಗುಣಪಡಿಸಿದನು. ಇದರಿಂದಾಗಿ ಹಿಜ್ಕೀಯನು 15 ವರ್ಷ ಹೆಚ್ಚು ಜೀವಿಸಿದನು. (2 ಅರ. 20:1-6) ಆದರೆ ದಾವೀದನು ಯಾವ ಅದ್ಭುತವನ್ನೂ ನಿರೀಕ್ಷಿಸಲಿಲ್ಲ. ಬದಲಿಗೆ ‘ದಿಕ್ಕಿಲ್ಲದವನನ್ನು ಪರಾಂಬರಿಸುವ’ ವ್ಯಕ್ತಿಗೆ ಯೆಹೋವನು ಹೇಗೆ ಸಹಾಯ ಮಾಡುವನೋ ಹಾಗೇ ತನಗೂ ಸಹಾಯ ಮಾಡುವನು ಎಂದು ನಿರೀಕ್ಷಿಸಿದನು. ದಾವೀದನಿಗೆ ಯೆಹೋವನೊಟ್ಟಿಗೆ ಒಳ್ಳೇ ಸಂಬಂಧವಿತ್ತು. ಹಾಗಾಗಿ ಅವನಿಗೆ ಹುಷಾರಿಲ್ಲದಿದ್ದಾಗ ತನ್ನನ್ನು ಸಂತೈಸುವಂತೆ, ತನ್ನನ್ನು ನೋಡಿಕೊಳ್ಳುವಂತೆ ಯೆಹೋವನ ಹತ್ತಿರ ಕೇಳಿಕೊಂಡನು. ತನ್ನ ಶರೀರ ಬೇಗ ಗುಣವಾಗಬೇಕು, ತಾನು ಸುಧಾರಿಸಿಕೊಳ್ಳಬೇಕು ಎಂದು ಬೇಡಿಕೊಂಡನು. ಅದೇ ರೀತಿ ನಮಗೂ ಸಹಾಯ ಮಾಡುವಂತೆ ನಾವು ಯೆಹೋವನ ಹತ್ತಿರ ಬೇಡಿಕೊಳ್ಳಬಹುದು.—ಕೀರ್ತ. 103:3.

10. (ಎ) ತ್ರೊಫಿಮನಿಗೆ ಮತ್ತು ಎಪಫ್ರೊದೀತನಿಗೆ ಏನಾಗಿತ್ತು? (ಬಿ) ಇದು ನಮಗೇನು ಕಲಿಸುತ್ತದೆ?

10 ಮೊದಲನೇ ಶತಮಾನದಲ್ಲಿ ಅಪೊಸ್ತಲ ಪೌಲ ಮತ್ತು ಇತರರಿಗೆ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿತ್ತು. ಆದರೂ ಆ ಸಮಯದಲ್ಲಿದ್ದ ಎಲ್ಲಾ ಕ್ರೈಸ್ತರನ್ನು ಅದ್ಭುತ ಮಾಡಿ ಅವರು ಗುಣಪಡಿಸಲಿಲ್ಲ. (ಅಪೊಸ್ತಲರ ಕಾರ್ಯಗಳು 14:8-10 ಓದಿ.) ಪೊಪ್ಲಿಯನ ತಂದೆ ಜ್ವರ, ರಕ್ತಭೇದಿಯಿಂದ ಅಸ್ವಸ್ಥನಾಗಿದ್ದಾಗ ಅಪೊಸ್ತಲ ಪೌಲನು “ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ಗುಣಪಡಿಸಿದನು.” (ಅ. ಕಾ. 28:8) ಆದರೆ ಪೌಲನು ತನಗೆ ಗೊತ್ತಿದ್ದ ಎಲ್ಲರನ್ನು ಗುಣಪಡಿಸಲಿಲ್ಲ. ಅವನ ಸ್ನೇಹಿತರಲ್ಲಿ ಒಬ್ಬನಾದ ತ್ರೊಫಿಮನು ಅವನ ಜೊತೆ ಮಿಷನರಿ ಪ್ರಯಾಣ ಮಾಡಿದನು. (ಅ. ಕಾ. 20:3-5, 22; 21:29) ತ್ರೊಫಿಮನಿಗೆ ಹುಷಾರಿಲ್ಲದಿದ್ದಾಗ ಪೌಲ ಅವನನ್ನು ಗುಣಪಡಿಸಲಿಲ್ಲ. ಹಾಗಾಗಿ ಪೌಲನ ಜೊತೆ ಪ್ರಯಾಣ ಮಾಡುವುದನ್ನು ನಿಲ್ಲಿಸಿ ಗುಣವಾಗಲು ಅವನು ಮಿಲೇತದಲ್ಲಿ ಉಳಿದುಕೊಂಡನು. (2 ತಿಮೊ. 4:20) ಪೌಲನ ಮತ್ತೊಬ್ಬ ಸ್ನೇಹಿತನಾದ ಎಪಫ್ರೊದೀತನು ಹುಷಾರಿಲ್ಲದೆ ಇನ್ನೇನು ಸಾಯುವ ಸ್ಥಿತಿಯಲ್ಲಿದ್ದನು. ಆದರೆ ಪೌಲನು ಅವನನ್ನು ಗುಣಪಡಿಸಿದ ಬಗ್ಗೆ ಬೈಬಲ್‌ ಹೇಳುವುದಿಲ್ಲ.—ಫಿಲಿ. 2:25-27, 30.

ಯಾವ ಸಲಹೆಯನ್ನು ನೀವು ಸ್ವೀಕರಿಸಬೇಕು?

11, 12. (ಎ) ಲೂಕನ ಬಗ್ಗೆ ನಮಗೆ ಏನು ಗೊತ್ತು? (ಬಿ) ಪೌಲನಿಗೆ ಅವನು ಹೇಗೆ ಸಹಾಯ ಮಾಡಿರಬಹುದು?

11 ಒಬ್ಬ ವೈದ್ಯನಾಗಿದ್ದ ಲೂಕನು ಪೌಲನ ಜೊತೆ ಪ್ರಯಾಣ ಮಾಡಿದನು. (ಅ. ಕಾ. 16:10-12; 20:5, 6; ಕೊಲೊ. 4:14) ಪೌಲ ಮತ್ತು ಇತರರು ತಮ್ಮ ಮಿಷನರಿ ಪ್ರಯಾಣದಲ್ಲಿದ್ದಾಗ ಹುಷಾರು ತಪ್ಪಿದರೆ ಲೂಕ ಅವರಿಗೆ ಸಹಾಯ ಮಾಡಿರಬಹುದು. (ಗಲಾ. 4:13) ಯೇಸು ಹೇಳಿದಂತೆ “ರೋಗಿಗಳಿಗೆ” ವೈದ್ಯನ ಅವಶ್ಯಕತೆ ಇದೆ.—ಲೂಕ 5:31.

12 ಲೂಕನು ಆರೋಗ್ಯದ ಬಗ್ಗೆ ಅಲ್ಪಸ್ವಲ್ಪ ವಿಷಯ ತಿಳಿದುಕೊಂಡು ಸಲಹೆ ಕೊಡಲು ಬಯಸುವ ಒಬ್ಬ ವ್ಯಕ್ತಿಯಾಗಿರಲಿಲ್ಲ. ಅವನು ತರಬೇತಿ ಪಡೆದ ವೈದ್ಯನಾಗಿದ್ದ. ಅವನು ಎಲ್ಲಿ ಮತ್ತು ಹೇಗೆ ಈ ತರಬೇತಿ ಪಡೆದನೆಂದು ಬೈಬಲ್‌ ಹೇಳುವುದಿಲ್ಲ. ಆದರೆ ಪೌಲನು ಕೊಲೊಸ್ಸೆಯವರಿಗೆ ಬರೆದ ಪತ್ರದಲ್ಲಿ ವೈದ್ಯ ಲೂಕನ ವಂದನೆಗಳನ್ನು ಕಳುಹಿಸಿದನೆಂದು ಬೈಬಲ್‌ ಹೇಳುತ್ತದೆ. ಆಸಕ್ತಿಕರ ಸಂಗತಿ ಏನೆಂದರೆ ಕೊಲೊಸ್ಸೆ ಪಟ್ಟಣ ಪಕ್ಕದಲ್ಲಿದ್ದ ಲವೊದಿಕೀಯದಲ್ಲಿ ಒಂದು ವೈದ್ಯಕೀಯ ಶಾಲೆಯಿತ್ತು. ಲೂಕನು ಬಹುಶಃ ಅಲ್ಲೇ ತರಬೇತಿ ಪಡೆದನು. ಅಷ್ಟುಮಾತ್ರವಲ್ಲ ಅವನು ತನ್ನ ಸುವಾರ್ತಾ ಪುಸ್ತಕ ಮತ್ತು ಅಪೊಸ್ತಲರ ಕಾರ್ಯಗಳ ಪುಸ್ತಕವನ್ನು ಬರೆದಾಗ ಕೆಲವು ನಿರ್ದಿಷ್ಟ ವೈದ್ಯಕೀಯ ಪದಗಳನ್ನು ಬಳಸಿದನು. ಅವನು ವೈದ್ಯನಾಗಿದ್ದ ಕಾರಣದಿಂದಲೇ, ತನ್ನ ವೃತ್ತಾಂತದಲ್ಲಿ ಯೇಸು ಜನರನ್ನು ಗುಣಪಡಿಸಿದ ಅನೇಕ ಘಟನೆಗಳ ಬಗ್ಗೆ ಬರೆದಿದ್ದಾನೆ.

13. ಆರೋಗ್ಯದ ಬಗ್ಗೆ ಸಲಹೆಗಳನ್ನು ಕೊಡುವಾಗ ಮತ್ತು ಸ್ವೀಕರಿಸುವಾಗ ನಾವು ಯಾವ ವಿಷಯ ನೆನಪಿನಲ್ಲಿಡಬೇಕು?

13 ಅದ್ಭುತಗಳನ್ನು ಮಾಡುವ ಮತ್ತು ವಾಸಿಮಾಡುವ ಸಾಮರ್ಥ್ಯ ಇಂದು ನಮ್ಮ ಯಾವುದೇ ಸಹೋದರರಿಗಿಲ್ಲ. ಆದರೆ ಕೆಲವರಿಗೆ ನಮಗೆ ಸಹಾಯಮಾಡಬೇಕೆಂಬ  ಆಸೆ ಇರುವುದರಿಂದ ನಾವು ಕೇಳದಿದ್ದರೂ ಅವರಾಗಿಯೇ ಬಂದು ಸಲಹೆಗಳನ್ನು ಕೊಡುತ್ತಾರೆ. ಕೆಲವು ಸಲಹೆಗಳಲ್ಲಿ ಹಾನಿ ಇರುವುದಿಲ್ಲ. ಉದಾಹರಣೆಗೆ, ತಿಮೊಥೆಯನಿಗೆ ಹೊಟ್ಟೆಯಲ್ಲಿ ಏನೋ ಸಮಸ್ಯೆ ಇದ್ದದರಿಂದ ಸ್ವಲ್ಪ ದ್ರಾಕ್ಷಾಮದ್ಯ ಕುಡಿಯುವಂತೆ ಪೌಲನು ಹೇಳಿದನು. ಬಹುಶಃ ತಿಮೊಥೆಯನು ಕಲುಷಿತ ನೀರನ್ನು ಕುಡಿದಿರಬಹುದು. * (ಪಾದಟಿಪ್ಪಣಿ ನೋಡಿ.) (1 ತಿಮೊಥೆಯ 5:23 ಓದಿ.) ಆದರೆ ನಾವು ಜಾಗ್ರತೆ ವಹಿಸಬೇಕು. ಒಬ್ಬ ಸಹೋದರನು ನಮಗೆ ಒಂದು ಬಗೆಯ ಔಷಧಿ ಅಥವಾ ಗಿಡಮೂಲಿಕೆ ತೆಗೆದುಕೊಳ್ಳಬೇಕು, ಇಂಥಿಂಥ ಆಹಾರ ತಿನ್ನಬೇಕು, ತಿನ್ನಬಾರದು ಎಂದು ಮನವೊಪ್ಪಿಸಲು ಪ್ರಯತ್ನಿಸಬಹುದು. ನಿಮ್ಮಂಥದ್ದೇ ಸಮಸ್ಯೆ ಇದ್ದ ಅವರ ಕುಟುಂಬದ ಯಾರಿಗೋ ಹೀಗೆ ಮಾಡಿದ್ದರಿಂದ ಒಳ್ಳೇದಾಯಿತು ಎಂದು ಅವನು ಹೇಳಬಹುದು. ಆದರೆ ನಮಗೂ ಅದು ಸಹಾಯ ಮಾಡುತ್ತದೆಂದು ಅದರ ಅರ್ಥವಲ್ಲ. ಒಂದು ಚಿಕಿತ್ಸೆ ಅಥವಾ ಔಷಧಿಯನ್ನು ತುಂಬ ಮಂದಿ ತಕ್ಕೊಳ್ಳುತ್ತಿರಬಹುದು. ಹಾಗಂತ ಅದರಿಂದ ಹಾನಿಯಾಗುವುದಿಲ್ಲ ಎಂದು ನಾವು ನೆನಸಬಾರದು.—ಜ್ಞಾನೋಕ್ತಿ 27:12 ಓದಿ.

ಎಚ್ಚರಿಕೆ ವಹಿಸುವ ಮೂಲಕ ವಿವೇಕ ತೋರಿಸಿ

14, 15. (ಎ) ಯಾವ ರೀತಿಯ ಜನರ ಬಗ್ಗೆ ನಾವು ಜಾಗ್ರತೆ ವಹಿಸಬೇಕು? (ಬಿ) ಜ್ಞಾನೋಕ್ತಿ 14:15 ರಿಂದ ನಾವೇನು ಕಲಿಯಬಹುದು?

14 ಆರೋಗ್ಯದಿಂದಿರಬೇಕು ಎನ್ನುವುದು ನಮ್ಮೆಲ್ಲರ ಆಸೆ. ಆಗಲೇ ನಮ್ಮ ಬದುಕನ್ನು ಆನಂದಿಸಲು ಮತ್ತು ಶ್ರಮಪಟ್ಟು ಯೆಹೋವನ ಕೆಲಸಮಾಡಲು ನಮ್ಮಿಂದಾಗುತ್ತದೆ. ಆದರೆ ನಾವು ಅಪರಿಪೂರ್ಣರು. ಹಾಗಾಗಿ ಎಲ್ಲ ರೀತಿಯ ರೋಗಗಳನ್ನು ನಮ್ಮಿಂದ ತಡೆಯಲಿಕ್ಕೆ ಆಗುವುದಿಲ್ಲ. ಇಂದು ಅನೇಕ ಚಿಕಿತ್ಸೆಗಳಿವೆ. ಯಾವ ಚಿಕಿತ್ಸೆ ತೆಗೆದುಕೊಳ್ಳಬೇಕೆಂಬ ನಿರ್ಣಯ ಮಾಡುವ ಹಕ್ಕು ನಮಗಿದೆ. ಆದರೆ ಕೆಲವು ಜನರು ಮತ್ತು ಕಂಪೆನಿಗಳು ನಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಕಂಡುಹಿಡಿದಿದ್ದಾರೆಂದು ಹೇಳಿಕೊಳ್ಳುತ್ತಾರೆ. ಏಕೆಂದರೆ ಚೆನ್ನಾಗಿ ಹಣಮಾಡುವುದೇ ಅವರ ಉದ್ದೇಶ. ಈ ಚಿಕಿತ್ಸೆ ಪಡೆದು ಅನೇಕರು ಗುಣವಾಗಿದ್ದಾರೆಂದೂ ಅವರು ಹೇಳಬಹುದು. ಬೇಗ ಹುಷಾರಾಗಬೇಕು, ಇನ್ನಷ್ಟು ಕಾಲ ಬದುಕಬೇಕು ಎಂಬ ಆಸೆಯಿಂದ ನಾವು ಏನು ಬೇಕಾದರೂ ಮಾಡಲಿಕ್ಕೆ ಸಿದ್ಧರಾಗಬಹುದು. ಆದರೆ ದೇವರ ವಾಕ್ಯದಲ್ಲಿರುವ ಈ ಸಲಹೆಯನ್ನು ನಾವು ಮರೆಯಬಾರದು: “ಮೂಢನು ತಾನು ಕೇಳಿದ್ದನ್ನೆಲ್ಲ ನಂಬುವನು. ಆದರೆ ಜಾಣನು ಪ್ರತಿಯೊಂದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು.”—ಜ್ಞಾನೋ. 14:15ಪರಿಶುದ್ಧ ಬೈಬಲ್‌ ಭಾಷಾಂತರ. *

15 ನಾವು ಜಾಣರಾಗಿದ್ದರೆ ಯಾವ ವಿಷಯ ನಂಬಬೇಕು ಎನ್ನುವುದರಲ್ಲಿ ಜಾಗ್ರತೆ ವಹಿಸುತ್ತೇವೆ. ನಮಗೆ ಸಲಹೆ ಕೊಡುತ್ತಿರುವ ವ್ಯಕ್ತಿ ಸರಿಯಾದ ತರಬೇತಿ ಪಡೆದಿಲ್ಲವಾದರೆ ಸ್ವಲ್ಪ ಹೆಚ್ಚೇ ಜಾಗ್ರತೆ ವಹಿಸಬೇಕು. ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ಆ ವ್ಯಕ್ತಿ ಹೇಳುವಂತೆ ಈ ಗಿಡಮೂಲಿಕೆ, ವಿಟಮಿನ್‌ ಅಥವಾ ಪಥ್ಯ ಜನರಿಗೆ ನಿಜವಾಗಲೂ ಸಹಾಯ ಮಾಡಿದೆ ಅಂತ ನನಗೆ ಖಂಡಿತವಾಗಿ ಗೊತ್ತಾ? ಅವರಿಗೆ ಸಹಾಯವಾಗಿದ್ದರೂ ನನಗೂ ಆಗುತ್ತದೆಂದು ಹೇಗೆ ಹೇಳಬಹುದು? ಇದರ ಬಗ್ಗೆ ನಾನು ಇನ್ನಷ್ಟು ಸಂಶೋಧನೆ ಮಾಡಬೇಕಾ? ನನ್ನ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಕೊಡಲು ಒಳ್ಳೇ ತರಬೇತಿ ಪಡೆದಿರುವ ಕೆಲವರ ಜೊತೆ ಮಾತಾಡಬೇಕಾ?’—ಧರ್ಮೋ. 17:6.

16. ನಮ್ಮ ಆರೋಗ್ಯದ ಬಗ್ಗೆ ನಿರ್ಣಯಗಳನ್ನು ಮಾಡುವಾಗ ಯಾವ ವಿಷಯಗಳನ್ನು ಮನಸ್ಸಿನಲ್ಲಿಡಬೇಕು?

16 ಯಾವ ರೀತಿಯ ತಪಾಸಣೆ ಮಾಡಬೇಕು ಅಥವಾ ಚಿಕಿತ್ಸೆ ಪಡೆಯಬೇಕು ಎಂಬ ನಿರ್ಣಯ ಮಾಡುವಾಗ ನಾವು “ಸ್ವಸ್ಥಬುದ್ಧಿ” ಬಳಸಬೇಕು. (ತೀತ 2:12) ವಿಚಿತ್ರವಾಗಿ ತೋರುವ ತಪಾಸಣೆ ಅಥವಾ ಚಿಕಿತ್ಸಾ ಕ್ರಮದ ಬಗ್ಗೆ ಯಾರಾದರೂ ಹೇಳಿದರಂತೂ ಇದು ತುಂಬ ಮುಖ್ಯ. ಈ ಚಿಕಿತ್ಸೆ ಅಥವಾ ತಪಾಸಣೆ ಹೇಗೆ ಮಾಡಲಾಗುತ್ತದೆಂದು ಅವರಿಂದ ವಿವರಿಸಲು ಆಗುತ್ತದಾ? ಆ ವಿವರಣೆ ಸ್ವಲ್ಪ ವಿಚಿತ್ರವೆನಿಸುತ್ತದಾ? ಈ ಚಿಕಿತ್ಸೆ, ತಪಾಸಣೆಯಿಂದ ಜನರಿಗೆ ವಾಸಿಯಾಗುತ್ತದೆಂದು ಅನೇಕ ಡಾಕ್ಟರರು ಒಪ್ಪುತ್ತಾರಾ? ದೂರದಲ್ಲಿ ಎಲ್ಲೊ ಒಂದು ಕಡೆ ಹೊಸ ರೀತಿಯ ಚಿಕಿತ್ಸೆ ಕಂಡುಹಿಡಿಯಲಾಗಿದೆ ಆದರೆ ಇದರ ಬಗ್ಗೆ ಡಾಕ್ಟರರಿಗೆ ಇನ್ನೂ ಗೊತ್ತಾಗಿಲ್ಲ ಎಂದು ಯಾರಾದರೂ ಹೇಳಬಹುದು. ಆ ರೀತಿಯ ಚಿಕಿತ್ಸೆಯಿಂದ ಗುಣವಾಗುತ್ತದೆಂದು ಸಾಬೀತುಪಡಿಸಲು ಪುರಾವೆ ಇದೆಯಾ? ರಹಸ್ಯವಾದ ಯಾವುದೊ ಪದಾರ್ಥ ಇಲ್ಲವೇ ನಿಗೂಢ ಶಕ್ತಿಯನ್ನು ಬಳಸುವ ಚಿಕಿತ್ಸೆ ಬಗ್ಗೆಯೂ ಕೆಲವರು ಹೇಳುತ್ತಾರೆ. ಇದು ತುಂಬ ಅಪಾಯಕಾರಿ. ಮಾಟಮಂತ್ರ ಇಲ್ಲವೆ ಜಾದೂ ಬಳಸಬಾರದೆಂದು ದೇವರು  ನಮಗೆ ಎಚ್ಚರಿಸಿದ್ದಾನೆ ಎನ್ನುವುದನ್ನು ನೆನಪಿನಲ್ಲಿಡಿ.—ಯಾಜ. 19:26; ಧರ್ಮೋ. 18:10-12.

“ನಿಮಗೆ ಉತ್ತಮ ಆರೋಗ್ಯವಿರಲಿ!”

17. ನಮಗೆ ಯಾವ ಸಹಜ ಆಸೆ ಇದೆ?

17 ಮೊದಲನೇ ಶತಮಾನದಲ್ಲಿ ಆಡಳಿತ ಮಂಡಲಿ ಸಭೆಗಳಿಗೆ ಒಂದು ಪತ್ರ ಕಳುಹಿಸಿತು. ಅವರು ದೂರವಿಡಬೇಕಾದ ಕೆಲವೊಂದು ವಿಷಯಗಳ ಬಗ್ಗೆ ಅದರಲ್ಲಿತ್ತು. ಆ ಪತ್ರದ ಕೊನೆಯಲ್ಲಿ ಆಡಳಿತ ಮಂಡಲಿ ಹೀಗೆ ಬರೆಯಿತು: “ಜಾಗ್ರತೆವಹಿಸುತ್ತಾ ಈ ವಿಷಯಗಳಿಂದ ದೂರವಿರುವಲ್ಲಿ ನೀವು ಏಳಿಗೆ ಹೊಂದುವಿರಿ. ನಿಮಗೆ ಉತ್ತಮ ಆರೋಗ್ಯವಿರಲಿ!” (ಅ. ಕಾ. 15:29) ಈ ಕೊನೆ ಮೂರು ಪದಗಳು ವಿದಾಯ ಹೇಳುವ ಮಾತುಗಳಾಗಿದ್ದರೂ, ನಮಗೆ ಒಳ್ಳೇ ಆರೋಗ್ಯ ಇರಬೇಕೆಂದು ಬಯಸುವುದು ಸಹಜ ಎಂಬ ವಿಷಯವನ್ನು ನಮ್ಮ ನೆನಪಿಗೆ ತರುತ್ತದೆ.

ನಾವು ಆರೋಗ್ಯದಿಂದಿರಲು ಬಯಸುತ್ತೇವಾದರೂ ನಮ್ಮ ಹೆಚ್ಚಿನ ಗಮನವನ್ನು ಯೆಹೋವನ ಸೇವೆಗೆ ಕೊಡುತ್ತೇವೆ (ಪ್ಯಾರ 17 ನೋಡಿ)

18, 19. ಹೊಸ ಲೋಕದಲ್ಲಿ ನಾವು ಏನನ್ನು ಎದುರುನೋಡಬಹುದು?

18 ನಾವು ಅಪರಿಪೂರ್ಣರಾಗಿರುವುದರಿಂದ ಎಲ್ಲ ರೀತಿಯ ಅನಾರೋಗ್ಯದಿಂದ ದೂರವಿರಲು ಖಂಡಿತ ಸಾಧ್ಯವಿಲ್ಲ. ನಮಗೆ ಹುಷಾರಿಲ್ಲದಿರುವಾಗ ಯೆಹೋವನು ಅದ್ಭುತ ಮಾಡಿ ಗುಣಪಡಿಸುತ್ತಾನೆಂದು ನಾವು ನಿರೀಕ್ಷಿಸುವುದಿಲ್ಲ. ಆದರೆ ಆತನು ಭವಿಷ್ಯದಲ್ಲಿ ನಮ್ಮನ್ನು ಸಂಪೂರ್ಣವಾಗಿ ಗುಣಪಡಿಸಲಿದ್ದಾನೆಂದು ಎದುರುನೋಡಬಹುದು. ಪ್ರಕಟನೆ 22:1, 2 ರಲ್ಲಿ ಎಲ್ಲರನ್ನೂ ಗುಣಪಡಿಸುವ “ಜೀವಜಲ” ಮತ್ತು ‘ಜೀವವೃಕ್ಷಗಳ’ ಬಗ್ಗೆ ಅಪೊಸ್ತಲ ಯೋಹಾನ ಮಾತಾಡಿದನು. ಈಗ ಅಥವಾ ಹೊಸ ಲೋಕದಲ್ಲಿ ನಮ್ಮನ್ನು ಗುಣಪಡಿಸುವ ಗಿಡಮೂಲಿಕೆ ಚಿಕಿತ್ಸೆಯನ್ನು ಅದು ಸೂಚಿಸುತ್ತಿರಲಿಲ್ಲ. ಬದಲಿಗೆ ನಾವು ನಿತ್ಯಕ್ಕೂ ಬದುಕಲು ಸಾಧ್ಯವಾಗುವಂತೆ ಯೆಹೋವ ಮತ್ತು ಯೇಸು ಮಾಡುವ ಎಲ್ಲದಕ್ಕೂ ಅದು ಸೂಚಿಸುತ್ತದೆ.—ಯೆಶಾ. 35:5, 6.

19 ನಾವು ಆ ಸುಂದರ ಸಮಯವನ್ನು ಎದುರುನೋಡುತ್ತಿದ್ದೇವೆ. ಆದರೆ ಈಗ ನಮ್ಮಲ್ಲಿ ಒಬ್ಬೊಬ್ಬರನ್ನು ಯೆಹೋವನು ಪ್ರೀತಿಸುತ್ತಾನೆ ಮತ್ತು ನಾವು ಕಷ್ಟಪಡುವಾಗ ನಮಗೆ ಹೇಗನಿಸುತ್ತದೆಂದು ಅರ್ಥಮಾಡಿಕೊಳ್ಳುತ್ತಾನೆ ಎನ್ನುವುದರಲ್ಲಿ ನಮಗೆ ಕಿಂಚಿತ್ತೂ ಸಂಶಯವಿಲ್ಲ. ಹುಷಾರಿಲ್ಲದಿರುವಾಗ ಯೆಹೋವನು ನಮ್ಮನ್ನು ಯಾವತ್ತೂ ಕೈಬಿಡುವುದಿಲ್ಲ ಎಂಬ ಭರವಸೆ ದಾವೀದನಂತೆ ನಮಗೂ ಇದೆ. ಆತನಿಗೆ ನಂಬಿಗಸ್ತರಾಗಿರುವವರನ್ನು ಆತನು ಯಾವಾಗಲೂ ನೋಡಿಕೊಳ್ಳುತ್ತಾನೆ.—ಕೀರ್ತ. 41:12.

^ ಪ್ಯಾರ. 13 ದಿ ಒರಿಜಿನ್ಸ್‌ ಆ್ಯ ಏನ್ಷೆ೦ಟ್‌ ಹಿಸ್ಟರಿ ಆಫ್‌ ವೈನ್‌ ಹೇಳುವುದೇನೆಂದರೆ ಟೈಫಾಯ್ಡ ಮತ್ತು ಬೇರೆ ಅಪಾಯಕಾರಿ ಕ್ರಿಮಿಗಳನ್ನು ದ್ರಾಕ್ಷಾಮದ್ಯದಲ್ಲಿ ಬೆರೆಸಿದರೆ ಅವು ಸಾಯುತ್ತವೆಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

^ ಪ್ಯಾರ. 14 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.