ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕರ್ತನಲ್ಲಿ ಮಾತ್ರ” ಮದುವೆ—ಈಗಲೂ ಸಾಧ್ಯವೇ?

“ಕರ್ತನಲ್ಲಿ ಮಾತ್ರ” ಮದುವೆ—ಈಗಲೂ ಸಾಧ್ಯವೇ?

“ಸಭೆಯೊಳಗೆ ನನಗೆ ಗಂಡು ಸಿಗುತ್ತಿಲ್ಲ. ಮದುವೆಯಾಗದೆ ಹೀಗೇ ಮುದುಕಿ ಆಗುತ್ತೇನೆ ಏನೋ ಅಂತ ನನಗೆ ಭಯ ಆಗುತ್ತಿದೆ.”

“ಲೋಕದಲ್ಲಿರುವ ಕೆಲವು ಗಂಡಸರು ಎಷ್ಟು ದಯೆ, ಪ್ರೀತಿಯಿಂದ ನಡೆದುಕೊಳ್ಳುತ್ತಾರೆ, ಕಾಳಜಿ ವಹಿಸುತ್ತಾರೆ. ನನ್ನ ಧರ್ಮವನ್ನು ಅವರು ವಿರೋಧಿಸುವುದಿಲ್ಲ. ನಮ್ಮ ಕೆಲವು ಸಹೋದರರಿಗಿಂತಲೂ ‘ಒಂದು ಕೈ ಮೇಲೆಯೇ’ ಇದ್ದಾರೆಂದು ಹೇಳಬಹುದು.”

ಈ ಮಾತುಗಳು ಬಾಳಸಂಗಾತಿಗಾಗಿ ಹುಡುಕುತ್ತಿರುವ ದೇವರ ಸೇವಕರಲ್ಲಿ ಕೆಲವರದ್ದು. “ಕರ್ತನಲ್ಲಿರುವವನನ್ನು ಮಾತ್ರ” ಅಂದರೆ ಕ್ರೈಸ್ತ ವಿಶ್ವಾಸಿಯನ್ನು ಮಾತ್ರ ಮದುವೆಯಾಗುವಂತೆ ಅಪೊಸ್ತಲ ಪೌಲನು ಕೊಟ್ಟ ಬುದ್ಧಿವಾದ ಅವರಿಗೆ ಗೊತ್ತಿಲ್ಲ ಎಂದಲ್ಲ. ಎಲ್ಲಾ ಕ್ರೈಸ್ತರು ಅದನ್ನು ಪಾಲಿಸಬೇಕೆಂದೂ ಅವರಿಗೆ ಗೊತ್ತು. (1 ಕೊರಿಂ. 7:39) ಹಾಗಿದ್ದರೂ, ಯಾಕೆ ಅಂಥ ಮಾತುಗಳನ್ನಾಡುತ್ತಾರೆ?

ಈ ಸಲಹೆ ಬಗ್ಗೆ ಕೆಲವರಿಗೆ ಸಂಶಯವೇಕೆ?

ಮದುವೆಗೆ ತಯಾರಿರುವ ಸಹೋದರ ಸಹೋದರಿಯರ ಸಂಖ್ಯೆ ಸಮವಿಲ್ಲ ಎನ್ನುವುದು ಅವರ ಅಭಿಪ್ರಾಯ. ಕೆಲವು ದೇಶಗಳಲ್ಲಿ ಪರಿಸ್ಥಿತಿ ಅವರು ಹೇಳಿದಂತೆಯೇ ಇದೆ. ಉದಾಹರಣೆಗೆ, ಕೊರಿಯದಲ್ಲಿ ಅವಿವಾಹಿತ ಸಾಕ್ಷಿಗಳಲ್ಲಿ 57% ಸಹೋದರಿಯರು, 43% ಸಹೋದರರು ಇದ್ದಾರೆ. ಕೊಲಂಬಿಯದ ಸಾಕ್ಷಿಗಳಲ್ಲಿ 66% ಸಹೋದರಿಯರು, 34% ಸಹೋದರರು.

ಕೆಲವೊಂದು ದೇಶಗಳಲ್ಲಿನ ಇನ್ನೊಂದು ಸಮಸ್ಯೆಯೇನೆಂದರೆ, ಸಹೋದರಿಯರ ಅವಿಶ್ವಾಸಿ ಹೆತ್ತವರು ಗಂಡಿನಿಂದ ತುಂಬ ವಧುದಕ್ಷಿಣೆ ಕೇಳುತ್ತಾರೆ. ಅನುಕೂಲಸ್ಥರಲ್ಲದ ಸಹೋದರರಿಗೆ ಮದುವೆಯಾಗಲು ಇದೊಂದು ಅಡ್ಡಿ. ಇದೆಲ್ಲವನ್ನು ಮನಸ್ಸಿನಲ್ಲಿಟ್ಟು “ಕರ್ತನಲ್ಲಿ” ವಿಶ್ವಾಸಿಯಾದವರನ್ನು ಮಾತ್ರ ಮದುವೆಯಾಗುವುದು ಬರೀ ಒಂದು ಕನಸೆಂದು ಸಹೋದರಿಯೊಬ್ಬಳಿಗೆ ಅನಿಸಬಹುದು. “ಕ್ರೈಸ್ತರಲ್ಲೇ ನನಗೊಬ್ಬ ಸೂಕ್ತ ಗಂಡು ಸಿಗುವನೆಂದು ನೆನಸುವುದು ಎಷ್ಟರ ಮಟ್ಟಿಗೆ ಪ್ರಾಯೋಗಿಕ?” ಎಂಬ ಪ್ರಶ್ನೆ ಆಕೆಯ ಮನಸ್ಸಲ್ಲಿ ಏಳಬಹುದು. *

ಯೆಹೋವನಲ್ಲಿ ಭರವಸೆ ಅವಶ್ಯ

ನಿಮ್ಮ ಮನಸ್ಸಲ್ಲೂ ಇಂಥ ವಿಚಾರಗಳು ಬಂದಿರಬಹುದು. ಹಾಗಿದ್ದರೆ ನೆನಪಿಡಿ, ಯೆಹೋವನಿಗೆ ನಿಮ್ಮ ಸನ್ನಿವೇಶ ತಿಳಿದಿದೆ. ಈ ವಿಷಯದ ಬಗ್ಗೆ ನಿಮಗೆ ಹೇಗನಿಸುತ್ತದೆಂದು ಆತನಿಗೆ ಈಗಾಗಲೇ ಗೊತ್ತಿದೆ.—2 ಪೂರ್ವ. 6:29, 30.

ಹಾಗಿದ್ದರೂ ಕರ್ತನಲ್ಲಿ ವಿಶ್ವಾಸಿಯಾಗಿರುವವನನ್ನು ಮಾತ್ರ ಮದುವೆ ಆಗಬೇಕೆಂದು ಯೆಹೋವನು ತನ್ನ ವಾಕ್ಯದಲ್ಲಿ ನಿಯಮ ಕೊಟ್ಟಿದ್ದಾನೆ.  ಯಾಕೆ? ತನ್ನ ಜನರಿಗೆ ಯಾವುದು ಒಳ್ಳೇದೆಂದು ಆತನಿಗೆ ಗೊತ್ತಿರುವುದರಿಂದಲೇ. ಬುದ್ಧಿಯಿಲ್ಲದ ಕೆಲಸ ಮಾಡಿದರೆ ಆಗುವ ನೋವಿನಿಂದ ತನ್ನ ಸೇವಕರನ್ನು ಆತನು ರಕ್ಷಿಸಲು ಬಯಸುತ್ತಾನೆ. ಅಷ್ಟೇ ಅಲ್ಲ ಅವರು ಸಂತೋಷವಾಗಿ ಇರಬೇಕೆನ್ನುವುದು ಆತನ ಆಸೆ. ನೆಹೆಮೀಯನ ಕಾಲದಲ್ಲಿ ಅನೇಕ ಯೆಹೂದ್ಯರು ಯೆಹೋವನನ್ನು ಆರಾಧಿಸದಿದ್ದ ಅನ್ಯ ಸ್ತ್ರೀಯರನ್ನು ಮದುವೆಯಾಗುತ್ತಿದ್ದರು. ಆಗ ನೆಹೆಮೀಯನು ಅವರಿಗೆ ಸೊಲೊಮೋನನ ಕೆಟ್ಟ ಮಾದರಿ ಬಗ್ಗೆ ಹೇಳಿದ್ದು: “ಅವನು ತನ್ನ ದೇವರಿಗೆ ವಿಶೇಷಪ್ರಿಯನು . . . ಆದರೂ ಅನ್ಯದೇಶಸ್ತ್ರೀಯರು ಅವನನ್ನು ಪಾಪದಲ್ಲಿ ಬೀಳಿಸಿದರು.” (ನೆಹೆ. 13:23-26) ಹಾಗಾಗಿ ದೇವರು ತನ್ನ ಸೇವಕರಿಗೆ ಸತ್ಯಾರಾಧಕರನ್ನು ಮಾತ್ರ ಮದುವೆಯಾಗಬೇಕೆಂದು ಆಜ್ಞಾಪಿಸಿರುವುದು ಅವರ ಸ್ವಂತ ಒಳಿತಿಗಾಗಿಯೇ. (ಕೀರ್ತ. 19:7-10; ಯೆಶಾ. 48:17, 18) ದೇವರು ಪ್ರೀತಿಯಿಂದ ಕೊಡುವ ಆರೈಕೆಗಾಗಿ ನಿಜ ಕ್ರೈಸ್ತರು ಕೃತಜ್ಞರು. ಆತನು ಕೊಡುವ “ಉಚಿತಾಲೋಚನೆ” ಇಲ್ಲವೆ ನಿರ್ದೇಶನ ಪಾಲಿಸುತ್ತಾರೆ. ಹೀಗೆ ತಮ್ಮ ಅಧಿಪತಿಯಾದ ಆತನಿಗೆ ಅಧೀನರಾಗುವ ಮೂಲಕ ಆತನೇ ವಿಶ್ವದ ಪರಮ ಅಧಿಕಾರಿಯೆಂದು ಅಂಗೀಕರಿಸುತ್ತಾರೆ.—ಜ್ಞಾನೋ. 1:5.

ನಿಮ್ಮನ್ನು ದೇವರಿಂದ ದೂರ ಮಾಡಬಲ್ಲ ಒಬ್ಬ ವ್ಯಕ್ತಿಯೊಂದಿಗೆ ನೀವು ಖಂಡಿತವಾಗಿಯೂ ‘ಜೊತೆಯಾಗಬಾರದು.’ (2 ಕೊರಿಂ. 6:14) ದೇವರ ಈ ಮಾತು ನಮ್ಮನ್ನು ಕಾಪಾಡುತ್ತದೆಂಬ ವಿಷಯವನ್ನು ಕಾಲವೇ ರುಜುಪಡಿಸಿದೆ. ಇಂದು ಅನೇಕ ಕ್ರೈಸ್ತರು ದೇವರ ಈ ಮಾತನ್ನು ಪಾಲಿಸಿದ್ದರಿಂದ ತಾವು ವಿವೇಕದ ತೀರ್ಮಾನ ಮಾಡಿದ್ದೇವೆಂದು ತಿಳಿದುಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಹೀಗೆ ಮಾಡದೆ ಬೇರೆ ದಾರಿ ಹಿಡಿದಿದ್ದಾರೆ.

ಈಗಲೂ ಸಾಧ್ಯ!

ಆಸ್ಟ್ರೇಲಿಯದಲ್ಲಿ ಮ್ಯಾಗಿ * ಎಂಬ ಸಹೋದರಿ ಅವಿಶ್ವಾಸಿಯೊಬ್ಬನನ್ನು ಪ್ರೀತಿಸಲು ಆರಂಭಿಸಿದಾಗ ಏನಾಯಿತೆಂದು ವಿವರಿಸುತ್ತಾಳೆ. ಅವಳಂದದ್ದು: “ಅವನ ಜೊತೆ ಸಮಯ ಕಳೆಯಲಿಕ್ಕೆ ಎಷ್ಟೋ ಕೂಟಗಳನ್ನು ತಪ್ಪಿಸಿಕೊಂಡೆ. ನನ್ನ ಆಧ್ಯಾತ್ಮಿಕತೆ ತಳಮುಟ್ಟಿತು.” ಭಾರತದಲ್ಲಿ ರತ್ನ ಎಂಬಾಕೆಯ ಸಹಪಾಠಿಯೊಬ್ಬ ಬೈಬಲ್‌ ಅಧ್ಯಯನ ಮಾಡಲು ಶುರುಮಾಡಿದ. ಆಕೆಗೆ ಅವನ ಮೇಲೆ ಪ್ರೇಮ ಹುಟ್ಟಿತು. ಅವನು ಬೈಬಲ್‌ ಅಧ್ಯಯನ ಆರಂಭಿಸಿದ್ದರ ಉದ್ದೇಶ ಆಕೆಯೊಟ್ಟಿಗೆ ಪ್ರೇಮ ಸಂಬಂಧ ಬೆಳೆಸಿಕೊಳ್ಳುವುದೇ ಆಗಿತ್ತೆಂದು ಆಮೇಲೆ ಗೊತ್ತಾಯಿತು. ಕೊನೆಗೆ ರತ್ನ ಸತ್ಯವನ್ನು ಬಿಟ್ಟು, ಅವನನ್ನು ಮದುವೆಯಾಗಲು ಇನ್ನೊಂದು ಧರ್ಮಕ್ಕೆ ಮತಾಂತರವಾದಳು.

ಇನ್ನೊಂದು ಉದಾಹರಣೆ ಕ್ಯಾಮರೂನ್‌ ದೇಶದ ನ್‌ಡೆಂಕಾ ಅವಳದ್ದು. ಮದುವೆಯಾದಾಗ ಅವಳಿಗೆ ಬರೀ 19 ವರ್ಷ. ಅವಳ ಧರ್ಮ ಪಾಲಿಸುವುದನ್ನು ಮುಂದುವರಿಸಬಹುದೆಂದು ಮದುವೆ ಮುಂಚೆ ಗಂಡ ಮಾತುಕೊಟ್ಟಿದ್ದ. ಆದರೆ ಮದುವೆಯಾಗಿ ಎರಡು ವಾರಗಳು ಕಳೆದದ್ದೇ ತಡ, ಆಕೆ ಕ್ರೈಸ್ತ ಕೂಟಗಳಿಗೆ ಹೋಗಬಾರದೆಂದು ನಿಷೇಧ ಹಾಕಿದ. ಅವಳನ್ನುವುದು: “ನಾನು ಒಂಟಿ ಎಂಬ ಭಾವನೆ ಕಾಡತೊಡಗಿತು. ಯಾವಾಗಲೂ ಅಳುತ್ತಿದ್ದೆ. ನನ್ನ ಬದುಕು ಇನ್ನು ಮೇಲೆ ನನ್ನ ಕೈಯಲಿಲ್ಲ ಎಂದು ಅರಿವಾಯಿತು. ಯಾಕಾದರೂ ಹೀಗೆ ಮಾಡಿಬಿಟ್ಟೆ ಅಂತ ವಿಷಾದಿಸುತ್ತಾ ಇದ್ದೆ.”

ಅವಿಶ್ವಾಸಿ ಸಂಗಾತಿಗಳೆಲ್ಲರೂ ಕ್ರೂರಿಗಳು, ಕಠೋರರೂ ಆಗಿರುತ್ತಾರೆಂದು ಇದರರ್ಥವಲ್ಲ. ಅವಿಶ್ವಾಸಿಯೊಬ್ಬರನ್ನು ಮದುವೆಯಾದರೆ ನಿಮಗೆ ಈ ರೀತಿಯ ಸಮಸ್ಯೆಗಳು ಬರದೇ ಇರಬಹುದು. ಆದರೆ ಸ್ವಲ್ಪ ಯೋಚಿಸಿ, ನಿಮ್ಮ ಈ ತೀರ್ಮಾನದಿಂದಾಗಿ ಪ್ರೀತಿಯ ಸ್ವರ್ಗೀಯ ತಂದೆಯೊಟ್ಟಿಗಿನ ನಿಮ್ಮ ಸಂಬಂಧಕ್ಕೆ ಏನಾಗಬಹುದು? ‘ನನಗೆ ಒಳ್ಳೇದಾಗಲಿ ಎಂದು ಆತನು ಕೊಟ್ಟಿರುವ ಸಲಹೆಯನ್ನು ನಾನು ಪಾಲಿಸಲಿಲ್ಲವಲ್ಲ’ ಎಂದು ನೆನಸುವಾಗೆಲ್ಲ ನಿಮಗೆ ಹೇಗನಿಸಬಹುದು? ಅದಕ್ಕಿಂತಲೂ ಮುಖ್ಯವಾಗಿ ಯೆಹೋವನಿಗೆ ಹೇಗನಿಸಬಹುದು?—ಜ್ಞಾನೋ. 1:33.

ಇಡೀ ಲೋಕದಲ್ಲಿರುವ ಸಹೋದರ ಸಹೋದರಿಯರು, ‘ಕರ್ತನಲ್ಲಿರುವವರನ್ನು’ ಅಂದರೆ ಕ್ರೈಸ್ತ ವಿಶ್ವಾಸಿಯನ್ನು ಮದುವೆಯಾಗುವುದೇ ಅತ್ಯುತ್ತಮ ತೀರ್ಮಾನ ಎಂಬ ಮಾತಿಗೆ ಸಾಕ್ಷಿಕೊಡುತ್ತಾರೆ. ಇನ್ನೂ ಮದುವೆಯಾಗಿಲ್ಲದವರು, ಯೆಹೋವನ ಆರಾಧಕರನ್ನು ಮಾತ್ರ ಮದುವೆಯಾಗುತ್ತೇವೆಂಬ ತೀರ್ಮಾನ ಮಾಡುವ ಮೂಲಕ ದೇವರ ಹೃದಯವನ್ನು ಸಂತೋಷಪಡಿಸುವ ದೃಢನಿರ್ಣಯ ಮಾಡಿದ್ದಾರೆ. ಜಪಾನಿನಲ್ಲಿ ಮಿಚಿಕೊ ಎಂಬ ಸಹೋದರಿ ಅವಿವಾಹಿತಳಾಗಿದ್ದಾಗ ಅವಳಿಗೆ ಅವಿಶ್ವಾಸಿಯೊಬ್ಬನನ್ನು ಮದುವೆಯಾಗಲು ಆಕೆಯ ಸಂಬಂಧಿಕರು ಹೇಳಿದರು. ಆಕೆಯ ಮನವೊಪ್ಪಿಸಲು ಪ್ರಯತ್ನಿಸಿದರು. ಆಕೆ ಈ ಒತ್ತಡಕ್ಕೆ ಮಣಿಯಲಿಲ್ಲ. ಜೊತೆಗೆ, ಆಕೆಯ ಕೆಲವು ಗೆಳತಿಯರಿಗೆ, ಪರಿಚಯವಿರುವ ಸಹೋದರಿಯರಿಗೆ ಸಭೆಯೊಳಗೇ ಸಂಗಾತಿ ಸಿಗುತ್ತಿರುವುದನ್ನು ನೋಡಿದಳು. ಆಕೆ ಹೇಳುವುದು: “ಯೆಹೋವನು ‘ಸಂತೋಷದ ದೇವರು,’ ಹಾಗಾಗಿ ನಮ್ಮ ಸಂತೋಷ ಮದುವೆಯಾಗುವುದರ ಮೇಲೆ ಹೊಂದಿಕೊಂಡಿಲ್ಲ ಎಂದು ನನಗೇ ಹೇಳಿಕೊಳ್ಳುತ್ತಾ ಇದ್ದೆ. ಆತನು ನಮ್ಮ ಹೃದಯದ ಆಸೆಗಳನ್ನು ಪೂರೈಸುತ್ತಾನೆಂದೂ ನಂಬಿದ್ದೆ. ಹಾಗಾಗಿ ನಾವು ಬಯಸುವಂಥ ರೀತಿಯ ಸಂಗಾತಿ ನಮಗೆ ಸಿಗದಿದ್ದರೆ, ಸದ್ಯಕ್ಕೆ ಮದುವೆಯಾಗದೆ ಇರುವುದೇ ಒಳ್ಳೇದು.” (1 ತಿಮೊ. 1:11) ಕೊನೆಗೆ ಮಿಚಿಕೊ ಒಬ್ಬ ಒಳ್ಳೇ ಸಹೋದರನನ್ನು ಮದುವೆಯಾದಳು. ಅಷ್ಟು ಸಮಯ ಕಾದಿದ್ದಕ್ಕೆ ಆಕೆ ಸಂತೋಷಪಡುತ್ತಾಳೆ.

ಹಾಗೆಯೇ ಕೆಲವು ಸಹೋದರರು ಸಹ ತಮಗೆ ಸರಿಯಾದ ಜೋಡಿ ಸಿಗುವ ವರೆಗೂ ಕಾದಿದ್ದಾರೆ. ಇಂಥವರಲ್ಲಿ ಒಬ್ಬರು ಆಸ್ಟ್ರೇಲಿಯದ ಬಿಲ್‌. ಒಮ್ಮೊಮ್ಮೆ ಅವರಿಗೆ ಸಾಕ್ಷಿಗಳಲ್ಲದ ಸ್ತ್ರೀಯರ ಮೇಲೆ ಮನಸ್ಸಾಗುತ್ತಿತ್ತೆಂದು ಒಪ್ಪಿಕೊಳ್ಳುತ್ತಾರೆ. ಹಾಗನಿಸಿದರೂ ಅವರ ಜೊತೆ ಸಲುಗೆ ಬೆಳೆಸದೆ ಕಟ್ಟುನಿಟ್ಟಾಗಿದ್ದರು. ಯಾಕೆಂದರೆ ಅವಿಶ್ವಾಸಿಯೊಂದಿಗೆ “ಸಮತೆಯಿಲ್ಲದ ಜೊತೆ”ಯಾಗುವ ವಿಷಯದಲ್ಲಿ ಈ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲೂ ಬಿಲ್‌ಗೆ ಮನಸ್ಸಿರಲಿಲ್ಲ. ಅವರಿಗೆ ಕೆಲವು ಸಹೋದರಿಯರ ಮೇಲೆ ಆಸಕ್ತಿ ಹುಟ್ಟಿದರೂ ಆ ಸಹೋದರಿಯರು ಅವರನ್ನು ಇಷ್ಟಪಡಲಿಲ್ಲ. ಬಿಲ್‌ 30 ವರ್ಷಗಳ ವರೆಗೆ ಕಾದರು. ಕೊನೆಗೆ ಅವರಿಗೆ ಸರಿಯಾದ ಜೋಡಿ ಸಿಕ್ಕಿದರು. ಬಿಲ್‌ ಹೇಳುವುದು: “ನನಗೆ ಸ್ವಲ್ಪವೂ ವಿಷಾದವಿಲ್ಲ.” ಯಾಕೆ? “ನಾವು ಜೊತೆಯಾಗಿ ಸೇವೆಗೆ  ಹೋಗುತ್ತೇವೆ, ಅಧ್ಯಯನ ಮಾಡುತ್ತೇವೆ, ಆರಾಧನೆ ಮಾಡುತ್ತೇವೆ. ನನ್ನ ಹೆಂಡತಿಯ ಸ್ನೇಹಿತರನ್ನು ಭೇಟಿಯಾಗಿ, ಅವರೊಟ್ಟಿಗೆ ಸಮಯ ಕಳೆಯುವುದೆಂದರೆ ನನಗೆ ತುಂಬ ಖುಷಿ. ಏಕೆಂದರೆ ಅವರೆಲ್ಲರೂ ಯೆಹೋವನ ಆರಾಧಕರು. ಬೈಬಲ್‌ ತತ್ವಗಳನ್ನು ಅನ್ವಯಿಸಿ ನಮ್ಮ ವಿವಾಹ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಮಾಡುತ್ತಿದ್ದೇವೆ” ಎಂದು ವಿವರಿಸುತ್ತಾರೆ.

ಯೆಹೋವನ ಮೇಲೆ ಭರವಸೆಯಿಟ್ಟು ಕಾಯುವುದು

ಕಾಳಜಿ ವಹಿಸುವಂಥ ದೇವರಾದ ಯೆಹೋವನ ಕೈಗೆ ವಿಷಯವನ್ನು ಒಪ್ಪಿಸಿ ಕಾಯುತ್ತಿರುವಾಗ ನೀವೇನು ಮಾಡಬಹುದು? ನಿಮಗೆ ಯಾಕೆ ಇನ್ನೂ ಮದುವೆಯಾಗಿಲ್ಲವೆಂದು ಯೋಚಿಸಿ. “ಕರ್ತನಲ್ಲಿರುವವನನ್ನು ಮಾತ್ರ” ಮದುವೆ ಆಗಬೇಕೆಂಬ ಬೈಬಲ್‌ ನಿಯಮವನ್ನು ಪಾಲಿಸುತ್ತಿರುವುದೇ ಮುಖ್ಯ ಕಾರಣ ಆಗಿದ್ದರೆ ಅದಕ್ಕಾಗಿ ನಿಮ್ಮನ್ನು ಶ್ಲಾಘಿಸುತ್ತೇವೆ. ತನ್ನ ವಾಕ್ಯಕ್ಕೆ ವಿಧೇಯರಾಗುವ ನಿಮ್ಮ ದೃಢಸಂಕಲ್ಪದ ಬಗ್ಗೆ ಯೆಹೋವನು ಖಂಡಿತ ಸಂತೋಷಪಡುತ್ತಾನೆ. (1 ಸಮು. 15:22; ಜ್ಞಾನೋ. 27:11) ಪ್ರಾರ್ಥನೆ ಮೂಲಕ ‘ನಿಮ್ಮ ಹೃದಯವನ್ನು ದೇವರ ಮುಂದೆ ಬಿಚ್ಚಿರಿ.’ (ಕೀರ್ತ. 62:8) ನೀವು ದೇವರಿಗೆ ಮನಃಪೂರ್ವಕವಾಗಿ ಮತ್ತು ಬಿಟ್ಟುಕೊಡದೆ ಭಿನ್ನಹಗಳನ್ನು ಮಾಡುವಾಗ ನಿಮ್ಮ ಪ್ರಾರ್ಥನೆಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ. ಸ್ವತಃ ನಿಮ್ಮೊಳಗೆ ಆಗುತ್ತಿರುವ ಹೋರಾಟ ಮತ್ತು ಇತರರಿಂದ ಬರುವ ಒತ್ತಡಗಳ ಮಧ್ಯೆಯೂ ನೀವು ದೃಢರಾಗಿರುವಾಗ ದೇವರೊಟ್ಟಿಗಿನ ನಿಮ್ಮ ಸಂಬಂಧ ಬಲಗೊಳ್ಳುತ್ತದೆ. ಸರ್ವೋನ್ನತನು ತನ್ನೆಲ್ಲ ನಂಬಿಗಸ್ತ ಸೇವಕರ ಕಾಳಜಿವಹಿಸುತ್ತಾನೆ, ನೀವು ಆತನ ದೃಷ್ಟಿಯಲ್ಲಿ ಅಮೂಲ್ಯರೆಂದು ನೆನಪಿಡಿ. ನಿಮ್ಮ ಅಗತ್ಯಗಳ ಬಗ್ಗೆ, ಬಯಕೆಗಳ ಬಗ್ಗೆ ಆತನಿಗೆ ಚಿಂತೆಯಿದೆ. ಸಂಗಾತಿ ಕೊಡುತ್ತೇನೆಂದು ಆತನು ಯಾರಿಗೂ ಮಾತು ಕೊಡುವುದಿಲ್ಲ ನಿಜ. ಆದರೆ ನಿಮಗೆ ನಿಜವಾಗಿ ಬಾಳಸಂಗಾತಿ ಬೇಕಿದ್ದರೆ ಈ ಯೋಗ್ಯವಾದ ಆಸೆಯನ್ನು ಪೂರೈಸುವ ಅತ್ಯುತ್ತಮ ವಿಧ ಯಾವುದೆಂದು ದೇವರಿಗೆ ಗೊತ್ತು.—ಕೀರ್ತ. 145:16; ಮತ್ತಾ. 6:32.

ಕೀರ್ತನೆಗಾರ ದಾವೀದನಂದದ್ದು: “ಯೆಹೋವನೇ, ನನಗೆ ಬೇಗನೆ ಉತ್ತರ ಕೊಡು. ನನ್ನ ಪ್ರಾಣವು ಕುಂದಿಹೋಗಿದೆ; ನಿನ್ನ ಮುಖವನ್ನು ನನಗೆ ಮರೆಮಾಡಬೇಡ.” (ಕೀರ್ತ. 143:5-7, 10, ಪವಿತ್ರ ಗ್ರಂಥ ಭಾಷಾಂತರ) ಕೆಲವೊಮ್ಮೆ ನಿಮಗೂ ಹಾಗನಿಸಬಹುದು. ಆಗೆಲ್ಲ ನಿಮ್ಮ ಬಗ್ಗೆ ಸ್ವರ್ಗೀಯ ತಂದೆಯ ಚಿತ್ತವೇನೆಂದು ಆತನು ತೋರಿಸಿಕೊಡುವಂತೆ ಅವಕಾಶ ಮಾಡಿಕೊಡಿ. ಇದಕ್ಕಾಗಿ ನೀವು ಆತನ ವಾಕ್ಯವನ್ನು ಓದಲು ಮತ್ತು ಓದಿದ್ದನ್ನು ಯೋಚಿಸಲು ಸಮಯಮಾಡಿ. ಆಗ ಆತನ ಆಜ್ಞೆಗಳು ಮತ್ತು ಹಿಂದಿನ ಕಾಲದಲ್ಲಿ ತನ್ನ ಜನರಿಗಾಗಿ ಏನೆಲ್ಲ ಮಾಡಿದ್ದಾನೆಂಬದರ ಕುರಿತನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸಬಲ್ಲಿರಿ. ಆತನಿಗೆ ಕಿವಿಗೊಡುವ ಮೂಲಕ, ಆತನಿಗೆ ವಿಧೇಯರಾಗುವುದು ಎಷ್ಟು ವಿವೇಕಭರಿತ ಎಂಬ ಭರವಸೆ ನಿಮ್ಮಲ್ಲಿ ಇನ್ನಷ್ಟು ಹೆಚ್ಚಾಗುವುದು.

ಸಭೆಯಲ್ಲಿರುವ ಅವಿವಾಹಿತರು ಸಭೆಗೆ ಅಮೂಲ್ಯರು, ಕುಟುಂಬಗಳಿಗೂ ಚಿಕ್ಕ ಮಕ್ಕಳಿಗೂ ಹೆಚ್ಚಿನ ನೆರವು ನೀಡುತ್ತಾರೆ

ಮದುವೆಯಾಗಲು ಕಾಯುತ್ತಿರುವ ವರ್ಷಗಳಲ್ಲಿ ಸಂತೋಷ, ಸಂತೃಪ್ತಿ ಇರಬೇಕಾದರೆ ಇನ್ನೇನು ಮಾಡಬಹುದು? ಈ ಸಮಯವನ್ನು ಆಧ್ಯಾತ್ಮಿಕ ವಿವೇಚನೆ, ಉದಾರಭಾವ, ಶ್ರಮಶೀಲತೆ, ಹಿತವಾದ ನಡೆನುಡಿ, ದೇವಭಕ್ತಿ, ಒಳ್ಳೇ ಹೆಸರು ಇವೆಲ್ಲವನ್ನೂ ಪಡೆಯಲು ಬಳಸಿರಿ. ಇವೆಲ್ಲ ಸುಖೀ ಸಂಸಾರಕ್ಕೆ ಬೇಕಾಗುತ್ತವೆ. (ಆದಿ. 24:16-21; ರೂತ. 1:16, 17; 2:6, 7, 11; ಜ್ಞಾನೋ. 31:10-27) ಸಾರುವ ಕೆಲಸದಲ್ಲಿ ಮತ್ತು ಇತರ ಕ್ರೈಸ್ತ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡಿ. ಇದು ನಿಮಗೆ ಸಂರಕ್ಷಣೆಯೂ ಆಗಿರುವುದು. ಸಹೋದರ ಬಿಲ್‌ ತಾವು ಮದುವೆಯಾಗಲು ಕಾಯುತ್ತಿದ್ದ ವರ್ಷಗಳ ಬಗ್ಗೆ ಹೀಗನ್ನುತ್ತಾರೆ: “ಆ ಸಮಯ ದಾಟಿಹೋದದ್ದೇ ಗೊತ್ತಾಗಲಿಲ್ಲ. ಏಕೆಂದರೆ ಆ ಸಮಯವನ್ನು ಪಯನೀಯರನಾಗಿ ಯೆಹೋವನ ಸೇವೆಯಲ್ಲಿ ಬಳಸಿದೆ.”

ಹೌದು, “ಕರ್ತನಲ್ಲಿರುವವನನ್ನು ಮಾತ್ರ” ಮದುವೆಯಾಗಿ ಎಂಬ ನಿಯಮ ಈಗಲೂ ಪಾಲಿಸಲು ಸಾಧ್ಯ. ಅದನ್ನು ಪಾಲಿಸಿದರೆ ಯೆಹೋವನಿಗೆ ಮಾನ ತರುತ್ತೀರಿ. ನಿಮಗೆ ಶಾಶ್ವತ ತೃಪ್ತಿಯೂ ಸಿಗುವುದು. “ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು. ಅವನ ಮನೆಯಲ್ಲಿ ಧನೈಶ್ವರ್ಯಗಳಿರುವವು; ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವದು.” (ಕೀರ್ತ. 112:1, 3) ಹಾಗಾಗಿ “ಕರ್ತನಲ್ಲಿರುವವನನ್ನು ಮಾತ್ರ” ಮದುವೆಯಾಗಿ ಎಂದು ದೇವರು ಕೊಟ್ಟಿರುವ ನಿಯಮವನ್ನು ಕಾರಣಕ್ಕೂ ಬಿಟ್ಟುಕೊಡಬಾರದೆಂಬ ದೃಢಸಂಕಲ್ಪ ನಿಮಗಿರಲಿ!

^ ಪ್ಯಾರ. 7 ಈ ಲೇಖನದಲ್ಲಿ ನಾವು ವಿಷಯವನ್ನು ಸಹೋದರಿಯರನ್ನು ಮನಸ್ಸಿನಲ್ಲಿಟ್ಟು ಚರ್ಚಿಸುತ್ತಿರುವುದಾದರೂ ಇದೇ ತತ್ತ್ವಗಳು ಸಹೋದರರಿಗೂ ಅನ್ವಯ.

^ ಪ್ಯಾರ. 13 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.