ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಶಾಂತಿ-ಸಮಾಧಾನ ಕುಟುಂಬದಲ್ಲಿ ಸಾಧ್ಯನಾ?

ಕುಟುಂಬದಲ್ಲಾಗುವ ಜಗಳವನ್ನು ಮುಂದುವರಿಸದಿರುವುದು ಹೇಗೆ?

ಕುಟುಂಬದಲ್ಲಾಗುವ ಜಗಳವನ್ನು ಮುಂದುವರಿಸದಿರುವುದು ಹೇಗೆ?

ಯಾವಾಗ ನೋಡಿದರೂ ಮನೆಯಲ್ಲಿ ಜಗಳ. ಚಿಕ್ಕದಾಗಿ ಆರಂಭವಾಗಿ ಬರ್‍ತಾ ಬರ್‍ತಾ ದೊಡ್ಡದಾಗುತ್ತೆ. ಹಾಗಂತ, ಕುಟುಂಬದಲ್ಲಿ ಪ್ರೀತಿ ಇಲ್ಲ ಅಂತಲ್ಲ. ಇನ್ನೊಬ್ಬರಿಗೆ ನೋವು ಮಾಡಬೇಕು ಅಂತನೂ ಅಲ್ಲ. ಆದರೆ ಅದು ಹೇಗೋ ಜಗಳ ಆರಂಭವಾಗುತ್ತೆ, ಹೇಗಾಗುತ್ತೋ ಗೊತ್ತೇ ಆಗೋದಿಲ್ಲ. ಅಂಥ ಸಂದರ್ಭದಲ್ಲಿ ಏನು ಮಾಡಬಹುದು?

ಭಿನ್ನಾಭಿಪ್ರಾಯಗಳು ಬಂದ ತಕ್ಷಣ ಕುಟುಂಬ ಒಡೆದುಹೋಗುತ್ತೆ ಅಂತ ಭಾವಿಸಬೇಡಿ. ನಿಮ್ಮ ಮನೆ ಶಾಂತಿಯ ಧಾಮವಾಗಿರುತ್ತಾ ಅಥವಾ ಯುದ್ಧದ ರಣರಂಗವಾಗಿರುತ್ತಾ ಅನ್ನೋದು ಭಿನ್ನಾಭಿಪ್ರಾಯಗಳಿದ್ದಾಗ ನೀವು ಹೇಗೆ ನಡೆದುಕೊಳ್ಳುತ್ತೀರಿ ಅನ್ನೋದರ ಮೇಲೆ ಅವಲಂಭಿಸಿರುತ್ತೆ. ಜಗಳ ಮುಂದುವರಿಸದಿರಲು ನೆರವಾಗುವ ಕೆಲವು ಹೆಜ್ಜೆಗಳನ್ನು ಈಗ ನೋಡೋಣ.

1. ಸೇಡು ತೀರಿಸಬೇಡಿ.

ಇಬ್ಬರೂ ಮಾತಾಡಿದಾಗಲೇ ವಾದ-ವಿವಾದ ಆಗೋದು. ಇಬ್ಬರಲ್ಲಿ ಒಬ್ಬರಾದರೂ ಮಾತಾಡದೆ ಇನ್ನೊಬ್ಬರಿಗೆ ಕಿವಿಗೊಟ್ಟರೆ ಕೋಪ ತಣ್ಣಗಾಗಿ ವಾದ ನಿಂತುಹೋಗಬಹುದು. ಆದ್ದರಿಂದ ನಿಮಗೆ ಕೋಪ ಬಂದಾಗ ಮಾತಿಗೆ ಮಾತು ಬೆಳೆಸಿ ಸೇಡು ತೀರಿಸಬೇಡಿ. ನಿಮ್ಮನ್ನು ನೀವೇ ಹಿಡಿತದಲ್ಲಿಟ್ಟುಕೊಂಡು ಗೌರವ ಕಾಪಾಡಿಕೊಳ್ಳಿ. ವಾದದಲ್ಲಿ ಗೆಲ್ಲುವುದಕ್ಕಿಂತ ಕುಟುಂಬದಲ್ಲಿ ಶಾಂತಿ-ಸಮಾಧಾನ ಇರುವುದೇ ಪ್ರಾಮುಖ್ಯ.

“ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು; ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವದು.”ಜ್ಞಾನೋಕ್ತಿ 26:20.

2. ಭಾವನೆಗಳನ್ನು ಅರ್ಥಮಾಡಿಕೊಳ್ಳಿ.

ಬೇರೆಯವರ ಬಗ್ಗೆ ಮೊದಲೇ ತಪ್ಪಾಗಿ ನಿರ್ಣಯಿಸದೆ, ಅವರು ಮಾತಾಡುವಾಗ ಮಧ್ಯದಲ್ಲಿ ಮಾತಾಡದೆ, ದಯೆಯಿಂದ ಕೇಳಿಸಿಕೊಳ್ಳುವುದಾದರೆ ಅವರ ಕೋಪ ತಣ್ಣಗಾಗಬಹುದು. ಹೀಗೆ ಶಾಂತಿಯನ್ನು ಕಾಪಾಡಿಕೊಳ್ಳಬಹುದು. ‘ಅವರ ಉದ್ದೇಶ ಸರಿಯಿಲ್ಲ’ ಅಂತ ದೂರುವ ಬದಲು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮನುಷ್ಯ ಅಂದ ಮೇಲೆ ತಪ್ಪಾಗುವುದು ಸಹಜ. ಆದ್ದರಿಂದ ಅವರು ತಪ್ಪು ಮಾಡಿದ್ದು ದ್ವೇಷದಿಂದಲೇ ಅಂತ ಭಾವಿಸಬೇಡಿ. ಅವರು ನೋವಿನಲ್ಲಿದ್ದದರಿಂದ ಯೋಚಿಸದೆ ಹಾಗೆ ಮಾತಾಡಿರಬಹುದೇ ವಿನಃ ಸೇಡು ತೀರಿಸಬೇಕೆಂದಲ್ಲ.

“ನೀವು ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ.”ಕೊಲೊಸ್ಸೆ 3:12.

3. ನಿಮ್ಮ ಕೋಪ ತಣ್ಣಗಾಗುವವರೆಗೆ ಕಾಯಿರಿ.

ನಿಮಗೆ ಕೋಪ ಬಂದರೆ ‘ನನಗೆ ಸ್ವಲ್ಪ ಸಮಯ ಬೇಕು’ ಅಂತ ಸಮಾಧಾನದಿಂದ ಹೇಳಿ, ಕೋಪ ತಣ್ಣಗಾಗುವವರೆಗೆ ಬೇರೆ ಕೋಣೆಗೆ ಹೋಗಿ ಅಥವಾ ಹೊರಗೆ ಸುತ್ತಾಡಿ ಬನ್ನಿ. ಆಗ ನೀವು ತಾಳ್ಮೆ, ವಿವೇಚನೆ ತೋರಿಸಲು ಮತ್ತು ಇತರರನ್ನು ಅರ್ಥಮಾಡಿಕೊಳ್ಳಲು ಸಹಾಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಬಹುದು. ನೀವು ಸಮಯ ತೆಗೆದುಕೊಂಡಾಕ್ಷಣ ಇತರರ ಭಾವನೆಗಳಿಗೆ ಬೆಲೆಕೊಡುತ್ತಿಲ್ಲ ಅಥವಾ ತಾತ್ಸಾರ ಮಾಡುತ್ತಿದ್ದೀರಿ ಅಂತ ಆಗುವುದಿಲ್ಲ, ಇಲ್ಲವೆ ಮಾತಾಡದೇ ಮುನಿಸಿಕೊಂಡಿದ್ದೀರಿ ಅಂತಾನೂ ಅಲ್ಲ.

“ಜಗಳವು ಆರಂಭವಾಗುವ ಮುಂಚೆ ಅಲ್ಲಿಂದ ಹೊರಡಿರಿ.”ಜ್ಞಾನೋಕ್ತಿ 17:14, ನೂತನ ಲೋಕ ಭಾಷಾಂತರ.

 4. ಏನು ಹೇಳಬೇಕು, ಹೇಗೆ ಹೇಳಬೇಕು ಅಂತ ಯೋಚಿಸಿ.

‘ಅವರಿಗೆ ತಕ್ಕ ಶಾಸ್ತಿ ಮಾಡೋದು ಹೇಗೆ’ ಅಂತ ಯೋಚಿಸುವುದರಿಂದ ಏನೂ ಪ್ರಯೋಜನವಿಲ್ಲ. ಹಾಗಾಗಿ ಅವರಿಗಾದ ನೋವನ್ನು ಹೇಗೆ ಕಡಿಮೆ ಮಾಡುವುದು ಅಂತ ಯೋಚಿಸಿ. ಅವರ ಭಾವನೆಗಳ ಮೇಲೆ ನಿಮ್ಮ ಅಧಿಕಾರ ಚಲಾಯಿಸಬೇಡಿ. ಅವರಿಗೆ ಯಾಕೆ ಬೇಜಾರಾಗಿದೆ ಎಂದು ದೀನತೆಯಿಂದ ಕೇಳಿ ತಿಳಿದುಕೊಳ್ಳಿ. ಅದರಿಂದ ನಿಮಗೆ ಸಹಾಯವಾದರೆ ಅಥವಾ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಅವರಿಗೆ ಕೃತಜ್ಞತೆ ಹೇಳಿ.

“ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರು೦ಟು; ಮತಿವಂತರ ಮಾತೇ ಮದ್ದು.”ಜ್ಞಾನೋಕ್ತಿ 12:18.

5. ಕೋಪವನ್ನೆಬ್ಬಿಸದೆ ಮೃದುವಾಗಿ ಮಾತಾಡಿ.

ಒಬ್ಬರಿಗೆ ಕೋಪ ಬಂದಾಗ ಇನ್ನೊಬ್ಬರಿಗೂ ಕೋಪ ಬರುವುದು ಸಹಜ. ನಿಮಗೆಷ್ಟೇ ನೋವಾದರೂ ಇನ್ನೊಬ್ಬರಿಗೆ ಅವಮಾನವಾಗುವಂತೆ, ವ್ಯಂಗ್ಯವಾಗಿ ಅಥವಾ ಕಿರುಚಿ ಮಾತಾಡಬೇಡಿ. ‘ನೀವು ನನ್ನ ಬಗ್ಗೆ ಯೋಚಿಸುವುದೇ ಇಲ್ಲ’ ಅಥವಾ ‘ನೀನು ನನ್ನ ಮಾತಿಗೆ ಬೆಲೆನೇ ಕೊಡಲ್ಲ’ ಎಂಬಂಥ ಮನನೋಯಿಸುವ ಮಾತುಗಳನ್ನಾಡಬೇಡಿ. ಅದರ ಬದಲಿಗೆ ಅವರು ನಡಕೊಂಡ ರೀತಿ ನಿಮ್ಮ ಮೇಲೆ ಯಾವ ಪರಿಣಾಮ ಬೀರಿದೆ ಅಂತ ಸಮಾಧಾನದಿಂದ ಹೇಳಿ. (“ನೀವು . . . ಮಾಡಿದರೆ ನನಗೆ ತುಂಬ ನೋವಾಗುತ್ತೆ.”) ತಳ್ಳುವುದು, ಹೊಡೆಯುವುದು, ಒದೆಯುವುದು ಅಥವಾ ಕೆಟ್ಟ ಮಾತುಗಳಿಂದ ಬೈಯುವುದು, ಅವಮಾನ ಮಾಡುವುದು ಇಲ್ಲವೆ ಬೆದರಿಕೆ ಹಾಕುವುದು ಸರಿಯಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಆ ರೀತಿ ಮಾಡಬೇಡಿ.

“ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ.”ಎಫೆಸ 4:31.

6. ಕೂಡಲೇ ಕ್ಷಮೆ ಕೇಳಿ, ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡುತ್ತೀರೆಂದು ತಿಳಿಸಿ.

ಶಾಂತಿಯನ್ನು ಸ್ಥಾಪಿಸುವುದೇ ನಿಮ್ಮ ಗುರಿಯಾಗಿರಲಿ. ನಿಮಗೆಷ್ಟೇ ಕಷ್ಟವಾದರೂ ಈ ಗುರಿಯನ್ನು ಮರೆಯಬೇಡಿ. ಜಗಳ ಆಡಿದರೆ ಇಬ್ಬರೂ ಸೋತಂತೆ; ಅದೇ ಶಾಂತಿಯನ್ನು ಸ್ಥಾಪಿಸಿದರೆ ಇಬ್ಬರೂ ಗೆದ್ದಂತೆ. ಜಗಳವಾಗಲು ‘ನಾನೂ ಕಾರಣ’ ಅಂತ ಒಪ್ಪಿಕೊಳ್ಳಿ. ನಿಮ್ಮಿಂದ ತಪ್ಪೇ ಆಗದಿದ್ದರೂ ಅವರಿಗೆ ಕಿರಿಕಿರಿ ಮಾಡಿದ್ದಕ್ಕಾಗಿ, ನೀವು ಮಾತಾಡಿದ ರೀತಿಗಾಗಿ, ಗೊತ್ತಿಲ್ಲದೇ ನೋವು ಮಾಡಿದ್ದಕ್ಕಾಗಿ ಕ್ಷಮೆ ಕೇಳಿ. ಒಂದುವೇಳೆ, ಅವರು ನಿಮ್ಮ ಹತ್ತಿರ ಕ್ಷಮೆ ಕೇಳಿದರೆ ಕೂಡಲೇ ಕ್ಷಮಿಸಿ. ಸ್ವಾಭಿಮಾನಕ್ಕಿಂತ, ಜಗಳದಲ್ಲಿ ಗೆಲ್ಲುವುದಕ್ಕಿಂತ ಶಾಂತಿಯನ್ನು ಸ್ಥಾಪಿಸುವುದು ಪ್ರಾಮುಖ್ಯ. (g15-E 12)

“ಹೋಗಿ ನಿನ್ನನ್ನು ನೀನು ತಗ್ಗಿಸಿಕೊಂಡು ನಿನ್ನ ನೆರೆಯವನೊಂದಿಗೆ ನಿನ್ನ ಬೇಡಿಕೆಯನ್ನು ಸಾಧಿಸು.”ಜ್ಞಾನೋಕ್ತಿ 6:3, ಪವಿತ್ರ ಗ್ರಂಥ ಭಾಷಾಂತರ.

ಜಗಳ ಶಾಂತವಾದ ನಂತರ ಅದನ್ನು ಕಾಪಾಡಿಕೊಂಡು ಹೋಗಲು ಏನು ಮಾಡಬಹುದು? ಇದರ ಉತ್ತರ ಮುಂದಿನ ಲೇಖನದಲ್ಲಿದೆ.