ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರೂ ಇಬ್ಬರು ಯಜಮಾನರ ಸೇವೆಮಾಡಲಾರರು

ಯಾರೂ ಇಬ್ಬರು ಯಜಮಾನರ ಸೇವೆಮಾಡಲಾರರು

“ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು . . . ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.”—ಮತ್ತಾ. 6:24.

1-3. (ಎ) ಇಂದು ಹಣಕಾಸಿನ ವಿಷಯದಲ್ಲಿ ಅನೇಕರು ಯಾವ ಸಮಸ್ಯೆ ಎದುರಿಸುತ್ತಾರೆ? (ಬಿ) ಅದನ್ನು ಬಗೆಹರಿಸಲು ಕೆಲವರು ಏನು ಮಾಡುತ್ತಾರೆ? (ಮೇಲಿರುವ ಚಿತ್ರ ನೋಡಿ.) (ಸಿ) ಮಕ್ಕಳನ್ನು ಬೆಳೆಸುವುದರ ಬಗ್ಗೆ ಅವರಿಗೆ ಯಾವ ಚಿಂತೆ ಕಾಡುತ್ತದೆ?

“ನನ್ನ ಗಂಡ ಜೇಮ್ಸ್‌ ದಿನವಿಡೀ ಕಷ್ಟಪಟ್ಟು ದುಡಿದು ಸುಸ್ತಾಗಿ ಮನೆಗೆ ಬರುತ್ತಿದ್ದರು. ಅವರಿಗೆ ಸಿಗುವ ಸಂಬಳ ಮನೆ ಖರ್ಚಿಗೇ ಸರಿಹೋಗುತ್ತಿತ್ತು” ಎನ್ನುತ್ತಾಳೆ ಮರ್ಲೀನ್‌. * ಅವಳು ಮುಂದುವರಿಸಿ ಹೇಳುವುದು: “ಅವರ ಭಾರವನ್ನು ನಾನು ಸ್ವಲ್ಪ ಕಡಿಮೆ ಮಾಡಬೇಕು ಅಂದುಕೊಂಡೆ. ನನ್ನ ಮಗ ಜಿಮ್ಮೀಗೆ ಬೇರೆ ಮಕ್ಕಳ ಹತ್ತಿರ ಇದ್ದಂಥ ಒಳ್ಳೊಳ್ಳೆ ವಸ್ತುಗಳನ್ನು ಕೊಡಿಸಬೇಕು ಅಂತ ಬಯಸಿದೆ.” ಕುಟುಂಬದಲ್ಲಿ ಬೇರೆಯವರಿಗೆ ನೆರವು ನೀಡುವ ಮತ್ತು ಭವಿಷ್ಯಕ್ಕಾಗಿ ಹಣ ಕೂಡಿಸಿಡುವ ಆಸೆ ಕೂಡ ಮರ್ಲೀನ್‌ಗಿತ್ತು. ಈಕೆಯ ಸ್ನೇಹಿತರಲ್ಲಿ ಅನೇಕರು ಹೆಚ್ಚು ಹಣ ಗಳಿಸಲು ಈಗಾಗಲೇ ಹೊರದೇಶಗಳಿಗೆ ಹೋಗಿ ದುಡಿಯುತ್ತಿದ್ದರು. ತಾನೂ ಅವರಂತೆ ವಿದೇಶಕ್ಕೆ ಹೋಗುವುದರ ಬಗ್ಗೆ ಯೋಚಿಸಿದಳು. ಆದರೆ ಹೋಗೋದಾ ಬೇಡವಾ ಎಂಬ ಗೊಂದಲ ಅವಳಿಗೆ. ಯಾಕೆ?

2 ಮರ್ಲೀನ್‌ಗೆ ಕುಟುಂಬ ಅಂದರೆ ತುಂಬ ಪ್ರೀತಿ. ಕುಟುಂಬದಲ್ಲೂ ಒಳ್ಳೇ ಆಧ್ಯಾತ್ಮಿಕ ರೂಢಿಗಳಿದ್ದವು. ಇದನ್ನೆಲ್ಲ ಬಿಟ್ಟುಹೋಗುವ ಯೋಚನೆ ಅವಳಲ್ಲಿ ಭಯ ಹುಟ್ಟಿಸಿತು. ‘ಆದರೂ ನಮ್ಮ ಸಹೋದರ-ಸಹೋದರಿಯರಲ್ಲೇ ಎಷ್ಟೋ ಮಂದಿ ಹಾಗೆ ಹೋಗಿದ್ದಾರಲ್ಲಾ, ಅವರ ಕುಟುಂಬಗಳು ಯೆಹೋವನಿಂದೇನೂ ದೂರ ಹೋಗಿಲ್ಲ’ ಅಂದುಕೊಂಡಳು ಅವಳು. ಅದೇ ಸಮಯದಲ್ಲಿ, ತಾನು ವಿದೇಶದಲ್ಲಿದ್ದು ಮಗ ಜಿಮ್ಮೀಯನ್ನು ಬೆಳೆಸುವುದು ಹೇಗೆ? ಇಂಟರ್‌ನೆಟ್‌ ಮೂಲಕ ಅವನನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳಸಲು ಆಗುತ್ತದಾ? ಎಂಬ ಚಿಂತೆ ಕೂಡ ಅವಳನ್ನು ಕಾಡಿತು.—ಎಫೆ. 6:4.

3 ಮರ್ಲೀನ್‌ ಬೇರೆಯವರ ಹತ್ತಿರ ಸಲಹೆ ಕೇಳಿದಳು. ಅವಳು ದೂರ ಹೋಗಿ ದುಡಿಯಬೇಕೆಂದು ಗಂಡ ಜೇಮ್ಸ್‌ ಬಯಸಲಿಲ್ಲ. ಹಾಗಂತ ತಡೆಯಲೂ ಇಲ್ಲ. ಸಭೆಯಲ್ಲಿರುವ ಹಿರಿಯರು ಮತ್ತು ಇತರರು ಹೋಗದಂತೆ ಸಲಹೆ ಕೊಟ್ಟರು. ಆದರೆ ಕೆಲವು  ಸಹೋದರಿಯರು ಹೋಗುವಂತೆ ಉತ್ತೇಜಿಸಿದರು. “ನಿನ್ನ ಕುಟುಂಬದ ಮೇಲೆ ನಿನಗೆ ಪ್ರೀತಿ ಇದ್ದರೆ ಹೋಗಿ ದುಡಿ. ಅದರಲ್ಲೇನೂ ತಪ್ಪಿಲ್ಲ, ಅಲ್ಲೂ ನೀನು ಯೆಹೋವನ ಸೇವೆ ಮಾಡಬಹುದು” ಎಂದರವರು. ಎಷ್ಟೋ ಗೊಂದಲ ಚಿಂತೆ ಅವಳಿಗಿದ್ದರೂ ಮರ್ಲೀನ್‌ ಜೇಮ್ಸ್‌ಗೂ ಜಿಮ್ಮೀಗೂ ಮುದ್ದಿಟ್ಟು, ಬಾಯ್‌ ಹೇಳಿ ವಿದೇಶಕ್ಕೆ ಹೊರಟಳು. “ತುಂಬ ಸಮಯ ಅಲ್ಲಿ ಇರುವುದಿಲ್ಲ, ಬೇಗ ಬಂದುಬಿಡುತ್ತೇನೆ” ಎಂದು ಮಾತುಕೊಟ್ಟಳು. *

ಕುಟುಂಬ ಜವಾಬ್ದಾರಿಗಳು ಮತ್ತು ಬೈಬಲ್‌ ತತ್ವಗಳು

4. (ಎ) ಅನೇಕರು ಹೊರದೇಶಗಳಲ್ಲಿ ದುಡಿಯಲು ಹೋಗುವುದು ಯಾಕೆ? (ಬಿ) ಹಾಗೆ ಹೋದವರ ಮಕ್ಕಳನ್ನು ಯಾರು ನೋಡಿಕೊಳ್ಳಬೇಕಾಗುತ್ತದೆ?

4 ಬಡತನದ ಬೇಗೆಯಲ್ಲಿ ತನ್ನ ಸೇವಕರು ಬೆಂದುಹೋಗಬೇಕೆಂದು ಯೆಹೋವನು ಬಯಸುವುದಿಲ್ಲ. (ಕೀರ್ತ. 37:25; ಜ್ಞಾನೋ. 30:8) ಬಡತನದಿಂದ ಹೊರಬರಲು ವಿದೇಶಕ್ಕೆ ಹೋಗುವುದು ಇದೀಗ ಬಂದ ವಿಧಾನವೇನಲ್ಲ. ಒಮ್ಮೆ ಯಾಕೋಬನು ಬರಗಾಲ ಬಂದಾಗ ತನ್ನ ಕುಟುಂಬವನ್ನು ಹಸಿವಿನಿಂದ ಸಾಯದಂತೆ ಕಾಪಾಡಲು ಆಹಾರ ತರಲಿಕ್ಕಾಗಿ ದೂರದ ಈಜಿಪ್ಟಿಗೆ ಮಕ್ಕಳನ್ನು ಕಳುಹಿಸಿದನು. * (ಆದಿ. 42:1, 2) ಆದರೆ ಇಂದು ಹೊರದೇಶಗಳಿಗೆ ಹೋಗುವವರಲ್ಲಿ ಹೆಚ್ಚಿನವರ ಕುಟುಂಬದ ಪರಿಸ್ಥಿತಿ ಹೊಟ್ಟೆಗೆ ಇಲ್ಲದಷ್ಟು ಗಂಭೀರವಾಗಿಲ್ಲ. ಪ್ರಾಯಶಃ ಅವರ ಮೇಲೆ ಸಾಲದ ಹೊರೆ ಇರಬಹುದು. ಅವರಿರುವ ಪ್ರದೇಶದಲ್ಲಿ ಹೆಚ್ಚು ಸಂಬಳ ಸಿಗಲಿಕ್ಕಿಲ್ಲ. ಇನ್ನು ಕೆಲವರು ತಮ್ಮ ಮನೆಮಂದಿ ಆರಾಮದಾಯಕ ಜೀವನ ನಡೆಸಬೇಕು, ಒಳ್ಳೊಳ್ಳೆ ವಸ್ತುಗಳನ್ನು ಖರೀದಿಸಬೇಕೆಂದು ಬಯಸುತ್ತಿರಬಹುದು. ಹಾಗಾಗಿ ಅವರು ಸಂಗಾತಿಯನ್ನು, ಮಕ್ಕಳನ್ನು ಬಿಟ್ಟು ಹೊರದೇಶಕ್ಕೆ ಅಥವಾ ಸ್ವದೇಶದಲ್ಲೇ ಬೇರೆ ಸ್ಥಳಕ್ಕೆ ಹೋಗಿ ದುಡಿಯುವ ನಿರ್ಧಾರಕ್ಕೆ ಬರುತ್ತಾರೆ. ಅನೇಕವೇಳೆ ಅಂಥ ಸಂದರ್ಭದಲ್ಲಿ ತಮ್ಮ ಎಳೆಯ ಮಕ್ಕಳನ್ನು ಬೆಳೆಸುವ ಪೂರ್ತಿ ಜವಾಬ್ದಾರಿಯನ್ನು ಸಂಗಾತಿಯ ಮೇಲೆ ಹಾಕಿಹೋಗುತ್ತಾರೆ. ಅಥವಾ ಅವರನ್ನು ಬೆಳೆದ ಮಕ್ಕಳ ಹತ್ತಿರ, ತಮ್ಮ ತಂದೆ-ತಾಯಿ, ಸಂಬಂಧಿಕರು ಅಥವಾ ಸ್ನೇಹಿತರ ಹತ್ತಿರ ಬಿಟ್ಟು ಹೋಗುತ್ತಾರೆ. ಸಂಗಾತಿ, ಮಕ್ಕಳನ್ನು ಬಿಟ್ಟು ಹೋಗುವುದು ಮನಸ್ಸಿಗೆ ನೋವು ತರುತ್ತದಾದರೂ ಬೇರೆ ದಾರಿಯೇ ಇಲ್ಲವೆಂಬುದು ಅವರೆಣಿಕೆ.

5, 6. (ಎ) ಯಾವುದರಿಂದ ಮಾತ್ರ ನಿಜ ಸಂತೋಷ ಮತ್ತು ಭದ್ರತೆ ಸಿಗುತ್ತದೆಂದು ಯೇಸು ಕಲಿಸಿದನು? (ಬಿ) ಯಾವ ಭೌತಿಕ ವಿಷಯಗಳಿಗಾಗಿ ಪ್ರಾರ್ಥಿಸುವಂತೆ ಯೇಸು ಕಲಿಸಿದನು? (ಸಿ) ಯೆಹೋವನು ನಮ್ಮನ್ನು ಹೇಗೆ ಆಶೀರ್ವದಿಸುತ್ತಾನೆ?

5 ಯೇಸುವಿನ ದಿನಗಳಲ್ಲಿ ಸಹ ಅನೇಕರು ಬಡವರಾಗಿದ್ದರು. (ಮಾರ್ಕ 14:7) ಸಾಕಷ್ಟು ದುಡ್ಡಿದ್ದರೆ ಸಂತೋಷವಾಗಿ ಸುರಕ್ಷಿತವಾಗಿ ಇರಸಾಧ್ಯವೆಂದು ಅವರೂ ನೆನಸಿರಬಹುದು. ಆದರೆ ಇಂದು ಇದ್ದು ನಾಳೆ ಇಲ್ಲದೆ ಹೋಗುವ ದುಡ್ಡಿನ ಮೇಲೆ ನಂಬಿಕೆಯಿಡದೆ ಶಾಶ್ವತ ಆಶೀರ್ವಾದಗಳನ್ನು ಸುರಿಸುವ ಯೆಹೋವನ ಮೇಲೆ ಆತುಕೊಳ್ಳುವಂತೆ ಯೇಸು ಉತ್ತೇಜಿಸಿದನು. ಪರ್ವತ ಪ್ರಸಂಗದಲ್ಲಿ ಆತನು ಸ್ಪಷ್ಟವಾಗಿ ವಿವರಿಸಿದಂತೆ, ನಿಜ ಸಂತೋಷ ಮತ್ತು ಭದ್ರತೆ ಭೌತಿಕ ವಸ್ತುಗಳಿಂದಾಗಲಿ ಸ್ವಂತ ಪ್ರಯತ್ನದಿಂದಾಗಲಿ ಸಿಗುವುದಿಲ್ಲ, ನಮ್ಮ ತಂದೆಯಾದ ಯೆಹೋವನೊಟ್ಟಿಗಿನ ಆಪ್ತತೆಯಿಂದ ಸಿಗುತ್ತದೆ.

6 ಯೇಸು ಮಾದರಿ ಪ್ರಾರ್ಥನೆಯಲ್ಲಿ ತುಂಬ ಹಣಕ್ಕಾಗಿ ಪ್ರಾರ್ಥಿಸಲು ಕಲಿಸಲಿಲ್ಲ, ಬದಲಿಗೆ ‘ಈ ಹೊತ್ತಿನ ಆಹಾರಕ್ಕಾಗಿ’ ಅಂದರೆ ದಿನನಿತ್ಯದ ಅಗತ್ಯಗಳಿಗಾಗಿ ಪ್ರಾರ್ಥಿಸುವಂತೆ ಕಲಿಸಿದನು. ಅನಂತರ ಆತನು ತನ್ನ ಕೇಳುಗರಿಗೆ ನೇರವಾಗಿ ಹೇಳಿದ್ದು: “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ . . . ಆದರೆ ಸ್ವರ್ಗದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ.” (ಮತ್ತಾ. 6:9, 11, 19, 20) ಯೆಹೋವ ದೇವರು ನಮಗೆ ಮಾತು ಕೊಟ್ಟಿರುವಂತೆಯೇ ನಮ್ಮನ್ನು ಆಶೀರ್ವದಿಸುತ್ತಾನೆ ಎಂದು ನಾವು ಭರವಸೆ ಇಡಬಲ್ಲೆವು. ಆತನು ಆಶೀರ್ವದಿಸುತ್ತಾನೆ ಅಂದರೆ ಕೇವಲ ನಮ್ಮನ್ನು ಮೆಚ್ಚುತ್ತಾನೆ ಎಂದಷ್ಟೇ ಅಲ್ಲ. ನಮಗೆ ನಿಜವಾಗಿ ಅಗತ್ಯವಿರುವುದನ್ನು ಒದಗಿಸಲು ಕ್ರಿಯೆಗೈಯುತ್ತಾನೆ ಎಂದಾಗಿದೆ. ಹೌದು, ನಿಜ ಸಂತೋಷ ಭದ್ರತೆ ನಮಗೆ ಸಿಗುವುದು ಹಣ-ಆಸ್ತಿಯಿಂದ ಅಲ್ಲ, ನಮ್ಮ ಕಾಳಜಿಭರಿತ ತಂದೆಯಾಗಿರುವ ಯೆಹೋವನಲ್ಲಿ ಭರವಸೆ ಇಡುವುದರಿಂದ ಮಾತ್ರ!—ಮತ್ತಾಯ 6:24, 25, 31-34 ಓದಿ.

7. (ಎ) ಮಕ್ಕಳನ್ನು ಬೆಳೆಸುವ ನೇಮಕವನ್ನು ಯೆಹೋವನು ಯಾರಿಗೆ ಕೊಟ್ಟಿದ್ದಾನೆ? (ಬಿ) ತಂದೆತಾಯಿ ಇಬ್ಬರೂ ಸೇರಿ ಮಕ್ಕಳನ್ನು ಬೆಳೆಸಬೇಕು ಯಾಕೆ?

7 ‘ದೇವರ ನೀತಿಯನ್ನು ಮೊದಲು ಹುಡುಕುವುದರಲ್ಲಿ’ ಕುಟುಂಬ ಜವಾಬ್ದಾರಿಗಳನ್ನು ಯೆಹೋವನು ಬಯಸುವಂಥ ರೀತಿಯಲ್ಲಿ ನಿರ್ವಹಿಸುವುದು ಸೇರಿದೆ. ಮೋಶೆಯ ಧರ್ಮಶಾಸ್ತ್ರದಲ್ಲಿನ ತತ್ವವೊಂದು ಇಂದಿನ ಕ್ರೈಸ್ತರಿಗೂ ಅನ್ವಯಿಸುತ್ತದೆ. ಅದೇನೆಂದರೆ, ಮಕ್ಕಳಿಗೆ ಹೆತ್ತವರೇ ಖುದ್ದಾಗಿ ಆಧ್ಯಾತ್ಮಿಕ ತರಬೇತಿ ನೀಡಬೇಕು. (ಧರ್ಮೋಪದೇಶಕಾಂಡ 6:6, 7 ಓದಿ.) ದೇವರು ಈ ನೇಮಕವನ್ನು ಅಜ್ಜ-ಅಜ್ಜಿಗಾಗಲಿ ಬೇರೆ ಯಾರಿಗೇ ಆಗಲಿ ಕೊಡದೆ ತಂದೆ-ತಾಯಿಗೇ ಕೊಟ್ಟಿದ್ದಾನೆ. ರಾಜ ಸೊಲೊಮೋನನು ಬರೆದದ್ದು: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” (ಜ್ಞಾನೋ. 1:8) ಅದರರ್ಥ ಮಕ್ಕಳಿಗೆ ಮಾರ್ಗದರ್ಶನೆ  ನೀಡಲು ಮತ್ತು ಕಲಿಸಲು ತಂದೆ-ತಾಯಿ ಇಬ್ಬರೂ ಅವರ ಜೊತೆಯಲ್ಲಿ ಇರಬೇಕು ಎನ್ನುವುದು ಯೆಹೋವನ ಇಚ್ಛೆಯಾಗಿದೆ. (ಜ್ಞಾನೋ. 31:10, 27, 28) ಹೆತ್ತವರಿಂದ ಮಕ್ಕಳು ಅನೇಕ ವಿಷಯಗಳನ್ನು ಕಲಿಯುತ್ತಾರೆ. ಮುಖ್ಯವಾಗಿ ಆಧ್ಯಾತ್ಮಿಕ ವಿಷಯಗಳನ್ನು. ಹೇಗೆ? ಪ್ರತಿದಿನ ಅಪ್ಪ-ಅಮ್ಮ ಯೆಹೋವನ ಬಗ್ಗೆ ಮಾತಾಡುವುದನ್ನು ಕೇಳಿಸಿಕೊಂಡು ಮತ್ತು ಆತನ ಸೇವೆಮಾಡುವುದನ್ನು ನೋಡಿ ಮಕ್ಕಳು ಕಲಿಯುತ್ತಾರೆ.

ನೆನಸಿರದ ಪರಿಣಾಮಗಳು

8, 9. (ಎ) ಹೆತ್ತವರಲ್ಲಿ ಒಬ್ಬರು ಕುಟುಂಬದಿಂದ ದೂರವಿರುವಲ್ಲಿ ಹೆಚ್ಚಾಗಿ ಯಾವೆಲ್ಲ ಸನ್ನಿವೇಶಗಳು ಎದುರಾಗುತ್ತವೆ? (ಬಿ) ಈ ರೀತಿ ಅಗಲಿರುವುದು ಭಾವನಾತ್ಮಕವಾಗಿ ಮತ್ತು ನೈತಿಕವಾಗಿ ಯಾವ ಅಪಾಯಗಳನ್ನು ತರುತ್ತದೆ?

8 ವಿದೇಶಕ್ಕೆ ಹೋಗಿ ದುಡಿಯಬೇಕೆಂದು ಯೋಚಿಸುವವರು ಮುಂದೆ ಯಾವೆಲ್ಲ ಸಮಸ್ಯೆಗಳು ಬರಬಹುದೆಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಆ ನಿರ್ಣಯ ತಮ್ಮ ಕುಟುಂಬವನ್ನು ಹೇಗೆಲ್ಲ ಬಾಧಿಸುತ್ತದೆಂದು ಮುಂಚೆಯೇ ತಿಳಿದುಕೊಳ್ಳಲು ಅವರಿಗೆ ಸಾಧ್ಯವಿಲ್ಲ. (ಜ್ಞಾನೋ. 22:3) * ಮರ್ಲೀನಳ ಉದಾಹರಣೆಯನ್ನೇ ಗಮನಿಸಿ. ಅಲ್ಲಿ ಹೋದದ್ದೇ ತಡ ಗಂಡ ಮಗನಿಂದ ದೂರವಿರುವ ನೋವು ಅವಳನ್ನು ತುಂಬ ಕಾಡತೊಡಗಿತು. ಇತ್ತ ಗಂಡನಿಗೂ ಮಗನಿಗೂ ಅದೇ ನೋವು. “ಅಮ್ಮ, ಯಾಕೆ ನನ್ನ ಬಿಟ್ಟು ಹೋದೆ?” ಎಂದು ಪುಟಾಣಿ ಜಿಮ್ಮೀ ಕೇಳುತ್ತಲೇ ಇದ್ದ. ಕೆಲವು ತಿಂಗಳಿಗೆಂದು ಹೊರ ದೇಶಕ್ಕೆ ಹೋದದ್ದು ವರ್ಷಗಳಾದವು. ಇದರಿಂದಾಗಿ ಕುಟುಂಬದಲ್ಲಾದ ಬದಲಾವಣೆಗಳು ಅವಳಿಗೆ ಆಘಾತ ತಂದವು. ಜಿಮ್ಮೀ ಅಮ್ಮನ ಹತ್ತಿರ ಮಾತಾಡುವುದನ್ನು ದಿನ ದಿನಕ್ಕೆ ಕಡಿಮೆಮಾಡಿದ. ಭಾವನೆಗಳನ್ನು ಹಂಚಿಕೊಳ್ಳುವುದನ್ನಂತೂ ಬಿಟ್ಟೇಬಿಟ್ಟ. ಮರ್ಲೀನ್‌ ಆ ಬಗ್ಗೆ ನೆನಪಿಸಿಕೊಂಡು ದುಃಖದಿಂದ ಹೇಳುವುದು: “ಅವನಿಗೆ ನನ್ನ ಮೇಲಿದ್ದ ಪ್ರೀತಿಯೇ ಹೊರಟು ಹೋಗಿತ್ತು.”

9 ಯಾವಾಗ ತಂದೆತಾಯಿ ಮತ್ತು ಮಕ್ಕಳು ಒಟ್ಟಿಗೆ ಇರುವುದಿಲ್ಲವೋ ಆಗ ಭಾವನಾತ್ಮಕವಾಗಿಯೂ ನೈತಿಕವಾಗಿಯೂ ಎಲ್ಲರೂ ಗಂಡಾಂತರದಲ್ಲಿರುತ್ತಾರೆ. * ಮಕ್ಕಳು ತುಂಬ ಚಿಕ್ಕವರಿರುವಾಗ ಹೆತ್ತವರು ತುಂಬ ಸಮಯ ಅವರಿಂದ ದೂರವಿದ್ದರೆ ಆಗುವ ಅಪಾಯ ತೀರಾ ಹೆಚ್ಚು. ಜಿಮ್ಮೀಗೆ ಮರ್ಲೀನ್‌, ‘ನಾನು ನಿನಗೋಸ್ಕರವೇ ದುಡಿಯುತ್ತಾ ಇದ್ದೇನೆ’ ಎಂದು ಹೇಳುತ್ತಿದ್ದಳು. ಆದರೆ ಜಿಮ್ಮೀಗೆ ಅಮ್ಮ ತನ್ನನ್ನು ತೊರೆದುಹೋಗಿದ್ದಾಳೆ ಎಂದನಿಸುತ್ತಿತ್ತು. ಆರಂಭದಲ್ಲಿ ಅಮ್ಮ ಇಲ್ಲವಲ್ಲ ಎಂದು ಕೊರಗಿದ ಜಿಮ್ಮೀ, ಸಮಯಾನಂತರ ಅಮ್ಮ ರಜೆಗೆ ಬಂದಾಗೆಲ್ಲ ಅಮ್ಮ ಯಾಕಾದರೂ ಬಂದಳೋ ಎಂದು ಬೇಸರಪಟ್ಟುಕೊಳ್ಳುತ್ತಿದ್ದ. ಅಪ್ಪಅಮ್ಮನಿಂದ ದೂರ ಬೆಳೆಯುತ್ತಿರುವ ಮಕ್ಕಳಿಗೆ ಸಾಮಾನ್ಯವಾಗಿ ಅನಿಸುವಂತೆಯೇ ಜಿಮ್ಮೀಗೂ, ತನ್ನ ಪ್ರೀತಿ ಮತ್ತು ವಿಧೇಯತೆಯನ್ನು ಪಡೆಯುವ ಹಕ್ಕು ತನ್ನ ತಾಯಿಗಿಲ್ಲ ಎಂದನಿಸಿತು.—ಜ್ಞಾನೋಕ್ತಿ 29:15 ಓದಿ.

ಇಂಟರ್‌ನೆಟ್‍ನಲ್ಲಿ ನಿಮ್ಮ ಮಗುವನ್ನು ನೀವು ಅಪ್ಪಿಕೊಳ್ಳಲು ಆಗುವುದಿಲ್ಲ (ಪ್ಯಾರ 10 ನೋಡಿ)

10. (ಎ) ಮಕ್ಕಳ ಜೊತೆ ಇರುವುದಕ್ಕೆ ಬದಲಿಯಾಗಿ ಉಡುಗೊರೆಗಳನ್ನು ಕಳುಹಿಸುವುದು ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ? (ಬಿ) ಹೆತ್ತವರಲ್ಲಿ ಒಬ್ಬರು ದೂರದಲ್ಲಿದ್ದು ಮಕ್ಕಳನ್ನು ಬೆಳೆಸಲು ಪ್ರಯತ್ನಿಸುವಾಗ ಯಾವುದರ ಕೊರತೆಯಾಗುತ್ತದೆ?

10 ಮಗನಿಗಿದ್ದ ತಾಯಿಯ ಪ್ರೀತಿಯ ಕೊರತೆಯನ್ನು ಹಣ ಉಡುಗೊರೆಗಳಿಂದ ಸರಿದೂಗಿಸಲು ಮರ್ಲೀನ್‌ ಪ್ರಯತ್ನಿಸುತ್ತಿದ್ದಳು. ಆದರೆ ನಿಜಾಂಶವೇನೆಂದರೆ ಅವಳು ತನ್ನ ಮಗನನ್ನು ದೂರ ಮಾಡಿಕೊಳ್ಳುತ್ತಿದ್ದಳು. ಅವಳಿಗೇ ಗೊತ್ತಿಲ್ಲದೆ ಮಗನಿಗೆ ಕುಟುಂಬ ಬಾಂಧವ್ಯಕ್ಕಿಂತ, ಆಧ್ಯಾತ್ಮಿಕತೆಗಿಂತ ಭೌತಿಕ ವಸ್ತುಗಳೇ ಮುಖ್ಯ ಅನ್ನೋದನ್ನು ಕಲಿಸುತ್ತಿದ್ದಳು. (ಜ್ಞಾನೋ. 22:6) “ಅಮ್ಮ ನೀನು ಬರಬೇಡ, ಗಿಫ್ಟ್‌ ಕಳಿಸುತ್ತಾ ಇರು ಸಾಕು” ಎನ್ನುತ್ತಿದ್ದ ಜಿಮ್ಮೀ. ಅನಂತರ ಮರ್ಲೀನ್‌ಗೆ ತಾನು ಮಗನನ್ನು ಪತ್ರ ಬರೆಯುವ ಮೂಲಕ,  ಫೋನ್‌, ವಿಡಿಯೋ ಚಾಟ್‌ ಮಾಡುವ ಮೂಲಕ ಬೆಳೆಸಲು ಆಗುವುದಿಲ್ಲ ಎಂದು ಚೆನ್ನಾಗಿ ಅರ್ಥವಾಯಿತು. ನೊಂದಮನದಿಂದ ಮರ್ಲೀನ್‌ ಹೇಳಿದ್ದು, “ಇಂಟರ್‌ನೆಟ್‍ನಲ್ಲಿ ಮಗುವನ್ನು ಅಪ್ಪಿಕೊಳ್ಳಲು ಆಗುವುದಿಲ್ಲ, ಮುದ್ದಿಟ್ಟು ಮಲಗಿಸಲೂ ಆಗುವುದಿಲ್ಲ.”

ನಿಮ್ಮ ಸಂಗಾತಿಯಿಂದ ದೂರವಿರುವುದಾದರೆ ಯಾವ ಅಪಾಯ ಎದುರಾಗಬಹುದು? (ಪ್ಯಾರ 11 ನೋಡಿ)

11. (ಎ) ಕೆಲಸಕ್ಕೆಂದು ಸಂಗಾತಿಯಿಂದ ದೂರ ಹೋಗಿ ನೆಲೆಸುವುದು ಅವರ ವಿವಾಹಬಂಧವನ್ನು ಹೇಗೆ ಬಾಧಿಸುತ್ತದೆ? (ಬಿ) ಮನೆಗೆ ತಿರುಗಿ ಹೋಗಬೇಕೆಂದು ಮರ್ಲೀನಳನ್ನು ಯಾವುದು ಮನಗಾಣಿಸಿತು?

11 ಯೆಹೋವನಿಂದ ಕೂಡ ಮರ್ಲೀನ್‌ ದೂರವಾಗುತ್ತಿದ್ದಳು. ಕ್ರೈಸ್ತ ಕೂಟಗಳ ಹಾಜರಿ, ಸೇವೆಯಲ್ಲಿ ಭಾಗವಹಿಸುವುದು ವಾರದಲ್ಲಿ ಒಂದು ದಿನಕ್ಕೆ ಸೀಮಿತವಾಯಿತು. ಕೆಲವೊಮ್ಮೆ ಅದೂ ತಪ್ಪುತ್ತಿತ್ತು. ಪತಿಯೊಂದಿಗಿನ ಸಂಬಂಧ ಕೂಡ ಬಾಧಿಸಲ್ಪಟ್ಟಿತು. ಕೆಲಸದ ಸ್ಥಳದಲ್ಲಿ ಧಣಿಯಿಂದ ಲೈಂಗಿಕ ಒತ್ತಡವನ್ನು ಪ್ರತಿರೋಧಿಸುತ್ತಾ ಇರಬೇಕಿತ್ತು. ಮರ್ಲೀನ್‌ ಮತ್ತು ಜೇಮ್ಸ್‌ ದೂರದೂರ ಇದ್ದದರಿಂದ ಬೇರೆಯವರೊಂದಿಗೆ ಭಾವನಾತ್ಮಕವಾಗಿ ಆಪ್ತರಾದರು. ಲೈಂಗಿಕ ಅನೈತಿಕತೆಯಲ್ಲಿ ಒಳಗೂಡುವ ಅಪಾಯವಿತ್ತು. ಅವರಿಬ್ಬರೂ ವ್ಯಭಿಚಾರ ಮಾಡಲಿಲ್ಲವಾದರೂ ಒಬ್ಬರಿಂದ ಒಬ್ಬರು ದೂರವಿರುವುದರಿಂದ ಬೈಬಲ್‌ ಸಲಹೆಗನುಸಾರ ಪರಸ್ಪರರ ಭಾವನಾತ್ಮಕ ಮತ್ತು ಲೈಂಗಿಕ ಅಗತ್ಯಗಳನ್ನು ಪೂರೈಸಲು ಆಗುತ್ತಿಲ್ಲವೆಂದು ಮರ್ಲೀನ್‌ ಮನಗಂಡಳು. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಬೇಕು ಎಂದನಿಸುವಾಗೆಲ್ಲ ಅದನ್ನು ಹೇಳಲು ಆಗಲಿಲ್ಲ. ಪರಸ್ಪರ ನೋಟ, ಮಂದಹಾಸ, ಮೃದುವಾದ ಕೈ ಸ್ಪರ್ಶ ಮತ್ತು ಪ್ರೀತಿಯ ಅಪ್ಪುಗೆಯನ್ನು ಆನಂದಿಸಲು ಆಗಲಿಲ್ಲ. ಅನ್ಯೋನ್ಯ “ಪ್ರೀತಿಯ ಅಭಿವ್ಯಕ್ತಿಗಳನ್ನು” ಅಥವಾ ಸಂಗಾತಿಗೆ “ಸಲ್ಲತಕ್ಕದ್ದನ್ನು” ಸಲ್ಲಿಸಲು ಆಗಲಿಲ್ಲ. (ಪರಮ. 1:2, NW; 1 ಕೊರಿಂ. 7:3, 5) ಮಗನ ಜೊತೆಗೂಡಿ ಯೆಹೋವನನ್ನು ಆರಾಧಿಸಲು ಅವರಿಂದ ಅಸಾಧ್ಯವಾಯಿತು. ಮರ್ಲೀನ್‌ ಹೀಗನ್ನುತ್ತಾಳೆ: “ಯೆಹೋವನ ಮಹಾ ದಿನವನ್ನು ನಾವು ಪಾರಾಗಲು ಕುಟುಂಬ ಆರಾಧನೆಯನ್ನು ನಿಯತವಾಗಿ ಮಾಡುವುದು ಅತ್ಯಗತ್ಯ ಎಂದು ಒಂದು ಅಧಿವೇಶನದಲ್ಲಿ ಕೇಳಿದಾಗ ಮನೆಗೆ ಹಿಂದಿರುಗಲೇಬೇಕು, ನಾನು ಆಧ್ಯಾತ್ಮಿಕವಾಗಿ ಚೇತರಿಸಿಕೊಳ್ಳಬೇಕು ಮತ್ತು ನನ್ನ ಕುಟುಂಬಬಂಧವನ್ನು ಪುನಃ ಕಟ್ಟಬೇಕು ಎಂದು ನಿರ್ಣಯಿಸಿದೆ.”

ಒಳ್ಳೇ ಸಲಹೆ ಮತ್ತು ಕೆಟ್ಟ ಸಲಹೆ

12. ಕುಟುಂಬದಿಂದ ದೂರವಿರುವವರಿಗೆ ಯಾವ ಬೈಬಲ್‌ ಸಲಹೆಯನ್ನು ಕೊಡಬಹುದು?

12 ಮನೆಗೆ ಹಿಂತಿರುಗಿ ಹೋಗಬೇಕೆಂದು ಮರ್ಲೀನ್‌ ನಿರ್ಧಾರ ತೆಗೆದುಕೊಂಡಾಗ ಕೆಲವರು ಒಳ್ಳೇ ಸಲಹೆ ಕೊಟ್ಟರು, ಇತರರು ಕೆಟ್ಟ ಸಲಹೆ ಕೊಟ್ಟರು. ಅಲ್ಲಿನ ಹಿರಿಯರು ಅವಳ ನಂಬಿಕೆ ಮತ್ತು ಧೈರ್ಯವನ್ನು ಮೆಚ್ಚಿದರು. ಆದರೆ ಇನ್ನಿತರರು ಅಂದರೆ ಅವಳ ಹಾಗೆ ಸಂಗಾತಿ ಹಾಗೂ ಕುಟುಂಬದಿಂದ ದೂರ ಇದ್ದವರು ಅವಳ ಒಳ್ಳೇ ನಿರ್ಧಾರವನ್ನು ಅನುಕರಿಸುವ ಬದಲು ಅವಳನ್ನು ತಡೆಯಲು ಪ್ರಯತ್ನಿಸಿದರು. ಅವರು ಅವಳಿಗೆ, “ತಿರುಗಿ ಹೋದರೆ ಮನೆ ಖರ್ಚಿಗೆಲ್ಲ ಏನು ಮಾಡ್ತೀಯಾ? ನೋಡು, ಸ್ವಲ್ಪ ದಿನದಲ್ಲೇ ನೀನು ವಾಪಸ್‌ ಇಲ್ಲಿಗೆ ಬಂದೇ ಬರುತ್ತೀ” ಎಂದರು. ಕ್ರೈಸ್ತರು ಈ ರೀತಿಯ ನಿರುತ್ತೇಜನದ ಮಾತುಗಳನ್ನಾಡುವ ಬದಲು ‘ಯುವ ಸ್ತ್ರೀಯರಿಗೆ ತಮ್ಮ ಗಂಡಂದಿರನ್ನು ಪ್ರೀತಿಸುವಂತೆ, ತಮ್ಮ ಮಕ್ಕಳನ್ನು ಪ್ರೀತಿಸುವಂತೆ, ಮನೆಯಲ್ಲಿ ಕೆಲಸಮಾಡುವಂತೆ’ ಅಂದರೆ ತಮ್ಮ ಕುಟುಂಬದೊಂದಿಗೆ ಕೆಲಸಮಾಡುವಂತೆ ಪ್ರೋತ್ಸಾಹಿಸಬೇಕು. ಆಗ ‘ದೇವರ ವಾಕ್ಯವು ದೂಷಣೆಗೆ ಗುರಿಯಾಗುವುದಿಲ್ಲ.’—ತೀತ 2:3-5 ಓದಿ.

13, 14. ಕುಟುಂಬದ ಇಷ್ಟಾನಿಷ್ಟಗಳನ್ನು ತಳ್ಳಿಹಾಕಿ ಯೆಹೋವನ ಚಿತ್ತವನ್ನು ಮಾಡಲು ನಂಬಿಕೆ ಬೇಕು ಏಕೆ? ಉದಾಹರಣೆ ಕೊಡಿ.

13 ವಿದೇಶಗಳಿಗೆ ಹೋಗಿ ದುಡಿಯುತ್ತಿರುವವರಲ್ಲಿ ಅನೇಕರು ಸಂಪ್ರದಾಯಗಳಿಗೆ, ಸಂಬಂಧಿಕರ ಮುಖ್ಯವಾಗಿ ಹೆತ್ತವರ ಇಚ್ಛೆಗಳಿಗೆ ಹೆಚ್ಚು ಪ್ರಮುಖತೆ ಕೊಡುವ ಸಂಸ್ಕೃತಿಯಲ್ಲಿ ಬೆಳೆದಿರುತ್ತಾರೆ. ಆದರೆ ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ಇಂಥ ಜನಪ್ರಿಯ ರೂಢಿಗಳು ಹಾಗೂ ಕುಟುಂಬದ ಇಚ್ಛೆಗಳಿಗೆ ಅನುಸಾರ ನಡೆಯದಿರಲು ಕ್ರೈಸ್ತನೊಬ್ಬನಿಗೆ ಬಲವಾದ ನಂಬಿಕೆ ಬೇಕು.

 14 ಕ್ಯಾರನ್‌ ಕಥೆಯನ್ನು ಅವಳ ಮಾತಲ್ಲೇ ಕೇಳಿ: “ನಾನೂ ನನ್ನ ಗಂಡ ವಿದೇಶದಲ್ಲಿ ಕೆಲಸ ಮಾಡುತ್ತಿದ್ದೆವು. ಅಲ್ಲಿ ನಮ್ಮ ಮಗ ಡಾನ್‌ ಹುಟ್ಟಿದ. ಸ್ವಲ್ಪ ಸಮಯ ಹಿಂದೆಯಷ್ಟೇ ನಾನು ಬೈಬಲ್‌ ಕಲಿಯಲು ಶುರುಮಾಡಿದ್ದೆ. ನಾವು ಸಾಕಷ್ಟು ಹಣ ಕೂಡಿಸುವ ವರೆಗೆ ಮಗುವನ್ನು ನನ್ನ ಅಪ್ಪಅಮ್ಮನ ಹತ್ತಿರ ಬಿಡುವಂತೆ ಕುಟುಂಬದವರೆಲ್ಲರು ಹೇಳಿದರು.” ಕ್ಯಾರನ್‌ ಏನು ಮಾಡಿದಳು? ಮಗನನ್ನು ತಾನೇ ಬೆಳೆಸುತ್ತೇನೆ ಎಂದು ಪಟ್ಟುಹಿಡಿದಳು. ಆಗ ಅವಳ ಸಂಬಂಧಿಕರು ಮತ್ತು ಗಂಡ ಸಹ, ಅವಳಿಗೆ ಕೆಲಸಕ್ಕೆ ಹೋಗಲು ಮನಸ್ಸಿಲ್ಲ ಅದಕ್ಕೆ ಹೀಗನ್ನುತ್ತಿದ್ದಾಳೆಂದು ನೆನಸಿ ಅವಳನ್ನು ಸೋಮಾರಿ ಎಂದು ಅಪಹಾಸ್ಯ ಮಾಡಿದರು. “ನಿಜ ಹೇಳಬೇಕಂದರೆ ಡಾನ್‍ನನ್ನು ಸ್ವಲ್ಪ ವರ್ಷಗಳ ವರೆಗೆ ನನ್ನ ಹೆತ್ತವರ ಬಳಿ ಬಿಟ್ಟರೆ ಏನು ಸಮಸ್ಯೆಯಾಗುತ್ತದೆ ಅಂತ ನನಗಾಗ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ಯೆಹೋವನು ಹೆತ್ತವರಿಗೆ ಅಂದರೆ ನಮಗೆ ನೇಮಿಸಿದ್ದಾನೆ ಅಂತ ನನಗೆ ಗೊತ್ತಿತ್ತು” ಎನ್ನುತ್ತಾಳೆ ಕ್ಯಾರನ್‌. ಅವಳು ಮತ್ತೆ ಗರ್ಭಿಣಿಯಾದಾಗ ಸತ್ಯದಲ್ಲಿಲ್ಲದ ಅವಳ ಗಂಡ ಗರ್ಭಪಾತ ಮಾಡಿಸುವಂತೆ ಹೇಳಿದನು. ಕ್ಯಾರನ್‌ ಈ ಮುಂಚೆ ತೆಗೆದುಕೊಂಡಿದ್ದ ಸರಿಯಾದ ನಿರ್ಣಯ ಅವಳ ನಂಬಿಕೆಯನ್ನು ಹೆಚ್ಚಿಸಿತ್ತು. ಅವಳು ಈ ಬಾರಿಯೂ ಯೆಹೋವನು ಮೆಚ್ಚುವುದನ್ನೇ ಮಾಡಿದಳು. ಈಗ ಅವರಿಗೆ ಹೇಗನಿಸುತ್ತಿದೆ? ಒಟ್ಟಾಗಿ ಉಳಿದದ್ದಕ್ಕಾಗಿ ಅವಳೂ ಅವಳ ಗಂಡ, ಮಕ್ಕಳೂ ಸಂತೋಷಪಡುತ್ತಾರೆ. ಒಂದುವೇಳೆ ಅವಳು ತನ್ನ ಒಂದು ಮಗುವನ್ನು ಅಥವಾ ಇಬ್ಬರನ್ನೂ ಬೇರೆಯವರ ಹತ್ತಿರ ಬಿಟ್ಟಿದ್ದಲ್ಲಿ ಸನ್ನಿವೇಶ ಬೇರೆಯೇ ಆಗಿರುತ್ತಿತ್ತು.

15, 16. (ಎ) ಹೆತ್ತವರಿಂದ ದೂರ ಬೆಳೆದ ಸಹೋದರಿಯ ಅನುಭವವನ್ನು ವಿವರಿಸಿ. (ಬಿ) ತನ್ನ ಮಗಳು ತನ್ನಿಂದ ದೂರ ಬೆಳೆಯಬಾರದೆಂದು ಅವಳೇಕೆ ನಿರ್ಣಯಿಸಿದಳು?

15 ವಿಕ್ಕೀ ಎಂಬ ಸಹೋದರಿ ಹೇಳುತ್ತಾಳೆ: “ಕೆಲವು ವರ್ಷ ಅಜ್ಜಿ ನನ್ನನ್ನು ಸಾಕಿದರು. ನನ್ನ ತಂಗಿ ಅಮ್ಮಅಪ್ಪನೊಟ್ಟಿಗೇ ಇದ್ದಳು. ವಾಪಸ್ಸು ನಾನು ಅಪ್ಪಅಮ್ಮನ ಹತ್ತಿರ ಹೋದಾಗ ಅವರ ಮೇಲೆ ನನಗಿದ್ದ ಭಾವನೆಗಳು ಬದಲಾಗಿದ್ದವು. ನನ್ನ ತಂಗಿ ಅಪ್ಪಅಮ್ಮ ಹತ್ತಿರ ಅವಳ ಭಾವನೆಗಳನ್ನು ಮನಸ್ಸುಬಿಚ್ಚಿ ಹೇಳುತ್ತಿದ್ದಳು. ಮುಜುಗರಪಡದೆ ಅಪ್ಪಿಕೊಳ್ಳುತ್ತಿದ್ದಳು. ಅವರ ಮಧ್ಯೆ ಆಪ್ತತೆಯಿತ್ತು. ಆದರೆ ನನ್ನ ವಿಷಯದಲ್ಲಿ ಹಾಗಿರಲಿಲ್ಲ. ಅಪ್ಪಅಮ್ಮ ಹತ್ತಿರವಿದ್ದರೂ ಮಧ್ಯೆ ಕಂದರವಿದ್ದಂತೆ ನನಗನಿಸುತ್ತಿತ್ತು. ದೊಡ್ಡವಳಾದ ಮೇಲೂ ನನ್ನ ಮನದಾಳದ ಭಾವನೆಗಳನ್ನು ಹೇಳಿಕೊಳ್ಳಲು ಕಷ್ಟವಾಗುತ್ತಿತ್ತು. ನಾನೂ ನನ್ನ ತಂಗಿ ಅಪ್ಪಅಮ್ಮನಿಗೆ ವಯಸ್ಸಾದಾಗ ನೋಡಿಕೊಳ್ಳುತ್ತೇವೆ ಅಂತ ಮಾತುಕೊಟ್ಟಿದ್ದೇವೆ. ನಾನದನ್ನು ಹೆಚ್ಚಿನಮಟ್ಟಿಗೆ ಕರ್ತವ್ಯ ಎಂದು ನೆನಸಿ ಮಾಡುವೆ. ಆದರೆ ನನ್ನ ತಂಗಿ ಅದನ್ನು ಅವರ ಮೇಲಿರುವ ಪ್ರೀತಿಯಿಂದ ಮಾಡುವಳು.

16 “ನನ್ನ ತಾಯಿ ನನ್ನನ್ನು ಹೇಗೆ ಅಜ್ಜಿ ಹತ್ತಿರ ಬಿಟ್ಟರೋ ಹಾಗೆಯೇ ಈಗ ನನ್ನ ಮಗಳನ್ನೂ ತಮ್ಮ ಹತ್ತಿರ ಬಿಡುವಂತೆ ಹೇಳಿದರು. ಆದರೆ ನಾನದನ್ನು ನಯವಾಗಿ ನಿರಾಕರಿಸಿದೆ. ನನ್ನ ಯಜಮಾನರು ಮತ್ತು ನಾನು ಯೆಹೋವನು ಬಯಸುವಂಥ ರೀತಿಯಲ್ಲಿ ನಮ್ಮ ಮಗಳನ್ನು ಬೆಳೆಸಲು ಬಯಸುತ್ತೇವೆ. ಏಕೆಂದರೆ ಮುಂದೆ ನಮ್ಮ ಮತ್ತು ಮಗಳ ಮಧ್ಯೆ ಅಂತರ ಬರಬಾರದು ಎನ್ನುವದೇ ನಮ್ಮ ಆಸೆ.” ಹಣಕ್ಕಿಂತ ಮತ್ತು ಕುಟುಂಬದ ಇಷ್ಟಾನಿಷ್ಟಗಳಿಗಿಂತ ಯೆಹೋವನಿಗೂ ಆತನ ತತ್ವಗಳಿಗೂ ಮಹತ್ವ ಕೊಟ್ಟಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿಕ್ಕೀ ಅರಿತಿದ್ದಾಳೆ. ಯೇಸು ನೇರವಾಗಿ ಎಚ್ಚರಿಸಿದ್ದು: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು” ಅಂದರೆ ದೇವರನ್ನೂ ಅದೇ ಸಮಯದಲ್ಲಿ ಐಶ್ವರ್ಯವನ್ನೂ ಸೇವಿಸಲಾರನು.—ಮತ್ತಾ. 6:24; ವಿಮೋ. 23:2.

ಯೆಹೋವನು ನಮ್ಮ ಪ್ರಯಾಸವನ್ನು “ಸಫಲ”ಗೊಳಿಸುವನು

17, 18. (ಎ) ಕ್ರೈಸ್ತರು ಯಾವತ್ತೂ ಕಂಗಾಲಾಗುವ ಅವಶ್ಯಕತೆಯಿಲ್ಲ ಯಾಕೆ? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

17 ನಾವು ದೇವರ ರಾಜ್ಯವನ್ನು ಮತ್ತು ಆತನ ನೀತಿಯನ್ನು ಮೊದಲು ಹುಡುಕುವುದಾದರೆ ನಮಗೆ ಅವಶ್ಯವಿರುವ ಎಲ್ಲವನ್ನು ಒದಗಿಸುವೆನೆಂದು ನಮ್ಮ ತಂದೆಯಾಗಿರುವ ಯೆಹೋವನು ಮಾತುಕೊಟ್ಟಿದ್ದಾನೆ. (ಮತ್ತಾ. 6:33) ಹಾಗಾಗಿ ನಿಜಕ್ರೈಸ್ತರಾದ ನಾವು ‘ಬೇರೆ ದಾರಿಯೇ ಇಲ್ಲ’ ಎಂದು ಯಾವತ್ತೂ ಕಂಗಾಲಾಗಬೇಕಿಲ್ಲ. ಎಂಥದ್ದೇ ಸವಾಲು ಬರಲಿ ನಾವು ಬೈಬಲ್‌ ತತ್ವಗಳನ್ನು ಗಾಳಿಗೆ ತೂರದೆ ಆ ಸನ್ನಿವೇಶದಿಂದ ‘ತಪ್ಪಿಸಿಕೊಳ್ಳುವ ಮಾರ್ಗವನ್ನು’ ಯೆಹೋವನು ತೋರಿಸಿಯೇ ತೋರಿಸುತ್ತಾನೆ. (1 ಕೊರಿಂಥ 10:13 ಓದಿ.) ನಾವು ಯಾವಾಗ ಯೆಹೋವನಿಗಾಗಿ ‘ಕಾದಿರುತ್ತೇವೋ’ ಮತ್ತು ಆತನ ವಿವೇಕ, ಮಾರ್ಗದರ್ಶನೆಗಾಗಿ ಪ್ರಾರ್ಥಿಸುತ್ತಾ ಆತನ ನಿಯಮ, ತತ್ವಗಳನ್ನು ಪಾಲಿಸುತ್ತಾ ಆತನಲ್ಲಿ ‘ಭರವಸೆ ಇಡುತ್ತೇವೋ’ ಆಗ ಆತನೇ ನಮ್ಮ ಜೀವನ ಬಂಡಿಯನ್ನು “ಸಾಗಿಸುವನು.” (ಕೀರ್ತ. 37:5, 7) ನಮ್ಮ ನಿಜ ಯಜಮಾನನಾದ ಯೆಹೋವನೊಬ್ಬನನ್ನೇ ಸೇವಿಸಲು ನಾವು ಪಡುವ ಪ್ರಯಾಸವನ್ನು ಆತನು ಖಂಡಿತ ಆಶೀರ್ವದಿಸುವನು. ಆತನಿಗೆ ನಾವು ಪ್ರಥಮ ಸ್ಥಾನ ಕೊಡುವಾಗ ನಮ್ಮ ಜೀವನವನ್ನು “ಸಫಲ”ಗೊಳಿಸುವನು.—ಆದಿಕಾಂಡ 39:3 ಹೋಲಿಸಿ.

18 ಕುಟುಂಬದಿಂದ ದೂರವಿದ್ದದರಿಂದ ಆದ ಹಾನಿಯನ್ನು ಸರಿಪಡಿಸುವುದು ಹೇಗೆ? ದೂರ ಹೋಗದೆ ಕುಟುಂಬದ ಅಗತ್ಯಗಳನ್ನು ಪೂರೈಸಲು ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು? ಈ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಇತರರನ್ನು ನಾವು ಪ್ರೀತಿಪೂರ್ವಕವಾಗಿ ಹೇಗೆ ಉತ್ತೇಜಿಸಬಹುದು? ಈ ಪ್ರಶ್ನೆಗಳನ್ನು ಮುಂದಿನ ಲೇಖನ ಉತ್ತರಿಸುವುದು.

^ ಪ್ಯಾರ. 1 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 3 ಈ ಲೇಖನದಲ್ಲಿ, ಕೆಲಸಕ್ಕೆಂದು ಹೆಂಡತಿಯು ವಿದೇಶಕ್ಕೆ ಹೋಗುವುದರ ಬಗ್ಗೆ ಹೇಳಿರುವುದಾದರೂ ಇದರಲ್ಲಿ ಕೊಡಲಾಗಿರುವ ವಿಷಯಗಳು ಗಂಡಹೆಂಡತಿಯರಿಬ್ಬರಿಗೂ ಅನ್ವಯಿಸುತ್ತವೆ.

^ ಪ್ಯಾರ. 4 ಪ್ರತಿಸಾರಿ ಈಜಿಪ್ಟಿಗೆ ಹೋದಾಗ ಯಾಕೋಬನ ಪುತ್ರರು ಕುಟುಂಬದಿಂದ ಮೂರಕ್ಕಿಂತ ಹೆಚ್ಚು ವಾರ ದೂರವಿದ್ದಿರಲಿಕ್ಕಿಲ್ಲ. ಅನಂತರ ಯಾಕೋಬ ಮತ್ತು ಅವನ ಪುತ್ರರು ಈಜಿಪ್ಟಿಗೆ ಸ್ಥಳಾಂತರಿಸಿದಾಗ ತಮ್ಮೊಂದಿಗೆ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋದರು.—ಆದಿ. 46:6, 7.

^ ಪ್ಯಾರ. 8 ಫೆಬ್ರವರಿ 2013ರ ಎಚ್ಚರ!ದಲ್ಲಿ (ಇಂಗ್ಲಿಷ್‌) “ವಲಸೆಹೋಗುವುದು—ಕನಸುಗಳು ಮತ್ತು ನಿಜಾಂಶಗಳು” ಎಂಬ ಲೇಖನ ನೋಡಿ.

^ ಪ್ಯಾರ. 9 ಬೇರೆಬೇರೆ ದೇಶಗಳಿಂದ ಬಂದ ವರದಿ ತಿಳಿಸುವಂತೆ ಮಕ್ಕಳನ್ನು ಅಥವಾ ಸಂಗಾತಿಯನ್ನು ಬಿಟ್ಟು ಕೆಲಸಕ್ಕೆಂದು ವಿದೇಶಗಳಿಗೆ ಹೋಗಿರುವುದು ಗಂಭೀರ ಸಮಸ್ಯೆಗಳನ್ನು ತಂದೊಡ್ಡಿದೆ. ದಂಪತಿಯಲ್ಲಿ ಒಬ್ಬರು ಅಥವಾ ಇಬ್ಬರೂ ವ್ಯಭಿಚಾರಗೈದಿದ್ದಾರೆ. ಸಲಿಂಗಕಾಮದಲ್ಲಿ, ಅಗಮ್ಯಗಮನದಲ್ಲಿ ಒಳಗೂಡಿದ್ದಾರೆ. ಮಕ್ಕಳ ವಿಷಯದಲ್ಲಿಯಾದರೋ ಅವರ ವರ್ತನೆಯಲ್ಲಿ ಬದಲಾವಣೆ, ಓದಿನಲ್ಲಿ ಹಿಂದೆ, ಸಿಟ್ಟು, ಚಿಂತೆ-ಕಳವಳ, ಖಿನ್ನತೆ, ಆತ್ಮಹತ್ಯೆಯ ಯೋಚನೆಯೂ ಕಂಡುಬಂದಿದೆ.