ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಜೀವನ ಕಥೆ

ದೇವರ ಜೊತೆಗೂ ಅಮ್ಮನ ಜೊತೆಗೂ ಶಾಂತಿ ಸಂಬಂಧ

ದೇವರ ಜೊತೆಗೂ ಅಮ್ಮನ ಜೊತೆಗೂ ಶಾಂತಿ ಸಂಬಂಧ

“ನಿನ್ನ ಪೂರ್ವಜರನ್ನು ಆರಾಧನೆ ಮಾಡಲಿಕ್ಕೆ ನಿನಗೇನು ಕಷ್ಟ? ನಿನಗೆ ಜೀವ ಇರೋದೇ ಅವರಿಂದ ಅಂತ ಅರ್ಥವಾಗಲ್ವಾ? ಅವರ ಕಡೆಗೆ ಒಂಚೂರು ಕೃತಜ್ಞತೆ ಇಲ್ವಾ? ತಲೆಮಾರುಗಳಿಂದ ಪಾಲಿಸಿಕೊಂಡು ಬಂದಿರೋ ಪದ್ಧತಿಗಳನ್ನು ಅದ್ಹೇಗೆ ಬಿಟ್ಟುಬಿಡ್ತೀಯಾ? ಪೂರ್ವಜರಿಗೆ ಗೌರವ ತೋರಿಸದೇ ಇರೋದು, ನಮ್ಮದು ಮೂರ್ಖ ಆರಾಧನೆ ಅಂತ ಹೇಳೋದಕ್ಕೆ ಸಮ” ಎಂದು ಅಮ್ಮ ನನಗೆ ಹೇಳಿ ಅಳುವುದಕ್ಕೆ ಶುರುಮಾಡಿದರು.

ಹೀಗಾಗುವ ಕೆಲವೇ ತಿಂಗಳ ಮುಂಚೆ ಯೆಹೋವನ ಸಾಕ್ಷಿಗಳು ಅಮ್ಮನಿಗೆ ಬೈಬಲ್‌ ಅಧ್ಯಯನ ಏರ್ಪಾಡಿನ ಬಗ್ಗೆ ಹೇಳಿದ್ದರು. ಅವರಿಂದ ಬೈಬಲ್‌ ಬಗ್ಗೆ ಕಲಿಯಲು ಅಮ್ಮನಿಗೇನೂ ಇಷ್ಟ ಇರಲಿಲ್ಲ. ಹಾಗಾಗಿ ಸಾಕ್ಷಿಗಳು ನನಗೆ ಬೈಬಲ್‌ ಬಗ್ಗೆ ಕಲಿಸುವಂತೆ ಏರ್ಪಾಡು ಮಾಡಿ ನಯನಾಜೂಕಿನಿಂದ ಅಮ್ಮ ಜಾರಿಕೊಂಡರು. ನಾನು ಯಾವಾಗಲೂ ಅಮ್ಮನ ಮಾತು ಪಾಲಿಸುತ್ತಿದ್ದೆ. ಆದರೆ ಪೂರ್ವಜರ ಆರಾಧನೆ ಮಾಡುವಂತೆ ಅಮ್ಮ ಹೇಳಿದಾಗ ಅವರ ಮಾತು ಕೇಳಲಿಲ್ಲ. ಅಮ್ಮನಿಗೆ ಬೇಜಾರಾಯಿತು. ಯೆಹೋವನನ್ನು ಸಂತೋಷಪಡಿಸುವುದೇ ನನ್ನ ಬಯಕೆ ಆಗಿತ್ತು. ಅಮ್ಮನ ಮಾತು ಪಾಲಿಸದೇ ಇರುವುದು ಸುಲಭವಾಗಿರಲಿಲ್ಲ. ಆದರೆ ಯೆಹೋವನು ನನಗೆ ಬಲ ಕೊಟ್ಟನು.

ಯೆಹೋವನ ಬಗ್ಗೆ ಕಲಿಯಲು ಶುರುಮಾಡಿದೆ

ಜಪಾನಿನ ಅನೇಕರಂತೆ ನನ್ನ ಕುಟುಂಬದವರು ಬೌದ್ಧ ಧರ್ಮದವರು. ಯೆಹೋವನ ಸಾಕ್ಷಿಗಳು ನನ್ನ ಜೊತೆ ಅಧ್ಯಯನ ಶುರುಮಾಡಿ 2 ತಿಂಗಳು ಆಗುವಷ್ಟರಲ್ಲೇ ನನಗೆ ಬೈಬಲಿನಲ್ಲಿರುವುದೆಲ್ಲ ನಿಜ ಅಂತ ಮನದಟ್ಟಾಯಿತು. ಸ್ವರ್ಗದಲ್ಲಿರುವ ನಮ್ಮೆಲ್ಲರ ತಂದೆ ಬಗ್ಗೆ ನಾನು ಕಲಿತಾಗ ಆತನ ಬಗ್ಗೆ ಚೆನ್ನಾಗಿ ತಿಳಿಯಬೇಕೆಂದು ನನಗೆ ತುಂಬ ಆಸೆಯಾಯಿತು. ನಾನು ಕಲಿತ ವಿಷಯಗಳನ್ನು ಅಮ್ಮನ ಜೊತೆ ಚರ್ಚಿಸುತ್ತಿದ್ದಾಗ ತುಂಬ ಆನಂದಿಸುತ್ತಿದ್ದೆವು. ರಾಜ್ಯ ಸಭಾಗೃಹದಲ್ಲಿ ಭಾನುವಾರದ ಕೂಟಗಳನ್ನು ಹಾಜರಾಗಲು ಶುರುಮಾಡಿದೆ. ಹೆಚ್ಚನ್ನು ಕಲಿಯುತ್ತಾ ಹೋದಂತೆ ಬೌದ್ಧ ಸಂಸ್ಕಾರ, ಪದ್ಧತಿಗಳಲ್ಲಿ ಇನ್ಮು೦ದೆ ಪಾಲ್ಗೊಳ್ಳುವುದಿಲ್ಲ ಎಂದು ಅಮ್ಮನಿಗೆ ಹೇಳಿದೆ. ತಟ್ಟನೆ ಅಮ್ಮನ ಮನೋಭಾವ ಬದಲಾಯಿತು. “ಪೂರ್ವಜರ ಮೇಲೆ ಪ್ರೀತಿ ಇಲ್ಲದವರು ನಮ್ಮ ಕುಟುಂಬದಲ್ಲಿರುವುದು ದೊಡ್ಡ ಅವಮಾನ” ಎಂದು ಅಮ್ಮ ಹೇಳಿದರು. ನಾನು ಬೈಬಲ್‌ ಕಲಿಯುವುದನ್ನು, ಕೂಟಗಳಿಗೆ ಹೋಗುವುದನ್ನು ನಿಲ್ಲಿಸಬೇಕೆಂದು ಅಮ್ಮ ಒತ್ತಾಯಿಸಿದರು. ಅವರು ಹೀಗನ್ನುತ್ತಾರೆಂದು ನಾನು ಕನಸುಮನಸ್ಸಲ್ಲೂ ನೆನಸಿರಲಿಲ್ಲ. ಪೂರ್ತಿ ಬದಲಾಗಿಬಿಟ್ಟಿದ್ದರು!!

ಅಮ್ಮ ಹೇಳಿದ್ದಕ್ಕೆಲ್ಲ ಅಪ್ಪನ ಒಪ್ಪಿಗೆಯೂ ಇತ್ತು. ನಾನು ಹೆತ್ತವರಿಗೆ ವಿಧೇಯತೆ ತೋರಿಸುವುದನ್ನು ಯೆಹೋವನು ಬಯಸುತ್ತಾನೆಂದು ಎಫೆಸ ಅಧ್ಯಾಯ 6ರಲ್ಲಿ ಕಲಿತಿದ್ದೆ. ಮೊದಲಿದ್ದ ಹಾಗೆಯೇ ನಮ್ಮ ಕುಟುಂಬದಲ್ಲಿ ಶಾಂತಿ ಇರಬೇಕೆಂದು ಬಯಸಿ ಅವರ ಮಾತು ಕೇಳಿದೆ. ಹೀಗೆ ಮಾಡಿದರೆ ಅವರೂ ನನ್ನ ಮಾತು ಕೇಳುತ್ತಾರೆ ಅಂದುಕೊಂಡೆ. ಆ ಸಮಯದಲ್ಲಿ ನನ್ನ ಶಾಲಾ ಪರೀಕ್ಷೆಗಳಿಗೆ ತಯಾರಿ ಮಾಡಬೇಕಿದ್ದರಿಂದ ಮೂರು ತಿಂಗಳ ವರೆಗೆ ನಾನು ಕೂಟಗಳಿಗೆ ಹೋಗುವುದಿಲ್ಲ ಎಂದು ಒಪ್ಪಿಕೊಂಡೆ. ಮೂರು ತಿಂಗಳ ನಂತರ ಪುನಃ ಕೂಟಗಳಿಗೆ ಹಾಜರಾಗುತ್ತೇನೆಂದು ಯೆಹೋವನಿಗೆ ಮಾತು ಕೊಟ್ಟೆ.

ಆದರೆ ನನ್ನ ಆ ನಿರ್ಣಯ ಎರಡು ಕಾರಣಗಳಿಗೆ ತಪ್ಪಾಗಿತ್ತು. ಮೊದಲನೆಯದು, ಯೆಹೋವನ ಸೇವೆ ಮಾಡಬೇಕೆಂಬ ನನ್ನ ಬಲವಾದ ಆಸೆಗೆ 3 ತಿಂಗಳಲ್ಲಿ ಏನೂ ಆಗಲ್ಲ ಅಂದುಕೊಂಡೆ.  ಆದರೆ ಆದದ್ದೇ ಬೇರೆ. ಆತನೊಟ್ಟಿಗೆ ನನಗಿದ್ದ ಸಂಬಂಧ ಬೇಗ ದುರ್ಬಲವಾಯಿತು. ಎರಡನೆಯದು, ಹೇಗಾದರೂ ಮಾಡಿ ನಾನು ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸುವಂತೆ ಅಪ್ಪಅಮ್ಮ ಮಾಡುತ್ತಿದ್ದ ಪ್ರಯತ್ನವನ್ನು ಹೆಚ್ಚಿಸಿದರು.

ಸಹಾಯ ಮತ್ತು ವಿರೋಧ

ಕುಟುಂಬಗಳಿಂದ ವಿರೋಧ ಎದುರಿಸುತ್ತಿದ್ದ ಅನೇಕ ಸಾಕ್ಷಿಗಳನ್ನು ರಾಜ್ಯ ಸಭಾಗೃಹದಲ್ಲಿ ಭೇಟಿಯಾಗಿದ್ದೆ. ಯೆಹೋವನು ಖಂಡಿತ ಬಲ ಕೊಡುತ್ತಾನೆಂದು ಅವರು ನನ್ನಲ್ಲಿ ಧೈರ್ಯ ತುಂಬಿಸಿದ್ದರು. (ಮತ್ತಾ. 10:34-37) ನಾನು ನಂಬಿಗಸ್ತಳಾಗಿ ಉಳಿದರೆ ನನ್ನ ಕುಟುಂಬದವರು ಸಹ ಯೆಹೋವನ ಬಗ್ಗೆ ಕಲಿಯಬಹುದೆಂದು ಅವರು ನನಗೆ ವಿವರಿಸಿದರು. ಯೆಹೋವನ ಮೇಲೆ ಆತುಕೊಳ್ಳಬೇಕೆಂಬ ಬಯಕೆ ನನಗಿತ್ತು. ಹಾಗಾಗಿ ನಾನು ತುಂಬ ಶ್ರದ್ಧೆಯಿಂದ ಪ್ರಾರ್ಥಿಸಲು ಶುರುಮಾಡಿದೆ.

ನನ್ನ ಕುಟುಂಬ ಅನೇಕ ವಿಧಗಳಲ್ಲಿ ನನ್ನನ್ನು ವಿರೋಧಿಸಿತು. ಬೈಬಲ್‌ ಕಲಿಯುವುದನ್ನು ನಿಲ್ಲಿಸಲು ಅಮ್ಮ ಬೇಡಿಕೊಂಡರು. ತುಂಬ ಕಾರಣಕೊಟ್ಟು ನನಗೆ ಅರ್ಥಮಾಡಿಸಲಿಕ್ಕೆ ಪ್ರಯತ್ನಿಸಿದರು. ತುಂಬ ಸಲ ನಾನು ಏನೂ ಮಾತಾಡದೇ ಸುಮ್ಮನಿರುತ್ತಿದ್ದೆ, ಏನಾದರೂ ಬಾಯಿಬಿಟ್ಟರೆ ಜಗಳವೇ ಆಗುತ್ತಿತ್ತು. ಏಕೆಂದರೆ ನಾವಿಬ್ಬರೂ ನಮ್ಮನಮ್ಮ ಮಾತೇ ಸರಿ ಎಂದು ಸಾಬೀತುಪಡಿಸಲು ಶುರುಮಾಡುತ್ತಿದ್ದೆವು. ಅಮ್ಮನ ಭಾವನೆಗಳು ಮತ್ತು ನಂಬಿಕೆಗಳ ಬಗ್ಗೆ ನನಗೆ ಸ್ವಲ್ಪ ಹೆಚ್ಚು ಗೌರವ ಇದ್ದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ ಎಂದು ಈಗ ಅನಿಸುತ್ತದೆ. ನಾನು ಮನೆಯಲ್ಲೇ ಇರಬೇಕೆಂದು ಅಪ್ಪಅಮ್ಮ ನನಗೆ ತುಂಬ ಮನೆಗೆಲಸ ಕೊಡುತ್ತಿದ್ದರು. ಕೆಲವೊಂದು ಸಮಯದಲ್ಲಿ ನನ್ನನ್ನು ಮನೆಯಿಂದ ಹೊರಗೆ ಹಾಕುತ್ತಿದ್ದರು. ಅಥವಾ ನನಗೇನೂ ಊಟ ಉಳಿಸದೆ ಎಲ್ಲವನ್ನೂ ಮುಗಿಸುತ್ತಿದ್ದರು.

ನನ್ನ ಮನವೊಪ್ಪಿಸಲು ಅಮ್ಮ ಬೇರೆಯವರ ಸಹಾಯ ಪಡೆದರು. ನನ್ನ ಶಿಕ್ಷಕನ ಹತ್ತಿರ ಇದರ ಬಗ್ಗೆ ಮಾತಾಡಿದರು. ಆದರೆ ಅದರಿಂದ ಪ್ರಯೋಜನವಾಗಲಿಲ್ಲ. ನಂತರ ಅಮ್ಮ ಅವರ ಮ್ಯಾನೇಜರ್‌ ಹತ್ತಿರ ನನ್ನನ್ನು ಕರಕೊಂಡು ಹೋದರು. ಯಾವ ಧರ್ಮದಿಂದಲೂ ಪ್ರಯೋಜನವಿಲ್ಲ ಎಂದು ನನಗವರು ಮನಗಾಣಿಸಲು ಪ್ರಯತ್ನಿಸಿದರು. ಅಮ್ಮ ಸಂಬಂಧಿಕರಿಗೆಲ್ಲ ಫೋನ್‌ ಮಾಡಿ, ಅತ್ತೂಕರೆದು ಸಹಾಯಕ್ಕಾಗಿ ಬೇಡಿಕೊಂಡರು. ಇದರಿಂದ ನನಗೆ ತುಂಬ ಬೇಜಾರಾಯಿತು. ಆದರೆ ಅಮ್ಮ ಈ ಪರಿಸ್ಥಿತಿ ಬಗ್ಗೆ ಬೇರೆಯವರ ಹತ್ತಿರ ಮಾತಾಡಿದಾಗಲೆಲ್ಲ ಒಂದು ರೀತಿಯಲ್ಲಿ ಸಾಕ್ಷಿಕೊಡುತ್ತಿದ್ದಾರೆ ಎಂಬ ವಿಷಯವನ್ನು ನಾನು ಕೂಟಗಳಿಗೆ ಹೋದಾಗ ಹಿರಿಯರು ನನ್ನ ನೆನಪಿಗೆ ತಂದರು.

 ನಾನು ವಿಶ್ವವಿದ್ಯಾನಿಲಯದಲ್ಲಿ ಓದಿ ಮುಂದಕ್ಕೆ ಒಳ್ಳೇ ಕೆಲಸಕ್ಕೆ ಹೋಗಬೇಕೆಂದು ಅಪ್ಪಅಮ್ಮನಿಗೆ ತುಂಬ ಆಸೆಯಿತ್ತು. ಈ ವಿಷಯವನ್ನು ಸಮಾಧಾನದಿಂದ ಮಾತಾಡಲು ನಮಗೆಲ್ಲರಿಗೂ ಕಷ್ಟವಾಗುತ್ತಿತ್ತು. ಹಾಗಾಗಿ ನಾನು ಪತ್ರಗಳ ಮೂಲಕ ನನ್ನ ಗುರಿಗಳ ಬಗ್ಗೆ ವಿವರಿಸಿದೆ. ಅಪ್ಪನಿಗೆ ತುಂಬ ಕೋಪ ಬಂದು ಹೀಗಂದರು: “ನಾಳೆ ವರೆಗೂ ನಿನಗೆ ಸಮಯ ಕೊಡ್ತೇನೆ. ಅಷ್ಟರಲ್ಲಿ ಒಂದು ಕೆಲಸ ಹುಡುಕು. ಸಿಗಲಿಲ್ಲಾಂದರೆ ಮನೆಬಿಟ್ಟು ಹೋಗುತ್ತಾ ಇರು.” ಸಹಾಯಕ್ಕಾಗಿ ಯೆಹೋವನ ಹತ್ತಿರ ಪ್ರಾರ್ಥನೆ ಮಾಡಿದೆ. ಮಾರನೇ ದಿನ ಸೇವೆಗೆ ಹೋದಾಗ ಇಬ್ಬರು ಸಹೋದರಿಯರು ಅವರ ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸವನ್ನು ನನಗೆ ಕೊಟ್ಟರು. ಇದರಿಂದ ಅಪ್ಪನಿಗೆ ಖುಷಿಯಾಗಲಿಲ್ಲ. ನನ್ನ ಹತ್ತಿರ ಮಾತಾಡುವುದೇ ಬಿಟ್ಟುಬಿಟ್ಟರು. ಅಲಕ್ಷಿಸಲೂ ಶುರುಮಾಡಿದರು. ಯೆಹೋವನ ಸಾಕ್ಷಿ ಆಗಿರುವುದಕ್ಕಿಂತ ನಾನು ಅಪರಾಧಿ ಆಗಿರುತ್ತಿದ್ದರೆ ಚೆನ್ನಾಗಿರುತ್ತಿತ್ತೆಂದು ಅಮ್ಮ ಹೇಳಿದರು.

ನನ್ನ ಯೋಚನಾರೀತಿಯನ್ನು ತಿದ್ದಲು ಮತ್ತು ಏನು ಮಾಡಬೇಕೆಂದು ತಿಳಿಯಲು ಯೆಹೋವ ನನಗೆ ಸಹಾಯಮಾಡಿದ್ದಾನೆ

ಇಷ್ಟರ ಮಟ್ಟಿಗೆ ನಾನು ನನ್ನ ಹೆತ್ತವರ ವಿರುದ್ಧ ಹೋಗಬೇಕು ಅಂತ ಯೆಹೋವನು ಬಯಸುತ್ತಾನಾ ಎಂದು ನಾನು ಕೆಲವೊಮ್ಮೆ ಯೋಚಿಸುತ್ತಿದ್ದೆ. ಹಾಗಾಗಿ ನಾನು ಯೆಹೋವನಿಗೆ ಪ್ರಾರ್ಥನೆ ಮಾಡಿದೆ. ಆತನ ಪ್ರೀತಿಯ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎನ್ನುವುದರ ಕುರಿತು ಧ್ಯಾನಿಸಿದೆ. ಇದು ನನಗೆ ಹೆಚ್ಚು ಸಕಾರಾತ್ಮಕವಾಗಿ ಯೋಚಿಸಲು ಮತ್ತು ಅಪ್ಪಅಮ್ಮ ನನ್ನನ್ನು ವಿರೋಧಿಸಿದ್ದು ನನ್ನ ಬಗ್ಗೆ ಚಿಂತೆ ಇದ್ದದರಿಂದಲೇ ಎಂದು ಅರ್ಥಮಾಡಿಕೊಳ್ಳಲು ಸಹಾಯಮಾಡಿತು. ನನ್ನ ಯೋಚನಾ ರೀತಿಯನ್ನು ತಿದ್ದಲು ಮತ್ತು ಏನು ಮಾಡಬೇಕೆಂದು ತಿಳಿಯಲು ಯೆಹೋವನು ಸಹಾಯಮಾಡಿದನು. ಜೊತೆಗೆ ಎಷ್ಟು ಹೆಚ್ಚಾಗಿ ಸೇವೆಗೆ ಹೋದೆನೊ ಅಷ್ಟು ಹೆಚ್ಚಾಗಿ ನಾನದನ್ನು ಆನಂದಿಸಿದೆ. ನನಗೆ ನಿಜವಾಗಲೂ ಪಯನೀಯರ್‌ ಆಗುವ ಆಸೆ ಇತ್ತು.

ನನ್ನ ಪಯನೀಯರ್‌ ಸೇವೆ

ಪಯನೀಯರ್‌ ಸೇವೆ ಮಾಡಬೇಕೆಂಬ ನನ್ನ ಆಸೆ ಬಗ್ಗೆ ಕೆಲವು ಸಹೋದರಿಯರಿಗೆ ಗೊತ್ತಾದಾಗ ಅಪ್ಪಅಮ್ಮನ ಕೋಪ ಕಡಿಮೆಯಾಗುವ ವರೆಗೆ ಕಾಯುವಂತೆ ಹೇಳಿದರು. ನಾನು ವಿವೇಕಕ್ಕಾಗಿ ಪ್ರಾರ್ಥಿಸಿದೆ, ಸಂಶೋಧನೆ ಮಾಡಿದೆ, ಯಾಕೆ ಪಯನೀಯರ್‌ ಆಗಬೇಕೆಂದಿದ್ದೇನೆ ಎಂಬ ಕಾರಣಗಳ ಬಗ್ಗೆ ಯೋಚಿಸಿದೆ, ಅನುಭವಸ್ಥ ಸಹೋದರ ಸಹೋದರಿಯರ ಜೊತೆ ಮಾತಾಡಿದೆ. ಯೆಹೋವನನ್ನು ಸಂತೋಷಪಡಿಸುವ ತೀರ್ಮಾನ ಮಾಡಿಯೇ ಬಿಟ್ಟೆ. ಪಯನೀಯರ್‌ ಸೇವೆಮಾಡಲು ಇನ್ನೂ ಸ್ವಲ್ಪ ಸಮಯ ಕಾದರೂ ಅಪ್ಪಅಮ್ಮನ ವಿರೋಧವೇನೂ ನಿಂತುಹೋಗುವುದಿಲ್ಲ ಎಂದು ನನಗೆ ಅರ್ಥವಾಯಿತು.

ಹೈಸ್ಕೂಲಿನ ಕೊನೆ ವರ್ಷದಲ್ಲಿದ್ದಾಗ ಪಯನೀಯರ್‌ ಸೇವೆ ಶುರುಮಾಡಿದೆ. ಸ್ವಲ್ಪ ಸಮಯದ ನಂತರ, ಪ್ರಚಾರಕರ ಅಗತ್ಯ ಹೆಚ್ಚಿರುವ ಕಡೆ ಹೋಗಿ ಸೇವೆಮಾಡಬೇಕೆಂದಿದ್ದೆ. ಆದರೆ ನಾನು ಮನೆಬಿಟ್ಟು ಹೋಗುವುದು ಅಪ್ಪಅಮ್ಮನಿಗೆ ಇಷ್ಟವಿರಲಿಲ್ಲ. ಹಾಗಾಗಿ ನನಗೆ 20 ವರ್ಷ ಆಗುವ ವರೆಗೆ ಕಾದೆ. ದಕ್ಷಿಣ ಜಪಾನಿನಲ್ಲಿ ನನ್ನ ಸಂಬಂಧಿಕರಿದ್ದರು. ಅಲ್ಲೇ ನನಗೆ ನೇಮಕ ಕೊಡುವಂತೆ ಬ್ರಾಂಚ್‌ ಆಫೀಸಿಗೆ ಕೇಳಿಕೊಂಡೆ. ಹೀಗೆ ಅಮ್ಮನಿಗೆ ನನ್ನ ಬಗ್ಗೆ ಚಿಂತೆ ಸ್ವಲ್ಪ ಕಡಿಮೆಯಾಗುತ್ತಿತ್ತು.

ಈ ನೇಮಕದಲ್ಲಿ ನನ್ನ ಅನೇಕ ಬೈಬಲ್‌ ವಿದ್ಯಾರ್ಥಿಗಳು ದೀಕ್ಷಾಸ್ನಾನ ಪಡೆದದ್ದು ನೋಡಿ ನನಗೆ ತುಂಬ ಖುಷಿಯಾಯಿತು. ಸೇವೆಯಲ್ಲಿ ಇನ್ನು ಹೆಚ್ಚನ್ನು ಮಾಡಲು ಸಾಧ್ಯವಾಗುವಂತೆ ಇಂಗ್ಲಿಷ್‌ ಕಲಿಯಲು ಶುರುಮಾಡಿದೆ. ನಂತರ ನನ್ನ ಸಭೆಯಲ್ಲಿದ್ದ ಇಬ್ಬರು ವಿಶೇಷ ಪಯನೀಯರರ ಹುರುಪು ಮತ್ತು ಅವರು ಬೇರೆಯವರಿಗೆ ಸಹಾಯಮಾಡಿದ ರೀತಿ ನೋಡಿ ನಾನೂ ವಿಶೇಷ ಪಯನೀಯರಳು ಆಗಬೇಕೆಂಬ ಗುರಿ ಇಟ್ಟೆ. ಈ ಸಮಯದಲ್ಲೇ ಅಮ್ಮ ಎರಡು ಸಲ ತುಂಬಾನೇ ಹುಷಾರು ತಪ್ಪಿದರು. ಈ ಎರಡೂ ಸಲ ನಾನು ಮನೆಗೆ ವಾಪಸ್‌ ಹೋಗಿ ಅಮ್ಮನಿಗೆ ಸಹಾಯ ಮಾಡಿದೆ. ಅವರಿಗೆ ತುಂಬ ಆಶ್ಚರ್ಯವಾಯಿತು. ಆವತ್ತಿನಿಂದ ನನ್ನೊಟ್ಟಿಗೆ ಹೆಚ್ಚು ದಯೆಯಿಂದ ನಡೆದುಕೊಳ್ಳಲು ಶುರುಮಾಡಿದರು.

ಯೆಹೋವನಿಂದ ಅನೇಕ ಆಶೀರ್ವಾದಗಳು

ಏಳು ವರ್ಷಗಳ ನಂತರ, ನಾನು ಈ ಮುಂಚೆ ತಿಳಿಸಿದ್ದ ವಿಶೇಷ ಪಯನೀಯರರಲ್ಲಿ ಒಬ್ಬರಾದ ಸಹೋದರ ಅಟ್ಸುಶಿ ಎಂಬವರು ನನಗೊಂದು ಪತ್ರ ಬರೆದರು. ಅವರಿಗೆ ನನ್ನನ್ನು ಮದುವೆಯಾಗಲು ಮನಸ್ಸಿತ್ತು. ಹಾಗಾಗಿ ಅವರ ಬಗ್ಗೆ ನನ್ನ ಅಭಿಪ್ರಾಯವೇನೆಂದು ತಿಳಿಯಲು ಅವರಿಗೆ ಆಸಕ್ತಿಯಿತ್ತು. ಆದರೆ ನನಗೆ ಅವರ ಬಗ್ಗೆ ಯಾವತ್ತೂ ಪ್ರೇಮದ ಭಾವನೆಗಳಿರಲಿಲ್ಲ, ಅವರಿಗೂ ನನ್ನ ಮೇಲೆ ಅಂಥ ಭಾವನೆಗಳಿವೆ ಅಂತ ಅಂದುಕೊಂಡಿರಲಿಲ್ಲ. ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಷ್ಟಪಡುತ್ತೇನೆಂದು ಒಂದು ತಿಂಗಳ ನಂತರ ಪತ್ರ ಬರೆದೆ. ನಮ್ಮಿಬ್ಬರಿಗೂ ಒಂದೇ ರೀತಿಯ ಗುರಿಗಳು ಇತ್ತೆಂದು ನಮಗೆ ಆಗ ಗೊತ್ತಾಯಿತು. ಪೂರ್ಣ ಸಮಯ ಸೇವೆಯಲ್ಲಿ ಮುಂದುವರಿಯಲು ಮತ್ತು ಯಾವುದೇ ನೇಮಕವನ್ನು ಸ್ವೀಕರಿಸಲು ಸಿದ್ಧರಿದ್ದೆವು. ಸ್ವಲ್ಪ ಸಮಯ ನಂತರ ನಮ್ಮ ಮದುವೆಯಾಯಿತು. ಅಪ್ಪಅಮ್ಮ ಮತ್ತು ನಮ್ಮ ಬೇರೆ ಸಂಬಂಧಿಕರು ನಮ್ಮ ಮದುವೆಗೆ ಬಂದದ್ದಕ್ಕೆ ನನಗೆ ತುಂಬ ಖುಷಿಯಾಯಿತು.

ನೇಪಾಳ

ನಂತರ ನಾವು ರೆಗ್ಯುಲರ್‌ ಪಯನೀಯರರಾಗಿ ಸೇವೆಮಾಡುತ್ತಿರುವಾಗ ಅಟ್ಸುಶಿಗೆ ಬದಲಿ ಸರ್ಕಿಟ್‌ ಮೇಲ್ವಿಚಾರಕರಾಗಿ  ನೇಮಕ ಸಿಕ್ಕಿತು. ಸ್ವಲ್ಪದರಲ್ಲೇ ನಮಗೆ ಇನ್ನೊಂದು ಆಶೀರ್ವಾದ ಸಿಕ್ಕಿತು. ನಮ್ಮನ್ನು ವಿಶೇಷ ಪಯನೀಯರರಾಗಿ ಮತ್ತು ಮುಂದಕ್ಕೆ ಕ್ರಮದ ಸರ್ಕಿಟ್‌ ಕೆಲಸಕ್ಕೆ ನೇಮಿಸಲಾಯಿತು. ನಮ್ಮ ಸರ್ಕಿಟ್‍ನಲ್ಲಿದ್ದ ಎಲ್ಲಾ ಸಭೆಗಳನ್ನು ಮೊದಲನೇ ಬಾರಿ ಭೇಟಿಮಾಡಿ ಮುಗಿಸಿದಾಗ ಬ್ರಾಂಚ್‌ ಆಫೀಸ್‍ನಿಂದ ಒಂದು ಫೋನ್‌ ಕರೆ ಬಂತು. ನೇಪಾಳಕ್ಕೆ ಹೋಗಿ ಸರ್ಕಿಟ್‌ ಕೆಲಸ ಮುಂದುವರಿಸಲು ಸಿದ್ಧರಿದ್ದೀರಾ ಎಂದು ಕೇಳಿದರು.

ಅನೇಕ ದೇಶಗಳಲ್ಲಿ ಸೇವೆಮಾಡಿದ್ದು ನನಗೆ ಯೆಹೋವನ ಬಗ್ಗೆ ಬಹಳಷ್ಟನ್ನು ಕಲಿಸಿದೆ

ನಾನು ಅಷ್ಟು ದೂರ ಹೋಗುವುದರ ಬಗ್ಗೆ ಅಪ್ಪಅಮ್ಮನಿಗೆ ಹೇಗನಿಸುತ್ತದೆ ಅಂತ ನನಗೆ ಚಿಂತೆ ಆಯಿತು. ಇದರ ಬಗ್ಗೆ ತಿಳಿಸಲು ನಾನು ಅವರಿಗೆ ಫೋನ್‌ ಮಾಡಿದಾಗ “ನೀನೊಂದು ಒಳ್ಳೇ ಜಾಗಕ್ಕೆ ಹೋಗುತ್ತಿದ್ದೀಯಾ” ಅಂತ ಅಪ್ಪ ಹೇಳಿದರು. ಯಾಕೆ ಹೀಗಂದರೆಂದರೆ, ಒಂದು ವಾರದ ಹಿಂದೆಯೇ ಅವರ ಸ್ನೇಹಿತರೊಬ್ಬರು ನೇಪಾಳದ ಬಗ್ಗೆ ಒಂದು ಪುಸ್ತಕ ಅವರಿಗೆ ಕೊಟ್ಟಿದ್ದರು. ಒಂದು ಸಲ ಅಲ್ಲಿಗೆ ಹೋಗಿ ಬರಬೇಕು ಅಂತನೂ ಅಪ್ಪ ಯೋಚಿಸಿದ್ದರು.

ನೇಪಾಳದ ಜನರು ಸ್ನೇಹಭಾವದವರು. ಅವರ ಮಧ್ಯೆ ಇರಲು ನಮಗೆ ತುಂಬ ಖುಷಿ ಅನಿಸಿತು. ನಂತರ ಬಾಂಗ್ಲಾದೇಶವನ್ನೂ ನಮ್ಮ ಸರ್ಕಿಟಿಗೆ ಸೇರಿಸಲಾಯಿತು. ಅದು ನೇಪಾಳಕ್ಕೆ ಹತ್ತಿರವಿದ್ದರೂ ತುಂಬ ಭಿನ್ನವಾಗಿತ್ತು. ನಮ್ಮ ಸೇವಾ ಕ್ಷೇತ್ರದಲ್ಲಿ ವೈವಿಧ್ಯತೆ ಇತ್ತು. ಐದು ವರ್ಷಗಳ ನಂತರ ಪುನಃ ನಮ್ಮನ್ನು ಜಪಾನಿಗೆ ನೇಮಿಸಲಾಯಿತು. ಈಗ ನಾವು ಇಲ್ಲಿ ಸರ್ಕಿಟ್‌ ಕೆಲಸ ಆನಂದಿಸುತ್ತಿದ್ದೇವೆ.

ಜಪಾನ್‌, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಸೇವೆಮಾಡಿದಾಗ ಯೆಹೋವನ ಬಗ್ಗೆ ನಾನು ತುಂಬ ಕಲಿತೆ. ಈ ದೇಶಗಳಲ್ಲಿರುವ ಜನರಿಗೆ ಬೇರೆಬೇರೆ ಸಂಸ್ಕೃತಿಗಳು, ರೀತಿ-ರಿವಾಜುಗಳು, ರೂಢಿಗಳಿವೆ. ಪ್ರತಿಯೊಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗಿಂತ ಭಿನ್ನ. ಯೆಹೋವನು ಒಬ್ಬೊಬ್ಬರ ಬಗ್ಗೆಯೂ ಹೇಗೆ ಕಾಳಜಿ ತೋರಿಸಿ, ಅವರನ್ನು ಸ್ವೀಕರಿಸಿ, ಅವರಿಗೆ ಸಹಾಯಮಾಡಿ ಆಶೀರ್ವದಿಸುತ್ತಾನೆಂದು ನೋಡಿದ್ದೇನೆ.

ಯೆಹೋವನಿಗೆ ಧನ್ಯವಾದ ಹೇಳಲು ನನಗೆ ಅನೇಕ ಕಾರಣಗಳಿವೆ. ಆತನ ಬಗ್ಗೆ ತಿಳಿದುಕೊಳ್ಳಲು, ಆತನ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟಿದ್ದಾನೆ. ಆತನು ನನಗೊಬ್ಬ ಉತ್ತಮ ಕ್ರೈಸ್ತ ಗಂಡನನ್ನು ಕೊಟ್ಟಿದ್ದಾನೆ. ಒಳ್ಳೇ ನಿರ್ಣಯಗಳನ್ನು ಮಾಡಲು ದೇವರು ಸಹಾಯಮಾಡಿದ್ದಾನೆ. ಈಗ ನನಗೆ ಆತನೊಟ್ಟಿಗೆ ಮತ್ತು ನನ್ನ ಕುಟುಂಬದೊಟ್ಟಿಗೆ ಒಂದು ಒಳ್ಳೇ ಸಂಬಂಧವಿದೆ. ಯೆಹೋವನಿಂದಾಗಿ ನಾನು ಮತ್ತು ಅಮ್ಮ ಪುನಃ ಒಳ್ಳೇ ಸ್ನೇಹಿತರಾಗಿದ್ದೇವೆ. ದೇವರ ಜೊತೆ ಮತ್ತು ಅಮ್ಮನ ಜೊತೆ ಶಾಂತಿಯ ಸಂಬಂಧ ಇರುವುದಕ್ಕೆ ತುಂಬು ಹೃದಯದ ಕೃತಜ್ಞತೆ!

ಸರ್ಕಿಟ್‌ ಕೆಲಸದಲ್ಲಿ ತುಂಬ ಆನಂದಿಸುತ್ತಿದ್ದೇವೆ