ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಯೆಹೋವನ ಸಂಘಟನೆಯ ಜೊತೆಜೊತೆಯಲ್ಲಿ ಸಾಗುತ್ತಿದ್ದೀರೊ?

ನೀವು ಯೆಹೋವನ ಸಂಘಟನೆಯ ಜೊತೆಜೊತೆಯಲ್ಲಿ ಸಾಗುತ್ತಿದ್ದೀರೊ?

“ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ.”—1 ಪೇತ್ರ 3:12.

1. ಧರ್ಮಭ್ರಷ್ಟ ಇಸ್ರಾಯೇಲ್ಯರಿಗೆ ಬದಲಾಗಿ ಯೆಹೋವನು ತನ್ನ ಹೆಸರಿಗಾಗಿ ಯಾವ ಸಂಘಟನೆಯನ್ನು ಆರಿಸಿಕೊಂಡನು? (ಮೇಲಿರುವ ಚಿತ್ರ ನೋಡಿ.)

ಒಂದನೇ ಶತಮಾನದಲ್ಲಿ ಕ್ರೈಸ್ತ ಸಭೆಯ ಸ್ಥಾಪನೆಗೆ ಹಾಗೂ ಆಧುನಿಕ ಸಮಯದಲ್ಲಿ ಸತ್ಯಾರಾಧನೆಯ ಪುನಃಸ್ಥಾಪನೆಗೆ ಕೀರ್ತಿ ಯೆಹೋವನಿಗೆ ಸಲ್ಲುತ್ತದೆ. ಹಿಂದಿನ ಲೇಖನದಲ್ಲಿ ನಾವು ಗಮನಿಸಿದಂತೆ, ಧರ್ಮಭ್ರಷ್ಟರಾದ ಇಸ್ರಾಯೇಲ್‌ ಜನಾಂಗಕ್ಕೆ ಬದಲು ಯೆಹೋವನು ತನ್ನ ಹೆಸರಿಗಾಗಿ ಒಂದು ಹೊಸ ಸಂಘಟನೆಯನ್ನು ಆರಿಸಿಕೊಂಡನು. ಇದರಲ್ಲಿ ಕ್ರಿಸ್ತನ ಆರಂಭದ ಅನುಯಾಯಿಗಳು ಇದ್ದರು. ಈ ಹೊಸ ಸಂಘಟನೆಯನ್ನು ಯೆಹೋವನು ಮೆಚ್ಚಿದನು. ಕ್ರಿ.ಶ. 70ರಲ್ಲಿ ಯೆರೂಸಲೇಮ್‌ ನಾಶವಾದರೂ ಈ ಸಂಘಟನೆ ಉಳಿಯಿತು. (ಲೂಕ 21:20, 21) ಒಂದನೇ ಶತಮಾನದಲ್ಲಾದ ಆ ಘಟನೆಗಳು ಇಂದು ಯೆಹೋವನ ಸೇವಕರ ಸಂಬಂಧದಲ್ಲಿ ನಡೆಯುವ ಘಟನೆಗಳಿಗೆ ಮುನ್‌ಸೂಚಕವಾಗಿವೆ. ಸೈತಾನನ ವಿಷಯಗಳ ವ್ಯವಸ್ಥೆ ಅತಿ ಬೇಗನೆ ಕೊನೆ ಕಾಣಲಿದೆ. ಆದರೆ ದೇವರ ಸಂಘಟನೆ ಈ ಕಡೇ ದಿವಸಗಳನ್ನು ಪಾರಾಗಿ ಉಳಿಯುವುದು. (2 ತಿಮೊ. 3:1) ಈ ಬಗ್ಗೆ ನಾವು ನಿಶ್ಚಯದಿಂದಿರಲು ಏನು ಆಧಾರವಿದೆ?

2. (ಎ) ‘ಮಹಾ ಸಂಕಟದ’ ಬಗ್ಗೆ ಯೇಸು ಏನಂದನು? (ಬಿ) ಅದು ಯಾವ ಘಟನೆಯೊಂದಿಗೆ ಆರಂಭಗೊಳ್ಳುವುದು?

2 ಯೇಸು ತನ್ನ ಅದೃಶ್ಯ ಸಾನ್ನಿಧ್ಯ ಮತ್ತು ಈ ಲೋಕ ವ್ಯವಸ್ಥೆಯ ಸಮಾಪ್ತಿಯ ಬಗ್ಗೆ ಮಾತಾಡುತ್ತಾ ಹೀಗೆ ಹೇಳಿದನು: “ಆಗ ಮಹಾ ಸಂಕಟವು ಇರುವುದು; ಲೋಕದ ಆರಂಭದಿಂದ ಇಂದಿನ ವರೆಗೆ ಅಂಥ ಸಂಕಟವು ಸಂಭವಿಸಿಲ್ಲ; ಇನ್ನು ಮುಂದೆಯೂ ಸಂಭವಿಸುವುದಿಲ್ಲ.” (ಮತ್ತಾ. 24:3, 21) ಯೆಹೋವನು ಮಾನವ  ಸರ್ಕಾರಗಳನ್ನು ಉಪಯೋಗಿಸಿ “ಮಹಾ ಬಾಬೆಲ್‌” ಅನ್ನು ಅಂದರೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನು ನಾಶಮಾಡುವಾಗ ಆ ಮಹಾ ಸಂಕಟ ಆರಂಭವಾಗುವುದು. (ಪ್ರಕ. 17:3-5, 16) ಮುಂದೇನಾಗುವುದು?

ಸೈತಾನನ ಆಕ್ರಮಣದ ಬಳಿಕ ಅರ್ಮಗೆದೋನ್‌ ಆರಂಭ

3. ಸುಳ್ಳುಧರ್ಮ ನಾಶವಾದ ಬಳಿಕ ಯೆಹೋವನ ಜನರಿಗೆ ಏನಾಗುವುದು?

3 ಸುಳ್ಳುಧರ್ಮ ನಾಶವಾದ ಬಳಿಕ ಸೈತಾನ ಮತ್ತವನ ಲೋಕದ ಬೇರೆ ಬೇರೆ ಘಟಕಗಳು ಯೆಹೋವನ ಸೇವಕರ ಮೇಲೆ ಆಕ್ರಮಣ ಮಾಡುವವು. ‘ಮಾಗೋಗ್‌ ದೇಶದ ಗೋಗನ’ ಕುರಿತು ಬೈಬಲ್‌ ಹೀಗನ್ನುತ್ತದೆ: “ನೀನೂ ನಿನ್ನ ಎಲ್ಲಾ ಗುಮ್ಮಿಗಳೂ ನಿನ್ನೊಂದಿಗಿರುವ ಬಹು ಜನಾಂಗಗಳೂ ಬಿರುಗಾಳಿಯಂತೆ ಹೊರಟುಬರುವಿರಿ; ಕಾರ್ಮುಗಿಲಿನೋಪಾದಿಯಲ್ಲಿ ದೇಶವನ್ನು ಮುಚ್ಚಿಬಿಡುವಿರಿ.” ಯೆಹೋವನ ಸಾಕ್ಷಿಗಳು ತುಂಬ ಶಾಂತಿಯುತ ಜನರಾಗಿರುವ ಕಾರಣ ಮತ್ತು ಅವರ ಬಳಿ ಯಾವುದೇ ಸಶಸ್ತ್ರ ಸೈನ್ಯಗಳಿಲ್ಲದ ಕಾರಣ ಸುಲಭವಾಗಿ ಆಕ್ರಮಣಕ್ಕೊಳಗಾಗುವರು ಎಂಬಂತೆ ತೋರುವುದು. ಆದರೆ ಅವರನ್ನು ಆಕ್ರಮಿಸುವುದು ಎಷ್ಟು ದೊಡ್ಡ ತಪ್ಪಾಗಿರುವುದು!—ಯೆಹೆ. 38:1, 2, 9-12.

4, 5. ಸೈತಾನನು ದೇವಜನರನ್ನು ನಾಶಮಾಡಲು ಪ್ರಯತ್ನಿಸುವಾಗ ಯೆಹೋವನು ಹೇಗೆ ಪ್ರತಿಕ್ರಿಯಿಸುವನು?

4 ದೇವಜನರ ಮೇಲೆ ಸೈತಾನನು ಆಕ್ರಮಣ ಮಾಡುವಾಗ ಯೆಹೋವನು ಹೇಗೆ ಪ್ರತಿಕ್ರಿಯಿಸುವನು? ವಿಶ್ವ ಪರಮಾಧಿಕಾರಿಯಾಗಿ ತನಗಿರುವ ಹಕ್ಕನ್ನು ಚಲಾಯಿಸುತ್ತಾ ಆತನು ತನ್ನ ಜನರ ಪರವಾಗಿ ಕ್ರಿಯೆಗೈಯುವನು. ಏಕೆಂದರೆ ತನ್ನ ಸೇವಕರ ಮೇಲೆ ಆಕ್ರಮಣ ಮಾಡುವುದು ಯೆಹೋವನಿಗೆ ತನ್ನ ಮೇಲೆಯೇ ಆಕ್ರಮಣ ಮಾಡಿದಂತೆ. (ಜೆಕರ್ಯ 2:8 ಓದಿ.) ಆದ್ದರಿಂದ ನಮ್ಮ ತಂದೆಯಾದ ಯೆಹೋವನು ನಮ್ಮನ್ನು ಕಾಪಾಡಲು ಕೂಡಲೆ ಹೆಜ್ಜೆ ತಕ್ಕೊಳ್ಳುವನು. ಈ ಸಂರಕ್ಷಣಾಕಾರ್ಯದ ಅಂತಿಮಘಟ್ಟವೇ ಅರ್ಮಗೆದೋನ್‌ ಯುದ್ಧ. ‘ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಈ ಯುದ್ಧದಲ್ಲಿ’ ಯೆಹೋವನು ಸೈತಾನನ ಲೋಕವನ್ನು ಸಂಪೂರ್ಣವಾಗಿ ನಿರ್ನಾಮಮಾಡುವನು.—ಪ್ರಕ. 16:14, 16.

5 ಅರ್ಮಗೆದೋನ್‌ ಯುದ್ಧದ ಬಗ್ಗೆ ಬೈಬಲ್‌ ಪ್ರವಾದನೆಯೊಂದು ಹೀಗನ್ನುತ್ತದೆ: “ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ; ನರಜನ್ಮದವರೆಲ್ಲರ ಸಂಗಡ ನ್ಯಾಯಕ್ಕೆ ನಿಲ್ಲುವನು; ದುಷ್ಟರನ್ನು ಖಡ್ಗಕ್ಕೆ ಗುರಿಮಾಡುವನು. ಇದು ಯೆಹೋವನ ನುಡಿ. ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ಆಹಾ, ಕೇಡು ಜನಾಂಗದಿಂದ ಜನಾಂಗಕ್ಕೆ ಹರಡುವದು; ದೊಡ್ಡ ಬಿರುಗಾಳಿಯು ಲೋಕದ ಕಟ್ಟಕಡೆಯಿಂದ ಎದ್ದುಬರುವದು. ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು; ಅವರಿಗಾಗಿ ಯಾರೂ ಗೋಳಾಡರು, ಅವರನ್ನು ಯಾರೂ ಒಟ್ಟುಗೂಡಿಸರು, ಯಾರೂ ಹೂಣಿಡರು, ಭೂಮಿಯ ಮೇಲೆ ಗೊಬ್ಬರವಾಗುವರು.” (ಯೆರೆ. 25:31-33) ಹೌದು, ಅರ್ಮಗೆದೋನ್‌ ಯುದ್ಧವು ಸೈತಾನನ ಈ ದುಷ್ಟ ಲೋಕವನ್ನು ಅಳಿಸಿಹಾಕುವುದು. ಆದರೆ ಯೆಹೋವನ ಸಂಘಟನೆಯ ಭೂಭಾಗವು ಪಾರಾಗಿ ಉಳಿಯುವುದು.

ಇಂದು ಯೆಹೋವನ ಸಂಘಟನೆಯ ಅಭಿವೃದ್ಧಿಗೆ ಕಾರಣ

6, 7. (ಎ) ‘ಮಹಾ ಸಮೂಹದಲ್ಲಿರುವವರು’ ಕೂಡಿಸಲ್ಪಟ್ಟದ್ದು ಹೇಗೆ? (ಬಿ) ಇತ್ತೀಚಿನ ವರ್ಷಗಳಲ್ಲಿ ಯಾವ ಅಭಿವೃದ್ಧಿ ಆಗಿದೆ?

6 ದೇವರ ಸಂಘಟನೆಯು ಇಂದು ಭೂಮಿಯ ಮೇಲೆ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಕಾರಣ ಆ ಸಂಘಟನೆಯ ಭಾಗವಾಗಿರುವ ಜನರ ಮೇಲೆ ದೇವರ ಅನುಗ್ರಹ ಇರುವುದೇ. “ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ ಮತ್ತು ಆತನ ಕಿವಿಗಳು ಅವರ ಯಾಚನೆಯ ಕಡೆಗಿವೆ” ಎನ್ನುತ್ತದೆ ಬೈಬಲ್‌. (1 ಪೇತ್ರ 3:12) ಈ ನೀತಿವಂತರಲ್ಲಿ ‘ಮಹಾ ಸಂಕಟವನ್ನು ಪಾರಾಗಲಿರುವ’ “ಒಂದು ಮಹಾ ಸಮೂಹ” ಸೇರಿದೆ. (ಪ್ರಕ. 7:9, 14) ಗಮನಿಸಿ, ಇವರನ್ನು ಕೇವಲ “ಒಂದು ಸಮೂಹ” ಎಂದು ಹೇಳುತ್ತಿಲ್ಲ, “ಒಂದು ಮಹಾ ಸಮೂಹ” ಎಂದು ಹೇಳಲಾಗಿದೆ ಅಂದರೆ ಅವರು ಬಹು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮಹಾ ಸಮೂಹದವರಲ್ಲಿ ನೀವು ಒಬ್ಬರಾಗಿದ್ದು “ಮಹಾ ಸಂಕಟವನ್ನು” ಪಾರಾಗಿ ಬರುವಾಗ ನಿಮಗೆ ಹೇಗನಿಸುವುದೆಂದು ಊಹಿಸಿಕೊಳ್ಳಿ!

7 ಮಹಾ ಸಮೂಹದಲ್ಲಿರುವ ಜನರು ಕೂಡಿಸಲ್ಪಟ್ಟದ್ದು ಹೇಗೆ? ಉತ್ತರಕ್ಕಾಗಿ ಯೇಸು ತನ್ನ ಸಾನಿಧ್ಯದ ಸೂಚನೆಯಲ್ಲಿ ಮುನ್ನುಡಿದ ಮಾತುಗಳನ್ನು ಗಮನಿಸಿ: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾ. 24:14) ದೇವರ ಸಂಘಟನೆಯು ಈ ಕಡೇ ದಿವಸಗಳಲ್ಲಿ ಮಾಡುತ್ತಿರುವ ಪ್ರಧಾನ ಕೆಲಸ ಇದೇ ಆಗಿದೆ. ಯೆಹೋವನ ಸಾಕ್ಷಿಗಳು ಭೂವ್ಯಾಪಕವಾಗಿ ಮಾಡುತ್ತಿರುವ ಸಾರುವ ಮತ್ತು ಬೋಧಿಸುವ  ಕೆಲಸದಿಂದಾಗಿ ಲಕ್ಷಾಂತರ ಜನರು ಯೆಹೋವನನ್ನು “ಪವಿತ್ರಾತ್ಮದಿಂದಲೂ ಸತ್ಯದಿಂದಲೂ” ಆರಾಧಿಸಲು ಕಲಿತಿದ್ದಾರೆ. (ಯೋಹಾ. 4:23, 24) ಉದಾಹರಣೆಗೆ, 2003ರಿಂದ 2012ರೊಳಗೆ 27,07,000ಕ್ಕಿಂತಲೂ ಹೆಚ್ಚು ಮಂದಿ ದೇವರಿಗೆ ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಈಗ ಪ್ರಪಂಚದಾದ್ಯಂತ 79 ಲಕ್ಷಕ್ಕಿಂತಲೂ ಹೆಚ್ಚು ಸಾಕ್ಷಿಗಳು ಇದ್ದಾರೆ. ಮಾತ್ರವಲ್ಲ ಪ್ರತಿವರ್ಷವೂ ಕ್ರಿಸ್ತನ ಮರಣವನ್ನು ಸ್ಮರಿಸಲು ಲಕ್ಷಗಟ್ಟಲೆ ಮಂದಿ ಇವರನ್ನು ಜೊತೆಗೂಡುತ್ತಾರೆ. ‘ಬೆಳೆಸುತ್ತಾ ಬರುತ್ತಿರುವವನು’ ದೇವರಾಗಿರುವ ಕಾರಣ ಈ ಸಂಖ್ಯೆಯ ವೃದ್ಧಿ ಬಗ್ಗೆ ನಾವು ಕೊಚ್ಚಿಕೊಳ್ಳುವುದಿಲ್ಲ. (1 ಕೊರಿಂ. 3:5-7) ಹಾಗಿದ್ದರೂ ಒಂದೊಂದು ವರ್ಷ ಉರುಳಿದಂತೆ ಮಹಾ ಸಮೂಹ ದೊಡ್ಡ ಸಂಖ್ಯೆಯಲ್ಲಿ ಬೆಳೆಯುತ್ತಿರುವುದನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ.

8. ಆಧುನಿಕ ಸಮಯದಲ್ಲಿ ಯೆಹೋವನ ಸಂಘಟನೆ ಗಮನಾರ್ಹವಾಗಿ ಬೆಳೆಯುತ್ತಿರುವುದಕ್ಕೆ ಕಾರಣವೇನು?

8 ದೇವರ ಸೇವಕರ ಸಂಖ್ಯೆಯಲ್ಲಿ ಆಗುತ್ತಿರುವ ಗಮನಾರ್ಹ ವೃದ್ಧಿಗೆ ಕಾರಣವೇನು? ಯೆಹೋವನು ತನ್ನ ಸಾಕ್ಷಿಗಳನ್ನು ಬೆಂಬಲಿಸುತ್ತಿರುವುದೇ. (ಯೆಶಾಯ 43:10-12 ಓದಿ.) ಈ ವೃದ್ಧಿಯ ಬಗ್ಗೆ ಯೆಶಾಯನು ಮುಂತಿಳಿಸಿದ್ದು: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾ. 60:22) ಒಂದು ಕಾಲದಲ್ಲಿ ಅಭಿಷಿಕ್ತ ಉಳಿಕೆಯವರು ‘ಚಿಕ್ಕವನಂತೆ’ ಇದ್ದರು. ಆದರೆ ದೇವರ ಸಂಘಟನೆಯೊಳಗೆ ಇತರ ಆಧ್ಯಾತ್ಮಿಕ ಇಸ್ರಾಯೇಲ್ಯರು ತರಲ್ಪಡುತ್ತಿದ್ದಂತೆ ಅವರ ಸಂಖ್ಯೆ ಬೆಳೆಯತೊಡಗಿತು. (ಗಲಾ. 6:16) ಮಾತ್ರವಲ್ಲ, ಯೆಹೋವನ ಆಶೀರ್ವಾದದಿಂದಾಗಿ ಮಹಾ ಸಮೂಹ ಒಟ್ಟುಗೂಡಿಸಲ್ಪಡುತ್ತಿರುವುದರಿಂದ ಸಂಘಟನೆಯಲ್ಲಿ ಜನರ ಸಂಖ್ಯೆ ಇನ್ನೂ ವೃದ್ಧಿಯಾಗುತ್ತಿದೆ.

ನಾವೇನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?

9. ದೇವರ ವಾಕ್ಯದಲ್ಲಿ ವಾಗ್ದಾನಿಸಿರುವ ಭವ್ಯ ಭವಿಷ್ಯತ್ತಿನಲ್ಲಿ ಆನಂದಿಸಬೇಕಾದರೆ ಏನು ಮಾಡಬೇಕು?

9 ನಾವು ಅಭಿಷಿಕ್ತರಾಗಿರಲಿ ಮಹಾ ಸಮೂಹದವರಾಗಿರಲಿ ನಮಗೆಲ್ಲರಿಗೂ ಯೆಹೋವನು ಒಂದು ಅದ್ಭುತ ಭವಿಷ್ಯತ್ತನ್ನು ವಾಗ್ದಾನಿಸಿದ್ದಾನೆ. ಅದು ನಮಗೆ ಸಿಗಬೇಕಾದರೆ ನಾವು ಆತನ ಆಜ್ಞೆಗಳಿಗೆ ವಿಧೇಯರಾಗಲೇಬೇಕು. (ಯೆಶಾ. 48:17, 18) ಇಸ್ರಾಯೇಲ್ಯರ ಬಗ್ಗೆ ತಕ್ಕೊಳ್ಳಿ. ಧರ್ಮಶಾಸ್ತ್ರಕ್ಕೆ ಅವರು ವಿಧೇಯರಾಗಬೇಕೆಂದು ಯೆಹೋವನು ಹೇಳಿದನು. ಲೈಂಗಿಕ ಸಂಪರ್ಕ, ವ್ಯಾಪಾರ ವಹಿವಾಟು, ಮಕ್ಕಳನ್ನು ಬೆಳೆಸುವುದು, ಪರರೊಂದಿಗೆ ನಡಕೊಳ್ಳಬೇಕಾದ ವಿಧ ಹೀಗೆ ಅನೇಕ ವಿಷಯಗಳ ಬಗ್ಗೆ ಆತನು ಕೊಟ್ಟ ಆಜ್ಞೆಗಳು ಅವರಿಗೆ ಸಂರಕ್ಷಣೆ ನೀಡಿದವು. (ವಿಮೋ. 20:14; ಯಾಜ. 19:18, 35-37; ಧರ್ಮೋ. 6:6-9) ದೇವರ ಆಜ್ಞೆಗಳಿಗೆ ವಿಧೇಯರಾಗುವಲ್ಲಿ ಈಗ ನಮಗೂ ಪ್ರಯೋಜನ ಸಿಗುತ್ತದೆ. ಹಾಗೆ ವಿಧೇಯತೆ ತೋರಿಸುವುದು ತುಂಬ ಕಷ್ಟಕರವಲ್ಲ. (1 ಯೋಹಾನ 5:3 ಓದಿ.) ಆತನ ನಿಯಮ ಮತ್ತು ಮೂಲತತ್ವಗಳಿಗೆ ಅನುಸಾರ ನಡೆಯುವುದು ನಮ್ಮನ್ನು ಸಂರಕ್ಷಿಸುತ್ತದೆ. ಮಾತ್ರವಲ್ಲ ‘ನಂಬಿಕೆಯಲ್ಲಿ ಸ್ವಸ್ಥರಾಗಿರಲು’ ಸಹಾಯ ಮಾಡುತ್ತದೆ.—ತೀತ 1:13.

10. ಬೈಬಲ್‌ ಅಧ್ಯಯನ ಮತ್ತು ಪ್ರತಿವಾರ ಕುಟುಂಬ ಆರಾಧನೆಗಾಗಿ ನಾವೇಕೆ ಸಮಯವನ್ನು ಬದಿಗಿರಿಸಬೇಕು?

10 ಯೆಹೋವನ ಸಂಘಟನೆಯ ಭೂಭಾಗವು ಅನೇಕ ವಿಧಗಳಲ್ಲಿ ಮುಂದೆ ಸಾಗುತ್ತಿದೆ. ಉದಾಹರಣೆಗೆ, ಬೈಬಲ್‌ ಸತ್ಯದ ತಿಳಿವಳಿಕೆಯನ್ನು ಹೆಚ್ಚೆಚ್ಚು ಸ್ಪಷ್ಟಗೊಳಿಸಲಾಗುತ್ತಿದೆ. ಏಕೆಂದರೆ “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” (ಜ್ಞಾನೋ. 4:18) ಆದ್ದರಿಂದ ನಾವು ಹೀಗೆ ಕೇಳಿಕೊಳ್ಳಬೇಕು: ‘ಕೆಲವು ಬೈಬಲ್‌ ವಚನಗಳ ತಿಳಿವಳಿಕೆಯಲ್ಲಿ ಆಗಿರುವ ಬದಲಾವಣೆಗಳು ನನಗೆ ತಿಳಿದಿವೆಯೇ? ಪ್ರತಿದಿನ ಬೈಬಲ್‌ ಓದುವ ರೂಢಿ ನನಗಿದೆಯಾ? ನಮ್ಮ ಪ್ರಕಾಶನಗಳನ್ನು ಆಸಕ್ತಿಯಿಂದ ಓದುತ್ತೇನಾ? ಪ್ರತಿವಾರ ತಪ್ಪದೆ ನಾನೂ ನನ್ನ ಕುಟುಂಬ, ಕುಟುಂಬ ಆರಾಧನೆಯನ್ನು ಮಾಡುತ್ತಿದ್ದೇವಾ?’ ಈ ಎಲ್ಲವನ್ನು ಮಾಡುವುದು ತೀರ ಕಷ್ಟವಲ್ಲ. ಅದಕ್ಕಾಗಿ ಸಮಯವನ್ನು ಬದಿಗಿರಿಸಬೇಕಷ್ಟೇ. ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನ ಪಡೆಯುವುದು, ಅದನ್ನು ಅನ್ವಯಿಸುವುದು ಮತ್ತು ಆಧ್ಯಾತ್ಮಿಕವಾಗಿ ಪ್ರಗತಿ ಮಾಡುವುದು ಪ್ರಾಮುಖ್ಯ. ಮಹಾ ಸಂಕಟವು ತುಂಬ ಹತ್ತಿರವಿರುವುದರಿಂದ ಹಾಗೆ ಮಾಡುವುದು ಇನ್ನೂ ಪ್ರಾಮುಖ್ಯ!

11. ಪ್ರಾಚೀನ ಹಬ್ಬಗಳು ಮತ್ತು ಆಧುನಿಕ ದಿನದ ಕೂಟಗಳು, ಸಮ್ಮೇಳನಗಳು, ಅಧಿವೇಶನಗಳು ಯಾವ ವಿಧಗಳಲ್ಲಿ ಪ್ರಯೋಜನ ತಂದಿವೆ?

11 ಯೆಹೋವನ ಸಂಘಟನೆಯು ನಮ್ಮ ಒಳ್ಳೇದಕ್ಕಾಗಿಯೇ ಅಪೊಸ್ತಲ ಪೌಲನ ಈ ಸಲಹೆಯನ್ನು ಪಾಲಿಸುವಂತೆ ಹೇಳುತ್ತದೆ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ;  ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.” (ಇಬ್ರಿ. 10:24, 25) ಪ್ರಾಚೀನ ಇಸ್ರಾಯೇಲ್ಯರು ಪ್ರತಿ ವರ್ಷ ಹಬ್ಬಗಳನ್ನು ಆಚರಿಸಲಿಕ್ಕಾಗಿ ಹಾಗೂ ಇನ್ನಿತರ ಸಮಯಗಳಲ್ಲೂ ಆರಾಧನೆಗಾಗಿ ಒಟ್ಟಾಗಿ ಸೇರಿಬರುತ್ತಿದ್ದರು. ಅವು ಅವರನ್ನು ಆಧ್ಯಾತ್ಮಿಕವಾಗಿ ಬಲಪಡಿಸಿದವು. ಮಾತ್ರವಲ್ಲ ಆನಂದಭರಿತ ಸಂದರ್ಭಗಳು ಅವಾಗಿದ್ದವು. ನೆಹೆಮೀಯನ ಸಮಯದಲ್ಲಿ ಆಚರಿಸಲಾದ ಪರ್ಣಶಾಲೆಗಳ ಹಬ್ಬ ಇದಕ್ಕೊಂದು ಉದಾಹರಣೆ. (ವಿಮೋ. 23:15, 16; ನೆಹೆ. 8:9-18) ನಾವು ಕೂಡ ನಮ್ಮ ಕೂಟಗಳಿಂದ, ಸಮ್ಮೇಳನ ಮತ್ತು ಅಧಿವೇಶನಗಳಿಂದ ತದ್ರೀತಿಯ ಪ್ರಯೋಜನ ಪಡೆಯುತ್ತೇವೆ. ಹಾಗಾಗಿ ನಾವು ಈ ಎಲ್ಲವುಗಳಿಗೆ ಹಾಜರಾಗೋಣ. ಏಕೆಂದರೆ ಇವು ನಮ್ಮ ಸಂತೋಷವನ್ನೂ ಆಧ್ಯಾತ್ಮಿಕ ಆರೋಗ್ಯವನ್ನೂ ವರ್ಧಿಸುತ್ತವೆ.—ತೀತ 2:2.

12. ಸಾರುವ ಕೆಲಸದ ಬಗ್ಗೆ ನಮಗೆ ಹೇಗನಿಸಬೇಕು?

12 ದೇವರ ಸಂಘಟನೆಯ ಭಾಗವಾಗಿರುವ ನಾವು ಸುವಾರ್ತೆಯನ್ನು ಸಾರಲೇಬೇಕು. ಇದು ನಮಗೆ ಸಿಕ್ಕಿರುವ ದೊಡ್ಡ ಗೌರವ. ವಾಸ್ತವದಲ್ಲಿ ಬೈಬಲ್‌ ಆ ಕೆಲಸವನ್ನು “ಪವಿತ್ರ ಕೆಲಸ” ಎಂದು ಕರೆಯುತ್ತದೆ. (ರೋಮ. 15:16) ನಾವು ಈ ಕೆಲಸದಲ್ಲಿ ಭಾಗವಹಿಸುವಾಗ “ಪವಿತ್ರನಾಗಿರುವ” ಯೆಹೋವ ದೇವರ ‘ಜೊತೆಕೆಲಸಗಾರರಾಗುತ್ತೇವೆ.’ (1 ಕೊರಿಂ. 3:9; 1 ಪೇತ್ರ 1:15) ಸುವಾರ್ತೆ ಸಾರುವ ಕೆಲಸವು ಯೆಹೋವನ ಪವಿತ್ರ ನಾಮದ ಪವಿತ್ರೀಕರಣಕ್ಕೆ ನೆರವಾಗುತ್ತದೆ. “ಸಂತೋಷದ ದೇವರ ಮಹಿಮಾಭರಿತ ಸುವಾರ್ತೆ” ಸಾರಲು ನಮಗಿರುವ ಸುಯೋಗವು ನಿಜಕ್ಕೂ ಬೆಲೆಕಟ್ಟಲಾಗದ್ದು.—1 ತಿಮೊ. 1:11.

13. ಆಧ್ಯಾತ್ಮಿಕವಾಗಿ ಉತ್ತಮ ಆರೋಗ್ಯ ಮಾತ್ರವಲ್ಲ ಜೀವವನ್ನು ಕೂಡ ಪಡೆಯಲು ನಾವೇನು ಮಾಡಬೇಕು?

13 ನಾವು ಯೆಹೋವನಿಗೆ ಅಂಟಿಕೊಂಡು, ಸಂಘಟನೆಯ ಎಲ್ಲ ಚಟುವಟಿಕೆಗಳನ್ನು ಬೆಂಬಲಿಸುವ ಮೂಲಕ ಆಧ್ಯಾತ್ಮಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಮೋಶೆ ಇಸ್ರಾಯೇಲ್ಯರಿಗೆ ಹೀಗಂದನು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ. ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್‌ ಇಸಾಕ್‌ ಯಾಕೋಬರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.” (ಧರ್ಮೋ. 30:19, 20) ನಾವು ಯೆಹೋವನ ಚಿತ್ತವನ್ನು ಮಾಡಿ, ಆತನನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿ, ಆತನನ್ನು ಹೊಂದಿಕೊಂಡಿರುವಲ್ಲಿ ಮಾತ್ರ ಜೀವವನ್ನು ಪಡೆದುಕೊಳ್ಳುತ್ತೇವೆ.

14. ದೇವರ ಸಂಘಟನೆಯ ದೃಶ್ಯ ಭಾಗದ ಬಗ್ಗೆ ಒಬ್ಬ ಸಹೋದರನಿಗೆ ಹೇಗೆ ಅನಿಸಿತು?

14 ಇಸವಿ 1914ಕ್ಕೆ ಮುಂಚೆ ಸತ್ಯವನ್ನು ಕಲಿತ ಸಹೋದರ ಪ್ರೈಸ್‌ ಹ್ಯೂಜ್‌ ತಮ್ಮ ಜೀವನದಾದ್ಯಂತ ಯೆಹೋವನಿಗೂ ಆತನ ಸಂಘಟನೆಗೂ ಬಲವಾಗಿ ಅಂಟಿಕೊಂಡಿದ್ದರು. ಅವರು ಹೇಳಿದ್ದು: “1914ಕ್ಕೆ ತುಸು ಮುಂಚಿನಿಂದಲೂ ಯೆಹೋವನ ಉದ್ದೇಶಗಳ ಕುರಿತು ಜ್ಞಾನ ನನಗಿರುವುದಕ್ಕಾಗಿ ತುಂಬ ಆಭಾರಿ. . . . ಯೆಹೋವನ ದೃಶ್ಯ ಸಂಘಟನೆಗೆ ಒತ್ತಾಗಿ ಅಂಟಿಕೊಂಡು ಇರುವುದೊಂದೇ ನನಗೆ ಯಾವಾಗಲೂ ಮಹತ್ವದ್ದಾಗಿದೆ. ಮಾನವ ಆಲೋಚನೆಯ ಮೇಲೆ ಆತುಕೊಳ್ಳುವುದು ಎಷ್ಟು ಅವಿವೇಕ ಎಂಬುದನ್ನು ನನ್ನ ಆರಂಭದ ಅನುಭವ ಕಲಿಸಿತು. ಹಾಗಾಗಿ ಈ ನಂಬಿಗಸ್ತ ಸಂಘಟನೆಯೊಂದಿಗೆ ಉಳಿಯಲು ದೃಢನಿಶ್ಚಯಮಾಡಿದೆ. ಇದನ್ನು ಬಿಟ್ಟು ಬೇರೆ ಯಾವ ವಿಧದಲ್ಲೂ ಯೆಹೋವನ ಅನುಗ್ರಹ ಮತ್ತು ಆಶೀರ್ವಾದ ಪಡೆಯಲು ಸಾಧ್ಯವಿಲ್ಲ.”

ಯೆಹೋವನ ಸಂಘಟನೆಯ ಜೊತೆಜೊತೆಯಲ್ಲೇ ಮುಂದೆಸಾಗಿ

15. ಬೈಬಲ್‌ ಸತ್ಯದ ತಿಳಿವಳಿಕೆಯು ಪರಿಷ್ಕರಿಸಲ್ಪಟ್ಟಾಗ ನಾವದನ್ನು ಹೇಗೆ ವೀಕ್ಷಿಸಬೇಕು ಎನ್ನುವುದಕ್ಕೆ ಬೈಬಲಿನ ಒಂದು ಉದಾಹರಣೆ ಕೊಡಿ.

15 ನಾವು ಯೆಹೋವನ ಮೆಚ್ಚಿಕೆ ಮತ್ತು ಆಶೀರ್ವಾದವನ್ನು ಪಡೆಯಬೇಕಾದರೆ ಆತನ ಸಂಘಟನೆಯನ್ನು ಬೆಂಬಲಿಸಬೇಕು. ಅಲ್ಲದೆ, ಬೈಬಲ್‌ ವಚನಗಳ ತಿಳಿವಳಿಕೆಯಲ್ಲಿ ಬದಲಾವಣೆಯಾದಾಗ ಅದನ್ನು ಅಂಗೀಕರಿಸಬೇಕು. ಒಂದನೇ ಶತಮಾನದಲ್ಲಿ ಯೆಹೂದಿ ಹಿನ್ನೆಲೆಯಿಂದ ಬಂದ ಸಾವಿರಾರು ಮಂದಿ ಕ್ರೈಸ್ತರು ಧರ್ಮಶಾಸ್ತ್ರವನ್ನು ಮುಂದಕ್ಕೂ ಪಾಲಿಸಲು ಇಷ್ಟಪಟ್ಟರು. ಧರ್ಮಶಾಸ್ತ್ರ ಅನುಸರಿಸುವುದನ್ನು ಬಿಡುವುದು ಅವರಿಗೆ ಕಷ್ಟವಾಗಿತ್ತು. (ಅ. ಕಾ. 21:17-20) ಆದರೆ ಪೌಲನು ಸಲಹೆ ಕೊಟ್ಟಾಗ ಅವರದನ್ನು  ಅಂಗೀಕರಿಸಿದರು. ತಮ್ಮ ಪಾಪಗಳಿಗೆ ಕ್ಷಮಾಪಣೆ ಸಿಕ್ಕಿರುವುದು “ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಡುವ” ಯಜ್ಞಗಳಿಂದಲ್ಲ ಬದಲಿಗೆ ‘ಯೇಸು ಕ್ರಿಸ್ತನ ದೇಹದ ಅರ್ಪಣೆಯ ಮೂಲಕ’ ಎಂದು ಅರಿತುಕೊಂಡರು. (ಇಬ್ರಿ. 10:5-10) ಹೌದು, ಹೆಚ್ಚಿನ ಯೆಹೂದಿ ಕ್ರೈಸ್ತರು ತಮ್ಮ ಆಲೋಚನೆಯನ್ನು ಬದಲಾಯಿಸಿಕೊಂಡು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಿದರು. ಇದು ನಮಗೊಂದು ಒಳ್ಳೇ ಉದಾಹರಣೆ. ನಾವು ಕೂಡ ಶ್ರದ್ಧೆಯಿಂದ ಬೈಬಲ್‌ ಮತ್ತು ಬೈಬಲ್‌ ಆಧರಿತ ಪ್ರಕಾಶನಗಳ ಅಧ್ಯಯನ ಮಾಡಬೇಕು ಹಾಗೂ ದೇವರ ವಾಕ್ಯದ ತಿಳಿವಳಿಕೆಯಲ್ಲಿ ಅಥವಾ ಸಾರುವ ವಿಧಾನದಲ್ಲಿ ಏನಾದರೂ ಹೊಂದಾಣಿಕೆ ಮಾಡಲಾಗುವಾಗ ಮುಕ್ತಮನಸ್ಸಿನಿಂದ ಅಂಗೀಕರಿಸಬೇಕು.

16. (ಎ) ಹೊಸ ಲೋಕದಲ್ಲಿ ನಮ್ಮ ಜೀವನ ಏಕೆ ಸುಂದರವಾಗಿರುವುದು? (ಬಿ) ಹೊಸ ಲೋಕದಲ್ಲಿ ಏನನ್ನು ಅನುಭವಿಸಲು ನೀವು ಕಾಯುತ್ತಿದ್ದೀರಿ?

16 ಯೆಹೋವನಿಗೂ ಆತನ ಸಂಘಟನೆಗೂ ನಿಷ್ಠೆಯಿಂದ ಉಳಿಯುವವರೆಲ್ಲರೂ ಆತನ ಆಶೀರ್ವಾದಗಳನ್ನು ನಿರಂತರಕ್ಕೂ ಪಡೆಯುವರು. ನಂಬಿಗಸ್ತ ಅಭಿಷಿಕ್ತರು ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಜೊತೆ ಬಾಧ್ಯರು ಆಗುವ ಮಹಿಮಾನ್ವಿತ ಸುಯೋಗವನ್ನು ಪಡೆಯುವರು. (ರೋಮ. 8:16, 17) ನಿಮಗೆ ಭೂನಿರೀಕ್ಷೆ ಇರುವಲ್ಲಿ ಪರದೈಸಿನಲ್ಲಿ ಅನಂತಕಾಲದ ಜೀವನ ಎಷ್ಟು ಸುಮಧುರವಾಗಿರುವುದೆಂದು ಊಹಿಸಿಕೊಳ್ಳಿ. ಯೆಹೋವನ ಸಂಘಟನೆಯ ಭಾಗವಾಗಿರುವ ನಮಗೆ ಆ ಹೊಸ ಲೋಕದ ಬಗ್ಗೆ ಇತರರಿಗೆ ತಿಳಿಸುವ ವಿಶೇಷ ಸದವಕಾಶವಿದೆ! (2 ಪೇತ್ರ 3:13) ಕೀರ್ತನೆ 37:11 ಹೇಳುವಂತೆ “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ಜನರು ‘ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಿಸುವರು.’ ಸಂತೃಪ್ತಿಕರ ಕೆಲಸ ಅವರಿಗಿರುವುದು. (ಯೆಶಾ. 65:21, 22) ದಬ್ಬಾಳಿಕೆ, ಬಡತನ, ಆಹಾರದ ಕೊರತೆ ಇರದು. (ಕೀರ್ತ. 72:13-16) ಜನರನ್ನು ತನ್ನ ಮೋಸದ ಬಲೆಯಲ್ಲಿ ಹಾಕಿಕೊಳ್ಳಲು ಮಹಾ ಬಾಬೆಲ್‌ ಅಲ್ಲಿರದು. (ಪ್ರಕ. 18:8, 21) ಮೃತರು ಪುನರುತ್ಥಾನಗೊಳಿಸಲ್ಪಡುವರು. ಸದಾ ಜೀವಿಸುವ ಅವಕಾಶ ಅವರಿಗೆ ಕೊಡಲಾಗುವುದು. (ಯೆಶಾ. 25:8; ಅ. ಕಾ. 24:15) ಯೆಹೋವನಿಗೆ ಸಮರ್ಪಣೆಯನ್ನು ಮಾಡಿಕೊಂಡಿರುವವರಿಗೆ ಎಂಥ ರೋಮಾಂಚಕ ಭವಿಷ್ಯತ್ತಿದೆ! ಅಂಥ ಭವಿಷ್ಯತ್ತು ನಮ್ಮದಾಗಬೇಕಾದರೆ ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ಇರಬೇಕು, ದೇವರ ಸಂಘಟನೆಯ ಜೊತೆಜೊತೆಯಲ್ಲೇ ಸಾಗುತ್ತಿರಬೇಕು.

ಪರದೈಸಿನಲ್ಲಿ ನೀವು ನಿಮ್ಮನ್ನೇ ನೋಡಬಲ್ಲಿರಾ? (ಪ್ಯಾರ 16 ನೋಡಿ)

17. ಯೆಹೋವನ ಆರಾಧನೆ ಮತ್ತು ಆತನ ಸಂಘಟನೆಯ ಕಡೆಗೆ ನಮಗೆ ಯಾವ ಮನೋಭಾವ ಇರಬೇಕು?

17 ಈ ಲೋಕದಲ್ಲಿರುವ ಸೈತಾನನ ವ್ಯವಸ್ಥೆಯು ಬೇಗನೆ ಅಂತ್ಯಗೊಳ್ಳಲಿದೆ. ಆದ್ದರಿಂದ ನಾವು ನಂಬಿಕೆಯಲ್ಲಿ ಸ್ಥಿರರಾಗಿ ಉಳಿಯೋಣ. ದೇವರು ಮಾಡಿರುವ ಆರಾಧನಾ ಏರ್ಪಾಡಿಗಾಗಿ ಮನದಾಳದಿಂದ ಗಣ್ಯತೆ ತೋರಿಸೋಣ. ಕೀರ್ತನೆಗಾರ ದಾವೀದನು ಇಂಥದ್ದೇ ಮನೋಭಾವ ತೋರಿಸಿದನು. “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.” (ಕೀರ್ತ. 27:4) ನಾವು ಪ್ರತಿಯೊಬ್ಬರು ದೇವರಿಗೆ ಅಂಟಿಕೊಂಡಿರೋಣ. ಆತನ ಜನರೊಂದಿಗೆ ಮತ್ತು ಆತನ ಸಂಘಟನೆಯ ಜೊತೆಜೊತೆಯಲ್ಲೇ ಮುಂದೆ ಸಾಗುತ್ತಿರೋಣ.