ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿಕ್ಕಂದಿನಲ್ಲೇ ನಾನು ಮಾಡಿದ ಆಯ್ಕೆ

ಚಿಕ್ಕಂದಿನಲ್ಲೇ ನಾನು ಮಾಡಿದ ಆಯ್ಕೆ

ಚಿಕ್ಕವನಿದ್ದಾಗ

ಇಸವಿ 1985ರಲ್ಲಿ ಅಮೆರಿಕದ ಒಹಾಯೋದ ಕೊಲಂಬಸ್‍ನಲ್ಲಿ ನಾನು ಓದುತ್ತಿದ್ದ ಶಾಲೆಗೆ ಕ್ಯಾಂಬೋಡಿಯದಿಂದ ಬಂದ ಮಕ್ಕಳು ಸೇರಿಕೊಂಡರು. ನನಗಾಗ ಹತ್ತು ವಯಸ್ಸು. ಆ ಮಕ್ಕಳಲ್ಲಿ ಒಬ್ಬ ಹುಡುಗನಿಗೆ ಇಂಗ್ಲಿಷ್‍ನಲ್ಲಿ ಕೆಲವೇ ಕೆಲವು ಪದಗಳು ಗೊತ್ತಿದ್ದವು. ಅವನು ಆ ಪದಗಳನ್ನೂ ಚಿತ್ರಗಳನ್ನೂ ಬಳಸಿ ನನಗೆ ಅವರ ದೇಶದಲ್ಲಿ ಜನರು ಅನುಭವಿಸುವ ಭಯಾನಕ ಚಿತ್ರಹಿಂಸೆ, ಹತ್ಯೆಗಳು, ಜೀವವನ್ನು ಉಳಿಸಿಕೊಳ್ಳಲು ಜನರು ಓಡಿಹೋಗುವುದರ ಬಗ್ಗೆ ಹೇಳುತ್ತಿದ್ದ. ರಾತ್ರಿ ನಾನು ಆ ಮಕ್ಕಳನ್ನು ನೆನಸಿ ಅಳುತ್ತಿದ್ದೆ. ಅವರಿಗೆ ದೇವರ ರಾಜ್ಯ ಮತ್ತು ಪುನರುತ್ಥಾನದ ನಿರೀಕ್ಷೆಯ ಬಗ್ಗೆ ಹೇಳಬೇಕೆಂದು ಮನಸ್ಸು ತುಡಿಯುತ್ತಿತ್ತು. ಆದರೆ ನನ್ನ ಭಾಷೆ ಅವರಿಗೆ ಅರ್ಥವಾಗುತ್ತಿರಲಿಲ್ಲ. ಆದಕಾರಣ ಯೆಹೋವನ ಬಗ್ಗೆ ನನ್ನ ಸಹಪಾಠಿಗಳಿಗೆ ತಿಳಿಸಲಿಕ್ಕಾಗಿ ಕ್ಯಾಂಬೋಡಿಯನ್‌ ಭಾಷೆ ಕಲಿಯುವ ನಿರ್ಧಾರವನ್ನು ಆಗಲೇ ಮಾಡಿದೆ. ಆ ನಿರ್ಧಾರ ನನ್ನ ಇಡೀ ಜೀವನವನ್ನು ರೂಪಿಸಲಿದೆ ಎಂದು ಮಾತ್ರ ನನಗಾಗ ಗೊತ್ತೇ ಇರಲಿಲ್ಲ.

ಕ್ಯಾಂಬೋಡಿಯನ್‌ ಭಾಷೆ ಕಲಿಯಲು ತುಂಬ ಕಷ್ಟವಾಯಿತು. ಎರಡು ಬಾರಿ ಪ್ರಯತ್ನವನ್ನು ಕೈಬಿಡಲು ನಿರ್ಧಾರಮಾಡಿದೆ. ಆದರೆ ಯೆಹೋವನು ನನ್ನ ಹೆತ್ತವರ ಮೂಲಕ ನನ್ನನ್ನು ಪ್ರೋತ್ಸಾಹಿಸಿದನು. ಅನಂತರ ನನ್ನ ಶಿಕ್ಷಕರು ಹಾಗೂ ಸಹಪಾಠಿಗಳು ನನಗೆ ಮುಂದೆ ದೊಡ್ಡ ಕೆಲಸಕ್ಕೆ ಸೇರುವ ಗುರಿಯಿಡುವಂತೆ ಉತ್ತೇಜಿಸತೊಡಗಿದರು. ಆದರೆ ನನಗೆ ಪಯನೀಯರ್‌ ಆಗಬೇಕೆಂಬ ಗುರಿ. ಹಾಗಾಗಿ ನನ್ನ ಗುರಿ ಮುಟ್ಟಲು ನೆರವಾಗುವಂಥ ಶಿಕ್ಷಣವನ್ನು ಆರಿಸಿಕೊಂಡೆ. ಹೈಸ್ಕೂಲ್‍ನಲ್ಲಿರುವಾಗ ಮುಂದೆ ಅರೆಕಾಲಿಕ ಕೆಲಸಕ್ಕೆ ಸಹಾಯವಾಗುವ ಕೋರ್ಸ್‌ಗಳನ್ನು ತಕ್ಕೊಂಡೆ. ಶಾಲೆಯಿಂದ ಮನೆಗೆ ಬಂದ ನಂತರ ಕೆಲವು ಪಯನೀಯರರೊಂದಿಗೆ ಸೇವೆಗೆ ಹೋಗುತ್ತಿದ್ದೆ. ಮಾತ್ರವಲ್ಲ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕಲಿಯಲು ಸಹಾಯ ಮಾಡತೊಡಗಿದೆ. ಅದರಿಂದ ನನಗೆ ಮುಂದೆ ತುಂಬ ಪ್ರಯೋಜನವಾಯಿತು.

ನಾನು 16 ವರ್ಷದವನಿದ್ದಾಗ ಅಮೆರಿಕದ ಕ್ಯಾಲಿಫೋರ್ನಿಯದ ಲಾಂಗ್‌ಬೀಚ್‌ ನಗರದಲ್ಲಿ ಕ್ಯಾಂಬೋಡಿಯನ್‌ ಭಾಷೆಯ ಒಂದು ಗುಂಪು ಕೂಟಕ್ಕಾಗಿ ಕೂಡಿಬರುತ್ತಿದೆಯೆಂದು ತಿಳಿಯಿತು. ಅಲ್ಲಿಗೆ ಭೇಟಿನೀಡಿದೆ ಮತ್ತು ಕ್ಯಾಂಬೋಡಿಯನ್‌ ಓದಲು ಕಲಿತೆ. ನನ್ನ ಶಾಲಾ ಶಿಕ್ಷಣ ಮುಗಿದ ತಕ್ಷಣ ನಾನು ಪಯನೀಯರ್‌ ಆದೆ ಮತ್ತು ನನ್ನ ಮನೆಯ ಹತ್ತಿರವಿದ್ದ ಕ್ಯಾಂಬೋಡಿಯನ್‌ ಜನರಿಗೆ ಸಾರವುದನ್ನು ಮುಂದುವರಿಸಿದೆ. ನನಗೆ 18 ತುಂಬುವಷ್ಟರಲ್ಲಿ ಕ್ಯಾಂಬೋಡಿಯಕ್ಕೆ ಸ್ಥಳಾಂತರಿಸುವ ಯೋಚನೆ ಮನಸ್ಸಲ್ಲಿ ಮನೆಮಾಡಿತ್ತು. ಆಗಲೂ ಆ ದೇಶದಲ್ಲಿ ಜೀವಿಸುವುದು ಅಪಾಯಕಾರಿಯಾಗಿತ್ತು. ಆದರೆ ಅಲ್ಲಿರುವ ಒಂದು ಕೋಟಿ ಜನರಲ್ಲಿ ಹೆಚ್ಚಿನವರು ಸುವಾರ್ತೆ ಕೇಳಿಸಿಕೊಂಡೇ ಇರಲಿಲ್ಲ. ಮಾತ್ರವಲ್ಲ ಆ ಇಡೀ ದೇಶದಲ್ಲಿ ಇದ್ದದ್ದು 13 ಪ್ರಚಾರಕರಿರುವ ಒಂದೇ ಒಂದು ಸಭೆ ಎಂದು ನನಗೆ ಗೊತ್ತಿತ್ತು. ನಾನು 19 ವರ್ಷದವನಿದ್ದಾಗ ಮೊದಲ ಬಾರಿ ಕ್ಯಾಂಬೋಡಿಯ ದೇಶಕ್ಕೆ ಭೇಟಿಕೊಟ್ಟೆ. ಎರಡು ವರ್ಷಗಳ ನಂತರ ಅಲ್ಲೇ ಹೋಗಿ ನೆಲೆಸಿದೆ. ನನಗಲ್ಲಿ ಅನುವಾದ ಮಾಡುವ ಹಾಗೂ ಇಂಗ್ಲಿಷ್‌ ಕಲಿಸುವ ಪಾರ್ಟ್ಟೈಮ್‌ ಕೆಲಸ ಸಿಕ್ಕಿತು. ಇದರಿಂದ ಸೇವೆಯನ್ನು ಮಾಡುತ್ತಾ ನನ್ನ ಅಗತ್ಯಗಳನ್ನು ಪೂರೈಸಲು ಸಹಾಯವಾಯಿತು. ಸಮಯಾನಂತರ ನನ್ನಂಥದ್ದೇ ಗುರಿಗಳಿರುವ ಬಾಳಸಂಗಾತಿ ನನಗೆ ಸಿಕ್ಕಿದಳು. ಅನೇಕ ಕ್ಯಾಂಬೋಡಿಯನ್‌ ಜನರು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ನಾವಿಬ್ಬರೂ ನೆರವಾಗಿದ್ದೇವೆ.

ಯೆಹೋವನು ನನ್ನ ಮನದಾಸೆಯನ್ನು ಪೂರೈಸಿದ್ದಾನೆ. (ಕೀರ್ತ. 37:4) ಶಿಷ್ಯರನ್ನಾಗಿ ಮಾಡುವುದರಲ್ಲಿ ಸಿಗುವ ಆನಂದ, ತೃಪ್ತಿ ಇನ್ಯಾವ ಕೆಲಸದಲ್ಲೂ ಸಿಗುವುದಿಲ್ಲ. ಕಳೆದ 16 ವರ್ಷಗಳಿಂದ ನಾನು ಕ್ಯಾಂಬೋಡಿಯದಲ್ಲಿ ಸೇವೆಮಾಡುತ್ತಿದ್ದೇನೆ. 13 ಮಂದಿ ಸಾಕ್ಷಿಗಳ ಒಂದೇ ಒಂದು ಸಭೆಯಿದ್ದ ಈ ದೇಶದಲ್ಲಿ ಈಗ 12 ಸಭೆಗಳು ಹಾಗೂ 4 ಗುಂಪುಗಳಿವೆ!—ಜೇಸನ್‌ ಬ್ಲ್ಯಾಕ್‌ವೆಲ್‌ ಹೇಳಿದಂತೆ.