ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಚ್ಛೇದನ ಪಡೆದಿರುವ ಜೊತೆ ವಿಶ್ವಾಸಿಗಳಿಗೆ ನೆರವು ನೀಡುವುದು—ಹೇಗೆ?

ವಿಚ್ಛೇದನ ಪಡೆದಿರುವ ಜೊತೆ ವಿಶ್ವಾಸಿಗಳಿಗೆ ನೆರವು ನೀಡುವುದು—ಹೇಗೆ?

ವಿಚ್ಛೇದನ ಪಡೆದಿರುವ ಒಬ್ಬರದ್ದಾದರೂ ಪರಿಚಯ ನಿಮಗಿರಬಹುದು. ಇಂದು ಲೋಕದಲ್ಲಿ ವಿಚ್ಛೇದನ ಅನ್ನುವುದು ಸರ್ವಸಾಮಾನ್ಯ ವಿಷಯ. ಮದುವೆಯಾಗಿ 3-6 ವರ್ಷಗಳು ಕಳೆದಿರುವ 30-40ರ ವಯೋಮಾನದವರು ವಿಚ್ಛೇದನ ಪಡೆಯುವ ಸಾಧ್ಯತೆ ಹೆಚ್ಚೆಂದು ಪೋಲೆಂಡ್‍ನಲ್ಲಿ ನಡೆದ ಸಂಶೋಧನೆ ಹೇಳುತ್ತದೆ. ಆದರೆ ವಿಚ್ಛೇದನವು ಆ ವಯೋವರ್ಗದವರಿಗೆ ಮಾತ್ರ ಸೀಮಿತವಾಗಿಲ್ಲ.

“ಮದುವೆಯಾಗುವ ಅರ್ಧದಷ್ಟು [ಯೂರೋಪಿಯನ್‌] ದಂಪತಿಗಳು ವಿಚ್ಛೇದನ ಪಡೆಯುವರೆಂದು ಅಂಕಿಸಂಖ್ಯೆಗಳು ತೋರಿಸುತ್ತವೆ” ಎಂದು ಸ್ಪೇನ್‍ನ ‘ಕುಟುಂಬ ಕಾರ್ಯನೀತಿ ಸಂಸ್ಥೆ’ ವರದಿಸುತ್ತದೆ. ಅಭಿವೃದ್ಧಿಗೊಂಡಿರುವ ಇತರ ದೇಶಗಳ ಸ್ಥಿತಿಯೂ ಸಾಧಾರಣ ಹೀಗೆಯೇ ಇದೆ.

ಘರ್ಷಣಾತ್ಮಕ ಭಾವನೆಗಳ ಹಾವಳಿ

ವಿಚ್ಛೇದನದ ನಂತರ ಘರ್ಷಣಾತ್ಮಕ ಭಾವನೆಗಳ ಹಾವಳಿ ಸಾಮಾನ್ಯ. ಆದರೆ ಈ ಫಲಿತಾಂಶಕ್ಕೆ ಕಾರಣವೇನು? ಪೂರ್ವ ಯೂರೋಪಿನ ಅನುಭವೀ ವಿವಾಹ ಸಲಹೆಗಾರ್ತಿಯೊಬ್ಬಳು ಹೇಳಿದ್ದು: “ವಿಚ್ಛೇದನ ಎಂಬದು ಗಂಡಹೆಂಡತಿಯ ನಡುವೆ ಈಗಾಗಲೇ ಕುಸಿದುಬಿದ್ದಿರುವ ಸಂಬಂಧಕ್ಕೆ ಮತ್ತು ನಂತರದ ಪ್ರತ್ಯೇಕವಾಸಕ್ಕೆ ಅಧಿಕೃತ ಮುದ್ರೆಯೊತ್ತುತ್ತದೆ. ಇದು ಭಾವನಾತ್ಮಕವಾಗಿ ಅತೀವ ನೋವು ಬರಿಸುತ್ತದೆ.” ಆಕೆ ಮುಂದುವರಿಸುತ್ತಾ ಹೇಳಿದ್ದು: ಹೆಚ್ಚಾಗಿ “ಕೋಪ, ವಿಷಾದ, ನಿರಾಶೆ, ಹತಾಶೆ, ನಾಚಿಕೆಯಂಥ ಬಲವಾದ, ಅತಿರೇಕದ ಭಾವನೆಗಳ ಬಿರುಗಾಳಿ ಬೀಸುತ್ತದೆ.” ಒಮ್ಮೊಮ್ಮೆ ಇಂಥ ಯೋಚನೆಗಳು ಆತ್ಮಹತ್ಯೆಯ ಯೋಚನೆಯನ್ನೂ ಬರಿಸಬಹುದು. “ಕೋರ್ಟಲ್ಲಿ ವಿಚ್ಛೇದನದ ಅಂತಿಮ ತೀರ್ಪು ಹೊರಬಿದ್ದಾಗ ಮುಂದಿನ ಘಟ್ಟ ಆರಂಭವಾಗುತ್ತದೆ. ವಿಚ್ಛೇದಿತ ವ್ಯಕ್ತಿ ಶೂನ್ಯಭಾವ ಮತ್ತು ದೂರ ಮಾಡಲ್ಪಟ್ಟಿದ್ದೇನೆಂಬ ಭಾವನೆಗಳ ಸುಳಿಯಲ್ಲಿ ಸಿಕ್ಕಿಬೀಳುತ್ತಾನೆ/ಳೆ. ‘ನನಗೆ ವಿಚ್ಛೇದನ ಆಗಿದೆ, ಈಗ ನಾನ್ಯಾರು? ನನ್ನ ಬದುಕಿನ ಉದ್ದೇಶವೇನು?’ ಎಂದವರು ಯೋಚಿಸಬಹುದು.”

ಎವಾ ಎಂಬಾಕೆ ಕೆಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದಳು. * ಆಗ ತನಗೆ ಹೇಗನಿಸಿತೆಂಬುದನ್ನು ನೆನಪಿಸಿಕೊಳ್ಳುತ್ತಾ ಆಕೆ ಹೇಳುವುದು: “ವಿಚ್ಛೇದನದ ತೀರ್ಪು ಹೊರಬಿದ್ದ ನಂತರ ನೆರೆಹೊರೆಯವರು ಮತ್ತು ಸಹಕರ್ಮಿಗಳು ನನಗೆ ‘ವಿಚ್ಛೇದಿತೆ’ ಎಂಬ ಪಟ್ಟ ಕಟ್ಟಿದಾಗ ನನಗೆ ತುಂಬ ಅವಮಾನವಾಯಿತು. ನನ್ನಲ್ಲಿ ತುಂಬ ಸಿಟ್ಟೂ ತುಂಬಿತ್ತು. ನನ್ನ ಇಬ್ಬರು ಪುಟ್ಟ ಮಕ್ಕಳಿಗೆ ನಾನೇ ತಾಯಿ, ನಾನೇ ತಂದೆ ಆಗುವ ಜವಾಬ್ದಾರಿ ಈಗ ನನ್ನ ಹೆಗಲ ಮೇಲೆ ಬಂದಿತ್ತು.” ಆ್ಯಡಮ್‌ ಎಂಬವರು 12 ವರ್ಷಗಳಿಂದ ಸಭೆಯಲ್ಲಿ ಒಬ್ಬ ಗೌರವಾನ್ವಿತ ಹಿರಿಯನಾಗಿ ಸೇವೆಸಲ್ಲಿಸಿದ್ದರು. ಆದರೆ ವಿಚ್ಛೇದನವಾದ ನಂತರ ಅವರಂದದ್ದು: “ನನ್ನ ಸ್ವಗೌರವವನ್ನು ಎಷ್ಟು ಕಳೆದುಕೊಂಡಿದ್ದೇನೆಂದರೆ ಒಮ್ಮೊಮ್ಮೆ ನನ್ನಲ್ಲಿ ಕೋಪ ತುಂಬಿಕೊಳ್ಳುತ್ತದೆ. ಆಗ ನನಗೆ ಎಲ್ಲರಿಂದ ದೂರವಿರಲು ತುಂಬ ಮನಸ್ಸಾಗುತ್ತದೆ.”

ಪುನಃ ಸಮಸ್ಥಿತಿಗೆ ಬರಲು ವಿಶ್ವಪ್ರಯತ್ನ

ತಮ್ಮ ಭವಿಷ್ಯದ ಕುರಿತ ಚಿಂತೆಯಿಂದ ಕೆಲವರು ಪುನಃ ಸಮಸ್ಥಿತಿಗೆ ಬರಲು ವಿಶ್ವಪ್ರಯತ್ನ ಮಾಡಬೇಕಾಗುತ್ತದೆ. ಕೆಲವರು ಅದನ್ನು ವಿಚ್ಛೇದನವಾಗಿ ಹಲವಾರು ವರ್ಷಗಳ ತನಕ ಮಾಡಬೇಕಾಗುತ್ತದೆ. ಈಗ ತಮ್ಮ ಬಗ್ಗೆ ಯಾರಿಗೂ ಕಳಕಳಿ ಇಲ್ಲ ಎಂದು ವಿಚ್ಛೇದಿತರು ನೆನಸುತ್ತಾರೆ. ಅಷ್ಟುಮಾತ್ರವಲ್ಲ ಅವರು “ತಮ್ಮ ರೂಢಿಗಳನ್ನು ಬದಲಾಯಿಸಬೇಕಾಗುತ್ತದೆ ಮತ್ತು ಸಮಸ್ಯೆಗಳನ್ನು ಒಂಟಿಯಾಗಿ ನಿಭಾಯಿಸಲು ಕಲಿಯಬೇಕಾಗುತ್ತದೆ” ಎನ್ನುತ್ತಾರೆ ವಿಚ್ಛೇದನದ ಕುರಿತ ಒಬ್ಬ ಅಂಕಣಕಾರ.

ಸ್ಟಾನಿಸ್ಲಾ ಎಂಬವರು ಹಿಂದಿನದ್ದನ್ನು ನೆನಪಿಸಿಕೊಳ್ಳುತ್ತಾ ಹೇಳುವುದು: “ನಮ್ಮ ವಿಚ್ಛೇದನದ ಬಳಿಕ ನನ್ನ ಮಾಜಿ ಪತ್ನಿ ನನ್ನಿಬ್ಬರು  ಪುಟ್ಟ ಹೆಣ್ಮಕ್ಕಳನ್ನು ನೋಡಲೂ ಬಿಡುತ್ತಿರಲಿಲ್ಲ. ಹಾಗಾಗಿ ಯಾರಿಗೂ ನನ್ನ ಬಗ್ಗೆ ಕಾಳಜಿ ಇಲ್ಲ, ಯೆಹೋವನೂ ನನ್ನ ಕೈಬಿಟ್ಟಿದ್ದಾನೆ ಅಂತ ಅನಿಸುತ್ತಿತ್ತು. ಬದುಕುವ ಆಸೆಯೇ ಬತ್ತಿಹೋಯಿತು. ಆದರೆ ಹೀಗೆಲ್ಲ ಯೋಚಿಸುತ್ತಿದ್ದದ್ದು ತಪ್ಪಾಗಿತ್ತೆಂದು ಸಮಯಾನಂತರವೇ ಗೊತ್ತಾಯಿತು.” ವಾಂಡಾ ಎಂಬವಳಿಗೆ ಪತಿ ವಿಚ್ಛೇದನ ಕೊಟ್ಟಾಗ ಆಕೆಗೆ ತನ್ನ ಭವಿಷ್ಯದ ಕುರಿತ ಅನಿಶ್ಚಿತತೆ ಕಾಡುತ್ತಿತ್ತು. “ಸ್ವಲ್ಪ ಸಮಯದ ನಂತರ ಜನರು ಮತ್ತು ಜೊತೆ ವಿಶ್ವಾಸಿಗಳು ಸಹ ನನ್ನಲ್ಲಿ, ನನ್ನ ಮಕ್ಕಳಲ್ಲಿ ಕಾಳಜಿ ವಹಿಸಲಿಕ್ಕಿಲ್ಲವೆಂದು ನೆನಸುತ್ತಿದ್ದೆ. ಆದರೆ ಸಹೋದರರು ಆಗ ನಮಗೆ, ಅದರಲ್ಲೂ ನನ್ನ ಮಕ್ಕಳು ಯೆಹೋವನ ಆರಾಧಕರಾಗುವಂತೆ ಮಾಡಲು ಶ್ರಮಿಸುತ್ತಿದ್ದ ನನಗೆ ಎಷ್ಟು ಸಹಾಯ ಕೊಟ್ಟರು ಎನ್ನುವುದು ಈಗ ಅರ್ಥವಾಗುತ್ತಿದೆ.”

ಇವರ ಮಾತುಗಳಿಂದ ತಿಳಿದುಬರುವ ಸಂಗತಿಯೇನೆಂದರೆ ವಿಚ್ಛೇದನವಾದ ಬಳಿಕ ಕೆಲವರು ನಕಾರಾತ್ಮಕ ಭಾವನೆಗಳಲ್ಲಿ ಮುಳುಗಿಹೋಗುತ್ತಾರೆ. ಅವರಲ್ಲಿ ಕೀಳರಿಮೆ ಹುಟ್ಟುತ್ತದೆ. ತಾವು ಪ್ರಯೋಜನಕ್ಕೆ ಬಾರದವರು, ಯಾರ ಗಮನಕ್ಕೂ ಅರ್ಹರಲ್ಲ ಎಂದು ನೆನಸುತ್ತಾರೆ. ಜೊತೆಗೆ ಸುತ್ತಲಿರುವವರ ಬಗ್ಗೆ ಅವರು ಟೀಕಾತ್ಮಕರೂ ಆಗಬಹುದು. ಸಭೆಯವರಿಗೆಲ್ಲ ಭಾವನೆಯೇ ಇಲ್ಲ ಕಲ್ಲುಹೃದಯದವರು ಎಂದನಿಸಬಹುದು. ಆದರೆ ಸಹೋದರ ಸಹೋದರಿಯರಿಗೆ ನಿಜವಾಗಿ ತಮ್ಮ ಬಗ್ಗೆ ಕಳಕಳಿ ಇದೆ ಎನ್ನುವುದು ವಿಚ್ಛೇದಿತರಿಗೆ ನಿಧಾನವಾಗಿ ಅರಿವಿಗೆ ಬರುವ ಸಾಧ್ಯತೆ ಇದೆ. ಇದು ಸ್ಟಾನಿಸ್ಲಾ ಮತ್ತು ವಾಂಡಾ ಅವರ ಅನುಭವವಾಗಿತ್ತು. ಜೊತೆ ಕ್ರೈಸ್ತರು ಅಸಾಧಾರಣ ವಿಧದಲ್ಲಿ ತಮ್ಮ ಕಾಳಜಿಯನ್ನು ನಿಜವಾಗಿ ತೋರಿಸಿರುತ್ತಾರೆ. ಆದರೆ ಅದು ಆರಂಭದಲ್ಲಿ ಗಮನಕ್ಕೆ ಬಂದಿರಲಿಕ್ಕಿಲ್ಲ ಅಷ್ಟೇ.

ಒಂಟಿ ಭಾವನೆ, ತಿರಸ್ಕೃತರೆಂಬ ಭಾವನೆ ನುಸುಳಿದಾಗ

ವಿಚ್ಛೇದನ ಪಡೆದಿರುವ ನಮ್ಮ ಜೊತೆ ವಿಶ್ವಾಸಿಗಳಿಗೆ ನಮ್ಮಿಂದಾದ ಸಹಾಯ ಮಾಡಿದ ನಂತರವೂ ಆಗಾಗ ಒಂಟಿತನ ಕಾಡಬಹುದೆಂದು ನೆನಪಿಡಿ. ವಿಶೇಷವಾಗಿ ಸಹೋದರಿಯರಿಗೆ ತಮಗಿನ್ನು ಯಾರೂ ಗಮನ ಕೊಡುವುದಿಲ್ಲ, ಕಾಳಜಿ ವಹಿಸುವುದಿಲ್ಲ ಎಂಬ ಅಭಿಪ್ರಾಯ ಮೂಡಬಹುದು. ಆಲಿಸ್ಯಾ ಎಂಬಾಕೆ ಹೇಳುವುದು: “ನನ್ನ ವಿಚ್ಛೇದನವಾಗಿ ಎಂಟು ವರ್ಷಗಳು ದಾಟಿವೆ. ಆದರೆ ಈಗಲೂ ನನಗೆ ಒಮ್ಮೊಮ್ಮೆ ತುಂಬ ಕೀಳರಿಮೆ ಕಾಡುತ್ತದೆ. ಅಂಥ ಸಮಯಗಳಲ್ಲಿ ನನಗೆ ಎಲ್ಲರಿಂದ ದೂರವಾಗಿ ಒಂಟಿಯಾಗಿರಲು ಮನಸ್ಸಾಗುತ್ತದೆ. ನನ್ನ ಬಗ್ಗೆಯೇ ಮರುಗುತ್ತಾ ಅಳುತ್ತಿರುತ್ತೇನೆ.”

ಇಲ್ಲಿ ವರ್ಣಿಸಲಾದ ಭಾವನೆಗಳು ವಿಚ್ಛೇದನ ಪಡೆದಿರುವ ವ್ಯಕ್ತಿಗಳಲ್ಲಿ ಹುಟ್ಟುವುದು ಸಾಮಾನ್ಯ. ಹಾಗಿದ್ದರೂ ಒಬ್ಬ ವ್ಯಕ್ತಿ ತನ್ನನ್ನೇ ಎಲ್ಲರಿಂದ ಬೇರ್ಪಡಿಸಿಕೊಂಡು ಒಂಟಿ ಆಗಿರಬಾರದೆಂದು ಬೈಬಲ್ ಎಚ್ಚರಿಸುತ್ತದೆ. ಈ ಎಚ್ಚರಿಕೆಯನ್ನು ಪಾಲಿಸದಿದ್ದರೆ “ಸುಜ್ಞಾನ” ಇಲ್ಲವೆ ಪ್ರಾಯೋಗಿಕ ವಿವೇಕವನ್ನು ತಳ್ಳಿಹಾಕಿದಂತಾಗುತ್ತದೆ. (ಜ್ಞಾನೋ. 18:1) ಆದರೆ ಒಂಟಿ ಭಾವನೆಯನ್ನು ಹೊಡೆದೋಡಿಸಲಿಕ್ಕಾಗಿ ಒಬ್ಬ ವಿಚ್ಛೇದಿತ ವ್ಯಕ್ತಿ ಆಗಾಗ್ಗೆ ವಿರುದ್ಧ ಲಿಂಗದ ವ್ಯಕ್ತಿಯೊಬ್ಬರಿಂದ ಸಲಹೆಗಳನ್ನು ಇಲ್ಲವೆ ಸಾಂತ್ವನವನ್ನು ಪಡೆಯಲು ಪ್ರಯತ್ನಿಸಬಾರದು. ಇದು ಪ್ರಾಯೋಗಿಕ ವಿವೇಕದ ಲಕ್ಷಣ. ಹೀಗೆ ಅನುಚಿತ ಪ್ರಣಯಾತ್ಮಕ ಭಾವನೆಗಳು ಹುಟ್ಟದಂತೆ ಜಾಗ್ರತೆ ವಹಿಸಬಹುದು.

ವಿಚ್ಛೇದನ ಪಡೆದಿರುವ ನಮ್ಮ ಜೊತೆ ವಿಶ್ವಾಸಿಗಳಿಗೆ ನಕಾರಾತ್ಮಕ ಭಾವನೆಗಳ ಬಿರುಗಾಳಿ ಎಲ್ಲ ದಿಕ್ಕಿನಿಂದಲೊ ಎಂಬಂತೆ ಒಂದೇ ಸಮನೆ ಬಡಿಯುತ್ತಿರುತ್ತದೆ. ಇವುಗಳಲ್ಲಿ ಭವಿಷ್ಯದ ಕುರಿತ ಚಿಂತೆ, ಒಂಟಿತನದ ಭಾವನೆ, ತಿರಸ್ಕೃತರು ಎಂಬ ಭಾವನೆಯೂ ಸೇರಿರುತ್ತದೆ. ಇಂಥ ಭಾವನೆಗಳು ಸಹಜ, ಅವುಗಳನ್ನು ಮೆಟ್ಟಿನಿಲ್ಲುವುದು ಅವರಿಗೆ ಕಷ್ಟ ಎಂಬ ಸಂಗತಿಯನ್ನು ನಾವು ಗ್ರಹಿಸಬೇಕು. ಅಂಥ ಸಹೋದರ ಸಹೋದರಿಯರನ್ನು ನಿಷ್ಠೆಯಿಂದ ಬೆಂಬಲಿಸುವ ಮೂಲಕ ನಾವು ಯೆಹೋವನನ್ನು ಅನುಕರಿಸಬೇಕು. (ಕೀರ್ತ. 55:22; 1 ಪೇತ್ರ 5:6, 7) ನಾವು ಅವರಿಗೆ ಕೊಡುವ ಯಾವುದೇ ಸಹಾಯಕ್ಕಾಗಿ ಅವರು ತುಂಬ ಆಭಾರಿಗಳಾಗಿರುವರು. ಹೀಗೆ, ಸಭೆಯೊಳಗೆ ಅವರು ನಿಜ ಮಿತ್ರರಿಂದ ನೆರವು ಪಡೆಯುವರು.—ಜ್ಞಾನೋ. 17:17; 18:24.

^ ಪ್ಯಾರ. 6 ಹೆಸರುಗಳನ್ನು ಬದಲಾಯಿಸಲಾಗಿದೆ.