ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಪರಿಶುದ್ಧರಾಗಿರಬೇಕು—ಏಕೆ?

ನಾವು ಪರಿಶುದ್ಧರಾಗಿರಬೇಕು—ಏಕೆ?

“ನೀವೂ ಪರಿಶುದ್ಧರಾಗಿರಬೇಕು.”—ಯಾಜ. 11:45.

1. ಯಾಜಕಕಾಂಡ ಪುಸ್ತಕದಿಂದ ನಮಗೆ ಹೇಗೆ ಸಹಾಯವಾಗಬಲ್ಲದು?

ಯಾಜಕಕಾಂಡ ಪುಸ್ತಕದಲ್ಲಿ ಪರಿಶುದ್ಧತೆಯ ಬಗ್ಗೆ ತಿಳಿಸಿರುವಷ್ಟು ಸಲ ಬೈಬಲಿನ ಬೇರಾವುದೇ ಪುಸ್ತಕದಲ್ಲಿ ತಿಳಿಸಲಾಗಿಲ್ಲ. ಈ ಗುಣವು ಯೆಹೋವನ ನಿಜ ಆರಾಧಕರೆಲ್ಲರಲ್ಲಿ ಇರಲೇಬೇಕು. ಆದ್ದರಿಂದ ನಾವು ಯಾಜಕಕಾಂಡ ಪುಸ್ತಕವನ್ನು ಅರ್ಥಮಾಡಿಕೊಂಡು ಗಣ್ಯಮಾಡಿದರೆ ಪರಿಶುದ್ಧರಾಗಿರಲು ತುಂಬ ಸಹಾಯವಾಗುವುದು.

2. ಯಾಜಕಕಾಂಡ ಪುಸ್ತಕದ ಕೆಲವು ವೈಶಿಷ್ಟ್ಯಗಳೇನು?

2 ಯಾಜಕಕಾಂಡ ಪುಸ್ತಕವನ್ನು ಬರೆದವನು ಪ್ರವಾದಿ ಮೋಶೆ. ಬೋಧಿಸುವುದಕ್ಕೆ ಉಪಯುಕ್ತವಾಗಿರುವ “ಇಡೀ ಶಾಸ್ತ್ರಗ್ರಂಥ”ದ ಭಾಗ ಅದು. (2 ತಿಮೊ. 3:16) ಪ್ರತಿಯೊಂದೂ ಅಧ್ಯಾಯದಲ್ಲಿ ಯೆಹೋವನ ಹೆಸರು ಸರಾಸರಿ 10 ಸಲ ಕಂಡುಬರುತ್ತದೆ. ಈ ಪುಸ್ತಕದ ಅರ್ಥ ಗ್ರಹಿಸಿದರೆ, ದೇವರ ಹೆಸರಿಗೆ ಕಳಂಕ ತರುವ ಯಾವುದೇ ಸಂಗತಿಯಿಂದ ದೂರವಿರುವಂತೆ ಬೇಕಾದ ಬಲ ನಮಗೆ ಸಿಗುವುದು. (ಯಾಜ. 22:32) “ನಾನು ಯೆಹೋವ,” “ನಾನೇ ಯೆಹೋವ” ಎಂದು ಈ ಪುಸ್ತಕದಲ್ಲಿ ಆಗಾಗ್ಗೆ ಬಳಸಲಾಗಿರುವ ಪದಗಳು ನಾವಾತನಿಗೆ ವಿಧೇಯರಾಗಬೇಕು ಎಂಬ ಮಾತನ್ನು ನೆನಪಿಗೆ ತರಬೇಕು. ಈ ಪುಸ್ತಕದಿಂದ ಹೆಕ್ಕಿ ತೆಗೆಯಲಾದ ಕೆಲವೊಂದು ಅಮೂಲ್ಯ ರತ್ನಗಳನ್ನು ಈ ಲೇಖನ ಹಾಗೂ ಮುಂದಿನ ಲೇಖನದಲ್ಲಿ ಚರ್ಚಿಸೋಣ. ಈ ಪುಸ್ತಕವು ದೇವರ ವರವಾಗಿದ್ದು, ನಾವು ಸಲ್ಲಿಸುವ ಆರಾಧನೆಯನ್ನು ಪವಿತ್ರವಾಗಿಡುವಂತೆ ಸಹಾಯಮಾಡಲಿದೆ.

ಪರಿಶುದ್ಧತೆ ಆವಶ್ಯಕ

3, 4. ಆರೋನ ಮತ್ತವನ ಪುತ್ರರ ಶುದ್ಧೀಕರಿಸುವಿಕೆ ಏನನ್ನು ಪ್ರತಿನಿಧಿಸುತ್ತದೆ? (ಶೀರ್ಷಿಕೆ ಚಿತ್ರ ನೋಡಿ.)

3 ಯಾಜಕಕಾಂಡ 8:5, 6 ಓದಿ. ಆರೋನನನ್ನು ಇಸ್ರಾಯೇಲಿನ ಮಹಾ ಯಾಜಕನಾಗಿ, ಅವನ ಪುತ್ರರನ್ನು ಯಾಜಕರಾಗಿ ಸೇವೆಸಲ್ಲಿಸಲು ಯೆಹೋವನು  ನೇಮಿಸಿದನು. ಆರೋನನು ಯೇಸು ಕ್ರಿಸ್ತನನ್ನು ಪ್ರತಿನಿಧಿಸುತ್ತಾನೆ. ಅವನ ಪುತ್ರರು ಯೇಸುವಿನ ಅಭಿಷಿಕ್ತ ಹಿಂಬಾಲಕರನ್ನು ಪ್ರತಿನಿಧಿಸುತ್ತಾರೆ. ಹಾಗಾದರೆ ಆರೋನನನ್ನು ಶುದ್ಧೀಕರಿಸಿದ್ದು ಯೇಸುವಿನ ಶುದ್ಧೀಕರಣವನ್ನು ಸೂಚಿಸುತ್ತಿತ್ತೊ? ಇಲ್ಲ, ಯಾಕೆಂದರೆ ಯೇಸುವಿನಲ್ಲಿ ಪಾಪವಿಲ್ಲ ಮತ್ತು ಆತನಲ್ಲಿ “ದೋಷವಿಲ್ಲ.” ಅವನನ್ನು ಶುದ್ಧೀಕರಿಸುವ ಅಗತ್ಯವಿರಲಿಲ್ಲ. (ಇಬ್ರಿ. 7:26; 9:14) ಆರೋನನನ್ನು ಶುದ್ಧೀಕರಿಸಿದ ನಂತರ ಅವನಿದ್ದ ಸ್ಥಿತಿ ಯೇಸುವಿನ ಶುದ್ಧ, ನೀತಿಯುತ ಸ್ಥಿತಿಯನ್ನು ಚಿತ್ರೀಕರಿಸುತ್ತದೆ. ಆದರೆ ಆರೋನನ ಪುತ್ರರ ಶುದ್ಧೀಕರಿಸುವಿಕೆ ಏನನ್ನು ಚಿತ್ರಿಸುತ್ತದೆ?

4 ಆರೋನನ ಪುತ್ರರ ಶುದ್ಧೀಕರಿಸುವಿಕೆಯು, ಸ್ವರ್ಗೀಯ ಯಾಜಕರಾಗುವಂತೆ ಆಯ್ಕೆಯಾಗುವವರ ಶುದ್ಧೀಕರಿಸುವಿಕೆಯನ್ನು ಮುಂಚಿತ್ರಿಸಿತು. ಅಭಿಷಿಕ್ತರ ದೀಕ್ಷಾಸ್ನಾನವು ಈ ಶುದ್ಧೀಕರಿಸುವಿಕೆ ಆಗಿದೆಯೇ? ಇಲ್ಲ. ದೀಕ್ಷಾಸ್ನಾನ ಒಬ್ಬ ವ್ಯಕ್ತಿಯ ಪಾಪಗಳನ್ನು ತೆಗೆದುಹಾಕುವುದಿಲ್ಲ. ಬದಲಾಗಿ ಅವನು ಯಾವುದೇ ಷರತ್ತುಗಳನ್ನಿಡದೆ ಯೆಹೋವನಿಗೆ ತನ್ನನ್ನೇ ಸಮರ್ಪಿಸಿಕೊಂಡಿದ್ದಾನೆಂದು ಅದು ಸೂಚಿಸುತ್ತದೆ. ಅಭಿಷಿಕ್ತರನ್ನು “ವಾಕ್ಯದ ಮೂಲಕ” ಶುದ್ಧೀಕರಿಸಲಾಗುತ್ತದೆ. ಆದ್ದರಿಂದ ಅವರು ಕ್ರಿಸ್ತನ ಬೋಧನೆಗಳನ್ನು ಮನಃಪೂರ್ವಕವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. (ಎಫೆ. 5:25-27) ಹೀಗೆ ಅವರು ಶುದ್ಧೀಕರಿಸಲ್ಪಟ್ಟು, ಪವಿತ್ರೀಕರಿಸಲ್ಪಡುತ್ತಾರೆ. ಆದರೆ “ಬೇರೆ ಕುರಿ”ಗಳ ಬಗ್ಗೆ ಏನು?—ಯೋಹಾ. 10:16.

5. ಬೇರೆ ಕುರಿಗಳು ದೇವರ ವಾಕ್ಯದಿಂದ ಶುದ್ಧೀಕರಿಸಲ್ಪಡುತ್ತಾರೆಂದು ಏಕೆ ಹೇಳಬಹುದು?

5 ಆರೋನನ ಪುತ್ರರು ಯೇಸುವಿನ ಬೇರೆ ಕುರಿಗಳ ‘ಮಹಾ ಸಮೂಹವನ್ನು’ ಪ್ರತಿನಿಧಿಸಲಿಲ್ಲ. (ಪ್ರಕ. 7:9) ಆದ್ದರಿಂದ ಪ್ರಶ್ನೆಯೇನೆಂದರೆ ದೀಕ್ಷಾಸ್ನಾನ ಹೊಂದಿರುವ ಈ ಬೇರೆ ಕುರಿಗಳು ಸಹ ದೇವರ ವಾಕ್ಯದಿಂದ ಪವಿತ್ರೀಕರಿಸಲ್ಪಟ್ಟು, ಶುದ್ಧೀಕರಿಸಲ್ಪಡುತ್ತಾರಾ? ಹೌದು! ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯುಳ್ಳ ಇವರು ಯೇಸುವಿನ ರಕ್ತವು ಏನನ್ನು ಸಾಧಿಸುತ್ತದೆ, ಅದರ ಮಹತ್ವವೇನು ಎಂದು ಬೈಬಲಿನಿಂದ ಕಲಿಯುವಾಗ ಅದರಲ್ಲಿ ನಂಬಿಕೆಯಿಡುತ್ತಾರೆ ಮತ್ತು ‘ಹಗಲೂರಾತ್ರಿ ಪವಿತ್ರ ಸೇವೆ ಸಲ್ಲಿಸುತ್ತಾರೆ.’ (ಪ್ರಕ. 7:13-15) ಅಭಿಷಿಕ್ತರ ಮತ್ತು ಬೇರೆ ಕುರಿಗಳ ಈ ನಿರಂತರ ಶುದ್ಧೀಕರಣವು ಅವರ ‘ಉತ್ತಮ ನಡತೆ’ಯಲ್ಲಿ ತೋರಿಬರುತ್ತದೆ. (1 ಪೇತ್ರ 2:12) ಅಭಿಷಿಕ್ತರ ಮತ್ತು ಬೇರೆ ಕುರಿಗಳ ಶುದ್ಧತೆ ಹಾಗೂ ಅವರ ನಡುವಿನ ಐಕ್ಯವನ್ನು ನೋಡಿ ಯೆಹೋವನಿಗೆ ಎಷ್ಟು ಖುಷಿ ಆಗುತ್ತಿರಬೇಕು! ಅವರು ತಮ್ಮ ಕುರುಬನಾದ ಯೇಸುವಿನ ಮಾತು ಕೇಳಿ, ನಿಷ್ಠೆಯಿಂದ ಅವನನ್ನು ಹಿಂಬಾಲಿಸುತ್ತಾರೆ.

6. ಯಾವುದರ ಬಗ್ಗೆ ಸ್ವಪರೀಕ್ಷೆ ಮಾಡುವುದು ಪ್ರಯೋಜನಕರ?

6 ದೈಹಿಕ ಶುದ್ಧತೆ ಕಾಪಾಡುವಂತೆ ಇಸ್ರಾಯೇಲಿನ ಯಾಜಕರಿಗೆ ಕೊಡಲಾದ ನಿಯಮವು ಇಂದು ಯೆಹೋವನ ಜನರಿಗೆ ಮಹತ್ವದ್ದಾಗಿದೆ. ನಾವು ಯಾರೊಟ್ಟಿಗೆ ಬೈಬಲ್‌ ಅಧ್ಯಯನ ನಡೆಸುತ್ತೇವೊ ಅವರು ನಮ್ಮ ಆರಾಧನಾ ಸ್ಥಳಗಳ ಸ್ವಚ್ಛತೆಯನ್ನು ಗಮನಿಸುತ್ತಾರೆ. ಅಲ್ಲದೆ ನಾವು ನೀಟಾಗಿರುವುದನ್ನು, ನಮ್ಮ ಉಡುಪು ಸಭ್ಯವಾಗಿರುವುದನ್ನು ಗಮನಿಸುತ್ತಾರೆ. ಯಾಜಕರಿಗೆ ಶುದ್ಧತೆಯ ಕುರಿತಾಗಿ ಕೊಡಲಾದ ಆಜ್ಞೆಯು ಇನ್ನೊಂದು ಮಾತನ್ನೂ ಎತ್ತಿತೋರಿಸುತ್ತದೆ. ಅದೇನೆಂದರೆ, ಯೆಹೋವನ ಆರಾಧನೆಯೆಂಬ ಉನ್ನತ ಪರ್ವತವನ್ನು ಹತ್ತುವವರು ‘ನಿರ್ಮಲಮನಸ್ಸಿನವರೂ’ ಆಗಿರಬೇಕು. (ಕೀರ್ತನೆ 24:3, 4 ಓದಿ; ಯೆಶಾ. 2:2, 3.) ನಾವು ದೇವರಿಗೆ ಪವಿತ್ರ ಸೇವೆ ಸಲ್ಲಿಸುವಾಗ ನಮ್ಮ ಹೃದಮನಗಳು ಮಾತ್ರವಲ್ಲ ನಮ್ಮ ದೇಹಗಳೂ ಶುದ್ಧವಾಗಿರಬೇಕು. ಈ ವಿಷಯದಲ್ಲಿ ನಾವು ಆಗಾಗ್ಗೆ ಸ್ವಪರೀಕ್ಷೆ ಮಾಡುತ್ತಾ ಇರಬೇಕು ಮತ್ತು ಆಗ ನಮ್ಮಲ್ಲಿ ಕೆಲವರು ಅಗತ್ಯವಾದ ಗಮನಾರ್ಹ ಬದಲಾವಣೆಗಳನ್ನು ಮಾಡಬಹುದು. ಹೀಗೆ ನಾವು ಪರಿಶುದ್ಧರಾಗಿರಲು ಸಾಧ್ಯ. (2 ಕೊರಿಂ. 13:5) ಉದಾಹರಣೆಗೆ, ದೀಕ್ಷಾಸ್ನಾನ ಪಡೆದಿರುವ ಒಬ್ಬ ವ್ಯಕ್ತಿ ಬೇಕುಬೇಕೆಂದು ಅಶ್ಲೀಲ ಚಿತ್ರಗಳನ್ನು ನೋಡುತ್ತಿರುವಲ್ಲಿ ‘ನಾನು ಪರಿಶುದ್ಧನಾಗಿದ್ದೇನಾ?’ ಎಂದು ತನ್ನನ್ನೇ ಕೇಳಿಕೊಳ್ಳಬೇಕು. ನಂತರ ಆ ದುಷ್ಟ ಚಟವನ್ನು ನಿಲ್ಲಿಸಲು ಬೇಕಾದ ಸಹಾಯವನ್ನು ಪಡೆದುಕೊಳ್ಳಬೇಕು.—ಯಾಕೋ. 5:14.

ವಿಧೇಯತೆ ತೋರಿಸುವ ಮೂಲಕ ಪರಿಶುದ್ಧರಾಗಿರಿ

7. ಯಾಜಕಕಾಂಡ 8:22-24ಕ್ಕೆ ಹೊಂದಿಕೆಯಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು?

7 ಇಸ್ರಾಯೇಲಿನ ಯಾಜಕ ವರ್ಗವನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿ ಟಗರಿನ ರಕ್ತವನ್ನು ಆರೋನ ಮತ್ತವನ ಪುತ್ರರ ಬಲಗಿವಿ, ಬಲಗೈಯ ಹೆಬ್ಬೆರಳು ಮತ್ತು ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಲಾಯಿತು. (ಯಾಜಕಕಾಂಡ 8:22-24 ಓದಿ.) ಈ ಕ್ರಿಯೆಯು, ಯಾಜಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಧೇಯತೆಯಿಂದ ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುವರೆಂದು ಸೂಚಿಸಿತು. ಹಾಗೆಯೇ ಮಹಾ ಯಾಜಕನಾದ ಯೇಸು ಅಭಿಷಿಕ್ತರಿಗಾಗಿ ಹಾಗೂ ಬೇರೆ ಕುರಿಗಳಿಗಾಗಿ ಪರಿಪೂರ್ಣ ಮಾದರಿಯನ್ನಿಟ್ಟನು. ಅವನು ಸದಾ ದೇವರ  ಮಾರ್ಗದರ್ಶನೆಗೆ ಕಿವಿಗೊಟ್ಟನು. ತನ್ನ ಕೈಗಳನ್ನು ಯೆಹೋವನ ಚಿತ್ತವನ್ನು ಮಾಡಲಿಕ್ಕಾಗಿ ಬಳಸಿದನು. ಅವನ ಕಾಲುಗಳು ದೇವರ ಪವಿತ್ರ ಮಾರ್ಗವನ್ನು ಬಿಟ್ಟು ಎಂದೂ ಕದಲಲಿಲ್ಲ.—ಯೋಹಾ. 4:31-34.

8. ಯೆಹೋವನ ಆರಾಧಕರೆಲ್ಲರೂ ಏನು ಮಾಡಬೇಕು?

8 ಅಭಿಷಿಕ್ತ ಕ್ರೈಸ್ತರು ಮತ್ತು ಯೇಸುವಿನ ಬೇರೆ ಕುರಿಗಳು ತಮ್ಮ ಮಹಾ ಯಾಜಕನು ಸಮಗ್ರತೆ ಕಾಪಾಡಿಕೊಳ್ಳುವುದರಲ್ಲಿ ಇಟ್ಟ ಮಾದರಿಯನ್ನು ಅನುಸರಿಸಬೇಕು. ಯೆಹೋವನ ಆರಾಧಕರೆಲ್ಲರೂ ದೇವರ ವಾಕ್ಯದಲ್ಲಿರುವ ನಿರ್ದೇಶನಗಳನ್ನು ವಿಧೇಯತೆಯಿಂದ ಪಾಲಿಸಬೇಕು ಮತ್ತು ಹೀಗೆ ಆತನ ಪವಿತ್ರಾತ್ಮವನ್ನು ದುಃಖಿಸುವುದರಿಂದ ದೂರವಿರಬೇಕು. (ಎಫೆ. 4:30) ಅವರು ‘ತಮ್ಮ ಪಾದಗಳಿಗೆ ನೇರವಾದ ದಾರಿಗಳನ್ನು’ ಮಾಡಬೇಕು.—ಇಬ್ರಿ. 12:13.

9. (ಎ) ಆಡಳಿತ ಮಂಡಲಿಯ ಸದಸ್ಯರೊಂದಿಗೆ ಕೆಲಸಮಾಡಿರುವ ಮೂವರು ಸಹೋದರರು ಯಾವ ಅಭಿಪ್ರಾಯ ವ್ಯಕ್ತಪಡಿಸಿದರು? (ಬಿ) ಅವರ ಮಾತುಗಳು ನೀವು ಪರಿಶುದ್ಧರಾಗಿರುವಂತೆ ಹೇಗೆ ಸಹಾಯಮಾಡಬಲ್ಲವು?

9 ಭೂಮಿಯ ಮೇಲೆ ಜೀವಿಸುವ ನಿರೀಕ್ಷೆಯುಳ್ಳ ಮತ್ತು ದಶಕಗಳಿಂದ ಆಡಳಿತ ಮಂಡಲಿಯ ಸದಸ್ಯರೊಟ್ಟಿಗೆ ನಿಕಟವಾಗಿ ಕೆಲಸಮಾಡುತ್ತಿರುವ ಮೂವರು ಸಹೋದರರ ಮನದಾಳದ ಮಾತುಗಳನ್ನು ಪರಿಗಣಿಸಿರಿ. ಅವರಲ್ಲೊಬ್ಬರು ಹೇಳಿದ್ದು: “ಈ ಸಹೋದರರೊಂದಿಗಿನ ಆಪ್ತ ಒಡನಾಟವು ನಿಜವಾಗಿಯೂ ತುಂಬ ವಿಶೇಷವಾದ ಸೇವಾ ಸುಯೋಗವಾಗಿದೆ. ಆದರೆ ಅದೇ ಸಮಯದಲ್ಲಿ ಇಂಥ ಒಡನಾಟವು ಅಭಿಷಿಕ್ತರೂ ಅಪರಿಪೂರ್ಣರೆಂಬದನ್ನು ನೆನಪುಹುಟ್ಟಿಸುತ್ತದೆ. ಹಾಗಿದ್ದರೂ ಈ ಎಲ್ಲ ವರ್ಷ ನನಗಿರುವ ಗುರಿಗಳಲ್ಲಿ ಒಂದೇನೆಂದರೆ, ಮುಂದಾಳತ್ವ ವಹಿಸುವವರಿಗೆ ವಿಧೇಯನಾಗಿರಬೇಕೆಂದೇ.” ಎರಡನೇ ಸಹೋದರನಂದದ್ದು: “‘ಕ್ರಿಸ್ತನಿಗೆ ವಿಧೇಯತೆ’ ತೋರಿಸುವುದರ ಬಗ್ಗೆ 2 ಕೊರಿಂಥ 10:5ರಲ್ಲಿ ತಿಳಿಸಲಾಗಿದೆ. ಇಂಥ ವಚನಗಳು ನಾನು ಮುಂದಾಳತ್ವ ವಹಿಸುವವರಿಗೆ ವಿಧೇಯತೆ ತೋರಿಸಿ, ಅವರೊಂದಿಗೆ ಸಹಕರಿಸಲು ಸಹಾಯಮಾಡಿವೆ. ಈ ವಿಧೇಯತೆ ಮನದಾಳದಿಂದ ಹೊಮ್ಮುತ್ತದೆ.” ಮೂರನೇ ಸಹೋದರನು ಹೇಳಿದ್ದು: “ಯೆಹೋವನು ಪ್ರೀತಿಸುವುದನ್ನು ಪ್ರೀತಿಸಿ, ದ್ವೇಷಿಸುವುದನ್ನು ದ್ವೇಷಿಸಲು; ಸದಾ ಆತನ ಮಾರ್ಗದರ್ಶನ ಕೋರುತ್ತಾ ಆತನಿಗೆ ಮೆಚ್ಚಿಕೆಯಾದದ್ದನ್ನೇ ಮಾಡಲು ವಿಧೇಯತೆ ಪ್ರಾಮುಖ್ಯ. ಆತನ ಸಂಘಟನೆಗೆ ವಿಧೇಯರಾಗಬೇಕು. ಭೂಮಿಗಾಗಿರುವ ತನ್ನ ಉದ್ದೇಶವನ್ನು ಮುಂದುವರಿಸಿಕೊಂಡು ಹೋಗಲು ಆತನು ಬಳಸುತ್ತಿರುವವರಿಗೂ ವಿಧೇಯರಾಗಬೇಕು.” ಈ ಸಹೋದರನಿಗೆ ನೇತನ್‌ ನಾರ್‌ರವರ (ಮುಂದೆ ಆಡಳಿತ ಮಂಡಲಿಯ ಸದಸ್ಯರಾದರು) ಬಗ್ಗೆ ಒಂದು ವಿಷಯ ತಿಳಿದುಬಂದಿತ್ತು. ಅದೇನೆಂದರೆ 1925ರ ಕಾವಲಿನಬುರುಜುವಿನಲ್ಲಿ ಬಂದಂಥ “ಜನಾಂಗದ ಹುಟ್ಟು” ಎಂಬ ಲೇಖನದಲ್ಲಿದ್ದ ಅಂಶಗಳ ಬಗ್ಗೆ ಅನೇಕರು ಆಕ್ಷೇಪವೆತ್ತಿದ್ದರೂ ಅದರಲ್ಲಿದ್ದ ಮಾಹಿತಿಯನ್ನು ಸಹೋದರ ನಾರ್‌ ಏನೂ ಎದುರಾಡದೆ ಸ್ವೀಕರಿಸಿದ್ದರು. ಇಂಥ ವಿಧೇಯತೆಯು ಈ ಸಹೋದರನ ಮನಸ್ಸಿನ ಮೇಲೆ ಛಾಪು ಮೂಡಿಸಿತು. ಈ ಮೂವರು ಸಹೋದರರ ಮಾತುಗಳ ಬಗ್ಗೆ ಮನನ ಮಾಡಿದರೆ ವಿಧೇಯರಾಗಿರುವ ಮೂಲಕ ಪರಿಶುದ್ಧರಾಗಿರಲು ಅವು ನಿಮಗೆ ಸಹಾಯಮಾಡಬಲ್ಲವು.

ರಕ್ತದ ಕುರಿತ ದೇವರ ಆಜ್ಞೆಗೆ ಸಂಪೂರ್ಣ ವಿಧೇಯತೆ

10. ರಕ್ತದ ಕುರಿತ ದೇವರ ಆಜ್ಞೆಗೆ ವಿಧೇಯರಾಗುವುದು ಎಷ್ಟು ಪ್ರಾಮುಖ್ಯ?

10 ಯಾಜಕಕಾಂಡ 17:10 ಓದಿ. ಇಸ್ರಾಯೇಲ್ಯರು “ರಕ್ತಭೋಜನ” ಮಾಡಬಾರದು ಇಲ್ಲವೇ ಪವಿತ್ರ ಗ್ರಂಥ ಭಾಷಾಂತರ ಹೇಳುವಂತೆ “ಯಾವುದೇ ತರದ ರಕ್ತ” ತಿನ್ನಬಾರದೆಂದು ಯೆಹೋವನು ಆಜ್ಞೆ ಕೊಟ್ಟಿದ್ದನು. ಇದು ಕ್ರೈಸ್ತರಿಗೂ ಅನ್ವಯವಾಗುವ ನಿಯಮ. ಅವರು ಮಾನವ ಇಲ್ಲವೆ ಪ್ರಾಣಿ ರಕ್ತವನ್ನು ವಿಸರ್ಜಿಸಬೇಕು. (ಅ. ಕಾ. 15:28, 29) ಯೆಹೋವನು ನಮ್ಮ ಮೇಲೆ ‘ಉಗ್ರ ಕೋಪ ಮಾಡಿ,’ ತನ್ನ ಸಭೆಯಿಂದ ನಮ್ಮನ್ನು ತೆಗೆದುಹಾಕುವಂತೆ ಮಾಡುವ ಯಾವುದೇ ಕೆಲಸಕ್ಕೆ ಕೈಹಾಕಲು ನಮಗಿಷ್ಟವಿಲ್ಲ. ನಾವಾತನನ್ನು ಪ್ರೀತಿಸುತ್ತೇವೆ. ಆತನಿಗೆ ವಿಧೇಯರಾಗಲು ಬಯಸುತ್ತೇವೆ. ಯೆಹೋವನ ಬಗ್ಗೆ ತಿಳಿಯದ ಮತ್ತು ಆತನಿಗೆ ವಿಧೇಯರಾಗುವುದರ ಬಗ್ಗೆ ಸ್ವಲ್ಪವೂ ಚಿಂತಿಸದ ಜನರ ವಿನಂತಿ, ಬೇಡಿಕೆಗಳಿಗೆ ಮಣಿಯಬಾರದೆಂಬ ದೃಢನಿರ್ಣಯ ಮಾಡಿದ್ದೇವೆ. ಜೀವಕ್ಕೆ ಅಪಾಯವಿದ್ದರೂ ಸರಿ ಈ ನಿರ್ಣಯಕ್ಕೆ ಅಂಟಿಕೊಳ್ಳುತ್ತೇವೆ. ರಕ್ತವನ್ನು ತೆಗೆದುಕೊಳ್ಳದೆ ಇರುವುದಕ್ಕಾಗಿ ಅಪಹಾಸ್ಯಕ್ಕೀಡಾಗುವೆವು ಎಂದು ನಮಗೆ ತಿಳಿದಿದೆ. ಹಾಗಿದ್ದರೂ ದೇವರಿಗೆ ವಿಧೇಯರಾಗುವ ಆಯ್ಕೆ ಮಾಡುತ್ತೇವೆ. (ಯೂದ 17, 18) ರಕ್ತ ತಿನ್ನಬಾರದು ಅಥವಾ ರಕ್ತಪೂರಣ ತೆಗೆದುಕೊಳ್ಳಬಾರದೆಂಬ ದೃಢಸಂಕಲ್ಪವನ್ನು ಬಲಪಡಿಸಲು ಅದರ ಕುರಿತು ನಮಗೆ ಯಾವ ನೋಟ ಇರಬೇಕು?—ಧರ್ಮೋ. 12:23.

11. ವಾರ್ಷಿಕ ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ಸಂಗತಿ ಬರೀ ಸಂಸ್ಕಾರವಾಗಿರಲಿಲ್ಲ ಎಂದೇಕೆ ಹೇಳಬಹುದು?

11 ವಾರ್ಷಿಕ ದೋಷಪರಿಹಾರಕ ದಿನದಂದು ಇಸ್ರಾಯೇಲಿನ ಮಹಾ ಯಾಜಕನು ಪ್ರಾಣಿ ರಕ್ತವನ್ನು ಬಳಸುತ್ತಿದ್ದ ವಿಧ ರಕ್ತದ ಬಗ್ಗೆ ದೇವರ ನೋಟ ಏನೆಂದು  ತೋರಿಸುತ್ತದೆ. ರಕ್ತವನ್ನು ಒಂದು ವಿಶೇಷ ಕಾರಣಕ್ಕಾಗಿ ಮಾತ್ರ ಬಳಸಬೇಕಾಗಿತ್ತು. ಯೆಹೋವನ ಕ್ಷಮೆಯ ಅಗತ್ಯವಿದ್ದವರ ಪಾಪಗಳ ಪರಿಹಾರಕ್ಕಾಗಿ ಅದನ್ನು ಬಳಸಬೇಕಿತ್ತು. ಹೋರಿ ಮತ್ತು ಹೋತದ ರಕ್ತವನ್ನು ಕೃಪಾಸನದ ಮೇಲೆ ಮತ್ತು ಅದರ ಎದುರಿಗೆ ಚಿಮಿಕಿಸಬೇಕಿತ್ತು. (ಯಾಜ. 16:14, 15, 19) ಈ ಕ್ರಿಯೆಯು ಯೆಹೋವನು ಇಸ್ರಾಯೇಲ್ಯರ ಪಾಪಗಳನ್ನು ಕ್ಷಮಿಸಲು ದಾರಿತೆರೆಯಿತು. ಇದರ ಜೊತೆಗೆ ದೇವರು ಕೊಟ್ಟ ಆಜ್ಞೆಯೇನೆಂದರೆ ಒಬ್ಬ ವ್ಯಕ್ತಿ ಆಹಾರಕ್ಕಾಗಿ ಪ್ರಾಣಿಯನ್ನು ಕೊಂದರೆ ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು. ಏಕೆಂದರೆ “ಪ್ರತಿ ಪ್ರಾಣಿಗೂ ರಕ್ತವೇ ಪ್ರಾಣಾಧಾರ.” (ಯಾಜ. 17:11-14) ಇದೆಲ್ಲ ಸುಮ್ಮನೆ ಒಂದು ಸಂಸ್ಕಾರವಾಗಿತ್ತಾ? ಇಲ್ಲ. ದೋಷಪರಿಹಾರಕ ದಿನದಂದು ರಕ್ತದ ಬಳಕೆಯ ಬಗ್ಗೆ ಮತ್ತು ರಕ್ತವನ್ನು ಭೂಮಿಗೆ ಚೆಲ್ಲುವುದರ ಬಗ್ಗೆ ಕೊಡಲಾದ ನಿಯಮವು ಯೆಹೋವನು ಈ ಹಿಂದೆ ನೋಹನಿಗೂ ಅವನ ಸಂತತಿಗೂ ಕೊಟ್ಟ ಆಜ್ಞೆಗೆ ಹೊಂದಿಕೆಯಲ್ಲಿತ್ತು. (ಆದಿ. 9:3-6) ಜೀವ ಪೋಷಿಸಲಿಕ್ಕಾಗಿ ರಕ್ತ ತಿನ್ನುವುದನ್ನು ಯೆಹೋವನು ಆಗಲೇ ನಿಷೇಧಿಸಿದ್ದನು. ಕ್ರೈಸ್ತರ ಮೇಲೆ ಇದು ಯಾವ ಪರಿಣಾಮ ಬೀರಬೇಕು?

12. ಇಬ್ರಿಯ ಕ್ರೈಸ್ತರಿಗೆ ಪೌಲನು ಬರೆದ ಪತ್ರ ರಕ್ತಕ್ಕೂ ಪಾಪಕ್ಷಮೆಗೂ ಇರುವ ಸಂಬಂಧವನ್ನು ಹೇಗೆ ತೋರಿಸುತ್ತದೆ?

12 ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ರಕ್ತಕ್ಕೆ ಶುದ್ಧೀಕರಿಸುವ ಶಕ್ತಿಯಿದೆ ಎಂಬ ವಿಷಯವನ್ನು ತಿಳಿಸುತ್ತಾ, “ಧರ್ಮಶಾಸ್ತ್ರಕ್ಕನುಸಾರ ರಕ್ತದ ಮೂಲಕ ಬಹುಮಟ್ಟಿಗೆ ಎಲ್ಲವೂ ಶುದ್ಧೀಕರಿಸಲ್ಪಡುತ್ತದೆ ಮತ್ತು ರಕ್ತವು ಸುರಿಸಲ್ಪಡದೆ ಕ್ಷಮಾಪಣೆಯು ಉಂಟಾಗುವುದಿಲ್ಲ” ಎಂದು ಬರೆದನು. (ಇಬ್ರಿ. 9:22) ಪೌಲನು ತಿಳಿಸಿದ್ದೇನೆಂದರೆ, ಪ್ರಾಣಿ ಯಜ್ಞಗಳಿಗೆ ಸ್ವಲ್ಪ ಮೌಲ್ಯವಿದ್ದರೂ ಅವು ಇಸ್ರಾಯೇಲ್ಯರಿಗೆ ಅವರು ಪಾಪಿಗಳು, ಪಾಪಗಳನ್ನು ಪೂರ್ತಿಯಾಗಿ ತೆಗೆದುಹಾಕಲು ಶ್ರೇಷ್ಠವಾದ ಯಜ್ಞದ ಅಗತ್ಯವಿದೆ ಎಂಬದನ್ನು ನೆನಪುಹುಟ್ಟಿಸಿದವು. ಹೌದು, ‘ಧರ್ಮಶಾಸ್ತ್ರವು ಬರಲಿದ್ದ ಒಳ್ಳೆಯ ವಿಷಯಗಳ ಛಾಯೆಯಾಗಿತ್ತೇ ಹೊರತು ಅವುಗಳ ನಿಜರೂಪ ಆಗಿರಲಿಲ್ಲ.’ (ಇಬ್ರಿ. 10:1-4) ಹಾಗಾದರೆ ಪಾಪಗಳ ಕ್ಷಮೆ ಹೇಗೆ ಸಿಗಸಾಧ್ಯ?

13. ಯೇಸು ತನ್ನ ರಕ್ತದ ಮೌಲ್ಯವನ್ನು ಯೆಹೋವನಿಗೆ ಅರ್ಪಿಸಿರುವುದರಿಂದ ನಿಮಗೇನು ಪ್ರಯೋಜನವಾಗಬಲ್ಲದು?

13 ಎಫೆಸ 1:7 ಓದಿ. ನಮಗೋಸ್ಕರ “ತನ್ನನ್ನೇ ಒಪ್ಪಿಸಿಬಿಟ್ಟ” ಯೇಸು ಕ್ರಿಸ್ತನ ಯಜ್ಞಾರ್ಪಿತ ಮರಣವು ಆತನನ್ನೂ ಆತನ ತಂದೆಯನ್ನೂ ಪ್ರೀತಿಸುವವರೆಲ್ಲರಿಗೆ ತುಂಬ ಮಹತ್ವದ್ದಾಗಿದೆ. (ಗಲಾ. 2:20) ಹಾಗಿದ್ದರೂ, ಯೇಸು ತನ್ನ ಮರಣ ಹಾಗೂ ಪುನರುತ್ಥಾನದ ಬಳಿಕ ಏನು ಮಾಡಿದನೊ ಅದು ನಮಗೆ ನಿಜವಾದ ಬಿಡುಗಡೆ ಕೊಟ್ಟಿತು. ಪಾಪಗಳ ಕ್ಷಮೆಯನ್ನು ಸಾಧ್ಯಗೊಳಿಸಿತು. ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ಒಂದು ಸಂಗತಿ ಯೇಸು ಮುಂದೆ ಮಾಡಿದಂಥ ಕೆಲಸವನ್ನು ಮುಂಚಿತ್ರಿಸಿತು. ಆ ದಿನದಂದು ಮಹಾ ಯಾಜಕನು ಯಜ್ಞದ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ದೇವಗುಡಾರದ  ಅತಿಪವಿತ್ರ ಸ್ಥಾನವನ್ನು ಪ್ರವೇಶಿಸುತ್ತಿದ್ದನು. ಇದನ್ನೇ ಮುಂದೆ ಕಟ್ಟಲಾದ ಸೊಲೊಮೋನನ ಆಲಯದಲ್ಲೂ ಮಾಡಲಾಯಿತು. ಇದು ಯಾಜಕನು ಆ ರಕ್ತವನ್ನು ದೇವರ ಮುಂದೆ ಅರ್ಪಿಸಲು ಆತನ ಸಮ್ಮುಖಕ್ಕೆ ತೆಗೆದುಕೊಂಡು ಹೋದಂತೆ ಇರುತ್ತಿತ್ತು. (ಯಾಜ. 16:11-15) ಅದೇ ರೀತಿ ಯೇಸು ಸ್ವರ್ಗವನ್ನು ಪ್ರವೇಶಿಸಿ ತನ್ನ ಮಾನವ ಜೀವದ ಮೌಲ್ಯವನ್ನು ನೇರವಾಗಿ ಯೆಹೋವನಿಗೇ ಅರ್ಪಿಸಿದನು. (ಇಬ್ರಿ. 9:6, 7, 11-14, 24-28) ನಾವು ಯೇಸುವಿನ ರಕ್ತದಲ್ಲಿ ನಂಬಿಕೆ ಇಡುವುದರಿಂದ ನಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ ಮತ್ತು ಮನಸ್ಸಾಕ್ಷಿ ಶುದ್ಧೀಕರಿಸಲ್ಪಡುತ್ತದೆ. ಇದಕ್ಕಾಗಿ ನಾವೆಷ್ಟು ಆಭಾರಿಗಳಲ್ಲವೇ?

14, 15. ರಕ್ತದ ಕುರಿತ ಯೆಹೋವನ ನಿಯಮವನ್ನು ಅರ್ಥಮಾಡಿಕೊಂಡು ಅದನ್ನು ಪಾಲಿಸುವುದು ಏಕೆ ಪ್ರಾಮುಖ್ಯ?

14 ಯಾವುದೇ ರೀತಿಯ ರಕ್ತ ತಿನ್ನಬಾರದೆಂಬ ಆಜ್ಞೆಯನ್ನು ಯೆಹೋವನು ಯಾಕೆ ಕೊಟ್ಟಿದ್ದಾನೆಂದು ನಿಮಗೆ ಈಗ ಹೆಚ್ಚು ಚೆನ್ನಾಗಿ ಅರ್ಥವಾಯಿತಾ? (ಯಾಜ. 17:10) ದೇವರು ರಕ್ತವನ್ನು ಪವಿತ್ರವಾಗಿ ಎಣಿಸಲು ಕಾರಣವೇನೆಂದು ನಿಮಗೆ ಈಗ ಗೊತ್ತಾಯಿತಾ? ಆತನ ದೃಷ್ಟಿಯಲ್ಲಿ ರಕ್ತವು ಜೀವಕ್ಕೆ ಸಮ. (ಆದಿ. 9:4) ರಕ್ತದ ಕುರಿತ ದೇವರ ನೋಟವನ್ನು ನಾವು ಸ್ವೀಕರಿಸಿ, ಅದನ್ನು ವರ್ಜಿಸಬೇಕೆಂಬ ಆತನ ಆಜ್ಞೆಗೆ ವಿಧೇಯರಾಗಬೇಕೆಂದು ಒಪ್ಪುತ್ತೀರಾ? ದೇವರೊಂದಿಗೆ ಶಾಂತಿ ಸಂಬಂಧವನ್ನು ಪಡೆಯಬಹುದಾದ ಒಂದೇ ಒಂದು ಮಾರ್ಗವೇನೆಂದರೆ ನಾವು ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿಟ್ಟು, ನಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ರಕ್ತಕ್ಕೆ ವಿಶೇಷ ಮೌಲ್ಯವಿದೆಯೆಂದು ಒಪ್ಪಿಕೊಳ್ಳಬೇಕು.—ಕೊಲೊ. 1:19, 20.

15 ರಕ್ತ ತೆಗೆದುಕೊಳ್ಳುವಂಥ ಪರಿಸ್ಥಿತಿ ನಮ್ಮಲ್ಲಿ ಯಾರಿಗಾದರೂ ತಟ್ಟನೆ ಎದುರಾಗಬಹುದು. ಅಥವಾ ಕುಟುಂಬ ಸದಸ್ಯರೊಬ್ಬರಿಗಾಗಲಿ ಪ್ರಿಯ ಮಿತ್ರರೊಬ್ಬರಿಗಾಗಲಿ ರಕ್ತಪೂರಣ ತೆಗೆದುಕೊಳ್ಳಬೇಕಾ ಇಲ್ಲವಾ ಎಂಬ ಸಮಸ್ಯೆ ಎದುರಾದೀತು. ಇಂಥ ಬಿಕ್ಕಟ್ಟಿನ ಸಮಯದಲ್ಲಿ ರಕ್ತದ ಅಂಶಗಳ ಹಾಗೂ ಚಿಕಿತ್ಸಾಕ್ರಮಗಳ ಬಗ್ಗೆಯೂ ನಿರ್ಣಯಗಳನ್ನು ಮಾಡಬೇಕಾಗಿ ಬರುತ್ತದೆ. ಆದ್ದರಿಂದ ಮುಂಚಿತವಾಗಿಯೇ ಸಂಶೋಧನೆ ಮಾಡಿ, ಬರಬಹುದಾದ ತುರ್ತು ಪರಿಸ್ಥಿತಿಗಾಗಿ ಸಿದ್ಧರಾಗಿರುವುದು ಅತಿ ಪ್ರಾಮುಖ್ಯ. ಪ್ರಾರ್ಥನೆಯ ಜೊತೆಗೆ ನಾವು ತೆಗೆದುಕೊಳ್ಳುವ ಇಂಥ ಕ್ರಮಗಳು ನಾವು ಈ ವಿಷಯದಲ್ಲಿ ದೃಢರಾಗಿದ್ದು ರಾಜಿಮಾಡಿಕೊಳ್ಳದಂತೆ ಸಹಾಯಮಾಡುವುದು. ಯೆಹೋವನ ವಾಕ್ಯವು ಖಂಡಿಸುವಂಥ ವಿಷಯವನ್ನು ಸ್ವೀಕರಿಸಿ ನಾವು ಆತನ ಮನನೋಯಿಸಲು ಇಚ್ಛಿಸುವುದಿಲ್ಲ ಅಲ್ಲವೇ? ವೈದ್ಯಕೀಯ ವೃತ್ತಿಯಲ್ಲಿರುವ ಅನೇಕರು ಮತ್ತು ರಕ್ತಪೂರಣ ತೆಗೆದುಕೊಳ್ಳುವುದು ಸರಿಯೆಂದು ಸಮರ್ಥಿಸುವವರು ಜೀವ ಉಳಿಸಲಿಕ್ಕಾಗಿ ‘ರಕ್ತದಾನ ಮಾಡಿ’ ಎಂದು ವಿನಂತಿಸುತ್ತಾರೆ. ಆದರೆ ರಕ್ತವನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ನಿಯಮಗಳನ್ನು ಇಡುವ ಹಕ್ಕು ಸೃಷ್ಟಿಕರ್ತನಾದ ಯೆಹೋವನಿಗೆ ಮಾತ್ರ ಇದೆಯೆಂದು ಆತನ ಪವಿತ್ರ ಜನರು ನಂಬುತ್ತಾರೆ. ಆತನ ದೃಷ್ಟಿಯಲ್ಲಿ ಯಾವುದೇ ರೀತಿಯ ರಕ್ತವು ಪವಿತ್ರವಾಗಿದೆ. ರಕ್ತದ ಕುರಿತ ಆತನ ಆಜ್ಞೆಯನ್ನು ಪಾಲಿಸುವ ನಮ್ಮ ತೀರ್ಮಾನ ದೃಢವಾಗಿರಬೇಕು. ಜೀವ ಉಳಿಸಲು ಯೇಸುವಿನ ರಕ್ತಕ್ಕಿರುವ ಶಕ್ತಿಯನ್ನು ಗಣ್ಯಮಾಡುತ್ತೇವೆಂದು ನಮ್ಮ ಪವಿತ್ರ ನಡತೆಯ ಮೂಲಕ ತೋರಿಸುತ್ತೇವೆ. ಪಾಪಕ್ಷಮೆ ಮತ್ತು ನಿತ್ಯಜೀವವನ್ನು ಸಾಧ್ಯಗೊಳಿಸುವ ಏಕೈಕ ರಕ್ತ ಅದು.—ಯೋಹಾ. 3:16.

ರಕ್ತದ ಬಗ್ಗೆ ದೇವರು ಕೊಟ್ಟಿರುವ ಆಜ್ಞೆ ಪಾಲಿಸಲು ದೃಢತೀರ್ಮಾನ ಮಾಡಿದ್ದೀರೊ? (ಪ್ಯಾರ 14, 15 ನೋಡಿ)

ನಾವು ಪರಿಶುದ್ಧರಾಗಿರಬೇಕೆಂದು ಯೆಹೋವನು ಏಕೆ ಅಪೇಕ್ಷಿಸುತ್ತಾನೆ?

16. ಯೆಹೋವನ ಜನರು ಏಕೆ ಪರಿಶುದ್ಧರಾಗಿರಬೇಕು?

16 ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ಬಂದಿವಾಸದಿಂದ ಬಿಡಿಸಿದಾಗ ಅವರಿಗೆ ಹೀಗಂದನು: “ನಿಮ್ಮ ದೇವರಾಗಿರುವದಕ್ಕೆ ನಿಮ್ಮನ್ನು ಐಗುಪ್ತದೇಶದೊಳಗಿಂದ ಬರಮಾಡಿದ ಯೆಹೋವನೇ ನಾನು; ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.” (ಯಾಜ. 11:45) ಇಸ್ರಾಯೇಲ್ಯರು ಪರಿಶುದ್ಧರಾಗಿರಬೇಕೆಂದು ಅಪೇಕ್ಷಿಸಲಾಯಿತು ಏಕೆಂದರೆ ಯೆಹೋವನು ಪರಿಶುದ್ಧನಾಗಿದ್ದಾನೆ. ಯೆಹೋವನ ಸಾಕ್ಷಿಗಳಾಗಿರುವ ನಾವೂ ಪರಿಶುದ್ಧರಾಗಿರಬೇಕು. ಇದು ಯಾಜಕಕಾಂಡ ಪುಸ್ತಕದಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ.

17. ಯಾಜಕಕಾಂಡ ಪುಸ್ತಕದ ಬಗ್ಗೆ ಈಗ ನಿಮಗೆ ಹೇಗನಿಸುತ್ತದೆ?

17 ಯಾಜಕಕಾಂಡ ಪುಸ್ತಕದ ನಿರ್ದಿಷ್ಟ ಭಾಗಗಳ ಈ ಚರ್ಚೆ ಖಂಡಿತವಾಗಿ ಉಪಯುಕ್ತವಾಗಿತ್ತು. ಇದು ಬೈಬಲಿನ ಈ ಪ್ರೇರಿತ ಪುಸ್ತಕದ ಕಡೆಗಿನ ನಿಮ್ಮ ಮೆಚ್ಚುಗೆಯನ್ನೂ ಹೆಚ್ಚಿಸಿರಬೇಕು. ಇದರಲ್ಲಿರುವ ಬೆಲೆಕಟ್ಟಲಾಗದ ವಿಷಯಗಳ ಧ್ಯಾನವು ನಾವು ಯಾಕೆ ಪರಿಶುದ್ಧರಾಗಿರಬೇಕೆಂದು ಚೆನ್ನಾಗಿ ಅರ್ಥಮಾಡಿಕೊಳ್ಳಲೂ ಸಹಾಯಮಾಡಿರಬೇಕು. ಆದರೆ ದೇವರ ಪ್ರೇರಿತ ವಾಕ್ಯದಲ್ಲಿರುವ ಈ ಪುಸ್ತಕದಲ್ಲಿ ಇನ್ಯಾವ ಆಧ್ಯಾತ್ಮಿಕ ರತ್ನಗಳಿವೆ? ಯೆಹೋವನಿಗೆ ಸಲ್ಲಿಸಬೇಕಾದ ಪವಿತ್ರ ಸೇವೆಯ ಕುರಿತು ನಾವು ಇನ್ನೇನು ಕಲಿಯಬಹುದು? ಈ ವಿಷಯಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸುವೆವು.