ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕೆಲಸವನ್ನು ಜನ ನೋಡಿ ಮೆಚ್ಚುವುದು ಮುಖ್ಯನಾ?

ನಿಮ್ಮ ಕೆಲಸವನ್ನು ಜನ ನೋಡಿ ಮೆಚ್ಚುವುದು ಮುಖ್ಯನಾ?

ಬೆಚಲೇಲ ಮತ್ತು ಒಹೊಲೀಯಾಬರಿಗೆ ನಿರ್ಮಾಣ ಕೆಲಸವೇನು ಹೊಸದಾಗಿರಲಿಲ್ಲ. ಏಕೆಂದರೆ ಐಗುಪ್ತದಲ್ಲಿ ದಾಸರಾಗಿದ್ದಾಗ ಲೆಕ್ಕವಿಲ್ಲದಷ್ಟು ಇಟ್ಟಿಗೆಗಳನ್ನು ತಯಾರಿಸಿದ್ದರು. ಆ ಕೆಲಸವನ್ನು ಅವರು ನೆನಪಿಸಿಕೊಳ್ಳಲೂ ಇಷ್ಟಪಡುತ್ತಿರಲಿಲ್ಲ. ಏಕೆಂದರೆ ಅಷ್ಟು ಕಷ್ಟಪಟ್ಟಿದ್ದರು. ಆದರೆ ಈಗ ಅವರಿಗೆ ದೇವಗುಡಾರದ ನಿರ್ಮಾಣ ಕೆಲಸದ ಮುಂದಾಳತ್ವ ವಹಿಸುವ ನೇಮಕ ಕೊಡಲಾಗಿದೆ. ಅವರು ಅತ್ಯುನ್ನತ ಮಟ್ಟದ ಕೆತ್ತನೆಗಾರರಾಗಿ ಕೆಲಸ ನಿರ್ವಹಿಸಲಿದ್ದರು. (ವಿಮೋ. 31:1-11) ಹಾಗಿದ್ದರೂ ಅವರು ಮಾಡಿದ ವಿಸ್ಮಯಕಾರಿ ಕೆಲಸವನ್ನು ಕೆಲವರೇ ನೋಡಲಿಕ್ಕಿದ್ದರು. ಹೀಗಿರುವುದರಿಂದ ತಮಗೆ ಯಾವುದೇ ಮನ್ನಣೆ ಸಿಗಲಿಕ್ಕಿಲ್ಲವೆಂಬ ಸಂಗತಿ ಅವರನ್ನು ನಿರಾಶೆಗೊಳಿಸಿತಾ? ಅವರ ಕೆಲಸವನ್ನು ಯಾರು ನೋಡಿದರು ಎನ್ನುವುದು ನಿಜವಾಗಲೂ ಪ್ರಾಮುಖ್ಯವಾಗಿತ್ತಾ? ನೀವು ಮಾಡಿರುವ ಕೆಲಸವನ್ನು ಜನ ನೋಡಿ ಮೆಚ್ಚುವುದು ಮುಖ್ಯನಾ?

ಬರೀ ಕೆಲವರೇ ನೋಡಿದ ಉತ್ಕೃಷ್ಟ ಕೃತಿಗಳು

ದೇವಗುಡಾರದ ಕೆಲವೊಂದು ವಸ್ತುಗಳು ಮೇರುಕೃತಿಗಳಾಗಿದ್ದವು. ಅದಕ್ಕೊಂದು ಉದಾಹರಣೆ, ಒಡಂಬಡಿಕೆಯ ಮಂಜೂಷದ ಮೇಲಿದ್ದ ಚಿನ್ನದ ಕೆರೂಬಿಗಳು. ಅಪೊಸ್ತಲ ಪೌಲನು ಅವುಗಳನ್ನು “ಮಹಿಮಾಭರಿತ”ವೆಂದು ವರ್ಣಿಸಿದನು. (ಇಬ್ರಿ. 9:5) ಚಿನ್ನದ ನಕಾಸಿ ಕೆಲಸವಾಗಿದ್ದ ಆ ಕೆರೂಬಿಗಳ ರಚನೆ ಎಷ್ಟು ಸುಂದರವಾಗಿತ್ತೆಂದು ಸ್ವಲ್ಪ ಊಹಿಸಿ!—ವಿಮೋ. 37:7-9.

ಬೆಚಲೇಲ ಮತ್ತು ಒಹೊಲೀಯಾಬರು ಮಾಡಿದ ಆ ವಸ್ತುಗಳು ಒಂದುವೇಳೆ ಇಂದು ಸಿಕ್ಕಿದರೆ ತುಂಬ ಪ್ರಖ್ಯಾತಿ ಹೊಂದಿರುವ ಸಂಗ್ರಹಾಲಯದಲ್ಲಿ ಖಂಡಿತ ಪ್ರದರ್ಶನಕ್ಕಿಡಲು ಆಗುತ್ತಿತ್ತು. ಅವುಗಳನ್ನು ಕಂಡು ಜನಸಮೂಹವೇ ಮೆಚ್ಚುತ್ತಿತ್ತು. ಆದರೆ ಅವುಗಳನ್ನು ಮಾಡಿದ ಆ ಸಮಯದಲ್ಲಿ ಎಷ್ಟು ಜನ ನಿಜವಾಗಿ ಅವುಗಳ ವೈಭವ ನೋಡಿದ್ದರು? ಕೆರೂಬಿಗಳನ್ನು ಅತಿ ಪವಿತ್ರ ಸ್ಥಳದಲ್ಲಿಡಲಾಗಿತ್ತು. ಹಾಗಾಗಿ ಅವುಗಳನ್ನು ದೋಷಪರಿಹಾರಕ ದಿನದಂದು ಮಹಾ ಯಾಜಕನು ಮಾತ್ರ ವರ್ಷಕ್ಕೊಮ್ಮೆ ನೋಡಲು ಸಾಧ್ಯವಾಗುತ್ತಿತ್ತು. (ಇಬ್ರಿ. 9:6, 7) ಹೀಗೆ ಅವುಗಳನ್ನು ನೋಡಲಿಕ್ಕಾದದ್ದು ಕೆಲವು ಮನುಷ್ಯರಿಗೆ ಮಾತ್ರ.

ಜನರ ಮನ್ನಣೆ ಸಿಗದಿದ್ದರೂ ತೃಪ್ತರಾಗಿರುವುದು

ಒಂದುವೇಳೆ ನೀವು ಬೆಚಲೇಲ ಅಥವಾ ಒಹೊಲೀಯಾಬರಾಗಿದ್ದು, ತುಂಬ ಕಷ್ಟಪಟ್ಟು ಅಂಥ ಅದ್ಭುತಕರ ಕೃತಿಗಳನ್ನು ರಚಿಸಿ, ಅದನ್ನು ಕೆಲವರೇ ನೋಡಿದ್ದರೆ ಹೇಗನಿಸುತ್ತಿತ್ತು? ಇಂದು ಜನರಿಗೆ ತಮ್ಮ ಕೆಲಸಕ್ಕಾಗಿ ಸಮವಯಸ್ಕರಿಂದ ಸ್ತುತಿ ಮತ್ತು ಹೊಗಳಿಕೆ ಸಿಕ್ಕಿದಾಗಲೇ ತೃಪ್ತಿಯಾಗುವುದು. ತಾವು ಹಾಕಿದ ಶ್ರಮಕ್ಕೆ ಯಶಸ್ಸು ಸಿಕ್ಕಿತ್ತೆಂದು ನೆನಸುತ್ತಾರೆ. ಆದರೆ ಯೆಹೋವನ ಸಾಕ್ಷಿಗಳು ಭಿನ್ನರಾಗಿದ್ದಾರೆ. ಬೆಚಲೇಲ ಮತ್ತು ಒಹೊಲೀಯಾಬರಂತೆ ನಮಗೆ ತೃಪ್ತಿ ಸಿಗುವುದು ನಾವು ಯೆಹೋವನ ಚಿತ್ತವನ್ನು ಮಾಡಿ ಆತನ ಮೆಚ್ಚಿಕೆ ಪಡೆದಾಗಲೇ.

ಯೇಸುವಿನ ಸಮಯದಲ್ಲಿದ್ದ ಧರ್ಮಗುರುಗಳು ಬೇರೆಯವರ ಹೊಗಳಿಕೆ ಸಿಗಲಿ ಎಂಬ ಉದ್ದೇಶದಿಂದ ಪ್ರಾರ್ಥನೆ ಮಾಡುತ್ತಿದ್ದರು.  ಆದರೆ ನಾವು ಬೇರೆಯವರ ಹೊಗಳಿಕೆ ಗಳಿಸಲಿಕ್ಕಾಗಿಯಲ್ಲ ಬದಲಿಗೆ ಮನಃಪೂರ್ವಕವಾದ ಪ್ರಾರ್ಥನೆ ಮಾಡುವಂತೆ ಯೇಸು ಶಿಫಾರಸು ಮಾಡಿದನು. ಹೀಗೆ ಪ್ರಾರ್ಥನೆ ಮಾಡುವುದರ ಫಲಿತಾಂಶ? “ರಹಸ್ಯವಾದ ಸ್ಥಳದಿಂದ ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲ ಕೊಡುವನು.” (ಮತ್ತಾ. 6:5, 6) ಇದರಿಂದ ಒಂದು ವಿಷಯ ಸ್ಪಷ್ಟ: ನಮ್ಮ ಪ್ರಾರ್ಥನೆಯ ಬಗ್ಗೆ ಇತರರು ಏನು ಯೋಚಿಸುತ್ತಾರೆ ಎಂಬುದಲ್ಲ ಬದಲಿಗೆ ಯೆಹೋವನು ಏನು ಯೋಚಿಸುತ್ತಾನೆ ಎನ್ನುವುದು ಪ್ರಮುಖ್ಯ. ನಮ್ಮ ಪ್ರಾರ್ಥನೆಯ ಬಗ್ಗೆ ಆತನ ಅಭಿಪ್ರಾಯ ನಿಜವಾಗಿಯೂ ಅಮೂಲ್ಯವಾದದ್ದು. ಪವಿತ್ರ ಸೇವೆಯಲ್ಲಿ ನಾವು ಮಾಡುವ ಯಾವುದೇ ಕೆಲಸದ ವಿಷಯದಲ್ಲೂ ಇದು ನಿಜ. ನಮ್ಮ ಕೆಲಸಕ್ಕೆ ಜನರ ಮನ್ನಣೆ ಸಿಕ್ಕಿದ್ದರೆ ಮಾತ್ರ ಅದು ಮಹತ್ವದ್ದಾಗುವುದಿಲ್ಲ. ಬದಲಿಗೆ “ರಹಸ್ಯವಾದ ಸ್ಥಳದಿಂದ ನೋಡುವ” ಯೆಹೋವನನ್ನು ಮೆಚ್ಚಿಸುವುದರಿಂದ ಅದಕ್ಕೆ ಮಹತ್ವ ಸಿಗುತ್ತದೆ.

ದೇವಗುಡಾರದ ಕೆಲಸವೆಲ್ಲಾ ಮುಗಿದ ಮೇಲೆ ಮೇಘವೊಂದು “ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿತು.” (ವಿಮೋ. 40:34) ಇದು ಯೆಹೋವನ ಒಪ್ಪಿಗೆಯ ಸ್ಪಷ್ಟ ಸೂಚನೆಯಲ್ಲವೇ! ಆ ಕ್ಷಣ ಬೆಚಲೇಲ ಮತ್ತು ಒಹೊಲೀಯಾಬರಿಗೆ ಹೇಗೆ ಅನಿಸಿರಬಹುದೆಂದು ನೆನಸುತ್ತೀರಿ? ತಮ್ಮ ಕೈಯಿಂದ ಮಾಡಿದ ವಸ್ತುಗಳ ಮೇಲೆ ಅವರ ಹೆಸರು ಕೆತ್ತಲ್ಪಟ್ಟಿರಲಿಲ್ಲ. ಆದರೂ ಅವರ ಶ್ರಮದ ಮೇಲೆ ಯೆಹೋವನ ಆಶೀರ್ವಾದವಿತ್ತೆಂದು ತಿಳಿದಾಗ ಅವರಿಗೆ ಸಂತೃಪ್ತಿ ಸಿಕ್ಕಿರಬೇಕು. (ಜ್ಞಾನೋ. 10:22) ಆ ವಸ್ತುಗಳು ಮುಂದಕ್ಕೆ ಯೆಹೋವನ ಸೇವೆಯಲ್ಲಿ ಬಳಸಲ್ಪಡುವುದನ್ನು ನೋಡಿ ಅವರಿಗೆ ಸಂತೋಷ ಆಗಿರಬೇಕು. ಹೊಸ ಲೋಕದಲ್ಲಿ ಬೆಚಲೇಲ, ಒಹೊಲೀಯಾಬರು ಪುನಃ ಜೀವಕ್ಕೆ ಬಂದಾಗ ದೇವಗುಡಾರವನ್ನು ಸತ್ಯ ಆರಾಧನೆಯಲ್ಲಿ 500 ವರ್ಷ ಬಳಸಲಾಯಿತೆಂದು ತಿಳಿದಾಗ ಅವರ ಮೈಜು೦ ಎನ್ನುವುದಲ್ಲವೇ!

ನೀವು ದೀನತೆ, ಸಿದ್ಧಮನಸ್ಸಿನಿಂದ ಮಾಡುವ ಕೆಲಸವನ್ನು ಯಾವ ಮನುಷ್ಯನು ನೋಡದಿದ್ದರೂ ಯೆಹೋವನು ಖಂಡಿತ ನೋಡುತ್ತಾನೆ!

ಇಂದು ಯೆಹೋವನ ಸಂಘಟನೆಯಲ್ಲಿ, ಚಲಿಸುವ ರೇಖಾಚಿತ್ರಗಳನ್ನು ತಯಾರಿಸುವವರು, ಕಲಾಕಾರರು, ಸಂಗೀತಗಾರರು, ಛಾಯಾಚಿತ್ರಗಾರರು, ಭಾಷಾಂತರಕಾರರು ಮತ್ತು ಬರಹಗಾರರು ಕೆಲಸ ಮಾಡುತ್ತಿದ್ದರೂ ಅವರ ಹೆಸರು ಎಲ್ಲರಿಗೂ ತಿಳಿದಿಲ್ಲ. ಒಂದರ್ಥದಲ್ಲಿ ಅವರ ಕೆಲಸವನ್ನು ಯಾರೂ ನೋಡುತ್ತಿಲ್ಲ. ಲೋಕವ್ಯಾಪಕವಾಗಿ ಇರುವ 1,10,000ಕ್ಕಿಂತ ಹೆಚ್ಚು ಸಭೆಗಳಲ್ಲಿ ನಡೆಯುತ್ತಿರುವ ಬಹಳಷ್ಟು ಕೆಲಸಗಳ ವಿಷಯದಲ್ಲೂ ಇದು ನಿಜ. ಸಭೆಯ ಲೆಕ್ಕಾಚಾರ ನೋಡಿಕೊಳ್ಳುವ ಸಹೋದರನು ತಿಂಗಳ ಕೊನೆಯಲ್ಲಿ ಕಾಗದಪತ್ರಗಳಿಗೆ ಸಂಬಂಧಪಟ್ಟ ಬಹಳಷ್ಟು ಕೆಲಸ ಮಾಡುವುದನ್ನು ಯಾರು ನೋಡುತ್ತಾರೆ? ಸಭೆಯ ಕ್ಷೇತ್ರ ಸೇವಾ ವರದಿಯನ್ನು ಕಾರ್ಯದರ್ಶಿ ತಯಾರಿಸುವುದನ್ನು ಯಾರು ನೋಡುತ್ತಾರೆ? ರಾಜ್ಯ ಸಭಾಗೃಹದಲ್ಲಿನ ರಿಪೇರಿ ಕೆಲಸಗಳನ್ನು ಮಾಡುವ ಸಹೋದರ ಸಹೋದರಿಯರನ್ನು ಯಾರು ನೋಡುತ್ತಾರೆ?

ಬೆಚಲೇಲ ಮತ್ತು ಒಹೊಲೀಯಾಬರ ಜೀವನದ ಕೊನೆಯಲ್ಲಿ ಅವರ ಅತ್ಯದ್ಭುತ ವಿನ್ಯಾಸಗಳಿಗೆ ಮತ್ತು ಗುಣಮಟ್ಟದ ನಿರ್ಮಾಣ ಕೆಲಸಕ್ಕೆ ಯಾವುದೇ ಪಾರಿತೋಷಕ, ಪದಕ ಅಥವಾ ಬಿರುದು ಬಿಲ್ಲೆ ಸಿಗಲಿಲ್ಲ. ಅದಕ್ಕಿಂತ ಎಷ್ಟೋ ಅಮೂಲ್ಯವಾದದ್ದನ್ನು ಅವರು ಪಡೆದರು. ಅದೇನು? ಯೆಹೋವನ ಒಪ್ಪಿಗೆ. ಯೆಹೋವನು ಅವರ ಕೆಲಸವನ್ನು ನೋಡಿದ್ದನೆಂಬ ವಿಷಯದಲ್ಲಿ ಸಂಶಯವಿಲ್ಲ. ಅವರ ದೀನ ಮತ್ತು ಸಿದ್ಧಮನಸ್ಸಿನ ಮಾದರಿಯನ್ನು ನಾವು ಅನುಕರಿಸೋಣ.