ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸೇವೆಯೇ ಅವನಿಗೆ ಮದ್ದು!

ದೇವರ ಸೇವೆಯೇ ಅವನಿಗೆ ಮದ್ದು!

ಕೆನ್ಯಾದಲ್ಲಿ ಇಬ್ಬರು ಪಯನೀಯರ್‌ ಸಹೋದರರು ಒಂದು ಮನೆಯೊಳಗೆ ಹೋದಾಗ ಮಂಚದ ಮೇಲೆ ಮಲಗಿದ್ದ ಕುಬ್ಜ ದೇಹವುಳ್ಳ ವ್ಯಕ್ತಿಯನ್ನು ನೋಡಿ ಚಕಿತರಾದರು. ಅವನ ಶರೀರ ತುಂಬ ಚಿಕ್ಕದಾಗಿತ್ತು, ಪುಟ್ಟ ಕೈಗಳಿದ್ದವು. ಆ ಸಹೋದರರು ಅವನಿಗೆ, “ಕುಂಟನು ಜಿಂಕೆಯಂತೆ ಹಾರುವನು” ಎಂಬ ದೇವರ ವಾಗ್ದಾನದ ಬಗ್ಗೆ ತಿಳಿಸಿದಾಗ ದೊಡ್ಡ ನಗೆಯೊಂದಿಗೆ ಅವನ ಮೊಗವರಳಿತು.​—ಯೆಶಾ. 35:5.

ಓನೆಸ್ಮಸ್‌ ಎಂಬ ಹೆಸರಿನ ಆ ವ್ಯಕ್ತಿಗೆ ಹುಟ್ಟಿನಿಂದಲೇ ‘ಎಲುಜನನ ನ್ಯೂನತೆ’ (‘ಆಸ್ಟಿಯೋಜನಿಸಿಸ್‌ ಇಂಪರ್ಫೆಕ್ಟ’) ಇದೆಯೆಂದು ಆ ಪಯನೀಯರರಿಗೆ ತಿಳಿದುಬಂತು. ಇದರಿಂದಾಗಿ ಓನೆಸ್ಮಸ್‌ನ ಎಲುಬುಗಳು ತುಂಬ ದುರ್ಬಲವಾಗಿದ್ದವು. ಕೊಂಚ ಒತ್ತಡ ಬಿದ್ದರೂ ತುಂಡಾಗುತ್ತಿದ್ದವು. ಇದೊಂದು ಗುಣವಾಗದ ಕಾಯಿಲೆ. ಒಳ್ಳೇ ಚಿಕಿತ್ಸೆಯೂ ಇಲ್ಲ. ಹಾಗಾಗಿ ಜೀವಮಾನವಿಡೀ ಗಾಲಿಕುರ್ಚಿಗೆ ಅಂಟಿಕೊಂಡು ತಾನು ನೋವಿನಿಂದ ನರಳುತ್ತಾ ಬದುಕು ಸವೆಯಿಸಬೇಕಿದೆಯೆಂದು ಓನೆಸ್ಮಸ್‌ ನೆನಸಿದ್ದನು.

ಓನೆಸ್ಮಸ್‌ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡನು. ಆದರೆ ಕ್ರೈಸ್ತ ಕೂಟಗಳಿಗೆ ಹಾಜರಾಗುವ ವಿಷಯ ಬಂದಾಗ ಅವನ ತಾಯಿ ಆಕ್ಷೇಪವೆತ್ತಿದರು. ಅವನಿಗೆ ಕಾಯಿಲೆ ಇರುವುದರಿಂದ ಹಾನಿಯಾಗುವುದೇನೋ, ನೋವು ಹೆಚ್ಚಾಗಬಹುದೇನೋ ಎಂಬುದು ಅವರ ಚಿಂತೆಯಾಗಿತ್ತು. ಆದ್ದರಿಂದ ಸಹೋದರರು ಕೂಟಗಳನ್ನು ರೆಕಾರ್ಡ್‌ ಮಾಡಿ ಕೊಡುತ್ತಿದ್ದರು. ಓನೆಸ್ಮಸ್‌ ಅದನ್ನು ಮನೆಯಲ್ಲೇ ಆಲಿಸುತ್ತಿದ್ದನು. ಐದು ತಿಂಗಳು ಬೈಬಲ್‌ ಅಧ್ಯಯನ ಮಾಡಿದ ನಂತರ ಓನೆಸ್ಮಸ್‌ ತನಗೇನಾದರೂ ಸರಿ ಕೂಟಗಳಿಗೆ ಹಾಜರಾಗಲೇಬೇಕೆಂದು ನಿರ್ಧರಿಸಿದನು.

ಕ್ರೈಸ್ತ ಕೂಟಗಳಿಗೆ ಹಾಜರಾದದ್ದರಿಂದ ಓನೆಸ್ಮಸನ ನೋವು ಹೆಚ್ಚಾಯಿತೇ? “ನನ್ನನ್ನು ಕ್ಷಣಕ್ಷಣವು ಬಾಧಿಸುತ್ತಿದ್ದ ನೋವು ಕೂಟಗಳ ಸಮಯದಲ್ಲಿ ಕಡಿಮೆಯಾದಂತಿತ್ತು” ಎಂದು ಹೇಳುತ್ತಾನೆ ಓನೆಸ್ಮಸ್‌. ತನಗೀಗ ಸಿಕ್ಕಿರುವ ನಿರೀಕ್ಷೆ ತನ್ನ ಜೀವನದಲ್ಲಿ ನವೋಲ್ಲಾಸ ತಂದಿದೆಯೆಂದು ಅವನಿಗನಿಸಿತು. ಮಗನ ಮನಃಸ್ಥಿತಿಯಲ್ಲಾದ ಈ ಬದಲಾವಣೆ ನೋಡಿ ತಾಯಿಗೆ ಎಷ್ಟು ಖುಷಿಯಾಯಿತೆಂದರೆ ಅವರೂ ಬೈಬಲ್‌ ಅಧ್ಯಯನಕ್ಕಾಗಿ ಒಪ್ಪಿಕೊಂಡರು. “ದೇವರ ಸೇವೆಯೇ ನನ್ನ ಮಗನ ಕಾಯಿಲೆಗೆ ಮದ್ದು” ಎನ್ನುತ್ತಿದ್ದರು ಅವರು.

ಸ್ವಲ್ಪ ಸಮಯದೊಳಗೆ ಓನೆಸ್ಮಸ್‌ ಪ್ರಚಾರಕನಾದ. ಅನಂತರ ದೀಕ್ಷಾಸ್ನಾನವೂ ಆಯಿತು. ಈಗ ಶುಶ್ರೂಷಾ ಸೇವಕನಾಗಿ ಸೇವೆಮಾಡುತ್ತಿದ್ದಾನೆ. ತನ್ನೆರಡು ಕಾಲು, ಒಂದು ಕೈಯಿಂದ ಏನೂ ಮಾಡಲು ಆಗುವುದಿಲ್ಲವಾದರೂ ಯೆಹೋವನ ಸೇವೆಯನ್ನು ಆದಷ್ಟು ಹೆಚ್ಚು ಮಾಡಬೇಕೆಂಬ ಆಸೆ ಅವನಿಗಿತ್ತು. ಆಕ್ಸಿಲಿಯರಿ ಪಯನೀಯರ್‌ ಸೇವೆಮಾಡಲು ತುಂಬ ಮನಸ್ಸಿತ್ತು. ಆದರೆ ಅರ್ಜಿಹಾಕಲು ಹಿಂದೇಟು ಹಾಕುತ್ತಿದ್ದ. ಏಕೆ? ತನ್ನ ಗಾಲಿಕುರ್ಚಿಯನ್ನು ತಳ್ಳಲಿಕ್ಕಾಗಿ ಯಾರಾದರೂ ತನ್ನ ಜೊತೆ ಯಾವಾಗಲೂ ಇರಬೇಕೆಂಬ ಕಾರಣಕ್ಕೆ. ತನ್ನ ಈ ಚಿಂತೆ ಬಗ್ಗೆ ಜೊತೆ ಕ್ರೈಸ್ತರಿಗೆ ಹೇಳಿದಾಗ ಅವರು ಸಹಾಯ ಮಾಡುತ್ತೇವೆಂದು ಮಾತುಕೊಟ್ಟರು. ಸಹಾಯ ಮಾಡಿದರು ಸಹ. ಓನೆಸ್ಮಸ್‌ ಆಕ್ಸಿಲಿಯರಿ ಪಯನೀಯರ್‌ ಸೇವೆಮಾಡಲು ಶಕ್ತನಾದ.

ರೆಗ್ಯುಲರ್‌ ಪಯನೀಯರ್‌ ಆಗುವ ಆಸೆಯೂ ಓನೆಸ್ಮಸ್‌ನಲ್ಲಿ ಹುಟ್ಟಿದಾಗ ಪುನಃ ಅದೇ ಚಿಂತೆ ಅವನ ತಲೆಯನ್ನು ಕೊರೆಯಲಾರಂಭಿಸಿತು. ಒಮ್ಮೆ ಅವನಿಗೆ ದಿನದ ವಚನದಿಂದ ಅಗತ್ಯವಿದ್ದ ಪ್ರೋತ್ಸಾಹ ಸಿಕ್ಕಿತು. ಕೀರ್ತನೆ 34:8 ಆ ವಚನವಾಗಿತ್ತು: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ.” ಆ ವಚನದ ಬಗ್ಗೆ ಧ್ಯಾನಿಸಿದ ನಂತರ ಓನೆಸ್ಮಸ್‌ ರೆಗ್ಯುಲರ್‌ ಪಯನೀಯರ್‌ ಆಗಲು ನಿರ್ಣಯಿಸಿದ. ಈಗ ಅವನು ವಾರದಲ್ಲಿ ನಾಲ್ಕು ದಿನ ಸೇವೆಗೆ ಹೋಗುತ್ತಾನೆ. ಅವನ ಹಲವಾರು ಬೈಬಲ್‌ ವಿದ್ಯಾರ್ಥಿಗಳು ಒಳ್ಳೇ ಆಧ್ಯಾತ್ಮಿಕ ಪ್ರಗತಿ ಮಾಡುತ್ತಿದ್ದಾರೆ. 2010ರಲ್ಲಿ ಅವನು ಪಯನೀಯರ್‌ ಸೇವಾ ಶಾಲೆಗೆ ಹಾಜರಾದನು. ಆ ಶಾಲೆಯ ಓರ್ವ ಶಿಕ್ಷಕರು ಮೊದಮೊದಲು ತನ್ನ ಮನೆಗೆ ಸಾಕ್ಷಿಕೊಡಲು ಬಂದಿದ್ದ ಆ ಇಬ್ಬರು ಸಹೋದರರಲ್ಲಿ ಒಬ್ಬರಾಗಿದ್ದರು. ಇದರಿಂದ ಓನೆಸ್ಮಸನಿಗಾದ ಸಂತೋಷ ಹೇಳತೀರದು!

ಈಗ ಓನೆಸ್ಮಸ್‌ಗೆ ಹತ್ತಿರತ್ತಿರ 40 ವರ್ಷ ಪ್ರಾಯ. ಅವನ ಅಪ್ಪಅಮ್ಮ ಇಬ್ಬರೂ ಈಗ ಇಲ್ಲ. ಸಭೆಯಲ್ಲಿರುವ ಸಹೋದರ ಸಹೋದರಿಯರೇ ಅವನನ್ನು ನೋಡಿಕೊಳ್ಳುತ್ತಿದ್ದಾರೆ. ತಾನು ಈಗ ಆನಂದಿಸುತ್ತಿರುವ ಎಲ್ಲ ಆಶೀರ್ವಾದಗಳಿಗಾಗಿ ಅವನು ತುಂಬ ಆಭಾರಿಯಾಗಿದ್ದಾನೆ. ‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದಿರುವ’ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾನೆ.​—ಯೆಶಾ. 33:24.