ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಪಶ್ಚಿಮ ಆಫ್ರಿಕದಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಪಶ್ಚಿಮ ಆಫ್ರಿಕದಲ್ಲಿ

ಪಶ್ಚಿಮ ಆಫ್ರಿಕದ ಕೋಟ್‌ಡೀವಾರ್‌ ದೇಶದಲ್ಲಿ ಬಡತನದಲ್ಲೇ ಹುಟ್ಟಿ ಬೆಳೆದ ಪಾಸ್ಕಾಲ್‌ ಸುಖಕರ ಜೀವನಕ್ಕಾಗಿ ಹಾತೊರೆಯುತ್ತಿದ್ದ. ಬಾಕ್ಸಿ೦ಗ್‌ ಹವ್ಯಾಸವಿದ್ದ ಅವನು, ‘ಕ್ರೀಡಾಲೋಕದಲ್ಲಿ ದೊಡ್ಡ ತಾರೆಯಾಗುವ, ತುಂಬ ಶ್ರೀಮಂತನಾಗುವ ಅವಕಾಶ ನನಗೆಲ್ಲಿ ಸಿಗಬಹುದು?’ ಎಂದು ಯೋಚಿಸುತ್ತಿದ್ದ. 25ರ ಆಸುಪಾಸಿನಲ್ಲಿದ್ದಾಗ ಅವನಿಗೆ ಯೂರೋಪ್‌ ತಕ್ಕ ಸ್ಥಳವೆಂದು ಅನಿಸಿತು. ಆದರೆ ಅಲ್ಲಿಗೆ ಹೋಗಲು ಅವನ ಹತ್ತಿರ ವೀಸಾ ಇರಲಿಲ್ಲ. ಹಾಗಾಗಿ ಅಕ್ರಮವಾಗಿಯೇ ಅಲ್ಲಿಗೆ ತಲಪಲು ನಿರ್ಧರಿಸಿದ.

1998ರಲ್ಲಿ 27ರ ಹರೆಯದಲ್ಲಿದ್ದ ಪಾಸ್ಕಾಲ್‌ ಯೂರೋಪಿನತ್ತ ಮುಖಮಾಡಿದ. ತನ್ನ ದೇಶದ ಗಡಿ ದಾಟಿ ಘಾನಕ್ಕೆ ಬಂದ. ಅಲ್ಲಿಂದ ಟೋಗೊ, ಬೆನಿನ್‌ ಅನ್ನು ದಾಟಿ ಕೊನೆಗೆ ನೈಜರ್‌ ದೇಶದ ಬೀರ್ನೀ ಕಾನೀ ಎಂಬ ಪಟ್ಟಣಕ್ಕೆ ತಲಪಿದ. ಇಲ್ಲಿಂದ ಮುಂದಕ್ಕೆ ಅಪಾಯಕಾರಿ ಪ್ರಯಾಣ! ಏಕೆಂದರೆ ಅಲ್ಲಿಂದ ಉತ್ತರಕ್ಕೆ ಹೋಗಲು ಅವನು ಯಾವುದಾದರೂ ಟ್ರಕ್‌ ಹತ್ತಿ ಸಹಾರಾ ಮರುಭೂಮಿಯನ್ನು ದಾಟಬೇಕಿತ್ತು. ಬಳಿಕ ಮೆಡಿಟರೇನಿಯನ್‌ ಸಮುದ್ರತೀರಕ್ಕೆ ಬಂದು ಅಲ್ಲಿಂದ ಹಡಗಿನಲ್ಲಿ ಯೂರೋಪ್‌ಗೆ ಪ್ರಯಾಣ ಮಾಡಬೇಕಿತ್ತು. ಇದಕ್ಕೆಲ್ಲ ಪಕ್ಕಾ ಯೋಜನೆಯೂ ಆಗಿತ್ತು. ಆದರೆ ಅವನು ನೈಜರ್‌ನಿಂದ ಮುಂದಕ್ಕೆ ಪ್ರಯಾಣ ಮಾಡಲೇ ಇಲ್ಲ! ಯಾಕೆ? ಎರಡು ವಿಷಯಗಳಿಂದಾಗಿ ಅಲ್ಲೇ ಉಳಿದುಬಿಟ್ಟ. ಏನವು?

ಒಂದು ಅವನ ಹತ್ತಿರ ಇದ್ದ ಹಣವೆಲ್ಲ ಖಾಲಿಯಾಯಿತು. ಇನ್ನೊಂದು ಅವನನ್ನು ನೋಯೇ ಎಂಬ ಪಯನೀಯರ್‌ ಸಹೋದರನು ಭೇಟಿಯಾದ. ಪಾಸ್ಕಾಲ್‌ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದ. ಕಲಿತ ವಿಷಯಗಳು ಅವನ ಮನಸ್ಸನ್ನು ಆಳವಾಗಿ ಸ್ಪರ್ಶಿಸಿದವು. ಬದುಕನ್ನು ಅವನೀಗ ನೋಡುವ ರೀತಿಯೇ ಬದಲಾಯಿತು. ಧನಸಂಪತ್ತನ್ನು ಗಳಿಸುವ ಗುರಿಗಳನ್ನು ಕೈಬಿಟ್ಟು ಆಧ್ಯಾತ್ಮಿಕ ಗುರಿಗಳನ್ನಿಟ್ಟ. 1999ರ ಡಿಸೆಂಬರ್‌ ತಿಂಗಳಿನಲ್ಲಿ ಪಾಸ್ಕಾಲ್‌ ದೀಕ್ಷಾಸ್ನಾನ ಪಡೆದ. ಯೆಹೋವನಿಗೆ ತನ್ನ ಕೃತಜ್ಞತೆಯನ್ನು ತೋರಿಸುವ ಸಲುವಾಗಿ ಅವನಿಗೆ ಸತ್ಯದ ಪರಿಚಯವಾಗಿದ್ದ ಅದೇ ನೈಜರ್‌ನಲ್ಲಿ 2001ರಿಂದ ಪಯನೀಯರ್‌ ಸೇವೆ ಮಾಡತೊಡಗಿದ. ತನ್ನ ಸೇವೆ ಬಗ್ಗೆ ಅವನಿಗೆ ಈಗ ಹೇಗನಿಸುತ್ತಿದೆ? “ಅತ್ಯುತ್ತಮ ಜೀವನ ಈಗ ನನ್ನದಾಗಿದೆ!” ಎನ್ನುತ್ತಾನೆ ಅವನು.

ಆಫ್ರಿಕದಲ್ಲಿನ ಸೇವೆಯಿಂದ ಹೆಚ್ಚು ಸಂತೃಪ್ತಿ, ಸಂತೋಷ

ಆನ ರಾಕಲ್‌

ಹೆಚ್ಚು ಸಂತೃಪ್ತಿ ಸಿಗಬೇಕಾದರೆ ತಮ್ಮ ಜೀವನ ಆಧ್ಯಾತ್ಮಿಕ ಗುರಿಗಳ ಸುತ್ತ ಹೆಣೆದಿರಬೇಕು ಎಂದು ಪಾಸ್ಕಾಲ್‍ನಂತೆಯೇ ಅನೇಕರು ಇಂದು ಅರಿತುಕೊಂಡಿದ್ದಾರೆ. ಅಂಥ ಗುರಿಗಳನ್ನು ಮುಟ್ಟಲಿಕ್ಕಾಗಿ ಯೂರೋಪಿನಿಂದ ಕೆಲವರು ಆಫ್ರಿಕದಲ್ಲಿ ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. 17ರ ಹದಿವಯಸ್ಸಿನಿಂದ ಹಿಡಿದು 70ರ ಹರೆಯದ ವರೆಗಿನ ಸುಮಾರು 65 ಸಾಕ್ಷಿಗಳು ಯೂರೋಪಿನಿಂದ ಹೆಚ್ಚು ಅಗತ್ಯವಿರುವ ಪಶ್ಚಿಮ ಆಫ್ರಿಕದ ಬೆನಿನ್‌, ಬುರ್ಕಿನಾ ಫಾಸೊ, ನೈಜರ್‌, ಟೋಗೊ ದೇಶಗಳಿಗೆ ಬಂದಿದ್ದಾರೆ. * ಇಷ್ಟು ದೊಡ್ಡ ಹೆಜ್ಜೆ ತಕ್ಕೊಳ್ಳಲು ಅವರನ್ನು ಯಾವುದು ಪ್ರಚೋದಿಸಿತು? ಫಲಿತಾಂಶವೇನಾಯಿತು?

ಡೆನ್ಮಾರ್ಕಿನ ಆನ ರಾಕಲ್‌ ಹೇಳುವುದನ್ನು ಕೇಳಿ: “ಸೆನಿಗಲ್‍ನಲ್ಲಿ ಮಿಷನರಿಗಳಾಗಿದ್ದ ಅಪ್ಪ ಅಮ್ಮ ಯಾವಾಗಲೂ ಮಿಷನರಿ ಜೀವನದ ಬಗ್ಗೆ ತುಂಬ ಉತ್ಸಾಹದಿಂದ ಮಾತಾಡುತ್ತಿದ್ದರು. ನನಗೂ ಅಂಥದ್ದೇ ಜೀವನ ಬೇಕೆಂದು ಬಯಸಿದೆ.” ಆನ ರಾಕಲ್‌ 20ರ ಪ್ರಾಯ ದಾಟಿದಾಗ ತನ್ನ ಮನದಾಸೆಯನ್ನು ನೈಜಗೊಳಿಸಿದಳು. ಈಗ ಸುಮಾರು 15 ವರ್ಷಗಳಿಂದ ಟೋಗೊ ದೇಶದ ಸನ್ನೆ ಭಾಷೆಯ ಸಭೆಯೊಂದರಲ್ಲಿ ಸೇವೆ ಮಾಡುತ್ತಿದ್ದಾಳೆ. ಅವಳು ಹೀಗೆ ಅಗತ್ಯವಿರುವಲ್ಲಿಗೆ ಸೇವೆ ಮಾಡಲು ಹೋದದ್ದು ಇತರರ ಮೇಲೆ ಯಾವ ಪರಿಣಾಮ ಬೀರಿತು? “ನಂತರ ನನ್ನ ತಂಗಿ-ತಮ್ಮ ಇಬ್ಬರೂ ಟೋಗೊದಲ್ಲಿ ಸೇವೆ ಮಾಡಲು ಬಂದರು” ಎನ್ನುತ್ತಾಳೆ ಆಕೆ.

ಆಲ್ಬರ್‌ ಫೇಯೆಟ್‌ ಮತ್ತು ಆರೆಲ್‌

 ಫ್ರಾನ್ಸ್‌ನ ಆರೆಲ್‌ ಎಂಬ ವಿವಾಹಿತ ಸಹೋದರನಿಗೆ 70 ವರ್ಷ ಪ್ರಾಯ. ಅವರು ಹೀಗೆ ಹೇಳುತ್ತಾರೆ: “ಐದು ವರ್ಷಗಳ ಹಿಂದೆ ನನಗೆ ನಿವೃತ್ತಿಯಾದಾಗ ನನ್ನ ಮುಂದೆ ಎರಡು ಆಯ್ಕೆಗಳಿದ್ದವು: ಒಂದು, ಫ್ರಾನ್ಸ್‌ನಲ್ಲಿ ನೆಮ್ಮದಿಯಾಗಿ ಜೀವನ ಕಳೆಯುತ್ತಾ ಪರದೈಸ್‌ಗಾಗಿ ಕಾಯುವುದು. ಇನ್ನೊಂದು, ಸೇವೆಯನ್ನು ಹೆಚ್ಚು ಮಾಡಲು ಯೋಜಿಸುವುದು.” ಎರಡನೇದನ್ನು ಆರೆಲ್‌ ಆಯ್ಕೆಮಾಡಿದರು. ಅವರು ತಮ್ಮ ಪತ್ನಿ ಆಲ್ಬರ್‌ ಫೇಯೆಟ್‌ ಜೊತೆ ಬೆನಿನ್‌ ದೇಶಕ್ಕೆ ಸ್ಥಳಾಂತರಿಸಿ ಈಗ ಮೂರು ವರ್ಷಗಳಾಗಿವೆ. ಈಗ ಅವರಿಗೆ ಹೇಗನಿಸುತ್ತದೆ? “ಯೆಹೋವನ ಸೇವೆ ಮಾಡಲು ಇಲ್ಲಿಗೆ ಬಂದದ್ದು ನಾವು ಇಷ್ಟರ ವರೆಗೆ ಮಾಡಿದ್ದರಲ್ಲೇ ಅತಿ ಉತ್ತಮ ಕೆಲಸ!” ಎನ್ನುತ್ತಾರೆ ಆರೆಲ್‌. “ಇನ್ನೊಂದು ಏನೆಂದರೆ, ನಮ್ಮ ಟೆರಿಟೊರಿಯ ಕೆಲವು ಸ್ಥಳಗಳು ಕರಾವಳಿ ತೀರದಲ್ಲಿವೆ. ಅವು ನನಗೆ ಪರದೈಸಿನ ನಸುನೋಟ ಕೊಡುತ್ತವೆ” ಎಂದು ಹೇಳುತ್ತಾ ಮಂದಹಾಸ ಬೀರುತ್ತಾರೆ.

ಕ್ಲಾಡಾಮೀರ್‌ ಮತ್ತು ಅವನ ಪತ್ನಿ ಲೀಸ್ಯಾನ್‌ ಫ್ರಾನ್ಸ್‌ನಿಂದ ಬೆನಿನ್‌ಗೆ ಬಂದು 16 ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ತಮ್ಮ ಕುಟುಂಬ, ಸ್ನೇಹಿತರನ್ನು ಬಿಟ್ಟಿರುವುದು ತುಂಬ ಕಷ್ಟವಾಗುತ್ತಿತ್ತು. ಅಲ್ಲದೆ ಇಲ್ಲಿನ ಜೀವನಕ್ಕೆ ಹೊಂದಿಕೊಳ್ಳಲು ಆಗುವುದಿಲ್ಲವೇನೋ ಎಂಬ ಆತಂಕವಿತ್ತು. ಆದರೆ ಸ್ವಲ್ಪವೇ ಸಮಯದಲ್ಲಿ ಅವರ ಜೀವನ ಆನಂದದಿಂದ ತುಂಬಿತು. “ಈ ಹದಿನಾರು ವರ್ಷಗಳಲ್ಲಿ ಪ್ರತಿವರ್ಷ ಸರಾಸರಿ ಒಬ್ಬರಿಗೆ ಸತ್ಯ ಸ್ವೀಕರಿಸಲು ಸಹಾಯಮಾಡುವ ಸುಯೋಗ ನಮ್ಮದಾಗಿದೆ” ಎನ್ನುತ್ತಾನೆ ಕ್ಲಾಡಾಮೀರ್‌.

ಸತ್ಯವನ್ನು ತಿಳಿಯಲು ತಾವು ಸಹಾಯಮಾಡಿದ ಕೆಲವರೊಂದಿಗೆ ಕ್ಲಾಡಾಮೀರ್‌ ಮತ್ತು ಲೀಸ್ಯಾನ್‌

ಜೊಯೇನ ಮತ್ತು ಸೆಬಾಸ್ಟಿಯಾನ್‌

ಸೆಬಾಸ್ಟಿಯಾನ್‌ ಮತ್ತು ಪತ್ನಿ ಜೊಯೇನ 2010ರಲ್ಲಿ ಫ್ರಾನ್ಸ್‌ನಿಂದ ಬೆನಿನ್‌ಗೆ ಸೇವೆ ಮಾಡಲು ಹೋದರು. ಸೆಬಾಸ್ಟಿಯಾನ್‌ ಹೇಳುವುದೇನೆಂದರೆ, “ಇಲ್ಲಿ ಸಭೆಯಲ್ಲಿ ಮಾಡಲು ತುಂಬ ಕೆಲಸಗಳಿವೆ. ಇಲ್ಲಿ ಸೇವೆ ಮಾಡುವುದು ದೇವಪ್ರಭುತ್ವಾತ್ಮಕ ತರಬೇತಿ ಶಾಲೆಗೆ ಹಾಜರಾದಂತೆ. ಸ್ವಲ್ಪವೇ ಸಮಯದಲ್ಲಿ ಎಷ್ಟೋ ವಿಷಯಗಳನ್ನು ಕಲಿಯಲು ಆಗುತ್ತದೆ.” ಜನರು ಸುವಾರ್ತೆ ಕೇಳುತ್ತಾರಾ? ಅದನ್ನು ಜೊಯೇನಳ ಮಾತಲ್ಲಿ ಕೇಳಿ: “ಸತ್ಯ ತಿಳಿಯುವ ತವಕ ಜನರಲ್ಲಿದೆ. ನಾವು ಸೇವೆಗೆ ಹೋಗದಿದ್ದಾಗಲೂ ಜನರು ರಸ್ತೆಯಲ್ಲಿ ನಮ್ಮನ್ನು ನಿಲ್ಲಿಸಿ ಬೈಬಲಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳ್ತಾರೆ, ಸಾಹಿತ್ಯವನ್ನು ತಕ್ಕೊಳ್ಳುತ್ತಾರೆ.” ಈ ಸೇವೆಯಿಂದ ಅವರ ವೈವಾಹಿಕ ಜೀವನಕ್ಕೆ ಹೇಗೆ ಪ್ರಯೋಜನವಾಗಿದೆ? ಸೆಬಾಸ್ಟಿಯಾನ್‌ ಉತ್ತರಿಸುತ್ತಾನೆ: “ನಮ್ಮ ಬಾಂಧವ್ಯ ಇನ್ನಷ್ಟು ಬಲವಾಗಿದೆ. ನನ್ನ ಹೆಂಡತಿಯೊಟ್ಟಿಗೆ ಇಡೀ ದಿನ ಸೇವೆ ಮಾಡುವಾಗ ತುಂಬ ಖುಷಿಯಾಗ್ತದೆ!”

ಎರಿಕ್‌ ಮತ್ತು ಅವನ ಪತ್ನಿ ಕೇಟೀ ಕಡಿಮೆ ಜನಸಂಖ್ಯೆಯಿರುವ ಉತ್ತರ ಬೆನಿನ್‌ನಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ಅವರನ್ನು ಯಾವುದು ಪ್ರಚೋದಿಸಿತು? ಸುಮಾರು ಹತ್ತು ವರ್ಷಗಳ ಹಿಂದೆ ಫ್ರಾನ್ಸಿನಲ್ಲಿದ್ದಾಗ ಈ ದಂಪತಿ ಹೆಚ್ಚು ಅಗತ್ಯವಿರುವಲ್ಲಿ ಸೇವೆ ಮಾಡುವುದರ ಕುರಿತಾದ ಲೇಖನಗಳನ್ನು ಓದಲು ಶುರುಮಾಡಿದರು ಮತ್ತು ಪೂರ್ಣ ಸಮಯದ ಸೇವಕರೊಂದಿಗೆ ಈ ಕುರಿತು ಮಾತಾಡತೊಡಗಿದರು. ಇದು ವಿದೇಶಕ್ಕೆ ಹೋಗಿ ಸೇವೆ ಮಾಡುವಂತೆ ಅವರನ್ನು ಹುರಿದುಂಬಿಸಿತು. ಹಾಗಾಗಿ 2005ರಲ್ಲಿ ಬೆನಿನ್‌ಗೆ ಬಂದರು. ಇಲ್ಲಿ ಅವರು ಕಂಡ ಅಭಿವೃದ್ಧಿ ಅವರ ಹೃದಯ ಸ್ಪರ್ಶಿಸಿತು. ಎರಿಕ್‌ ಹೀಗನ್ನುತ್ತಾನೆ: “ಎರಡು ವರ್ಷಗಳ ಹಿಂದೆ ಟಾನ್‌ಗೀಯೆಟ ಪಟ್ಟಣದಲ್ಲಿರುವ ನಮ್ಮ ಗುಂಪಿನಲ್ಲಿ ಇದ್ದದ್ದು 9 ಪ್ರಚಾರಕರು. ಈಗಿರೋದು 30 ಪ್ರಚಾರಕರು! ಭಾನುವಾರ ಕೂಟದ ಹಾಜರಿಯಂತೂ 50ರಿಂದ 80 ಇರುತ್ತದೆ. ಇಷ್ಟೊಂದು ಪ್ರಗತಿಯನ್ನು ಕಣ್ಣಾರೆ ಕಾಣುವಾಗ ಆಗುವ ಸಂತೋಷಕ್ಕೆ ಎಣೆಯೇ ಇಲ್ಲ!”

ಕೇಟೀ ಮತ್ತು ಎರಿಕ್‌

 ಸವಾಲುಗಳನ್ನು ಗುರುತಿಸಿದರು, ಜಯಿಸಿದರು

ಬೆನ್ಯಾಮೀನ್‌

ಹೆಚ್ಚು ಅಗತ್ಯವಿರುವ ಸ್ಥಳಕ್ಕೆ ಹೋದವರಲ್ಲಿ ಕೆಲವರಿಗೆ ಬಂದ ಸವಾಲುಗಳು ಯಾವುವು? 33 ವರ್ಷದ ಬೆನ್ಯಾಮೀನ್‌ ಮೇಲೆ ತಿಳಿಸಲಾದ ಆನ ರಾಕಲ್‌ಳ ತಮ್ಮ. ಇಸವಿ 2000ದಲ್ಲಿ ಅವನು ಟೋಗೊ ದೇಶದಲ್ಲಿ ಮಿಷನರಿಯಾಗಿರುವ ಸಹೋದರನನ್ನು ಭೇಟಿಯಾದ. ಆಗ ಏನಾಯಿತೆಂದು ಬೆನ್ಯಾಮೀನ್‌ ಹೇಳುತ್ತಾನೆ: “ನಾನು ಪಯನೀಯರ್‌ ಸೇವೆ ಮಾಡಬೇಕೆಂದಿದ್ದೇನೆಂದು ಆ ಸಹೋದರನಿಗೆ ಹೇಳಿದಾಗ ಅವನು ‘ಹಾಗಿದ್ರೆ ಟೋಗೊಗೆ ಬಂದು ಸೇವೆ ಮಾಡಬಹುದಲ್ಲಾ’ ಎಂದನು.” ಬೆನ್ಯಾಮೀನ್‌ ಈ ಬಗ್ಗೆ ಗಂಭೀರವಾಗಿ ಯೋಚಿಸಿದ. “ಆಗ ನನಗೆ 20 ವರ್ಷವೂ ಆಗಿರಲಿಲ್ಲ. ಆದರೂ ಈಗಾಗಲೇ ನನ್ನ ಇಬ್ಬರು ಅಕ್ಕಂದಿರು ಟೋಗೊದಲ್ಲೇ ಸೇವೆ ಮಾಡ್ತಾ ಇದ್ದದರಿಂದ ಅಲ್ಲಿ ಹೋಗಲು ಸುಲಭವಾಯ್ತು.” ಆದರೂ ಅವನು ಅಲ್ಲಿ ಹೋದ ಮೇಲೆ ಸವಾಲು ಎದುರಿಸಬೇಕಾಯಿತು. “ನನಗೆ ಫ್ರೆಂಚ್‌ನಲ್ಲಿ ಒಂದೇ ಒಂದು ಪದ ಕೂಡ ಗೊತ್ತಿರಲಿಲ್ಲ. ಆರು ತಿಂಗಳು ನಾನು ಪಟ್ಟ ಕಷ್ಟ ಯಾಕೆ ಕೇಳ್ತೀರಾ, ಒಬ್ಬರ ಹತ್ರವೂ ಮಾತಾಡಲಿಕ್ಕೆ ಆಗ್ತಿರಲಿಲ್ಲ.” ನಿಧಾನವಾಗಿ ಬೆನ್ಯಾಮೀನ್‌ ಫ್ರೆಂಚ್‌ ಕಲಿತ. ಅವನೀಗ ಬೆನಿನ್‌ನ ಬೆತೆಲ್‍ನಲ್ಲಿ ಸಾಹಿತ್ಯ ರವಾನೆ ಹಾಗೂ ಕಂಪ್ಯೂಟರ್‌ ಡಿಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದಾನೆ.

ಮಾರೀ ಆನ್ಯೆಸ್‌ ಮತ್ತು ಮೀಶೆಲ್‌

ಈ ಮೊದಲು ಹೇಳಲಾದ ಎರಿಕ್‌ ಹಾಗೂ ಕೇಟೀ ಬೆನಿನ್‌ಗೆ ಬರುವ ಮುಂಚೆ ಫ್ರಾನ್ಸ್‌ನಲ್ಲೇ ವಿದೇಶೀ ಭಾಷೆಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದರು. ಆದರೆ ಪಶ್ಚಿಮ ಆಫ್ರಿಕದಲ್ಲಿ ಅವರಿಗೆ ಎದುರಾದ ಸವಾಲೇ ಬೇರೆಯಾಗಿತ್ತು. ಕೇಟೀ ಹೇಳುವುದು: “ವಾಸಕ್ಕೆ ಸರಿಯಾದ ಮನೆ ಹುಡುಕಲು ತುಂಬ ಕಷ್ಟಪಟ್ಟೆವು. ವಿದ್ಯುಚ್ಛಕ್ತಿ, ನೀರು ಸರಬರಾಜು ಇಲ್ಲದ ಮನೆಯಲ್ಲೇ ಎಷ್ಟೋ ತಿಂಗಳು ವಾಸಿಸಿದೆವು.” ಎರಿಕ್‌ ಮುಂದುವರಿಸುವುದು: “ಅಕ್ಕಪಕ್ಕದ ಮನೆಯವರು ರಾತ್ರಿ ತುಂಬ ಹೊತ್ತಿನ ವರೆಗೆ ಜೋರಾಗಿ ಮ್ಯೂಸಿಕ್‌ ಹಾಕುತ್ತಿದ್ದರು. ಅದನ್ನೆಲ್ಲ ಸಹಿಸಿಕೊಳ್ಳಬೇಕಾಗಿತ್ತು. ನಾವೇ ಹೊಂದಿಕೊಂಡು ಹೋಗಬೇಕಾಗಿತ್ತು.” ಆದರೆ ಅವರಿಬ್ಬರೂ ಹೇಳುವುದು: “ಹೆಚ್ಚಿನಾಂಶ ಜನರು ಎಂದೂ ಸುವಾರ್ತೆ ಕೇಳಿಸಿಕೊಂಡಿರದ ಆ ಸ್ಥಳದಲ್ಲಿ ಸಾರುವುದರಿಂದ ಸಿಗುವ ಸಂತೋಷದ ಮುಂದೆ ಈ ಎಲ್ಲ ಕಷ್ಟಗಳು ಏನೂ ಅಲ್ಲ.”

ಹತ್ತಿರತ್ತಿರ 60ರ ಪ್ರಾಯದ ಮೀಶೆಲ್‌ ಹಾಗೂ ಅವರ ಪತ್ನಿ ಮಾರೀ ಆನ್ಯೆಸ್‌ ಫ್ರಾನ್ಸ್‌ನಿಂದ ಬೆನಿನ್‌ಗೆ ಐದು ವರ್ಷಗಳ ಹಿಂದೆ ಸ್ಥಳಾಂತರಿಸಿದರು. ಮೊದಲು ಅವರಿಗೆ ತುಂಬ ಚಿಂತೆ ಕಳವಳವಿತ್ತು. ಈ ರೀತಿ ಸ್ಥಳಾಂತರಿಸುವುದು ತುಂಬ ಅಪಾಯಕರ ಎಂದು ಅನೇಕರು ಹೇಳಿದರೆಂದು ಮೀಶೆಲ್‌ ತಿಳಿಸುತ್ತಾರೆ. “ಯೆಹೋವನು ನಮ್ಮನ್ನು ಬೆಂಬಲಿಸುತ್ತಾನೆ ಎನ್ನುವುದನ್ನು ಮರೆತಿದ್ದರೆ ಖಂಡಿತ ನಾವು ಹೆದರಿ ಅಲ್ಲೇ ಇದ್ದು ಬಿಡುತ್ತಿದ್ದೆವು. ಆದರೆ ನಾವು ಯೆಹೋವನಿಗಾಗಿ ಸ್ಥಳಾಂತರಿಸಿದೆವು. ಆತನು ನಮ್ಮ ಜೊತೆ ಇದ್ದನು” ಎನ್ನುತ್ತಾರೆ ಮೀಶೆಲ್‌.

ತಯಾರಿ ಹೇಗೆ?

ಅಗತ್ಯವಿರುವಲ್ಲಿ ಸೇವೆ ಮಾಡಲು ನಿಮಗೆ ಮನಸ್ಸಿದೆಯೇ? ಹಾಗಾದರೆ ಈಗಾಗಲೇ ಈ ಸೇವೆ ಮಾಡುತ್ತಿರುವವರು ಅನುಭವದಿಂದ ಹೇಳಿರುವ ಈ ಹೆಜ್ಜೆಗಳನ್ನು ತಕ್ಕೊಳ್ಳಿರಿ: ಮುಂಚಿತವಾಗಿ ಯೋಜನೆ ಮಾಡಿ. ಹೊಂದಿಕೊಂಡು ಹೋಗಲು ಕಲಿಯಿರಿ. ನಿರ್ಧರಿಸಿದ್ದಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಯೆಹೋವನನ್ನು ಅವಲಂಬಿಸಿ.—ಲೂಕ 14:28-30.

ಈ ಮುಂಚೆ ತಿಳಿಸಲಾದ ಸೆಬಾಸ್ಟಿಯಾನ್‌ ಹೀಗನ್ನುತ್ತಾರೆ: “ಇಲ್ಲಿಗೆ ಬರುವ ಮುಂಚೆ ಎರಡು ವರ್ಷ ನಾನು ಮತ್ತು ಜೊಯೇನ ಅನಗತ್ಯ ವಸ್ತುಗಳನ್ನು ಖರೀದಿಸದೆ, ಮನರಂಜನೆಯ ಖರ್ಚನ್ನು ಕಡಿಮೆಗೊಳಿಸಿ ಹಣ ಉಳಿತಾಯ ಮಾಡಿದೆವು.” ಈಗ ಅವರು ವಿದೇಶದಲ್ಲಿ ಸೇವೆ ಮುಂದುವರಿಸಲಿಕ್ಕಾಗಿ ವರ್ಷದಲ್ಲಿ ಕೆಲವು ತಿಂಗಳು ಯೂರೋಪಿಗೆ ಬಂದು  ಕೆಲಸಮಾಡುತ್ತಾರೆ. ಉಳಿದ ತಿಂಗಳು ಬೆನಿನ್‌ಗೆ ಹೋಗಿ ಪಯನೀಯರ್‌ ಸೇವೆ ಮಾಡುತ್ತಾರೆ.

ಮಾರೀ ಟೇರೆಸ್‌

ಪಶ್ಚಿಮ ಆಫ್ರಿಕದ ಅಗತ್ಯವಿರುವ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಸುಮಾರು 20 ಅವಿವಾಹಿತ ಸಹೋದರಿಯರಲ್ಲಿ ಮಾರೀ ಟೇರೆಸ್‌ ಕೂಡ ಒಬ್ಬರು. ಅವರು ಫ್ರಾನ್ಸ್‌ನಲ್ಲಿ ಬಸ್‌ ಚಾಲಕಿಯಾಗಿ ಕೆಲಸಮಾಡುತ್ತಿದ್ದರು. 2006ರಲ್ಲಿ ಒಂದು ವರ್ಷ ರಜೆ ತೆಗೆದುಕೊಂಡು ನೈಜರ್‌ಗೆ ಹೋಗಿ ಪಯನೀಯರ್‌ ಸೇವೆ ಮಾಡಿದರು. ಆಗ ಅವರಿಗೆ ತಿಳಿದುಬಂತು ‘ತನಗೆ ಬೇಕಾದದ್ದು ಇಂಥದ್ದೇ ಜೀವನ’ ಎಂದು. ಅವರು ಹೇಳುತ್ತಾರೆ: “ಫ್ರಾನ್ಸ್‌ಗೆ ಹಿಂದಿರುಗಿದ ಮೇಲೆ ನಾನು ಮಾಲೀಕನ ಬಳಿ, ವರ್ಷದಲ್ಲಿ ಕೆಲವು ತಿಂಗಳು ಮಾತ್ರ ಕೆಲಸ ಮಾಡಲು ಅನುಮತಿಸುವಂತೆ ಕೇಳಿಕೊಂಡೆ. ಅವನು ಒಪ್ಪಿದ. ನಾನೀಗ ಮೇ ತಿಂಗಳಿಂದ ಆಗಸ್ಟ್‌ ವರೆಗೆ ಫ್ರಾನ್ಸ್‌ನಲ್ಲಿ ಬಸ್‌ ಚಾಲಕಿಯಾಗಿ ಕೆಲಸ ಮಾಡ್ತೇನೆ. ಸೆಪ್ಟೆಂಬರ್‌ನಿಂದ ಏಪ್ರಿಲ್‌ ವರೆಗೆ ನೈಜರ್‌ಗೆ ಹೋಗಿ ಪಯನೀಯರ್‌ ಸೇವೆ ಮಾಡ್ತೇನೆ.”

ಸಫೀರಾ

ಯಾರು ‘ಮೊದಲು ರಾಜ್ಯವನ್ನು ಹುಡುಕುತ್ತಾರೋ’ ಅವರಿಗೆ ‘ಅಗತ್ಯವಿರುವ ಇತರ ಎಲ್ಲ ವಸ್ತುಗಳನ್ನು’ ಯೆಹೋವನು ಒದಗಿಸುವನೆಂಬ ಭರವಸೆಯಿರಲಿ. (ಮತ್ತಾ 6:33) ಹತ್ತಿರತ್ತಿರ 30ರ ಪ್ರಾಯದಲ್ಲಿರುವ ಅವಿವಾಹಿತ ಸಹೋದರಿ ಸಫೀರಾ ಇದಕ್ಕೊಂದು ಉದಾಹರಣೆ. ಅವರು ಫ್ರಾನ್ಸ್‌ನಿಂದ ಬೆನಿನ್‌ಗೆ ಹೋಗಿ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ತಮ್ಮ ಮುಂದಿನ (ಆರನೇ) ವರ್ಷದ ಸೇವೆಗಾಗಿ ಹಣವನ್ನು ಸಂಪಾದಿಸಲಿಕ್ಕಾಗಿ 2011ರಲ್ಲಿ ಅವರು ಫ್ರಾನ್ಸ್‌ಗೆ ಬಂದಿದ್ದರು. ಅವರು ಹೇಳುತ್ತಾರೆ: “ಆ ದಿನ ಶುಕ್ರವಾರ. ನನ್ನ ಕೆಲಸದ ಕೊನೇ ದಿನ. ಆದರೆ ಮುಂದಿನ ವರ್ಷದ ಸೇವೆಗಾಗಿ ಇನ್ನೂ ಸ್ವಲ್ಪ ಹಣ ಬೇಕಿತ್ತು. ಅದಕ್ಕಾಗಿ ಇನ್ನೂ ಹತ್ತು ದಿನ ಎಲ್ಲಾದರೂ ಕೆಲಸ ಮಾಡಬೇಕಿತ್ತು. ಆಫ್ರಿಕಕ್ಕೆ ಹಿಂದಿರುಗಲಿಕ್ಕೆ ಇನ್ನೆರಡೇ ವಾರ ಇತ್ತು. ಯೆಹೋವನಿಗೆ ನನ್ನ ಪರಿಸ್ಥಿತಿಯನ್ನು ವಿವರಿಸುತ್ತಾ ಪ್ರಾರ್ಥಿಸಿದೆ. ಸ್ವಲ್ಪ ಸಮಯದ ನಂತರ ನನಗೆ ಒಂದು ನೌಕರಿ ಏಜೆನ್ಸಿಯಿಂದ ಕರೆ ಬಂತು. ಎರಡು ವಾರದ ಮಟ್ಟಿಗೆ ಒಬ್ಬರ ಬದಲಿಗೆ ಕೆಲಸಮಾಡಲು ಸಾಧ್ಯವೇ ಎಂದವರು ಕೇಳಿದರು.” ಸೋಮವಾರದಂದು ಸಫೀರಾ ಆ ಕೆಲಸದ ಸ್ಥಳಕ್ಕೆ ಹೋದಳು. ಅಲ್ಲಿ ಯಾರ ಬದಲಿಗೆ ಆಕೆ ಕೆಲಸಮಾಡಬೇಕಿತ್ತೋ ಆ ಮಹಿಳೆ ಸಫೀರಾಗೆ ತರಬೇತಿ ನೀಡಲಿದ್ದರು. ಸಫೀರಾ ಹೇಳುತ್ತಾಳೆ: “ಆ ಮಹಿಳೆ ಒಬ್ಬ ಸಾಕ್ಷಿಯೆಂದು ತಿಳಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಆ ಸಹೋದರಿಗೆ ಪಯನೀಯರ್‌ ಸೇವಾ ಶಾಲೆಗೆ ಹಾಜರಾಗಲು ಎರಡು ವಾರ ರಜೆ ಬೇಕಿತ್ತು. ಆದರೆ ಯಾರಾದರೂ ಬದಲಿ ಕೆಲಸಗಾರರು ಸಿಕ್ಕಿದರೆ ಮಾತ್ರ ರಜೆ ಕೊಡುವೆನೆಂದು ಆಕೆಯ ಧಣಿ ಹೇಳಿದ್ದನಂತೆ. ನನ್ನಂತೆ ಆಕೆ ಸಹ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿದ್ದಳು.”

ನಿಜ ಸಂತೃಪ್ತಿ ಕೊಡುವ ಸೇವೆ

ಕೆಲವು ಸಹೋದರ ಸಹೋದರಿಯರು ಪಶ್ಚಿಮ ಆಫ್ರಿಕಕ್ಕೆ ಬಂದು ಅನೇಕ ವರ್ಷಗಳಿಂದ ಸೇವೆ ಮಾಡುತ್ತಾ ಅಲ್ಲೇ ನೆಲೆಸಿದ್ದಾರೆ. ಇನ್ನಿತರರು ಕೆಲವು ವರ್ಷ ಸೇವೆ ಮಾಡಿ ಸ್ವದೇಶಕ್ಕೆ ಹಿಂದಿರುಗಿದ್ದಾರೆ. ಆದರೂ ವಿದೇಶದಲ್ಲಿ ಸೇವೆ ಮಾಡಿದ್ದರಿಂದ ಈಗಲೂ ಅವರು ಪ್ರಯೋಜನ ಪಡೆಯುತ್ತಿದ್ದಾರೆ. ನಿಜ ಸಂತೃಪ್ತಿ ಯೆಹೋವನ ಸೇವೆಯಿಂದ ಮಾತ್ರ ಸಿಗುತ್ತದೆಂದು ಅವರೆಲ್ಲರು ಕಲಿತಿದ್ದಾರೆ.

^ ಪ್ಯಾರ. 6 ಈ ನಾಲ್ಕೂ ದೇಶಗಳ ಕೆಲಸವನ್ನು ಬೆನಿನ್‌ ಬ್ರಾಂಚ್‌ ನೋಡಿಕೊಳ್ಳುತ್ತದೆ. ಆ ದೇಶಗಳಲ್ಲಿನ ಭಾಷೆ ಫ್ರೆಂಚ್‌.