ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ತೈವಾನಿನಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ತೈವಾನಿನಲ್ಲಿ

ಇದು ಸುಮಾರು ಐದು ವರ್ಷದ ಹಿಂದಿನ ಮಾತು. 30ರ ಪ್ರಾಯದಲ್ಲಿದ್ದ ಸಹೋದರ ಚೂ೦ಗ್‌ ಕ್ಯೂ೦ಗ್‌ ಮತ್ತು ಅವರ ಪತ್ನಿ ಜೂಲೀ ಆಸ್ಟ್ರೇಲಿಯದ ಸಿಡ್ನಿಯಲ್ಲಿ ರೆಗ್ಯುಲರ್‌ ಪಯನೀಯರರಾಗಿ ಸೇವೆ ಸಲ್ಲಿಸುತ್ತಾ ಇದ್ದರು. ಆ ಸಹೋದರ ಹೇಳ್ತಾರೆ: “ನಾವಿಬ್ಬರೂ ಪಾರ್ಟ್ ಟೈ೦ ಕೆಲಸ ಮಾಡುತ್ತಿದ್ವಿ. ಯಾವುದೇ ಜಂಜಾಟ ಇಲ್ಲದೆ ಆರಾಮ ಜೀವನ ನಡಿಸುತ್ತಾ ಇದ್ವಿ. ನಾವಿದ್ದ ಕಡೆ ವಾತಾವರಣ ತುಂಬ ಚೆನ್ನಾಗಿತ್ತು. ಕುಟುಂಬದವರೊಟ್ಟಿಗೆ ಸ್ನೇಹಿತರೊಟ್ಟಿಗೆ ಆನಂದಿಸಲಿಕ್ಕೂ ಆಗುತ್ತಿತ್ತು.” ಆದರೆ ಆ ದಂಪತಿಗೆ ಒಳಗೊಳಗೆ ಮನಸ್ಸು ಕೊರೆಯುತ್ತಿತ್ತು. ಯಾಕೆ? ಯಾಕೆಂದರೆ ಅವರಿದ್ದ ಪರಿಸ್ಥಿತಿಯಲ್ಲಿ ಯೆಹೋವನ ಸೇವೆಯನ್ನು ಇನ್ನೂ ಹೆಚ್ಚು ಮಾಡಬಹುದು ಎಂದು ಅವರಿಗೆ ಗೊತ್ತಿತ್ತು. ಆದರೆ ಅದಕ್ಕಾಗಿ ಬದಲಾವಣೆ ಮಾಡಲು ಹಿಂಜರಿಯುತ್ತಿದ್ದರು.

2009ರ ಒಂದು ಅಧಿವೇಶನ ಅವರ ಜೀವನಕ್ಕೊಂದು ತಿರುವು ಕೊಟ್ಟಿತು. ಒಂದು ಭಾಷಣದಲ್ಲಿ ಸೇವೆಯನ್ನು ಹೆಚ್ಚು ಮಾಡಬಲ್ಲವರನ್ನು ಉದ್ದೇಶಿಸಿ ಭಾಷಣಕಾರನು ಹೀಗೆ ಹೇಳಿದನು: “ಕಾರು ಚಲಿಸುತ್ತಿದ್ದರೆ ಮಾತ್ರ ಡ್ರೈವರ್‌ ಅದನ್ನು ಬಲಕ್ಕೋ ಎಡಕ್ಕೋ ತಿರುಗಿಸಬಹುದು. ಅದೇ ರೀತಿ, ನಾವು ಮುಂದೆ ಸಾಗುತ್ತಿದ್ದರೆ ಅಂದರೆ ಗುರಿಮುಟ್ಟಲು ಪ್ರಯತ್ನಿಸುತ್ತಿದ್ದರೆ ಮಾತ್ರ ಶುಶ್ರೂಷೆಯನ್ನು ವಿಸ್ತರಿಸಲು ನಮಗೆ ಬೇಕಾದ ಮಾರ್ಗದರ್ಶನೆಯನ್ನು ಯೇಸು ಕೊಡುತ್ತಾನೆ.” * ಆ ಮಾತುಗಳನ್ನು ಭಾಷಣಕಾರ ತಮಗೇ ಹೇಳುತ್ತಿದ್ದಾರೆ ಎಂದು ಆ ದಂಪತಿಗೆ ಅನಿಸಿತು. ಅದೇ ಅಧಿವೇಶನದಲ್ಲಿ, ತೈವಾನಿನಲ್ಲಿ ಮಿಷನರಿ ಸೇವೆಮಾಡುತ್ತಿರುವ ಒಂದು ದಂಪತಿಯ ಸಂದರ್ಶನವಿತ್ತು. ಅವರು ಸೇವೆಯಲ್ಲಿ ಪಡೆಯುತ್ತಿರುವ ಆನಂದವನ್ನು ಹಂಚಿಕೊಂಡರು. ಇನ್ನೂ ಹೆಚ್ಚು ಸಹೋದರ ಸಹೋದರಿಯರ ಸಹಾಯ ಬೇಕಿದೆ ಎಂದು ಒತ್ತಿಹೇಳಿದರು. ಚೂ೦ಗ್‌ ಕ್ಯೂ೦ಗ್‌ ಮತ್ತು ಜೂಲೀಗೆ ಮತ್ತೆ ಆ ಮಾತುಗಳನ್ನು ತಮಗೇ ಹೇಳಲಾಗುತ್ತಿದೆ ಎಂದನಿಸಿತು.

ಜೂಲೀ ಹೇಳುತ್ತಾರೆ: “ಆ ಭಾಷಣದ ನಂತರ ನಾವು ಯೆಹೋವ ದೇವರಲ್ಲಿ ಪ್ರಾರ್ಥಿಸಿದೆವು. ತೈವಾನಿಗೆ ಹೋಗಲು ಬೇಕಾದ ಧೈರ್ಯವನ್ನು ಕೊಡುವಂತೆ ಕೇಳಿಕೊಂಡೆವು. ಆದರೂ ಒಂದುಕಡೆ ಭಯ. ಆ ಸನ್ನಿವೇಶ ಹೇಗಿತ್ತೆಂದರೆ ತುಂಬ ಎತ್ತರದಿಂದ ಆಳವಾಗಿರುವ ನೀರಿಗೆ ಮೊತ್ತಮೊದಲ ಬಾರಿಗೆ ಜಿಗಿಯುವ ಹಾಗೆ ಇತ್ತು.” ಹಾಗೆ “ಜಿಗಿಯಲು” ಅವರಿಗೆ ನೆರವಾಗಿದ್ದು ಪ್ರಸಂಗಿ 11:4. ಅದು ಹೇಳುತ್ತದೆ, ‘ಗಾಳಿಯನ್ನು ನೋಡುತ್ತಲೇ ಇರುವವನು ಬೀಜಬಿತ್ತುವುದಿಲ್ಲ; ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರು ಕೊಯ್ಯುವುದಿಲ್ಲ.’ ಚೂ೦ಗ್‌ ಕ್ಯೂ೦ಗ್‌ ಹೇಳುತ್ತಾರೆ: “ಹಾಗಾಗಿ ನಾವು ‘ನೋಡುವುದನ್ನು, ಗಮನಿಸುವುದನ್ನು’ ನಿಲ್ಲಿಸಿ ‘ಬಿತ್ತಲು ಕೊಯ್ಯಲು’ ಆರಂಭಿಸಿದ್ವಿ.” ಆ ದಂಪತಿ ಅದಕ್ಕಾಗಿ ಏನು ಮಾಡಿದರು? ಅವರು ಮತ್ತೆ ಮತ್ತೆ ಪ್ರಾರ್ಥಿಸಿದರು. ಮಿಷನರಿಗಳ ಜೀವನ ಕಥೆಗಳನ್ನು ಓದಿದರು. ಈಗಾಗಲೇ ತೈವಾನಿಗೆ ಹೋಗಿರುವ ಸಹೋದರ ಸಹೋದರಿಯರಿಂದ ಇ-ಮೇಲ್‌ಗಳ ಮೂಲಕ ಅಲ್ಲಿನ ಜೀವನದ ಕುರಿತು ತುಂಬ ತಿಳಿದುಕೊಂಡರು. ತಮ್ಮ ಕಾರು, ಮನೆಯ ಕೆಲವು ಸಾಮಾನುಗಳನ್ನು ಮಾರಿದರು. ಮೂರು ತಿಂಗಳ ನಂತರ ತೈವಾನಿನಲ್ಲಿದ್ದರು.

ಸಾರುವುದರಲ್ಲಿ ಖುಷಿ ಪಡೆದರು

ಹೆಚ್ಚು ಪ್ರಚಾರಕರ ಅಗತ್ಯವಿರುವ ತೈವಾನಿನಲ್ಲಿ 21ರಿಂದ ಹಿಡಿದು 73ರ ವಯಸ್ಸಿನ 100ಕ್ಕಿಂತ ಹೆಚ್ಚು ಸಹೋದರ-ಸಹೋದರಿಯರು ದೂರದೂರದ ದೇಶಗಳಿಂದ ಬಂದು ಸೇವೆಮಾಡುತ್ತಿದ್ದಾರೆ. ಆಸ್ಟ್ರೇಲಿಯ, ಬ್ರಿಟನ್‌, ಕೆನಡ, ಫ್ರಾನ್ಸ್‌, ಜಪಾನ್‌, ಕೊರಿಯ, ಸ್ಪೇನ್‌, ಅಮೆರಿಕದಿಂದೆಲ್ಲಾ ಬಂದಿದ್ದಾರೆ. ಅವರಲ್ಲಿ 50ಕ್ಕಿಂತ ಹೆಚ್ಚು ಮಂದಿ ಅವಿವಾಹಿತ ಸಹೋದರಿಯರು. ಈ ಎಲ್ಲ ಹುರುಪಿನ ಪ್ರಚಾರಕರಿಗೆ ವಿದೇಶಕ್ಕೆ ಬಂದು ಸೇವೆಮಾಡಲು ಯಾವುದು ಸಹಾಯ ಮಾಡಿತು? ನೋಡೋಣ ಬನ್ನಿ.

ಲಾರ

ಕೆನಡದಿಂದ ಪಶ್ಚಿಮ ತೈವಾನಿಗೆ ಬಂದು ಪಯನೀಯರ್‌ ಸೇವೆ ಮಾಡುತ್ತಿರುವ ಅವಿವಾಹಿತ ಸಹೋದರಿ ಲಾರ ಅನುಭವ ಗಮನಿಸಿ. ಹತ್ತು ವರ್ಷದ ಹಿಂದೆ ಅವಳಿಗೆ ಸುವಾರ್ತೆ ಸಾರುವುದು ಅಂದರೆ ತಲೆನೋವು. “ನಾನು ಅಪರೂಪಕ್ಕೆ ಸೇವೆಗೆ ಹೋಗುತ್ತಿದ್ದೆ. ಹಾಗಾಗಿ ಸೇವೆಯಲ್ಲಿ ಸ್ವಲ್ಪವೂ ಆನಂದಿಸುತ್ತಿರಲಿಲ್ಲ” ಎನ್ನುತ್ತಾಳೆ ಲಾರ. ನಂತರ ಅವಳ ಸ್ನೇಹಿತರು ಒಂದು ತಿಂಗಳ ಮಟ್ಟಿಗೆ ಮೆಕ್ಸಿಕೊಗೆ ಬಂದು ತಮ್ಮೊಂದಿಗೆ ಸೇವೆ ಮಾಡುವಂತೆ ಕೇಳಿಕೊಂಡರು. “ನಾನು ಅಷ್ಟೊಂದು ಸೇವೆ ಮಾಡಿದ್ದು ಅದೇ ಮೊದಲ ಬಾರಿ. ಸೇವೆ ಅಷ್ಟು ಚೆನ್ನಾಗಿರುತ್ತದೆ ಅಂತ ನನಗೆ ಗೊತ್ತೇ ಇರಲಿಲ್ಲ!”

ಈ ಉತ್ತಮ ಅನುಭವ ಲಾರಗೆ ಕೆನಡದಲ್ಲಿ ಒಂದು ವಿದೇಶೀ ಭಾಷಾ ಸಭೆಗೆ ಹೋಗಲು ಪ್ರೇರಣೆ ನೀಡಿತು. ಬಳಿಕ ಚೈನೀಸ್‌ ಭಾಷೆ ಕಲಿಯುವ ಕೋರ್ಸ್‌ಗೆ ಸೇರಿದಳು. ಚೈನೀಸ್‌ ಭಾಷಾ ಗುಂಪಿನೊಂದಿಗೆ ಸೇವೆ ಮಾಡಿದಳು. ಅನಂತರ ತೈವಾನಿಗೆ ಹೋಗುವ ಗುರಿ ಇಟ್ಟಳು. 2008ರ ಸೆಪ್ಟೆಂಬರ್‌ನಲ್ಲಿ ಆ ಗುರಿ ತಲಪಿದಳು. ಈಗ ಲಾರ ಏನಂತಾಳೆ? “ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನನಗೆ ವರ್ಷ ಹಿಡಿಯಿತು. ಆದರೆ ಈಗ ಕೆನಡಕ್ಕೆ ವಾಪಾಸ್‌ ಹೋಗುವ ಯೋಚನೆ ಕನಸ್ಸಲ್ಲೂ ಬರಲ್ಲ.” ಸೇವೆಯ ಬಗ್ಗೆ ಅವಳಿಗೆ ಈಗ ಹೇಗನಿಸುತ್ತದೆ? ಅವಳು ಹೇಳುತ್ತಾಳೆ: “ನಿಜಕ್ಕೂ ನಾನು ಸೇವೆಯಲ್ಲಿ ಆನಂದಿಸುತ್ತಿದ್ದೇನೆ. ಬೈಬಲ್‌ ವಿದ್ಯಾರ್ಥಿಗಳು ಯೆಹೋವ ದೇವರ ಬಗ್ಗೆ ಕಲಿತು ತಮ್ಮ ಜೀವನದಲ್ಲಿ ಬದಲಾವಣೆ ಮಾಡುವುದನ್ನು ನೋಡುವಾಗ ಸಿಗುವ ಖುಷಿಗಿಂತ ದೊಡ್ಡದು ಯಾವುದೂ ಇಲ್ಲ. ತೈವಾನಿನಲ್ಲಿ ಮಾಡುತ್ತಿರುವ ಸೇವೆಯಿಂದಾಗಿ ಆ ರೀತಿಯ ಖುಷಿಯನ್ನು ನಾನು ತುಂಬ ಸಾರಿ ಅನುಭವಿಸಿದ್ದೇನೆ.”

ಭಾಷಾ ತಡೆಗಳನ್ನು ಜಯಿಸಿದರು

ಬ್ರೈಯನ್‌ ಮತ್ತು ಮಷೆಲ್‌

35ರ ಆಸುಪಾಸಿನಲ್ಲಿದ್ದ ಬ್ರೈಯನ್‌ ಮತ್ತು ಅವರ ಪತ್ನಿ ಮಷೆಲ್‌ ಅಮೆರಿಕದಿಂದ ತೈವಾನಿಗೆ ಹೋಗಿ ಈಗ ಸುಮಾರು ಎಂಟು ವರ್ಷ ಆಗಿದೆ. ಅಲ್ಲಿ ಹೋದಾಗ ಮೊದಮೊದಲು ಅವರಿಗೆ ಸೇವೆಯಲ್ಲಿ ಅಷ್ಟೇನು ಮಾಡಲು ಆಗುತ್ತಿಲ್ಲ ಎಂದನಿಸಿತು. ಆದರೆ ಅನುಭವಸ್ಥ ಮಿಷನರಿಯೊಬ್ಬರು ಅವರಿಗೆ ಹೀಗೆ ಹೇಳಿದರು: “ನೀವು ಒಂದೇ ಒಂದು ಕರಪತ್ರ ಕೊಟ್ಟರೂ ಅದು ದೊಡ್ಡ ವಿಷಯ. ಏಕೆಂದರೆ ಆ ವ್ಯಕ್ತಿಗೆ ಯೆಹೋವನ ಬಗ್ಗೆ ಸಂದೇಶ ಸಿಕ್ಕಿರುವುದು ಅದೇ ಮೊದಲನೇ ಬಾರಿ ಆಗಿರಬಹುದು. ಹಾಗಾದರೆ ನೀವು ಸೇವೆಯಲ್ಲಿ ಬಹುಮುಖ್ಯ ಪಾಲನ್ನು ಮಾಡಿದ್ದೀರಿ ಅಂತಾಯಿತಲ್ಲಾ.” ಈ ಉತ್ತೇಜನದ ಮಾತುಗಳು ಬ್ರೈಯನ್‌ ಮತ್ತು ಮಷೆಲ್‌ಗೆ ನಿರಾಶೆಗೊಳ್ಳದೆ ಸೇವೆ ಮುಂದುವರಿಸಲು ನೆರವಾಯಿತು. ಇನ್ನೊಬ್ಬ ಸಹೋದರರು ಹೀಗೆ ಹೇಳಿದರು: “ಚೈನೀಸ್‌ ಭಾಷೆಯಲ್ಲಿ ನೀವು ಎಷ್ಟು ಪ್ರಗತಿ ಮಾಡುತ್ತಿದ್ದೀರಾ ಎನ್ನುವುದನ್ನು ದಿನದಿಂದ ದಿನಕ್ಕೆ ಲೆಕ್ಕ ಹಾಕಬೇಡಿ, ಸಮ್ಮೇಳನದಿಂದ ಸಮ್ಮೇಳನಕ್ಕೆ ಲೆಕ್ಕ ಹಾಕಿ. ಆಗ ನಿರುತ್ತೇಜನ ಆಗುವುದಿಲ್ಲ.” ಆ ದಂಪತಿ ಹಾಗೆಯೇ ಮಾಡಿದರು. ಚೈನೀಸ್‌ ಭಾಷೆ ಚೆನ್ನಾಗಿ ಕಲಿತು ಈಗಲೂ ಪಯನೀಯರ್‌ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ.

ವಿದೇಶೀ ಭಾಷೆಯನ್ನು ಕಲಿಯುವ ಪ್ರೇರಣೆ ನಿಮ್ಮಲ್ಲೂ ಬರಬೇಕಾದರೆ ನೀವೇನು ಮಾಡಬೇಕು? ನೀವು ಯಾವ ಕ್ಷೇತ್ರದಲ್ಲಿ ಸೇವೆಮಾಡಲು ಬಯಸುತ್ತಿರೋ ಅಲ್ಲಿಗೆ ಒಮ್ಮೆ ಭೇಟಿನೀಡಿ. ಅಲ್ಲಿನ ಕೂಟಗಳಿಗೆ ಹಾಜರಾಗಿ. ಸಹೋದರ-ಸಹೋದರಿಯರೊಂದಿಗೆ ಸಹವಾಸ ಮಾಡಿ. ಅವರೊಟ್ಟಿಗೆ ಸೇವೆಗೆ ಹೋಗಿ. ಬ್ರೈಯನ್‌ ಹೇಳ್ತಾರೆ: “ಅಲ್ಲಿ ಎಷ್ಟೋ ಜನ ಸುವಾರ್ತೆಗೆ ಕಿವಿಗೊಡುವುದನ್ನು ನೋಡುವಾಗ ಮತ್ತು ಅಲ್ಲಿನ ಸಹೋದರ-ಸಹೋದರಿಯರ ಪ್ರೀತಿಯನ್ನು ಸವಿಯುವಾಗ, ಸವಾಲುಗಳಿದ್ದರೂ ಅಲ್ಲಿಗೆ ಹೋಗಿ ಸೇವೆಮಾಡಲು ಮುಂದಾಗುವಿರಿ.”

ಅಲ್ಲಿ ಯಾವ ಕೆಲಸ ಮಾಡೋದು?

ಕ್ರಿಸ್ಟನ್‌ ಮತ್ತು ಮಷೆಲ್‌

ತೈವಾನಿಗೆ ಹೋಗಿರುವವರು ಬೇರೆ ಬೇರೆ ಕೆಲಸ ಮಾಡಿ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ಅನೇಕರು ಇಂಗ್ಲಿಷ್‌ ಕಲಿಸುತ್ತಾರೆ. ಕ್ರಿಸ್ಟನ್‌ ಮತ್ತು ಮಷೆಲ್‌ ದಂಪತಿ ಮೀನು ಮಾರುತ್ತಾರೆ. ಕ್ರಿಸ್ಟನ್‌ ಹೇಳುತ್ತಾರೆ: “ಈ ಮುಂಚೆ ನಾನು ಯಾವತ್ತೂ ಈ ಕೆಲಸ ಮಾಡಿಲ್ಲ. ಹಾಗಿದ್ದರೂ ಈ ಕೆಲಸದಿಂದಾಗಿ ನನಗೆ ಈ ದೇಶದಲ್ಲಿ ಉಳುಕೊಳ್ಳಲು ಆಗುತ್ತಿದೆ.” ಕ್ರಿಸ್ಟನ್‌ಗೆ ಕೆಲವು ಖಾಯಂ ಗಿರಾಕಿಗಳು ಸಿಕ್ಕಿದ್ದಾರೆ. ಈ ಅರೆಕಾಲಿಕ ಕೆಲಸ ಅವರಿಗೆ ಆರ್ಥಿಕ ನೆರವು ನೀಡುತ್ತಿದೆ ಮಾತ್ರವಲ್ಲ ಅತಿ ಪ್ರಾಮುಖ್ಯ ಕೆಲಸದಲ್ಲಿ ಅಂದರೆ ‘ಮನುಷ್ಯರನ್ನು ಹಿಡಿಯುವ’ ಪಯನೀಯರ್‌ ಸೇವೆಯಲ್ಲಿ ಹೆಚ್ಚು ಸಮಯ ವ್ಯಯಿಸಲು ನೆರವಾಗುತ್ತಿದೆ.

“ಪ್ರಯಾಣವನ್ನೂ ಆನಂದಿಸಿ”

ವಿಲಿಯಮ್‌ ಮತ್ತು ಜೆನಿಫರ್‌ ದಂಪತಿ ಏಳು ವರ್ಷಗಳ ಹಿಂದೆ ಅಮೆರಿಕದಿಂದ ತೈವಾನಿಗೆ ಬಂದರು. “ಹೊಸ ಭಾಷೆ ಕಲಿಯೋದು, ಪಯನೀಯರರಾಗಿ ಸೇವೆಮಾಡೋದು, ಸಭೆ ಕೆಲಸಗಳನ್ನು ನೋಡಿಕೊಳ್ಳುವುದು, ಹಣಕಾಸನ್ನು ಸಂಭಾಳಿಸೋದು ಇದೆಲ್ಲವನ್ನು ಮಾಡುವಾಗ ಕೆಲವೊಮ್ಮೆ ಸುಸ್ತಾಗಿ ಬಿಡುತ್ತೇವೆ” ಎನ್ನುತ್ತಾರೆ ವಿಲಿಯಮ್‌. ಹಾಗಾದರೆ ಆ ಸವಾಲನ್ನು ಜಯಿಸಿ ಸಂತೋಷದಿಂದಿರಲು ಅವರಿಗೆ ಯಾವುದು ಸಹಾಯಮಾಡಿತು? ಅವರು ಮುಟ್ಟಲು ಸಾಧ್ಯವಿರುವ ಗುರಿಗಳನ್ನು ಇಡುತ್ತಾರೆ. ಚೈನೀಸ್‌ ಭಾಷೆಯನ್ನು ಬೇಗಬೇಗ ಕಲಿತುಬಿಡಬೇಕು ಎಂದು ಯೋಚಿಸಲ್ಲ. ಹಾಗಾಗಿ ಪ್ರಗತಿ ನಿಧಾನವಾದರೂ ನಿರಾಶೆಗೊಳ್ಳುವುದಿಲ್ಲ.

ವಿಲಿಯಮ್‌ ಮತ್ತು ಜೆನಿಫರ್‌

ಸಂಚರಣ ಮೇಲ್ವಿಚಾರಕರು ಒಮ್ಮೆ ವಿಲಿಯಮ್‌ಗೆ ಹೀಗೆ ಹೇಳಿದರಂತೆ: “ನೀವು ಮುಟ್ಟಲಿರುವ ಸ್ಥಳದ ಬಗ್ಗೆ ಯೋಚಿಸುತ್ತಾ ಪ್ರಯಾಣವನ್ನು ಆನಂದಿಸದೆ ಇರಬೇಡಿ. ಪ್ರಯಾಣವನ್ನೂ ಆನಂದಿಸಿ.” ಇನ್ನೊಂದು ಮಾತಲ್ಲಿ ಹೇಳೋದಾದರೆ, ಆಧ್ಯಾತ್ಮಿಕ ಗುರಿಯನ್ನು ಇಟ್ಟ ನಂತರ ಆ ಗುರಿಮುಟ್ಟಲು ತೆಗೆದುಕೊಳ್ಳುವ ಒಂದೊಂದು ಹೆಜ್ಜೆಯನ್ನೂ ಆನಂದಿಸಬೇಕು. ಆ ಕಿವಿಮಾತನ್ನು ವಿಲಿಯಮ್‌ ಮತ್ತವರ ಹೆಂಡತಿ ಅನ್ವಯಿಸಿದರು. ಅದರಿಂದಾಗಿ ಹೊಂದಾಣಿಕೆಗಳನ್ನು ಮಾಡಲು, ಸ್ಥಳೀಯ ಜವಾಬ್ದಾರಿಯುತ ಸಹೋದರರ ಸಲಹೆಗೆ ಕಿವಿಗೊಡಲು ಸಾಧ್ಯವಾಯಿತು. ಹೀಗೆ ಆ ಹೊಸ ಜಾಗದಲ್ಲಿ ತಮ್ಮ ಸೇವೆಯನ್ನು ಫಲಕಾರಿಯಾಗಿ ಮಾಡಲು ಅವರಿಗಾಗಿದೆ. ವಿಲಿಯಮ್‌ ಹೇಳುತ್ತಾರೆ: “ಸಂಚರಣ ಮೇಲ್ವಿಚಾರಕರು ಆ ಮಾತು ಹೇಳಿದ ಮೇಲೆ ಈ ದ್ವೀಪದ ಪ್ರಕೃತಿ ಸೌಂದರ್ಯವನ್ನು ನೋಡಿ ಆನಂದಿಸಲು ಸಹ ಸಮಯ ಮಾಡಿಕೊಳ್ಳುತ್ತೇವೆ.”

ಅಮೆರಿಕದ ಮ್ಯಾಗನ್‌ ಎಂಬ ಅವಿವಾಹಿತ ಪಯನೀಯರ್‌ ಸಹೋದರಿಗೆ ಸಹ ಚೈನೀಸ್‌ ಭಾಷೆಯನ್ನು ಸರಾಗವಾಗಿ ಮಾತಾಡುವ ಗುರಿಯಿದೆ. ಅವಳು ತನ್ನ ಈ ಆಧ್ಯಾತ್ಮಿಕ ಗುರಿಯನ್ನು ಮುಟ್ಟಲು ತೆಗೆದುಕೊಳ್ಳುವ ಒಂದೊಂದು ಹೆಜ್ಜೆಯನ್ನೂ ಆನಂದಿಸುತ್ತಿದ್ದಾಳೆ. ಪ್ರತಿ ವಾರಾಂತ್ಯ ಪ್ರಚಾರಕರ ಗುಂಪಿನೊಂದಿಗೆ ತೈವಾನಿನ ಕಾವ್‌ಶಾಂಗ್‌ ಎಂಬ ಅತಿ ದೊಡ್ಡ ಬಂದರಿಗೆ ಹೋಗಿ ಸಾರುತ್ತಾಳೆ. ಇದು ನಿಜಕ್ಕೂ ತುಂಬ ಆಸಕ್ತಿಕರ ಕ್ಷೇತ್ರ. ಏಕೆಂದರೆ ಇಂಡೋನೇಶಿಯ, ಥಾಯ್‍ಲೆಂಡ್, ಫಿಲಿಪೀನ್ಸ್‌, ಬಾಂಗ್ಲಾದೇಶ, ಭಾರತ ಮತ್ತು ವನುವಾಟುವಿನಿಂದ ಬಂದಿರುವ ಬೇರೆಬೇರೆ ಹಡಗುಗಳಿಗೆ ಹೋಗಿ ಅವುಗಳಲ್ಲಿರುವ ಮೀನುಗಾರರಿಗೆ ಸುವಾರ್ತೆಯನ್ನು ತಿಳಿಸಲು ಮ್ಯಾಗನ್‌ಗೆ ಸಾಧ್ಯವಾಗಿದೆ. “ಈ ಮೀನುಗಾರರು ಬಂದರಿನಲ್ಲಿ ಸ್ವಲ್ಪವೇ ಸಮಯ ಇರುವುದರಿಂದ ನಾವು ಬೈಬಲ್‌ ಅಧ್ಯಯನವನ್ನು ಅಲ್ಲೇ ಆ ಕ್ಷಣದಲ್ಲೇ ಶುರುಮಾಡುತ್ತೇವೆ. ಸತ್ಯವನ್ನು ಆದಷ್ಟು ಹೆಚ್ಚು ಜನರಿಗೆ ತಿಳಿಸಲಿಕ್ಕಾಗಿ ನಾನು ಕೆಲವೊಮ್ಮೆ ನಾಲ್ಕು-ಐದು ಮಂದಿಗೆ ಒಟ್ಟಿಗೆ ಬೈಬಲ್‌ ಅಧ್ಯಯನ ಮಾಡುತ್ತೇನೆ” ಎನ್ನುತ್ತಾಳೆ ಮ್ಯಾಗನ್‌. ಚೈನೀಸ್‌ ಭಾಷೆ ಕಲಿಯುವ ಅವಳ ಗುರಿ ಎಲ್ಲಿಯವರೆಗೆ ಬಂತು? “ನನಗೆ ಬೇಗಬೇಗ ಕಲಿಯಲು ಆಗುತ್ತಿದ್ದರೆ ಚೆನ್ನಾಗಿರುತ್ತಿತ್ತು ಅಂದುಕೊಳ್ಳುತ್ತೇನೆ. ಆದರೆ ಸಹೋದರರೊಬ್ಬರು ಹೇಳಿದ ಮಾತು ಆಗ ನನ್ನ ನೆನಪಿಗೆ ಬರುತ್ತದೆ. ‘ನಿನ್ನಿಂದ ಆಗುವುದನ್ನೆಲ್ಲ ಮಾಡು, ಉಳಿದದ್ದನ್ನು ಯೆಹೋವನು ನೋಡಿಕೊಳ್ಳುತ್ತಾನೆ.’”

ಮ್ಯಾಗನ್‌

ಸುರಕ್ಷಿತ, ಸರಳ, ಸ್ವಾರಸ್ಯ

ಬ್ರಿಟನಿನ ಕ್ಯಾಥೀ ಎಂಬಾಕೆಗೆ ಅಗತ್ಯವಿರುವಲ್ಲಿಗೆ ಹೋಗಿ ಸೇವೆಮಾಡಲು ಮನಸ್ಸಿತ್ತು. ಅದಕ್ಕಾಗಿ ಅವಿವಾಹಿತ ಸಹೋದರಿಯರಿಗೆ ಯಾವ ದೇಶ ಸುರಕ್ಷಿತ ಎಂದು ತಿಳಿಯಲು ಪ್ರಯತ್ನಿಸಿದಳು. ತನ್ನೆಲ್ಲ ಚಿಂತೆಗಳನ್ನು ಯೆಹೋವನಲ್ಲಿ ಹೇಳಿಕೊಂಡಳು. ಅನೇಕ ಬ್ರಾಂಚ್‌ ಆಫೀಸುಗಳಿಗೆ ಪತ್ರ ಬರೆದು ಆಯಾ ದೇಶದಲ್ಲಿ ಅವಿವಾಹಿತ ಸಹೋದರಿಯರಿಗೆ ಎದುರಾಗಬಲ್ಲ ಅಪಾಯಗಳ ಕುರಿತು ಕೇಳಿದಳು. ತನಗೆ ಬಂದ ಉತ್ತರಗಳನ್ನೆಲ್ಲ ಗಮನಿಸಿ ತೈವಾನಿಗೆ ಹೋಗಲು ನಿರ್ಧರಿಸಿದಳು.

31ರ ಪ್ರಾಯದಲ್ಲಿದ್ದ ಕ್ಯಾಥೀ 2004ರಲ್ಲಿ ತೈವಾನಿನಲ್ಲಿ ಹೆಜ್ಜೆಯನ್ನಿಟ್ಟಳು. ಅಲ್ಲಿ ಅವಳು ಎಷ್ಟು ಸಾಧ್ಯವೋ ಅಷ್ಟು ಸರಳ ಜೀವನ ನಡೆಸುತ್ತಿದ್ದಾಳೆ. ಅವಳು ಹೇಳುತ್ತಾಳೆ: “ಕಡಿಮೆ ಬೆಲೆಗೆ ಹಣ್ಣುತರಕಾರಿ ಎಲ್ಲಿ ಸಿಗುತ್ತೆ ಅಂತ ನಾನು ಸಹೋದರರನ್ನು ಕೇಳಿ ತಿಳುಕೊಂಡೆ. ಇದರಿಂದ ನನ್ನಲ್ಲಿದ್ದ ಹಣವನ್ನು ತುಂಬ ದಿನದ ವರೆಗೆ ಬಳಸಲು ಆಯಿತು.” ಈ ರೀತಿ ಸರಳ ಜೀವನ ನಡೆಸಲು ಅವಳಿಗೆ ಯಾವುದು ಸಹಾಯಮಾಡಿತು? ಕ್ಯಾಥೀ ಹೇಳುತ್ತಾಳೆ: “ನಾನು ಯಾವಾಗಲೂ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ. ಸಾದಾ ಊಟಬಟ್ಟೆಯಲ್ಲೇ ನನಗೆ ಸಂತೃಪ್ತಿ ಸಿಗುವಂತೆ ಮಾಡಪ್ಪಾ ಅಂತ ಕೇಳುತ್ತೇನೆ. ಯೆಹೋವನು ನನ್ನ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ. ನಾನು ಬಯಸಿದ್ದೆಲ್ಲ ನನ್ನ ಹತ್ತಿರ ಇಲ್ಲ. ಆದರೂ ಏನಿದೆಯೋ ಅದರಲ್ಲಿ ತೃಪ್ತಿ ಪಡೆಯಲು ಯೆಹೋವನು ನನಗೆ ಕಲಿಸುತ್ತಾನೆ.” ಅವಳು ಮುಂದುವರಿಸಿ ಹೇಳುತ್ತಾಳೆ: “ಸರಳ ಜೀವನವನ್ನು ನಾನು ಆನಂದಿಸುತ್ತೇನೆ, ಯಾಕೆಂದರೆ ಇದರಿಂದ ನನಗೆ ಆಧ್ಯಾತ್ಮಿಕ ವಿಷಯಗಳ ಕಡೆಗೆ ಹೆಚ್ಚು ಲಕ್ಷ್ಯಕೊಡಲು ಆಗುತ್ತದೆ.”

ಕ್ಯಾಥೀ

ಕ್ಯಾಥೀಯ ಜೀವನ ಸರಳವಾಗಿದೆ ಮಾತ್ರವಲ್ಲ, ಸ್ವಾರಸ್ಯವಾಗಿಯೂ ಇದೆ. ಯಾಕೆ ಗೊತ್ತಾ? “ಇಲ್ಲಿ ಅನೇಕ ಜನರು ಸುವಾರ್ತೆಗೆ ಕಿವಿಗೊಡುತ್ತಾರೆ. ಇದರಿಂದ ಸಿಗುವ ಖುಷಿ ಇನ್ನಾವುದರಲ್ಲೂ ಸಿಗಲ್ಲ!” ಎನ್ನುತ್ತಾಳೆ ಕ್ಯಾಥೀ. ತೈವಾನಿಗೆ ಬಂದಾಗ ಅವಳು ಪಯನೀಯರ್‌ ಸೇವೆಮಾಡಿದ ಪಟ್ಟಣದಲ್ಲಿ ಕೇವಲ ಎರಡು ಚೈನೀಸ್‌ ಸಭೆಗಳಿದ್ದವು. ಈಗ ಏಳು ಸಭೆಗಳಿವೆ! “ಇಷ್ಟು ಪ್ರಗತಿ ಆಗುತ್ತಿರುವುದನ್ನು ಕಣ್ಣಾರೆ ನೋಡಿ ನಾನು ಹಿಗ್ಗುತ್ತೇನೆ. ಕೊಯ್ಲಿನ ಕೆಲಸದಲ್ಲಿ ಭಾಗಿಯಾಗುವುದು ಪ್ರತಿದಿನ ನನ್ನಲ್ಲಿ ಉಲ್ಲಾಸ ತುಂಬುತ್ತಿದೆ” ಎನ್ನುತ್ತಾಳೆ ಆಕೆ.

“ಅವರಿಗೆ ನನ್ನ ಅಗತ್ಯ ಕೂಡ ಇತ್ತು!”

ಆರಂಭದಲ್ಲಿ ತಿಳಿಸಲಾದ ಚೂ೦ಗ್‌ ಕ್ಯೂ೦ಗ್‌ ಮತ್ತವರ ಪತ್ನಿ ಜೂಲೀಯ ಸೇವೆ ಹೇಗೆ ನಡೆಯುತ್ತಿದೆ? ಆ ಸಹೋದರನಿಗೆ ಚೈನೀಸ್‌ ಸ್ವಲ್ಪವೇ ಗೊತ್ತಿದ್ದರಿಂದ ಸಭೆಯಲ್ಲಿ ತನ್ನ ಅಗತ್ಯ ಅಷ್ಟೇನು ಇಲ್ಲವೆಂದು ಆರಂಭದಲ್ಲಿ ಅವರಿಗೆ ಅನಿಸತೊಡಗಿತು. ಆದರೆ ಸ್ಥಳೀಯ ಸಹೋದರರಿಗೆ ಹಾಗೆ ಅನಿಸಲಿಲ್ಲ. “ಯಾವಾಗ ನಮ್ಮ ಸಭೆ ಪ್ರಗತಿಹೊಂದಿ ಎರಡು ಸಭೆ ಆಯಿತೋ ಆಗ ಶುಶ್ರೂಷಾ ಸೇವಕನಾಗಿರುವ ನನಗೆ ಅನೇಕ ಜವಾಬ್ದಾರಿಗಳನ್ನು ಕೊಡಲಾಯಿತು. ಅಗತ್ಯವಿರುವಲ್ಲಿಗೆ ಬಂದು ಸೇವೆಮಾಡುತ್ತಿದ್ದೇನೆ ಅಂತ ನನಗಾಗ ಅನಿಸಿತು. ತುಂಬ ಖುಷಿಯಾಯಿತು. ಅವರಿಗೆ ನನ್ನ ಅಗತ್ಯ ಕೂಡ ಇತ್ತು!” ಎಂದು ಚೂ೦ಗ್‌ ಕ್ಯೂ೦ಗ್‌ ನಗುತ್ತಾ ಹೇಳುತ್ತಾರೆ. ಈಗ ಅವರು ಹಿರಿಯರಾಗಿದ್ದಾರೆ. ಜೂಲೀ ಹೇಳುತ್ತಾರೆ: “ಏನೋ ಸಾಧಿಸಿದ್ದೇವೆ ಅನ್ನೋ ಖುಷಿ, ಸಂತೃಪ್ತಿ. ಇಂಥ ಖುಷಿ ಯಾವತ್ತೂ ನಮಗಾಗಿರಲಿಲ್ಲ. ಸಹಾಯ ಮಾಡೋಣ ಅಂತ ಇಲ್ಲಿಗೆ ಬಂದ್ವಿ, ಆದರೆ ಪುಳಕಗೊಳಿಸುವ ಈ ಅನುಭವದಿಂದ ನಾವೇ ಸಹಾಯ ಪಡಕೊಂಡ್ವಿ. ಇಲ್ಲಿಗೆ ಬಂದು ಸೇವೆಮಾಡುವ ಅವಕಾಶ ಕೊಟ್ಟದ್ದಕ್ಕಾಗಿ ಯೆಹೋವ ದೇವರಿಗೆ ನಾವು ಕೃತಜ್ಞರು!”

ಅನೇಕ ದೇಶಗಳಲ್ಲಿ ಆಧ್ಯಾತ್ಮಿಕ ಕೊಯ್ಲಿಗೆ ಹೆಚ್ಚು ಕೆಲಸಗಾರರ ಅಗತ್ಯ ಇದೆ. ನೀವು ಶಾಲಾ ಶಿಕ್ಷಣ ಮುಗಿಸಿ ಜೀವನದಲ್ಲಿ ಮುಂದೆ ಏನು ಮಾಡಬೇಕಂತ ಯೋಚಿಸುತ್ತಾ ಇದ್ದೀರಾ? ನೀವೀಗ ಅವಿವಾಹಿತರಾಗಿದ್ದು ಯೆಹೋವನ ಸಂಘಟನೆಯಲ್ಲಿ ಹೆಚ್ಚು ಸೇವೆ ಮಾಡಬೇಕಂತ ಇದ್ದೀರಾ? ನಿಮ್ಮ ಕುಟುಂಬಕ್ಕೆ ಜೀವನದುದ್ದಕ್ಕೂ ಯೆಹೋವನ ಸೇವೆಯ ಸವಿನೆನಪುಗಳು ಇರಬೇಕೆಂದು ಬಯಸುತ್ತೀರಾ? ಕೆಲಸದಿಂದ ನಿವೃತ್ತರಾಗಿದ್ದು ನಿಮ್ಮ ಜೀವನಪರ್ಯಂತದ ಒಳ್ಳೇ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಾ? ರಾಜ್ಯ ಪ್ರಚಾರಕರ ಅಗತ್ಯ ಹೆಚ್ಚಿರುವಲ್ಲಿಗೆ ಹೋಗಿ ಸೇವೆಯನ್ನು ಹೆಚ್ಚಿಸುವಲ್ಲಿ ನಿಜಕ್ಕೂ ಅನೇಕ ಆಶೀರ್ವಾದಗಳನ್ನು ನೀವು ಅನುಭವಿಸುವಿರಿ ಎನ್ನುವುದರಲ್ಲಿ ಎರಡು ಮಾತಿಲ್ಲ!