ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಜೀವನ ಕಥೆ

ಪೂರ್ಣಸಮಯದ ಸೇವೆ ತೆರೆದಿಟ್ಟ ಸೇವಾಸುಯೋಗಗಳು

ಪೂರ್ಣಸಮಯದ ಸೇವೆ ತೆರೆದಿಟ್ಟ ಸೇವಾಸುಯೋಗಗಳು

ಪೂರ್ಣಸಮಯದ ಸೇವೆಯಲ್ಲಿ ಕಳೆದಿರುವ 65 ವರ್ಷಗಳ ಕುರಿತು ನೆನಸುವಾಗ ನನ್ನ ಜೀವನ ಆನಂದದಿಂದ ತುಂಬಿದೆ ಎಂದು ನಾನು ಹೇಳಬಲ್ಲೆ. ಹಾಗಂತ ಕಷ್ಟದ ದಿನಗಳು, ಕುಗ್ಗಿಹೋದ ದಿನಗಳು ಇರಲೇ ಇಲ್ಲ ಅಂತಲ್ಲ. (ಕೀರ್ತ. 34:12; 94:19) ಒಟ್ಟಿನಲ್ಲಿ ತುಂಬ ಸಂತೃಪ್ತಿಯ, ಅರ್ಥಪೂರ್ಣ ಜೀವನ ನನ್ನದಾಗಿದೆ!

ಇಸವಿ 1950ರ ಸೆಪ್ಟೆಂಬರ್‌ 7ರಂದು ನಾನು ಬ್ರೂಕ್ಲಿನ್‌ ಬೆತೆಲ್‌ ಕುಟುಂಬದಲ್ಲಿ ಒಬ್ಬನಾದೆ. ಆಗ 355 ಸಹೋದರ-ಸಹೋದರಿಯರು ಅಲ್ಲಿ ಸೇವೆಮಾಡುತ್ತಾ ಇದ್ದರು. ನಾನಾ ದೇಶಗಳಿಂದ ಬಂದಿದ್ದ ಇವರಲ್ಲಿ 19ರಿಂದ 80ರ ವಯೋಮಾನದವರು ಇದ್ದರು. ಹೆಚ್ಚಿನವರು ಅಭಿಷಿಕ್ತ ಕ್ರೈಸ್ತರಾಗಿದ್ದರು.

ಯೆಹೋವನ ಕುರಿತು ಕಲಿಯಲಾರಂಭಿಸಿದೆ

ದೀಕ್ಷಾಸ್ನಾನ ಪಡೆದ ದಿನದಂದು; ನನಗಾಗ 10 ವಯಸ್ಸು

‘ಸಂತೋಷಭರಿತ ದೇವರಾದ’ ಯೆಹೋವನ ಬಗ್ಗೆ ನಾನು ಕಲಿತದ್ದು ನನ್ನ ತಾಯಿಯಿಂದ. (1 ತಿಮೊ. 1:11) ಅವರು ಯೆಹೋವನ ಬಗ್ಗೆ ಕಲಿಯಲು ಆರಂಭಿಸಿದಾಗ ನಾನಿನ್ನೂ ಚಿಕ್ಕ ಹುಡುಗ. ನಾನು ದೀಕ್ಷಾಸ್ನಾನ ಪಡೆದದ್ದು 1939ರ ಜುಲೈ 1ರಂದು ಅಮೆರಿಕದ ನೆಬ್ರಾಸ್ಕದ ಕೊಲಂಬಸ್‌ ನಗರದಲ್ಲಿ ನಡೆದ ಝೋನ್‌ ಸಮ್ಮೇಳನದಲ್ಲಿ (ಈಗ ಸರ್ಕಿಟ್‌ ಸಮ್ಮೇಳನ ಎಂದು ಕರೆಯಲಾಗುತ್ತದೆ). ನನಗಾಗ ಹತ್ತು ವರ್ಷ. ಆ ದಿನ ಬಾಡಿಗೆಗೆ ತೆಗೆದುಕೊಂಡಿದ್ದ ಚಿಕ್ಕ ಸಭಾಂಗಣದಲ್ಲಿ ಸುಮಾರು ನೂರು ಮಂದಿ ಕೂಡಿ ಬಂದಿದ್ದೆವು. ಸಹೋದರ ಜೋಸೆಫ್‌ ರದರ್‌ಫರ್ಡ್‌ರ ಭಾಷಣದ ಧ್ವನಿಮುದ್ರಣವನ್ನು ಕೇಳುತ್ತಾ ಇದ್ದೆವು. ಆ ಭಾಷಣದ ಶೀರ್ಷಿಕೆ “ಸರ್ವಾಧಿಕಾರವೋ ಸ್ವಾತಂತ್ರ್ಯವೋ” ಎಂದಾಗಿತ್ತು. ಅದು ಅರ್ಧದಲ್ಲಿರುವಾಗ ಒಂದು ದೊಂಬಿ ಒಳನುಗ್ಗಿ ನಮ್ಮ ಕೂಟವನ್ನು ನಿಲ್ಲಿಸಿ ನಮ್ಮನ್ನು ಊರಾಚೆ ಅಟ್ಟಿದರು. ಅನಂತರ ಉಳಿದ ಭಾಷಣವನ್ನು ಅಲ್ಲೇ ಹತ್ತಿರದಲ್ಲಿದ್ದ ಸಹೋದರರೊಬ್ಬರ ಮನೆಯಲ್ಲಿ ಕೂತು ಕೇಳಿಸಿಕೊಂಡೆವು. ನಾನು ದೀಕ್ಷಾಸ್ನಾನ ಪಡೆದ ದಿನದಲ್ಲಿ ಇಷ್ಟೆಲ್ಲ ನಡೆಯಿತು. ಆ ತಾರೀಖನ್ನು ಹೇಗೆ ತಾನೇ ಮರೆಯಲು ಸಾಧ್ಯ?

ನನ್ನನ್ನು ಸತ್ಯದಲ್ಲಿ ಬೆಳೆಸಲು ಅಮ್ಮ ತುಂಬ ಶ್ರಮಿಸಿದರು. ಅಪ್ಪ ಒಬ್ಬ ಒಳ್ಳೇ ವ್ಯಕ್ತಿಯಾಗಿದ್ದರು, ಒಳ್ಳೇ ತಂದೆ ಕೂಡ. ಆದರೆ ಅವರಿಗೆ ಧರ್ಮ ಅಂದರೆ ಅಷ್ಟಕ್ಕಷ್ಟೇ. ನಾನು ಕೂಡ ದೇವರಲ್ಲಿ ಭಯ-ಭಕ್ತಿ ಬೆಳೆಸಿಕೊಳ್ಳಬೇಕೆಂಬ ಆಸಕ್ತಿ ಅವರಿಗಿರಲಿಲ್ಲ. ಸತ್ಯ ಕಲಿಯಲು ನನಗೆ ಅಮ್ಮ ಮತ್ತು ಓಮಹಾ ಸಭೆಯಲ್ಲಿದ್ದ ಸಹೋದರ-ಸಹೋದರಿಯರು ಸಹಾಯಮಾಡಿದರು.

ಬಾಳಲ್ಲಿ ಒಂದು ತಿರುವು

ನಾನು ಪ್ರೌಢ ಶಾಲೆಯನ್ನು ಇನ್ನೇನು ಮುಗಿಸಲಿಕ್ಕಿದ್ದಾಗ ಮುಂದೆ ಜೀವನದಲ್ಲಿ ಏನು ಮಾಡಬೇಕೆಂಬ ದೊಡ್ಡ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಪ್ರತಿವರ್ಷ ನಾನು ಬೇಸಿಗೆ ರಜೆಯಲ್ಲಿ ನನ್ನ ವಯಸ್ಸಿನವರೊಂದಿಗೆ ಸೇರಿ ‘ವೆಕೇಷನ್‌ ಪಯನೀಯರ್‌’ (ಆಕ್ಸಿಲಿಯರಿ ಪಯನೀಯರ್‌) ಸೇವೆ ಮಾಡುತ್ತಿದ್ದೆ.

ಆಗಷ್ಟೇ ಗಿಲ್ಯಡ್‌ ಶಾಲೆಯ ಏಳನೇ ತರಗತಿಯಿಂದ ಪದವೀಧರರಾಗಿದ್ದ ಇಬ್ಬರು ಅವಿವಾಹಿತ ಸಹೋದರರನ್ನು ನಮ್ಮ ಪ್ರದೇಶದಲ್ಲಿ ಸಂಚರಣ ಕೆಲಸಕ್ಕೆ ನೇಮಿಸಲಾಯಿತು. ಅವರ ಹೆಸರು ಸಹೋದರ ಜಾನ್‌ ಚಿಮಿಕ್‌ಲಿಸ್‌ ಮತ್ತು ಸಹೋದರ ಥಿಯೊಡೋರ್‌ ಜಾರಸ್‌. ಅವರನ್ನು ನೋಡಿ ನನಗೆ ಆಶ್ಚರ್ಯವಾಯಿತು ಏಕೆಂದರೆ ಅವರಿಬ್ಬರೂ 20ರ ಹರೆಯಕ್ಕೆ ಕಾಲಿಟ್ಟಿದ್ದರಷ್ಟೇ. ಆಗ 18ರ ಪ್ರಾಯದಲ್ಲಿದ್ದ ನಾನು ಓದು ಮುಗಿಸಲಿಕ್ಕಿದ್ದೆ. ‘ಮುಂದೆ ಏನು ಮಾಡಬೇಕಂತ ಇದ್ದೀಯಾ?’ ಎಂದು ಸಹೋದರ ಜಾನ್‌ ಚಿಮಿಕ್‌ಲಿಸ್‌ ಕೇಳಿದ್ದು ನನಗಿನ್ನೂ ನೆನಪಿದೆ. ನಾನು ನನ್ನ ಮನದಾಸೆಯನ್ನು ಹೇಳಿದಾಗ ಅವರಂದರು, “ಹಾಗೇ ಮಾಡು. ಪೂರ್ಣಸಮಯದ ಸೇವೆಯನ್ನು ಈಗಲೇ ಶುರುಮಾಡು. ಆಗ ನಿನಗೇ ಗೊತ್ತಾಗಲ್ಲ ಯಾವೆಲ್ಲ ಸೇವಾ ಸುಯೋಗಗಳು ಮುಂದೆ  ನಿನ್ನದಾಗುತ್ತವೆ ಎಂದು.” ಈ ಸಲಹೆ ಮತ್ತು ಅವರಿಬ್ಬರ ಮಾದರಿ ನನ್ನನ್ನು ತುಂಬ ಪ್ರಭಾವಿಸಿತು. ಹಾಗಾಗಿ 1948ರಲ್ಲಿ ಶಾಲೆ ಮುಗಿಸಿದ ಕೂಡಲೆ ನಾನು ಪಯನೀಯರ್‌ ಸೇವೆಗಿಳಿದೆ.

ಬೆತೆಲ್‌ ಸೇವೆ

ಇಸವಿ 1950ರ ಜುಲೈನಲ್ಲಿ ನ್ಯೂಯಾರ್ಕ್‍ನ ಯಾಂಕೀ ಸ್ಟೇಡಿಯಂನಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ನಾನು ನನ್ನ ಹೆತ್ತವರೊಂದಿಗೆ ಹಾಜರಾದೆ. ಬೆತೆಲಿನಲ್ಲಿ ಸೇವೆಮಾಡಲು ಇಚ್ಛಿಸುವವರಿಗಾಗಿ ಅಲ್ಲಿ ಏರ್ಪಾಡಿಸಲಾದ ಕೂಟಕ್ಕೆ ಹಾಜರಾದೆ. ಬೆತೆಲಿನಲ್ಲಿ ಸೇವೆ ಸಲ್ಲಿಸಲು ನಾನು ಬಯಸುತ್ತೇನೆ ಎಂದು ಬರೆದು ಕಳುಹಿಸಿದೆ.

ನಾನು ಮನೆಯಲ್ಲಿದ್ದು ಪಯನೀಯರ್‌ ಸೇವೆಮಾಡುವುದನ್ನು ಅಪ್ಪ ವಿರೋಧಿಸಲಿಲ್ಲವಾದರೂ ನನ್ನ ಊಟ ಮತ್ತು ವಾಸಕ್ಕಾಗಿ ಹಣವನ್ನು ಕೊಡುವಂತೆ ಹೇಳಿದರು. ಹಾಗಾಗಿ ಆಗಸ್ಟ್‌ ತಿಂಗಳ ಆರಂಭದಲ್ಲಿ ಒಂದು ದಿನ ನಾನು ಕೆಲಸ ಹುಡುಕಲೆಂದು ಮನೆಯಿಂದ ಹೊರಗೆ ಕಾಲಿಟ್ಟೆ. ನಮ್ಮ ಅಂಚೆ ಪೆಟ್ಟಿಗೆಯಲ್ಲಿ ಒಂದು ಪತ್ರ ಇರುವುದನ್ನು ನೋಡಿದೆ. ಅದು ನನ್ನ ಹೆಸರಿಗೆ ಬ್ರೂಕ್ಲಿನ್‍ನಿಂದ ಬಂದ ಪತ್ರವಾಗಿತ್ತು. ಸಹೋದರ ನೇತನ್‌ ಹೆಚ್‌. ನಾರ್‌ ಅವರ ಸಹಿಯಿದ್ದ ಆ ಪತ್ರದಲ್ಲಿ ಹೀಗೆ ಬರೆದಿತ್ತು: “ಬೆತೆಲ್‌ ಸೇವೆಗಾಗಿ ನೀನು ಕೊಟ್ಟ ಅರ್ಜಿ ತಲುಪಿದೆ. ಕರ್ತನು ಅನುಮತಿಸುವ ವರೆಗೂ ನೀನು ಬೆತೆಲಿನಲ್ಲೇ ಉಳಿಯುವಿ ಎಂದು ನಾನು ನಂಬುತ್ತೇನೆ. 1950, ಸೆಪ್ಟೆಂಬರ್‌ 7ರಂದು ನೀನು 124 ಕೊಲಂಬಿಯ ಹೈಟ್ಸ್‌, ಬ್ರೂಕ್ಲಿನ್‌, ನ್ಯೂಯಾರ್ಕ್‍ನಲ್ಲಿರುವ ಬೆತೆಲಿನಲ್ಲಿ ಕೆಲಸಕ್ಕೆ ವರದಿ ಮಾಡುವಂತೆ ಕೇಳಿಕೊಳ್ಳುತ್ತೇನೆ.”

ಆ ದಿನ ಅಪ್ಪ ಕೆಲಸದಿಂದ ಮನೆಗೆ ಬಂದ ಮೇಲೆ ನನಗೆ ಕೆಲಸ ಸಿಕ್ಕಿದೆ ಎಂದು ಅವರಿಗೆ ಹೇಳಿದೆ. ಅದಕ್ಕವರು: “ಒಳ್ಳೇದು, ಎಲ್ಲಿ ಕೆಲಸ ಮಾಡ್ತೀಯಾ?” ಎಂದು ಕೇಳಿದರು. ಆಗ ನಾನು “ಬ್ರೂಕ್ಲಿನ್‌ ಬೆತೆಲಿನಲ್ಲಿ, ತಿಂಗಳಿಗೆ 10 ಡಾಲರ್‌ ಸಿಗುತ್ತದೆ” ಎಂದೆ. ಹೀಗೆ ನಾನು ಸ್ವಯಂಸೇವಕನಾಗಿ ಆದಾಯವಿಲ್ಲದೆ ಕೆಲಸಮಾಡುತ್ತೇನೆಂದು ತಿಳಿದಾಗ ಅವರಿಗೆ ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ. ಆದರೆ ನಂತರ ಅವರು ಹೇಳಿದರು, ಒಂದುವೇಳೆ ನೀನು ಅದನ್ನೇ ಆರಿಸಿಕೊಂಡಿರುವುದಾದರೆ ನೀನದನ್ನು ಒಳ್ಳೇ ರೀತಿ ಮಾಡಲು ಪರಿಶ್ರಮಪಡು. ಅನಂತರ ಅಪ್ಪ ಬೇಗನೆ ಅಂದರೆ 1953ರಲ್ಲಿ ಯಾಂಕೀ ಸ್ಟೇಡಿಯಂನಲ್ಲಿ ನಡೆದ ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದರು.

ನನ್ನ ಪಯನೀಯರ್‌ ಜೊತೆಗಾರ ಆಲ್‌ಫ್ರಡ್‌ ನಸ್ರಲ್ಲಾ ಮತ್ತು ನಾನು

ಇನ್ನೊಂದು ಸಂತೋಷದ ಸುದ್ದಿ ಏನಂದರೆ ನನ್ನ ಪಯನೀಯರ್‌ ಜೊತೆಗಾರನಾಗಿದ್ದ ಆಲ್‌ಫ್ರಡ್‌ ನಸ್ರಲ್ಲಾಗೆ ಕೂಡ ಅದೇ ಸಮಯದಲ್ಲಿ ಬೆತೆಲ್‌ಗೆ ಕರೆ ಬಂತು. ಬೆತೆಲ್‌ಗೆ ಹೋಗಲು ಇಬ್ಬರೂ ಒಟ್ಟಿಗೆ ಪ್ರಯಾಣ ಮಾಡಿದೆವು. ಸಮಯಾನಂತರ ಅವನು ಜೊಆ್ಯನ್‌ ಎಂಬಾಕೆಯನ್ನು ಮದುವೆಯಾದನು. ಅವರಿಬ್ಬರೂ ಗಿಲ್ಯಡ್‌ ಶಾಲೆಗೆ ಹಾಜರಾಗಿ ಲೆಬನಾನ್‍ನಲ್ಲಿ ಮಿಷನರಿಯಾಗಿ ಸೇವೆಸಲ್ಲಿಸಿದರು. ಬಳಿಕ ಸಂಚರಣ ಕೆಲಸದ ಮೇಲೆ ಪುನಃ ಅಮೆರಿಕಗೆ ಬಂದರು.

ಬೆತೆಲಿನಲ್ಲಿ ನನ್ನ ನೇಮಕಗಳು

ಬೆತೆಲಿನಲ್ಲಿ ನನ್ನ ಮೊದಲ ನೇಮಕ ಬೈ೦ಡರಿ ವಿಭಾಗದಲ್ಲಿ ಪುಸ್ತಕಗಳನ್ನು ಹೊಲಿಯುವುದು. ನಾನು ಕೆಲಸ ಮಾಡಿದ ಮೊದಲ ಪ್ರಕಾಶನ, ಧರ್ಮವು ಮಾನವಕುಲಕ್ಕಾಗಿ ಏನನ್ನು ಮಾಡಿದೆ? (ಇಂಗ್ಲಿಷ್‌) ಎಂಬ ಪುಸ್ತಕ. ಎಂಟು ತಿಂಗಳು ಅಲ್ಲಿ ಕೆಲಸ ಮಾಡಿದ ಮೇಲೆ ನನ್ನನ್ನು ಸರ್ವಿಸ್‌ ಡಿಪಾರ್ಟ್‍ಮೆಂಟ್‌ಗೆ ನೇಮಿಸಲಾಯಿತು. ನಾನಲ್ಲಿ ಸಹೋದರ ಥಾಮಸ್‌ ಜೆ. ಸಲಿವನ್‌ ಅವರ ನಿರ್ದೇಶನದಡಿ ಕೆಲಸ ಮಾಡಿದೆ. ಅವರೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಆಹ್ಲಾದಕರ. ಸಂಘಟನೆಯಲ್ಲಿ ಅನೇಕ ವರ್ಷಗಳಿಂದ ಸೇವೆಸಲ್ಲಿಸಿ ಅವರು ಗಳಿಸಿದ್ದ ಆಧ್ಯಾತ್ಮಿಕ ವಿವೇಕ ಹಾಗೂ ಒಳನೋಟದಿಂದ ಪ್ರಯೋಜನ ಪಡೆದೆ.

ಹೀಗೆ ಸರ್ವಿಸ್‌ ಡಿಪಾರ್ಟ್‍ಮೆಂಟಿನಲ್ಲಿ ಸುಮಾರು ಮೂರು ವರ್ಷ ಕೆಲಸಮಾಡಿದೆ. ಅದೊಂದು ದಿನ ಫ್ಯಾಕ್ಟರಿ ಮೇಲ್ವಿಚಾರಕರಾಗಿದ್ದ ಸಹೋದರ ಮ್ಯಾಕ್ಸ್‌ ಲಾರ್ಸನ್‌ ನನ್ನ ಬಳಿ ಬಂದು, ಸಹೋದರ ನಾರ್‌ ನನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದರು. ನನ್ನಿಂದ ಏನಾದರೂ ತಪ್ಪಾಯಿತಾ ಎಂಬ ಭಯ ಒಳಗೊಳಗೆ ಶುರುವಾಯಿತು. ಅವರಿಗೆ ಸ್ವಲ್ಪ ಸಮಯದ ಮಟ್ಟಿಗೆ ಯಾರಾದರೂ ಅವರ ಆಫೀಸಿನಲ್ಲಿ ಕೆಲಸ ಮಾಡಬೇಕಿತ್ತು. ಹಾಗಾಗಿ ಮುಂದೆ ನಾನೇನಾದರೂ ಬೆತೆಲ್‌ ಬಿಡುವ ಯೋಚನೆ ಇದೆಯಾ ಎಂದು ವಿಚಾರಿಸಿದರು. ಇಲ್ಲವಾದರೆ ಆ ನೇಮಕವನ್ನು ಸ್ವೀಕರಿಸಬಹುದೇ ಎಂದು ಕೇಳಿದರು. ಆಗ ನನಗೆ ಸಮಾಧಾನ ಆಯಿತು. ಬೆತೆಲ್‌ ಬಿಡುವ ಯೋಚನೆಯೇ ನನಗಿಲ್ಲ ಎಂದೆ. ಮುಂದಿನ 20 ವರ್ಷಗಳ ವರೆಗೆ ಅವರ ಆಫೀಸಿನಲ್ಲಿ ಕೆಲಸಮಾಡುವ ಸುಯೋಗದಲ್ಲಿ ಆನಂದಿಸಿದೆ.

ಸಹೋದರ ನಾರ್‌, ಸಲಿವನ್‌ ಮತ್ತು ಇನ್ನಿತರ ಬೆತೆಲಿಗರು ಅಂದರೆ ಮಿಲ್ಟನ್‌ ಹೆನ್ಶೆಲ್‌, ಕ್ಲೌಸ್‌ ಜೆನ್‌ಸನ್‌, ಮ್ಯಾಕ್ಸ್‌ ಲಾರ್ಸನ್‌, ಹ್ಯೂಗೋ ರೀಮರ್‌ ಮತ್ತು ಗ್ರ್ಯಾ೦ಟ್‌ ಸ್ಯೂಟರ್‌ * ಈ ಸಹೋದರರಿಂದ ನಾನು ಪಡೆದ ಉತ್ತಮ ತರಬೇತಿಯನ್ನು ಹೊರಗೆ ಪಡೆಯಬೇಕಾದರೆ ತುಂಬ ಹಣ ವ್ಯಯಿಸಬೇಕಾಗುತ್ತಿತ್ತು. ಅದಂತೂ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ.

 ನಾನು ಯಾರೊಟ್ಟಿಗೆಲ್ಲ ಕೆಲಸ ಮಾಡಿದ್ದೆನೋ ಅವರೆಲ್ಲ ಸಂಘಟನೆಯಲ್ಲಿ ತಮಗಿದ್ದ ಸೇವಾ ಸುಯೋಗಗಳನ್ನು ಚೆನ್ನಾಗಿ ಅಚ್ಚುಕಟ್ಟಾಗಿ ನಿರ್ವಹಿಸುವವರಾಗಿದ್ದರು. ಸಹೋದರ ನಾರ್‌ ಹಗಲುರಾತ್ರಿಯೆನ್ನದೆ ಕೆಲಸ ಮಾಡುತ್ತಲೇ ಇರುತ್ತಿದ್ದರು. ರಾಜ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ಮಹತ್ತರವಾಗಿ ಸಾಗಬೇಕೆಂಬ ಬಯಕೆ ಅವರಿಗಿತ್ತು. ಅವರೊಟ್ಟಿಗೆ ಕೆಲಸ ಮಾಡುವವರು ಯಾವುದೇ ಹಿಂಜರಿಕೆಯಿಲ್ಲದೆ ಮಾತಾಡುವಷ್ಟು ಸ್ನೇಹಮಯಿ ಅವರಾಗಿದ್ದರು. ಒಂದುವೇಳೆ ನಮಗೆ ಒಂದು ವಿಷಯದ ಬಗ್ಗೆ ಬೇರೆಯೇ ಅಭಿಪ್ರಾಯ ಇದ್ದರೂ ಮನಬಿಚ್ಚಿ ಹೇಳಬಹುದಿತ್ತು. ಆಗಲೂ ಅವರಿಗೆ ನಮ್ಮ ಮೇಲೆ ಭರವಸೆಯಿರುತ್ತಿತ್ತು.

ಚಿಕ್ಕಪುಟ್ಟ ಕೆಲಸಗಳನ್ನು ಶ್ರದ್ಧೆಯಿಂದ ಮಾಡುವುದು ಎಷ್ಟು ಮುಖ್ಯವೆಂದು ಒಂದು ಸಂದರ್ಭದಲ್ಲಿ ಸಹೋದರ ನಾರ್‌ ನನಗೆ ಹೇಳಿದರು. ಅದಕ್ಕೊಂದು ಉದಾಹರಣೆಯನ್ನೂ ಕೊಟ್ಟರು. ಅವರು ಫ್ಯಾಕ್ಟರಿ ಮೇಲ್ವಿಚಾರಕರಾಗಿದ್ದಾಗ ಅವರಿಗೆ ಸಹೋದರ ರದರ್‌ಫರ್ಡ್‌ ಫೋನ್‌ ಮಾಡಿ, “ಸಹೋದರ ನಾರ್‌, ನನಗೆ ನನ್ನ ಮೇಜಿನ ಮೇಲೆ ಇಡಲು ಅಳಿಸುವ ರಬ್ಬರ್‌ಗಳು ಬೇಕು. ನೀವು ಫ್ಯಾಕ್ಟರಿಯಿಂದ ಮಧ್ಯಾಹ್ನ ಊಟಕ್ಕೆ ಬರುವಾಗ ತನ್ನಿ” ಎಂದು ಹೇಳುತ್ತಿದ್ದರು. ಸಹೋದರ ನಾರ್‌ ಮೊದಲು ಸಪ್ಲೈ ರೂಮ್‌ಗೆ ಹೋಗಿ ಅಲ್ಲಿಂದ ರಬ್ಬರ್‌ಗಳನ್ನು ತೆಗೆದುಕೊಂಡು ಕಿಸೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಮಧ್ಯಾಹ್ನ ಸಹೋದರ ರದರ್‌ಫರ್ಡ್‌ರವರ ಆಫೀಸ್‌ಗೆ ಹೋಗಿ ಕೊಟ್ಟುಬರುತ್ತಿದ್ದರು. ಅದು ಒಂದು ಚಿಕ್ಕ ಕೆಲಸ, ಆದರೆ ಅದರಿಂದ ಸಹೋದರ ರದರ್‌ಫರ್ಡ್‌ಗೆ ತುಂಬ ಸಹಾಯ ಆಗುತ್ತಿತ್ತು. ಅನಂತರ ಸಹೋದರ ನಾರ್‌ ನನಗೆ ಹೀಗೆ ಹೇಳಿದರು: “ಯಾವಾಗಲೂ ನನ್ನ ಮೇಜಿನ ಮೇಲಿರುವ ಪೆನ್ಸಿಲ್‌ಗಳ ಮೊನೆ ಚೂಪಾಗಿದ್ದರೆ ಚೆನ್ನಾಗಿರುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ನೀನದನ್ನು ಮಾಡ್ತೀಯಾ?” ಅನೇಕ ವರ್ಷಗಳ ವರೆಗೆ ನಾನು ಅವರ ಮೇಜಿನ ಮೇಲಿರುವ ಪೆನ್ಸಿಲ್‌ಗಳ ಮೊನೆ ಚೂಪು ಮಾಡಿಡುತ್ತಿದ್ದೆ.

ನಮಗೆ ಯಾವುದಾದರೂ ಒಂದು ಕೆಲಸ ಕೊಟ್ಟು ಅದನ್ನು ಹೇಗೆ ಮಾಡಬೇಕೆಂದು ತಿಳಿಸುವಾಗ ಗಮನಕೊಟ್ಟು ಕೇಳಬೇಕೆಂದು ಸಹೋದರ ನಾರ್‌ ಯಾವಾಗಲೂ ಹೇಳುತ್ತಿದ್ದರು. ಒಂದು ಸಾರಿ ಅವರು ನನಗೆ ಒಂದು ಕೆಲಸವನ್ನು ಹೇಗೆ ಮಾಡಬೇಕೆಂದು ವಿವರವಾಗಿ ಹೇಳಿದ್ದರು. ಆದರೆ ನಾನು ಕಿವಿಗೊಟ್ಟು ಕೇಳಿಸಿಕೊಳ್ಳದೆ ಹೇಳಿದ್ದನ್ನು ಸರಿಯಾಗಿ ಮಾಡಲಿಲ್ಲ. ಪರಿಣಾಮವಾಗಿ ನಂತರ ಅವರು ನನ್ನಿಂದ ಪೇಚಾಟಕ್ಕೆ ಸಿಕ್ಕಿಬಿದ್ದರು. ನನಗಾಗ ತುಂಬ ಸಂಕಟ ಆಯಿತು. ಹಾಗಾಗಿ ಅವರಿಗೆ ಒಂದು ಚಿಕ್ಕ ಪತ್ರ ಬರೆದು, ‘ನಾನು ಮಾಡಿದ ಆ ತಪ್ಪಿಗಾಗಿ ತುಂಬ ವಿಷಾದಿಸುತ್ತೇನೆ. ನಿಮ್ಮ ಆಫೀಸಿನಿಂದ ನನ್ನನ್ನು ತೆಗೆದು ಬೇರೆ ಕಡೆ ಕೆಲಸ ಕೊಡಿ’ ಎಂದೆ. ಮರುದಿನ ಬೆಳಿಗ್ಗೆ ಸಹೋದರ ನಾರ್‌ ನನ್ನ ಬಳಿ ಬಂದು, “ರಾಬರ್ಟ್, ನೀನು ಬರೆದ ಪತ್ರ ನನಗೆ ಸಿಕ್ಕಿತು. ನಿನ್ನಿಂದ ತಪ್ಪಾಗಿದೆ, ಅದರ ಬಗ್ಗೆ ನಿನ್ನ ಹತ್ರ ಮಾತಾಡಿದ್ದೇನೆ. ಮುಂದೆ ಮತ್ತೆ ಆ ತಪ್ಪಾಗದಂತೆ ನೋಡಿಕೊಳ್ಳುತ್ತಿ ಅಂತ ನನಗೆ ಗೊತ್ತು. ಈಗ ನಾವಿಬ್ಬರೂ ಕೆಲಸ ಶುರುಮಾಡೋಣ” ಅಂದರು. ಅವರು ತೋರಿಸಿದ ದಯೆಯನ್ನು ನಾನು ಯಾವತ್ತೂ ಮರೆಯಲ್ಲ.

ಮದುವೆಯಾಗುವ ಯೋಚನೆ

ಬೆತೆಲಿನಲ್ಲಿ ಎಂಟು ವರ್ಷ ಸೇವೆಸಲ್ಲಿಸಿದ ಮೇಲೆ ನನಗೆ ಬೆತೆಲಿನಲ್ಲೇ ಇರುವುದನ್ನು ಬಿಟ್ಟು ಬೇರೆ ಯಾವುದೇ ಯೋಚನೆ ಇರಲಿಲ್ಲ. ಆದರೆ 1958ರಲ್ಲಿ ಯಾಂಕೀ ಸ್ಟೇಡಿಯಂ ಮತ್ತು ಪೋಲೋ ಗ್ರೌ೦ಡ್ಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನವನ್ನು ಹಾಜರಾದ ಮೇಲೆ ಆ ಯೋಚನೆ ಬದಲಾಯಿತು. ಯಾಕೆಂದರೆ ನಾನಲ್ಲಿ ಲಾರೇನ್‌ ಬ್ರೂಕ್ಸ್‌ ಎಂಬಾಕೆಯನ್ನು ಭೇಟಿಯಾದೆ. ಈ ಮುಂಚೆ 1955ರಲ್ಲೇ ಅವಳ ಪರಿಚಯವಾಗಿತ್ತು. ಆಗ ಅವಳು ಕೆನಡದ ಮಾಂಟ್ರಿಯಲ್‌ ಎಂಬಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದಳು. ಪೂರ್ಣಸಮಯದ ಸೇವೆಯ ಕಡೆಗಿದ್ದ ಅವಳ ಮನೋಭಾವ ಮತ್ತು ಸಂಘಟನೆ ಎಲ್ಲಿ ಕಳುಹಿಸಿದರೂ ಅಲ್ಲಿಗೆ ಹೋಗಲು ಅವಳಲ್ಲಿದ್ದ ಸಿದ್ಧಮನಸ್ಸು ನನ್ನ ಹೃದಯ ಸ್ಪರ್ಶಿಸಿತು. ಗಿಲ್ಯಡ್‌ ಶಾಲೆಗೆ ಹಾಜರಾಗುವ ಗುರಿ ಅವಳಿಗಿತ್ತು. 1956ರಲ್ಲಿ 22ನೇ ವಯಸ್ಸಿನಲ್ಲಿ ಗಿಲ್ಯಡ್‌ ಶಾಲೆಯ 27ನೇ ತರಗತಿಗೆ ಹಾಜರಾಗಿದ್ದಳು. ಪದವೀಧರಳಾದ ಮೇಲೆ ಅವಳನ್ನು ಬ್ರಸಿಲ್‌ಗೆ ನೇಮಿಸಲಾಗಿತ್ತು. 1958ರಲ್ಲಿ ಲಾರೇನ್‌ ಮತ್ತು ನನ್ನ ಸ್ನೇಹ ಮತ್ತೆ ಆರಂಭವಾಯಿತು. ನಾನು ಮದುವೆ ಪ್ರಸ್ತಾಪವಿಟ್ಟಾಗ ಅವಳು ಒಪ್ಪಿಕೊಂಡಳು. ಮರುವರ್ಷ ಮದುವೆಯಾಗಿ ಅವಕಾಶ ಸಿಕ್ಕರೆ ಮಿಷನರಿ ಸೇವೆ ಮಾಡೋಣ ಅಂದುಕೊಂಡೆವು.

 ಈ ವಿಷಯವನ್ನು ಸಹೋದರ ನಾರ್‌ರವರಿಗೆ ಹೇಳಿದೆ. ಅದಕ್ಕವರು ಮೂರು ವರ್ಷದ ನಂತರ ಮದುವೆಯಾಗಿ ಬ್ರೂಕ್ಲಿನ್‌ ಬೆತೆಲಿನಲ್ಲೇ ಸೇವೆಮಾಡುವಂತೆ ಸಲಹೆ ಕೊಟ್ಟರು. ಆ ಸಮಯದಲ್ಲಿ ಮದುವೆ ಆದಮೇಲೂ ಬೆತೆಲಿನಲ್ಲಿ ಉಳಿಯಬೇಕಾದರೆ ಒಬ್ಬರು ಹತ್ತು ಅಥವಾ ಹತ್ತಕ್ಕಿಂತ ಹೆಚ್ಚು ವರ್ಷ, ಇನ್ನೊಬ್ಬರು ಕನಿಷ್ಠ ಪಕ್ಷ ಮೂರು ವರ್ಷ ಬೆತೆಲಿನಲ್ಲಿ ಸೇವೆ ಸಲ್ಲಿಸಿರಬೇಕಿತ್ತು. ಹಾಗಾಗಿ ಮದುವೆಗೆ ಮುಂಚೆ ಲಾರೇನ್‌ ಎರಡು ವರ್ಷ ಬ್ರಸಿಲ್‌ ಬೆತೆಲಿನಲ್ಲಿ ಮತ್ತು ಒಂದು ವರ್ಷ ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆಸಲ್ಲಿಸಲು ಒಪ್ಪಿಕೊಂಡಳು.

ಅವಳು ದೂರವಿದ್ದ ಆ ಎರಡು ವರ್ಷಗಳಲ್ಲಿ ಮಾತಾಡಲು ನಮಗಿದ್ದ ಒಂದೇ ದಾರಿ ಪತ್ರಗಳು. ಆಗೆಲ್ಲ ಫೋನ್‌ ತುಂಬ ದುಬಾರಿ. ಇ-ಮೇಲ್‌ ಅಂತೂ ಇರಲೇ ಇಲ್ಲ! 1961, ಸೆಪ್ಟೆಂಬರ್‌ 16ರಂದು ನಮ್ಮ ಮದುವೆಗೆ ಸಹೋದರ ನಾರ್‌ ಭಾಷಣ ಕೊಟ್ಟದ್ದು ನಿಜಕ್ಕೂ ನಮ್ಮ ಸುಯೋಗ. ನಾವು ಕಾಯುತ್ತಿದ್ದ ಆ ಮೂರು ವರ್ಷಗಳು ಎಷ್ಟೋ ವರ್ಷಗಳಂತೆ ಭಾಸವಾದವು. ಆದರೆ ಈಗ ದಂಪತಿಯಾಗಿ ನಾವು ಕಳೆದಿರುವ 50 ವರ್ಷಗಳ ಕಡೆಗೆ ತಿರುಗಿ ನೋಡುವಾಗ ಮನಸ್ಸಿಗೆಷ್ಟೋ ತೃಪ್ತಿ ಆನಂದ ಆಗುತ್ತದೆ. ನಾವು ಆ ಮೂರು ವರ್ಷ ಕಾದಿದ್ದು ಸಾರ್ಥಕ ಅನಿಸುತ್ತದೆ!

ನಮ್ಮ ಮದುವೆ ಫೋಟೋ. ಎಡದಿಂದ: ನೇತನ್‌ ಎಚ್‌. ನಾರ್‌, ಪೆಟ್ರಿಶಾ ಬ್ರೂಕ್ಸ್‌ (ಲಾರೇನ್‍ಳ ತಂಗಿ), ಲಾರೇನ್‌ ಮತ್ತು ನಾನು, ಕರ್ಟಸ್‌ ಜಾನ್ಸನ್‌, ನನ್ನ ಅಮ್ಮ ಫೇ ಮತ್ತು ಅಪ್ಪ ರಾಯ್‌ ವಾಲನ್‌

ಸಿಕ್ಕಿದ ಸೇವಾ ಸುಯೋಗಗಳು

1964ರಲ್ಲಿ ಝೋನ್‌ ಮೇಲ್ವಿಚಾರಕನಾಗಿ ಬೇರೆಬೇರೆ ದೇಶಗಳ ಬ್ರಾಂಚ್‌ಗಳನ್ನು ಸಂದರ್ಶಿಸುವ ಸುಯೋಗ ನನಗೆ ಸಿಕ್ಕಿತು. ಆದರೆ ಆ ಸಮಯದಲ್ಲಿ ಝೋನ್‌ ಮೇಲ್ವಿಚಾರಕನು ಹೆಂಡತಿಯನ್ನು ಕರೆದುಕೊಂಡು ಹೋಗುವ ಹಾಗಿರಲಿಲ್ಲ. 1977ರಲ್ಲಿ ಅದು ಬದಲಾಯಿತು. ಝೋನ್‌ ಭೇಟಿಗೆ ಹೆಂಡತಿಯನ್ನೂ ಕರೆದುಕೊಂಡು ಹೋಗಬಹುದೆಂದು ಹೇಳಲಾಯಿತು. ಆ ವರ್ಷ ನಾನೂ ನನ್ನ ಹೆಂಡತಿ, ಸಹೋದರ ಗ್ರ್ಯಾ೦ಟ್‌ ಸೂಟರ್‌ ಮತ್ತವರ ಹೆಂಡತಿ ಈಡಿತ್‌ ಸೂಟರ್‌ ಅವರೊಂದಿಗೆ ಜರ್ಮನಿ, ಆಸ್ಟ್ರಿಯ, ಗ್ರೀಸ್‌, ಸೈಪ್ರಸ್‌, ಟರ್ಕಿ ಮತ್ತು ಇಸ್ರೇಲ್‌ ಬ್ರಾಂಚ್‌ ಆಫೀಸ್‌ಗಳಿಗೆ ಭೇಟಿ ಕೊಟ್ಟೆವು. ಒಟ್ಟು ನಾನು ಸುಮಾರು 70 ದೇಶಗಳಿಗೆ ಭೇಟಿ ನೀಡಿದ್ದೇನೆ.

1980ರಲ್ಲಿ ನಾವು ಬ್ರಸಿಲ್‌ಗೆ ಭೇಟಿಕೊಟ್ಟಾಗ ಭೂಮಧ್ಯ ರೇಖೆಯ ಮೇಲಿರುವ ಬಲೇಮ್‌ ನಗರಕ್ಕೆ ಕೂಡ ಭೇಟಿ ಕೊಟ್ಟೆವು. ಹಿಂದೆ ಈ ಪಟ್ಟಣದಲ್ಲಿ ಲಾರೇನ್‌ ಮಿಷನರಿಯಾಗಿ ಸೇವೆಮಾಡಿದ್ದಳು. ಹಾಗೆಯೇ ಮನೌಸ್‌ ನಗರದಲ್ಲಿದ್ದ ಸಹೋದರರನ್ನು ಸಹ ಭೇಟಿ ಮಾಡಿದೆವು. ಒಂದು ಕ್ರೀಡಾಂಗಣದಲ್ಲಿ ನಾನು ಭಾಷಣ ಕೊಡಲಿಕ್ಕಿತ್ತು. ಅಲ್ಲಿ ಪ್ರತ್ಯೇಕವಾಗಿ ಕೂತಿದ್ದ ಒಂದು ಗುಂಪನ್ನು ನಾವು ನೋಡಿದೆವು. ಸಾಮಾನ್ಯವಾಗಿ ಬ್ರಸಿಲ್‍ನಲ್ಲಿ ಒಬ್ಬರನ್ನೊಬ್ಬರು ವಂದಿಸುವಾಗ ಸ್ತ್ರೀಯರು ಕೆನ್ನೆಗೆ ಮುದ್ದಿಡುವುದು, ಪುರುಷರು ಕೈ ಕುಲುಕುವುದು ವಾಡಿಕೆ. ಆದರೆ ಆ ಗುಂಪಿನಲ್ಲಿದ್ದವರು ಹಾಗೆ ಮಾಡಲಿಲ್ಲ. ಯಾಕೆ?

ಯಾಕೆಂದರೆ ಅವರು ಅಮೆಜಾನ್‌ ಮಳೆಕಾಡಿನಲ್ಲಿರುವ ಕುಷ್ಠರೋಗಿಗಳು ವಾಸಿಸುವ ಕಾಲನಿಯಿಂದ ಬಂದ ನಮ್ಮ ಪ್ರಿಯ ಸಹೋದರ-ಸಹೋದರಿಯರಾಗಿದ್ದರು. ಸುರಕ್ಷೆಯ ಕಾರಣದಿಂದ ಅವರು ಇತರರಿಂದ ಪ್ರತ್ಯೇಕವಾಗಿದ್ದರು. ಹಾಗಿದ್ದರೂ ಅವರು ನಮ್ಮ ಮನಸ್ಪರ್ಶಿಸಿದರು. ಅವರ ಮುಖಗಳಲ್ಲಿ ಚಿಮ್ಮುತ್ತಿದ್ದ ಆನಂದವನ್ನು ನಾವು ಯಾವತ್ತೂ ಮರೆಯಲ್ಲ! ಯೆಹೋವನ ಮಾತುಗಳು ಎಷ್ಟು ನಿಜ: “ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು.”—ಯೆಶಾ. 65:14.

ಸಂತೃಪ್ತಿಯ ಅರ್ಥಪೂರ್ಣ ಜೀವನ

ಯೆಹೋವನ ಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟ ಅರವತ್ತಕ್ಕಿಂತ ಹೆಚ್ಚು ವರ್ಷಗಳನ್ನು ಲಾರೇನ್‌ ಮತ್ತು ನಾನು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಯೆಹೋವನು ತನ್ನ ಸಂಘಟನೆಯ ಮೂಲಕ ನಮ್ಮನ್ನು ಮಾರ್ಗದರ್ಶಿಸುವಂತೆ ಬಿಟ್ಟದ್ದರಿಂದ ಪಡೆದ ಆಶೀರ್ವಾದಗಳಿಗಾಗಿ ನಾವು ತುಂಬ ಸಂತೋಷಿಸುತ್ತೇವೆ. ಈ ಮುಂಚಿನಂತೆ ನನಗೆ ದೇಶದಿಂದ ದೇಶಕ್ಕೆ ಪ್ರಯಾಣಿಸಲು ಆಗಲ್ಲವಾದರೂ ಸರ್ವಿಸ್‌ ಕಮಿಟಿ ಮತ್ತು ಕೋಆರ್ಡಿನೇಟರ್ಸ್‌ ಕಮಿಟಿಯ ಜೊತೆಗೆ ಪ್ರತಿದಿನವೂ ಕೆಲಸಮಾಡುತ್ತಾ ಆಡಳಿತ ಮಂಡಲಿಗೆ ಸಹಾಯಕನಾಗಿರಲು ಸಾಧ್ಯವಾಗುತ್ತಿದೆ. ಹೀಗೆ ಲೋಕವ್ಯಾಪಕವಾಗಿರುವ ಸಹೋದರ ಬಳಗಕ್ಕೆ ಸಹಾಯಮಾಡುವುದರಲ್ಲಿ ನನಗೆ ಚಿಕ್ಕದೊಂದು ಪಾಲು ಇರುವುದರಿಂದ ತುಂಬ ಸಂತೋಷಿಸುತ್ತೇನೆ. ಅನೇಕ ಯುವ ಸಹೋದರ-ಸಹೋದರಿಯರು ಪೂರ್ಣಸಮಯದ ಸೇವೆಗೆ ತಮ್ಮನ್ನೇ ಕೊಟ್ಟುಕೊಳ್ಳುವುದನ್ನು ನೋಡುವಾಗ ವಿಸ್ಮಯಗೊಳ್ಳುತ್ತೇನೆ. “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದ ಯೆಶಾಯನ ಮನೋಭಾವ ಅವರಲ್ಲೂ ಇದೆ. (ಯೆಶಾ. 6:8) ಈ ಎಲ್ಲ ಸಹೋದರ-ಸಹೋದರಿಯರನ್ನು ನೋಡುವಾಗ ಅನೇಕ ವರ್ಷಗಳ ಹಿಂದೆ ಸರ್ಕಿಟ್‌ ಮೇಲ್ವಿಚಾರಕರು ಹೇಳಿದ ಆ ಮಾತುಗಳು ಎಷ್ಟು ಸತ್ಯ ಅನ್ನೋದು ಗೊತ್ತಾಗುತ್ತದೆ: “ಪೂರ್ಣಸಮಯದ ಸೇವೆಯನ್ನು ಈಗಲೇ ಶುರುಮಾಡು. ಆಗ ನಿನಗೇ ಗೊತ್ತಾಗಲ್ಲ ಯಾವೆಲ್ಲ ಸೇವಾ ಸುಯೋಗಗಳು ಮುಂದೆ ನಿನ್ನದಾಗುತ್ತವೆ ಎಂದು.”

^ ಪ್ಯಾರ. 20 ಈ ಸಹೋದರರಲ್ಲಿ ಕೆಲವರ ಜೀವನ ಕಥೆಗಳನ್ನು ಓದಲು ಕಾವಲಿನಬುರುಜುವಿನ (ಇಂಗ್ಲಿಷ್‌) ಈ ಸಂಚಿಕೆಗಳನ್ನು ನೋಡಿ: ಥಾಮಸ್‌ ಜೆ. ಸಲಿವನ್‌ (1965, ಆಗಸ್ಟ್‌ 15); ಕ್ಲೌಸ್‌ ಜೆನ್‌ಸನ್‌ (1969, ಅಕ್ಟೋಬರ್‌ 15); ಮ್ಯಾಕ್ಸ್‌ ಲಾರ್ಸನ್‌ (1989, ಸೆಪ್ಟೆಂಬರ್‌ 1); ಹ್ಯೂಗೋ ರೀಮರ್‌ (1964, ಸೆಪ್ಟೆಂಬರ್‌ 15); ಮತ್ತು ಗ್ರ್ಯಾ೦ಟ್‌ ಸ್ಯೂಟರ್‌ (1983, ಸೆಪ್ಟೆಂಬರ್‌ 1)