ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃದ್ಧರ ಕಾಳಜಿ ವಹಿಸಿರಿ

ವೃದ್ಧರ ಕಾಳಜಿ ವಹಿಸಿರಿ

“ಚಿಕ್ಕ ಮಕ್ಕಳೇ, ನಾವು ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ.”—1 ಯೋಹಾ. 3:18.

1, 2. (ಎ) ಅನೇಕ ಕುಟುಂಬಗಳಲ್ಲಿ ಯಾವ ಸಮಸ್ಯೆಗಳು ಎದುರಾಗುತ್ತವೆ ಮತ್ತು ಯಾವ ಪ್ರಶ್ನೆಗಳು ಏಳುತ್ತವೆ? (ಬಿ) ಬದಲಾಗಲಿರುವ ಸನ್ನಿವೇಶಗಳಿಗೆ ಹೆತ್ತವರು ಮತ್ತು ಮಕ್ಕಳು ಹೇಗೆ ಸಿದ್ಧರಾಗಬಹುದು?

ನಿಮ್ಮನ್ನು ಎತ್ತಿ ಆಡಿಸಿದ ಅಪ್ಪಅಮ್ಮ ಒಂದು ಸಮಯದಲ್ಲಿ ಸುದೃಢರಾಗಿದ್ದು ಎಲ್ಲ ಕೆಲಸಗಳನ್ನು ಸಮರ್ಥವಾಗಿ ಮಾಡುತ್ತಿದ್ದರು. ಆದರೆ ಈಗ ಅವರಿಗೆ ವಯಸ್ಸಾಗಿ ನಿಮ್ಮ ಮುಂದೆಯೇ ಬಲಹೀನರಾಗಿ ತಮ್ಮ ಕೆಲಸಗಳನ್ನೇ ಮಾಡಿಕೊಳ್ಳಲಾಗದ ಸ್ಥಿತಿಗೆ ಬರುವುದನ್ನು ನೋಡುವಾಗ ನಿಮ್ಮ ಹೃದಯ ಹಿಂಡಿದಂತಾಗುತ್ತದೆ ಅಲ್ಲವೇ? ಅಪ್ಪಅಮ್ಮ ಬಿದ್ದು ಸೊಂಟ ಮುರಿದುಕೊಂಡಿರಬಹುದು, ಮರೆವು, ಚಂಚಲ ಮನೋಭಾವ ಅವರನ್ನು ಕಾಡುತ್ತಿರಬಹುದು ಅಥವಾ ಯಾವುದೋ ಗಂಭೀರ ಕಾಯಿಲೆಗೆ ತುತ್ತಾಗಿರಬಹುದು. ಆಗ ನಿಮಗೆ ತುಂಬ ನೋವಾಗುತ್ತದೆ. ಅದೇ ಸಮಯದಲ್ಲಿ ಹೆತ್ತವರಿಗೆ ಇನ್ನೊಂದು ರೀತಿಯ ನೋವಿರುತ್ತದೆ. ತಮಗೆ ವಯಸ್ಸಾಗಿದೆ, ಮೊದಲಿದ್ದಷ್ಟು ಬಲ ಈಗ ಇಲ್ಲ, ಬೇರೆಯವರ ನೆರವು ಬೇಕು ಎಂಬುದನ್ನು ಒಪ್ಪಿಕೊಳ್ಳಲು ಅವರಿಗೆ ತುಂಬ ಕಷ್ಟವಾಗಬಹುದು. (ಯೋಬ 14:1) ಈ ಸನ್ನಿವೇಶಗಳಲ್ಲಿರುವ ಹೆತ್ತವರಿಗೆ ನೆರವು ನೀಡುವುದು ಹೇಗೆ? ಕಾಳಜಿ ವಹಿಸುವುದು ಹೇಗೆ?

2 ವೃದ್ಧರ ಕಾಳಜಿ ವಹಿಸುವ ಸಂಬಂಧದಲ್ಲಿ ಒಂದು ಲೇಖನ ಹೀಗೆ ಹೇಳುತ್ತದೆ: “ವೃದ್ಧಾಪ್ಯದ ತೊಂದರೆಗಳ ಬಗ್ಗೆ ಮಾತಾಡುವುದು ಅಷ್ಟೇನು ಸುಲಭವಲ್ಲ. ಆದರೆ ಯಾರು ಇದರ ಬಗ್ಗೆ ಮುಕ್ತವಾಗಿ ಮಾತಾಡಿ ಯಾವ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ನಿರ್ಧರಿಸಿರುತ್ತಾರೋ ಅವರು ಮುಂದೆ ಎಂಥದ್ದೇ ಸನ್ನಿವೇಶಗಳು ಬಂದರೂ ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ.” ಈ ರೀತಿಯ ಮಾತುಕತೆ ಸುಲಭವಾಗಬೇಕಾದರೆ ಎಲ್ಲರು ಒಂದು ವಿಷಯವನ್ನು ಮನಸ್ಸಿನಲ್ಲಿಡಬೇಕು ಏನೆಂದರೆ ಮುಪ್ಪಿನಲ್ಲಿ ತೊಂದರೆ-ತೊಡುಕುಗಳು ಬಂದೇ ಬರುತ್ತವೆ. ಅವುಗಳನ್ನು ತಡೆಯಲು ಆಗುವುದಿಲ್ಲ. ಆದರೂ ಅದಕ್ಕಾಗಿ ಮುಂಚೆಯೇ ತಯಾರಿ ಹಾಗೂ ನಿರ್ಣಯಗಳನ್ನು ಮಾಡಿಡಲು ಸಾಧ್ಯ. ನಾವೀಗ ಅದನ್ನೇ ಕಲಿಯಲಿದ್ದೇವೆ. ಕುಟುಂಬ ಸದಸ್ಯರೆಲ್ಲರೂ ಕೈಜೋಡಿಸಿ ಇಂಥ ಕೆಲವು ಸವಾಲುಗಳನ್ನು ಜಯಿಸಲು ಹೇಗೆ ಪ್ರೀತಿಯಿಂದ ಸಹಕರಿಸಬಹುದೆಂದು ನೋಡೋಣ.

 ‘ಕಷ್ಟದ ದಿನಗಳು’ ಬರುವ ಮುಂಚೆ ತಯಾರಿ

3. ವಯಸ್ಸಾದ ಹೆತ್ತವರಿಗೆ ಹೆಚ್ಚು ನೆರವು ಬೇಕಾಗಿರುವಾಗ ಕುಟುಂಬ ಸದಸ್ಯರು ಏನು ಮಾಡಬೇಕಾಗಬಹುದು? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.)

3 ‘ಕಷ್ಟದ ದಿನಗಳು’ ಯಾವಾಗ ಬರುತ್ತವೆ? ಹೆತ್ತವರಿಗೆ ತಮ್ಮ ಕೆಲಸಗಳನ್ನು ತಾವು ಮಾಡಲು ಆಗದೆ ಬೇರೆಯವರ ಮೇಲೆ ಹೊಂದಿಕೊಳ್ಳಬೇಕಾಗುವಾಗ. (ಪ್ರಸಂಗಿ 12:1-7 ಓದಿ.) ಇಂಥ ಸಮಯದಲ್ಲಿ ಏನು ಮಾಡಿದರೆ ಅತ್ಯುತ್ತಮ, ತಮ್ಮ ಸಾಮರ್ಥ್ಯಕ್ಕನುಸಾರ ಏನನ್ನು ಮಾಡಲು ಆಗುತ್ತದೆ ಎಂದು ವೃದ್ಧ ಹೆತ್ತವರು ಮತ್ತು ವಯಸ್ಕ ಮಕ್ಕಳು ನಿರ್ಧರಿಸಬೇಕು. ಇದಕ್ಕಾಗಿ ಇಡೀ ಕುಟುಂಬವು ಕೂತು ಮಾತಾಡಿದರೆ ಒಳ್ಳೇದು. ಹೇಗೆ ಎಲ್ಲರು ಒಬ್ಬರಿಗೊಬ್ಬರು ಸಹಕರಿಸಬಹುದು, ಹೆತ್ತವರ ಅಗತ್ಯಗಳೇನು, ಹೇಗೆ ನೆರವು ನೀಡಬಹುದೆಂದು ಚರ್ಚಿಸುವುದು ವಿವೇಕಯುತ. ಎಲ್ಲರೂ ಮುಕ್ತವಾಗಿ ಮಾತಾಡಬೇಕು. ವಿಶೇಷವಾಗಿ ಹೆತ್ತವರು ತಮ್ಮ ಬಯಕೆಗಳನ್ನು, ಭಾವನೆಗಳನ್ನು ಹಾಗೂ ಸತ್ಯಾಂಶಗಳನ್ನು ಮನಸ್ಸುಬಿಚ್ಚಿ ತಿಳಿಸಬೇಕು. ಒಂದುವೇಳೆ ಹೆತ್ತವರು ತಮ್ಮ ಮನೆಯಲ್ಲೇ ಇರಲು ಬಯಸುವಲ್ಲಿ ಅವರು ಸುರಕ್ಷಿತರಾಗಿರುವಂತೆ ಯಾವ ಹೆಚ್ಚಿನ ಸಹಾಯವನ್ನು ಕೊಡಬಹುದೆಂದು ಚರ್ಚಿಸಬಹುದು. * ಪ್ರತಿಯೊಬ್ಬ ಕುಟುಂಬ ಸದಸ್ಯನಿಗೆ ಎಷ್ಟು ಸಹಾಯಮಾಡಲು ಸಾಧ್ಯ ಎನ್ನುವುದನ್ನೂ ಪರಿಗಣಿಸಬಹುದು. (ಜ್ಞಾನೋ. 24:6) ಉದಾಹರಣೆಗೆ, ಕೆಲವರಿಗೆ ದಿನನಿತ್ಯದ ಕೆಲಸಗಳಲ್ಲಿ ನೆರವು ನೀಡಲು ಆಗಬಹುದು, ಇನ್ನು ಕೆಲವರಿಗೆ ದುಡ್ಡಿನ ವಿಷಯದಲ್ಲಿ ನೆರವು ನೀಡಲು ಸಾಧ್ಯವಿರಬಹುದು. ಹೀಗೆ ಎಲ್ಲರಿಗೂ ಹೆತ್ತವರ ಕಾಳಜಿ ವಹಿಸುವುದರಲ್ಲಿ ಪಾಲಿದೆ ಎನ್ನುವುದನ್ನು ಪ್ರತಿಯೊಬ್ಬರು ನೆನಪಲ್ಲಿಡಬೇಕು. ಸಮಯ ಸಂದಂತೆ ಅವರು ಬೇರೆ ರೀತಿಯ ಸಹಾಯ ಕೂಡ ನೀಡಬೇಕಾಗಬಹುದು. ಸರದಿ ಪ್ರಕಾರ ಒಂದೊಂದು ಸಾರಿ ಒಬ್ಬೊಬ್ಬರು ಒಂದೊಂದು ರೀತಿಯ ನೆರವು ನೀಡಬೇಕಾಗಬಹುದು.

4. ವೃದ್ಧರ ಆರೈಕೆ ಮಾಡುವಾಗ ಕುಟುಂಬ ಸದಸ್ಯರು ಯಾವೆಲ್ಲ ಸಹಾಯವನ್ನು ಪಡೆದುಕೊಳ್ಳಬಹುದು?

4 ನೀವು ಹೆತ್ತವರಿಗೆ ಸಹಾಯ ಮಾಡಲು ಆರಂಭಿಸಿದಂದಿನಿಂದ ಅವರ ಕಾಯಿಲೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ಒಂದುವೇಳೆ ಅಪ್ಪ ಅಥವಾ ಅಮ್ಮನಿಗೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುವ ಯಾವುದಾದರೂ ಆರೋಗ್ಯ ಸಮಸ್ಯೆಯಿರುವಲ್ಲಿ ಅದರಿಂದಾಗಿ ಮುಂದೆ ಏನೆಲ್ಲ ಆಗಬಹುದು ಎಂದು ತಿಳಿದುಕೊಳ್ಳಿ. (ಜ್ಞಾನೋ. 1:5) ವಯಸ್ಸಾದವರಿಗೆ ಸೌಲಭ್ಯಗಳನ್ನು ಒದಗಿಸುವ ಸರ್ಕಾರಿ ಸೇವಾ ಸಂಸ್ಥೆಗಳಿರುವಲ್ಲಿ ಅವುಗಳನ್ನು ಸಂಪರ್ಕಿಸಿ. ವೃದ್ಧರನ್ನು ಉತ್ತಮವಾಗಿ ಕಾಳಜಿ ವಹಿಸಲು ನಿಮಗೆ ನೆರವಾಗುವ ಯಾವುದಾದರೂ ಯೋಜನೆಗಳಿವೆಯೋ ಎಂದು ತಿಳಿದುಕೊಳ್ಳಿ. ಕೌಟುಂಬಿಕ ಸನ್ನಿವೇಶಗಳು ಈ ರೀತಿ ಮಾರ್ಪಡುವಾಗ ನಿಮಗೆ ಆತಂಕವಾಗಬಹುದು. ಸಂಭವಿಸುತ್ತಿರುವುದನ್ನು ಅರಗಿಸಿಕೊಳ್ಳಲು ಆಗದಿರಬಹುದು, ಮನಸ್ಸು ಗೊಂದಲದ ಗೂಡಾಗಬಹುದು ಅಥವಾ ಏನನ್ನೋ ಕಳೆದುಕೊಳ್ಳುತ್ತಿರುವ ಭಾವನೆ ನಿಮ್ಮ ಮನಸ್ಸನ್ನು ಆವರಿಸಬಹುದು. ಹಾಗಂತ ಕೊರಗುತ್ತಾ ಸುಮ್ಮನಿರಬೇಡಿ. ಆಪ್ತ ಸ್ನೇಹಿತರೊಬ್ಬರ ಹತ್ತಿರ ನಿಮ್ಮ ನೋವನ್ನು ಹೇಳಿಕೊಳ್ಳಿ. ಎಲ್ಲಕ್ಕೂ ಮುಖ್ಯವಾಗಿ ನಿಮ್ಮ ಹೃದಯಭಾರವನ್ನು ಯೆಹೋವನಲ್ಲಿ ತೋಡಿಕೊಳ್ಳಿ. ಯಾವುದೇ ಸನ್ನಿವೇಶ ಬಂದರೂ ಅದನ್ನು ಸಂಭಾಳಿಸಲು ಬೇಕಾಗಿರುವ ಮನಶ್ಶಾಂತಿಯನ್ನು ಆತನು ಕೊಡುವನು.—ಕೀರ್ತ. 55:22; ಜ್ಞಾನೋ. 24:10; ಫಿಲಿ. 4:6, 7.

5. ವೃದ್ಧರ ಆರೈಕೆ ಹೇಗೆ ಮಾಡಬಹುದೆಂದು ಮುಂಚಿತವಾಗಿ ಯೋಚಿಸಿಡುವುದು ವಿವೇಕಯುತ ಏಕೆ?

5 ಕೆಲವು ವೃದ್ಧರು ಮತ್ತವರ ಕುಟುಂಬ ಸದಸ್ಯರು ಸಮಸ್ಯೆ ಎದುರಾಗುವ ಮುಂಚೆಯೇ ಅದನ್ನು ಹೇಗೆ ನಿಭಾಯಿಸಬಹುದೆಂದು ಯೋಚಿಸಿಡುತ್ತಾರೆ. ಉದಾಹರಣೆಗೆ, ಹೆತ್ತವರು ಎಲ್ಲಿ ಇದ್ದರೆ ಅವರನ್ನು ನೋಡಿಕೊಳ್ಳಲು ಹೆಚ್ಚು ಸುಲಭವಾಗುತ್ತದೆ? ಮಗನ ಮನೆಯಲ್ಲಾ, ಇಲ್ಲ ಮಗಳ ಮನೆಯಲ್ಲಾ? ಅಥವಾ ಸ್ಥಳೀಕವಾಗಿ ಬೇರೆ ಯಾವುದಾದರೂ ಏರ್ಪಾಡು ಮಾಡಬಹುದಾ? ಎಂದು ಯೋಚಿಸಿಡುತ್ತಾರೆ. ಈ ರೀತಿಯಲ್ಲಿ “ಕಷ್ಟಸಂಕಟ” ಬಂದ ಮೇಲೆ ಅಲ್ಲ, ಅವು ಬರುವ ಮುಂಚೆಯೇ ಅವರು ಅದಕ್ಕಾಗಿ ತಯಾರಾಗುತ್ತಾರೆ. (ಕೀರ್ತ. 90:10) ಅನೇಕ ಕುಟುಂಬಗಳು ಈ ವಿಷಯಗಳಲ್ಲಿ ಮುಂತಯಾರಿ ಮಾಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಏನಾದರೂ ಸಂಭವಿಸಿದಾಗ ಕೊನೆ ಕ್ಷಣದಲ್ಲಿ ಗಡಿಬಿಡಿಯಲ್ಲಿ ನಿರ್ಣಯ ಮಾಡಬೇಕಾಗಿ ಬರುತ್ತದೆ. ಆದರೆ “ಇಂಥ ನಿರ್ಣಯಗಳನ್ನು ಮಾಡಲು ಅದು ತಕ್ಕ ಸಮಯ ಅಲ್ಲವೇ ಅಲ್ಲ” ಎನ್ನುತ್ತಾರೆ ಪರಿಣತರೊಬ್ಬರು. ಏಕೆಂದರೆ ಹಠಾತ್‌ ಸನ್ನಿವೇಶಗಳಲ್ಲಿ ಏನು ಮಾಡಬೇಕೆಂದು ತೋಚದೆ ಕುಟುಂಬ ಸದಸ್ಯರು ತುಂಬ ಒತ್ತಡಕ್ಕೊಳಗಾಗಬಹುದು. ಇದರಿಂದಾಗಿ ಜಗಳಗಳಾಗುವ ಸಾಧ್ಯತೆಯಿದೆ. ಆದರೆ ತುಂಬ ಮುಂಚೆಯೇ ಯೋಜನೆ ಮಾಡಿರುವಲ್ಲಿ ಅನಿರೀಕ್ಷಿತ ಸಂದರ್ಭಗಳು ಬಂದಾಗಲೂ ಹೊಂದಾಣಿಕೆಗಳನ್ನು ಮಾಡಲು ಅಷ್ಟೊಂದು ಕಷ್ಟವಾಗುವುದಿಲ್ಲ.—ಜ್ಞಾನೋ. 20:18.

ವೃದ್ಧರ ಅಗತ್ಯಗಳನ್ನು ಪೂರೈಸುವುದು ಹೇಗೆಂದು ಕುಟುಂಬವಾಗಿ ಮಾತಾಡಿ (ಪ್ಯಾರ 6-8 ನೋಡಿ)

6. ವೃದ್ಧ ಹೆತ್ತವರು ಉಳುಕೊಳ್ಳುವ ವಿಷಯದಲ್ಲಿ ಮುಂಚಿತವಾಗಿ ಮಾತಾಡುವುದರಿಂದ ಹೆತ್ತವರೂ ಮಕ್ಕಳೂ ಹೇಗೆ ಪ್ರಯೋಜನ ಪಡೆಯುತ್ತಾರೆ?

6 ವೃದ್ಧ ಹೆತ್ತವರು ಎಲ್ಲಿ ಉಳಿದುಕೊಳ್ಳಬೇಕಾಗಬಹುದು ಮತ್ತು ಉಳುಕೊಳ್ಳುವ ವಿಷಯದಲ್ಲಿ ಮುಂದೆ ಯಾವುದಾದರೂ ಬದಲಾವಣೆಗಳನ್ನು ಮಾಡಬೇಕಾಗಬಹುದಾ ಎಂಬೆಲ್ಲ ವಿಷಯಗಳ ಕುರಿತು ಅವರೊಂದಿಗೆ ಮಾತಾಡಲು ಮುಜುಗರವೆನಿಸಬಹುದು. ಆದರೆ ಹಾಗೆ ಮಾತಾಡಿದ್ದರಿಂದ ಅನೇಕರು ಪ್ರಯೋಜನ ಪಡೆದಿದ್ದಾರೆ. ಏಕೆ? ಏಕೆಂದರೆ ಕಷ್ಟಕರ ಸನ್ನಿವೇಶಗಳು ಏಳುವ ಮುಂಚೆಯೇ ಅವುಗಳ ಕುರಿತು ಮಾತನಾಡುವುದರಿಂದ  ಅನಿಸಿಕೆಗಳನ್ನು ವ್ಯಕ್ತಪಡಿಸಲು, ಇನ್ನೊಬ್ಬರ ಅಭಿಪ್ರಾಯಗಳಿಗೆ ಕಿವಿಗೊಡಲು, ಸರಿಯಾದ ಯೋಜನೆಗಳನ್ನು ಮಾಡಲು ಸುಲಭವಾಗುತ್ತದೆ. ಕುಟುಂಬವು ಯಾವುದೇ ಒತ್ತಡದಲ್ಲಿರದ ಕಾರಣ ಎಲ್ಲರೂ ಮುಕ್ತವಾಗಿ ಮಾತಾಡಲು ಸಾಧ್ಯವಾಗುತ್ತದೆ. ಇದರಿಂದ ಒಬ್ಬರಿಗೊಬ್ಬರು ಆಪ್ತರಾಗುತ್ತಾರೆ. ಈ ರೀತಿ ಪ್ರೀತಿಯಿಂದ ಮಾತನಾಡಿದ್ದು ಯಾವಾಗಲೂ ಮನಃಪಟಲದಲ್ಲಿ ಉಳಿಯುತ್ತದೆ. ಒಂದುವೇಳೆ ಹೆತ್ತವರು ಯಾರ ಮೇಲೂ ಅವಲಂಬಿಸದೆ ತಮ್ಮಷ್ಟಕ್ಕೆ ಇರಲು ಇಷ್ಟಪಡುವುದಾದರೂ ಮುಂದೆ ಅಗತ್ಯ ಬಿದ್ದಾಗ ಯಾವ ರೀತಿಯ ನೆರವನ್ನು ತಾವು ಬಯಸುತ್ತೇವೆಂದು ಮೊದಲೇ ಮಕ್ಕಳೊಂದಿಗೆ ಮಾತಾಡುವುದರಿಂದ ಮಕ್ಕಳಿಗೂ ಬೆಂಬಲ ಕೊಡಲು ಸುಲಭವಾಗುತ್ತದೆ.

7, 8. ಕುಟುಂಬವು ಒಟ್ಟುಗೂಡಿ ಯಾವ ವಿಷಯಗಳನ್ನು ಚರ್ಚಿಸಬೇಕು? ಯಾಕೆ?

7 ಹೆತ್ತವರೇ ನಿಮಗೊಂದು ಕಿವಿಮಾತು. ಈ ರೀತಿ ಕೂತು ಮಾತಾಡುವಾಗ ನಿಮ್ಮ ಆಶೆ-ಆಕಾಂಕ್ಷೆಗಳನ್ನು, ನೀವು ಎಷ್ಟರ ಮಟ್ಟಿಗೆ ನಿಮ್ಮ ಖರ್ಚನ್ನು ನಿಭಾಯಿಸಬಹುದು ಎಂಬುದನ್ನು ಅಥವಾ ಆರೈಕೆಯ ವಿಷಯದಲ್ಲಿ ನೀವು ಇಷ್ಟಪಡುವ ಬೇರೆ ವಿಧಾನವಿದ್ದರೆ ಅದನ್ನು ಮುಕ್ತವಾಗಿ ಹೇಳಿ. ಇದರಿಂದ ಮುಂದೆ ಯಾವತ್ತಾದರೂ ನಿರ್ಣಯ ಮಾಡಲು ನಿಮ್ಮಿಂದ ಅಸಾಧ್ಯವಾಗುವ ಸಂದರ್ಭದಲ್ಲಿ ಮಕ್ಕಳು ನೀವೇನು ಹೇಳಿದ್ದಿರೋ ಅದಕ್ಕೆ ಹೊಂದಿಕೆಯಲ್ಲಿ ನಿರ್ಣಯ ಮಾಡಲು ಸಾಧ್ಯವಾಗುವುದು. ಅದೇ ಸಮಯದಲ್ಲಿ ಮಕ್ಕಳು ನಿಮ್ಮ ಅಭಿಪ್ರಾಯಗಳನ್ನು ಗೌರವಿಸಲು ಮತ್ತು ನೀವು ನಿಮ್ಮಿಷ್ಟದಂತೆ ಜೀವಿಸಲು ಸಾಧ್ಯವಾದುದ್ದೆಲ್ಲವನ್ನು ಮಾಡುತ್ತಾರೆ. (ಎಫೆ. 6:2-4) ಉದಾಹರಣೆಗೆ, ನೀವು ನಿಮ್ಮ ಮಗ/ಳ ಜೊತೆ ವಾಸಿಸಲು ಬಯಸುತ್ತೀರಾ? ಅಥವಾ ನಿಮಗೆ ಬೇರೆ ಏನಾದರೂ ಇಷ್ಟವಿದೆಯಾ? ಅದನ್ನು ಅವರಿಗೆ ಬಿಚ್ಚುಮನಸ್ಸಿನಿಂದ ಹೇಳಿ. ಅದೇ ಸಮಯದಲ್ಲಿ ನಿಮ್ಮ ಯೋಚನಾಧಾಟಿ ಮತ್ತು ಇತರರ ಯೋಚನಾಧಾಟಿ ಬೇರೆಬೇರೆ ಆಗಿರಬಹುದು. ಯಾರಿಗೇ ಆಗಲಿ ತಮ್ಮ ಯೋಚನಾಧಾಟಿಯನ್ನು ಹೊಂದಿಸಿಕೊಳ್ಳಲು ಸಮಯ ಹಿಡಿಯುತ್ತದೆ ಎನ್ನುವುದನ್ನೂ ಮನಸ್ಸಿನಲ್ಲಿಡಿ.

8 ಹೀಗೆ ಮುಂಚಿತವಾಗಿ ಯೋಜಿಸುವಲ್ಲಿ ಮತ್ತು ಆ ಕುರಿತು ಮಾತಾಡುವಲ್ಲಿ ಎಷ್ಟೋ ಸಮಸ್ಯೆಗಳನ್ನು ತಡೆಯಬಹುದು. (ಜ್ಞಾನೋ. 15:22) ಇಂಥ ಮಾತುಕತೆಯಲ್ಲಿ ಔಷಧೋಪಚಾರದ ಕುರಿತು ಮತ್ತು ಅದರಲ್ಲಿ ನಿಮಗೆ ಯಾವುದು ಇಷ್ಟ, ಇಷ್ಟವಿಲ್ಲ ಎಂಬ ಕುರಿತು ಚರ್ಚಿಸುವುದು ಕೂಡ ಸೇರಿದೆ. ಯೆಹೋವನ ಸಾಕ್ಷಿಗಳು ಬಳಸುವ ಅಡ್ವಾನ್ಸ್‌ ಹೆಲ್ತ್‌ ಕೇರ್‌ ಡೈರೆಕ್ಟಿವ್‍ನಲ್ಲಿರುವ ಮಾಹಿತಿಯನ್ನು ಸಹ ಚರ್ಚಿಸಲೇಬೇಕು. ಯಾವೆಲ್ಲ ಚಿಕಿತ್ಸೆಗಳು ಲಭ್ಯವಿವೆ ಎಂದು ತಿಳಿದುಕೊಳ್ಳುವ, ಅದನ್ನು ಸ್ವೀಕರಿಸಬೇಕಾ ಬೇಡವಾ ಎನ್ನುವುದನ್ನು ನಿರ್ಧರಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗಿದೆ. ಈ ಕುರಿತು ಒಬ್ಬ ವ್ಯಕ್ತಿಯ ಆಯ್ಕೆಗಳನ್ನು ಆ ಡೈರೆಕ್ವಿವ್‍ನಲ್ಲಿ ನಮೂದಿಸಿರಬೇಕು. ತುರ್ತುಪರಿಸ್ಥಿತಿಯಲ್ಲಿ ಯಾರನ್ನು ಸಂಪರ್ಕಿಸಬೇಕೆಂದು ಕೂಡ ಆ ಡೈರೆಕ್ವಿವ್‍ನಲ್ಲಿ ನಮೂದಿಸಿರಬೇಕು. ಇದರಿಂದ ಅಗತ್ಯವಿರುವಾಗ ಸರಿಯಾದ ನಿರ್ಣಯಗಳನ್ನು ಆ ಭರವಸಾರ್ಹ ವ್ಯಕ್ತಿ ಮಾಡಲು ಸಾಧ್ಯವಾಗುವುದು. ವೃದ್ಧ ಹೆತ್ತವರ ಅಡ್ವಾನ್ಸ್‌ ಹೆಲ್ತ್‌ ಕೇರ್‌ ಡೈರೆಕ್ಟಿವ್‍ನ ನಕಲು ಪ್ರತಿಯನ್ನು ಆರೈಕೆ ಮಾಡುವವರು, ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದ ವ್ಯಕ್ತಿಗಳು ಇಟ್ಟುಕೊಂಡಿರಬೇಕು. ಕೆಲವು ವೃದ್ಧರು ಈ ಡೈರೆಕ್ಟಿವ್‍ನ ಪ್ರತಿಯನ್ನು ಪ್ರಾಮುಖ್ಯ ಕಾಗದಪತ್ರಗಳೊಂದಿಗೆ ಉದಾಹರಣೆಗೆ, ಉಯಿಲು, ವಿಮಾ ಪಾಲಿಸಿ, ಬ್ಯಾಂಕ್‌ ಅಥವಾ ಸರಕಾರಿ ಕಾಗದಪತ್ರಗಳ ಜೊತೆ ಇಡುತ್ತಾರೆ.

ಬದಲಾದ ಪರಿಸ್ಥಿತಿಗಳನ್ನು ನಿಭಾಯಿಸುವುದು

9, 10. ವೃದ್ಧ ಹೆತ್ತವರಿಗೆ ಮಕ್ಕಳಿಂದ ಯಾವಾಗ ಹೆಚ್ಚು ಸಹಾಯ ಬೇಕಾಗಬಹುದು?

9 ಅನೇಕ ಕುಟುಂಬಗಳು ವೃದ್ಧ ಹೆತ್ತವರ ಸಾಮರ್ಥ್ಯಕ್ಕನುಗುಣವಾಗಿ ಅವರು ಬಯಸುವಷ್ಟು ಸ್ವಾತಂತ್ರ್ಯವನ್ನು ಕೊಡಲು ನಿರ್ಧರಿಸುತ್ತಾರೆ. ಎಷ್ಟರ ವರೆಗೆ ಹೆತ್ತವರಿಗೆ ಅಡುಗೆ ಮಾಡಲು, ಮನೆ ಶುಚಿಮಾಡಲು, ಔಷಧ ತಕ್ಕೊಳ್ಳಲು ಆಗುತ್ತದೋ ಮತ್ತು ಇತರರೊಟ್ಟಿಗೆ ಮಾತಾಡಲು ಯಾವುದೇ ತೊಂದರೆಯಿರುವುದಿಲ್ಲವೋ ಅಷ್ಟರ ವರೆಗೆ ಮಕ್ಕಳು ಅವರ ದಿನನಿತ್ಯದ ಆಗುಹೋಗುಗಳಲ್ಲಿ ಪ್ರತಿಯೊಂದನ್ನು ನಿಯಂತ್ರಣಕ್ಕೆ ತಕ್ಕೊಳ್ಳದಿರುವುದು ಒಳ್ಳೇದು. ಆದರೆ ದಿನ ಕಳೆದಂತೆ ಹೆತ್ತವರಿಗೆ ಆಚೀಚೆ ಓಡಾಡಲು, ಖರೀದಿಗಾಗಿ ಹೊರಗೆ ಹೋಗಲು ಕಷ್ಟವಾಗುವಲ್ಲಿ, ಮರೆವು ಜಾಸ್ತಿಯಾಗುವಲ್ಲಿ ಮಕ್ಕಳು ಸಹಾಯಕ್ಕೆ ಬರುವುದು ಅವಶ್ಯ.

10 ವಯಸ್ಸಾಗುತ್ತಾ ಹೋದಂತೆ ಗೊಂದಲ, ಖಿನ್ನತೆ, ಮಲಮೂತ್ರ ನಿಯಂತ್ರಣದಲ್ಲಿ ಇರದಿರುವುದು, ಕಿವಿ ಮಂದವಾಗುವುದು, ದೃಷ್ಟಿ ಕಡಿಮೆಯಾಗುವುದು, ಮರೆವು ಇಂಥ  ಆರೋಗ್ಯ ಸಮಸ್ಯೆಗಳು ತೋರಿಬರಬಹುದು. ಇದಕ್ಕೆ ಕಾರಣ ವೃದ್ಧಾಪ್ಯವಾದರೂ ಈ ಸಮಸ್ಯೆಗಳಿಗೆ ಚಿಕಿತ್ಸೆಗಳಿವೆ. ಇಂಥದ್ದೇನಾದರೂ ತೋರಿಬಂದ ಕೂಡಲೆ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಬಳಿ ಹೋಗಲು ಮಕ್ಕಳೇ ಮೊದಲ ಹೆಜ್ಜೆ ತಕ್ಕೊಳ್ಳಬೇಕಾಗಬಹುದು. ಮಾತ್ರವಲ್ಲ ಸಮಯ ಸಂದಂತೆ ಈ ಮುಂಚೆ ಹೆತ್ತವರು ಸ್ವತಃ ಮಾಡಿಕೊಳ್ಳುತ್ತಿದ್ದ ಕೆಲಸಗಳನ್ನು ಮಕ್ಕಳೇ ನಿರ್ವಹಿಸಬೇಕಾಗಬಹುದು. ವೃದ್ಧ ಹೆತ್ತವರನ್ನು ಅತ್ಯುತ್ತಮವಾಗಿ ಆರೈಕೆಮಾಡಲಿಕ್ಕಾಗಿ ಮಕ್ಕಳು ಬೇರೆಯವರೊಂದಿಗೆ ಅವರ ಪರವಾಗಿ ಮಾತಾಡಬೇಕಾಗಬಹುದು, ಅವರ ಕಾಗದಪತ್ರಗಳನ್ನು ನಿರ್ವಹಿಸಬೇಕಾಗಬಹುದು, ಅವರನ್ನು ಎಲ್ಲಿ ಬೇಕೋ ಅಲ್ಲಿ ಕರೆದುಕೊಂಡು ಹೋಗಬೇಕಾಗಬಹುದು.—ಜ್ಞಾನೋ. 3:27.

11. ಹೆತ್ತವರು ಬದಲಾವಣೆಗಳಿಗೆ ಸುಲಭವಾಗಿ ಹೊಂದಿಕೊಳ್ಳುವಂತೆ ನೆರವಾಗಲು ಏನು ಮಾಡಸಾಧ್ಯವಿದೆ?

11 ಒಂದುವೇಳೆ ನಿಮ್ಮ ಹೆತ್ತವರು ವಾಸಿಯಾಗದಿರುವ ಖಾಯಿಲೆಯಿಂದ ಬಳಲುತ್ತಿರುವಲ್ಲಿ ಅವರನ್ನು ನೋಡಿಕೊಳ್ಳುವ ವಿಧದಲ್ಲಿ ಅಥವಾ ಅವರು ವಾಸಿಸುವ ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಗಬಹುದು. ಬದಲಾವಣೆಗಳು ಆದಷ್ಟು ಚಿಕ್ಕಪುಟ್ಟದ್ದಾಗಿದ್ದರೆ ಒಳ್ಳೇದು. ಅವರಿಗೆ ಹೊಂದಿಕೊಳ್ಳಲು ಸುಲಭ. ಒಂದುವೇಳೆ ನೀವು ಸ್ವಲ್ಪ ದೂರದಲ್ಲಿ ವಾಸಿಸುತ್ತಿರುವಲ್ಲಿ ಹೆತ್ತವರ ಮನೆಯ ಹತ್ತಿರ ವಾಸಿಸುವ ಒಬ್ಬ ಸಹೋದರ/ಸಹೋದರಿ ಅಥವಾ ನೆರಮನೆಯವರು ಯಾರಾದರೂ ನಿಮ್ಮ ಹೆತ್ತವರನ್ನು ನೋಡಿ ಅವರು ಹೇಗಿದ್ದಾರೆಂದು ನಿಮಗೆ ಆಗಾಗ್ಗೆ ತಿಳಿಸುವಂತೆ ಏರ್ಪಾಡು ಮಾಡಿದರೆ ಸಾಕಾಗಿರಬಹುದೋ? ಅಡುಗೆ ಮತ್ತು ಶುಚಿಮಾಡುವುದರಲ್ಲಿ ಮಾತ್ರ ಅವರಿಗೆ ಸಹಾಯ ಬೇಕೋ? ಮನೆಯೊಳಗೆ ಸ್ವಲ್ಪ ಬದಲಾವಣೆ ಮಾಡುವಲ್ಲಿ ಅವರು ಆಚೀಚೆ ತಿರುಗಲು, ಸ್ನಾನ ಮಾಡಲು ಅಥವಾ ಇತರ ಕೆಲಸಗಳನ್ನು ಮಾಡಲು ಸುಲಭವೂ ಸುರಕ್ಷಿತವೂ ಆಗಿರುತ್ತದೋ? ಹೆತ್ತವರು ತಮ್ಮಷ್ಟಕ್ಕೆ ವಾಸಿಸಲು ಬಯಸುವಲ್ಲಿ ಕೆಲಸದವರೊಬ್ಬರನ್ನು ನೇಮಿಸುವುದನ್ನು ಮಾತ್ರ ಅವರು ಎದುರುನೋಡುತ್ತಿದ್ದಾರಾ? ಇದನ್ನೆಲ್ಲ ನೋಡಬೇಕು. ಆದರೆ ಯಾರೂ ಹೆತ್ತವರೊಟ್ಟಿಗೆ ಇಲ್ಲದಿರುವುದು ಅಪಾಯವೆಂದು ಗೊತ್ತಾದಲ್ಲಿ ಅವರ ಸಹಾಯಕ್ಕಾಗಿ ಖಾಯಂ ಏರ್ಪಾಡು ಮಾಡಬೇಕು. ಪರಿಸ್ಥಿತಿ ಎಂಥದ್ದೇ ಆಗಿರಲಿ ಸ್ಥಳೀಕವಾಗಿ ಯಾವುದಾದರೂ ಸೇವಾಸೌಲಭ್ಯಗಳು ಲಭ್ಯವಿದೆಯೇ ಎಂದು ಸಹ ನೋಡಿ. *ಜ್ಞಾನೋ. 21:5 ಓದಿ.

ಕೆಲವರು ಸವಾಲುಗಳನ್ನು ನಿಭಾಯಿಸುವ ವಿಧ

12, 13. ದೂರದಲ್ಲಿ ವಾಸಿಸುವ ಮಕ್ಕಳು ಹೇಗೆ ತಮ್ಮ ಹೆತ್ತವರನ್ನು ಸನ್ಮಾನಿಸುತ್ತಾರೆ ಹಾಗೂ ಅವರ ಆರೈಕೆ ಮಾಡುತ್ತಾರೆ?

12 ನಾವು ನಮ್ಮ ಹೆತ್ತವರನ್ನು ಪ್ರೀತಿಸುವುದರಿಂದ ಅವರು ಸುರಕ್ಷಿತವಾಗಿ, ಆರಾಮವಾಗಿ ಇರಬೇಕೆಂದು ಬಯಸುತ್ತೇವೆ. ಅವರಿಗೆ ಬೇಕಾದ ಆರೈಕೆ ಸಿಗುತ್ತಿದೆ ಎಂದು ತಿಳಿದಿರುವುದು ನಮ್ಮ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಆದರೆ ಬೇರೆ ಕರ್ತವ್ಯಗಳಿಂದಾಗಿ ಅನೇಕ ವಯಸ್ಕ ಮಕ್ಕಳು ಹೆತ್ತವರಿರುವ ಸ್ಥಳದಿಂದ ದೂರ ವಾಸಿಸುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿರುವ ಕೆಲವರು ರಜೆ ತಕ್ಕೊಂಡು ಬಂದು ಅಪ್ಪಅಮ್ಮನನ್ನು ನೋಡಿಕೊಂಡು ಹೋಗುತ್ತಾರೆ. ಅಪ್ಪಅಮ್ಮನಿಂದ ಮಾಡಲಾಗದ ಕೆಲಸಗಳನ್ನು ಮಾಡಿಕೊಡುತ್ತಾರೆ. ಮಕ್ಕಳು ಹೆತ್ತವರಿಗೆ ಆಗಾಗ್ಗೆ, ಸಾಧ್ಯವಾದರೆ ಪ್ರತಿದಿನ ಫೋನ್‌ ಮಾಡಿದರೆ, ಪತ್ರಗಳನ್ನು ಬರೆದರೆ ಅಥವಾ ಇ-ಮೇಲ್‌ ಕಳುಹಿಸಿದರೆ ತಮ್ಮನ್ನು ಮಕ್ಕಳು ತುಂಬ ಪ್ರೀತಿಸುತ್ತಾರೆಂಬ ಆಶ್ವಾಸನೆ ಹೆತ್ತವರಿಗೆ ಸಿಗುತ್ತದೆ.—ಜ್ಞಾನೋ. 23:24, 25.

13 ಸನ್ನಿವೇಶ ಹೇಗೆಯೇ ಇರಲಿ, ನಿಮ್ಮ ಹೆತ್ತವರಿಗೆ ಪ್ರತಿದಿನ ಯಾವ ಸಹಾಯದ ಅಗತ್ಯವಿದೆ ಎಂದು ನಿರ್ಧರಿಸಬೇಕು. ನೀವು ದೂರದಲ್ಲಿ ವಾಸಿಸುತ್ತಿರುವಲ್ಲಿ ಹಾಗೂ ನಿಮ್ಮ ಹೆತ್ತವರು ಸಾಕ್ಷಿಗಳಾಗಿರುವಲ್ಲಿ ಅವರ ಸಭಾ ಹಿರಿಯರೊಂದಿಗೆ ಮಾತಾಡಿ ಅವರ ಸಲಹೆಯನ್ನು ಕೇಳಬಹುದು. ಮುಖ್ಯವಾಗಿ ಇದರ ಕುರಿತು ಪ್ರಾರ್ಥಿಸುತ್ತಿರಲು ಮರೆಯದಿರಿ. (ಜ್ಞಾನೋಕ್ತಿ 11:14 ಓದಿ.) ನಿಮ್ಮ ತಂದೆತಾಯಿ ಸಾಕ್ಷಿಗಳಲ್ಲದಿದ್ದರೂ ನೀವು ಅವರನ್ನು “ಸನ್ಮಾನಿಸಬೇಕು.” (ವಿಮೋ. 20:12; ಜ್ಞಾನೋ. 23:22) ಹೆತ್ತವರ ಆರೈಕೆಯ ವಿಷಯದಲ್ಲಿ ಎಲ್ಲ ಕುಟುಂಬಗಳು ಒಂದೇ ರೀತಿಯ ನಿರ್ಣಯಗಳನ್ನು ಮಾಡಲಿಕ್ಕಿಲ್ಲ. ಕೆಲವರು ಹೆತ್ತವರನ್ನು ತಮ್ಮೊಂದಿಗೆ ಅಥವಾ ತಮ್ಮ ಮನೆಯ ಹತ್ತಿರದಲ್ಲಿ ವಾಸಿಸುವಂತೆ ಏರ್ಪಡಿಸಬಹುದು. ಆದರೆ ಇದು ಯಾವಾಗಲೂ ಸಾಧ್ಯವಾಗಲಿಕ್ಕಿಲ್ಲ. ಏಕೆಂದರೆ ಕೆಲವು ಹೆತ್ತವರಿಗೆ ತಮ್ಮ ಮಕ್ಕಳೊಂದಿಗೆ ಮತ್ತವರ ಕುಟುಂಬದೊಂದಿಗೆ ಜೀವಿಸಲು ಇಷ್ಟವಿರುವುದಿಲ್ಲ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು, ಯಾರಿಗೂ ಹೊರೆಯಾಗದಿರಲು ಬಯಸುತ್ತಾರೆ. ಇನ್ನು ಕೆಲವು ಹೆತ್ತವರು ತಮ್ಮ ಆರೈಕೆಗಾಗಿ ಯಾರನ್ನಾದರೂ ಮನೆಯಲ್ಲಿ ಕೆಲಸಕ್ಕಿಟ್ಟುಕೊಳ್ಳಲು ಬಯಸಬಹುದು. ಅವರಿಗೆ ಸಂಬಳ ಕೊಡಲು ಶಕ್ತರಾಗಿರಬಹುದು.—ಪ್ರಸಂ. 7:12.

14. ಹೆತ್ತವರ ಆರೈಕೆಮಾಡುವ ಜವಾಬ್ದಾರಿ ಹೊತ್ತವರಿಗೆ ಯಾವ ಸಮಸ್ಯೆಗಳು ಬರಬಹುದು?

14 ತುಂಬ ಕುಟುಂಬಗಳಲ್ಲಿ ಹೆತ್ತವರ ಆರೈಕೆ ಮಾಡುವುದರಲ್ಲಿ ಹೆಚ್ಚಿನ ಜವಾಬ್ದಾರಿ ಹತ್ತಿರದಲ್ಲಿ ವಾಸಿಸುತ್ತಿರುವ ಮಗ ಅಥವಾ ಮಗಳ ಹೆಗಲ ಮೇಲೆ ಬೀಳಬಹುದು. ಹಾಗಿದ್ದರೂ ಆ ಮಗ ಅಥವಾ ಮಗಳು ಸಹ ಸಮತೂಕ ಮನೋಭಾವ ಇಟ್ಟುಕೊಳ್ಳಬೇಕು. ಹೆತ್ತವರ ಆರೈಕೆ ಮಾಡುವಾಗ ತಮ್ಮ ಸ್ವಂತ ಕುಟುಂಬದ ಅಗತ್ಯಗಳನ್ನು ಅವರು ಅಲಕ್ಷಿಸಬಾರದು. ಮಾತ್ರವಲ್ಲ ಎಷ್ಟು ಸಮಯ, ಶಕ್ತಿ ವ್ಯಯಿಸಬಹುದು ಎಂಬ ವಿಷಯದಲ್ಲಿ ಪ್ರತಿಯೊಬ್ಬರಿಗೆ ಅವರದ್ದೇ ಆದ ಮಿತಿಗಳಿರುತ್ತವೆ. ಇಲ್ಲವೆ ಆರೈಕೆ ಮಾಡುತ್ತಿರುವ ಮಗ ಅಥವಾ ಮಗಳ ಪರಿಸ್ಥಿತಿ ಇದ್ದ ಹಾಗೇ ಇರಲಿಕ್ಕಿಲ್ಲ, ಬದಲಾಗಬಹುದು. ಹಾಗಾಗಿ ಆರೈಕೆಯ ಏರ್ಪಾಡನ್ನು ಬದಲಾಯಿಸಬೇಕಾಗಬಹುದು. ಕುಟುಂಬದ ಒಬ್ಬ ಸದಸ್ಯನ ಮೇಲೆಯೇ ಎಲ್ಲ ಭಾರ  ಬೀಳುತ್ತಿದೆಯಾ? ಬೇರೆ ಮಕ್ಕಳು ಸಹ ಸಹಾಯ ಮಾಡಬಹುದಾ? ಸರದಿ ಪ್ರಕಾರ ತಂದೆತಾಯಿಯನ್ನು ನೋಡಿಕೊಳ್ಳಬಹುದಾ? ಎಂದು ಪರಿಗಣಿಸಬೇಕು.

15. ಆರೈಕೆ ಮಾಡುವವರು ಸುಸ್ತಾಗಿ ಸೋತುಹೋಗದಂತೆ ಏನು ಮಾಡಬಲ್ಲೆವು?

15 ಹಗಲಿರುಳೂ ವೃದ್ಧ ಹೆತ್ತವರ ಆರೈಕೆ ಮಾಡುವವರು ತುಂಬ ಸುಸ್ತಾಗಿ ಬಿಡಬಹುದು. (ಪ್ರಸಂ. 4:6) ಮಕ್ಕಳು ತಮ್ಮ ಪ್ರೀತಿಯ ಹೆತ್ತವರಿಗೆ ತಮ್ಮಿಂದಾಗುವ ಎಲ್ಲ ಸಹಾಯವನ್ನು ಮಾಡಲು ಬಯಸುತ್ತಾರೆ. ಆದರೆ ನಿರಂತರ ಆರೈಕೆ ಮಾಡುತ್ತಿರುವಾಗ ಅವರ ಶಕ್ತಿಯೆಲ್ಲ ಬತ್ತಿಹೋಗಬಹುದು. ಇಂಥ ಸಂದರ್ಭದಲ್ಲಿ ಆರೈಕೆ ನೀಡುತ್ತಿರುವ ವ್ಯಕ್ತಿ ತನ್ನ ಇತಿಮಿತಿಯನ್ನು ಅರಿತಿರಬೇಕು. ಬೇರೆಯವರ ನೆರವನ್ನು ಕೇಳಿಕೊಳ್ಳಬಹುದು. ಬೇರೆಯವರು ಮಧ್ಯೆ ಮಧ್ಯೆ ಸಹಾಯ ನೀಡುವ ಮೂಲಕ ಆರೈಕೆ ಮಾಡುತ್ತಿರುವವರ ಭಾರವನ್ನು ಹಗುರಗೊಳಿಸಬಹುದು.

16, 17. (ಎ) ವೃದ್ಧ ಹೆತ್ತವರನ್ನು ಆರೈಕೆಮಾಡುವ ಮಕ್ಕಳಿಗೆ ಯಾವ ಸವಾಲುಗಳು ಬರಬಹುದು? (ಬಿ) ಅವುಗಳನ್ನು ಅವರು ಹೇಗೆ ನಿಭಾಯಿಸಬಲ್ಲರು? (“ಕೃತಜ್ಞತಾಭಾವದ ಆರೈಕೆ” ಚೌಕವನ್ನೂ ನೋಡಿ.)

16 ಪ್ರೀತಿಯ ಹೆತ್ತವರು ವಯಸ್ಸಾಗಿ ಕಷ್ಟಪಡುವುದನ್ನು ನೋಡುವಾಗ ನಮ್ಮ ಮನಸ್ಸು ಘಾಸಿಗೊಳ್ಳುತ್ತದೆ. ಮಾತ್ರವಲ್ಲ ಅನೇಕಬಾರಿ ಆರೈಕೆ ಮಾಡುವ ಮಕ್ಕಳಿಗೆ ದುಃಖ, ಚಿಂತೆ, ಹತಾಶೆ, ಸಿಟ್ಟು, ದೋಷಿಭಾವನೆ ಬರಬಹುದು. ಅಸಮಾಧಾನಗೊಳ್ಳಲೂಬಹುದು. ಕೆಲವೊಮ್ಮೆ ವೃದ್ಧ ಹೆತ್ತವರು ಸಹ ನೋವಾಗುವಂತೆ ಮಾತಾಡಬಹುದು ಅಥವಾ ನಾವು ಮಾಡುತ್ತಿರುವುದಕ್ಕೆ ಗಣ್ಯತೆ ತೋರಿಸದಿರಬಹುದು. ಹೀಗೆ ಸಂಭವಿಸುವಲ್ಲಿ, ಅವರ ಮೇಲೆ ಬೇಸರಪಟ್ಟುಕೊಳ್ಳಬೇಡಿ. ಮಾನಸಿಕ ಆರೋಗ್ಯ ಪರಿಣತನೊಬ್ಬನು ಹೀಗನ್ನುತ್ತಾನೆ: “ನಿಮ್ಮ ಮನಸ್ಸು ನೊಂದಾಗ ಮಾಡಬೇಕಾದ ಅತ್ಯುತ್ತಮ ವಿಷಯವೇನೆಂದರೆ ನಾವು ನೊಂದಿದ್ದೇವೆ ಎಂದು ಒಪ್ಪಿಕೊಳ್ಳುವುದೇ. ನಿಮಗೆ ಬೇಸರವಾಗಿದೆ ಎನ್ನುವುದನ್ನು ಅಲ್ಲಗಳೆಯಬೇಡಿ ಅಥವಾ ನನಗೆ ಹೀಗೆ ಅನಿಸಬಾರದು ಎಂದು ನಿಮ್ಮನ್ನು ನೀವೇ ಜರಿದುಕೊಳ್ಳಬೇಡಿ.” ನೀವು ಇನ್ನೇನು ಮಾಡಬಹುದು? ನಿಮ್ಮ ಬಾಳ ಸಂಗಾತಿಗೆ, ಕುಟುಂಬ ಸದಸ್ಯರೊಬ್ಬರಿಗೆ ಅಥವಾ ಭರವಸಾರ್ಹ ಸ್ನೇಹಿತರೊಬ್ಬರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಇದು ನೀವು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಒಂದು ತಹಬಂದಿಗೆ ತರಲು ನೆರವಾಗುವುದು.

17 ಕೆಲವೊಂದು ದೇಶಗಳಲ್ಲಿ ವೃದ್ಧ ಹೆತ್ತವರಿಗೆ ಅಗತ್ಯವಿರುವ ಆರೈಕೆಯನ್ನು ಕೊಡಲು ಬೇಕಾಗುವಷ್ಟು ಹಣ ಮಕ್ಕಳ ಬಳಿ ಇಲ್ಲದಿರುವಾಗ ಅಥವಾ ಆ ಆರೈಕೆಯನ್ನು ಮನೆಯಲ್ಲಿ ಮಾಡಲು ಆಗದಿರುವಾಗ ತಮ್ಮ ವೃದ್ಧ ಹೆತ್ತವರನ್ನು ಆರೈಕೆ ಮಾಡುವ ಕೇಂದ್ರಗಳಿಗೆ ಸೇರಿಸುವುದು ಉತ್ತಮ ಎಂಬ ನಿರ್ಣಯಕ್ಕೆ ಮಕ್ಕಳು ಬರಬಹುದು. ಒಬ್ಬಾಕೆ ಸಹೋದರಿಯು ತನ್ನ ತಾಯಿ ಅಂಥ ಆರೈಕೆ ಕೇಂದ್ರದಲ್ಲಿದ್ದಾಗ ಪ್ರತಿದಿನ ಅವರನ್ನು ನೋಡಲು ಹೋಗುತ್ತಿದ್ದಳು. ಆಕೆ ಹೀಗನ್ನುತ್ತಾಳೆ: “24 ಗಂಟೆಯೂ ಅಮ್ಮನ ಪಕ್ಕದಲ್ಲಿ ಯಾರಾದರು ಇದ್ದು ಆರೈಕೆ ಮಾಡಬೇಕಾಯಿತು. ಅದನ್ನು ಮಾಡಲು ನಮ್ಮಿಂದ ಆಗಲಿಲ್ಲ. ಅಮ್ಮನನ್ನು ವೃದ್ಧರ ಆರೈಕೆಮಾಡುವ ಕೇಂದ್ರದಲ್ಲಿ ಸೇರಿಸುವುದರ ಬಗ್ಗೆ ಯೋಚಿಸುವಾಗ ಹೃದಯ ಹಿಂಡಿದಂತಾಗುತ್ತಿತ್ತು. ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಆದರೆ ಅಲ್ಲಿ ಸೇರಿಸುವುದೇ ಉತ್ತಮವಾಗಿತ್ತು. ಅಮ್ಮನೂ ಅದನ್ನು ಒಪ್ಪಿದರು. ಅವರ ಜೀವನದ ಕೊನೆಯ ತಿಂಗಳುಗಳಲ್ಲಿ ಬೇಕಾದ ಆರೈಕೆ ಅಲ್ಲಿ ದೊರಕಿತು.”

18. ವೃದ್ಧರ ಆರೈಕೆ ಮಾಡುವವರಿಗೆ ಯಾವ ಆಶ್ವಾಸನೆ ಇದೆ?

18 ವಯಸ್ಸಾದ ಹೆತ್ತವರನ್ನು ಆರೈಕೆ ಮಾಡುವ ಜವಾಬ್ದಾರಿ ಒಂದು ಚಿಕ್ಕ ವಿಷಯವಲ್ಲ. ಅದನ್ನು ಪೂರೈಸುವುದು ದಿನಕಳೆದಂತೆ ಕಷ್ಟವಾಗಬಲ್ಲದು, ಭಾವನಾತ್ಮಕವಾಗಿ ಬಳಲಿಸಬಲ್ಲದು. ಅವರ ಆರೈಕೆ ಮಾಡುವಾಗ ಬರುವ ಸಮಸ್ಯೆಗಳನ್ನು ನಿಭಾಯಿಸಲು ಎಲ್ಲರಿಗೆ ಅನ್ವಯವಾಗುವ ನಿರ್ದಿಷ್ಟ ನಿಯಮಗಳಿಲ್ಲ. ಹಾಗಿದ್ದರೂ ಮುಂಚಿತ ಯೋಜನೆ, ಪರಸ್ಪರ ಸಹಕಾರ, ಮುಕ್ತ ಸಂವಾದ ಮಾಡುವುದರಿಂದ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಯೆಹೋವನಿಗೆ ಹೃತ್ಪೂರ್ವಕ ಪ್ರಾರ್ಥನೆ ಮಾಡುವ ಮೂಲಕ ಈ ಜವಾಬ್ದಾರಿಯನ್ನು ನೀವು ಉತ್ತಮವಾಗಿ ಹಾಗೂ ನಿಮ್ಮ ಪ್ರಿಯ ವೃದ್ಧ ಹೆತ್ತವರಿಗೆ ಗೌರವ ತೋರಿಸುವಂಥ ರೀತಿಯಲ್ಲಿ ಪೂರೈಸಸಾಧ್ಯವಿದೆ. ಆಗ ಅವರಿಗೆ ಬೇಕಾದಂಥ ಕಾಳಜಿ, ಆರೈಕೆ ಸಿಗುತ್ತಿದೆ ಎಂಬ ಸಂತೃಪ್ತಿ ನಿಮಗಿರುವುದು. (1 ಕೊರಿಂಥ 13:4-8 ಓದಿ.) ಮಾತ್ರವಲ್ಲ ಮುಖ್ಯವಾಗಿ ಹೆತ್ತವರನ್ನು ಸನ್ಮಾನಿಸುವ ನಿಮಗೆ ಯೆಹೋವನು ಮನಶ್ಶಾಂತಿಯನ್ನು ಕೊಟ್ಟು ಆಶೀರ್ವದಿಸುವನು.—ಫಿಲಿ. 4:7.

^ ಪ್ಯಾರ. 3 ಹೆತ್ತವರ ಬಯಕೆಗಳೇನು, ಮಕ್ಕಳು ಹೇಗೆ ಸಹಾಯ ಮಾಡುತ್ತಾರೆ ಎನ್ನುವುದು ಸ್ಥಳೀಕ ಸಂಸ್ಕೃತಿಯ ಮೇಲೆ ಹೊಂದಿಕೊಂಡಿರಬಹುದು. ಕೆಲವು ಕಡೆಗಳಲ್ಲಿ ವೃದ್ಧ ಹೆತ್ತವರು ಪ್ರತ್ಯೇಕವಾಗಿ ವಾಸಿಸುವುದು ಅಥವಾ ವೃದ್ಧರ ಆರೈಕೆಗಾಗಿರುವ ವಿಶೇಷ ಕೇಂದ್ರಗಳಲ್ಲಿ ವಾಸಿಸುವುದು ಸಾಮಾನ್ಯ ಮತ್ತು ಅದನ್ನವರು ಇಷ್ಟಪಡುತ್ತಾರೆ ಸಹ. ಇನ್ನು ಕೆಲವು ಕಡೆಗಳಲ್ಲಿ ಹೆತ್ತವರು ಮಕ್ಕಳೊಂದಿಗೆ, ಮೊಮ್ಮಕ್ಕಳೊಂದಿಗೆ ಕೂಡಿ ಜೀವಿಸುವ ಸಂಸ್ಕೃತಿಯಿರುತ್ತದೆ.

^ ಪ್ಯಾರ. 11 ನಿಮ್ಮ ಹೆತ್ತವರು ಪ್ರತ್ಯೇಕವಾಗಿ ವಾಸಿಸುತ್ತಿರುವಲ್ಲಿ ಅವರ ಮನೆಯ ಬೀಗದ ಕೈಯನ್ನು ಒಬ್ಬ ಭರವಸಾರ್ಹ ವ್ಯಕ್ತಿಗೆ ಕೊಟ್ಟಿರಿ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಆ ವ್ಯಕ್ತಿ ಮನೆಯೊಳಗೆ ಹೋಗಿ ಸಹಾಯ ಮಾಡಲು ಸಾಧ್ಯವಾಗುವುದು.