ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಮಕ್ಕಳನ್ನು ಹೊಗಳುವುದು ಹೇಗೆ?

ಮಕ್ಕಳನ್ನು ಹೊಗಳುವುದು ಹೇಗೆ?

ಸಮಸ್ಯೆ

ಮಕ್ಕಳನ್ನು ತುಂಬಾ ಹೊಗಳಬಾರದು. ಹಾಗೆ ಹೊಗಳುವುದು ಒಳ್ಳೆಯದಲ್ಲ. ಹೊಗಳಿದಷ್ಟು ನಮ್ಮ ತಲೆ ಮೇಲೆ ಕೂತುಬಿಡುತ್ತಾರೆ, ಕೋಪಿಷ್ಠರಾಗುತ್ತಾರೆ, ತಮಗೆ ಇಷ್ಟ ಬಂದ ಹಾಗೆ ಇರುವುದಕ್ಕೆ ಶುರು ಮಾಡುತ್ತಾರೆ ಅನ್ನುವುದು ಕೆಲವರ ಅಭಿಪ್ರಾಯ.

ಮಕ್ಕಳನ್ನು ಎಷ್ಟು ಹೊಗಳುತ್ತೀರಾ ಅನ್ನುವುದರೊಂದಿಗೆ ಹೇಗೆ ಹೊಗಳುತ್ತೀರಾ ಅನ್ನುವುದೂ ತುಂಬಾ ಮುಖ್ಯ. ಯಾವ ರೀತಿಯ ಹೊಗಳಿಕೆ ಒಳ್ಳೇದು? ಯಾವುದು ಒಳ್ಳೇದಲ್ಲ? ಮಕ್ಕಳನ್ನು ಹೇಗೆ ಹೊಗಳಿದರೆ ಅವರ ಮೇಲೆ ಒಳ್ಳೇ ಪರಿಣಾಮ ಬೀರುತ್ತದೆ?

ನಿಮಗಿದು ತಿಳಿದಿರಲಿ

ಎಲ್ಲಾ ರೀತಿಯ ಹೊಗಳಿಕೆ ಒಂದೇ ಪರಿಣಾಮ ಬೀರುವುದಿಲ್ಲ. ಮುಂದಿನ ವಿಷಯಗಳನ್ನು ಪರಿಗಣಿಸಿ.

ಅತಿಯಾಗಿ ಹೊಗಳುವುದು ಒಳ್ಳೇದಲ್ಲ. ಮಕ್ಕಳ ಸ್ವಾಭಿಮಾನವನ್ನು ಹೆಚ್ಚಿಸಲು ಕೆಲವು ಹೆತ್ತವರು ಎಲ್ಲದಕ್ಕೂ ಹೊಗಳುತ್ತಿರುತ್ತಾರೆ. ಆದರೆ ‘ಇದು ನಿಜವಾದ ಹೊಗಳಿಕೆ ಅಲ್ಲ. ಅಪ್ಪ-ಅಮ್ಮ ಸುಮ್ಮಸುಮ್ಮನೆ ಹೊಗಳುತ್ತಿದ್ದಾರೆ ಎಂದು ಮಕ್ಕಳಿಗೆ ಬೇಗ ಗೊತ್ತಾಗಿಬಿಡುತ್ತದೆ. ಅವರಿಗೆ ನಿಮ್ಮ ಮೇಲೆ ನಂಬಿಕೆ ಕಡಿಮೆಯಾಗುತ್ತದೆ’ ಎಂದು ಡಾಕ್ಟರ್‌ ಡೇವಿಡ್ ವಾಲ್ಶ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. *

ಪ್ರತಿಭೆಯನ್ನು ಹೊಗಳುವುದು ತಪ್ಪಲ್ಲ. ಉದಾಹರಣೆಗೆ ಚೆನ್ನಾಗಿ ಚಿತ್ರ ಬಿಡಿಸುವ ಪ್ರತಿಭೆ ನಿಮ್ಮ ಮಗಳಲ್ಲಿದ್ದರೆ ಸಹಜವಾಗಿ ನೀವು ಅವಳನ್ನು ಹೊಗಳುತ್ತೀರಿ. ಆಗ ಅವಳಿಗೆ ಇನ್ನೂ ಚೆನ್ನಾಗಿ ಬಿಡಿಸಲು ಪ್ರೋತ್ಸಾಹ ಸಿಗುತ್ತದೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ಕೇವಲ ಪ್ರತಿಭೆಗಳನ್ನೇ ಹೊಗಳಿದರೆ ‘ಹುಟ್ಟಿನಿಂದ ಬಂದಿರುವ ಪ್ರತಿಭೆಗಳಿಗೆ ಗಮನ ಕೊಟ್ಟರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ’ ಎಂದವಳು ನೆನಸುತ್ತಾಳೆ. ಹೊಸ ವಿಷಯಗಳನ್ನು ಕಲಿಯಲು ‘ನನ್ನಿಂದಾಗೋದಿಲ್ಲ’ ಎಂದು ಹಿಂಜರಿಯುತ್ತಾಳೆ. ‘ಒಂದುವೇಳೆ ನಾನದನ್ನು ಕಲಿಯಲು ಪ್ರಯತ್ನಿಸಿದರೂ ಏನೂ ಸಾಧಿಸಕ್ಕಾಗಲ್ಲ, ಮತ್ಯಾಕೆ ಪ್ರಯತ್ನಿಸಲಿ?’ ಎಂದು ಸುಮ್ಮನಿದ್ದುಬಿಡುತ್ತಾಳೆ.

ಪ್ರಯತ್ನವನ್ನು ಹೊಗಳುವುದು ತುಂಬಾ ಒಳ್ಳೆಯದು. ಹೆತ್ತವರು ಮಕ್ಕಳ ಪ್ರತಿಭೆಯನ್ನಲ್ಲ, ಪ್ರಯತ್ನವನ್ನು ಹೊಗಳಬೇಕು. ಆಗ ಮಕ್ಕಳು ಯಾವುದೇ ವಿಷಯವನ್ನು ಕಲಿಯಲು ಸಾಕಷ್ಟು ತಾಳ್ಮೆ ಮತ್ತು ಪ್ರಯತ್ನ ಅಗತ್ಯ ಎಂಬ ಸತ್ಯಾಂಶವನ್ನು ಕಲಿಯುತ್ತಾರೆ. ಇದರಿಂದಾಗಿ “ಒಳ್ಳೇ ಫಲಿತಾಂಶ ಪಡೆಯಲು ಸಾಕಷ್ಟು ಶ್ರಮ ಹಾಕುತ್ತಾರೆ. ಒಂದು ವೇಳೆ ಸೋತರೂ ನಿರುತ್ಸಾಹಗೊಳ್ಳದೆ ಕಲಿಯಬೇಕೆಂಬ ಆಸೆಯಿಂದ ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ” ಎಂದು ಲೆಟ್ಟಿ೦ಗ್‌ ಗೋ ವಿತ್‌ ಲವ್‌ ಆ್ಯಂಡ್ ಕಾನ್ಫಿಡೆನ್ಸ್‌ ಎಂಬ ಪುಸ್ತಕ ತಿಳಿಸುತ್ತದೆ.

 ಇದಕ್ಕೇನು ಪರಿಹಾರ

ಪ್ರತಿಭೆಯನ್ನಷ್ಟೇ ಅಲ್ಲ, ಪ್ರಯತ್ನವನ್ನೂ ಹೊಗಳಿ. “ನೀನೊಬ್ಬ ಒಳ್ಳೇ ಕಲೆಗಾರ” ಅನ್ನೊದಕ್ಕಿಂತ “ನೀನು ತುಂಬಾ ಯೋಚನೆ ಮಾಡಿ ಈ ಚಿತ್ರ ಬಿಡಿಸಿದ್ದೀಯಾ” ಅಂತ ಹೇಳಿದರೆ ಅದು ಮಕ್ಕಳ ಮನಸ್ಸನ್ನು ತುಂಬಾ ಸ್ಪರ್ಶಿಸುತ್ತದೆ. ಇವೆರಡೂ ಹೊಗಳಿಕೆಯ ಮಾತುಗಳೇ. ಆದರೆ ಮೊದಲ ಮಾತನ್ನು ಹೇಳಿದರೆ ‘ನಿನ್ನಲ್ಲಿ ಪ್ರತಿಭೆಯಿದ್ದರಷ್ಟೆ ಅದನ್ನು ಮಾಡೋಕಾಗೋದು’ ಎಂದು ಹೇಳಿದ ಹಾಗಿರುತ್ತದೆ.

ಆದರೆ, ಮಕ್ಕಳ ಪ್ರಯತ್ನವನ್ನು ಹೊಗಳುವಾಗ ಯಾವುದೇ ಕೆಲಸ ಆಗಿರಲಿ ಪದೇ ಪದೇ ಮಾಡುತ್ತಾ ಇದ್ದರೆ ಅದನ್ನು ಇನ್ನೂ ಚೆನ್ನಾಗಿ ಮಾಡಬಹುದು ಎಂದು ಅವರು ತಿಳಿದುಕೊಳ್ಳುತ್ತಾರೆ. ಆಗ ಮಕ್ಕಳು ಹೊಸದನ್ನು ಕಲಿಯಲು ಮುಂದೆ ಬರುತ್ತಾರೆ.—ಬೈಬಲ್‌ ತತ್ವ: ಜ್ಞಾನೋಕ್ತಿ 14:23.

ಸೋಲನ್ನು ಹೇಗೆ ಜಯಿಸುವುದು ಅಂತ ಮಕ್ಕಳಿಗೆ ಕಲಿಸಿ. ಜ್ಞಾನಿಗಳು ಕೂಡ ಅನೇಕ ಸಲ ತಪ್ಪಿಬೀಳುತ್ತಾರೆ. (ಜ್ಞಾನೋಕ್ತಿ 24:16) ಆದರೆ ಅವರು ಬಿದ್ದಾಗೆಲ್ಲಾ ಮತ್ತೆ ಎದ್ದೇಳುತ್ತಾರೆ. ತಮ್ಮ ತಪ್ಪಿನಿಂದಲೇ ಕಲಿಯುತ್ತಾ ಮುಂದುವರಿಯುತ್ತಾರೆ. ಇಂಥ ಮನೋಭಾವವನ್ನು ನಿಮ್ಮ ಮಕ್ಕಳು ಬೆಳೆಸಿಕೊಳ್ಳುವಂತೆ ನೀವು ಹೇಗೆ ಸಹಾಯ ಮಾಡಬಹುದು?

ಪ್ರಯತ್ನಗಳನ್ನು ಹೊಗಳಿ. ಉದಾಹರಣೆಗೆ, ನಿಮ್ಮ ಮಗಳಿಗೆ ‘ಚಿಕ್ಕವಳಿಂದ ನೀನು ಗಣಿತದಲ್ಲಿ ಜಾಣೆ’ ಎಂದು ಹೇಳಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ ಮುಂದೊಂದು ದಿನ ಅವಳು ಅದೇ ಗಣಿತದಲ್ಲಿ ಫೇಲಾದರೆ ‘ನಾನು ಆ ಸಾಮರ್ಥ್ಯವನ್ನು ಈಗ ಕಳಕೊಂಡಿದ್ದೇನೆ. ಆದ್ದರಿಂದ ನಾನು ಮುಂದೆ ಪ್ರಯತ್ನ ಹಾಕಿದರೂ ಪ್ರತಿಫಲ ಸಿಗಲ್ಲ’ ಎಂದು ಸುಮ್ಮನಾಗಿಬಿಡಬಹುದು.

ನೀವು ಆಕೆ ಹಾಕುವ ಪ್ರಯತ್ನವನ್ನು ಹೊಗಳಿದರೆ ಆಕೆಯಲ್ಲಿ ತಾಳ್ಮೆಯನ್ನು ಬೆಳೆಸುತ್ತೀರಿ. ಹೀಗೆ ‘ಸೋಲು ಒಂದು ಚಿಕ್ಕ ಎಡವುಗಲ್ಲು ಅಷ್ಟೇ, ಅದೇನು ದೊಡ್ಡ ದುರಂತವಲ್ಲ’ ಎಂದು ನಿಮ್ಮ ಮಗಳಿಗೆ ಕಲಿಸುತ್ತೀರಿ. ಆಗ ಆಕೆ ನನ್ನಿಂದಾಗೋದಿಲ್ಲವೆಂದು ಕೈಕಟ್ಟಿ ಕೂರುವ ಬದಲು ಮತ್ತೊಂದು ವಿಧಾನವನ್ನು ಅನುಸರಿಸಬಹುದು ಅಥವಾ ಇನ್ನೂ ಹೆಚ್ಚಿನ ಶ್ರಮ ಹಾಕಲು ಮನಸ್ಸುಮಾಡಬಹುದು. —ಬೈಬಲ್‌ ತತ್ವ: ಯಾಕೋಬ 3:2.

ನಿಮ್ಮ ಸಲಹೆಗಳು ಉತ್ತೇಜನಕರವಾಗಿರಲಿ. ಸಲಹೆಗಳನ್ನು ಸರಿಯಾದ ವಿಧದಲ್ಲಿ ಕೊಡುವಾಗ ಅವು ಮಕ್ಕಳ ಮೇಲೆ ಒಳ್ಳೇ ಪರಿಣಾಮ ಬೀರುತ್ತವೆ ವಿನಃ ಅವರನ್ನು ಕುಗ್ಗಿಸುವುದಿಲ್ಲ. ಕ್ರಮವಾಗಿ, ಸರಿಯಾದ ವಿಷಯಕ್ಕೆ, ಸರಿಯಾದ ರೀತಿಯಲ್ಲಿ ಪ್ರಶಂಸೆಯನ್ನು ಕೊಡುವಾಗ ನಿಮ್ಮ ಮಕ್ಕಳು ನೀವು ಕೊಡುವ ಸಲಹೆಗಳನ್ನು ಸ್ವೀಕರಿಸಿ ಎಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕೋ ಅಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಹೀಗೆ ಮಕ್ಕಳು ಮಾಡುವ ಪ್ರಯತ್ನ ಅವರಿಗೂ ನಿಮಗೂ ತೃಪ್ತಿ ತರುತ್ತದೆ. —ಬೈಬಲ್‌ ತತ್ವ: ಜ್ಞಾನೋಕ್ತಿ 13:4. ▪ (g15-E 11)

^ ಪ್ಯಾರ. 8 ವೈ ಕಿಡ್ಸ್‌ —ಆಫ್‌ ಆಲ್‌ ಏಜಸ್‌ —ನೀಡ್ ಟು ಹಿಯರ್‌ ಇಟ್‌ ಆ್ಯಂಡ್ ವೇಸ್‌ ಪೇರೆಂಟ್ಸ್‌ ಕ್ಯಾನ್‌ ಸೇ ಇಟ್‌.