ಅಧ್ಯಯನ ಆನಂದಮಯವೂ ಫಲಕಾರಿಯೂ ಆಗಿರಲು...
ಅಧ್ಯಯನ ಆನಂದಮಯವೂ ಫಲಕಾರಿಯೂ ಆಗಿರಲು...
ಬೈಬಲಿನ ಅಧ್ಯಯನದಲ್ಲಿ ಆನಂದಿಸಬೇಕಾದರೆ ನಾವೇನು ಮಾಡಬೇಕು? ಅಧ್ಯಯನ ಅವಧಿಯನ್ನು ಹೇಗೆ ಹೆಚ್ಚು ಫಲಕಾರಿಯಾಗಿ ಮಾಡಬಹುದು? ತೆಗೆದುಕೊಳ್ಳಬೇಕಾದ ಮೂರು ಮುಖ್ಯ ಹೆಜ್ಜೆಗಳನ್ನು ನೋಡೋಣ.
1 ಪ್ರಾರ್ಥಿಸಿ: ಮೊದಲ ಹೆಜ್ಜೆ ಪ್ರಾರ್ಥನೆ. (ಕೀರ್ತ. 42:8) ಅಧ್ಯಯನ ಮಾಡುವ ಮುನ್ನ ನಾವೇಕೆ ಪ್ರಾರ್ಥಿಸಬೇಕು? ಏಕೆಂದರೆ ದೇವರ ವಾಕ್ಯದ ಅಧ್ಯಯನ ನಮ್ಮ ಆರಾಧನೆಯ ಭಾಗವಾಗಿದೆ. ಹಾಗಾಗಿ ಕಲಿಯುವ ವಿಷಯವನ್ನು ಪೂರ್ಣವಾಗಿ ಗ್ರಹಿಸಲು ನಮ್ಮ ಹೃದಮನಗಳನ್ನು ತೆರೆಯುವಂತೆ ಪವಿತ್ರಾತ್ಮದ ಸಹಾಯಕ್ಕಾಗಿ ಯೆಹೋವನಲ್ಲಿ ಕೇಳಿಕೊಳ್ಳಬೇಕು. (ಲೂಕ 11:13) ತುಂಬ ವರುಷಗಳಿಂದ ಮಿಷನೆರಿ ಸೇವೆಮಾಡುತ್ತಿರುವ ಬಾರ್ಬ್ರ ಹೀಗೆ ಹೇಳುತ್ತಾರೆ: “ಬೈಬಲ್ ಓದುವ ಇಲ್ಲವೆ ಅಧ್ಯಯನ ಮಾಡುವ ಮುನ್ನ ನಾನು ಯಾವಾಗಲೂ ಪ್ರಾರ್ಥನೆ ಮಾಡುತ್ತೇನೆ. ಆಗ ಯೆಹೋವನು ನನ್ನೊಂದಿಗಿದ್ದಾನೆ, ನನ್ನ ಅಧ್ಯಯನವನ್ನು ಇಷ್ಟಪಡುತ್ತಾನೆ ಎಂಬ ಗಾಢ ಅನಿಸಿಕೆ ನನಗಾಗುತ್ತದೆ.” ಅಧ್ಯಯನಕ್ಕಿಂತ ಮುಂಚೆ ಪ್ರಾರ್ಥಿಸುವುದು ನಮ್ಮ ಮುಂದಿರುವ ಹೇರಳವಾದ ಆಧ್ಯಾತ್ಮಿಕ ಆಹಾರದಿಂದ ಪೂರ್ಣ ಪ್ರಯೋಜನ ಪಡೆಯಲು ನಮ್ಮ ಹೃದಮನವನ್ನು ತೆರೆಯುತ್ತದೆ.
2 ಧ್ಯಾನಿಸಿ: ಸಮಯವಿಲ್ಲದ ಕಾರಣ ಕೆಲವರು ಅವಸರ ಅವಸರವಾಗಿ ಬೈಬಲನ್ನು ಓದುತ್ತಾರೆ. ಹೀಗೆ ಓದುವಾಗ ಅಧ್ಯಯನದಿಂದ ದೊರಕುವ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ. ಧ್ಯಾನಿಸಲು ಸಮಯವನ್ನು ಬದಿಗಿರಿಸಿದರೆ ಮಾತ್ರ ಅಧ್ಯಯನ ಫಲಕಾರಿಯಾಗಿರುತ್ತದೆ ಎನ್ನುವುದು 50ಕ್ಕೂ ಹೆಚ್ಚು ವರುಷಗಳಿಂದ ಯೆಹೋವನ ಸೇವೆಮಾಡುತ್ತಿರುವ ಕಾರ್ಲೋಸ್ರವರ ಅನುಭವ. “ನಾನೀಗ ದಿನಕ್ಕೆ ಬೈಬಲಿನ ಎರಡು ಪುಟ ಮಾತ್ರ ಓದುತ್ತೇನೆ. ಓದಿದ ವಿಷಯವನ್ನು ಧ್ಯಾನಿಸಲು ಹೆಚ್ಚು ಸಮಯ ವಿನಿಯೋಗಿಸುತ್ತೇನೆ. ಹೀಗೆ ನಾನು ಓದಿದ ಭಾಗದಿಂದ ಅಮೂಲ್ಯ ಪಾಠಗಳನ್ನು ಕಲಿಯುತ್ತೇನೆ” ಎಂದವರು ಹೇಳುತ್ತಾರೆ. (ಕೀರ್ತ. 77:12) ಧ್ಯಾನಿಸಲು ಸಮಯ ತೆಗೆದುಕೊಂಡಾಗಲಷ್ಟೆ ದೇವರ ಚಿತ್ತದ ಕುರಿತಾದ ನಮ್ಮ ಜ್ಞಾನವೂ ಗ್ರಹಿಕೆಯೂ ಹೆಚ್ಚಾಗುತ್ತದೆ.—ಕೊಲೊ. 1:9-11.
3 ಅನ್ವಯಿಸಿ: ಒಂದು ಚಟುವಟಿಕೆಯನ್ನು ಮಾಡುವುದರ ಪ್ರಯೋಜನವನ್ನು ಮನಗಂಡಾಗಲೇ ಅದನ್ನು ಮಾಡಲು ಹೆಚ್ಚು ಆಸಕ್ತಿ ಮೂಡಿಬರುತ್ತದೆ. ಬೈಬಲ್ ಅಧ್ಯಯನದ ವಿಷಯದಲ್ಲಿಯೂ ಇದು ಸತ್ಯ. ಗಬ್ರಿಯೇಲ್ ಎಂಬ ಯುವ ಸಹೋದರನ ಉದಾಹರಣೆ ತೆಗೆದುಕೊಳ್ಳಿ. ಬೈಬಲನ್ನು ರೂಢಿಯಾಗಿ ಅಧ್ಯಯನ ಮಾಡುತ್ತಿರುವ ಈತ ಹೇಳುವುದು: “ದಿನಾಲು ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಬೈಬಲ್ ಅಧ್ಯಯನ ನನಗೆ ಸಹಾಯ ಮಾಡುತ್ತದೆ. ಇತರರಿಗೆ ನೆರವು ನೀಡಲು ಸಹ ಅದು ನನ್ನನ್ನು ಸನ್ನದ್ಧಗೊಳಿಸುತ್ತದೆ. ಹಾಗಾಗಿ ಕಲಿತ ಪ್ರತಿಯೊಂದು ವಿಷಯವನ್ನು ನನ್ನ ಜೀವನದಲ್ಲಿ ಅನ್ವಯಿಸಲು ಪ್ರಯತ್ನಿಸುತ್ತೇನೆ.” (ಧರ್ಮೋ. 11:18; ಯೆಹೋ. 1:8) ಹೌದು ಅಧ್ಯಯನದ ಮೂಲಕ ದೈವಿಕ ಜ್ಞಾನದ ಭಂಡಾರವನ್ನೇ ನಮ್ಮದಾಗಿಸಬಹುದು.—ಜ್ಞಾನೋ. 2:1-5.
ಸಾರಾಂಶ: ವಿವೇಕದ ಮೂಲನಾದ ಯೆಹೋವನು ಒದಗಿಸಿರುವ ಜ್ಞಾನವನ್ನು ಅಗೆದು ನೋಡುವುದು ನಿಜಕ್ಕೂ ಸಂತೋಷದ ವಿಷಯ! (ರೋಮ. 11:33) ಹಾಗಾಗಿ ಮುಂದಿನ ಬಾರಿ ಅಧ್ಯಯನ ಮಾಡುವಾಗ ಮೊದಲಾಗಿ ಯೆಹೋವನಿಗೆ ಪ್ರಾರ್ಥಿಸಿ. ಹೃದಮನಗಳನ್ನು ತೆರೆಯುವಂತೆ ಪವಿತ್ರಾತ್ಮದ ಸಹಾಯಕ್ಕಾಗಿ ಕೇಳಿಕೊಳ್ಳಿ. ಬಳಿಕ ಓದುತ್ತಿರುವ ವಿಷಯದ ಕುರಿತು ಸಮಯ ತೆಗೆದುಕೊಂಡು ಧ್ಯಾನಿಸಿ. ಅನಂತರ ಕಲಿತ ವಿಷಯವನ್ನು ದೈನಂದಿನ ಜೀವನದಲ್ಲಿ ಅನ್ವಯಿಸಿ. ಈ ಎಲ್ಲ ಹೆಜ್ಜೆಗಳನ್ನು ತೆಗೆದುಕೊಂಡಾಗ ನಿಮ್ಮ ವೈಯಕ್ತಿಕ ಬೈಬಲ್ ಅಧ್ಯಯನ ಅತಿ ಆನಂದಮಯವೂ ಫಲಕಾರಿಯೂ ಆಗಿರುವುದು.