ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು ನಾರ್ವೆಯಲ್ಲಿ
ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು ನಾರ್ವೆಯಲ್ಲಿ
ಇದು ಕೆಲವೇ ವರ್ಷಗಳ ಹಿಂದಿನ ಮಾತು. ನಾರ್ವೆಯ ಎರಡನೇ ದೊಡ್ಡ ಪಟ್ಟಣವಾದ ಬರ್ಗೆನ್‌ನಲ್ಲಿ 45ರ ಪ್ರಾಯ ದಾಟಿದ ರೊಆಲ್ ತನ್ನ ಪತ್ನಿ ಎಲ್ಸೇಬೆತ್, ಮಗಳು ಈಸಾಬೆಲ್, ಮಗ ಫೇಬೀಯಾನ್ ಜೊತೆ ಹಾಯಾಗಿ ಜೀವಿಸುತ್ತಿದ್ದರು. ರೊಆಲ್ ಒಬ್ಬ ಸಭಾ ಹಿರಿಯರಾಗಿ, ಎಲ್ಸೇಬೆತ್ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದರು. ಅವರ ಇಬ್ಬರು ಮಕ್ಕಳು ಪ್ರಚಾರಕರಾಗಿ ಒಳ್ಳೆ ಪ್ರಗತಿ ಮಾಡುತ್ತಾ ಇದ್ದರು.
ಸೆಪ್ಟೆಂಬರ್ 2009. ರೊಆಲ್ ಕುಟುಂಬ ಸಾರುವ ಕಾರ್ಯದಲ್ಲಿ ಹೊಸದೇನನ್ನೋ ಮಾಡಲು ನಿರ್ಣಯಿಸಿತು. ಅದೇನೆಂದರೆ ವಾರದ ಮಟ್ಟಿಗೆ ದೂರದ ಪ್ರದೇಶಕ್ಕೆ ಹೋಗಿ ಸಾರುವುದೇ. ರೊಆಲ್, ಎಲ್ಸೇಬೆತ್ ಮತ್ತು ಅವರ 18ವಯಸ್ಸಿನ ಮಗ ಫೇಬೀಯಾನ್ ಜೊತೆಯಾಗಿ ನಾರ್ಕನ್ ಎಂಬ ಪರ್ಯಾಯ ದ್ವೀಪಕ್ಕೆ ಪ್ರಯಾಣ ಮಾಡಿದರು. ಈ ದ್ವೀಪ ಆರ್ಕ್‌ಟಿಕ್ ವೃತ್ತದ ಮೇಲಿರುವ ಫಿನ್‌ಮಾರ್ಕ್ ಪ್ರಾಂತದಲ್ಲಿದೆ. ಇವರ ಹಾಗೆ ಇನ್ನೂ ಹಲವರು ಆ ಸ್ಥಳಕ್ಕೆ ಸುವಾರ್ತೆ ಸಾರಲು ಬಂದಿದ್ದರು. ಅವರೊಂದಿಗೆ ಸೇರಿ ರೊಆಲ್ ಕುಟುಂಬದವರು ಕ್ಯೂಲ್‌ಅಫ್‌ಜುರ್ ಎಂಬ ಹಳ್ಳಿಯಲ್ಲಿ ಸುವಾರ್ತೆ ಸಾರಿದರು. ರೊಆಲ್ ತಮ್ಮ ನೆನಪನ್ನು ಹೀಗೆ ಹಂಚಿಕೊಳ್ಳುತ್ತಾರೆ: “ಅಲ್ಲಿಗೆ ಹೋಗಿ ಸೇವೆ ಆರಂಭಿಸಿದ ಮೇಲೆ ನನಗೆ ತುಂಬ ಖುಷಿಯಾಯ್ತು. ಈ ರೀತಿ ಸಮಯ ಮಾಡಿಕೊಂಡು ದೂರದ ಪ್ರದೇಶದಲ್ಲಿ ವಾರವಿಡೀ ಸೇವೆ ಮಾಡೋದು ಏನೋ ಒಂಥರಾ ನೆಮ್ಮದಿ ತಂದಿತು.” ಆದರೆ ಅದೇ ವಾರದಲ್ಲಿ ಒಂದು ವಿಷಯ ರೊಆಲ್‌ನ ಮನಸ್ಸನ್ನು ಕಾಡಿತು. ಯಾವುದದು? ನೋಡೋಣ ಬನ್ನಿ.
ಊಹಿಸಿರದ ಪ್ರಶ್ನೆ
ರೊಆಲ್ ಹೇಳುವುದು: “ಫಿನ್‌ಮಾರ್ಕ್‌ನಲ್ಲಿ ಪಯನೀಯರ್ ಆಗಿರೋ ಮಾರ್ಯೊ ಎಂಬ ಸಹೋದರ ಇದ್ದಕ್ಕಿದ್ದಂತೆ ನಮ್ಮನ್ನು ‘ಲಾಕ್‌ಸಲ್ವ್ ಪಟ್ಟಣಕ್ಕೆ ಬಂದು ಅಲ್ಲೇ ಇದ್ದು ಸೇವೆ ಮಾಡುವಿರಾ?’ ಎಂದು ಕೇಳಿದರು. 23 ಪ್ರಚಾರಕರಿರುವ ಅಲ್ಲಿನ ಸಭೆಗೆ ಸಹಾಯದ ಅಗತ್ಯವಿತ್ತು.” ರೊಆಲ್‌ಗೆ ಆ ಕ್ಷಣ ಮಾತೇ ಹೊರಡಲಿಲ್ಲ. “ನನಗೂ ಎಲ್ಸೇಬೆತ್‌ಗೂ ಹೆಚ್ಚು ಅಗತ್ಯವಿರುವ ಕಡೆ ಸೇವೆ ಮಾಡಬೇಕು ಅನ್ನೋದು ಇಷ್ಟಾನೇ, ಆದರೆ. . . ಮಕ್ಕಳು ದೊಡ್ಡವರಾಗಲಿ ಅಂತ ಕಾಯುತ್ತಾ ಇದ್ವಿ” ಎನ್ನುತ್ತಾರೆ ರೊಆಲ್. ಅನಂತರ ಆ ವಾರದ ಸೇವೆಯನ್ನು ಮುಂದುವರಿಸಿದಾಗ ಅವರಿಗೆ ಒಂದು ವಿಷಯ ಅರ್ಥ ಆಯ್ತು. ಯೆಹೋವನ ಬಗ್ಗೆ ಕಲಿಯಲು ಜನರಿಗೆ ಮನಸ್ಸಿದೆ. ಹಾಗಾಗಿ ಅವರಿಗೆ ಸಹಾಯ ಬೇಕಾಗಿರುವುದು ಈಗಲೇ, ನಾವು ಅಂದುಕೊಂಡಾಗ ಅಲ್ಲ. “ಮಾರ್ಯೊ ಕೇಳಿದ ಪ್ರಶ್ನೆ ನನಗೆ ತುಂಬ ಕಾಡಿತು. ಎಷ್ಟೋ ರಾತ್ರಿ ಕಣ್ಣಿಗೆ ನಿದ್ರೆನೇ ಹತ್ತಲಿಲ್ಲ.” ಅನಂತರ ಏನಾಯಿತು? ಸಹೋದರ ಮಾರ್ಯೊ ಆ ಮೂವರನ್ನು ಕ್ಯೂಲ್‌ಅಫ್‌ಜುರ್‌ನಿಂದ ಉತ್ತರಕ್ಕೆ 240 ಕಿ.ಮೀ. ದೂರದಲ್ಲಿರುವ ಲಾಕ್‌ಸಲ್ವ್‌ಗೆ ಕರಕೊಂಡು ಹೋದರು. ಆ ಚಿಕ್ಕ ಸಭೆಯನ್ನು ಕಣ್ಣಾರೆ ನೋಡಲಿ ಅನ್ನೋದು ಅವರ ಆಸೆಯಾಗಿತ್ತು.
ಲಾಕ್‌ಸಲ್ವ್‌ಗೆ ಹೋದ ನಂತರ ಆ ಸಭೆಯಲ್ಲಿರುವ ಇಬ್ಬರು ಹಿರಿಯರಲ್ಲಿ ಒಬ್ಬರಾದ ಆಂಡ್ರೇಯಾಸ್ ರಾಜ್ಯ ಸಭಾಗೃಹವನ್ನು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅವರಿಗೆ ತೋರಿಸಿದರು. ಇಡೀ ಸಭೆಯವರು ಅವರನ್ನು ಆದರದಿಂದ ಸ್ವಾಗತಿಸಿದರು. ಇಲ್ಲಿಗೆ ಬಂದು ತಮ್ಮೊಟ್ಟಿಗೆ ಸೇವೆ ಮಾಡುವಂತೆ ಅವರೆಲ್ಲರೂ ರೊಆಲ್ ಮತ್ತು ಎಲ್ಸೇಬೆತ್‌ಗೆ ಕೇಳಿಕೊಂಡರು. ಅಷ್ಟೇ ಅಲ್ಲ ನಿಮಗಾಗಿ ಈಗಾಗಲೇ ಕೆಲಸವನ್ನೂ ನೋಡಿಟ್ಟಿದ್ದೇನೆ ಎಂದು ಆಂಡ್ರೇಯಾಸ್ ಮುಗುಳ್ನಗುತ್ತಾ ರೊಆಲ್ ಮತ್ತು ಫೇಬೀಯಾನ್‌ಗೆ ಹೇಳಿದರು. ಇದನ್ನೆಲ್ಲಾ ಕೇಳಿ ಅವರಿಗೆ ಹೇಗನಿಸಿತು?
ಈಗ ಏನು ಮಾಡೋದು?
ಇದನ್ನೆಲ್ಲಾ ಕೇಳಿ ಫೇಬೀಯಾನ್ “ನನಗಂತು ಇಲ್ಲಿಗೆ ಬರೋ ಆಸೆನೇ ಇಲ್ಲ” ಎಂದು ಹೇಳಿಬಿಟ್ಟ. ಅವನಿಗಿರುವ ಚಿಂತೆ ಏನಂದರೆ, ಊರು ಬಿಟ್ಟು ಇಲ್ಲಿಗೆ ಬಂದು ಈ ಚಿಕ್ಕ ಸಭೆಯಲ್ಲಿ ಇರೋದು ಹೇಗೆ, ಸಭೆಯಲ್ಲಿರುವ ಫ್ರೆಂಡ್ಸ್‌ನೆಲ್ಲ ಬಿಟ್ಟು ಬರೋದು ಹೇಗೆ ಅಂತ. ಅದಲ್ಲದೆ ಅವನು ಮಾಡ್ತಾ ಇರೊ ಎಲೆಕ್ಟ್ರಿಷನ್ ಕೋರ್ಸ್ ಕೂಡ ಮುಗಿದಿರಲಿಲ್ಲ. ಇದರ ಬಗ್ಗೆ 21ವಯಸ್ಸಿನ ಈಸಾಬೆಲ್‌ಗೆ ಕೇಳಿದಾಗ ಏನಂತ ಹೇಳಿದ್ರು? ಆಕೆ ತುಂಬ ಖುಷಿಯಿಂದ ಹೇಳಿದ್ದು: “ಇಷ್ಟು ದಿವಸದಿಂದ ನಾನು ಇದಕ್ಕೋಸ್ಕರವೇ ಕಾಯುತ್ತಾ ಇದ್ದೆ! ಆದರೂ ನನ್ನ ಮನಸ್ಸಲ್ಲಿ ಏನೋ ಅಳುಕು, ‘ನಾನು ಮಾಡ್ತಾ ಇರೋದು ಸರಿನೇನಾ? ನನ್ನ ಫ್ರೆಂಡ್ಸನ್ನು ಬಿಟ್ಟಿರಲು ನನ್ನಿಂದ ಆಗ್ತದಾ? ಈಗ ನಾನೂ ನನ್ನ ಸಭೆ ಅಂತ ಎಲ್ಲ ಚೆನ್ನಾಗಿ ನಡಿತಾ ಇದೆಯಲ್ಲ, ಅಲ್ಲಿ ಹೋದರೆ ಹೇಗೋ?’” ಎಲ್ಸೇಬೆತ್‌ಗೆ ಹೇಗನಿಸಿತು? “ಇದು ಯೆಹೋವ ದೇವರೇ ನಮ್ಮ ಕುಟುಂಬಕ್ಕೆ ಕೊಡ್ತಾ ಇರೋ ನೇಮಕ ಎಂದು ನನಗನಿಸಿತು. ಆದರೂ ನನಗೆ ನಮ್ಮ ಮನೆ ಬಗ್ಗೆನೇ ಚಿಂತೆ, ಮತ್ತೆ ಈ 25ವರ್ಷಗಳಲ್ಲಿ ನಾವು ಕೂಡಿಸಿಟ್ಟಿರುವುದನ್ನೆಲ್ಲ ಬಿಟ್ಟು ಬರಬೇಕಾ ಅಂತ ಯೋಚಿಸ್ತಾ ಇದ್ದೆ.”
ಆ ವಾರದ ವಿಶೇಷ ಚಟುವಟಿಕೆ ಮುಗಿದ ಮೇಲೆ ರೊಆಲ್ ಮತ್ತು ಅವರ ಕುಟುಂಬ ಬರ್ಗೆನ್‌ಗೆ ವಾಪಸ್ ಹೋದರು. ಲಾಕ್‌ಸಲ್ವ್ ಸುಮಾರು 2,100 ಕಿ. ಮೀ. ದೂರದಲ್ಲಿದ್ದರೂ ಅಲ್ಲಿನ ಸಹೋದರ ಸಹೋದರಿಯರು ಕೇಳಿದ ಪ್ರಶ್ನೆ ಇನ್ನೂ ತಲೆನ ಕೊರೆಯುತ್ತಾ ಇತ್ತು. ಎಲ್ಸೇಬೆತ್ ಹೇಳಿದ್ರು “ಯೆಹೋವನಲ್ಲಿ ಪ್ರಾರ್ಥಿಸುತ್ತಾ ಇದ್ದೆ. ನಾನು ಭೇಟಿ ಮಾಡಿದ ಸಭೆಯವರು ನನ್ನ ಸ್ನೇಹಿತರಾದ್ರು. ನಾವು ಫೋಟೋಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ತಾ ಇದ್ವಿ.” ರೊಆಲ್ ಹೇಳಿದ್ದು: “ನನಗೆ ಇನ್ನೂ ಸಮಯ ಬೇಕಿತ್ತು. ಅಲ್ಲಿಗೆ ಹೋದ ಮೇಲೆ ಖರ್ಚುವೆಚ್ಚಗಳನ್ನೆಲ್ಲ ನೋಡಕೊಳ್ಳಲು ಆಗುತ್ತಾ? ಅಂತ ವಿಚಾರ ಮಾಡ್ತಾ ಇದ್ದೆ. ಯೆಹೋವನಲ್ಲಿ ತುಂಬ ಪ್ರಾರ್ಥಿಸಿದೆ, ಹೆಂಡತಿ ಮಕ್ಕಳೊಟ್ಟಿಗೆ ಮಾತಾಡಿದೆ, ಅನುಭವಸ್ಥರನ್ನು ಕೇಳಿ ನೋಡಿದೆ.” ಫೇಬೀಯಾನ್ ಹೇಳ್ತಾನೆ: “ತುಂಬ ಯೋಚಿಸಿದ ಮೇಲೆ ಅಲ್ಲಿಗೆ ಹೋಗದಿರಲು ನನ್ನ ಹತ್ರ ಯಾವುದೇ ಸರಿಯಾದ ಕಾರಣ ಇಲ್ಲ ಅಂತ ಅನಿಸಿತು. ಮತ್ತೆ ಮತ್ತೆ ಯೆಹೋವನಿಗೆ ಪ್ರಾರ್ಥಿಸಿದೆ, ಅಲ್ಲಿಗೆ ಹೋಗುವ ಆಸೆ ಮನಸ್ಸಲ್ಲಿ ಗಟ್ಟಿಯಾಗ್ತಾ ಹೋಯಿತು.” ಈಸಾಬೆಲ್ ಏನು ಮಾಡಿದಳು? ಅವಳು ಇರೋ ಸಭೆಯಲ್ಲೇ ಪಯನೀಯರಿಂಗ್ ಶುರು ಮಾಡಿದಳು. ಆ ಆರು ತಿಂಗಳಲ್ಲಿ ತನ್ನನ್ನು ವೈಯಕ್ತಿಕ ಬೈಬಲ್ ಅಧ್ಯಯನದಲ್ಲಿ ಸಹ ತೊಡಗಿಸಿಕೊಂಡಳು, ಹೀಗೆ ಕೊನೆಗೆ ಆ ಬದಲಾವಣೆಗೆ ತಯಾರಾದಳು.
ಗುರಿ ಮುಟ್ಟಲು ಏನು ಮಾಡೋದು?
ಅಗತ್ಯವಿರುವಲ್ಲಿಗೆ ಹೋಗಿ ಸೇವೆ ಮಾಡುವ ಆಸೆ ಹೃದಯದಲ್ಲಿ ಬೇರೂರಿದಂತೆ ಆ ಕುಟುಂಬ ಹೆಜ್ಜೆಗಳನ್ನು ತೆಗೆದುಕೊಳ್ಳಲು ಶುರುಮಾಡಿತು. ರೊಆಲ್‌ಗೆ ಒಳ್ಳೆ ಸಂಬಳ ಸಿಗುವ ಕೆಲಸ ಇತ್ತು. ಅದರಲ್ಲಿ ನೆಮ್ಮದಿಯೂ ಇತ್ತು. ಆದರೂ ಅವರು ಬಾಸ್ ಹತ್ತಿರ ಹೋಗಿ ವರ್ಷದ ಮಟ್ಟಿಗೆ ರಜೆ ಕೇಳಿದರು. ‘ನೀವು ಬೇಕಿದ್ರೆ ಪಾರ್ಟ್ ಟೈಮ್ ಕೆಲಸ ಮಾಡಬಹುದು. 2ವಾರ ಕೆಲಸ ಮಾಡಿ 6ವಾರ ರಜೆ ತಕ್ಕೊಳ್ಳಬಹುದು’ ಎಂದು ಬಾಸ್ ಇನ್ನೊಂದು ಆಯ್ಕೆ ಇಟ್ಟರು. ಆ ಆಯ್ಕೆ ಒಪ್ಪಿಕೊಂಡ ರೊಆಲ್ ಹೇಳಿದ್ದು: “ನನ್ನ ಸಂಬಳ ಏನೋ ಕಮ್ಮಿ ಆಯ್ತು ನಿಜ, ಆದ್ರೆ ಅಲ್ಲಿ ಹೋಗಿ ಸೇವೆ ಮಾಡಲಿಕ್ಕೆ ಸುಲಭ ಆಯ್ತು.”
ಎಲ್ಸೇಬೆತ್ ಹೇಳುತ್ತಾರೆ: “ನನ್ನ ಯಜಮಾನ್ರು ನನಗೆ ಬರ್ಗೆನ್‌ನಲ್ಲಿರೊ ನಮ್ಮ ಮನೆ ಬಾಡಿಗೆಗೆ ಕೊಟ್ಟು, ಲಾಕ್‌ಸಲ್ವ್‌ನಲ್ಲಿ ಮನೆ ಹುಡುಕಲು ಹೇಳಿದ್ರು. ಅದು ಸುಲಭವಾಗಿರಲಿಲ್ಲ. ತುಂಬ ಪರಿಶ್ರಮ ಪಡಬೇಕಿತ್ತು. ಅಂತೂ ಇಂತೂ ನಮ್ಮಿಂದ ಮಾಡಲಿಕ್ಕೆ ಆಯ್ತು. ಸ್ವಲ್ಪ ಸಮಯ ಆದ ನಂತರ ಮಕ್ಕಳಿಗೆ ಪಾರ್ಟ್ ಟೈಮ್ ಕೆಲಸ ಸಿಕ್ಕಿತು. ಇದರಿಂದ ಊಟದ ಖರ್ಚು, ಹೋಗಿಬರುವ ಖರ್ಚುಗಳನ್ನೆಲ್ಲಾ ನೋಡಿಕೊಳ್ಳಲು ನೆರವಾಯಿತು.”
ಈಸಾಬೆಲ್ ತನ್ನ ಅನುಭವವನ್ನು ಹಂಚಿಕೊಂಡದ್ದು ಹೀಗೆ: “ನಾವೀಗ ಹೋಗಿರೊ ಊರು ಚಿಕ್ಕದಾಗಿರುವುದರಿಂದ ನನ್ನ ಪಯನೀಯರ್ ಸೇವೆಗೆ ಸಹಾಯವಾಗುವಂಥ ಕೆಲಸ ಸಿಗೋದು ತುಂಬ ಕಷ್ಟ ಆಯಿತು. ಕೆಲವೊಂದು ಸಾರಿ ಅಂಥ ಒಂದು ಕೆಲಸ ಸಿಗೋದೇ ಇಲ್ವೇನೋ ಅನಿಸುತ್ತಿತ್ತು.”
ಆದರೂ ಯಾವುದೇ ಚಿಕ್ಕಪುಟ್ಟ ಪಾರ್ಟ್ ಟೈಮ್ ಕೆಲಸಗಳನ್ನು ಮಾಡಲು ಈಸಾಬೆಲ್ ಹಿಂಜರಿಯಲಿಲ್ಲ. ಹೀಗೆ ಅವಳು ಒಂದು ವರ್ಷದಲ್ಲೇ ಒಂಬತ್ತು ಕಡೆ ಕೆಲಸ ಮಾಡಿದಳು. ಮತ್ತು ತನ್ನ ಖರ್ಚುವೆಚ್ಚಗಳನ್ನು ನೋಡಿಕೊಂಡಳು. ಫೇಬೀಯಾನ್ ಏನು ಮಾಡಿದನು? “ನನ್ನ ಎಲೆಕ್ಟ್ರಿಷನ್ ಕೋರ್ಸ್ ಮುಗಿಸಲಿಕ್ಕೆ ನಾನು ಅಪ್ರೆಂಟಿಸ್ ಆಗಿ ಕೆಲಸ ಮಾಡಬೇಕಿತ್ತು. ನಾನದನ್ನು ಲಾಕ್‌ಸಲ್ವ್‌ನಲ್ಲೇ ಮಾಡಿದೆ. ಆಮೇಲೆ ಪರೀಕ್ಷೆ ಪಾಸಾದೆ. ಎಲೆಕ್ಟ್ರಿಷನ್ ಆಗಿ ಪಾರ್ಟ್ ಟೈಮ್ ಕೆಲಸ ಕೂಡ ಸಿಕ್ತು.”ಇನ್ನು ಕೆಲವರು ಸೇವೆಗಾಗಿ ಏನೆಲ್ಲ ಮಾಡಿದ್ರು?
ಮಾರೆಲ್ಯಸ್ (ಈಗ 29 ವಯಸ್ಸು) ಮತ್ತವನ ಹೆಂಡತಿ ಕೆಸೀಯಾಗೆ (ಈಗ 26 ವಯಸ್ಸು) ಸಹ ಹೆಚ್ಚು ಪ್ರಚಾರಕರ ಅಗತ್ಯವಿರುವ ಕಡೆ ಸೇವೆ ಮಾಡುವ ಆಸೆ. ಮಾರೆಲ್ಯಸ್ ಹೇಳುವುದನ್ನು ಕೇಳಿ: “ಅಧಿವೇಶನದಲ್ಲಿ ಪಯನೀಯರ್ ಸೇವೆಯನ್ನು ಪ್ರೋತ್ಸಾಹಿಸಿದ ಭಾಷಣ ಮತ್ತು ಸಂದರ್ಶನಗಳನ್ನು ಕೇಳಿ ನಾನೂ ಕೂಡ ಹೆಚ್ಚು ಸೇವೆ ಮಾಡಬೇಕು ಅಂತ ಅನಿಸಿತು.” ಕೆಸೀಯಾಳಿಗೂ ಈ ಆಸೆ ಇತ್ತಾದರೂ ಒಂದು ತಡೆ ಇತ್ತು. “ನನ್ನ ಬಂಧುಮಿತ್ರರನ್ನು ಬಿಟ್ಟು ದೂರ ಇರೋದನ್ನ ನೆನಸಲಿಕ್ಕೂ ನನ್ನಿಂದ ಆಗ್ತಿರಲಿಲ್ಲ” ಅನ್ನುತ್ತಾರೆ ಅವರು. ಅದಲ್ಲದೆ ಮನೆ ಮೇಲೆ ಲೋನ್ ತೆಗೆದುಕೊಂಡಿದ್ದರಿಂದ ಮಾರೆಲ್ಯಸ್ ದಿನವಿಡೀ ಕೆಲಸ ಮಾಡುತ್ತಿದ್ದರು. ಹಾಗಾದರೆ ಅವರೇನು ಮಾಡಿದರು? ಮಾರೆಲ್ಯಸ್ ವಿವರಿಸುವುದು: “ಹೊಂದಾಣಿಕೆ ಮಾಡಿಕೊಳ್ಳಲು ಸಹಾಯಕ್ಕಾಗಿ ನಾವಿಬ್ಬರೂ ಅನೇಕ ಬಾರಿ ಪ್ರಾರ್ಥಿಸಿದ್ವಿ. ಯೆಹೋವನ ಸಹಾಯ ನಮಗೆ ಸಿಕ್ತು. ಇದರಿಂದ ನಮಗೆ ಅಗತ್ಯ ಇರೋ ಕಡೆ ಹೋಗಲು ಸಾಧ್ಯ ಆಯ್ತು.” ಮೊದಲು ಅವರು ಬೈಬಲ್ ಅಧ್ಯಯನದಲ್ಲಿ ಹೆಚ್ಚಿನ ಸಮಯ ಕಳೆದರು. ಅನಂತರ ಮನೆ ಮಾರಿದರು, ಕೆಲಸ ಬಿಟ್ಟರು ಮತ್ತು ಆಗಸ್ಟ್ 2011ರಲ್ಲಿ ಉತ್ತರ ನಾರ್ವೆಯ ಆಲ್ಟ ಪಟ್ಟಣಕ್ಕೆ ಹೋದರು. ಅಲ್ಲಿ ತಮ್ಮ ಪಯನೀಯರ್ ಸೇವೆಗೆ ಸಹಾಯ ಆಗಲು ಮಾರೆಲ್ಯಸ್ ಒಬ್ಬ ಅಕೌಂಟೆಂಟ್ ಆಗಿ ಮತ್ತು ಕೆಸೀಯಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಅಗತ್ಯವಿರುವಲ್ಲಿ ಸೇವೆ ಮಾಡಿದವರ ಅನುಭವಗಳನ್ನು ಯಿಯರ್‌ಬುಕ್‌ನಲ್ಲಿ ಓದಿ 30ರ ಗಡಿ ದಾಟಿದ ಕ್ನೂಟ್ ಮತ್ತು ಅವರ ಪತ್ನಿ ಲೀಸ್‌ಬೆಟ್ ತುಂಬ ಪ್ರಭಾವಿತರಾದರು. “ನಾವು ಸಹ ಪ್ರಚಾರಕರ ಅಗತ್ಯವಿರುವ ದೇಶಕ್ಕೆ ಹೋಗಿ ಸೇವೆ ಮಾಡಬೇಕು ಎಂಬ ಬಯಕೆ ಹುಟ್ಟಿತು. ಆದರೂ ನನ್ನಂಥ ಸಾಧಾರಣ ವ್ಯಕ್ತಿಯಿಂದ ಇದು ಆಗುತ್ತದಾ ಅನ್ನೋ ಮುಜುಗರ ಇನ್ನೊಂದು ಕಡೆ” ಅನ್ನುತ್ತಾರೆ ಸಹೋದರಿ ಲೀಸ್‌ಬೆಟ್. ಆದರೂ ಆ ಗುರಿ ಮುಟ್ಟಲು ಅವರಿಬ್ಬರೂ ಹೆಜ್ಜೆ ತೆಗೆದುಕೊಂಡರು. ಕ್ನೂಟ್ ಹೀಗನ್ನುತ್ತಾರೆ: “ನಾವು ನಮ್ಮ ಮನೆ ಮಾರಿದೆವು, ದುಡ್ಡು ಉಳಿಸಲು ನನ್ನ ಅಮ್ಮನ ಜೊತೆ ಹೋಗಿ ಉಳಿದ್ವಿ. ವಿದೇಶಕ್ಕೆ ಹೋಗಿ ಸಾರೋದು ಹೇಗಿರುತ್ತೆ ಅನ್ನೋದನ್ನು ಸವಿಯಲು ಒಂದು ವರ್ಷ ಬರ್ಗೆನ್‌ನಲ್ಲಿರುವ ಇಂಗ್ಲಿಷ್ ಸಭೆಗೆ ಹೋದ್ವಿ. ಅಲ್ಲಿ ಲೀಸ್‌ಬೆಟ್‌ಳ ತಾಯಿ ಜೊತೆ ಉಳುಕೊಂಡೆವು.” ಹೀಗೆ ಕ್ನೂಟ್ ಮತ್ತು ಲೀಸ್‌ಬೆಟ್ ವಿದೇಶಕ್ಕೆ ಹೋಗಿ ಸೇವೆ ಮಾಡಲು ಸಿದ್ಧರಾದರು. ಅವರು ಹೋಗಿದ್ದು ಬಹುದೂರದ ಆಫ್ರಿಕಾದ ಉಗಾಂಡ ದೇಶಕ್ಕೆ. ಅವರು ವರ್ಷದಲ್ಲಿ ಎರಡು ತಿಂಗಳು ನಾರ್ವೆಗೆ ಬಂದು ಕೆಲಸ ಮಾಡುತ್ತಾರೆ. ಹೀಗೆ ತಮ್ಮ ಖರ್ಚುವೆಚ್ಚಗಳನ್ನು ನೋಡಿಕೊಂಡು ಉಗಾಂಡದಲ್ಲಿ ಪೂರ್ಣ ಸಮಯ ಸುವಾರ್ತೆ ಸಾರಲು ಅವರಿಗೆ ಸಾಧ್ಯ ಆಗುತ್ತದೆ.
‘ಯೆಹೋವನು ಒಳ್ಳೆಯವನೆಂದು ಸವಿದು ನೋಡಿ’
ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡ ಅವರಿಗೆ ಈಗ ಹೇಗನಿಸುತ್ತಿದೆ? ರೊಆಲ್ ತಮ್ಮ ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ: “ಲಾಕ್‌ಸಲ್ವ್‌ಗೆ ಬಂದ ಮೇಲೆ ನಾವೆಲ್ಲರೂ ಮೊದಲಿಗಿಂತ ಹೆಚ್ಚು ಸಮಯ ಕುಟುಂಬವಾಗಿ ಕಳೆಯಲು ಆಗ್ತಿದೆ. ನಾವು ಇನ್ನಷ್ಟು ಆಪ್ತರಾಗಿದ್ದೇವೆ. ಮಕ್ಕಳು ಆಧ್ಯಾತ್ಮಿಕವಾಗಿ ಪ್ರಗತಿ ಮಾಡುತ್ತಾ ಇರೋದು ನಿಜವಾಗಲೂ ಯೆಹೋವನ ಆಶೀರ್ವಾದ.” ಅವರು ಒಪ್ಪಿಕೊಳ್ಳುವುದು: “ಈಗ ದುಡ್ಡಿನ ಬಗ್ಗೆ ಆಗಲಿ, ವಸ್ತುಗಳ ಬಗ್ಗೆ ಆಗಲಿ ಅಷ್ಟು ಚಿಂತೆ ನಮಗಿಲ್ಲ. ನಾವು ಅಂದುಕೊಂಡಿದ್ದು ತಪ್ಪಾಗಿತ್ತು. ಜೀವನದಲ್ಲಿ ಅವೆಲ್ಲ ಅಷ್ಟು ಪ್ರಾಮುಖ್ಯವಲ್ಲ ಅಂತ ಗೊತ್ತಾಯಿತು.”
ಎಲ್ಸೇಬೆತ್ ಒಂದು ಹೊಸ ಭಾಷೆ ಕಲಿತರು. ಯಾಕೆ? ಯಾಕೆಂದರೆ ಲಾಕ್‌ಸಲ್ವ್ ಸಭಾ ಕ್ಷೇತ್ರಕ್ಕೆ ಸೇರಿದ ಕಾರಸ್ಯೋಕ್ ಎಂಬ ಹಳ್ಳಿ ಅಲ್ಲೇ ಹತ್ತಿರದಲ್ಲಿದೆ. ನಾರ್ವೆ, ಸ್ವೀಡನ್, ಫಿನ್‌ಲ್ಯಾಂಡ್ ಮತ್ತು ರಷ್ಯಾದ ಉತ್ತರ ಭಾಗದ ಮೂಲನಿವಾಸಿಗಳಾದ ಸಾಮಿ ಜನರು ಅಲ್ಲಿ ಬಹುಮಂದಿ ಇದ್ದಾರೆ. ಅವರಿಗೂ ಸುವಾರ್ತೆ ತಲಪಬೇಕೆಂದು ಎಲ್ಸೇಬೆತ್ ಸಾಮಿ ಭಾಷೆ ಕಲಿಯುವ ಕೋರ್ಸ್ ಮಾಡಿದರು. ಈಗ ಅವರು ಆ ಭಾಷೆಯಲ್ಲಿ ಒಂದಷ್ಟು ಮಟ್ಟಿಗೆ ಮಾತಾಡುತ್ತಾರೆ. ಆಕೆಗೆ ಅಲ್ಲಿ ಸೇವೆ ಮಾಡಲು ಹೇಗನಿಸುತ್ತಿದೆ? ಆಕೆ ಹೇಳುತ್ತಾರೆ: “ನಾನೀಗ ಆರು ಬೈಬಲ್ ಅಧ್ಯಯನ ನಡೆಸುತ್ತಿದ್ದೇನೆ. ಇಲ್ಲಿ ಸೇವೆ ಮಾಡೋದು ನನಗೆ ತುಂಬ ಖುಷಿ ತಂದಿದೆ.”
ಫೇಬೀಯಾನ್ ಈಗ ಪಯನೀಯರನಾಗಿ ಮಾತ್ರವಲ್ಲ ಶುಶ್ರೂಷಾ ಸೇವಕನಾಗಿಯೂ ಸೇವೆ ಸಲ್ಲಿಸುತ್ತಿದ್ದಾನೆ. ಅವನು ಮತ್ತು ಈಸಾಬೆಲ್ ತಮ್ಮ ಹೊಸ ಸಭೆಯಲ್ಲಿ ಮೂವರು ಹದಿವಯಸ್ಕರಿಗೆ ಸಭೆಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲು ತೆಗೆದುಕೊಳ್ಳಲು ಪ್ರೋತ್ಸಾಹಿಸಿದರು. ಆ ಮೂವರು ಈಗ ಸೇವೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಅವರಲ್ಲಿ ಇಬ್ಬರು ದೀಕ್ಷಾಸ್ನಾನ ಪಡೆದು ಮಾರ್ಚ್ 2012ರಲ್ಲಿ ಆಕ್ಸಿಲಿಯರ್ ಪಯನೀಯರ್ ಸೇವೆ ಮಾಡಿದರು. ಫೇಬೀಯಾನ್ ಮತ್ತು ಈಸಾಬೆಲ್ ಸಹಾಯ ಮಾಡಿದ ಮೂವರಲ್ಲಿ ಸತ್ಯದಿಂದ ದೂರ ಸರಿಯುತ್ತಿದ್ದ ಹದಿವಯಸ್ಕಳೂ ಒಬ್ಬಳು. “ಸತ್ಯದಲ್ಲಿ ನಿಲ್ಲುವಂತೆ ಸಹಾಯ” ಮಾಡಿದ್ದಕ್ಕೆ ಆಕೆ ಇವರಿಗೆ ಕೃತಜ್ಞತೆ ಹೇಳಿದಳು. ಫೇಬೀಯಾನ್ ಹೇಳುತ್ತಾನೆ: “ಅವಳು ಹಾಗೆ ಹೇಳಿದಾಗ ನನಗೆ ತುಂಬ ಖುಷಿ ಆಯ್ತು. ಇನ್ನೊಬ್ಬರಿಗೆ ಸಹಾಯ ಮಾಡೋದರಲ್ಲಿ ಇರೋ ಸಂತೋಷನೇ ಬೇರೆ!” ಈಸಾಬೆಲ್ ಹೇಳುವುದನ್ನು ಕೇಳಿ: “ಯೆಹೋವನು ಒಳ್ಳೆಯವನೆಂದು ನಾನು ಈ ನೇಮಕದಲ್ಲಿ ಸವಿದು ನೋಡಿದ್ದೇನೆ.” (ಕೀರ್ತ. 34:8) “ಅಷ್ಟೇ ಅಲ್ಲ, ಇಲ್ಲಿ ಸೇವೆ ಮಾಡೋದೇ ಒಂಥರಾ ಮಜಾ!”
ಮಾರೆಲ್ಯಸ್ ಮತ್ತು ಕೆಸೀಯಾ ಸರಳ ಜೀವನ ನಡೆಸುತ್ತಿದ್ದರೂ ಸುಖಿಗಳು. ಅವರು ಹೋಗಿರುವ ಆಲ್ಟ ಸಭೆಯಲ್ಲಿ ಈಗ 41 ಪ್ರಚಾರಕರಿದ್ದಾರೆ. “ನಮ್ಮ ಜೀವನದಲ್ಲಾದ ಬದಲಾವಣೆಯನ್ನು ನೋಡುವಾಗ ನಮಗೆ ಚೈತನ್ಯ ಸಿಗುತ್ತದೆ. ಇಲ್ಲಿ ಪಯನೀಯರರಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾವು ಯೆಹೋವನಿಗೆ ಕೃತಜ್ಞರು. ಇದಕ್ಕಿಂತ ಹೆಚ್ಚು ಸಂತೃಪ್ತಿ ಯಾವುದರಿಂದಲೂ ಸಿಗುವುದಿಲ್ಲ” ಅನ್ನುತ್ತಾರೆ ಮಾರೆಲ್ಯಸ್. ಕೆಸೀಯಾ ಏನನ್ನುತ್ತಾರೆ? “ಯೆಹೋವನ ಮೇಲೆ ಸಂಪೂರ್ಣ ಭರವಸೆ ಇಡಲು ನಾನು ಕಲಿತೆ. ಆತನು ನಮ್ಮನ್ನು ಚೆನ್ನಾಗಿ ಪರಾಮರಿಸಿದ್ದಾನೆ. ಸಂಬಂಧಿಕರಿಂದ ದೂರ ಇರೋದರಿಂದ ನಾವಿಬ್ಬರೂ ಒಟ್ಟಿಗೆ ಕಳೆಯುವ ಸಮಯ ನನಗೆ ತುಂಬ ಅಮೂಲ್ಯವಾಗಿದೆ. ನಾವು ತೆಗೆದುಕೊಂಡಿರುವ ನಿರ್ಣಯಕ್ಕೆ ಎಂದೂ ವಿಷಾದಪಟ್ಟಿಲ್ಲ.”
ಉಗಾಂಡದಲ್ಲಿ ಕ್ನೂಟ್ ಮತ್ತು ಲೀಸ್‌ಬೆಟ್‌ರ ಸೇವೆ ಹೇಗೆ ಆಗುತ್ತಿದೆ? ಕ್ನೂಟ್ ಹೇಳೋದು: “ಹೊಸ ವಾತಾವರಣ, ಹೊಸ ಸಂಸ್ಕೃತಿಗೆ ಹೊಂದಿಕೊಳ್ಳಲು ನಮಗೆ ಸಮಯ ಹಿಡಿತು. ನೀರಿನ ಸಮಸ್ಯೆ, ವಿದ್ಯುತ್ ಕಡಿತ, ಹೊಟ್ಟೆ ನೋವು ಯಾವಾಗಲೂ ಇದ್ದದ್ದೇ. ಆದರೆ ನಮಗೆ ಎಷ್ಟು ಬೇಕೊ ಅಷ್ಟು ಬೈಬಲ್ ಅಧ್ಯಯನ ಇಲ್ಲಿ ಸಿಗುತ್ತವೆ!” ಲೀಸ್‌ಬೆಟ್ ಹೇಳೋದು: “ನಾವು ಇರೋ ಸ್ಥಳದಿಂದ ಬರೇ ಅರ್ಧ ತಾಸು ಪ್ರಯಾಣ ಮಾಡಿದರೆ ಸಾಕು, ಇಲ್ಲಿ ವರೆಗೆ ಸುವಾರ್ತೆ ಸಾರದೇ ಇರುವ ಕ್ಷೇತ್ರಗಳು ನಮಗೆ ಸಿಗುತ್ತವೆ. ಅಲ್ಲಿ ಜನರು ಬೈಬಲ್ ಓದುತ್ತಾ ಇರೋದು ಸಾಮಾನ್ಯ. ಬೈಬಲ್ ಕಲಿಸುವಂತೆ ಅವರೇ ನಮಗೆ ಕೇಳಿಕೊಳ್ಳುತ್ತಾರೆ. ಅಂಥ ಸಹೃದಯದವರಿಗೆ ಬೈಬಲ್ ಸಂದೇಶ ತಿಳಿಸುವುದರಲ್ಲಿ ಸಿಗೋ ಸಂತೋಷಕ್ಕೆ ಪಾರವೇ ಇಲ್ಲ!”
ಇದನ್ನೆಲ್ಲ ನೋಡುವಾಗ ನಮ್ಮ ನಾಯಕನಾದ ಯೇಸು ಕ್ರಿಸ್ತನಿಗೆ ಎಷ್ಟು ಖುಷಿ ಆಗುತ್ತಿರಬೇಕು ನೀವೇ ಊಹಿಸಿಕೊಳ್ಳಿ. ಹೌದು, ಆತನು ಆರಂಭಿಸಿದ ಈ ಸುವಾರ್ತೆ ಸಾರುವ ಕೆಲಸ ಭೂಮಿಯ ಮೇಲೆ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಪ್ರದೇಶಗಳಲ್ಲಿ ಮುಂದುವರಿಯುತ್ತಿರುವುದನ್ನು ಸ್ವರ್ಗದಿಂದ ನೋಡಿ ಆತನು ಸಂತೋಷಿಸುತ್ತಿರಬೇಕು. ‘ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡುವಂತೆ’ ಅವನು ಕೊಟ್ಟ ಆಜ್ಞೆಯನ್ನು ಪೂರೈಸಲು ಮನಃಪೂರ್ವಕವಾಗಿ ತಮ್ಮನ್ನೇ ನೀಡಿಕೊಳ್ಳುವಾಗ ದೇವಜನರಿಗಾಗುವ ಸಂತೋಷ ಅಷ್ಟಿಷ್ಟಲ್ಲ.—ಮತ್ತಾ. 28:19, 20.
[ಪುಟ 6ರಲ್ಲಿರುವ ಚೌಕ]
ಹೆಚ್ಚು ಅಗತ್ಯವಿರುವ ಕಡೆ ಸೇವೆ ಸಲ್ಲಿಸಲು ಕೆಳಗಿನ ಬೈಬಲ್ ತತ್ವಗಳನ್ನು ಅನ್ವಯಿಸುವುದು ನಿಮಗೆ ನೆರವಾಗುತ್ತದೆ:
• ಅಗತ್ಯವಿರುವ ಕಡೆ ಹೋಗಿ ಸೇವೆ ಸಲ್ಲಿಸುವ ಇಚ್ಛೆಯನ್ನು ಮತ್ತು ‘ಸುಜ್ಞಾನವನ್ನು’ ಕೊಡುವಂತೆ ಯೆಹೋವನಲ್ಲಿ ಪ್ರಾರ್ಥಿಸಿ.—ಜ್ಞಾನೋ. 3:21; ಫಿಲಿ. 2:13; ಯಾಕೋ. 1:5.
• ಪ್ರೌಢ ಸಹೋದರರ ಸಲಹೆ ಪಡೆಯಿರಿ. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು.” —ಜ್ಞಾನೋ. 12:15; 13:20.
• ಪಕ್ಕಾ ಯೋಜನೆಗಳನ್ನು ಮಾಡಿ. “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ.”—ಜ್ಞಾನೋ. 21:5.
• ಆ ಯೋಜನೆಗಳನ್ನು ಕಾರ್ಯರೂಪಕ್ಕೆ ಹಾಕಿ. ‘ಒಳ್ಳೆಯದನ್ನು ಮಾಡಿ.’—ಕೀರ್ತ. 37:3.
ಈ ಹೆಜ್ಜೆಗಳನ್ನು ನೀವು ತೆಗೆದುಕೊಳ್ಳುವಾಗ ಯೆಹೋವನು ನಿಮ್ಮೆಲ್ಲ ಪ್ರಯತ್ನಗಳನ್ನು ಆಶೀರ್ವದಿಸುತ್ತಾನೆಂಬ ಭರವಸೆಯಿರಲಿ!—ಜ್ಞಾನೋ. 16:3.
[ಪುಟ 3ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಕ್ಯೂಲ್‌ಅಫ್‌ಜುರ್
ಲಾಕ್‌ಸಲ್ವ್
ಆಲ್ಟ
ಕಾರಸ್ಯೋಕ್
ಆರ್ಕ್‌ಟಿಕ್ ವೃತ್ತ
ಆಸ್ಲೋ
ಬರ್ಗೆನ್
[ಪುಟ 3ರಲ್ಲಿರುವ ಚಿತ್ರ]
ರೊಆಲ್ ಮತ್ತು ಫೇಬೀಯಾನ್
[ಪುಟ 3ರಲ್ಲಿರುವ ಚಿತ್ರ]
ಎಲ್ಸೇಬೆತ್ ಮತ್ತು ಈಸಾಬೆಲ್
[ಪುಟ 5ರಲ್ಲಿರುವ ಚಿತ್ರ]
ಕ್ನೂಟ್ ಮತ್ತು ಲೀಸ್‌ಬೆಟ್ ಉಗಾಂಡದಲ್ಲಿ ಒಂದು ಕುಟುಂಬದೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿರುವುದು
[ಪುಟ 5ರಲ್ಲಿರುವ ಚಿತ್ರ]
ಮಾರೆಲ್ಯಸ್ ಮತ್ತು ಕೆಸೀಯಾ ನಾರ್ವೆಯಲ್ಲಿ ಸಾಮಿ ಭಾಷೆ ಮಾತಾಡುವ ಮಹಿಳೆಗೆ ಸುವಾರ್ತೆ ಸಾರುತ್ತಿರುವುದು
[ಪುಟ 6ರಲ್ಲಿರುವ ಚಿತ್ರ]
“ನಾವು ಇನ್ನಷ್ಟು ಆಪ್ತರಾಗಿದ್ದೇವೆ.”—ರೊಆಲ್