ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸಮೀಪಕ್ಕೆ ಬಂದದ್ದರಿಂದ ನನಗೆ ಒಳ್ಳೇದಾಗಿದೆ

ದೇವರ ಸಮೀಪಕ್ಕೆ ಬಂದದ್ದರಿಂದ ನನಗೆ ಒಳ್ಳೇದಾಗಿದೆ

ನನಗೆ 9 ವರ್ಷವಿದ್ದಾಗ ನನ್ನ ಬೆಳವಣಿಗೆ ನಿಂತು ಹೋಯಿತು. ಈಗ ನನಗೆ 43 ವರ್ಷ. ನನ್ನ ಎತ್ತರ ಬರೀ ಒಂದು ಮೀಟರ್‌ (3 ಅಡಿ). ನಾನು ಇನ್ನು ಎತ್ತರ ಬೆಳೆಯುವುದಿಲ್ಲ ಎಂದು ಅಪ್ಪಅಮ್ಮನಿಗೆ ಗೊತ್ತಾದಾಗ ಅದರ ಬಗ್ಗೆಯೇ ತಲೆಕೆಡಿಸಿಕೊಳ್ಳದಂತೆ ಅವರು ನನಗೊಂದು ಸಲಹೆ ಕೊಟ್ಟರು. ಕೆಲಸದಲ್ಲಿ ಮುಳುಗಿರುವಂತೆ ಪ್ರೋತ್ಸಾಹಿಸಿದರು. ಹಾಗಾಗಿ ನಾನು ಮನೆಯ ಮುಂದೆ ಹಣ್ಣುಗಳ ಅಂಗಡಿಯನ್ನು ತೆರೆದೆ. ಹಣ್ಣುಗಳನ್ನೆಲ್ಲಾ ಚೆನ್ನಾಗಿ ಜೋಡಿಸಿಡುತ್ತಿದ್ದೆ. ಇದರಿಂದ ಆಕರ್ಷಿತರಾಗಿ ಅನೇಕ ಗಿರಾಕಿಗಳು ಬರುತ್ತಿದ್ದರು.

ಶ್ರಮಪಟ್ಟು ಕೆಲಸ ಮಾಡಿದ್ದರಿಂದ ಎಲ್ಲಾ ವಿಷಯಗಳೇನು ಬದಲಾಗಲಿಲ್ಲ. ನಾನು ಕುಳ್ಳಿಯೇ ಆಗಿದ್ದೆ. ಜೀವನದಲ್ಲಿ ಚಿಕ್ಕಪುಟ್ಟ ವಿಷಯಕ್ಕೆಲ್ಲಾ ಕಷ್ಟಪಡಬೇಕಿತ್ತು. ಉದಾಹರಣೆಗೆ ಅಂಗಡಿಗಳಲ್ಲಿನ ಕೌಂಟರ್‌ಗಳ ಎತ್ತರ. ಎಲ್ಲಿ ಹೋದರೂ ಯಾವುದನ್ನು ನೋಡಿದರೂ ಎಲ್ಲವೂ ನನಗಿಂತ ಎರಡು ಪಟ್ಟು ಹೆಚ್ಚು ಎತ್ತರವಿದ್ದ ಜನರನ್ನು ಮನಸ್ಸಲ್ಲಿಟ್ಟು ಮಾಡಿರುವಂತಿತ್ತು. ನನ್ನ ಬಗ್ಗೆ ನನಗೇ ಪಾಪ ಅನಿಸುತ್ತಿತ್ತು. ಆದರೆ ಹೀಗೆ ಅನಿಸುತ್ತಾ ಇದ್ದದ್ದು ನನಗೆ 14 ವರ್ಷದ ತನಕ ಮಾತ್ರ.

ಒಂದು ದಿನ ಯೆಹೋವನ ಸಾಕ್ಷಿಗಳಾದ ಇಬ್ಬರು ಸ್ತ್ರೀಯರು ನನ್ನ ಅಂಗಡಿಗೆ ಬಂದರು. ಮೊದಲು ಹಣ್ಣುಗಳನ್ನು ಖರೀದಿಸಿದರು. ನಂತರ ಬೈಬಲ್‌ ಅಧ್ಯಯನದ ಬಗ್ಗೆ ಹೇಳಿದರು. ನನ್ನ ಎತ್ತರದ ಬಗ್ಗೆ ಚಿಂತೆ ಮಾಡುವುದಕ್ಕಿಂತ ಯೆಹೋವನ ಮತ್ತು ಆತನ ಉದ್ದೇಶಗಳ ಬಗ್ಗೆ ತಿಳಿಯುವುದೇ ಹೆಚ್ಚು ಪ್ರಾಮುಖ್ಯ ಎಂದು ನನಗೆ ಅರಿವಾಯಿತು. ಇದು ನನಗೆ ತುಂಬ ಸಹಾಯ ಮಾಡಿತು. ಕೀರ್ತನೆ 73:28 ನನಗೆ ತುಂಬ ಇಷ್ಟದ ವಚನವಾಯಿತು. ಅದರ ಮೊದಲ ಭಾಗ ಹೀಗನ್ನುತ್ತದೆ: “ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದಾಗಿದೆ.” (ಪವಿತ್ರ ಗ್ರಂಥ ಭಾಷಾಂತರ)

ಇದ್ದಕ್ಕಿದ್ದಂತೆ ನಮ್ಮ ಕುಟುಂಬ ಐವರಿ ಕೋಸ್ಟ್‌ನಿಂದ ಬುರ್ಕಿನಾ ಫಾಸೊಗೆ ಸ್ಥಳಾಂತರ ಮಾಡಬೇಕಾಯಿತು. ನನ್ನ ಬದುಕು ತುಂಬ ಬದಲಾಯಿತು. ನಮ್ಮ ಹಳೇ ಮನೆಯ ಹತ್ತಿರ ಇದ್ದ ಜನರಿಗೆ ಹಣ್ಣಿನ ಅಂಗಡಿಯಲ್ಲಿದ್ದ ನನ್ನನ್ನು ನೋಡಿ ರೂಢಿಯಾಗಿತ್ತು. ಆದರೆ ಈಗ ಈ ಹೊಸ ಊರಿನಲ್ಲಿ ನಾನು ಎಲ್ಲರಿಗೂ ಅಪರಿಚಿತಳು. ಅನೇಕರಿಗೆ ನಾನು ವಿಚಿತ್ರವಾಗಿ ಕಾಣುತ್ತಿದ್ದೆ. ಅವರು ನನ್ನನ್ನು ದುರುಗುಟ್ಟಿ ನೋಡುತ್ತಾ ಇದ್ದದ್ದರಿಂದ ನಾನು ತುಂಬ ವಾರಗಳ ತನಕ ಮನೆಯೊಳಗೇ ಇದ್ದೆ. ಯೆಹೋವನ ಸಮೀಪಕ್ಕೆ ಬರುತ್ತಿದ್ದಾಗ ಎಷ್ಟು ಒಳ್ಳೇದಾಗಿತ್ತು ಎನ್ನುವುದು ನನಗಾಗ ನೆನಪಾಯಿತು. ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಪತ್ರ ಬರೆದೆ. ಅವರು ನನ್ನನ್ನು ಭೇಟಿಯಾಗಲು ಸರಿಯಾದ ವ್ಯಕ್ತಿಯನ್ನೇ ಕಳುಹಿಸಿದರು. ನಾನೀ ಎಂಬ ಮಿಷನರಿ ನನ್ನನ್ನು ಭೇಟಿಯಾಗಲು ಸ್ಕೂಟರ್‌ನಲ್ಲಿ ಬಂದರು.

ನಮ್ಮ ಮನೆಯ ಹತ್ತಿರ ಮರಳಿನ ರಸ್ತೆಗಳಿದ್ದದರಿಂದ ತುಂಬ ಜಾರುತ್ತಿತ್ತು. ಮಳೆಗಾಲದಲ್ಲಂತೂ ಹೇಳುವುದೇ ಬೇಡ ಬಿಡಿ. ಎಲ್ಲೆಲ್ಲೂ ಕೆಸರೇ! ನನಗೆ ಬೈಬಲ್‌ ಕಲಿಸಲು ನಾನೀ ಬರುವಾಗ ತುಂಬ ಸಲ ಸ್ಕೂಟರ್‌ನಿಂದ ಜಾರಿ ಬಿದ್ದಿದ್ದಾರೆ. ಆದರೂ ಅವರು ಬಿಟ್ಟುಕೊಡಲಿಲ್ಲ. ಒಂದು ದಿನ ನನ್ನನ್ನು ಕೂಟಗಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. ನಾನು ಇನ್ನು ಮುಂದೆ ಮನೆಯಿಂದ ಹೊರಗೆ ಹೋಗಬೇಕು ಮತ್ತು ಜನರು ದುರುಗುಟ್ಟಿ ನೋಡುವುದನ್ನು ಇನ್ನು ಮುಂದೆ ಸಹಿಸಬೇಕು ಎನ್ನುವುದು ನನಗೆ ಅರ್ಥವಾಯಿತು. ಇದರ ಜೊತೆಗೆ ಸ್ಕೂಟರಿನಲ್ಲಿ ಹಿಂದೆ ಕುಳಿತು ನಾನೀ ಜೊತೆ ಹೋಗುವುದು ಕಷ್ಟವಾಗಲಿತ್ತು. ಏಕೆಂದರೆ ಮೊದಲೇ ಆ ಗಾಡಿಯನ್ನು ಓಡಿಸುವುದು ಕಷ್ಟವಾಗಿತ್ತು ಅದಕ್ಕೆ ನನ್ನ ಭಾರವೂ ಸೇರಿದರೆ ನಮ್ಮ ಪಾಡು ಏನಾಗಲಿಕ್ಕಿತ್ತೊ ಎಂದು ನೆನಸಿದೆ. ಹಾಗಿದ್ದರೂ ನಾನು ಕೂಟಗಳಿಗೆ ಬರಲು ಒಪ್ಪಿಕೊಂಡೆ. ಏಕೆಂದರೆ ನನ್ನ ಇಷ್ಟವಾದ ವಚನದ ಎರಡನೇ ಭಾಗವನ್ನು ನೆನಸಿಕೊಂಡೆ. ಅದು ಹೀಗನ್ನುತ್ತದೆ: ‘ಕರ್ತನೇ, ಯೆಹೋವನೇ, ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ.’

ನನಗೆ ಮತ್ತು ನಾನೀಗೆ ಕೂಟಗಳು ಎಷ್ಟು ಇಷ್ಟವೆಂದರೆ ದಾರಿಯಲ್ಲಿ ಕೆಲವೊಮ್ಮೆ ಕೆಸರಲ್ಲಿ ಬಿದ್ದರೂ ಅದರ ಬಗ್ಗೆಯೆಲ್ಲಾ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ರಾಜ್ಯ ಸಭಾಗೃಹದಲ್ಲಿ ಎಲ್ಲರೂ ಪ್ರೀತಿಯಿಂದ ಕೊಡುತ್ತಿದ್ದ ಮುಗುಳ್ನಗೆಗೂ ಹೊರಗೆ ಜನರು ನನ್ನನ್ನು ದುರುಗುಟ್ಟಿ ನೋಡುತ್ತಿದ್ದದಕ್ಕೂ ಎಂಥಾ ವ್ಯತ್ಯಾಸ! 9 ತಿಂಗಳುಗಳ ನಂತರ ನನ್ನ ದೀಕ್ಷಾಸ್ನಾನವಾಯಿತು.

ನನಗೆ ತುಂಬ ಇಷ್ಟವಾದ ವಚನದ ಮೂರನೇ ಭಾಗ “ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.” ಸೇವೆಗೆ ಹೋಗುವುದು ನನಗೆ ದೊಡ್ಡ ಸವಾಲಾಗಿರಲಿದೆ ಎಂದು ನನಗೆ ಗೊತ್ತಿತ್ತು. ಮೊದಲನೇ ಬಾರಿ ಮನೆಮನೆ ಸೇವೆಗೆ ಹೋಗಿದ್ದು ನನಗಿನ್ನೂ ನೆನಪಿದೆ. ಮಕ್ಕಳು ಮತ್ತು ದೊಡ್ಡವರು ನನ್ನನ್ನು ಗುರಾಯಿಸುತಾ ಇದ್ದರು. ನಾನು ಹೋದಲೆಲ್ಲಾ ನನ್ನ ಹಿಂದೆಯೇ ಬರುತ್ತಿದ್ದರು. ನಾನು ನಡೆಯುವ ರೀತಿಯ ಬಗ್ಗೆ ಗೇಲಿ ಮಾಡುತ್ತಿದ್ದರು. ನನ್ನ ಮನಸ್ಸಿಗೆ ತುಂಬ ನೋವಾಯಿತು. ಆದರೆ ನನಗೆ ಪರದೈಸ್‍ನ ಅಗತ್ಯ ಎಷ್ಟಿತ್ತೋ ಈ ಜನರಿಗೂ ಅಷ್ಟೇ ಇದೆ ಎಂದು ನೆನಸಿ ಅದನ್ನೆಲ್ಲಾ ಸಹಿಸಿಕೊಂಡೆ.

ನನ್ನ ತೊಂದರೆಗಳನ್ನು ಸ್ವಲ್ಪ ಕಡಿಮೆಗೊಳಿಸಲಿಕ್ಕೆ ಕೈಯಿಂದ ಒತ್ತಿ ಓಡಿಸಬಹುದಾದ ಮೂರು ಚಕ್ರದ ಸೈಕಲನ್ನು ಖರೀದಿಸಿದೆ. ಕೆಲವೊಂದು ಪ್ರದೇಶಗಳಲ್ಲಿ ರಸ್ತೆ ಮೇಲೇರುತ್ತಾ ಹೋದಾಗ ನನ್ನ ಜೊತೆ ಸೇವೆ ಮಾಡುತ್ತಿದ್ದವರು ಸೈಕಲಿನಿಂದ ಇಳಿದು ಅದನ್ನು ತಳ್ಳುತ್ತಿದ್ದರು. ಇಳಿಜಾರು ಬಂದಾಗ ಹಾರಿ ಸೈಕಲಿನಲ್ಲಿ ಕೂರುತ್ತಿದ್ದರು. ಮೊದಲೆಲ್ಲ ಸೇವೆ ಒಂದು ದೊಡ್ಡ ಸವಾಲು ಎಂದು ಅನಿಸಿದರೂ ಅದರಿಂದ ಸಂತೋಷ ಪಡೆಯಲು ತುಂಬ ಸಮಯ ಹಿಡಿಸಲಿಲ್ಲ. ನನಗೆಷ್ಟು ಸಂತೋಷ ಆಯಿತೆಂದರೆ 1998ರಲ್ಲಿ ರೆಗ್ಯುಲರ್‌ ಪಯನೀಯರಳಾದೆ.

ನಾನು ಅನೇಕ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೆ. ಅದರಲ್ಲಿ 4 ಮಂದಿ ದೀಕ್ಷಾಸ್ನಾನ ಪಡೆದರು. ನನ್ನ ತಂಗಿ ಸಹ ಸತ್ಯ ಸ್ವೀಕರಿಸಿದಳು! ಬೇರೆಯವರ ಪ್ರಗತಿ ಬಗ್ಗೆ ಕೇಳಿದಾಗಲೆಲ್ಲಾ ನನಗೆ ತುಂಬ ಪ್ರೋತ್ಸಾಹ ಸಿಗುತ್ತಿತ್ತು. ಹೆಚ್ಚಾಗಿ ಈ ಸುದ್ದಿಗಳು ಸಿಗುತ್ತಿದ್ದದ್ದು ನನಗೆ ಪ್ರೋತ್ಸಾಹದ ಅಗತ್ಯವಿದ್ದಾಗಲೇ! ಒಮ್ಮೆ ನನಗೆ ಮಲೇರಿಯ ಆದಾಗ ಐವರಿ ಕೋಸ್ಟ್‌ನಿಂದ ಒಂದು ಪತ್ರ ಬಂತು. ಬುರ್ಕಿನಾ ಫಾಸೊದ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಜೊತೆ ಬಾಗಿಲಲ್ಲೇ ಒಂದು ಬೈಬಲ್‌ ಅಧ್ಯಯನ ಶುರುಮಾಡಿದ್ದೆ. ಅದನ್ನು ಒಬ್ಬ ಸಹೋದರನಿಗೆ ಒಪ್ಪಿಸಿದ್ದೆ. ಆ ವಿದ್ಯಾರ್ಥಿ ನಂತರ ಐವರಿ ಕೋಸ್ಟ್‌ಗೆ ಸ್ಥಳಾಂತರಿಸಿದ್ದ. ಈಗ ಅವನು ಒಬ್ಬ ಅಸ್ನಾತ ಪ್ರಚಾರಕ ಆಗಿದ್ದಾನೆಂದು ಆ ಪತ್ರದಿಂದ ತಿಳಿದಾಗ ನನಗೆ ತುಂಬ ಖುಷಿಯಾಯಿತು!

ಖರ್ಚಿಗೆ ಏನು ಮಾಡುತ್ತೀರಾ ಅಂತ ಕೇಳಿದರಾ? ವಿಕಲಚೇತನರಿಗೆ ಸಹಾಯ ಮಾಡುವ ಸಂಘಟನೆಯೊಂದು ಹೊಲಿಗೆ ಕೆಲಸ ಕಲಿಸಲು ಆರಂಭಿಸಿತು. ಆದರೆ ನಾನು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದದ್ದನ್ನು ನೋಡಿ ಒಬ್ಬ ಶಿಕ್ಷಕರು ಹೀಗಂದರು: “ಸಾಬೂನು ಹೇಗೆ ತಯಾರಿ ಮಾಡುವುದೆಂದು ನಾವು ನಿನಗೆ ಕಲಿಸಿಕೊಡಬೇಕು.” ಅವರು ಹಾಗೇ ಮಾಡಿದರು. ಬಟ್ಟೆಗಳನ್ನು ಒಗೆಯಲು ಮತ್ತು ಗೃಹ ಬಳಕೆಯ ಸಾಬೂನನ್ನು ಈಗ ಮನೆಯಲ್ಲೇ ತಯಾರಿಸುತ್ತೇನೆ. ಜನರಿಗೆ ನಾನು ಮಾಡಿದ ಸಾಬೂನು ಇಷ್ಟವಾಗುತ್ತದೆ. ಬೇರೆಯವರಿಗೂ ಅದರ ಬಗ್ಗೆ ಹೇಳುತ್ತಾರೆ. ನನ್ನ ಮೂರು ಚಕ್ರದ ಸ್ಕೂಟರನ್ನು ಉಪಯೋಗಿಸಿ ನಾನೇ ಅದನ್ನು ಜನರ ಮನೆಗಳಿಗೆ ತಲುಪಿಸುತ್ತೇನೆ.

ದುಃಖದ ಸಂಗತಿಯೇನೆಂದರೆ ನನಗೆ ಬೆನ್ನು ನೋವು ಜಾಸ್ತಿಯಾಗಿದ್ದರಿಂದ 2004ರಲ್ಲಿ ಪಯನೀಯರ್‌ ಸೇವೆ ನಿಲ್ಲಿಸಬೇಕಾಯಿತು. ಹಾಗಿದ್ದರೂ ಈಗಲೂ ತಪ್ಪದೆ ಸೇವೆಗೆ ಹೋಗುತ್ತೇನೆ.

ನಾನು ನಗುನಗುತ್ತಾ ಇರುವುದನ್ನು ಜನ ಗಮನಿಸಿದ್ದಾರೆ. ನನಗೆ ಸಂತೋಷವಾಗಿರಲು ಕಾರಣವಿದೆ. ಏಕೆಂದರೆ ದೇವರ ಸಮೀಪಕ್ಕೆ ಬರುವುದರಿಂದ ನನಗೆ ಒಳ್ಳೆಯದಾಗಿದೆ.—ಸೇರಾ ಮೈಗಾ ಹೇಳಿದಂತೆ.