ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯಕ್ಕೆ ಸದಾ ನಿಷ್ಠರಾಗಿರಿ

ದೇವರ ರಾಜ್ಯಕ್ಕೆ ಸದಾ ನಿಷ್ಠರಾಗಿರಿ

‘ಇವರು ಲೋಕದ ಭಾಗವಾಗಿಲ್ಲ.’—ಯೋಹಾ. 17:16.

ಗೀತೆಗಳು: 63, 129

1, 2. (ಎ) ಲೋಕದ ಹೋರಾಟ, ಜಗಳಗಳಲ್ಲಿ ಭಾಗಿಗಳಾಗದೇ ಇರುವುದಕ್ಕೂ ಯೆಹೋವನಿಗೆ ನಿಷ್ಠೆ ತೋರಿಸುವುದಕ್ಕೂ ಇರುವ ಸಂಬಂಧ ಏನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಅನೇಕರು ಯಾವುದಕ್ಕೆ ನಿಷ್ಠೆ ತೋರಿಸುತ್ತಾರೆ? (ಸಿ) ಇದರ ಫಲಿತಾಂಶವೇನು?

ರಾಷ್ಟ್ರೀಯತೆ, ಜಾತಿ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ವಿಷಯಗಳು ಜನರ ಮಧ್ಯೆ ಒಡಕನ್ನು ಉಂಟುಮಾಡುತ್ತವೆ. ಇಂಥ ವಿಷಯಗಳಲ್ಲಿ ಯೆಹೋವನ ಸೇವಕರಾದ ನಾವು ಭಾಗಿಗಳಾಗುವುದಿಲ್ಲ, ಪಕ್ಷ ವಹಿಸುವುದೂ ಇಲ್ಲ. ಏಕೆಂದರೆ ನಾವು ಯೆಹೋವನನ್ನು ಪ್ರೀತಿಸುತ್ತೇವೆ, ಆತನಿಗೆ ನಿಷ್ಠೆ ತೋರಿಸುತ್ತೇವೆ ಮತ್ತು ವಿಧೇಯರಾಗುತ್ತೇವೆ. (1 ಯೋಹಾ. 5:3) ನಾವೆಲ್ಲೇ ಇರಲಿ, ಯಾವುದೇ ಸ್ಥಳದವರಾಗಿರಲಿ ದೇವರ ಮಟ್ಟಗಳನ್ನು ಪಾಲಿಸುತ್ತೇವೆ. ಯೆಹೋವನಿಗೆ ಮತ್ತು ಆತನ ರಾಜ್ಯಕ್ಕೆ ತೋರಿಸುವ ನಿಷ್ಠೆಯೇ ಎಲ್ಲಕ್ಕಿಂತಲೂ ಮುಖ್ಯವಾದದ್ದು. (ಮತ್ತಾ. 6:33) ಆದ್ದರಿಂದಲೇ ನಾವು “ಲೋಕದ ಭಾಗವಾಗಿಲ್ಲ” ಎಂದು ಹೇಳಲಿಕ್ಕಾಗುತ್ತದೆ.—ಯೋಹಾನ 17:11, 15, 16 ಓದಿ; ಯೆಶಾ. 2:4.

2 ಲೋಕದಲ್ಲಿರುವ ತುಂಬ ಜನರು ತಮ್ಮ ದೇಶ, ಕುಲ, ಸಂಸ್ಕೃತಿ, ಕ್ರೀಡಾ ತಂಡಕ್ಕೆಲ್ಲಾ ನಿಷ್ಠೆ ತೋರಿಸುತ್ತಾರೆ. ಇದರಿಂದಾಗಿ ಅವರಲ್ಲಿ ಹೆಚ್ಚಿನವರ ಮಧ್ಯೆ ಪೈಪೋಟಿ ಬೆಳೆದುಬಿಟ್ಟಿದೆ, ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಕೆಲವು ಸಂದರ್ಭದಲ್ಲಿ ವಿರುದ್ಧ ಪಕ್ಷಕ್ಕೆ ನಿಷ್ಠೆ ತೋರಿಸುವವರನ್ನು ಕೊಂದೇ ಹಾಕುತ್ತಾರೆ. ನಾವು ಇಂಥ ಹೋರಾಟ, ಜಗಳಗಳಲ್ಲಿ ಭಾಗಿಗಳಾಗದಿದ್ದರೂ ನಮಗೊ ನಮ್ಮ ಕುಟುಂಬದವರಿಗೊ ಅದರ ಪರಿಣಾಮ ತಟ್ಟಬಹುದು. ನಮಗೆ ದೊಡ್ಡ ಅನ್ಯಾಯ ಆಗಬಹುದು. ಸರ್ಕಾರಗಳು ಮಾಡುವ ತೀರ್ಮಾನಗಳಲ್ಲಿ ನ್ಯಾಯ ಇಲ್ಲದಿದ್ದರೆ ನಮಗೆ ಗೊತ್ತಿಲ್ಲದೇ ಅವುಗಳಲ್ಲಿ ಒಂದರ ಪಕ್ಷ ವಹಿಸುವ ಸಾಧ್ಯತೆ ಇದೆ. ಏಕೆಂದರೆ ನಮ್ಮನ್ನು ದೇವರು ಸೃಷ್ಟಿ ಮಾಡಿದಾಗಲೇ ಯಾವುದು ನ್ಯಾಯ, ಯಾವುದು ನ್ಯಾಯವಲ್ಲ ಎಂದು ತಿಳಿಯುವ  ಸಾಮರ್ಥ್ಯ ಕೊಟ್ಟಿದ್ದಾನೆ. (ಆದಿ. 1:27; ಧರ್ಮೋ. 32:4) ಹೀಗೆಲ್ಲ ಅನ್ಯಾಯ ನಡೆದಾಗ ನಿಮಗೆ ಹೇಗನಿಸುತ್ತದೆ? ಯಾವುದೇ ಪಕ್ಷ ವಹಿಸದೇ ತಟಸ್ಥರಾಗಿ ಇರಬಲ್ಲಿರಾ?

3, 4. (ಎ) ಹೋರಾಟ, ಜಗಳಗಳಲ್ಲಿ ನಾವೇಕೆ ಪಕ್ಷ ವಹಿಸುವುದಿಲ್ಲ? (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

3 ಹೋರಾಟ, ಜಗಳಗಳಾದಾಗ ಪಕ್ಷ ವಹಿಸುವಂತೆ ಸರ್ಕಾರಗಳು ಜನರನ್ನು ಪುಸಲಾಯಿಸುತ್ತವೆ. ಒಳ್ಳೇ ನಾಗರಿಕರು ಹೀಗೇ ಮಾಡಬೇಕೆಂದು ಹೇಳುತ್ತವೆ. ಆದರೆ ನಾವು ಯೇಸುವನ್ನು ಹಿಂಬಾಲಿಸುವವರು. ಆದ್ದರಿಂದ ನಾವು ರಾಜಕೀಯಕ್ಕೆ ಕೈಹಾಕುವುದಿಲ್ಲ, ಯುದ್ಧಗಳಲ್ಲಿ ಭಾಗವಹಿಸುವುದಿಲ್ಲ. (ಮತ್ತಾ. 26:52) ಸೈತಾನನ ಲೋಕದ ಒಂದು ಭಾಗ ಒಳ್ಳೇದು ಇನ್ನೊಂದು ಕೆಟ್ಟದು ಎಂದು ನಿಜ ಕ್ರೈಸ್ತರು ಯಾವತ್ತೂ ನೆನಸುವುದಿಲ್ಲ. (2 ಕೊರಿಂ. 2:11) ನಮಗೂ ಈ ಲೋಕದ ಹೋರಾಟ, ಜಗಳಗಳಿಗೂ ಯಾವುದೇ ಸಂಬಂಧ ಇಲ್ಲ.—ಯೋಹಾನ 15:18, 19 ಓದಿ.

4 ಅಪರಿಪೂರ್ಣತೆಯ ಕಾರಣ ನಮ್ಮಲ್ಲಿ ಕೆಲವರಿಗೆ ನಮಗಿಂತ ಭಿನ್ನರಾಗಿರುವವರ ಬಗ್ಗೆ ಈಗಲೂ ನಕಾರಾತ್ಮಕ ಭಾವನೆ ಇರಬಹುದು. (ಯೆರೆ. 17:9; ಎಫೆ. 4:22-24) ಜನರ ಮಧ್ಯೆ ಒಡಕನ್ನು ಉಂಟುಮಾಡುವ ಇಂಥ ಭಾವನೆಗಳನ್ನು ಗೆಲ್ಲಲು ಸಹಾಯ ಮಾಡುವ ಕೆಲವು ತತ್ವಗಳನ್ನು ಈ ಲೇಖನದಲ್ಲಿ ನೋಡಲಿದ್ದೇವೆ. ಯೆಹೋವ ಮತ್ತು ಯೇಸು ಯೋಚಿಸುವ ಹಾಗೇ ಯೋಚಿಸಲು ನಮಗೆ ನಾವೇ ತರಬೇತಿ ಕೊಡುವ ಮೂಲಕ ರಾಜ್ಯಕ್ಕೆ ಹೇಗೆ ನಿಷ್ಠೆ ತೋರಿಸಬಹುದು ಎಂದೂ ಚರ್ಚಿಸಲಿದ್ದೇವೆ.

ನಾವೇಕೆ ಲೋಕದ ಯಾವ ಭಾಗವನ್ನೂ ಬೆಂಬಲಿಸುವುದಿಲ್ಲ?

5, 6. ಯೇಸು ಭೂಮಿಯಲ್ಲಿದ್ದಾಗ ಬೇರೆಬೇರೆ ಭಾಷೆ, ವರ್ಗಗಳ ಜನರ ಬಗ್ಗೆ ಯಾವ ನೋಟ ಇತ್ತು? ಯಾಕೆ?

5 ಯಾವುದೇ ಪಕ್ಷ ವಹಿಸದೆ ಇರುವುದು ನಿಮಗೆ ಕಷ್ಟವೆನಿಸಿದರೆ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯೇಸು ಈಗ ಇದ್ದಿದ್ದರೆ ಏನು ಮಾಡುತ್ತಿದ್ದನು?’ ಯೇಸು ಭೂಮಿಯಲ್ಲಿದ್ದಾಗ ಯೂದಾಯ, ಗಲಿಲಾಯ ಮತ್ತು ಸಮಾರ್ಯದವರ ಮಧ್ಯೆ ತುಂಬ ಘರ್ಷಣೆಗಳು, ಮನಸ್ತಾಪಗಳು ಇದ್ದವು. ಈ ಕೆಲವು ಉದಾಹರಣೆಗಳನ್ನು ನೋಡಿ: ಯೆಹೂದ್ಯರ ಮತ್ತು ಸಮಾರ್ಯದವರ ನಡುವೆ ಯಾವುದೇ ಮಾತುಕತೆ ಇರಲಿಲ್ಲ. (ಯೋಹಾ. 4:9) ಫರಿಸಾಯರ ಮತ್ತು ಸದ್ದುಕಾಯರ ಮಧ್ಯೆ ಅನೇಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಇತ್ತು. (ಅ. ಕಾ. 23:6-9) ಧರ್ಮಶಾಸ್ತ್ರವನ್ನು ಕಲಿತಿದ್ದ ಯೆಹೂದ್ಯರು ಅದನ್ನು ಕಲಿತಿರದ ಜನರಿಗಿಂತ ತಾವೇ ಮೇಲು ಎಂದು ನೆನಸುತ್ತಿದ್ದರು. (ಯೋಹಾ. 7:49) ಅನೇಕರಿಗೆ ತೆರಿಗೆ ವಸೂಲಿ ಮಾಡುವವರನ್ನು ಮತ್ತು ರೋಮನ್ನರನ್ನು ಕಂಡರೆ ಆಗುತ್ತಿರಲಿಲ್ಲ. (ಮತ್ತಾ. 9:11) ಯೇಸು ಮಾತ್ರ ಯಾವುದೇ ಕಾರಣಕ್ಕೂ ಈ ಹೋರಾಟ, ಜಗಳಗಳಲ್ಲಿ ಭಾಗಿಯಾಗಲಿಲ್ಲ. ಅವನು ಯಾವಾಗಲೂ ಯೆಹೋವನ ಕುರಿತಾದ ಸತ್ಯದ ಪರವಹಿಸಿ ಮಾತಾಡುತ್ತಿದ್ದರೂ, ಇಸ್ರಾಯೇಲು ದೇವರ ವಿಶೇಷ ಜನಾಂಗ ಎಂದು ಗೊತ್ತಿದ್ದರೂ ಆ ಜನಾಂಗದವರಾದ ತನ್ನ ಶಿಷ್ಯರು ಬೇರೆಯವರಿಗಿಂತ ಉತ್ತಮರು ಎಂದು ಯಾವತ್ತೂ ಅವರಿಗೆ ಹೇಳಿಕೊಡಲಿಲ್ಲ. (ಯೋಹಾ. 4:22) ಅದರ ಬದಲು ಎಲ್ಲಾ ಜನರನ್ನು ಪ್ರೀತಿಸಬೇಕು ಎಂದು ಅವರಿಗೆ ಕಲಿಸಿದನು.—ಲೂಕ 10:27.

6 ಯೇಸುವಿನ ದೃಷ್ಟಿಯಲ್ಲಿ ಒಂದು ಜಾತಿ, ಭಾಷೆಯ ಜನರು ಇನ್ನೊಂದಕ್ಕಿಂತ ಮೇಲಾಗಿರಲಿಲ್ಲ. ಯಾಕೆ? ಯಾಕೆಂದರೆ ಯೇಸು ಮತ್ತು ಅವನ ತಂದೆ ಜನರ ಬಗ್ಗೆ ಆ ರೀತಿ ಯೋಚಿಸುವುದೇ ಇಲ್ಲ. ಬೇರೆಬೇರೆ ರೂಪ, ಬಣ್ಣದ ಜನರಿಂದ ಭೂಮಿ ತುಂಬಿಕೊಳ್ಳಬೇಕೆಂಬ ಉದ್ದೇಶದಿಂದ ಯೆಹೋವನು ಮನುಷ್ಯರನ್ನು ಸೃಷ್ಟಿಸಿದನು. (ಆದಿ. 1:27, 28) ಹಾಗಾಗಿ ಒಂದು ರಾಷ್ಟ್ರವಾಗಲಿ, ಜಾತಿಯಾಗಲಿ, ಕುಲವಾಗಲಿ, ಭಾಷೆಯಾಗಲಿ ಇನ್ನೊಂದಕ್ಕಿಂತ ಮೇಲು ಎಂದು ಯೆಹೋವ ಮತ್ತು ಯೇಸು ಯಾವತ್ತೂ ಭಾವಿಸುವುದಿಲ್ಲ. (ಅ. ಕಾ. 10:34, 35; ಪ್ರಕ. 7:9, 13, 14) ಅವರ ಪರಿಪೂರ್ಣ ಮಾದರಿಯನ್ನು ನಾವೂ ಪಾಲಿಸಬೇಕು.—ಮತ್ತಾ. 5:43-48.

7, 8. (ಎ) ನಾವು ಯಾರ ಪಕ್ಷ ವಹಿಸುತ್ತೇವೆ? ಯಾಕೆ? (ಬಿ) ಮಾನವಕುಲದ ಸಮಸ್ಯೆಗಳಿಗಿರುವ ಪರಿಹಾರದ ಬಗ್ಗೆ ನಾವೇನನ್ನು ನೆನಪಿಡಬೇಕು?

7 ನಾವೇಕೆ ಮಾನವ ಅಧಿಪತಿಗಳನ್ನಾಗಲಿ ಸರ್ಕಾರಗಳನ್ನಾಗಲಿ ಬೆಂಬಲಿಸುವುದಿಲ್ಲ? ಯಾಕೆಂದರೆ ನಾವು ಯೆಹೋವನ ಪಕ್ಷ ವಹಿಸುತ್ತೇವೆ. ಆತನೇ ನಮ್ಮ ಅಧಿಪತಿ. ಆದರೆ ಸೈತಾನನು ಏದೆನ್‌ ತೋಟದಲ್ಲಿ ಹೇಳಿದ್ದೇನೆಂದರೆ ಯೆಹೋವನು ಮನುಷ್ಯರಿಗೆ ಒಳ್ಳೇ ಅಧಿಪತಿಯಾಗಿರಲು ಸಾಧ್ಯವಿಲ್ಲ. ದೇವರು ಮಾಡುವುದಕ್ಕಿಂತ ತಾನು ಮಾಡುವುದೇ ಸರಿ ಎಂದು ಮನುಷ್ಯರು ನಂಬಬೇಕೆಂಬ ಆಸೆ ಸೈತಾನನಿಗಿತ್ತು. ನಾವು ಯಾರ ಪಕ್ಷ ವಹಿಸಬೇಕು ಎಂದು ತೀರ್ಮಾನಿಸುವ ಆಯ್ಕೆಯನ್ನು ಯೆಹೋವನು ನಮಗೇ ಕೊಟ್ಟಿದ್ದಾನೆ. ನಿಮ್ಮ ಬಗ್ಗೆ ಏನು? ನಿಮಗೆ ಇಷ್ಟಬಂದ ಹಾಗೆ ಮಾಡುವುದಕ್ಕಿಂತ  ಯೆಹೋವನ ನಿಯಮಗಳ, ಮಟ್ಟಗಳ ಪ್ರಕಾರ ಮಾಡುವುದೇ ಸರಿಯೆಂದು ನಂಬುವ ಕಾರಣ ಆತನಿಗೆ ವಿಧೇಯರಾಗುತ್ತೀರಾ? ನಮ್ಮ ಸಮಸ್ಯೆಗಳನ್ನು ಬಗೆಹರಿಸುವುದು ಆತನ ರಾಜ್ಯ ಮಾತ್ರ ಎಂದು ನಿಮಗೆ ಪೂರ್ತಿ ಮನವರಿಕೆಯಾಗಿದೆಯಾ? ಅಥವಾ ಮನುಷ್ಯರು ದೇವರ ಸಹಾಯವಿಲ್ಲದೇ ತಮ್ಮನ್ನೇ ಆಳುವುದು ಸರಿಯೆಂದು ನಿಮಗನಿಸುತ್ತದಾ?—ಆದಿ. 3:4, 5.

8 ಒಂದು ರಾಜಕೀಯ ಪಕ್ಷ, ಚಳುವಳಿಗಾರರ ಗುಂಪು ಅಥವಾ ಅಂಥ ಒಂದು ಸಂಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಯಾರಾದರೂ ಕೇಳಿದರೆ ಏನು ಹೇಳುತ್ತೀರಾ? ಇವುಗಳಲ್ಲಿ ಕೆಲವೊಂದು ಗುಂಪುಗಳ ಉದ್ದೇಶ ಒಳ್ಳೇದಿರಬಹುದು, ಜನರಿಗೆ ಸಹಾಯ ಮಾಡಲು ನಿಜ ಆಸಕ್ತಿ ಇರಬಹುದು. ಆದರೆ ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಎಲ್ಲಾ ಅನ್ಯಾಯವನ್ನು ತೆಗೆದು ಹಾಕಲು ಯೆಹೋವನ ರಾಜ್ಯಕ್ಕೆ ಮಾತ್ರ ಸಾಧ್ಯ ಎಂದು ನಮಗೆ ಗೊತ್ತು. ನಮಗೇನು ಬೇಕೊ ಅದನ್ನೇ ಮಾಡುವ ಬದಲು ಸಭೆಯ ಮೂಲಕ ಯೆಹೋವನು ಕೊಡುವ ನಿರ್ದೇಶನಗಳನ್ನು ಪಾಲಿಸುತ್ತೇವೆ. ನಮ್ಮ ಸಭೆ ಐಕ್ಯವಾಗಿರುವುದು ಇದರಿಂದಲೇ.

9. (ಎ) ಒಂದನೇ ಶತಮಾನದ ಕ್ರೈಸ್ತರ ಮಧ್ಯೆ ಯಾವ ಸಮಸ್ಯೆಯಿತ್ತು? (ಬಿ) ಅದಕ್ಕಾಗಿ ಅವರು ಏನು ಮಾಡಬೇಕಿತ್ತು?

9 ಒಂದನೇ ಶತಮಾನದಲ್ಲಿ ಕೊರಿಂಥದಲ್ಲಿದ್ದ ಕೆಲವು ಕ್ರೈಸ್ತರು ಒಬ್ಬರಿಗೊಬ್ಬರು ಹೀಗೆ ಹೇಳಿಕೊಂಡು ಜಗಳವಾಡುತ್ತಿದ್ದರು: “ನಾನು ಪೌಲನಿಗೆ ಸೇರಿದವನು,” “ನಾನು ಅಪೊಲ್ಲೋಸನವನು,” “ನಾನು ಕೇಫನವನು,” “ನಾನು ಕ್ರಿಸ್ತನಿಗೆ ಸೇರಿದವನು.” ಇದನ್ನೆಲ್ಲ ನೋಡಿ ಪೌಲನಿಗೆ ಆಘಾತವಾಯಿತು. ಇದೊಂದು ಗಂಭೀರ ಸಮಸ್ಯೆಯಾಗಿತ್ತು. ಏಕೆಂದರೆ ಇದರಿಂದಾಗಿ ಇಡೀ ಸಭೆಯ ಶಾಂತಿಯೇ ಹಾಳಾಗುವ ಸಾಧ್ಯತೆ ಇತ್ತು. ಹೀಗೆ “ಕ್ರಿಸ್ತನು ವಿಭಜಿತ”ನಾದಂತೆ ತೋರುತ್ತಿದ್ದದರಿಂದ ಪೌಲನು ಈ ಬುದ್ಧಿವಾದವನ್ನು ಕೊಟ್ಟನು: “ಸಹೋದರರೇ, ನೀವೆಲ್ಲರೂ ಒಮ್ಮತದಿಂದ ಮಾತಾಡಬೇಕೆಂದು, ನಿಮ್ಮಲ್ಲಿ ಭೇದಗಳಿರಬಾರದೆಂದೂ ನೀವು ಏಕಮನಸ್ಸು ಮತ್ತು ಏಕವಿಚಾರಧಾರೆಯಿಂದ ಹೊಂದಿಕೊಂಡವರಾಗಿ ಐಕ್ಯದಿಂದಿರಬೇಕೆಂದೂ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಉತ್ತೇಜಿಸುತ್ತೇನೆ.” ಇವತ್ತಿಗೂ ಇದು ಸತ್ಯವೇ. ಸಭೆಯೊಳಗೆ ಯಾವುದೇ ಒಡಕುಗಳು ಇರಬಾರದು.—1 ಕೊರಿಂ. 1:10-13; ರೋಮನ್ನರಿಗೆ 16:17, 18 ಓದಿ.

10. (ಎ) ಪೌಲನು ಕ್ರೈಸ್ತರಿಗೆ ಯಾವುದರ ನೆನಪು ಹುಟ್ಟಿಸಿದನು? (ಬಿ) ಇದರಿಂದ ನಾವೇನು ಕಲಿಯುತ್ತೇವೆ?

10 ಪೌಲನು ಕೊರಿಂಥದ ಅಭಿಷಿಕ್ತ ಕ್ರೈಸ್ತರಿಗೆ ಅವರು ಸ್ವರ್ಗದ ಪ್ರಜೆಗಳಾಗಿದ್ದಾರೆ ಮತ್ತು ಅವರು “ಭೂಮಿಗೆ ಸಂಬಂಧಪಟ್ಟ ವಿಷಯಗಳ” ಮೇಲೆ ಮನಸ್ಸಿಡಬಾರದೆಂದು ನೆನಪು ಹುಟ್ಟಿಸಿದನು. (ಫಿಲಿ. 3:17-20) * (ಪಾದಟಿಪ್ಪಣಿ ನೋಡಿ.) ಅಭಿಷಿಕ್ತ ಕ್ರೈಸ್ತರು ದೇವರನ್ನು, ಕ್ರಿಸ್ತನನ್ನು ಪ್ರತಿನಿಧಿಸುವ ರಾಯಭಾರಿಗಳಾಗಿದ್ದಾರೆ. ಒಂದು ದೇಶದ ರಾಯಭಾರಿ ಬೇರೊಂದು ದೇಶದಲ್ಲಿರುವಾಗ ಆ ದೇಶದ ಸಮಸ್ಯೆಗಳಲ್ಲಾಗಲಿ, ರಾಜಕೀಯದಲ್ಲಾಗಲಿ ಒಳಗೂಡುವುದಿಲ್ಲ. ಹಾಗೇ ಅಭಿಷಿಕ್ತರು ಲೋಕದ ಸಮಸ್ಯೆಗಳಲ್ಲಿ, ರಾಜಕೀಯದಲ್ಲಿ ಪಾಲು ತೆಗೆದುಕೊಳ್ಳುವುದಿಲ್ಲ. (2 ಕೊರಿಂ. 5:20) ಯಾರಿಗೆ ಭೂಮಿಯ ಮೇಲೆ ಅನಂತಕ್ಕೂ ಬದುಕುವ ನಿರೀಕ್ಷೆ ಇದೆಯೊ ಅವರು ದೇವರ ರಾಜ್ಯಕ್ಕೆ ನಿಷ್ಠೆ ತೋರಿಸುತ್ತಾರೆ ಮತ್ತು ಲೋಕಕ್ಕೆ ಸಂಬಂಧಪಟ್ಟ ಯಾವುದೇ ಹೋರಾಟ, ಜಗಳಗಳನ್ನು ಬೆಂಬಲಿಸುವುದಿಲ್ಲ.

ಯೆಹೋವನ ರಾಜ್ಯಕ್ಕೆ ನಿಷ್ಠೆ ತೋರಿಸಲು ನಿಮ್ಮನ್ನೇ ತರಬೇತಿಗೊಳಿಸಿ

11, 12. (ಎ) ದೇವರ ರಾಜ್ಯಕ್ಕೆ ನಿಷ್ಠರಾಗಿ ಉಳಿಯಬೇಕಾದರೆ ನಾವು ಎಂಥ ಮನೋಭಾವಗಳನ್ನು ಬಿಟ್ಟುಬಿಡಬೇಕು? (ಬಿ) ಕೆಲವು ಜನರ ಬಗ್ಗೆ ಒಬ್ಬ ಸಹೋದರಿಗೆ ಹೇಗನಿಸುತ್ತಿತ್ತು? (ಸಿ) ಬದಲಾಗಲು ಅವಳಿಗೆ ಸಹಾಯ ಮಾಡಿದ್ದು ಯಾವುದು?

11 ಲೋಕದ ಅನೇಕ ಭಾಗಗಳಲ್ಲಿ ಈ ವಿಷಯ ಸರ್ವಸಾಮಾನ್ಯ: ತಮ್ಮದೇ ಹಿನ್ನೆಲೆ, ಸಂಸ್ಕೃತಿ, ಭಾಷೆಯವರ ಕಡೆಗೆ ಜನರಿಗೆ ಒಲವು ಜಾಸ್ತಿ. ಅವರಿಗೆ ತಮ್ಮ ಊರಿನ ಬಗ್ಗೆ ತುಂಬ ಹೆಮ್ಮೆ ಇರುತ್ತದೆ. ಆದರೆ ಇಂಥ ಮನೋಭಾವ ನಮಗೆ ತಟ್ಟುವಂತೆ ನಾವು ಬಿಡಬಾರದು. ನಮ್ಮ ಯೋಚನೆಯನ್ನು ಬದಲಾಯಿಸಿ ಯಾವುದೇ ಸನ್ನಿವೇಶ ಬಂದರೂ ಯಾವುದೇ ನಿರ್ದಿಷ್ಟ ಪಕ್ಷದ ಪರ ವಹಿಸದಿರಲು ಮನಸ್ಸಾಕ್ಷಿಯನ್ನು ತರಬೇತಿಗೊಳಿಸಬೇಕು. ಇದನ್ನು ಮಾಡುವುದು ಹೇಗೆ?

12 ಮಿರ್ಯೆಟ * (ಪಾದಟಿಪ್ಪಣಿ ನೋಡಿ) ಎಂಬವಳ ಉದಾಹರಣೆ ನೋಡಿ. ಇವಳು ಹುಟ್ಟಿದ ದೇಶದ ಹಿಂದಿನ ಹೆಸರು ಯುಗೋಸ್ಲಾವಿಯ. ಇವಳು ಬೆಳೆದ ಊರಲ್ಲಿ ಸರ್ಬಿಯನರನ್ನು ತುಂಬ ದ್ವೇಷಿಸಲಾಗುತ್ತಿತ್ತು. ಯೆಹೋವನ ಬಗ್ಗೆ ಕಲಿತಾಗ ಆತನು ಒಂದು ಭಾಷೆ, ಬಣ್ಣದ ಜನರನ್ನು ಮೇಲು, ಇನ್ನೊಂದು ಭಾಷೆ, ಬಣ್ಣದ ಜನರನ್ನು ಕೀಳಾಗಿ ಭಾವಿಸುವುದಿಲ್ಲವೆಂದು ಮಿರ್ಯೆಟಳಿಗೆ ಗೊತ್ತಾಯಿತು. ಜನರು ಒಬ್ಬರನ್ನೊಬ್ಬರು ದ್ವೇಷಿಸಬೇಕೆಂದು ಬಯಸುವವನು ಸೈತಾನನೇ ಎಂದೂ ಕಲಿತಳು. ಆದ್ದರಿಂದ ತನ್ನ ಯೋಚನಾ ರೀತಿಯನ್ನು ಬದಲಾಯಿಸಲು  ತುಂಬ ಪ್ರಯತ್ನಪಟ್ಟಳು. ಆದರೆ ಸರ್ಬಿಯನರ ಬಗ್ಗೆ ಅವಳಿಗೆ ಹಿಂದೆ ಇದ್ದ ದ್ವೇಷದ ಭಾವನೆ ಪುನಃ ಚಿಗುರೊಡೆಯಿತು. ಏಕೆಂದರೆ ಅವಳಿದ್ದ ಜಾಗದಲ್ಲಿ ಬೇರೆಬೇರೆ ಜನಾಂಗೀಯ ಗುಂಪುಗಳ ಮಧ್ಯೆ ಯುದ್ಧ ಶುರುವಾಯಿತು. ಸರ್ಬಿಯನರಿಗೆ ಸುವಾರ್ತೆ ಸಾರಲೂ ಅವಳಿಗೆ ಮನಸ್ಸಿರಲಿಲ್ಲ. ಇದು ತಪ್ಪೆಂದು ಅವಳಿಗೆ ಗೊತ್ತಿತ್ತು. ಆದ್ದರಿಂದ ಈ ಯೋಚನೆಯನ್ನು ನಿಲ್ಲಿಸಲು ಸಹಾಯ ಮಾಡುವಂತೆ ಯೆಹೋವನಿಗೆ ಬೇಡಿಕೊಂಡಳು. ತಾನು ಪಯನೀಯರ್‌ ಸೇವೆ ಆರಂಭಿಸಲು ಸಹಾಯ ಕೊಡುವಂತೆಯೂ ಕೇಳಿಕೊಂಡಳು. ಮಿರ್ಯೆಟ ಹೀಗನ್ನುತ್ತಾಳೆ: “ಸುವಾರ್ತೆ ಸಾರುವುದರ ಕಡೆಗೆ ಪೂರ್ತಿ ಗಮನಹರಿಸುವುದು ಎಲ್ಲಕ್ಕಿಂತ ಒಳ್ಳೇ ಸಹಾಯ ಅಂತ ನನಗನಿಸುತ್ತದೆ. ಸೇವೆಯಲ್ಲಿರುವಾಗ ಯೆಹೋವನ ಪ್ರೀತಿ ತುಂಬಿದ ವ್ಯಕ್ತಿತ್ವವನ್ನು ಅನುಸರಿಸಲು ಪ್ರಯತ್ನಿಸುತ್ತೇನೆ. ಆಗ ನನಗಿರುವ ನಕಾರಾತ್ಮಕ ಭಾವನೆಗಳು ಕರಗಿಹೋಗುತ್ತವೆ.”

13. (ಎ) ತೊಯ್ಲ ಯಾವ ಸನ್ನಿವೇಶ ಎದುರಿಸಬೇಕಾಗಿ ಬಂತು? (ಬಿ) ಇದಕ್ಕವಳ ಪ್ರತಿಕ್ರಿಯೆ ಏನಾಗಿತ್ತು? (ಸಿ) ಅವಳಿಗಾದ ಅನುಭವದಿಂದ ನಾವೇನು ಕಲಿಯಬಹುದು?

13 ಮೆಕ್ಸಿಕೊ ದೇಶದವರಾದ ತೊಯ್ಲ ಎಂಬ ಸಹೋದರಿಯ ಉದಾಹರಣೆ ನೋಡಿ. ಈಕೆ ಯುರೋಪ್‌ಗೆ ಸ್ಥಳಾಂತರಿಸಿದಳು. ಅಲ್ಲಿ ಈಕೆ ಹೋಗುತ್ತಿದ್ದ ಸಭೆಯಲ್ಲಿ ಲ್ಯಾಟಿನ್‌ ಅಮೆರಿಕದ ಇನ್ನೊಂದು ಭಾಗದ ಸಹೋದರ ಸಹೋದರಿಯರು ಇದ್ದರು. ಈಕೆಯ ದೇಶ, ಅಲ್ಲಿನ ಪದ್ಧತಿಗಳು, ಸಂಗೀತದ ಬಗ್ಗೆ ಕೆಲವು ಸಹೋದರ ಸಹೋದರಿಯರು ತಮಾಷೆ ಮಾಡಿದರು ಎಂದು ತೊಯ್ಲ ಹೇಳುತ್ತಾಳೆ. ಇದರಿಂದಾಗಿ ಈಕೆಯ ಮನಸ್ಸಿಗೆ ತುಂಬ ನೋವಾಯಿತು. ಆದರೆ ಕೋಪ ಮಾಡಿಕೊಳ್ಳದಂತೆ ಸಹಾಯ ಮಾಡಲು ಯೆಹೋವನಿಗೆ ಪ್ರಾರ್ಥಿಸಿದಳು. ನಾವು ಈಕೆಯ ಸನ್ನಿವೇಶದಲ್ಲಿರುತ್ತಿದ್ದರೆ ಏನು ಮಾಡುತ್ತಿದ್ದೆವು? ನಮ್ಮ ಸಹೋದರ ಸಹೋದರಿಯರಲ್ಲಿ ಕೆಲವರಿಗೆ ಅವರ ಊರಿನ ಬಗ್ಗೆ ಟೀಕಿಸಿದರೆ ಕೋಪ ಅಥವಾ ದುಃಖವನ್ನು ತಡೆದುಕೊಳ್ಳಲು ಈಗಲೂ ಕಷ್ಟವಾಗುತ್ತದೆ. ಹಾಗಾಗಿ ಯಾವುದೇ ಒಂದು ವರ್ಗ, ಭಾಷೆಯ ಜನರು ಮೇಲು, ಇನ್ನೊಂದು ಕೀಳು ಎಂದು ನಮ್ಮ ಮಾತಲ್ಲಾಗಲಿ ಕ್ರಿಯೆಯಲ್ಲಾಗಲಿ ನಾವು ತೋರಿಸಬಾರದು. ಸಭೆಯಲ್ಲಾಗಲಿ ಬೇರಾವುದೇ ಸ್ಥಳದಲ್ಲಾಗಲಿ ನಾವು ಒಡಕನ್ನು ಹುಟ್ಟಿಸಬಾರದು.—ರೋಮ. 14:19; 2 ಕೊರಿಂ. 6:3.

14. ಯೆಹೋವನಿಗೆ ಜನರ ಬಗ್ಗೆ ಯಾವ ನೋಟವಿದೆಯೊ ಅದೇ ನೋಟವನ್ನು ನೀವೂ ಇಟ್ಟುಕೊಳ್ಳಲು ಯಾವುದು ಸಹಾಯ ಮಾಡುತ್ತದೆ?

14 ಯೆಹೋವನ ಸೇವಕರೆಲ್ಲರೂ ಐಕ್ಯರು. ಹಾಗಾಗಿ ಒಂದು ಊರು ಅಥವಾ ದೇಶ ಇನ್ನೊಂದಕ್ಕಿಂತ ಮೇಲು ಎಂಬ ಅಭಿಪ್ರಾಯ ನಮಗೆ ಇರಬಾರದೆಂದು ನಮ್ಮೆಲ್ಲರಿಗೆ ಗೊತ್ತು. ಆದರೆ ನಿಮ್ಮ ಕುಟುಂಬದವರಿಂದಾಗಿ ಅಥವಾ ನೀವು ಬೆಳೆಯುತ್ತಾ ಬಂದಾಗ ನಿಮ್ಮ ಸುತ್ತಮುತ್ತಲಿದ್ದವರ ಪ್ರಭಾವದಿಂದಾಗಿ ನೀವು ನಿಮ್ಮ ಊರನ್ನೊ ದೇಶವನ್ನೊ ಪ್ರೀತಿಸುತ್ತಿರಬಹುದು. ಆದ್ದರಿಂದ ಬೇರೆ ದೇಶಗಳ ಜನರು, ಸಂಸ್ಕೃತಿಗಳು ಅಥವಾ ವರ್ಗಗಳ ಬಗ್ಗೆ ನಿಮ್ಮಲ್ಲಿ ಈಗಲೂ ನಕಾರಾತ್ಮಕ ಯೋಚನೆಗಳಿರಬಹುದು. ಈ ಮನೋಭಾವವನ್ನು ಸರಿಪಡಿಸಲು ಯಾವುದು ಸಹಾಯ ಮಾಡುತ್ತದೆ? ತಮ್ಮ ದೇಶದ ಬಗ್ಗೆ ಹೆಮ್ಮೆಪಡುವವರು ಅಥವಾ ತಾವೇ ಇನ್ನೊಬ್ಬರಿಗಿಂತ ಮೇಲು ಎಂದು ನೆನಸುವವರ ಕುರಿತು ಯೆಹೋವನ ನೋಟವೇನೆಂದು ಧ್ಯಾನಿಸಿರಿ. ಇದರ ಬಗ್ಗೆ ನಿಮ್ಮ ವೈಯಕ್ತಿಕ ಅಧ್ಯಯನದಲ್ಲೊ ಕುಟುಂಬ ಆರಾಧನೆಯಲ್ಲೊ ಸಂಶೋಧನೆ ಮಾಡಿ. ನಂತರ ಯೆಹೋವನಿಗೆ ಜನರ ಬಗ್ಗೆ ಯಾವ ನೋಟವಿದೆಯೊ ಅದೇ ನೋಟವನ್ನು ನೀವೂ ಇಟ್ಟುಕೊಳ್ಳಲು ಸಹಾಯ ಮಾಡುವಂತೆ ಆತನಿಗೆ ಪ್ರಾರ್ಥಿಸಿ.—ರೋಮನ್ನರಿಗೆ 12:2 ಓದಿ.

ಯೆಹೋವನಿಗೆ ನಿಷ್ಠರಾಗಿರಬೇಕಾದರೆ ಜನ ನಮಗೆ ಏನೇ ಮಾಡಿದರೂ ನಾವು ಆತನಿಗೆ ವಿಧೇಯರಾಗಿರಬೇಕು (ಪ್ಯಾರ 15, 16 ನೋಡಿ)

15, 16. (ಎ) ನಾವು ಬೇರೆಯವರಿಗಿಂತ ಭಿನ್ನರಾಗಿರುವುದರಿಂದ ಕೆಲವರು ಹೇಗೆ ಪ್ರತಿಕ್ರಿಯಿಸಬಹುದು? (ಬಿ) ಮಕ್ಕಳು ಯೆಹೋವನಿಗೆ ನಿಷ್ಠರಾಗಿರುವಂತೆ ಹೆತ್ತವರು ಹೇಗೆ ಸಹಾಯ ಮಾಡಬಲ್ಲರು?

15 ಯೆಹೋವನನ್ನು ಒಳ್ಳೇ ಮನಸ್ಸಾಕ್ಷಿಯಿಂದ ಆರಾಧಿಸಬೇಕೆಂಬುದು ನಮ್ಮೆಲ್ಲರ ಆಸೆ. ಆದ್ದರಿಂದ ಕೆಲವೊಮ್ಮೆ ನಮ್ಮ ಸಹೋದ್ಯೋಗಿಗಳಿಂದ, ಸಹಪಾಠಿಗಳಿಂದ, ನೆರೆಹೊರೆಯವರಿಂದ ಮತ್ತು ಸಂಬಂಧಿಕರಿಂದ ಭಿನ್ನರಾಗಿರುತ್ತೇವೆ. (1 ಪೇತ್ರ 2:19) ನಾವು ಹೀಗಿರುವುದರಿಂದ ಜನ ನಮ್ಮನ್ನು ದ್ವೇಷಿಸುತ್ತಾರೆಂದು ಯೇಸು ಎಚ್ಚರಿಕೆ ಕೊಟ್ಟಿದ್ದಾನೆ. ಆದರೆ ನೆನಪಿಡಿ, ನಮ್ಮನ್ನು ವಿರೋಧಿಸುವ ಅನೇಕರಿಗೆ ದೇವರ ರಾಜ್ಯದ ಬಗ್ಗೆ ಗೊತ್ತಿಲ್ಲ. ಆದ್ದರಿಂದ ಯಾವುದೇ ಮಾನವ ಸರ್ಕಾರಗಳಿಗಿಂತ ದೇವರ ರಾಜ್ಯಕ್ಕೆ ನಾವು ನಿಷ್ಠೆ ತೋರಿಸುವುದು ಏಕೆ ಪ್ರಾಮುಖ್ಯ ಎಂದು ಅವರಿಗೆ ಅರ್ಥವಾಗುವುದಿಲ್ಲ.

16 ಯೆಹೋವನಿಗೆ ನಿಷ್ಠರಾಗಿರಬೇಕಾದರೆ ಯಾರು ಏನೇ ಹೇಳಲಿ, ಏನೇ ಮಾಡಲಿ ನಾವು ಆತನಿಗೆ ವಿಧೇಯರಾಗಿರಬೇಕು. (ದಾನಿ. 3:16-18) ಬೇರೆಲ್ಲರಿಗಿಂತ ಯುವ ಜನರಿಗೆ ಇದು ಕಷ್ಟವಾಗಬಹುದು. ಅಪ್ಪಅಮ್ಮಂದಿರೇ, ನಿಮ್ಮ ಮಕ್ಕಳು ಶಾಲೆಯಲ್ಲಿ ಧೈರ್ಯದಿಂದಿರಲು ಸಹಾಯ ಮಾಡಿ. ರಾಷ್ಟ್ರೀಯ ಸಮಾರಂಭಗಳಲ್ಲಿ ಭಾಗವಹಿಸದಿರಲು ನಿಮ್ಮ ಮಕ್ಕಳಿಗೆ ಹೆದರಿಕೆ ಇರಬಹುದು. ಹಾಗಾಗಿ ಯೆಹೋವನಿಗೆ ಈ ವಿಷಯಗಳ ಬಗ್ಗೆ ಹೇಗೆ  ಅನಿಸುತ್ತದೆಂದು ನಿಮ್ಮ ಕುಟುಂಬ ಆರಾಧನೆಯ ಸಮಯದಲ್ಲಿ ಚರ್ಚಿಸಿ. ಅವರೇನನ್ನು ನಂಬುತ್ತಾರೊ ಅದನ್ನು ಸ್ಪಷ್ಟವಾಗಿ, ಗೌರವದಿಂದ ಹೇಗೆ ವಿವರಿಸುವುದು ಎಂದು ಹೇಳಿಕೊಡಿ. (ರೋಮ. 1:16) ಅಗತ್ಯ ಬಿದ್ದರೆ ನಿಮ್ಮ ಮಕ್ಕಳ ಶಿಕ್ಷಕರ ಜೊತೆ ಮಾತಾಡಿ. ಅವರಿಗೆ ನಿಮ್ಮ ನಂಬಿಕೆಗಳ ಬಗ್ಗೆ ವಿವರಿಸುವ ಮೂಲಕ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ.

ಯೆಹೋವನ ಎಲ್ಲಾ ವಿಧದ ಸೃಷ್ಟಿಯಲ್ಲಿ ಆನಂದಿಸಿರಿ

17. ಯಾವ ರೀತಿ ಯೋಚಿಸುವುದನ್ನು ನಾವು ಬಿಡಬೇಕು? ಏಕೆ?

17 ನಾವು ಬೆಳೆದು ಬಂದ ಊರಿನ ಆಹಾರ, ಭಾಷೆ, ಪ್ರಕೃತಿ ದೃಶ್ಯಗಳು ಹಾಗೂ ಪದ್ಧತಿಗಳನ್ನು ಇಷ್ಟಪಡುವುದು ಸಹಜ. ಆದರೆ ‘ನಾನೇನು ಇಷ್ಟಪಡುತ್ತೇನೊ ಅದು ಬೇರೆಯವರ ಇಷ್ಟಕ್ಕಿಂತ ಯಾವಾಗಲೂ ಉತ್ತಮ’ ಎಂದು ನಾವು ನೆನಸಬಾರದು. ಏಕೆಂದರೆ ತನ್ನ ವೈವಿಧ್ಯಮಯ ಸೃಷ್ಟಿಯನ್ನು ನಾವು ಆನಂದಿಸಬೇಕೆಂಬುದು ಯೆಹೋವನ ಬಯಕೆ. (ಕೀರ್ತ. 104:24; ಪ್ರಕ. 4:11) ಹಾಗಾಗಿ ‘ಅದೇ ಒಳ್ಳೇದು, ಇದೇ ಒಳ್ಳೇದು’ ಎಂದು ನಾವು ಯಾಕೆ ಹೇಳಬೇಕು?

18. ಬೇರೆಯವರ ಬಗ್ಗೆ ಯೆಹೋವನಿಗಿರುವ ನೋಟವೇ ನಮಗೂ ಇರುವುದು ಏಕೆ ಒಳ್ಳೇದು?

18 ಎಲ್ಲಾ ರೀತಿಯ ಜನರು ತನ್ನ ಬಗ್ಗೆ ಕಲಿಯಬೇಕು, ತನ್ನನ್ನು ಆರಾಧಿಸಬೇಕು ಮತ್ತು ಶಾಶ್ವತವಾಗಿ ಬದುಕಬೇಕು ಎಂಬುದು ಯೆಹೋವನ ಆಸೆ. (ಯೋಹಾ. 3:16; 1 ತಿಮೊ. 2:3, 4) ಹಾಗಾಗಿ ನಮ್ಮ ಸಹೋದರರ ಅಭಿಪ್ರಾಯಗಳು ನಮ್ಮ ಅಭಿಪ್ರಾಯಗಳಿಗಿಂತ ಭಿನ್ನವಾಗಿದ್ದರೂ ಸರಿ, ಅವು ಯೆಹೋವನು ಮೆಚ್ಚುವಂಥದ್ದಾಗಿದ್ದರೆ ಅವುಗಳಿಗೆ ಕಿವಿಗೊಡುತ್ತೇವೆ. ಹೀಗೆ ಮಾಡುವಾಗ ನಮ್ಮ ಜೀವನದಲ್ಲಿ ಹೊಸತನ, ಆನಂದ ಇರುತ್ತದೆ. ಸಹೋದರ ಸಹೋದರಿಯರಾಗಿ ಐಕ್ಯದಿಂದಿರುತ್ತೇವೆ. ನಾವು ಈಗ ಚರ್ಚಿಸಿರುವಂತೆ, ಯೆಹೋವನಿಗೆ ಮತ್ತು ಆತನ ರಾಜ್ಯಕ್ಕೆ ನಾವು ನಿಷ್ಠರಾಗಿರುವುದರಿಂದ ಈ ಲೋಕದ ಹೋರಾಟ, ಜಗಳಗಳಲ್ಲಿ ಪಕ್ಷವಹಿಸುವುದಿಲ್ಲ. ಸೈತಾನನ ಲೋಕದಲ್ಲಿರುವ ಅಹಂಕಾರ, ಪೈಪೋಟಿಯಂಥ ಮನೋಭಾವಗಳನ್ನು ನಾವು ದ್ವೇಷಿಸುತ್ತೇವೆ. ಶಾಂತಿಯನ್ನು ಪ್ರೀತಿಸಲು ಮತ್ತು ದೀನರಾಗಿರಲು ಯೆಹೋವನು ನಮಗೆ ಕಲಿಸಿಕೊಟ್ಟಿರುವುದಕ್ಕೆ ನಾವೆಷ್ಟು ಕೃತಜ್ಞರಲ್ಲವೇ! ಕೀರ್ತನೆಗಾರನಿಗೆ ಅನಿಸಿದಂತೆ ನಮಗೂ ಅನಿಸುತ್ತದೆ: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!”—ಕೀರ್ತ. 133:1.

^ ಪ್ಯಾರ. 10 ಫಿಲಿಪ್ಪಿ ಸಭೆಯಲ್ಲಿದ್ದ ಕೆಲವರು ರೋಮಿನ ಪ್ರಜೆಗಳಾಗಿದ್ದರು. ಇವರಿಗೆ, ರೋಮನ್‌ ಪ್ರಜೆಗಳಲ್ಲದ ಸಹೋದರರಿಗಿಂತ ಹೆಚ್ಚಿನ ಹಕ್ಕುಗಳಿದ್ದಿರಬಹುದು.

^ ಪ್ಯಾರ. 12 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.