ನೀವು ಶಾಶ್ವತವಾಗಿ ಜೀವಿಸಲು ಬಯಸುತ್ತೀರೊ?
ನೀವು ಶಾಶ್ವತವಾಗಿ ಜೀವಿಸಲು ಬಯಸುತ್ತೀರೊ?
“ನನಗೆ ಸಾಯಲು ಹೆದರಿಕೆಯಿಲ್ಲ. ಆದರೆ ಈ ಹೂವುಗಳನ್ನು ಬಿಟ್ಟುಹೋಗಬೇಕಲ್ಲ ಎಂದು ಯೋಚಿಸುವಾಗ ನನಗೆ ಸಂಕಟವಾಗುತ್ತದೆ” ಎಂದು ಜಪಾನಿನಲ್ಲಿರುವ ಒಬ್ಬ ವೃದ್ಧೆ ಹೇಳಿದಳು. ಆಕೆಗೆ ಒಂದು ಸುಂದರವಾದ ಕೈತೋಟ ಇದ್ದದ್ದರಿಂದಲೇ ಹೀಗಂದಳೆಂದು ಆಕೆಯ ಮನೆಗೆ ಭೇಟಿನೀಡುತ್ತಿದ್ದ ಕ್ರೈಸ್ತ ಶುಶ್ರೂಷಕಿಗೆ ಅರ್ಥವಾಯಿತು. ತಮಗೆ ಸಾಯಲು ಯಾವುದೇ ಭಯವಿಲ್ಲ ಎಂದು ಹೇಳುವ ಅನೇಕರು ವಾಸ್ತವದಲ್ಲಿ ಸೃಷ್ಟಿಯ ವಿಸ್ಮಯಗಳಲ್ಲಿ ಆನಂದಿಸುತ್ತಾರೆ ಮತ್ತು ನಿಜವಾಗಿಯೂ ಶಾಶ್ವತವಾಗಿ ಜೀವಿಸಲು ಮನಸ್ಸಿನಲ್ಲೇ ಹಾತೊರೆಯುತ್ತಿರಬಹುದು.
ಶಾಶ್ವತವಾಗಿ ಜೀವಿಸುವುದು! ಅನೇಕರು ಈ ವಿಚಾರವನ್ನು ತಳ್ಳಿಹಾಕಬಹುದು. ಕೆಲವರು, ತಮಗೆ ಶಾಶ್ವತವಾಗಿ ಜೀವಿಸುವುದರಲ್ಲಿ ಆಸಕ್ತಿಯೇ ಇಲ್ಲವೆಂದು ಹೇಳಲೂಬಹುದು. ಆದರೆ ಯಾರಾದರೂ ಹಾಗೇಕೆ ನೆನಸುವರು?
ನಿತ್ಯ ಜೀವನ—ಬೇಸರ ಹುಟ್ಟಿಸುವುದೊ?
ಶಾಶ್ವತವಾದ ಜೀವನ ಬೇಸರ ಹುಟ್ಟಿಸುವುದೆಂದು ಕೆಲವರು ನೆನಸುತ್ತಾರೆ. ಅನೇಕ ನಿವೃತ್ತ ಜನರ ವೈವಿಧ್ಯವಿಲ್ಲದ, ಬೇಸರ ಹುಟ್ಟಿಸುವ ಜೀವನಕ್ಕೆ ಅವರು ಕೈತೋರಿಸಬಹುದು. ಅಂಥ ನಿವೃತ್ತ ಜನರಿಗೆ ಇನ್ನೇನೂ ಮಾಡಲಿಕ್ಕಿರುವುದಿಲ್ಲ, ಸುಮ್ಮನೆ ಕುಳಿತುಕೊಂಡು ಟಿವಿ ನೋಡುತ್ತಿರಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ. ನಿಮಗೂ ಹೀಗನಿಸುತ್ತಿರುವಲ್ಲಿ, ಖಗೋಳವಿಜ್ಞಾನಿ ರಾಬರ್ಟ್ ಜ್ಯಾಸ್ಟ್ರೊ ಅವರ ಮಾತುಗಳನ್ನು ಪರಿಗಣಿಸಿರಿ. ಶಾಶ್ವತವಾದ ಜೀವನವು ಆಶೀರ್ವಾದವಾಗಿರುವುದೊ ಶಾಪವಾಗಿರುವುದೊ ಎಂದು ಕೇಳಲ್ಪಟ್ಟಾಗ ಅವರು ಉತ್ತರಿಸಿದ್ದು: “ಕುತೂಹಲವುಳ್ಳ ಮನಸ್ಸುಗಳಿರುವ ಮತ್ತು ಕಲಿಯಲಿಕ್ಕಾಗಿ ತಣಿಸಲಾಗದಂಥ ತೃಷೆಯುಳ್ಳವರಿಗೆ ಅದೊಂದು ಆಶೀರ್ವಾದವಾಗಿರುವುದು. ಜ್ಞಾನವನ್ನು ಹೀರಿಕೊಳ್ಳಲು ಅವರ ಮುಂದೆ ಅಂತ್ಯವಿಲ್ಲದಷ್ಟು ಸಮಯವಿದೆ ಎಂಬ ಯೋಚನೆ ಮನಸ್ಸಿಗೆ ತುಂಬ ನೆಮ್ಮದಿಯನ್ನು ಕೊಡುವುದು. ಆದರೆ ತಮಗೆ ಕಲಿಯಬೇಕಾದದ್ದೇನೂ ಉಳಿದಿಲ್ಲವೆಂದು ನೆನಸಿಕೊಂಡು, ತಮ್ಮ ಮನಸ್ಸಿನ ಕದಗಳನ್ನು ಮುಚ್ಚಿರುವವರಿಗೆ ಶಾಶ್ವತ ಜೀವನವು ಭೀತಿಹುಟ್ಟಿಸುವ ಶಾಪವಾಗಿರುವುದು. ಅವರಿಗೆ ಸಮಯವನ್ನು ಕಳೆಯುವುದು ಹೇಗೆಂದು ತಿಳಿದಿರುವುದಿಲ್ಲ.”
ಶಾಶ್ವತವಾದ ಜೀವನ ನಿಮಗೆ ಬೇಸರ ಹುಟ್ಟಿಸುವುದೊ ಇಲ್ಲವೊ ಎಂಬುದು ನಿಮಗಿರುವ ಮನೋಭಾವದ ಮೇಲೆ ಬಹಳಷ್ಟು ಮಟ್ಟಿಗೆ ಹೊಂದಿಕೊಂಡಿರುತ್ತದೆ. ನಿಮಗೂ ‘ಕುತೂಹಲವುಳ್ಳ ಮನಸ್ಸು ಮತ್ತು ಕಲಿಯಲಿಕ್ಕಾಗಿ ತಣಿಸಲಾಗದಂಥ ತೃಷೆ’ ಇರುವಲ್ಲಿ, ಕಲೆ, ಸಂಗೀತ, ವಾಸ್ತುಶಿಲ್ಪ, ತೋಟಗಾರಿಕೆಯ ಕ್ಷೇತ್ರಗಳಲ್ಲಿ ಇಲ್ಲವೆ ನಿಮಗೆ ಆಸಕ್ತಿಯಿರುವ ಬೇರಾವುದೇ ಯೋಗ್ಯ ಚಟುವಟಿಕೆಯಲ್ಲಿ ಏನೆಲ್ಲ ಸಾಧಿಸಬಹುದೆಂಬುದರ ಕುರಿತಾಗಿ ಯೋಚಿಸಿ! ಭೂಮಿಯ ಮೇಲೆ ಅನಂತ ಜೀವನವು, ವೈಯಕ್ತಿಕ ಅಭಿರುಚಿಯ ಕ್ಷೇತ್ರಗಳಲ್ಲಿ ನಿಮಗಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಅದ್ಭುತಕರ ಪ್ರತೀಕ್ಷೆಗಳನ್ನು ನಿಮ್ಮ ಮುಂದಿಡುತ್ತದೆ.
ಎಂದೆಂದಿಗೂ ಪ್ರೀತಿಯನ್ನು ತೋರಿಸಲು ಮತ್ತು ಅನುಭವಿಸಲು ಶಕ್ತರಾಗಿರುವುದು ಅನಂತ ಜೀವನವನ್ನು ತೃಪ್ತಿದಾಯಕವನ್ನಾಗಿ ಮಾಡಲಿದೆ ಎಂಬುದು ನಿಶ್ಚಯ. ಪ್ರೀತಿಯನ್ನು ತೋರಿಸುವ ಸಾಮರ್ಥ್ಯದೊಂದಿಗೆ ನಮ್ಮನ್ನು ಸೃಷ್ಟಿಸಲಾಗಿದೆ, ಮತ್ತು ನಮ್ಮನ್ನು ಪ್ರೀತಿಸಲಾಗುತ್ತದೆ ಎಂಬ ಭಾವನೆಯು ನಮ್ಮ ಬಾಳನ್ನು ಹಸನಾಗಿಸುತ್ತದೆ. ನಿಜವಾದ ಪ್ರೀತಿಯನ್ನು ಹಂಚುವುದು, ಕಾಲಚಕ್ರದ ಉರುಳುವಿಕೆಯೊಂದಿಗೆ ಮಾಸಿಹೋಗದಂಥ ತೃಪ್ತಿಯನ್ನು ತರುತ್ತದೆ. ಶಾಶ್ವತವಾದ ಜೀವನವು, ನಾವು ಜೊತೆ ಮಾನವರಿಗಾಗಿ ಮಾತ್ರವಲ್ಲದೆ ವಿಶೇಷವಾಗಿ ದೇವರಿಗಾಗಿಯೂ ಪ್ರೀತಿಯನ್ನು ಬೆಳೆಸಿಕೊಳ್ಳುವ ನಿರಂತರವಾದ ಅವಕಾಶವನ್ನು ನೀಡುವುದು. “ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನೇ ದೇವರು ತಿಳುಕೊಳ್ಳುತ್ತಾನೆ” ಎಂದು ಅಪೊಸ್ತಲ ಪೌಲನು ಹೇಳಿದನು. (1 ಕೊರಿಂಥ 8:3) ಇಡೀ ವಿಶ್ವದ ಪರಮಾಧಿಕಾರಿಯನ್ನು ತಿಳಿದುಕೊಳ್ಳುವುದು ಮತ್ತು ಆತನು ನಮ್ಮನ್ನು ತಿಳಿದುಕೊಳ್ಳುವುದು ಎಂಥ ಅದ್ಭುತಕರ ಪ್ರತೀಕ್ಷೆಯಾಗಿದೆ! ಅಲ್ಲದೆ, ನಮ್ಮ ಪ್ರೀತಿಯ ಸೃಷ್ಟಿಕರ್ತನ ಕುರಿತಾಗಿ ಕಲಿಯುವುದಕ್ಕೆ ಕೊನೆಯೇ ಇಲ್ಲ. ಹೀಗಿರುವಾಗ, ಶಾಶ್ವತವಾದ ಜೀವನವು ಹೇಗೆ ಬೇಸರಹಿಡಿಸುವಂಥದ್ದೂ ಪ್ರತಿಫಲವಿಲ್ಲದಂಥದ್ದೂ ಆಗಿರಸಾಧ್ಯ?
ಜೀವನ—ಅಲ್ಪಕಾಲದ್ದಾಗಿರುವುದರಿಂದಲೇ ಅಮೂಲ್ಯವಾಗಿದೆಯೊ?
ಜೀವನವು ಅಲ್ಪಕಾಲದ್ದಾಗಿರುವುದರಿಂದಲೇ ಅಷ್ಟು ಅಮೂಲ್ಯವಾಗಿದೆ ಎಂಬುದು ಕೆಲವರ ಅಭಿಪ್ರಾಯ. ಅವರದನ್ನು ಚಿನ್ನಕ್ಕೆ ಹೋಲಿಸುತ್ತಾರೆ. ಚಿನ್ನ ಕೇವಲ ಸ್ವಲ್ಪ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಒಂದುವೇಳೆ ಅದು ಎಲ್ಲಾ ಕಡೆ ಸಿಗುತ್ತಿದ್ದರೆ, ಅದರ ಬೆಲೆ ಕಡಿಮೆಯಾಗಿರುತ್ತಿತ್ತು ಎಂದವರು ಹೇಳುತ್ತಾರೆ. ಇದು ಸತ್ಯವಾದರೂ, ಚಿನ್ನಕ್ಕಿರುವ ಸೌಂದರ್ಯವಾದರೊ ಹಾಗೆಯೇ ಇರುವುದಲ್ಲವೇ? ಜೀವನದ ವಿಷಯದಲ್ಲೂ ಇದು ಸತ್ಯವೆಂಬುದು ನಿಶ್ಚಯ.
ನಾವು ಅನಂತ ಜೀವನದಲ್ಲಿ ಆನಂದಿಸುವುದನ್ನು, ಪುಷ್ಕಳವಾದ ಗಾಳಿಯನ್ನು ಹೊಂದಿರುವುದಕ್ಕೆ ಹೋಲಿಸಬಹುದು. ನೀರಿನಡಿಯಿರುವ ಒಂದು ಜಲಾಂತರ್ನೌಕೆಯು ಸರಿಯಾಗಿ ಕೆಲಸಮಾಡದಿರುವಾಗ, ಅದರಲ್ಲಿರುವ ನಾವಿಕರು ವಿಶೇಷವಾಗಿ ಗಾಳಿಯನ್ನು ತುಂಬ ಅಮೂಲ್ಯವಾದದ್ದಾಗಿ ಪರಿಗಣಿಸುವರು. ಆದರೆ ಅವರನ್ನು ಆ ಜಲಾಂತರ್ನೌಕೆಯಿಂದ ರಕ್ಷಿಸಿದ ಬಳಿಕ, ತಮಗೆ ಪುನಃ ಪುಷ್ಕಳವಾದ ಗಾಳಿಯನ್ನು ಸೇವಿಸಲಿಕ್ಕೆ ಸಿಕ್ಕಿದ್ದಕ್ಕಾಗಿ ಅವರು ಕೃತಘ್ನತೆಯಿಂದ ದೂರುವರೊ? ಖಂಡಿತವಾಗಿಯೂ ಇಲ್ಲ!
ಆ ನಾವಿಕರಂತೆ, ನಾವು ಪಾರುಗೊಳಿಸಲ್ಪಡುವ ಸಾಧ್ಯತೆಯಿದೆ. ಮತ್ತು ಕೇವಲ ಕೆಲವೇ ವರ್ಷಗಳ ವರೆಗೆ ಮಾತ್ರವಲ್ಲ ನಿತ್ಯಕ್ಕೂ ಜೀವಿಸುವ ಹೆಚ್ಚು ಶ್ರೇಷ್ಠವಾದ ಪ್ರತೀಕ್ಷೆಯನ್ನು ಹೊಂದಸಾಧ್ಯವಿದೆ. ಅಪೊಸ್ತಲ ಪೌಲನು ಬರೆದುದು: “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) ಯೇಸುವಿನ ಈಡು ಯಜ್ಞದ ಮುಖಾಂತರ, ದೇವರು ಮಾನವ ಅಪರಿಪೂರ್ಣತೆ ಮತ್ತು ಮರಣವನ್ನು ತೆಗೆದುಹಾಕಿ, ವಿಧೇಯ ಮಾನವಕುಲಕ್ಕೆ ನಿತ್ಯಜೀವದ ವರದಾನವನ್ನು ದಯಪಾಲಿಸುವನು. ಇಂಥ ಒಂದು ಪ್ರೀತಿಪರ ಏರ್ಪಾಡಿಗಾಗಿ ನಾವೆಷ್ಟು ಆಭಾರಿಗಳಾಗಿರಬೇಕು!
ನಮ್ಮ ಪ್ರಿಯ ಜನರ ಕುರಿತಾಗಿ ಏನು?
‘ನನ್ನ ಪ್ರಿಯ ಜನರ ಕುರಿತಾಗಿ ಏನು? ಅವರು ನನ್ನೊಂದಿಗಿಲ್ಲದಿದ್ದರೆ ನನಗೆ ಭೂಮಿಯ ಮೇಲೆ ಶಾಶ್ವತವಾದ ಜೀವನ ಇದ್ದರೂ ಏನು ಪ್ರಯೋಜನ?’ ಎಂದು ಕೆಲವರು ನೆನಸಬಹುದು. ಬಹುಶಃ ನೀವು ಬೈಬಲಿನ ಜ್ಞಾನವನ್ನು ಪಡೆದು, ಭೂಪರದೈಸೊಂದರಲ್ಲಿ ಶಾಶ್ವತವಾಗಿ ಜೀವಿಸುವುದರ ಸಾಧ್ಯತೆಯ ಕುರಿತಾಗಿ ಕಲಿತಿದ್ದೀರಿ. (ಲೂಕ 23:43; ಯೋಹಾನ 3:16; 17:3) ಆದುದರಿಂದ ನಿಮ್ಮ ಸ್ವಂತ ಕುಟುಂಬದವರು, ಇತರ ಪ್ರಿಯ ಜನರು ಮತ್ತು ನೆಚ್ಚಿನ ಸ್ನೇಹಿತರು ನಿಮ್ಮೊಂದಿಗಿದ್ದು, ದೇವರ ವಾಗ್ದತ್ತ ನೀತಿಯ ಹೊಸ ಲೋಕದಲ್ಲಿ ನೀವು ಆನಂದಿಸಲು ನಿರೀಕ್ಷಿಸುವ ಅದೇ ಸಂತೋಷವನ್ನು ಅವರೂ ಅನುಭವಿಸುವಂತೆ ಬಯಸುವುದು ಸಹಜ.—2 ಪೇತ್ರ 3:13.
ಆದರೆ ನಿಮ್ಮ ಸ್ನೇಹಿತರೂ ಪ್ರಿಯ ಜನರೂ ಪರದೈಸ್ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವುದರ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸುತ್ತಿಲ್ಲವಾದರೆ ಆಗೇನು? ಎದೆಗುಂದದಿರಿ. ನೀವು ಶಾಸ್ತ್ರಾಧಾರಿತವಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದನ್ನು ಮುಂದುವರಿಸಿ ಅದಕ್ಕೆ ಹೊಂದಿಕೆಯಲ್ಲಿ ನಡೆದುಕೊಳ್ಳಿ. ಅಪೊಸ್ತಲ ಪೌಲನು ಹೀಗೆ ಬರೆದನು: “ಎಲೈ ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಎಲೈ ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು?” (1 ಕೊರಿಂಥ 7:16) ಜನರು ಬದಲಾಗಬಲ್ಲರು. ಉದಾಹರಣೆಗೆ, ಒಂದು ಸಮಯದಲ್ಲಿ ಕ್ರೈಸ್ತಧರ್ಮವನ್ನು ವಿರೋಧಿಸುತ್ತಿದ್ದ ಒಬ್ಬ ವ್ಯಕ್ತಿಯು ತನ್ನನ್ನು ಬದಲಾಯಿಸಿಕೊಂಡು ನಂತರ ಕ್ರೈಸ್ತ ಸಭೆಯಲ್ಲಿ ಒಬ್ಬ ಹಿರಿಯನಾದನು. ಅವನನ್ನುವುದು: “ನನ್ನ ಚಿಕ್ಕ ಕುಟುಂಬವು ನನ್ನ ವಿರೋಧದಾದ್ಯಂತ ನಿಷ್ಠೆಯಿಂದ ಬೈಬಲ್ ಮೂಲತತ್ತ್ವಗಳಿಗೆ ಅಂಟಿಕೊಂಡದ್ದಕ್ಕಾಗಿ ನಾನು ತುಂಬ ಕೃತಜ್ಞನಾಗಿದ್ದೇನೆ.”
ದೇವರು ನಿಮ್ಮ ಹಾಗೂ ನಿಮ್ಮ ಪ್ರಿಯ ಜನರ ಜೀವನದ ಕುರಿತಾಗಿಯೂ ತುಂಬ ಕಾಳಜಿಯುಳ್ಳವನಾಗಿದ್ದಾನೆ. ಹೌದು, ‘ಯಾವನಾದರೂ ನಾಶವಾಗುವದರಲ್ಲಿ [ಯೆಹೋವನು] ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದಾನೆ.’ (2 ಪೇತ್ರ 3:9) ನೀವೂ ನಿಮ್ಮ ಪ್ರಿಯ ಜನರೂ ಶಾಶ್ವತವಾಗಿ ಜೀವಿಸಬೇಕೆಂದು ಯೆಹೋವ ದೇವರು ಬಯಸುತ್ತಾನೆ. ಆತನ ಪ್ರೀತಿಯು ಅಪರಿಪೂರ್ಣ ಮಾನವರಲ್ಲಿರುವ ಪ್ರೀತಿಗಿಂತ ಶ್ರೇಷ್ಠವಾಗಿದೆ. (ಯೆಶಾಯ 49:15) ಆದುದರಿಂದ ನೀವು ದೇವರೊಂದಿಗೆ ಒಂದು ಸುಸಂಬಂಧವನ್ನು ಏಕೆ ಬೆಳಸಿಕೊಳ್ಳಬಾರದು? ಆಗ ನೀವು ನಿಮ್ಮ ಪ್ರಿಯ ಜನರಿಗೂ ಅದನ್ನೇ ಮಾಡಲು ನೆರವು ನೀಡಬಲ್ಲಿರಿ. ಅವರಿಗೆ ಈಗ ಶಾಶ್ವತ ಜೀವನದ ನಿರೀಕ್ಷೆಯಿಲ್ಲದಿರಬಹುದಾದರೂ, ನೀವು ಬೈಬಲಿನ ನಿಷ್ಕೃಷ್ಟ ಜ್ಞಾನಕ್ಕೆ ಹೊಂದಿಕೆಯಲ್ಲಿ ನಡೆಯುವುದನ್ನು ನೋಡುವಾಗ ಅವರ ಮನೋಭಾವ ಬದಲಾಗಬಹುದು.
ನೀವು ಮರಣದಲ್ಲಿ ಕಳೆದುಕೊಂಡಿರಬಹುದಾದ ಪ್ರಿಯ ಜನರ ಕುರಿತಾಗಿ ಏನು? ಸತ್ತುಹೋಗಿರುವ ಕೋಟಿಗಟ್ಟಲೆ ಜನರಿಗೆ ಬೈಬಲು ಪುನರುತ್ಥಾನದ ಅದ್ಭುತಕರ ನಿರೀಕ್ಷೆಯನ್ನು ಕೊಡುತ್ತದೆ. ಇದು, ಮರಣದಿಂದ ಎಬ್ಬಿಸಲ್ಪಟ್ಟು, ಭೂಪರದೈಸಿನಲ್ಲಿ ಜೀವಿಸುವ ನಿರೀಕ್ಷೆಯಾಗಿದೆ. ಯೇಸು ಕ್ರಿಸ್ತನು ಹೀಗೆ ವಾಗ್ದಾನಿಸಿದನು: “ಸಮಾಧಿಗಳಲ್ಲಿರುವವರೆಲ್ಲರು . . . ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ದೇವರ ಚಿತ್ತವೇನೆಂದು ತಿಳಿಯದೇ ಸತ್ತವರು ಸಹ ಪುನಃ ಜೀವಕ್ಕೆ ಎಬ್ಬಿಸಲ್ಪಡುವರು. ಬೈಬಲ್ ಹೇಳುವುದು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು.’ (ಅ. ಕೃತ್ಯಗಳು 24:15) ಇಂಥವರು ಪುನಃ ಜೀವಕ್ಕೆ ಬರುವಾಗ ಅವರನ್ನು ಸ್ವಾಗತಿಸುವುದು ಎಂಥ ಹರ್ಷದಾಯಕ ಸಂಗತಿಯಾಗಿರುವುದು!
ಅನಂತ ಜೀವನ—ಸಂತೋಷಭರಿತ ಪ್ರತೀಕ್ಷೆ
ಈ ಲೋಕದಲ್ಲಿರುವ ಎಲ್ಲಾ ತೊಂದರೆಗಳ ನಡುವೆಯೂ ನೀವು ಒಂದುವೇಳೆ ಸಂತೋಷಸಂತೃಪ್ತಿಗಳನ್ನು ಅನುಭವಿಸುತ್ತಿರುವಲ್ಲಿ, ಪರದೈಸಭೂಮಿಯಲ್ಲಂತೂ ಖಂಡಿತವಾಗಿಯೂ ನಿತ್ಯಜೀವದ ಆನಂದವನ್ನು ಸವಿಯಲು ಶಕ್ತರಾಗಿರುವಿರಿ. ಯೆಹೋವನ ಸಾಕ್ಷಿಗಳಲ್ಲೊಬ್ಬರು, ನಿತ್ಯಜೀವವು ತರುವಂಥ ಆಶೀರ್ವಾದಗಳ ಕುರಿತಾಗಿ ತಿಳಿಸುತ್ತಿದ್ದಾಗ, ಒಬ್ಬ ಮಹಿಳೆಯು ಹೇಳಿದ್ದು: “ನನಗೆ ಶಾಶ್ವತವಾಗಿ ಜೀವಿಸಲು ಮನಸ್ಸಿಲ್ಲ. ಈ 70-80 ವರ್ಷಗಳ ಬದುಕೇ ನನಗೆ ಸಾಕು.” ಆಗ ಅಲ್ಲೇ ಇದ್ದ ಕ್ರೈಸ್ತ ಹಿರಿಯನೊಬ್ಬನು
ಅವಳನ್ನು ಕೇಳಿದ್ದು: “ಒಂದುವೇಳೆ ನೀವು ಸತ್ತರೆ ನಿಮ್ಮ ಮಕ್ಕಳಿಗೆ ಹೇಗನಿಸುವುದೆಂದು ಯಾವಾಗಲಾದರೂ ಯೋಚಿಸಿದ್ದೀರೊ?” ತಮ್ಮ ತಾಯಿಯನ್ನು ಕಳೆದುಕೊಳ್ಳುವಾಗ ಅವರಿಗಾಗಬಹುದಾದ ದುಃಖದ ಕುರಿತಾಗಿ ಯೋಚಿಸಿಯೇ ಅವಳ ಕಣ್ಣುಗಳಿಂದ ಕಣ್ಣೀರು ಸುರಿಯಿತು. ಅವಳು ಒಪ್ಪಿಕೊಂಡದ್ದು: “ನಾನೆಷ್ಟು ಸ್ವಾರ್ಥಿಯೆಂದು ನನಗೆ ಮೊತ್ತಮೊದಲ ಬಾರಿ ಮನದಟ್ಟಾಯಿತು. ನಿತ್ಯ ಜೀವನವು ಒಂದು ಸ್ವಾರ್ಥಪರ ನಿರೀಕ್ಷೆಯಲ್ಲ ಬದಲಾಗಿ ಇತರರಿಗಾಗಿಯೂ ಜೀವಿಸುವುದನ್ನು ಒಳಗೂಡುತ್ತದೆಂದು ನೋಡಶಕ್ತಳಾದೆ.”ತಾವು ಬದುಕಿರಲಿ ಸಾಯಲಿ, ಅದರ ಬಗ್ಗೆ ಯಾರಿಗೂ ಚಿಂತೆಯಿಲ್ಲವೆಂದು ಕೆಲವರಿಗೆ ಅನಿಸಬಹುದು. ಆದರೆ ನಮ್ಮ ಜೀವದಾತನಿಗೆ ನಿಶ್ಚಯವಾಗಿಯೂ ಚಿಂತೆಯಿದೆ. ಆತನನ್ನುವುದು: “ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ.” (ಯೆಹೆಜ್ಕೇಲ 33:11) ದೇವರು ದುಷ್ಟರ ಜೀವದ ಕುರಿತಾಗಿಯೇ ಅಷ್ಟೊಂದು ಚಿಂತಿತನಾಗಿರುವಾಗ, ಖಂಡಿತವಾಗಿಯೂ ಆತನು ತನ್ನನ್ನು ಪ್ರೀತಿಸುವವರ ವಿಷಯದಲ್ಲಿ ಗಾಢವಾಗಿ ಚಿಂತಿಸುತ್ತಾನೆ.
ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನಿಗೆ ಯೆಹೋವನ ಪ್ರೀತಿಯ ಆರೈಕೆಯಲ್ಲಿ ದೃಢಭರವಸೆಯಿತ್ತು. ಅವನು ಒಮ್ಮೆ ಹೇಳಿದ್ದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ತನ್ನ ಹೆತ್ತವರಿಗೆ ತನ್ನ ಮೇಲಿದ್ದ ಪ್ರೀತಿಯ ಕುರಿತಾಗಿ ದಾವೀದನಿಗೆ ತಿಳಿದಿದ್ದದ್ದು ಸಂಭಾವ್ಯ. ಆದರೆ ಅವನ ಹೆತ್ತವರು—ಅವನ ಅತೀ ಆಪ್ತ ಮಾನವ ಸಂಬಂಧಿಕರು—ಅವನನ್ನು ಬಿಟ್ಟರೂ ದೇವರು ಮಾತ್ರ ಎಂದಿಗೂ ತನ್ನ ಕೈಬಿಡನೆಂದು ಅವನಿಗೆ ಗೊತ್ತಿತ್ತು. ಪ್ರೀತಿ ಹಾಗೂ ಚಿಂತೆಯಿಂದ, ಯೆಹೋವನು ನಮಗೆ ನಿತ್ಯಜೀವ ಹಾಗೂ ಆತನೊಂದಿಗೆ ಅಂತ್ಯವಿಲ್ಲದ ಸ್ನೇಹವನ್ನು ನೀಡುತ್ತಾನೆ. (ಯಾಕೋಬ 2:23) ಈ ಅದ್ಭುತವಾದ ವರದಾನಗಳನ್ನು ನಾವು ಕೃತಜ್ಞತಾಭಾವದಿಂದ ಸ್ವೀಕರಿಸಬೇಕಲ್ಲವೊ?
[ಪುಟ 7ರಲ್ಲಿರುವ ಚಿತ್ರ]
ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಪ್ರೀತಿಯು, ಶಾಶ್ವತವಾಗಿ ಜೀವಿಸುವುದನ್ನು ಸಾರ್ಥಕವಾಗಿಸುವುದು