ಬಹಿಷ್ಕಾರ—ಪ್ರೀತಿಯ ಏರ್ಪಾಡು
“ನನ್ನ ಮಗನನ್ನು ಬಹಿಷ್ಕರಿಸಲಾಗಿದೆ ಎಂಬ ಪ್ರಕಟಣೆಯನ್ನು ಸಭೆಯಲ್ಲಿ ಕೇಳಿದಾಗ ನನ್ನ ಬದುಕೇ ಮುಗಿದು ಹೋದ ಹಾಗನಿಸಿತು. ಅವನು ನನ್ನ ದೊಡ್ಡ ಮಗ. ನಾವು ಸ್ನೇಹಿತರ ಹಾಗೆ ಇದ್ವಿ. ಯಾವಾಗಲೂ ಒಟ್ಟಿಗೆ ಇರುತ್ತಿದ್ವಿ, ಕೆಲಸಗಳನ್ನು ಒಟ್ಟಿಗೆ ಮಾಡ್ತಿದ್ವಿ. ತುಂಬ ಒಳ್ಳೇ ಮಗನಾಗಿದ್ದ. ಆದ್ರೆ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ, ಅವನ ನಡತೆ ಪೂರ್ತಿ ಬದಲಾಯಿತು. ಅವನಿಗೆ ಬಹಿಷ್ಕಾರ ಆದದ್ದನ್ನು ನೆನಸಿ ನನ್ನ ಹೆಂಡತಿ ಯಾವಾಗಲೂ ಅಳುತ್ತಿದ್ದಳು. ಅವಳಿಗೆ ಏನು ಹೇಳಿ ಸಮಾಧಾನ ಮಾಡಬೇಕಂತನೇ ಗೊತ್ತಾಗುತ್ತಿರಲಿಲ್ಲ. ನಮ್ಮಿಂದ ಏನಾದ್ರೂ ತಪ್ಪಾಯ್ತಾ . . . ನಾವೇ ಅವನನ್ನು ಸರಿಯಾಗಿ ಬೆಳೆಸಲಿಲ್ವಾ ಎಂಬ ಯೋಚನೆ ಕಾಡುತ್ತಿತ್ತು.” ಮಗನ ಬಹಿಷ್ಕಾರವಾದಾಗ ತನಗಾದ ನೋವನ್ನು ಹೂಲ್ಯಾನ್ ಎಂಬ ತಂದೆ ಹೀಗೆ ತೋಡಿಕೊಂಡರು.
ಬಹಿಷ್ಕಾರ ಆದಾಗ ಇಷ್ಟೊಂದು ನೋವಾಗುತ್ತದೆ ಅಂದಮೇಲೆ ಅದನ್ನು ಹೇಗೆ ಪ್ರೀತಿಯ ಏರ್ಪಾಡು ಎಂದು ಹೇಳಬಹುದು? ಬಹಿಷ್ಕಾರ ಮಾಡಲು ಬೈಬಲಿನಲ್ಲಿ ಯಾವುದಾದರೂ ಕಾರಣಗಳನ್ನು ಕೊಡಲಾಗಿದೆಯಾ? ಒಬ್ಬ ವ್ಯಕ್ತಿಯನ್ನು ಯಾವಾಗ ಬಹಿಷ್ಕಾರ ಮಾಡುತ್ತಾರೆ?
ಯಾವಾಗ ಬಹಿಷ್ಕಾರ ಮಾಡಲಾಗುತ್ತದೆ?
ಒಬ್ಬ ಯೆಹೋವನ ಸಾಕ್ಷಿಯನ್ನು ಬಹಿಷ್ಕಾರ ಮಾಡಲಾಗಿದೆಯೆಂದರೆ ಒಂದು, ಆ ವ್ಯಕ್ತಿ ದೀಕ್ಷಾಸ್ನಾನ ಪಡೆದವನಾಗಿದ್ದು ಗಂಭೀರ ಪಾಪ ಮಾಡಿರುತ್ತಾನೆ. ಎರಡು, ಅವನು ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟಿರುವುದಿಲ್ಲ.
ಈಗ ನಾವು ಪರಿಪೂರ್ಣರಾಗಿ ಇರಬೇಕೆಂದು ಯೆಹೋವನು ಬಯಸುವುದಿಲ್ಲವಾದರೂ ನಾವು ಪರಿಶುದ್ಧರಾಗಿರಬೇಕೆಂದು ಬಯಸುತ್ತಾನೆ. ಅದಕ್ಕಾಗಿ ಕೆಲವು ನೀತಿಯ ಮಟ್ಟಗಳನ್ನು ಆತನು ಇಟ್ಟಿದ್ದಾನೆ. ಆ ಮಟ್ಟಗಳಿಗನುಸಾರ ತನ್ನ ಜನರು ಜೀವಿಸಬೇಕೆಂದು ಬಯಸುತ್ತಾನೆ. ಉದಾಹರಣೆಗೆ ಲೈಂಗಿಕ ಅನೈತಿಕತೆ, ವಿಗ್ರಹ ಆರಾಧನೆ, ಕಳ್ಳತನ, ಸುಲಿಗೆ, ಕೊಲೆ, ಪ್ರೇತವ್ಯವಹಾರ ಇಂಥ ಗಂಭೀರ ಪಾಪಗಳನ್ನು ತನ್ನ ಜನರು ಮಾಡಬಾರದು ಎನ್ನುವುದು ಯೆಹೋವನ ಅಪೇಕ್ಷೆ.—1 ಕೊರಿಂ. 6:9, 10; ಪ್ರಕ. 21:8.
ಯೆಹೋವನು ನಮಗೆ ಏನು ಮಾಡಲು ಹೇಳಿದ್ದಾನೋ ಅದು ನಮ್ಮಿಂದ ಆಗದಿರುವ ವಿಷಯವೇನಲ್ಲ. ನಿಜ ಹೇಳಬೇಕೆಂದರೆ, ಆತನ ನೀತಿಯ ಮಟ್ಟಗಳಿಗೆ ಅನುಸಾರ ನಡೆದರೆ ನಮಗೇ ಒಳ್ಳೇದು. ಮಾತ್ರವಲ್ಲ ನಮಗೆ ಶಾಂತಿಯುತ, ಸಭ್ಯ ಹಾಗೂ ಭರವಸೆ ಇಡಬಹುದಾದ ಜನರೊಟ್ಟಿಗೆ ಇರುವ ಅವಕಾಶ ಸಿಕ್ಕಿರುವುದು ಈ ಮಟ್ಟಗಳಿಂದಾಗಿಯೇ. ಏಕೆಂದರೆ ನಾವೆಲ್ಲರೂ ಯೆಹೋವನ ಮಟ್ಟಗಳಿಗನುಸಾರ ಜೀವಿಸುತ್ತೇವೆಂದು ಆತನಿಗೆ ಮಾತುಕೊಟ್ಟು ಅದರ ಪ್ರಕಾರ ನಡೆಯುತ್ತಿದ್ದೇವೆ.
ಆದರೆ ಮಾನವ ಬಲಹೀನತೆಯಿಂದಾಗಿ ಒಬ್ಬ ಕ್ರೈಸ್ತನು ದೇವರ ಮಟ್ಟಗಳನ್ನು ಮುರಿದು ಗಂಭೀರ ಪಾಪ ಮಾಡುವುದಾದರೆ? ಪುರಾತನ ಕಾಲದಲ್ಲೂ ನಂಬಿಗಸ್ತ ಸೇವಕರು ಗಂಭೀರ ತಪ್ಪುಗಳನ್ನು ಮಾಡಿದರು, ಆದರೂ ಯೆಹೋವನು ಅವರನ್ನು ತಳ್ಳಿಬಿಡಲಿಲ್ಲ. ರಾಜ ದಾವೀದನ ಉದಾಹರಣೆ ನಮ್ಮೆಲ್ಲರಿಗೆ ಗೊತ್ತು. ಅವನು ವ್ಯಭಿಚಾರ ಮಾಡಿದ, ಕೊಲೆ ಮಾಡಿದ. ಆದರೂ ಪ್ರವಾದಿ ನಾತಾನನು ಅವನಿಗೆ “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ” ಎಂದು ಹೇಳಿದನು.—2 ಸಮು. 12:13.
ದಾವೀದನು ಮನಸಾರೆ ಪಶ್ಚಾತ್ತಾಪಪಟ್ಟ ಕಾರಣ ಯೆಹೋವನು ಅವನನ್ನು ಕ್ಷಮಿಸಿದನು. (ಕೀರ್ತ. 32:1-5) ಇಂದು ಸಹ, ಪಾಪ ಮಾಡಿರುವ ವ್ಯಕ್ತಿ ಪಶ್ಚಾತ್ತಾಪಪಟ್ಟರೆ ಕ್ಷಮೆ ಸಿಗುತ್ತದೆ. ಪಶ್ಚಾತ್ತಾಪಪಡದಿದ್ದರೆ ಮತ್ತು ಪಾಪವನ್ನು ಮಾಡುತ್ತಾ ಇದ್ದರೆ ಮಾತ್ರ ಬಹಿಷ್ಕಾರ ಮಾಡಲಾಗುತ್ತದೆ. (ಅ. ಕಾ. 3:19; 26:20) ಹಾಗಾಗಿ ನ್ಯಾಯ ನಿರ್ಣಾಯಕ ಕಮಿಟಿಯಲ್ಲಿರುವ ಹಿರಿಯರು ಪಾಪ ಮಾಡಿರುವ ವ್ಯಕ್ತಿಯಲ್ಲಿ ನಿಜ ಪಶ್ಚಾತ್ತಾಪ ಕಾಣದಿದ್ದಲ್ಲಿ ಆ ವ್ಯಕ್ತಿಯನ್ನು ಬಹಿಷ್ಕಾರ ಮಾಡಬೇಕು.
ನಮ್ಮ ಕುಟುಂಬದವರ ಅಥವಾ ಸ್ನೇಹಿತರ ಬಹಿಷ್ಕಾರ ಆದಾಗ ನಮಗೆ ದುಃಖ ಆಗುತ್ತದೆ. ಕಮಿಟಿಯಲ್ಲಿರುವ ಹಿರಿಯರು ‘ಹಿಂದೆ ಮುಂದೆ ನೋಡದೆ ನಿರ್ಣಯ ಮಾಡಿದ್ದಾರೆ’ ಅಥವಾ ‘ಒಂಚೂರೂ ದಯೆ ತೋರಿಸಿಲ್ಲ’ ಎಂದು ನಮಗನಿಸಬಹುದು. ಆದರೆ ವಿಷಯ
ಹಾಗಲ್ಲ. ಬಹಿಷ್ಕಾರ ಮಾಡುವುದು ಪ್ರೀತಿಯ ಏರ್ಪಾಡು. ಅದು ಹೇಗೆಂದು ಬೈಬಲಿನಲ್ಲಿ ಹೇಳಲಾಗಿದೆ.ಬಹಿಷ್ಕಾರ ಮಾಡುವುದರ ಪ್ರಯೋಜನಗಳು
“ವಿವೇಕವು ತನ್ನ ಕ್ರಿಯೆಗಳ ಮೂಲಕ” ಅಂದರೆ ಫಲಿತಾಂಶಗಳ ಮೂಲಕ “ನೀತಿಯುತವೆಂದು ಸಾಬೀತಾಗುತ್ತದೆ” ಎಂದು ಯೇಸು ಹೇಳಿದನು. (ಮತ್ತಾ. 11:19) ಪಶ್ಚಾತ್ತಾಪಪಡದ ತಪ್ಪಿತಸ್ಥನನ್ನು ಬಹಿಷ್ಕಾರ ಮಾಡುವುದು ವಿವೇಕದ ನಿರ್ಧಾರವಾಗಿದೆ ಎಂದು ಅದರ ಒಳ್ಳೇ ಫಲಿತಾಂಶಗಳಿಂದ ಗೊತ್ತಾಗುತ್ತದೆ. ಅಂಥ ಮೂರು ಫಲಿತಾಂಶಗಳನ್ನು ನೋಡೋಣ:
ತಪ್ಪುಮಾಡಿದವರನ್ನು ಬಹಿಷ್ಕಾರ ಮಾಡುವುದು ದೇವರ ಹೆಸರಿಗೆ ಗೌರವ ತರುತ್ತದೆ. ಒಬ್ಬ ಮಗನ ನಡತೆ ನೋಡಿ ಜನರು ಅವನ ಅಪ್ಪಅಮ್ಮನ ಬಗ್ಗೆ ಒಳ್ಳೇದಾಗಿ ಅಥವಾ ಕೆಟ್ಟದಾಗಿ ಮಾತಾಡುತ್ತಾರೆ. ಅದೇ ರೀತಿ ಯೆಹೋವನ ಸಾಕ್ಷಿಗಳು ಎಂಬ ಹೆಸರಿರುವ ನಾವು ಹೇಗೆ ನಡೆದುಕೊಳ್ಳುತ್ತೇವೋ ಅದನ್ನು ಜನರು ನೋಡಿ ಯೆಹೋವನ ಬಗ್ಗೆ ಒಳ್ಳೇದಾಗಿ ಅಥವಾ ಕೆಟ್ಟದಾಗಿ ಮಾತಾಡಬಹುದು. (ಯೆಶಾ. 43:10) ನಾವು ಯೆಹೋವನಿಟ್ಟಿರುವ ನೈತಿಕ ಮಟ್ಟಗಳನ್ನು ಪಾಲಿಸಿದರೆ ಆತನ ಹೆಸರಿಗೆ ಗೌರವ ತರುತ್ತೇವೆ. ಯೆಹೆಜ್ಕೇಲನ ಸಮಯದಲ್ಲಿದ್ದ ಯೆಹೂದ್ಯರು ಹಾಗೆ ಮಾಡಲಿಲ್ಲ. ಅವರ ನಡತೆಯಿಂದಾಗಿ ಯೆಹೋವನ ಹೆಸರು ಅಪಕೀರ್ತಿಗೆ ಗುರಿಯಾಯಿತು.—ಯೆಹೆ. 36:19-23.
ನಾವು ಅನೈತಿಕತೆಯಲ್ಲಿ ಒಳಗೂಡಿದರೆ ದೇವರ ಪವಿತ್ರ ಹೆಸರಿಗೆ ಕಳಂಕ ತರುತ್ತೇವೆ. ಆದ್ದರಿಂದಲೇ ಅಪೊಸ್ತಲ ಪೇತ್ರನು ಕ್ರೈಸ್ತರಿಗೆ ಹೀಗೆ ಹೇಳಿದನು: “ನಿಮ್ಮನ್ನು ಕರೆದಾತನು ಪವಿತ್ರನಾಗಿರುವ ಪ್ರಕಾರ ವಿಧೇಯ ಮಕ್ಕಳಂತೆ ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು ಸಹ ಪವಿತ್ರರಾಗಿರಿ. ಏಕೆಂದರೆ, ‘[ದೇವರು] ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು’ ಎಂದು ಬರೆಯಲ್ಪಟ್ಟಿದೆ.” (1 ಪೇತ್ರ 1:14-16) ನಮ್ಮ ಶುದ್ಧ, ಪವಿತ್ರ ನಡತೆ ದೇವರ ಹೆಸರಿಗೆ ಗೌರವ ತರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಯೆಹೋವನ ಸಾಕ್ಷಿಗಳಲ್ಲಿ ಯಾರಾದರೂ ತಪ್ಪನ್ನು ಮಾಡಿದಾಗ ಅದು ಅವರ ಸ್ನೇಹಿತರಿಗೆ, ಪರಿಚಯಸ್ಥರಿಗೆ ತಿಳಿದುಬರಬಹುದು. ಆ ವ್ಯಕ್ತಿಯನ್ನು ಬಹಿಷ್ಕಾರ ಮಾಡಿದಾಗ ಅವರಿಗೆ, ಯೆಹೋವನ ಜನರು ಪವಿತ್ರರಾಗಿದ್ದಾರೆ ಮತ್ತು ಅವರು ಶುದ್ಧತೆಯನ್ನು ಕಾಪಾಡಿಕೊಳ್ಳಲು ಬೈಬಲ್ ಮಾರ್ಗದರ್ಶನವನ್ನು ಪಾಲಿಸುತ್ತಾರೆ ಎಂದು ಗೊತ್ತಾಗುತ್ತದೆ. ಸ್ವಿಟ್ಸರ್ಲೆಂಡ್ನ ಒಂದು ರಾಜ್ಯ ಸಭಾಗೃಹಕ್ಕೆ ಹೊಸಬನೊಬ್ಬ ಬಂದ. ತಾನೂ ಯೆಹೋವನ ಸಾಕ್ಷಿಯಾಗಬೇಕೆಂದು ಹೇಳಿದ. ಯಾಕೆ ಗೊತ್ತಾ? ಯೆಹೋವನ ಸಾಕ್ಷಿಯಾಗಿದ್ದ ಅವನ ಸಹೋದರಿಯನ್ನು ಅನೈತಿಕ ನಡತೆಯ ಕಾರಣ ಬಹಿಷ್ಕಾರ ಮಾಡಲಾಗಿತ್ತು. ಹಾಗಾಗಿ ಅವನು “ಕೆಟ್ಟ ನಡತೆಯನ್ನು ಸಹಿಸದ” ಸಂಘಟನೆಯ ಭಾಗವಾಗಬೇಕೆಂದು ಬಯಸಿದ.
ಬಹಿಷ್ಕಾರದ ಏರ್ಪಾಡು ಸಭೆಯನ್ನು ಶುದ್ಧವಾಗಿಡುತ್ತದೆ, ಸಂರಕ್ಷಿಸುತ್ತದೆ. ಬೇಕುಬೇಕೆಂದೇ ಪಾಪ ಮಾಡುತ್ತಿರುವವರನ್ನು ಸಭೆಯಲ್ಲೇ ಇಟ್ಟುಕೊಳ್ಳುವುದು ಸಭೆಗೆ ಅಪಾಯಕಾರಿ ಎಂದು ಪೌಲನು ಕೊರಿಂಥದವರಿಗೆ ಎಚ್ಚರಿಸಿದನು. ಹೇಗೆ ಸ್ವಲ್ಪ ಹುಳಿ ಹಿಟ್ಟನ್ನೆಲ್ಲ ಹುಳಿಮಾಡುತ್ತದೋ ಹಾಗೆಯೇ ಅಂಥ ವ್ಯಕ್ತಿಯ ಕೆಟ್ಟ ನಡತೆಯು ಬೇರೆಯವರ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹಾಗಾಗಿ “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿರಿ” ಎಂದು ಪೌಲನು ಹೇಳಿದನು.—1 ಕೊರಿಂ. 5:6, 11-13.
ಪೌಲನು ಹೇಳಿದ ಆ ‘ದುಷ್ಟನು’ ನಾಚಿಕೆಯಿಲ್ಲದೆ ಅನೈತಿಕ ಜೀವನ ನಡೆಸುತ್ತಿದ್ದನು ಮತ್ತು ಅವನ ಈ ಕೆಟ್ಟ ಕೃತ್ಯವನ್ನು ಸಭೆಯಲ್ಲಿ ಇತರರು ಸರಿಯೆಂದು ಸಮರ್ಥಿಸತೊಡಗಿದ್ದರು ಎಂದು ತೋರುತ್ತದೆ. (1 ಕೊರಿಂ. 5:1, 2) ಆ ವ್ಯಕ್ತಿಯ ಗಂಭೀರ ತಪ್ಪನ್ನು ನಿರ್ಲಕ್ಷಿಸಿದ್ದರೆ ಬೇರೆಯವರು ಸಹ ಅವನಂತೆ ಆಗುವ ಅಪಾಯವಿತ್ತು. ಅವರು ಲೈಂಗಿಕ ಸ್ವೇಚ್ಛಾಚಾರ ತುಂಬಿದ ನಗರದಲ್ಲಿ ಜೀವಿಸುತ್ತಿದ್ದರು. ಹಾಗಾಗಿ ಅಲ್ಲಿನ ಅನೈತಿಕ ಪದ್ಧತಿಗಳನ್ನು ಸಭೆಯಲ್ಲಿದ್ದವರು ಅನುಸರಿಸುವ ಸಾಧ್ಯತೆಯಿತ್ತು. ಯಾರಾದರೂ ಬೇಕುಬೇಕೆಂದೇ ಪಾಪ ಮಾಡಿದಾಗ ಅದನ್ನು ‘ಪರವಾಗಿಲ್ಲ’ ಎಂದು ಬಿಟ್ಟುಬಿಟ್ಟರೆ ದೇವರ ಮಟ್ಟಗಳನ್ನು ಅಸಡ್ಡೆ ಮಾಡಲು ಇತರರಿಗೆ ಕಲಿಸಿಕೊಟ್ಟಂತೆ. (ಪ್ರಸಂ. 8:11) ಮಾತ್ರವಲ್ಲ ಹೀಗೆ ನಿರ್ಲಜ್ಜೆಯಿಂದ ಪಾಪ ಮಾಡುತ್ತಾ ಇರುವವರು ‘ನೀರಿನೊಳಗಿರುವ ಅಗೋಚರವಾದ ಬಂಡೆಗಳಂತೆ’ ಇದ್ದು ಸಭೆಯಲ್ಲಿರುವ ಇತರರ ನಂಬಿಕೆಯೆಂಬ ಹಡಗನ್ನು ಒಡೆದು ನುಚ್ಚುನೂರು ಮಾಡುತ್ತಾರೆ.—ಯೂದ 4, 12.
ಬಹಿಷ್ಕಾರ ಮಾಡುವುದರಿಂದ ತಪ್ಪು ಮಾಡಿದವನಿಗೆ ತಪ್ಪಿನ ಅರಿವಾಗುತ್ತದೆ. ಈ ಅಂಶವು ಯೇಸು ಹೇಳಿದ ಪೋಲಿಹೋದ ಮಗನ ದೃಷ್ಟಾಂತದಿಂದ ಸ್ಪಷ್ಟವಾಗುತ್ತದೆ. ಆ ಯುವಕನು ಮನೆ ಬಿಟ್ಟು ಹೋದನು. ಅನೈತಿಕ ಜೀವನ ನಡೆಸಿ ತನ್ನ ಆಸ್ತಿಯನ್ನೆಲ್ಲ ಹಾಳುಮಾಡಿದನು. ಆದರೆ ನಂತರ ಕಷ್ಟ ಬಂದಾಗ ಅವನಿಗೆ ತನ್ನ ಜೀವನಕ್ಕೆ ಅರ್ಥವಿಲ್ಲ, ಹೊರಗಿನ ಜಗತ್ತು ಎಷ್ಟು ಕಠೋರ ಎಂದು ಅರ್ಥವಾಯಿತು. ತನ್ನ ತಪ್ಪನ್ನು ಅರಿತು, ಪಶ್ಚಾತ್ತಾಪಪಟ್ಟು ಮನೆಗೆ ಹಿಂದಿರುಗಿ ಬಂದ. (ಲೂಕ 15:11-24) ಮಗನು ಮನೆಗೆ ಬಂದಾಗ ತಂದೆಗಾದ ಸಂತೋಷವನ್ನು ಯೇಸು ವರ್ಣಿಸಿದ್ದಾನೆ. ಇದು, ತಪ್ಪಿತಸ್ಥನು ತಿದ್ದಿಕೊಂಡು ಹಿಂದೆ ಬರುವಾಗ ನಮ್ಮ ತಂದೆಯಾದ ಯೆಹೋವನಿಗೆಷ್ಟು ಸಂತೋಷವಾಗುತ್ತದೆಂದು ತೋರಿಸುತ್ತದೆ. “ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ” ಎಂದಿದ್ದಾನೆ ಯೆಹೋವನು.—ಯೆಹೆ. 33:11.
ಆಧ್ಯಾತ್ಮಿಕ ಮನೆಯಾದ ಕ್ರೈಸ್ತ ಸಭೆಯಿಂದ ಬಹಿಷ್ಕಾರ ಆದ ವ್ಯಕ್ತಿಗೂ ಆ ಪೋಲಿಹೋದ ಮಗನಂತೆ ತಾನೇನು ಕಳೆದುಕೊಂಡಿದ್ದೇನೆ ಎಂದು ನಂತರ ಗೊತ್ತಾಗಬಹುದು. ತನ್ನ ತಪ್ಪಿನ ಕೆಟ್ಟ ಪರಿಣಾಮಗಳನ್ನು ಅನುಭವಿಸಬಹುದು. ಯೆಹೋವನೊಟ್ಟಿಗೆ, ಆತನ ಜನರೊಟ್ಟಿಗೆ ಒಳ್ಳೇ ಸಂಬಂಧವಿದ್ದ ಸಮಯದಲ್ಲಿ ಅನುಭವಿಸಿದ ಸಂತೋಷದ ದಿನಗಳು ನೆನಪಾಗಬಹುದು. ಆಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ.
ತಪ್ಪಿತಸ್ಥನು ತನ್ನನ್ನು ಸರಿಪಡಿಸಿಕೊಳ್ಳಬೇಕಾದರೆ ಪ್ರೀತಿ ಮತ್ತು ಕಟ್ಟುನಿಟ್ಟು ತುಂಬ ಅಗತ್ಯ. “ನೀತಿವಂತರು ನನ್ನನ್ನು ಹೊಡೆಯಲಿ, ಕೀರ್ತ. 141:5) ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ನೋಡೋಣ. ಹಿಮವಿರುವ ಪರ್ವತವನ್ನು ಇಬ್ಬರು ಹತ್ತುತ್ತಿದ್ದಾರೆ ಅಂದುಕೊಳ್ಳಿ. ವಿಪರೀತ ಚಳಿಯ ಕಾರಣ ಒಬ್ಬನು ಶಕ್ತಿಹೀನನಾಗುತ್ತಾನೆ. ಅವನ ದೇಹದ ಉಷ್ಣತೆ ತುಂಬ ಕಡಿಮೆಯಾಗುತ್ತದೆ. ಅವನ ಜೀವಕ್ಕೆ ಅಪಾಯವಿದೆ. ಅವನೆಲ್ಲಾದರೂ ಆ ಹಿಮದಲ್ಲಿ ನಿದ್ದೆಹೋದನೆಂದರೆ ಅವನ ಜೀವ ಉಳಿಯುವುದಿಲ್ಲ. ಆದರೆ ಅವನಿಗೆ ಮಂಪರು ಹತ್ತುತ್ತಿದೆ. ಹಾಗಾಗಿ ಅವನನ್ನು ರಕ್ಷಿಸಲು ಯಾರಾದರೂ ಬರುವ ವರೆಗೂ ಸಂಗಡಿಗನು ಅವನು ನಿದ್ರೆ ಮಾಡದಂತೆ ಕೆನ್ನೆಗೆ ಜೋರಾಗಿ ಹೊಡೆಯುತ್ತಿರುತ್ತಾನೆ. ಹೀಗೆ ಹೊಡೆದಾಗ ಆ ವ್ಯಕ್ತಿಗೆ ತುಂಬ ನೋವಾಗುತ್ತದೆ ನಿಜ. ಆದರೆ ಅದರಿಂದಲೇ ಅವನ ಜೀವ ಉಳಿಯುತ್ತದೆ. ಹಾಗೆಯೇ ತಪ್ಪು ಮಾಡಿದವನಿಗೆ ನೋವಾಗುವುದಾದರೂ ನೀತಿವಂತ ವ್ಯಕ್ತಿಯು ಅವನನ್ನು ತಿದ್ದಬೇಕು. ಅದರಿಂದ ತಪ್ಪಿತಸ್ಥನಿಗೆ ತುಂಬ ಒಳಿತಾಗುತ್ತದೆ.
ಅದು ನನಗುಪಕಾರ; ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ” ಎಂದ ದಾವೀದ. (ಬಹಿಷ್ಕಾರ ಮಾಡಿದಾಗ ತಪ್ಪು ಮಾಡಿದವರಿಗೆ ಅಗತ್ಯವಿರುವ ಶಿಸ್ತು ಸಿಗುತ್ತದೆ. ಆರಂಭದಲ್ಲಿ ಹೇಳಲಾದ ಸಹೋದರ ಹೂಲ್ಯಾನ್ರವರ ಮಗ ಸುಮಾರು ಹತ್ತು ವರ್ಷಗಳ ನಂತರ ತನ್ನ ಜೀವನವನ್ನು ಸರಿಪಡಿಸಿಕೊಂಡು ಸಭೆಗೆ ಹಿಂದಿರುಗಿ ಬಂದನು. ಈಗ ಸಭೆಯಲ್ಲಿ ಹಿರಿಯನಾಗಿ ಸೇವೆ ಮಾಡುತ್ತಿದ್ದಾನೆ. “ಬಹಿಷ್ಕಾರ ಆದ ಮೇಲೆ ನನ್ನ ತಪ್ಪಿನ ಕಹಿ ಪರಿಣಾಮವನ್ನು ಅನುಭವಿಸಿದೆ. ಅಂಥ ಶಿಸ್ತು ನನಗೆ ನಿಜವಾಗಿಯೂ ಬೇಕಿತ್ತು” ಎನ್ನುತ್ತಾನೆ ಆ ಸಹೋದರ.—ಇಬ್ರಿ. 12:7-11.
ಬಹಿಷ್ಕಾರ ಆದವರಿಗೆ ನಾವು ಪ್ರೀತಿ ತೋರಿಸುವ ವಿಧ
ಬಹಿಷ್ಕಾರವು ಆಧ್ಯಾತ್ಮಿಕ ದುರಂತ ನಿಜ. ಆದರೆ ಅದು ಇನ್ನೂ ದೊಡ್ಡ ದುರಂತವಾಗಬಾರದು. ಹಾಗೆ ಆಗಬಾರದಾದರೆ, ಯಾವ ಉದ್ದೇಶದಿಂದ ಬಹಿಷ್ಕಾರ ಮಾಡಲಾಗುತ್ತದೋ ಆ ಉದ್ದೇಶ ನೆರವೇರಲಿಕ್ಕಾಗಿ ನಾವೆಲ್ಲರೂ ಸಹಕಾರ ನೀಡಬೇಕು.
ಹಿರಿಯರು: ಬಹಿಷ್ಕಾರ ಮಾಡಲಾಗುತ್ತದೆ ಎಂದು ತಪ್ಪಿತಸ್ಥನಿಗೆ ಹೇಳುವ ದುಃಖದ ಕೆಲಸವನ್ನು ಹಿರಿಯರು ಮಾಡಬೇಕಾಗುತ್ತದೆ. ಆದರೂ ಅವರದನ್ನು ಮಾಡುವಾಗ ಯೆಹೋವನಿಗೆ ಆ ವ್ಯಕ್ತಿಯ ಮೇಲಿರುವ ಪ್ರೀತಿಯನ್ನು ಪ್ರತಿಬಿಂಬಿಸಬೇಕು. ಸಭೆಗೆ ಹಿಂದಿರುಗಲು ಆ ವ್ಯಕ್ತಿ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕೆಂದು ಸಹ ಅವನಿಗೆ ಸ್ಪಷ್ಟವಾಗಿ, ಪ್ರೀತಿಯಿಂದ ವಿವರಿಸಬೇಕು. ಮಾತ್ರವಲ್ಲ ತಪ್ಪನ್ನು ತಿದ್ದಿಕೊಳ್ಳುತ್ತಿದ್ದಾರೆ ಎಂಬ ಸುಳಿವು ಬಹಿಷ್ಕಾರ ಆದ ವ್ಯಕ್ತಿಯಲ್ಲಿ ಕಂಡುಬಂದರೆ ಹಿರಿಯರು ಆಗಾಗ್ಗೆ ಅವರನ್ನು ಭೇಟಿಮಾಡಬೇಕು ಮತ್ತು ಯೆಹೋವನ ಬಳಿ ಅವರು ಹಿಂದಿರುಗಿ ಬರಲು ಏನು ಮಾಡಬೇಕೆಂದು ನೆನಪುಹುಟ್ಟಿಸಬೇಕು. *
ಕುಟುಂಬ ಸದಸ್ಯರು: ಕುಟುಂಬ ಸದಸ್ಯರು ಬಹಿಷ್ಕಾರದ ನಿರ್ಣಯವನ್ನು ಒಪ್ಪಿಕೊಂಡು ಆ ಏರ್ಪಾಡನ್ನು ಬೆಂಬಲಿಸುವ ಮೂಲಕ ಸಭೆಗೆ ಮತ್ತು ಬಹಿಷ್ಕಾರವಾದ ವ್ಯಕ್ತಿಗೆ ಪ್ರೀತಿ ತೋರಿಸುತ್ತಾರೆ. ಹೂಲ್ಯಾನ್ ತಮ್ಮ ಮಗನ ಬಗ್ಗೆ ಹೀಗೆ ಹೇಳುತ್ತಾರೆ: “ಅವನು ಆಗಲೂ ನಮ್ಮ ಮಗನೇ. ಆದರೆ ಅವನ ತಪ್ಪು ನಡತೆ ನಮ್ಮ ಮತ್ತು ಅವನ ಮಧ್ಯೆ ಅಡ್ಡಗೋಡೆಯಂತಿತ್ತು.”
ಸಭೆ: ಸಭೆಯಲ್ಲಿರುವವರು ಬಹಿಷ್ಕಾರ ಆದ ವ್ಯಕ್ತಿಯೊಟ್ಟಿಗೆ ಮಾತಾಡದಿರುವ ಮತ್ತು ಯಾವುದೇ ಸಂಪರ್ಕ ಇಟ್ಟುಕೊಳ್ಳದಿರುವ ಮೂಲಕ ಪ್ರೀತಿ ತೋರಿಸಬೇಕು. (1 ಕೊರಿಂ. 5:11; 2 ಯೋಹಾ. 10, 11) ಮಾತ್ರವಲ್ಲ ಯೆಹೋವನು ಹಿರಿಯರ ಮೂಲಕ ಕೊಟ್ಟಿರುವ ಶಿಸ್ತಿಗೆ ಬೆಂಬಲ ಕೊಡಬೇಕು. ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರಿಗೆ ಸಭೆಯವರು ಹೇಗೆ ಸಹಾಯ ಮಾಡಬಹುದು? ಅವರು ತುಂಬ ನೊಂದುಹೋಗಿರುವ ಆ ಸಮಯದಲ್ಲಿ ಅವರಿಗೆ ಹೆಚ್ಚು ಪ್ರೀತಿ, ಬೆಂಬಲ ಕೊಡಬೇಕು. ಬದಲಿಗೆ ಅವರೊಟ್ಟಿಗೆ ಮಾತಾಡದೆ ಅವರಿಗೇ ಬಹಿಷ್ಕಾರವಾಗಿದೆ ಎಂಬಂತೆ ವರ್ತಿಸಬಾರದು.—ರೋಮ. 12:13, 15.
ಹೂಲ್ಯಾನ್ ಹೀಗೆ ಹೇಳುತ್ತಾರೆ: “ಬಹಿಷ್ಕಾರದ ಏರ್ಪಾಡು ನಮಗೆ ಅಗತ್ಯ. ಏಕೆಂದರೆ ಯೆಹೋವನ ನೀತಿಯ ಮಟ್ಟಗಳಿಗನುಸಾರ ನಡೆಯಲು ನಮಗೆ ಅದು ಸಹಾಯಮಾಡುತ್ತದೆ. ಅದರಿಂದ ನೋವಾಗುತ್ತದಾದರೂ ನಂತರ ಒಳ್ಳೇ ಪ್ರತಿಫಲ ಸಿಗುತ್ತದೆ. ನನ್ನ ಮಗನ ಕೆಟ್ಟ ನಡತೆ ನೋಡಿಯೂ ನಾನು ಸುಮ್ಮನಿದ್ದಿದ್ದರೆ ಅವನು ಯಾವತ್ತೂ ಬದಲಾಗುತ್ತಿರಲಿಲ್ಲ.”
^ ಪ್ಯಾರ. 24 1992, ಫೆಬ್ರವರಿ 1ರ ಕಾವಲಿನಬುರುಜು ಪುಟ 19-21 ನೋಡಿ.