ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು —ಮೈಕ್ರೊನೇಷಿಯದಲ್ಲಿ
ಕ್ಯಾತ್ರೀನ್ ಎಂಬಾಕೆ ಬೆಳೆದದ್ದು ಅಮೆರಿಕದಲ್ಲಿ. 16ರ ಪ್ರಾಯದಲ್ಲಿ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದಳು. ಕ್ಷೇತ್ರ ಸೇವೆಯಲ್ಲಿ ತುಂಬ ಶ್ರಮಿಸುತ್ತಿದ್ದಳು. ಆದರೆ ಅವಳು ಸಾರುತ್ತಿದ್ದ ಕ್ಷೇತ್ರದಲ್ಲಿ ರಾಜ್ಯ ಸಂದೇಶಕ್ಕೆ ಸ್ಪಂದಿಸುತ್ತಿದ್ದವರು ತುಂಬ ಕಡಿಮೆ ಜನ. ಅವಳನ್ನುವುದು: “ದೇವರ ಬಗ್ಗೆ ತಿಳಿಸಿಕೊಡಲು ಯಾರನ್ನಾದರೂ ಕಳುಹಿಸುವಂತೆ ಆತನಲ್ಲಿ ಬೇಡಿಕೊಳ್ಳುತ್ತಿದ್ದ ಜನರ ಅನುಭವಗಳನ್ನು ಓದಿದ್ದೆ. ನನಗೂ ಅಂಥ ಜನರು ಸಿಗಬೇಕೆಂದು ತುಂಬ ಹಾರೈಸುತ್ತಿದ್ದೆ. ಆದರೆ ಯಾರೂ ಸಿಗಲಿಲ್ಲ.”
ಕ್ಯಾತ್ರೀನ್ ಆ ಸೇವಾಕ್ಷೇತ್ರದಲ್ಲಿ ಹಲವಾರು ವರ್ಷ ಸೇವೆ ಮಾಡಿದ ಬಳಿಕ ಹೆಚ್ಚು ಜನರು ರಾಜ್ಯ ಸಂದೇಶಕ್ಕೆ ಸ್ಪಂದಿಸುವಂಥ ಕ್ಷೇತ್ರಕ್ಕೆ ಸ್ಥಳಾಂತರಿಸುವುದರ ಬಗ್ಗೆ ಯೋಚಿಸತೊಡಗಿದಳು. ಆದರೆ ಇದರಿಂದ ತುಂಬ ಕಷ್ಟ ಆಗಬಹುದು ಎಂಬ ಚಿಂತೆಯೂ ಆಕೆಗಿತ್ತು. ಏಕೆಂದರೆ ಅವಳು ತನ್ನ ಜೀವನದಲ್ಲಿ ಕುಟುಂಬದಿಂದ ದೂರ ಇದದ್ದು ಕೇವಲ ಒಮ್ಮೆ. ಅದೂ ಬರೀ ಎರಡು ವಾರಗಳಿಗಾಗಿ. ಆ ಸಮಯದಲ್ಲಿ ಪ್ರತಿದಿನ ಅವಳಿಗೆ ಮನೆ ನೆನಪು ಕಾಡುತ್ತಿತ್ತು. ಆದರೆ ಯೆಹೋವನಿಗಾಗಿ ಹುಡುಕುತ್ತಿರುವವರಿಗೆ ನೆರವಾಗುವುದರಿಂದ ಸಿಗುವ ಆನಂದವನ್ನು ಸವಿಯಲು ಆಕೆಗಿದ್ದ ಆಸೆ ತುಂಬ ಪ್ರಬಲವಾಗಿತ್ತು. ಬೇರೆ ಕಡೆಗೆ ಸ್ಥಳಾಂತರಿಸುವ ನಿರ್ಣಯ ಮಾಡಿಯೇ ಬಿಟ್ಟಳು. ತಾನು ಎಲ್ಲಿಗೆ ಹೋಗಬಹುದೆಂದು ಹಲವಾರು ಸ್ಥಳಗಳ ಬಗ್ಗೆ ಯೋಚಿಸಿದಳು. ನಂತರ, ಗ್ವಾಮ್ ದೇಶದ ಬ್ರಾಂಚ್‌ಗೆ ಪತ್ರ ಬರೆದು ಬೇಕಾದ ಮಾಹಿತಿ ಪಡೆದುಕೊಂಡಳು. 2007ರ ಜುಲೈ ತಿಂಗಳಲ್ಲಿ ಕ್ಯಾತ್ರೀನ್ ಸೈಪಾನ್ ಎಂಬಲ್ಲಿಗೆ ಸ್ಥಳಾಂತರಿಸಿದಳು. ಇದು ಪೆಸಿಫಿಕ್ ಮಹಾಸಾಗರದಲ್ಲಿರುವ ಒಂದು ದ್ವೀಪ. ಆಕೆಯ ಮನೆಯಿಂದ ಸುಮಾರು 10,000 ಕಿ.ಮೀ. ದೂರ! ಆಕೆಗೆ ಆಗ 26 ವರ್ಷ. ಅಲ್ಲಿಗೆ ಹೋದ ಬಳಿಕ ಅವಳ ಅನುಭವ ಹೇಗಿತ್ತು?
ಎರಡು ಪ್ರಾರ್ಥನೆಗಳಿಗೆ ಸಿಕ್ಕಿದ ಉತ್ತರ
ಕ್ಯಾತ್ರೀನ್ ಹೊಸ ಸಭೆಗೆ ಬಂದ ಸ್ವಲ್ಪದರಲ್ಲೇ ಕ್ಷೇತ್ರದಲ್ಲಿ ಡೊರಿಸ್ ಎಂಬ ಮಹಿಳೆಯನ್ನು ಭೇಟಿಯಾದಳು. 45ರ ಆಸುಪಾಸಿನ ಪ್ರಾಯದ ಡೊರಿಸ್ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡಳು. ಬೈಬಲ್ ಬೋಧಿಸುತ್ತದೆ ಪುಸ್ತಕದ ಮೊದಲ ಮೂರು ಅಧ್ಯಾಯಗಳಾದ ಬಳಿಕ ಕ್ಯಾತ್ರೀನ್‌ಗೆ ಒಂದು ಚಿಂತೆ ಶುರುವಾಯಿತು. “ಡೊರಿಸ್ ಬೈಬಲನ್ನು ತುಂಬ ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿದ್ದರು. ನನ್ನಿಂದಾಗಿ ಅವರ ಅಧ್ಯಯನ ಹಾಳಾಗಬಾರದೆಂದು ನೆನಸಿದೆ” ಅನ್ನುತ್ತಾಳೆ ಕ್ಯಾತ್ರೀನ್. ಅವಳು ಮುಂದುವರಿಸಿ ಹೇಳಿದ್ದು: “ನಾನು ಯಾವತ್ತೂ ಇಷ್ಟು ನಿಯಮಿತವಾದ ಬೈಬಲ್ ಅಧ್ಯಯನ ನಡೆಸಿರಲಿಲ್ಲ. ಹಾಗಾಗಿ ನನಗಿಂತ ಹೆಚ್ಚು ಅನುಭವೀ ಆದ, ಬಹುಶಃ ಅವರ ಪ್ರಾಯದವರೇ ಆದ ಸಹೋದರಿ ಅಧ್ಯಯನ ನಡೆಸಿದರೆ ಚೆನ್ನಾಗಿರುತ್ತದೆಂದು ನೆನಸಿದೆ.” ಈ ಬೈಬಲ್ ಅಧ್ಯಯನ ನಡೆಸಲು ಸರಿಯಾದ ಸಹೋದರಿಯನ್ನು ಕಂಡುಹಿಡಿಯಲಿಕ್ಕೆ ಕ್ಯಾತ್ರೀನ್ ಯೆಹೋವನ ಸಹಾಯಕ್ಕಾಗಿ ಬೇಡಿಕೊಂಡಳು. ನಂತರ ಡೊರಿಸ್ ಹತ್ತಿರ ತಾನು ನೆನಸಿದ್ದನ್ನು ತಿಳಿಸಲು ನಿರ್ಣಯಿಸಿದಳು.
ಕ್ಯಾತ್ರೀನ್ ಹೇಳುವುದು: “ಇದರ ಬಗ್ಗೆ ನಾನು ಮಾತೆತ್ತುವ ಮುಂಚೆಯೇ ಡೊರಿಸ್‌ರವರು ನನ್ನ ಹತ್ತಿರ ಒಂದು ಸಮಸ್ಯೆ ಬಗ್ಗೆ ಮಾತಾಡಬೇಕೆಂದು ಹೇಳಿದರು. ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡ ನಂತರ, ಅಂಥದ್ದೇ ಒಂದು ಸನ್ನಿವೇಶವನ್ನು ನಿಭಾಯಿಸಲು ಯೆಹೋವನು ನನಗೆ ಹೇಗೆ ಸಹಾಯಮಾಡಿದನೆಂದು ತಿಳಿಸಿದೆ. ಇದಕ್ಕಾಗಿ ಅವರು ನನಗೆ ಧನ್ಯವಾದ ಹೇಳಿದರು.” ನಂತರ ಡೊರಿಸ್ ಕ್ಯಾತ್ರೀನ್‌ಗೆ ಹೀಗಂದರು: “ಯೆಹೋವನು ನನಗೆ ನಿನ್ನ ಮೂಲಕ ಸಹಾಯಮಾಡುತ್ತಿದ್ದಾನೆ. ನೀನು ಮೊದಲನೇ ಬಾರಿ ನನ್ನ ಮನೆಗೆ ಬಂದಾಗಲೂ ಹಾಗೆ ಆಗಿತ್ತು. ಆ ದಿನ ಎಷ್ಟೋ ತಾಸುಗಳಿಂದ ಬೈಬಲ್ ಓದುತ್ತಾ ಇದ್ದೆ. ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯಕ್ಕಾಗಿ ಯಾರನ್ನಾದರೂ ಕಳುಹಿಸಿಕೊಡಲು ದೇವರನ್ನು ಬೇಡುತ್ತಾ ಅಳುತ್ತಾ ಇದ್ದೆ. ಆಗಲೇ ನೀನು ನನ್ನ ಮನೆಬಾಗಿಲನ್ನು ತಟ್ಟಿದ್ದು. ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಟ್ಟಿದ್ದ!” ಡೊರಿಸ್ ಆ ಮಾತುಗಳನ್ನಾಡಿದ ಮನಸ್ಪರ್ಶಿ ಕ್ಷಣವನ್ನು ಕ್ಯಾತ್ರೀನ್ ನೆನಪಿಸಿಕೊಂಡು ಹೇಳುವಾಗೆಲ್ಲ ಅವಳ ಕಣ್ಣುಗಳು ತುಂಬಿಬರುತ್ತವೆ. ಅವಳನ್ನುವುದು: “ಡೊರಿಸ್‌ರ ಆ ಮಾತುಗಳು ನನ್ನ ಪ್ರಾರ್ಥನೆಗೆ ಉತ್ತರವಾಗಿತ್ತು. ಆ ಅಧ್ಯಯನವನ್ನು ನಡೆಸಲು ನಾನು ಶಕ್ತಳೆಂದು ಯೆಹೋವನು ತೋರಿಸಿಕೊಟ್ಟನು.”
2010ರಲ್ಲಿ ಡೊರಿಸ್‌ರ ದೀಕ್ಷಾಸ್ನಾನ ಆಯಿತು. ಈಗ ಅವರೇ ಹಲವಾರು ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದಾರೆ. ಕ್ಯಾತ್ರೀನ್ ಹೇಳುವುದು: “ಯಥಾರ್ಥಮನಸ್ಸಿನ ವ್ಯಕ್ತಿಯೊಬ್ಬರು ಯೆಹೋವನ ಸೇವಕರಾಗುವಂತೆ ಸಹಾಯಮಾಡಬೇಕೆಂಬ ನನ್ನ ಬಹುದಿನದ ಆಸೆ ನೆರವೇರಿರುವುದಕ್ಕೆ ನಾನು ತುಂಬ ಆಭಾರಿ!” ಈಗ ಕ್ಯಾತ್ರೀನ್ ಕಾಸ್ರೇ ಎಂಬ ಪೆಸಿಫಿಕ್ ದ್ವೀಪದಲ್ಲಿ ಸ್ಪೆಷಲ್ ಪಯನೀಯರಳಾಗಿ ಸಂತೋಷದಿಂದ ಸೇವೆಮಾಡುತ್ತಿದ್ದಾಳೆ.
ಮೂರು ಸವಾಲುಗಳು —ಅವುಗಳನ್ನು ಎದುರಿಸುವ ವಿಧ
ವಿದೇಶಗಳಿಂದ ಬಂದ ನೂರಕ್ಕಿಂತ ಹೆಚ್ಚು ಸಹೋದರ ಸಹೋದರಿಯರು (19ರಿಂದ 79ರೊಳಗಿನ ವಯಸ್ಸಿನವರು) ಮೈಕ್ರೋನೇಷಿಯದಲ್ಲಿ ಹೆಚ್ಚಿನ ಸಹಾಯದ ಅಗತ್ಯವಿರುವಂಥ ಕ್ಷೇತ್ರಗಳಲ್ಲಿ ಸೇವೆಮಾಡಿದ್ದಾರೆ. ಈ ಹುರುಪಿನ ಕೆಲಸಗಾರರ ಭಾವನೆಗಳು ಎರಿಕಾ ಎಂಬವಳ ಮಾತುಗಳಲ್ಲಿ ತೋರಿಬರುತ್ತವೆ: “ಸತ್ಯದ ದಾಹವುಳ್ಳ ಜನರಿರುವ ಸೇವಾಕ್ಷೇತ್ರದಲ್ಲಿ ಪಯನೀಯರ್ ಸೇವೆ ಮಾಡುವುದು ತುಂಬ ಮಜಾ ಆಗಿರುತ್ತದೆ. ಈ ಸೇವೆ ಮಾಡಲು ಯೆಹೋವನು ನನ್ನನ್ನು ಶಕ್ತಗೊಳಿಸಿದಕ್ಕೆ ತುಂಬ ಆಭಾರಿಯಾಗಿದ್ದೇನೆ. ಇದಕ್ಕಿಂತ ಉತ್ತಮ ಜೀವನ ರೀತಿ ಬೇರೊಂದಿಲ್ಲ!” ಎರಿಕಾ 19 ವಯಸ್ಸಿಗೆ 2006ರಲ್ಲಿ ಗ್ವಾಮ್‌ಗೆ ಸ್ಥಳಾಂತರಿಸಿದ್ದಳು. ಈಗ ಆಕೆ ಮಾರ್ಷಲ್ ದ್ವೀಪಗಳಲ್ಲಿರುವ ಈಬೈ ಎಂಬಲ್ಲಿ ಸ್ಪೆಷಲ್ ಪಯನೀಯರಳಾಗಿ ಸೇವೆಮಾಡುತ್ತಿದ್ದಾಳೆ. ವಿದೇಶದಲ್ಲಿ ಸೇವೆಮಾಡುವಾಗ ಸವಾಲುಗಳೂ ಎದುರಾಗುತ್ತವೆ. ಅವುಗಳಲ್ಲಿ ಮೂರನ್ನು ಈಗ ಪರಿಗಣಿಸೋಣ. ಮೈಕ್ರೊನೇಷಿಯಕ್ಕೆ ಸ್ಥಳಾಂತರಿಸಿರುವವರು ಅವನ್ನು ಹೇಗೆ ಎದುರಿಸಿದ್ದಾರೆಂದೂ ನೋಡೋಣ.
ಜೀವನಶೈಲಿ. 22 ವರ್ಷ ಪ್ರಾಯದ ಸೈಮನ್ 2007ರಲ್ಲಿ ಪಲಾವ್ ದ್ವೀಪಕ್ಕೆ ಬಂದನು. ತನ್ನ ಸ್ವದೇಶವಾದ ಇಂಗ್ಲೆಂಡಿನಲ್ಲಿ ಸಂಪಾದಿಸುತ್ತಿದ್ದಷ್ಟು ಹಣ ಇಲ್ಲಿ ಸಂಪಾದಿಸಲು ಆಗುವುದಿಲ್ಲ ಎಂದವನಿಗೆ ತಿಳಿದುಬಂತು. ಅವನನ್ನುವುದು: “ಬೇಕಾಬಿಟ್ಟಿ ಖರೀದಿ ಮಾಡಬಾರದೆಂದು ಕಲಿತೆ. ಈಗ ಯಾವ್ಯಾವ ಆಹಾರ ಖರೀದಿಸಬೇಕೆಂದು ಜಾಗ್ರತೆಯಿಂದ ಆಯ್ಕೆಮಾಡುತ್ತೇನೆ. ಕಡಿಮೆ ಬೆಲೆಗೆ ಉತ್ತಮ ಸಾಮಾನು ಎಲ್ಲಿ ಸಿಗುತ್ತದೆಂದು ಹುಡುಕುತ್ತೇನೆ. ಮನೆಯಲ್ಲಿ ಏನಾದರೂ ಹಾಳಾದರೆ ಸೆಕೆಂಡ್-ಹ್ಯಾಂಡ್ ಬಿಡಿಭಾಗಗಳನ್ನು ತಂದು ಅದನ್ನು ರಿಪೇರಿ ಮಾಡಲು ಯಾರದಾದರೂ ಸಹಾಯ ತೆಗೆದುಕೊಳ್ಳುತ್ತೇನೆ.” ಇಂಥ ಸರಳ ಜೀವನಶೈಲಿ ಅವನ ಮೇಲೆ ಯಾವ ಪರಿಣಾಮ ಬೀರಿದೆ? ಸೈಮನ್ ಹೇಳುವುದು: “ಬದುಕಲ್ಲಿ ನಿಜವಾಗಿ ಏನು ಅಗತ್ಯ ಮತ್ತು ಇದ್ದದ್ದರಲ್ಲೇ ಹೇಗೆ ಜೀವನ ಸಾಗಿಸಬಹುದೆಂದು ಕಲಿಯಲು ಸಹಾಯವಾಗಿದೆ. ಹಲವಾರು ಸಂದರ್ಭಗಳಲ್ಲಿ ನಾನು ಯೆಹೋವನ ಆರೈಕೆಯನ್ನು ಅನುಭವಿಸಿದ್ದೇನೆ. ಈ ಏಳು ವರ್ಷಗಳಲ್ಲಿ ನನಗೆ ಯಾವತ್ತೂ ಊಟವಿಲ್ಲದ, ತಲೆ ಮೇಲೆ ಸೂರಿಲ್ಲದ ಸಮಯ ಬಂದಿಲ್ಲ.” ರಾಜ್ಯಕ್ಕೆ ಆದ್ಯತೆ ನೀಡುವುದಕ್ಕೋಸ್ಕರ ಸರಳ ಜೀವನ ನಡೆಸುವವರಿಗೆ ಯೆಹೋವನು ಖಂಡಿತ ಆಸರೆಯಾಗಿರುತ್ತಾನೆ.—ಮತ್ತಾ. 6:32, 33.
ಮನೆನೆನಪು. ಎರಿಕಾ ಹೇಳುವುದು: “ನನ್ನ ಕುಟುಂಬ ಅಂದರೆ ನನಗೆ ಜೀವ. ಮನೆನೆನಪು ನನ್ನ ಸೇವೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದೆಂಬ ಚಿಂತೆ ನನಗಿತ್ತು.” ಹಾಗಾಗಿ ಹೊಸ ದೇಶಕ್ಕೆ ಹೋಗುವ ಮುಂಚೆ ತನ್ನನ್ನೇ ಹೇಗೆ ಸಿದ್ಧಪಡಿಸಿಕೊಂಡಳು? “ಅಲ್ಲಿಗೆ ಹೋಗುವ ಮುಂಚೆ, ಮನೆನೆನಪು ಕಾಡುವುದಕ್ಕೆ ಸಂಬಂಧಪಟ್ಟ ಕಾವಲಿನಬುರುಜು ಲೇಖನಗಳನ್ನು ಓದಿದೆ. ಆ ಸವಾಲನ್ನು ಎದುರಿಸಲು ಇದು ನನ್ನ ಹೃದಯವನ್ನು ನಿಜವಾಗಿಯೂ ಸಜ್ಜುಗೊಳಿಸಿತು. ಒಂದು ಲೇಖನದಲ್ಲಿ ತಾಯಿಯೊಬ್ಬಳು ಮಗಳಿಗೆ ‘ಯೆಹೋವನೇ ನಿನ್ನನ್ನು ನನಗಿಂತ ಚೆನ್ನಾಗಿ ನೋಡಿಕೊಳ್ಳಬಲ್ಲನು’ ಎಂದು ಹೇಳುತ್ತಾ ಯೆಹೋವನು ಕಾಳಜಿವಹಿಸುವನೆಂದು ಧೈರ್ಯ ತುಂಬಿಸಿದ ಮಾತುಗಳಿದ್ದವು. ಇದು ನನ್ನನ್ನು ನಿಜವಾಗಿ ಬಲಪಡಿಸಿತು.” ಮಾರ್ಷಲ್ ದ್ವೀಪಗಳ ಮಾಜೂರೊ ಎಂಬಲ್ಲಿ ಹ್ಯಾನ ಮತ್ತವಳ ಗಂಡ ಪ್ಯಾಟ್ರಿಕ್ ಸೇವೆಸಲ್ಲಿಸುತ್ತಿದ್ದಾರೆ. ಕಾಡುತ್ತಿರುವ ಮನೆನೆನಪನ್ನು ನಿಭಾಯಿಸಲಿಕ್ಕೆ ಹ್ಯಾನ ತಮ್ಮ ಸಭೆಯಲ್ಲಿರುವ ಸಹೋದರ ಸಹೋದರಿಯರ ಮೇಲೆ ಗಮನ ಕೇಂದ್ರೀಕರಿಸುತ್ತಾಳೆ. “ನಮ್ಮ ಈ ಜಗದ್ವಾ್ಯಪಕ ಸಹೋದರತ್ವಕ್ಕಾಗಿ ನಾನು ಯಾವಾಗಲೂ ಯೆಹೋವನಿಗೆ ಧನ್ಯವಾದ ಹೇಳುತ್ತೇನೆ. ಅವರೂ ನನ್ನ ಕುಟುಂಬ ಆಗಿದ್ದಾರೆ. ಅವರ ಪ್ರೀತಿತುಂಬಿದ ಬೆಂಬಲವಿಲ್ಲದಿರುತ್ತಿದ್ದರೆ ಸಹಾಯದ ಅಗತ್ಯವಿರುವ ಕ್ಷೇತ್ರದಲ್ಲಿ ನಾವೆಂದಿಗೂ ಸೇವೆಮಾಡಲು ಆಗುತ್ತಿರಲಿಲ್ಲ.”
ಸ್ನೇಹಿತರನ್ನು ಮಾಡಿಕೊಳ್ಳುವುದು. ಸೈಮನ್ ಹೇಳುವುದು: “ಒಂದು ಹೊಸ ದೇಶದಲ್ಲಿ ಎಲ್ಲವೂ ಭಿನ್ನವಾಗಿರುತ್ತದೆ.” ಉದಾಹರಣೆಗೆ, “ನಾನೇನಾದರೂ ಹಾಸ್ಯ ಚಟಾಕಿ ಹಾರಿಸಿದರೆ ಅದು ಯಾರಿಗೂ ಅರ್ಥವಾಗುವುದಿಲ್ಲ” ಎನ್ನುತ್ತಾನವನು. ಎರಿಕಾ ಹೇಳುವುದು: “ಆರಂಭದಲ್ಲಿ, ನನ್ನನ್ನು ಯಾರೂ ಸೇರಿಸಿಕೊಳ್ಳುತ್ತಿಲ್ಲ ನಾನು ಒಂಟಿ ಎಂದನಿಸುತ್ತಿತ್ತು. ಆದರೆ ಇದು, ನಾನಿಲ್ಲಿಗೆ ಬಂದಿರುವ ಉದ್ದೇಶವೇನೆಂದು ಪರೀಕ್ಷಿಸಿಕೊಳ್ಳಲು ಸಹಾಯಮಾಡಿತು. ನಾನು ಬಂದದ್ದು ವೈಯಕ್ತಿಕ ಪ್ರಯೋಜನಗಳಿಗಲ್ಲ ಬದಲಾಗಿ ಯೆಹೋವನಿಗಾಗಿ ಹೆಚ್ಚನ್ನು ಮಾಡಲಿಕ್ಕಾಗಿಯೇ.” ಅವಳು ಮತ್ತೂ ಹೇಳಿದ್ದು: “ಕಾಲಾನಂತರ ನಾನು ಉತ್ತಮ ಸ್ನೇಹಬಂಧಗಳನ್ನು ಬೆಸೆಯಲು ಶಕ್ತಳಾದೆ. ಅವು ನನಗೆ ತುಂಬ ಅಮೂಲ್ಯವಾಗಿವೆ.” ಸೈಮನ್ ಪಲಾವನ್ ಭಾಷೆ ಕಲಿಯಲು ತುಂಬ ಶ್ರಮಪಟ್ಟನು. ಆದ್ದರಿಂದ ಈಗ ಅವನಿಗೆ ಸ್ಥಳೀಯ ಸಹೋದರ ಸಹೋದರಿಯರೊಟ್ಟಿಗೆ ಮುಕ್ತವಾಗಿ ಮಾತಾಡಿ ‘ಹೃದಯವನ್ನು ವಿಶಾಲಗೊಳಿಸಲು’ ಸಾಧ್ಯವಾಗುತ್ತಿದೆ. (2 ಕೊರಿಂ. 6:13) ಅವನು ಭಾಷೆ ಕಲಿಯುವ ಪ್ರಯತ್ನ ಮಾಡಿದ್ದರಿಂದ ಅಲ್ಲಿನ ಸಹೋದರರಿಗೆ ತುಂಬ ಇಷ್ಟವಾದನು. ಹೌದು, ಬೇರೆ ದೇಶಗಳಿಂದ ಹೊಸದಾಗಿ ಬಂದವರು ಮತ್ತು ಸ್ಥಳೀಯ ಸಹೋದರರು ಜೊತೆ ಜೊತೆಯಾಗಿ ಕೆಲಸಮಾಡುವಾಗ ಸಭೆಯಲ್ಲಿ ಆಪ್ತ ಗೆಳೆತನಗಳನ್ನು ಬೆಸೆಯುವ ಪ್ರತಿಫಲ ಅವರಿಗೆ ಸಿಗುತ್ತದೆ. ಸಹಾಯದ ಅಗತ್ಯವಿರುವ ಕ್ಷೇತ್ರದಲ್ಲಿ ಸೇವೆಸಲ್ಲಿಸಲು ತಮ್ಮನ್ನು ನೀಡಿಕೊಳ್ಳುವವರು ಪಡೆಯುವ ಇತರ ಪ್ರತಿಫಲಗಳಾವವು?
‘ಬಹಳವಾಗಿ ಕೊಯ್ಯುವುದು’
“ಯಾರು ಬಹಳವಾಗಿ ಬಿತ್ತುತ್ತಾನೋ ಅವನು ಬಹಳವಾಗಿ ಕೊಯ್ಯುವನು” ಎಂದನು ಅಪೊಸ್ತಲ ಪೌಲ. (2 ಕೊರಿಂ. 9:6) ಈ ತತ್ವ ಶೂಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಪ್ರಯಾಸಪಡುವವರಿಗೆ ಖಂಡಿತ ಅನ್ವಯವಾಗುತ್ತದೆ. ಮೈಕ್ರೊನೇಷಿಯದಲ್ಲಿ ಅವರು ಯಾವ ಫಲಗಳನ್ನು ‘ಬಹಳವಾಗಿ ಕೊಯ್ಯುತ್ತಿದ್ದಾರೆ’?
ಮೈಕ್ರೊನೇಷಿಯದಲ್ಲಿ ಈಗಲೂ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಸಾಕಷ್ಟು ಅವಕಾಶಗಳಿವೆ. ದೇವರ ವಾಕ್ಯದ ಸತ್ಯವನ್ನು ಕಲಿತು ಅನ್ವಯಿಸಿಕೊಳ್ಳುವವರು ಆಧ್ಯಾತ್ಮಿಕ ಪ್ರಗತಿ ಮಾಡುವುದನ್ನು ಕಣ್ಣಾರೆ ನೋಡುವ ಅವಕಾಶಗಳೂ ಇವೆ. ಪ್ಯಾಟ್ರಿಕ್ ಮತ್ತು ಹ್ಯಾನ ದಂಪತಿ ಆಂಗೌರ್ ಎಂಬಲ್ಲಿಯೂ ಸಾರಿದರು. ಇದು 320 ನಿವಾಸಿಗಳಿರುವ ಒಂದು ಪುಟ್ಟ ದ್ವೀಪ. ಅಲ್ಲಿ ಎರಡು ತಿಂಗಳು ಸಾರಿದ ನಂತರ ಒಬ್ಬ ಒಂಟಿ ತಾಯಿಯನ್ನು ಭೇಟಿಯಾದರು. ಅವಳು ತಕ್ಷಣ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡಳು. ಸತ್ಯವನ್ನು ಉತ್ಸಾಹದಿಂದ ಸ್ವೀಕರಿಸಿದಳು. ಬದುಕಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ಮಾಡಿದಳು. ಹ್ಯಾನ ಹೇಳುವುದು: “ಪ್ರತಿಸಲ ಅಧ್ಯಯನ ಮುಗಿಸಿ ಅವಳ ಮನೆಯಿಂದ ಹೊರಟು ನಮ್ಮ ಸೈಕಲುಗಳಲ್ಲಿ ಹೋಗುವಾಗ ಪರಸ್ಪರರನ್ನು ನೋಡಿ ‘ಧನ್ಯವಾದ ಯೆಹೋವ!’ ಎನ್ನುತ್ತಿದ್ದೆವು.” ಆಕೆ ಕೂಡಿಸಿ ಹೇಳುವುದು: “ಯೆಹೋವನು ಈ ಮಹಿಳೆಯನ್ನು ಹೇಗಾದರೂ ಯಾರ ಮೂಲಕವಾದರೂ ತನ್ನ ಕಡೆಗೆ ಸೆಳೆದುಕೊಳ್ಳುತ್ತಿದ್ದನೆಂದು ನಮಗೆ ತಿಳಿದಿದೆ. ಆದರೆ ಸಹಾಯದ ಅಗತ್ಯವಿರುವ ಕ್ಷೇತ್ರದಲ್ಲಿ ಸೇವೆಸಲ್ಲಿಸಲು ಹೋದದ್ದರಿಂದ ಕುರಿಯಂಥ ಸ್ವಭಾವದ ಇಂಥವರನ್ನು ಭೇಟಿಯಾಗಿ ನೆರವಾಗುವ ಅವಕಾಶ ಸಿಕ್ಕಿದೆ. ನಮ್ಮ ಇಡೀ ಜೀವನದಲ್ಲೇ ಅತ್ಯಂತ ಪ್ರತಿಫಲದಾಯಕ ಅನುಭವ ಇದಾಗಿದೆ!” ಎರಿಕಾ ಸಹ ಹೇಳುವಂತೆ “ಒಬ್ಬ ವ್ಯಕ್ತಿ ಯೆಹೋವನ ಬಗ್ಗೆ ತಿಳಿಯುವಂತೆ ಸಹಾಯ ಮಾಡುವಾಗ ವರ್ಣಿಸಲಸಾಧ್ಯವಾದ ಆನಂದವೆಂಬ ಫಲ ಕೊಯ್ಯುತ್ತೀರಿ!”
ನೀವೂ ಪಾಲ್ಗೊಳ್ಳಬಲ್ಲಿರಾ?
ಅನೇಕ ದೇಶಗಳಲ್ಲಿ ರಾಜ್ಯ ಸೌವಾರ್ತಿಕರ ಅಗತ್ಯ ಬಹಳಷ್ಟಿದೆ. ಈ ರೀತಿಯ ಸಹಾಯದ ಅಗತ್ಯವಿರುವಂಥ ಪ್ರದೇಶಗಳಿಗೆ ನೀವು ಸ್ಥಳಾಂತರಿಸಬಲ್ಲಿರಾ? ಸೇವೆಯನ್ನು ಹೆಚ್ಚಿಸಲು ನಿಮಗಿರುವ ಆಸೆಯನ್ನು ಬಲಪಡಿಸುವಂತೆ ಯೆಹೋವನನ್ನು ಬೇಡಿಕೊಳ್ಳಿ. ಸಭಾ ಹಿರಿಯರು, ಸರ್ಕಿಟ್ ಮೇಲ್ವಿಚಾರಕರು ಇಲ್ಲವೆ ಸಹಾಯದ ಅಗತ್ಯವಿರುವ ಕ್ಷೇತ್ರದಲ್ಲಿ ಸೇವೆ ಮಾಡಿರುವವರೊಂದಿಗೆ ಇದರ ಕುರಿತು ಮಾತಾಡಿ. ನಿಮ್ಮ ಯೋಜನೆಗಳನ್ನು ಮಾಡಲು ಆರಂಭಿಸಿದಾಗ ನೀವು ಸೇವೆಮಾಡಲು ಇಷ್ಟಪಡುವ ಸೇವಾಕ್ಷೇತ್ರದ ಉಸ್ತುವಾರಿಯುಳ್ಳ ಬ್ರಾಂಚ್‌ಗೆ ಬರೆದು, ಹೆಚ್ಚಿನ ಮಾಹಿತಿ ಕೇಳಿ ಪಡೆಯಿರಿ. * ಹೀಗೆ ತಮ್ಮನ್ನೇ ಮನಃಪೂರ್ವಕವಾಗಿ ನೀಡಿ ‘ಬಹಳವಾಗಿ ಕೊಯ್ಯು’ವುದರಿಂದ ಸಿಗುವ ಆನಂದವನ್ನು ಸವಿಯುತ್ತಿರುವ ಸಾವಿರಾರು ಯುವ, ವೃದ್ಧ, ವಿವಾಹಿತ, ಅವಿವಾಹಿತ ಸಹೋದರ ಸಹೋದರಿಯರ ಗುಂಪಿಗೆ ಸೇರಬಲ್ಲಿರಿ.
^ ಪ್ಯಾರ. 17 ನಮ್ಮ ರಾಜ್ಯ ಸೇವೆಯ ಆಗಸ್ಟ್ 2011ರ ಸಂಚಿಕೆಯಲ್ಲಿ “ನೀವು ‘ಮಕೆದೋನ್ಯಕ್ಕೆ’ ಹೋಗಬಲ್ಲಿರೊ?” ಎಂಬ ಲೇಖನ ನೋಡಿ.