ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಪುನರುತ್ಥಾನ ನಮ್ಮ ಮೇಲೆ ಬೀರುವ ಪರಿಣಾಮ

ಯೇಸುವಿನ ಪುನರುತ್ಥಾನ ನಮ್ಮ ಮೇಲೆ ಬೀರುವ ಪರಿಣಾಮ

“ಅವನು ಎಬ್ಬಿಸಲ್ಪಟ್ಟಿದ್ದಾನೆ.”—ಮತ್ತಾ. 28:6.

1, 2. (ಎ) ಕೆಲವು ಧಾರ್ಮಿಕ ಮುಖಂಡರು ಏನನ್ನು ತಿಳಿದುಕೊಳ್ಳಲು ಬಯಸಿದರು? (ಬಿ) ಅದಕ್ಕೆ ಪೇತ್ರ ಹೇಗೆ ಪ್ರತಿಕ್ರಿಯಿಸಿದನು? (ಶೀರ್ಷಿಕೆ ಚಿತ್ರ ನೋಡಿ.) (ಸಿ) ಪೇತ್ರ ಅಷ್ಟು ಧೈರ್ಯದಿಂದ ಮಾತಾಡಲು ಕಾರಣವೇನು?

ಯೇಸು ಸತ್ತು ಕೆಲವೇ ದಿನಗಳಾಗಿದ್ದವು. ಅಷ್ಟರಲ್ಲಿ ಅಪೊಸ್ತಲ ಪೇತ್ರನು ಯೆಹೂದಿ ಧಾರ್ಮಿಕ ಮುಖಂಡರ ಮುಂದೆ ನಿಂತು ಮಾತಾಡಬೇಕಾಯಿತು. ಏಕೆಂದರೆ ಅವನು ಒಬ್ಬ ಹುಟ್ಟು ಕುಂಟನನ್ನು ವಾಸಿಮಾಡಿದ್ದನು. ಅವನು ಇದನ್ನು ಯಾವ ಶಕ್ತಿಯಿಂದ ಹಾಗೂ ಯಾರ ಹೆಸರಿನಿಂದ ಮಾಡಿದನು ಎಂದು ಹೇಳುವಂತೆ ಈ ಧಾರ್ಮಿಕ ಮುಖಂಡರು ಒತ್ತಾಯಿಸಿದರು. ಇವರು ಭಯಹುಟ್ಟಿಸುವ ಪ್ರಭಾವಿ ಜನರಾಗಿದ್ದರು. ಯೇಸುವಿನ ಸಾವಲ್ಲಿ ಇವರದ್ದೇ ಕೈವಾಡವಿತ್ತು. ಹಾಗಿದ್ದರೂ ಪೇತ್ರನು ಅವರ ಪ್ರಶ್ನೆಗೆ ಧೈರ್ಯದಿಂದ ಹೀಗೆ ಉತ್ತರಿಸಿದನು: “ನೀವು ಶೂಲಕ್ಕೇರಿಸಿದ, ಆದರೆ ದೇವರು ಸತ್ತವರೊಳಗಿಂದ ಎಬ್ಬಿಸಿದ ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ ಈ ಮನುಷ್ಯನು ನಿಮ್ಮ ಮುಂದೆ ಸ್ವಸ್ಥನಾಗಿ ನಿಂತಿದ್ದಾನೆ.”—ಅ. ಕಾ. 4:5-10.

2 ಕೆಲವೇ ದಿನಗಳ ಹಿಂದೆ ಪೇತ್ರ ಭಯದಿಂದ ಯೇಸುವನ್ನು ಮೂರು ಸಾರಿ ಅಲ್ಲಗಳೆದಿದ್ದನು. (ಮಾರ್ಕ 14:66-72) ಆದರೆ ಈಗ ಧಾರ್ಮಿಕ ಮುಖಂಡರ ಮುಂದೆ ನಿಂತು ಅಷ್ಟು ಧೈರ್ಯದಿಂದ ಮಾತಾಡಲು ಅವನಿಗೆ ಯಾವುದು ಸಹಾಯಮಾಡಿತು? ಇದರಲ್ಲಿ ಪವಿತ್ರಾತ್ಮದ ಪಾತ್ರವಿತ್ತು ನಿಜ. ಆದರೆ ಯೇಸುವಿನ ಪುನರುತ್ಥಾನ ಆಗಿದೆ ಎಂದು ಪೇತ್ರನಿಗಿದ್ದ ಖಾತ್ರಿ ಇದರಲ್ಲಿ ಮುಖ್ಯ ಪಾತ್ರ ವಹಿಸಿತು. ಯೇಸು ಜೀವದಿಂದಿದ್ದಾನೆ ಎಂದು ಅವನಿಗೆ ಹೇಗೆ ಅಷ್ಟು ಖಾತ್ರಿಯಿತ್ತು? ನಮಗೆ ಆ ಖಾತ್ರಿ ಹೇಗಿರಬಲ್ಲದು?

3, 4. (ಎ) ಯೇಸುವಿನ ಅಪೊಸ್ತಲರು ಹುಟ್ಟುವ ಮುಂಚೆಯೇ ಯಾವ ಪುನರುತ್ಥಾನಗಳು ನಡೆದಿದ್ದವು? (ಬಿ) ಯೇಸು ಯಾವ ಪುನರುತ್ಥಾನಗಳನ್ನು ಮಾಡಿದನು?

3 ಮೃತರು ಪುನಃ ಜೀವಂತವಾಗಿ ಎದ್ದು ಬರುವುದು ಯೇಸುವಿನ ಅಪೊಸ್ತಲರಿಗೆ  ಹೊಸ ವಿಷಯವಾಗಿರಲಿಲ್ಲ. ಯಾಕೆಂದರೆ ಅವರು ಹುಟ್ಟುವುದಕ್ಕಿಂತಲೂ ಎಷ್ಟೋ ಮುಂಚೆ ಕೆಲವು ಪುನರುತ್ಥಾನಗಳು ನಡೆದಿದ್ದವು. ಪ್ರವಾದಿ ಎಲೀಯ ಹಾಗೂ ಎಲೀಷರಿಗೆ ಪುನರುತ್ಥಾನ ಮಾಡುವ ಶಕ್ತಿಯನ್ನು ದೇವರು ಕೊಟ್ಟಿದ್ದನು ಎಂದು ಅಪೊಸ್ತಲರಿಗೆ ತಿಳಿದಿತ್ತು. (1 ಅರ. 17:17-24; 2 ಅರ. 4:32-37) ಸತ್ತ ಮನುಷ್ಯನೊಬ್ಬನ ಶವವನ್ನು ಸಮಾಧಿಗೆ ಎಸೆದಾಗ ಅದು ಅಲ್ಲಿದ್ದ ಎಲೀಷನ ಎಲುಬುಗಳಿಗೆ ತಗಲಿ ಪುನಃ ಅದಕ್ಕೆ ಜೀವಬಂದದ್ದು ಅವರಿಗೆ ಗೊತ್ತಿತ್ತು. (2 ಅರ. 13:20, 21) ದೇವರ ವಾಕ್ಯ ಸತ್ಯ ಎಂದು ನಾವು ನಂಬುವ ಹಾಗೆಯೇ ಈ ಶಾಸ್ತ್ರಾಧಾರಿತ ವೃತ್ತಾಂತಗಳನ್ನು ಆರಂಭದ ಕ್ರೈಸ್ತರೂ ನಂಬುತ್ತಿದ್ದರು.

4 ಯೇಸು ಮಾಡಿದ ಪುನರುತ್ಥಾನಗಳ ಕುರಿತ ವೃತ್ತಾಂತಗಳು ಖಂಡಿತ ನಮ್ಮ ಮನಸ್ಪರ್ಶಿಸಿವೆ. ಉದಾಹರಣೆಗೆ ಆತನು ಬಡ ವಿಧವೆಯೊಬ್ಬಳ ಒಬ್ಬನೇ ಮಗನನ್ನು ಪುನಃ ಜೀವಕ್ಕೆ ತಂದನು. ಆಗ ಆ ತಾಯಿ ನಿಬ್ಬೆರಗಾಗಿರಬೇಕಲ್ಲವೇ? (ಲೂಕ 7:11-15) ಇನ್ನೊಂದು ಸಂದರ್ಭದಲ್ಲಿ ಯೇಸು 12 ವರ್ಷದ ಹುಡುಗಿಯನ್ನು ಪುನರುತ್ಥಾನ ಮಾಡಿದನು. ಶೋಕಿಸುತ್ತಿದ್ದ ಅವಳ ಹೆತ್ತವರಿಗಾದ ಸಂತೋಷ ಹಾಗೂ ಆಶ್ಚರ್ಯವನ್ನು ಸ್ವಲ್ಪ ಊಹಿಸಿ! (ಲೂಕ 8:49-56) ಅಲ್ಲದೆ ಲಾಜರನು ಪುನರುತ್ಥಾನವಾಗಿ ಸಮಾಧಿಯಿಂದ ಜೀವಂತವಾಗಿ ಎದ್ದು ಬಂದದ್ದನ್ನು ನೋಡಿದಾಗ ಅಲ್ಲಿದ್ದವರ ಮೈ ಜು೦ ಎಂದಿರಬೇಕು!—ಯೋಹಾ. 11:38-44.

ಯೇಸುವಿನ ಪುನರುತ್ಥಾನ ವಿಶೇಷವೇಕೆ?

5. ಯೇಸುವಿನ ಪುನರುತ್ಥಾನ ಹಿಂದೆ ನಡೆದ ಪುನರುತ್ಥಾನಗಳಿಗಿಂತ ಹೇಗೆ ಭಿನ್ನವಾಗಿತ್ತು?

5 ಯೇಸುವಿನ ಪುನರುತ್ಥಾನ ಹಿಂದೆ ನಡೆದ ಪುನರುತ್ಥಾನಗಳಿಗಿಂತ ಭಿನ್ನವಾಗಿತ್ತೆಂದು ಅಪೊಸ್ತಲರಿಗೆ ಗೊತ್ತಿತ್ತು. ಯಾಕೆಂದರೆ ಇದಕ್ಕೂ ಮುಂಚೆ ನಡೆದ ಪುನರುತ್ಥಾನಗಳಲ್ಲಿ ಜೀವಕ್ಕೆ ಬಂದವರು ಶಾರೀರಿಕ ದೇಹದೊಂದಿಗೆ ಬಂದರು ಮತ್ತು ಕಾಲಾನಂತರ ಪುನಃ ಸತ್ತರು. ಆದರೆ ಯೇಸುವಿಗೆ ಪುನರುತ್ಥಾನವಾದಾಗ ಅವನಿಗೆ ಆತ್ಮೀಕ ದೇಹ ಕೊಡಲಾಯಿತು. ಅದು ನಾಶವಾಗದಂಥ ದೇಹ. (ಅಪೊಸ್ತಲರ ಕಾರ್ಯಗಳು 13:34 ಓದಿ.) ಯೇಸು “ಶರೀರದಲ್ಲಿ ಕೊಲ್ಲಲ್ಪಟ್ಟನು, ಆದರೆ ಆತ್ಮಜೀವಿಯಾಗಿ ಬದುಕುವಂತೆ ಮಾಡಲ್ಪಟ್ಟನು” ಎಂದು ಪೇತ್ರನು ಬರೆದನು. ಅಲ್ಲದೆ ಯೇಸು “ಸ್ವರ್ಗಕ್ಕೆ ಹೋಗಿರುವುದರಿಂದ ದೇವರ ಬಲಗಡೆಯಲ್ಲಿ ಇದ್ದಾನೆ; ದೇವದೂತರೂ ಅಧಿಕಾರಗಳೂ ಶಕ್ತಿಗಳೂ ಅವನಿಗೆ ಅಧೀನಮಾಡಲ್ಪಟ್ಟವು.” (1 ಪೇತ್ರ 3:18-22) ಯೇಸುವಿನ ಪುನರುತ್ಥಾನಕ್ಕೂ ಮುನ್ನ ನಡೆದ ಪುನರುತ್ಥಾನಗಳು ಅದ್ಭುತಕರ ಮತ್ತು ರೋಮಾಂಚಕಾರಿ ಆಗಿದ್ದವು ನಿಜ. ಆದರೆ ಯೇಸುವಿನ ಪುನರುತ್ಥಾನ ಇವೆಲ್ಲವುಗಳಿಗಿಂತ ತುಂಬ ವಿಶೇಷವಾದದ್ದು.

6. ಯೇಸುವಿನ ಪುನರುತ್ಥಾನ ಅವನ ಶಿಷ್ಯರ ಮೇಲೆ ಯಾವ ಪರಿಣಾಮ ಬೀರಿತು?

6 ಯೇಸುವಿನ ಪುನರುತ್ಥಾನ ಅವನ ಶಿಷ್ಯರ ಮೇಲೆ ಗಾಢ ಪರಿಣಾಮ ಬೀರಿತು. ಅವನ ಶತ್ರುಗಳು ಅವನು ಇನ್ನೂ ಮೃತನಾಗಿದ್ದಾನೆ ಎಂದು ನೆನಸಿದರು. ಆದರೆ ವಾಸ್ತವದಲ್ಲಿ ಅವನು ಒಬ್ಬ ಬಲಾಢ್ಯ ಆತ್ಮಜೀವಿಯಾಗಿ ಎಬ್ಪಿಸಲ್ಪಟ್ಟಿದ್ದನು. ಈಗ ಆತನಿಗೆ ಯಾವ ಮನುಷ್ಯನೂ ಹಾನಿಮಾಡಲು ಸಾಧ್ಯವಿರಲಿಲ್ಲ. ಆತನ ಪುನರುತ್ಥಾನವು ಆತನು ದೇವರ ಮಗನೆಂದು ರುಜುಪಡಿಸಿತು. ದುಃಖಿಸುತ್ತಿದ್ದ ಆತನ ಶಿಷ್ಯರಿಗೆ ಅದು ಅಪಾರ ಆನಂದ ತಂದಿತು. ಅಷ್ಟುಮಾತ್ರವಲ್ಲ ಭಯವನ್ನು ಹೊಡೆದೋಡಿಸಿ ಅವರಲ್ಲಿ ಧೈರ್ಯ ತುಂಬಿಸಿತು. ಹೀಗೆ ಯೇಸುವಿನ ಪುನರುತ್ಥಾನ ಯೆಹೋವನ ಉದ್ದೇಶದಲ್ಲಿ ಹಾಗೂ ಶಿಷ್ಯರು ಎಲ್ಲಾ ಕಡೆ ಸುವಾರ್ತೆಯನ್ನು ಧೈರ್ಯದಿಂದ ಪ್ರಕಟಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿತು.

7. (ಎ) ಯೇಸು ಇಂದು ಏನು ಮಾಡುತ್ತಿದ್ದಾನೆ? (ಬಿ) ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?

7 ಯೇಸು ಬರೀ ಒಬ್ಬ ಮಹಾನ್‌ ಪುರುಷನಾಗಿರಲಿಲ್ಲ ಎಂದು ಯೆಹೋವನ ಸಾಕ್ಷಿಗಳಾದ ನಮಗೆ ಗೊತ್ತು. ಆತನು ಇಂದೂ ಜೀವದಿಂದಿದ್ದಾನೆ ಹಾಗೂ ಲೋಕವ್ಯಾಪಕ ಸಾರುವ ಕೆಲಸವನ್ನು ನಿರ್ದೇಶಿಸುತ್ತಿದ್ದಾನೆ. ಈ ಭೂಮಿಯಲ್ಲಿ ತುಂಬಿಕೊಂಡಿರುವ ದುಷ್ಟತನವನ್ನು ದೇವರ ಸ್ವರ್ಗೀಯ ರಾಜ್ಯದ ರಾಜನಾಗಿ ಯೇಸು ಕ್ರಿಸ್ತನು ಬೇಗನೆ ತೆಗೆದುಹಾಕಲಿದ್ದಾನೆ. ಅಷ್ಟುಮಾತ್ರವಲ್ಲ ಭೂಮಿಯನ್ನು ಪರದೈಸಾಗಿ ಮಾಡಲಿದ್ದಾನೆ. ಅದರಲ್ಲಿ ಮಾನವರು ಸದಾ ಜೀವಿಸುವರು. (ಲೂಕ 23:43) ಯೇಸುವಿಗೆ ಪುನರುತ್ಥಾನ ಆಗಿರದಿದ್ದರೆ ಇದು ಯಾವುದೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಯೇಸುವಿನ ಪುನರುತ್ಥಾನ ಆಗಿದೆಯೆಂದು ನಂಬಲು ನಮಗೆ ಯಾವ ಕಾರಣಗಳಿವೆ? ಆತನ ಪುನರುತ್ಥಾನ ವೈಯಕ್ತಿಕವಾಗಿ ನಿಮ್ಮ ಮೇಲೆ ಯಾವ ಪರಿಣಾಮ ಬೀರಿದೆ?

ಮರಣದ ಮೇಲೆ ಯೆಹೋವನಿಗಿರುವ ಅಧಿಕಾರ

8, 9. (ಎ) ಯೇಸುವಿನ ಗೋರಿಯನ್ನು ಭದ್ರವಾಗಿ ಕಾಯಲು ಧಾರ್ಮಿಕ ಮುಖಂಡರು ಕೇಳಿದ್ದೇಕೆ? (ಬಿ) ಯೇಸುವಿನ ಗೋರಿಗೆ ಬಂದಾಗ ಆ ಸ್ತ್ರೀಯರು ಏನನ್ನು ಕಂಡರು?

8 ಯೇಸು ಸತ್ತ ಮೇಲೆ ಮುಖ್ಯ ಯಾಜಕರು ಹಾಗೂ ಫರಿಸಾಯರು ಪಿಲಾತನ ಬಳಿ ಬಂದು “ದೊರೆಯೇ, ಆ  ವಂಚಕನು ಜೀವದಿಂದಿದ್ದಾಗ ‘ಮೂರು ದಿನಗಳ ಬಳಿಕ ನಾನು ಎಬ್ಬಿಸಲ್ಪಡುವೆನು’ ಎಂದು ಹೇಳಿದ್ದು ನಮ್ಮ ನೆನಪಿಗೆ ಬಂತು. ಆದುದರಿಂದ ಮೂರನೆಯ ದಿನದ ತನಕ ಗೋರಿಯನ್ನು ಭದ್ರವಾಗಿ ಕಾಯುವಂತೆ ಅಪ್ಪಣೆಕೊಡು; ಇಲ್ಲದಿದ್ದರೆ ಅವನ ಶಿಷ್ಯರು ಬಂದು ಅವನ ದೇಹವನ್ನು ಕದ್ದುಕೊಂಡು ಹೋಗಿ ‘ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ’ ಎಂದು ಹೇಳಬಹುದು. ಆಗ ಮೊದಲನೆಯ ವಂಚನೆಗಿಂತ ಈ ಕಡೆಯ ವಂಚನೆಯು ಹೆಚ್ಚು ಕೆಟ್ಟದಾದೀತು” ಎಂದರು. ಪಿಲಾತನು ಅವರಿಗೆ, “ಕಾವಲುಗಾರರನ್ನು ತೆಗೆದುಕೊಳ್ಳಿ. ಹೋಗಿ ನಿಮಗೆ ಎಷ್ಟು ಭದ್ರವಾಗಿಡಬೇಕೊ ಅಷ್ಟು ಭದ್ರವಾಗಿಡಿ” ಎಂದು ಹೇಳಿದನು. ಅವರು ಹಾಗೆಯೇ ಮಾಡಿದರು.—ಮತ್ತಾ. 27:62-66.

9 ಯೇಸುವಿನ ದೇಹವನ್ನು ಬಂಡೆಯಲ್ಲಿ ಕೊರೆಯಲಾಗಿದ್ದ ಸಮಾಧಿಯಲ್ಲಿಟ್ಟು ದೊಡ್ಡ ಕಲ್ಲಿನಿಂದ ಅದನ್ನು ಮುಚ್ಚಲಾಗಿತ್ತು. ಯೇಸು ಸದಾ ಮೃತ ಸ್ಥಿತಿಯಲ್ಲಿ ಈ ಗೋರಿಯಲ್ಲೇ ಇರಬೇಕೆಂದು ಯೆಹೂದಿ ಧಾರ್ಮಿಕ ಮುಖಂಡರು ಬಯಸಿದರು. ಆದರೆ ಯೆಹೋವನ ಯೋಚನೆಯೇ ಬೇರೆಯಾಗಿತ್ತು. ಮೂರು ದಿನಗಳಾದ ಮೇಲೆ ಮಗ್ದಲದ ಮರಿಯ ಹಾಗೂ ಇನ್ನೊಬ್ಬ ಮರಿಯಳು ಗೋರಿಯ ಹತ್ತಿರ ಬಂದಾಗ ಬಾಗಿಲಿನಿಂದ ಕಲ್ಲು ಉರುಳಿರುವುದನ್ನು ಹಾಗೂ ಒಬ್ಬ ದೇವದೂತನು ಅದರ ಮೇಲೆ ಕೂತಿರುವುದನ್ನು ಕಂಡರು. ಆ ದೇವದೂತನು ಸ್ತ್ರೀಯರಿಗೆ ಗೋರಿ ಖಾಲಿಯಾಗಿರುವುದನ್ನು ನೋಡುವಂತೆ ಹೇಳಿದನು. ಅವನಂದದ್ದು: “ಅವನು ಇಲ್ಲಿಲ್ಲ . . . ಅವನು ಎಬ್ಬಿಸಲ್ಪಟ್ಟಿದ್ದಾನೆ.” (ಮತ್ತಾ. 28:1-6) ಹೌದು ಯೇಸು ಈಗ ಜೀವದಿಂದಿದ್ದನು!

10. ಯೇಸುವಿನ ಪುನರುತ್ಥಾನ ಆಗಿದೆ ಎನ್ನುವುದಕ್ಕೆ ಪೌಲನು ಯಾವ ರುಜುವಾತು ಕೊಟ್ಟನು?

10 ಯೇಸುವಿನ ಪುನರುತ್ಥಾನ ಆಗಿದೆ ಎನ್ನುವುದಕ್ಕೆ ಮುಂದಿನ 40 ದಿನಗಳಲ್ಲಿ ನಡೆದ ಘಟನೆಗಳು ಸ್ಪಷ್ಟ ರುಜುವಾತು ಕೊಡುತ್ತವೆ. ಅಪೊಸ್ತಲ ಪೌಲನು ಕೊರಿಂಥ ಸಭೆಗೆ ಬರೆಯುವಾಗ ಆ ರುಜುವಾತನ್ನು ಸಾರಾಂಶಿಸಿ ಹೇಳಿದ್ದು: “ನಾನು ಕಲಿತುಕೊಂಡು ಬಳಿಕ ನಿಮಗೆ ತಿಳಿಯಪಡಿಸಿದ ವಿಷಯಗಳಲ್ಲಿ ಮೊದಲನೆಯದು ಯಾವುದೆಂದರೆ, ಶಾಸ್ತ್ರಗ್ರಂಥಕ್ಕನುಸಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತು ಹೂಣಿಡಲ್ಪಟ್ಟು ಶಾಸ್ತ್ರಗ್ರಂಥಕ್ಕನುಸಾರ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು ಮತ್ತು ಅವನು ಕೇಫನಿಗೂ ಬಳಿಕ ಹನ್ನೆರಡು ಮಂದಿಗೂ ಕಾಣಿಸಿಕೊಂಡನು. ತರುವಾಯ ಅವನು ಒಂದು ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು. ಅವರಲ್ಲಿ ಹೆಚ್ಚಿನವರು ಇಂದಿನ ವರೆಗೂ ಇದ್ದಾರೆ, ಆದರೆ ಕೆಲವರು ಮರಣದಲ್ಲಿ ನಿದ್ರೆಹೋಗಿದ್ದಾರೆ. ಬಳಿಕ ಅವನು ಯಾಕೋಬನಿಗೂ ಎಲ್ಲ ಅಪೊಸ್ತಲರಿಗೂ ಕಾಣಿಸಿಕೊಂಡನು. ಕೊನೆಯದಾಗಿ ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.”—1 ಕೊರಿಂ. 15:3-8.

ಯೇಸುವಿನ ಪುನರುತ್ಥಾನವಾಗಿದೆ ಎಂದು ನಾವು ಹೇಗೆ ಹೇಳುತ್ತೇವೆ?

11. ಯೇಸುವಿನ ಪುನರುತ್ಥಾನ “ಶಾಸ್ತ್ರಗ್ರಂಥಕ್ಕನುಸಾರ” ಆಯಿತು ಎಂದು ಹೇಗೆ ಹೇಳಬಹುದು?

11 ಯೇಸುವಿನ ಪುನರುತ್ಥಾನವಾಗಿದೆ ಎಂದು ನಾವು ಹೇಳಲು ಮೊದಲನೇ ಕಾರಣ, ಆತನ ಪುನರುತ್ಥಾನ “ಶಾಸ್ತ್ರಗ್ರಂಥಕ್ಕನುಸಾರ” ಆಯಿತು. ಯೇಸುವಿನ ಪುನರುತ್ಥಾನದ ಬಗ್ಗೆ ದೇವರ ವಾಕ್ಯ ಮುಂತಿಳಿಸಿತ್ತು. ಉದಾಹರಣೆಗೆ, ದೇವರ ಪ್ರಧಾನ “ನಿಷ್ಠಾವಂತ”ನನ್ನು ಸಮಾಧಿಯಲ್ಲೇ ಬಿಡಲಾಗುವುದಿಲ್ಲ ಎಂದು ದಾವೀದನು ಬರೆದಿದ್ದನು. (ಅಪೊಸ್ತಲರ ಕಾರ್ಯಗಳು 13:35 ಓದಿ.) ಈ ಪ್ರವಾದನೆ ಯೇಸುವಿಗೆ ಸೂಚಿಸುತ್ತದೆಂದು ಕ್ರಿ.ಶ. 33ರ ಪಂಚಾಶತಮದಂದು ಅಪೊಸ್ತಲ ಪೇತ್ರನು ಹೇಳಿದನು. ಅವನಂದದ್ದು: “ಕ್ರಿಸ್ತನ ಪುನರುತ್ಥಾನದ ಕುರಿತು [ದಾವೀದನು] ಮುಂಚಿತವಾಗಿಯೇ ನೋಡಿ ಅದರ ಕುರಿತು ಮಾತಾಡಿದನು; ಅದೇನೆಂದರೆ ‘ಅವನು ಹೇಡೀಸ್‍ನಲ್ಲಿ ಬಿಡಲ್ಪಡಲಿಲ್ಲ ಅಥವಾ ಅವನ ಶರೀರವು ಕೊಳೆತುಹೋಗಲಿಲ್ಲ.’”—ಅ. ಕಾ. 2:23-27, 31.

12. ಪುನರುತ್ಥಾನವಾದ ಯೇಸುವನ್ನು ಯಾರೆಲ್ಲಾ ಕಂಡರು?

12 ಯೇಸುವಿನ ಪುನರುತ್ಥಾನವಾಗಿದೆ ಎಂದು ನಾವು ಹೇಳಲು ಎರಡನೇ ಕಾರಣ, ಆತನ ಪುನರುತ್ಥಾನದ ನಂತರ ಆತನನ್ನು ಕಣ್ಣಾರೆ ಕಂಡ ಅನೇಕರ ಸಾಕ್ಷಿ ನಮಗಿದೆ. ಪುನರುತ್ಥಾನವಾದ ಯೇಸು 40 ದಿನಗಳ ವರೆಗೆ ಅನೇಕರಿಗೆ ಕಾಣಿಸಿಕೊಂಡನು. ತನ್ನ ಸಮಾಧಿ ಇದ್ದ ತೋಟದಲ್ಲಿ; ಎಮ್ಮಾಹು ಎಂಬ ಹಳ್ಳಿಗೆ ಹೋಗುವ ದಾರಿಯಲ್ಲಿ; ಹಾಗೂ ಇತರ ಕಡೆಗಳಲ್ಲಿ ತನ್ನ ಶಿಷ್ಯರಿಗೆ ಕಾಣಿಸಿಕೊಂಡನು. (ಲೂಕ 24:13-15) ಈ ಎಲ್ಲಾ ಸಂದರ್ಭಗಳಲ್ಲಿ ಆತನು ಬೇರೆಬೇರೆ ವ್ಯಕ್ತಿಗಳೊಂದಿಗೆ ಮತ್ತು ಪೇತ್ರನೊಟ್ಟಿಗೆ ಮಾತಾಡಿದನು. ಅನೇಕ ಜನರಿರುವ ಗುಂಪಿನೊಟ್ಟಿಗೂ ಮಾತಾಡಿದನು. ಒಂದು ಸಂದರ್ಭದಲ್ಲಂತೂ ಪುನರುತ್ಥಾನವಾದ ಯೇಸು 500ಕ್ಕೂ ಹೆಚ್ಚು ಮಂದಿಗೆ ಕಾಣಿಸಿಕೊಂಡನು. ಪುನರುತ್ಥಾನವಾದ ಯೇಸುವನ್ನು ಇಷ್ಟು ಮಂದಿ ನೋಡಿದ್ದಾರೆ ಎನ್ನುವ ಸಾಕ್ಷಿಯನ್ನು ಅಲಕ್ಷಿಸಲು ಸಾಧ್ಯವಿಲ್ಲ.

13. ಯೇಸುವಿಗೆ ಪುನರುತ್ಥಾನವಾಗಿದೆ ಎನ್ನುವುದನ್ನು ಅವನ ಶಿಷ್ಯರಿಗಿದ್ದ ಹುರುಪು ಹೇಗೆ ತೋರಿಸಿಕೊಟ್ಟಿತು?

13 ಯೇಸುವಿನ ಪುನರುತ್ಥಾನವಾಗಿದೆ ಎಂದು ನಾವು ಹೇಳಲು ಮೂರನೇ ಕಾರಣ, ಆತನ ಪುನರುತ್ಥಾನದ  ಕುರಿತು ಇತರರಿಗೆ ಸಾರಲು ಶಿಷ್ಯರು ತೋರಿಸಿದ ಹುರುಪು. ಶಿಷ್ಯರು ಹುರುಪಿನಿಂದ ಯೇಸುವಿನ ಪುನರುತ್ಥಾನದ ಕುರಿತು ಸಾರಿದ್ದರಿಂದ ಅವರು ಹಿಂಸೆ, ವಿರೋಧ ಹಾಗೂ ಮರಣವನ್ನು ಎದುರಿಸಬೇಕಾಯಿತು. ಒಂದುವೇಳೆ ಯೇಸುವಿಗೆ ಪುನರುತ್ಥಾನ ಆಗಿರದೆ, ಅದೆಲ್ಲಾ ಬರೀ ಮೋಸ ಆಗಿರುತ್ತಿದ್ದರೆ ಯೇಸುವನ್ನು ದ್ವೇಷಿಸುತ್ತಿದ್ದ ಆ ಧಾರ್ಮಿಕ ಮುಖಂಡರ ಮುಂದೆ ನಿಂತು ತನ್ನ ಜೀವವನ್ನೇ ಪಣಕ್ಕೊಡ್ಡಿ ಪೇತ್ರನು ಅದರ ಕುರಿತು ಮಾತಾಡುತ್ತಿದ್ದನಾ? ಅವನದನ್ನು ಮಾಡಿದ್ದು ಯೇಸುವಿನ ಪುನರುತ್ಥಾನ ಆಗಿದೆ, ಆತನೀಗ ಜೀವದಿಂದಿದ್ದಾನೆ ಮತ್ತು ಸುವಾರ್ತೆ ಕೆಲಸವನ್ನು ನಿರ್ದೇಶಿಸುತ್ತಿದ್ದಾನೆ ಎಂಬ ಸಂಪೂರ್ಣ ಖಾತ್ರಿ ಇದ್ದದ್ದರಿಂದಲೇ. ಇತರ ಶಿಷ್ಯರಿಗೂ ಇದೇ ಖಾತ್ರಿ ಇತ್ತು. ಅಷ್ಟುಮಾತ್ರವಲ್ಲ ಯೇಸುವಿನ ಪುನರುತ್ಥಾನ ತಮಗೂ ಪುನರುತ್ಥಾನ ಇದೆ ಎಂಬ ನಿರೀಕ್ಷೆಯನ್ನು ಶಿಷ್ಯರಿಗೆ ಕೊಟ್ಟಿತು. ಉದಾಹರಣೆಗೆ ಸ್ತೆಫನನಿಗೆ ಸಾಯುವ ಕ್ಷಣದಲ್ಲೂ ತನಗೆ ಪುನರುತ್ಥಾನದ ನಿರೀಕ್ಷೆಯಿದೆ ಎಂಬ ಭರವಸೆಯಿತ್ತು.—ಅ. ಕಾ. 7:55-60.

14. ಯೇಸು ಜೀವದಿಂದಿದ್ದಾನೆಂದು ನೀವು ಯಾಕೆ ನಂಬುತ್ತೀರಿ?

14 ಯೇಸುವಿನ ಪುನರುತ್ಥಾನವಾಗಿದೆ ಎಂದು ನಾವು ಹೇಳಲು ನಾಲ್ಕನೇ ಕಾರಣ, ಯೇಸು ಈಗ ರಾಜನಾಗಿ ಆಳುತ್ತಿದ್ದಾನೆ ಹಾಗೂ ಕ್ರೈಸ್ತ ಸಭೆಯ ಶಿರಸ್ಸಾಗಿದ್ದಾನೆ ಎಂಬ ಪುರಾವೆ ನಮಗಿದೆ. ಇಂದು ನಿಜ ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಾ ಇದೆ. ಯೇಸುವಿನ ಪುನರುತ್ಥಾನ ಆಗಿಲ್ಲದಿದ್ದರೆ ಇದೆಲ್ಲಾ ಸಾಧ್ಯ ಆಗುತ್ತಿತ್ತಾ? ಬಹುಶಃ ಆತನು ಯಾರೆಂದೇ ನಮಗೆ ಗೊತ್ತಾಗುತ್ತಿರಲಿಲ್ಲ. ಆದರೆ ಯೇಸುವಿನ ಪುನರುತ್ಥಾನ ಆಗಿದೆ, ಆತನು ಸಾರುವ ಕೆಲಸವನ್ನು ಮಾರ್ಗದರ್ಶಿಸುತ್ತಿದ್ದಾನೆ ಮತ್ತು ನಿರ್ದೇಶಿಸುತ್ತಿದ್ದಾನೆ ಎಂದು ನಂಬಲು ನಮಗೆ ಬಲವಾದ ಕಾರಣಗಳಿವೆ.

ಯೇಸುವಿನ ಪುನರುತ್ಥಾನ ನಮ್ಮ ಮೇಲೆ ಬೀರುವ ಪರಿಣಾಮ

15. ಯೇಸುವಿನ ಪುನರುತ್ಥಾನ ನಮಗೆ ಸಾರಲು ಧೈರ್ಯಕೊಡುತ್ತದೆ ಏಕೆ?

15 ಯೇಸುವಿನ ಪುನರುತ್ಥಾನ ನಮಗೆ ಸಾರಲು ಧೈರ್ಯ ಕೊಡುತ್ತದೆ. 2,000 ವರ್ಷಗಳಿಂದ ದೇವರ ವೈರಿಗಳು ಸಾರುವ ಕೆಲಸವನ್ನು ನಿಲ್ಲಿಸಲು ಎಲ್ಲಾ ರೀತಿಯ ಉಪಾಯಗಳನ್ನು ಬಳಸುತ್ತಾ ಬಂದಿದ್ದಾರೆ. ಉದಾಹರಣೆಗೆ ಧರ್ಮಭ್ರಷ್ಟತೆ, ಅಪಹಾಸ್ಯ, ದೊಂಬಿ-ಗಲಭೆ, ನಿಷೇಧ, ಚಿತ್ರಹಿಂಸೆ, ಮರಣದಂಡನೆಯನ್ನು ಬಳಸಿದ್ದಾರೆ. ಆದರೆ ಈ “ಯಾವ ಆಯುಧ”ಗಳಿಗೂ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ನಿಲ್ಲಿಸಲಾಗಿಲ್ಲ. (ಯೆಶಾ. 54:17) ಸೈತಾನನ ಗುಲಾಮರಿಗೆ ನಾವು ಹೆದರುವ ಅವಶ್ಯಕತೆ ಇಲ್ಲ. ಯಾಕೆಂದರೆ ಯೇಸು ಮಾತುಕೊಟ್ಟಂತೇ ನಮಗೆ ಸಹಾಯ ಮಾಡುತ್ತಿದ್ದಾನೆ. (ಮತ್ತಾ. 28:20) ನಾವು ಧೈರ್ಯದಿಂದಿರಲು ಕಾರಣವಿದೆ ಯಾಕೆಂದರೆ ವಿರೋಧಿಗಳು ಎಷ್ಟೇ ಪ್ರಯತ್ನಿಸಿದರೂ ಸಾರುವ ಕೆಲಸವನ್ನು ನಿಲ್ಲಿಸಲು ಸಾಧ್ಯ ಇಲ್ಲ.

ಕ್ರಿಸ್ತನ ಪುನರುತ್ಥಾನ ನಮಗೆ ಸಾರಲು ಧೈರ್ಯ ಕೊಡುತ್ತದೆ (ಪ್ಯಾರ 15 ನೋಡಿ)

16, 17. (ಎ) ಯೇಸುವಿನ ಪುನರುತ್ಥಾನ ಆತನು ಕಲಿಸಿದ್ದೆಲ್ಲಾ ನಿಜ ಎಂದು ಹೇಗೆ ದೃಢೀಕರಿಸುತ್ತದೆ? (ಬಿ) ಯೋಹಾನ 11:25ರಲ್ಲಿ ತಿಳಿಸಿರುವ ಹಾಗೆ ದೇವರು ಯೇಸುವಿಗೆ ಯಾವ ಶಕ್ತಿಯನ್ನು ಕೊಟ್ಟಿದ್ದಾನೆ?

16 ಯೇಸುವಿನ ಪುನರುತ್ಥಾನ ಆತನು ಕಲಿಸಿದ ಎಲ್ಲಾ ವಿಷಯಗಳು ನಿಜ ಎಂದು ದೃಢೀಕರಿಸಿತು. ಅದು ನಡೆಯದೆ ಇದ್ದಿದ್ದರೆ ಕ್ರೈಸ್ತರ ನಂಬಿಕೆ ಹಾಗೂ ಸಾರುವ ಕೆಲಸ ಎಲ್ಲವೂ ವ್ಯರ್ಥ ಎಂದು ಪೌಲನು ಬರೆದನು. ಕ್ರೈಸ್ತರು ದೊಡ್ಡ ಸುಳ್ಳನ್ನು ನಂಬಿ ಮೋಸ ಹೋದ ದಡ್ಡರು ಎಂದಾಗುತ್ತಿತ್ತು ಅನ್ನುತ್ತಾನೆ ಒಬ್ಬ ಬೈಬಲ್ ವಿದ್ವಾಂಸ. ಸುವಾರ್ತಾ ಪುಸ್ತಕಗಳಲ್ಲಿನ ವಿಷಯಗಳು ಒಬ್ಬ ವಿವೇಕಿ ಹಾಗೂ ಒಳ್ಳೇ ವ್ಯಕ್ತಿಯನ್ನು ಆತನ ಶತ್ರುಗಳು ಕೊಂದ ದುಃಖದ ಕಥೆಯಾಗಿರುತ್ತಿತ್ತು. ಆದರೆ ಯೇಸುವಿನ ಪುನರುತ್ಥಾನವಾಯಿತು ಮತ್ತು ಅದು ಆತನು ಕಲಿಸಿದ ಹಾಗೂ ಭವಿಷ್ಯದ ಬಗ್ಗೆ ಹೇಳಿದ ಎಲ್ಲಾ ವಿಷಯಗಳು ನಿಜ ಎಂದು ರುಜುಪಡಿಸಿತು.—1 ಕೊರಿಂಥ 15:14, 15, 20 ಓದಿ.

17 ಯೇಸು ಹೇಳಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆಯಿಡುವವನು ಸತ್ತರೂ ಜೀವಿತನಾಗುವನು.” (ಯೋಹಾ. 11:25) ಯೇಸುವಿನ ಈ ಸೊಗಸಾದ ಮಾತು ಖಂಡಿತ ನಿಜವಾಗಲಿದೆ. ಪುನರುತ್ಥಾನ ಮಾಡುವ ಶಕ್ತಿಯನ್ನು ಯೆಹೋವನು ಯೇಸುವಿಗೆ ಕೊಟ್ಟಿದ್ದಾನೆ. ಸ್ವರ್ಗದಲ್ಲಿ ಆತನೊಂದಿಗೆ ಆಳಲಿರುವವರನ್ನು ಮಾತ್ರವಲ್ಲ ಭೂಮಿ ಮೇಲೆ ಜೀವಿಸುವ ಪ್ರತೀಕ್ಷೆ ಇರುವ ಕೋಟ್ಯಂತರ ಮಂದಿಯನ್ನೂ ಪುನರುತ್ಥಾನ ಮಾಡುವ ಶಕ್ತಿ ಆತನಿಗೆ ಕೊಡಲಾಗಿದೆ. ಯೇಸುವಿನ ವಿಮೋಚನಾ ಮೌಲ್ಯದ ಯಜ್ಞ ಹಾಗೂ ಆತನ ಪುನರುತ್ಥಾನವು ಮರಣವನ್ನು ತೆಗೆದು ಹಾಕಲಾಗುವುದು ಎನ್ನುವುದಕ್ಕೆ ಖಾತ್ರಿಯಾಗಿದೆ. ಏನೇ ಕಷ್ಟ ಪರೀಕ್ಷೆಗಳು ಬರಲಿ, ಪ್ರಾಣವನ್ನು ಬಿಡಬೇಕಾದರೂ ಸರಿ ಧೈರ್ಯದಿಂದಿರಲು ಇದು ನಿಮ್ಮನ್ನು ಬಲಪಡಿಸುತ್ತದಲ್ಲವೇ?

18. ಯೇಸುವಿನ ಪುನರುತ್ಥಾನ ನಮಗೆ ಯಾವ ಖಾತ್ರಿ ಕೊಡುತ್ತದೆ?

18 ಯೇಸುವಿನ ಪುನರುತ್ಥಾನ ಯೆಹೋವನು ತನ್ನ ಪ್ರೀತಿಯ ಮಟ್ಟಗಳಿಗನುಸಾರ ಭೂನಿವಾಸಿಗಳಿಗೆ ನ್ಯಾಯತೀರಿಸುವನು ಎಂಬ ಆಶ್ವಾಸನೆಯನ್ನು ನಮಗೆ ಕೊಡುತ್ತದೆ. ಅಥೆನ್ಸ್‌ನಲ್ಲಿದ್ದ ಸ್ತ್ರೀ ಪುರುಷರ ಒಂದು  ಗುಂಪಿಗೆ ಪೌಲನು ಹೇಳಿದ್ದು: “[ದೇವರು] ನೇಮಿಸಿರುವ ಒಬ್ಬ ಮನುಷ್ಯನ ಮೂಲಕ ನಿವಾಸಿತ ಭೂಮಿಗೆ ನೀತಿಗನುಸಾರ ನ್ಯಾಯತೀರಿಸಲಿಕ್ಕಾಗಿ ಆತನು ಒಂದು ದಿನವನ್ನು ಗೊತ್ತುಮಾಡಿದ್ದಾನೆ. ಮತ್ತು ಅವನನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸಿದ್ದರಲ್ಲಿ ಇದನ್ನು ನಂಬುವುದಕ್ಕೆ ಆತನು ಎಲ್ಲರಿಗೂ ಖಾತ್ರಿಯನ್ನು ಒದಗಿಸಿದ್ದಾನೆ.” (ಅ. ಕಾ. 17:31) ಹೌದು ಯೇಸುವನ್ನು ನ್ಯಾಯಧೀಶನಾಗಿ ನೇಮಿಸಿರುವುದು ದೇವರೇ. ಆದ್ದರಿಂದ ಆತನು ಪಕ್ಷಪಾತವಿಲ್ಲದೆ ಪ್ರೀತಿಯಿಂದ ನ್ಯಾಯತೀರಿಸುವನೆಂದು ನಮಗೆ ನಿಶ್ಚಯವಿದೆ.ಯೆಶಾಯ 11:2-4 ಓದಿ.

19. ಯೇಸುವಿನ ಪುನರುತ್ಥಾನದಲ್ಲಿನ ನಂಬಿಕೆ ನಮ್ಮ ಮೇಲೆ ಯಾವ ಪರಿಣಾಮ ಬೀರಿದೆ?

19 ಯೇಸುವಿನ ಪುನರುತ್ಥಾನದಲ್ಲಿ ನಮಗಿರುವ ನಂಬಿಕೆ ದೇವರ ಚಿತ್ತವನ್ನು ಮಾಡಲು ಪ್ರೋತ್ಸಾಹಿಸುತ್ತದೆ. ಯೇಸುವಿನ ವಿಮೋಚನಾ ಮೌಲ್ಯದ ಯಜ್ಞ ಇಲ್ಲದಿದ್ದರೆ, ಆತನ ಪುನರುತ್ಥಾನ ಆಗಿರದಿದ್ದರೆ ಪಾಪಮರಣದಿಂದ ನಮಗೆ ಬಿಡುಗಡೆ ಇರುತ್ತಿರಲಿಲ್ಲ. (ರೋಮ. 5:12; 6:23) ನಮಗೆ ಯಾವುದೇ ನಿರೀಕ್ಷೆ ಇಲ್ಲದೆ ನಾವೂ ಹೀಗೆ ಹೇಳುತ್ತಿದ್ದೆವು: “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲ.” (1 ಕೊರಿಂ. 15:32) ಆದರೆ ನಾವು ಈ ಜೀವನದ ಸುಖಭೋಗಗಳ ಮೇಲೆ ದೃಷ್ಟಿ ನೆಟ್ಟಿಲ್ಲ. ಬದಲಿಗೆ ಪುನರುತ್ಥಾನದ ನಿರೀಕ್ಷೆ ಯಲ್ಲಿ ಆನಂದಿಸುತ್ತೇವೆ ಮಾತ್ರವಲ್ಲ ಎಲ್ಲ ವಿಷಯದಲ್ಲೂ ಯೆಹೋವನ ನಿರ್ದೇಶನ ಪಾಲಿಸುತ್ತೇವೆ.

20. ಯೇಸುವಿನ ಪುನರುತ್ಥಾನವು ಯೆಹೋವನು ಮಹೋನ್ನತನು ಎಂಬುದಕ್ಕೆ ಪುರಾವೆಯಾಗಿದೆ ಹೇಗೆ?

20 ಕ್ರಿಸ್ತನ ಪುನರುತ್ಥಾನ ಯೆಹೋವನು ಮಹೋನ್ನತನು, ‘ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲ ಕೊಡುವವನು’ ಎಂಬದಕ್ಕೆ ಮೌನ ಆದರೂ ಬಲವಾದ ಸಾಕ್ಷಿ ಕೊಡುತ್ತದೆ. (ಇಬ್ರಿ. 11:6) ಯೇಸುವನ್ನು ಸ್ವರ್ಗದಲ್ಲಿ ಅಮರ ಜೀವನಕ್ಕಾಗಿ ಪುನರುತ್ಥಾನ ಮಾಡುವ ಮೂಲಕ ಯೆಹೋವನು ಎಷ್ಟೊಂದು ಶಕ್ತಿ ಹಾಗೂ ವಿವೇಕ ತೋರಿಸಿದ್ದಾನೆ! ಅಷ್ಟುಮಾತ್ರವಲ್ಲ ತನ್ನ ವಾಗ್ದಾನಗಳನ್ನು ಪೂರೈಸುವ ಶಕ್ತಿ ತನಗಿದೆ ಎಂದೂ ತೋರಿಸಿದ್ದಾನೆ. ಈ ವಾಗ್ದಾನಗಳಲ್ಲೊಂದು ‘ಸಂತಾನದ’ ಕುರಿತ ವಾಗ್ದಾನ ಆಗಿತ್ತು. ಈ “ಸಂತಾನ” ವಿಶ್ವ ಪರಮಾಧಿಕಾರದ ವಿವಾದವನ್ನು ಇತ್ಯರ್ಥಗೊಳಿಸುವುದರಲ್ಲಿ ಮುಖ್ಯ ಪಾತ್ರ ವಹಿಸಲಿದ್ದನು. ಈ ವಾಗ್ದಾನ ನೆರವೇರಬೇಕಿದ್ದರೆ ಯೇಸು ಸತ್ತು ಪುನರುತ್ಥಾನ ಹೊಂದಲೇಬೇಕಿತ್ತು.—ಆದಿ. 3:15.

21. ಪುನರುತ್ಥಾನದ ನಿರೀಕ್ಷೆಯ ಬಗ್ಗೆ ನಿಮಗೆ ಹೇಗನಿಸುತ್ತದೆ?

21 ಯೆಹೋವನು ನಮಗೆ ಪುನರುತ್ಥಾನದ ನಿರೀಕ್ಷೆ ಕೊಟ್ಟಿರುವುದಕ್ಕೆ ನಾವೆಷ್ಟು ಕೃತಜ್ಞರು ಅಲ್ಲವೇ? ಬೈಬಲ್‌ ನಮಗೆ ಈ ಆಶ್ವಾಸನೆ ಕೊಡುತ್ತದೆ: “ಇಗೋ, ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” ಈ ಸುಂದರ ನಿರೀಕ್ಷೆಯ ಬಗ್ಗೆ ನಂಬಿಗಸ್ತ ಅಪೊಸ್ತಲ ಯೋಹಾನನಿಗೆ ತಿಳಿಸಲಾಗಿತ್ತು. ಅವನಿಗೆ “ಬರೆ, ಏಕೆಂದರೆ ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ” ಎಂದು ಹೇಳಲಾಗಿತ್ತು. ಈ ಪ್ರೇರಿತ ಪ್ರಕಟನೆಯನ್ನು ಯೋಹಾನನಿಗೆ ಕೊಟ್ಟವರು ಯಾರು? ಪುನರುತ್ಥಾನವಾದ ಯೇಸು ಕ್ರಿಸ್ತನೇ.—ಪ್ರಕ. 1:1; 21:3-5.