ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಶಾಂತಿ-ಸಮಾಧಾನ ಕುಟುಂಬದಲ್ಲಿ ಸಾಧ್ಯನಾ?

ಕುಟುಂಬದಲ್ಲಿನ ಜಗಳಕ್ಕೆ ಕಾರಣಗಳೇನು?

ಕುಟುಂಬದಲ್ಲಿನ ಜಗಳಕ್ಕೆ ಕಾರಣಗಳೇನು?

“ಸಾಮಾನ್ಯವಾಗಿ ನಮ್ಮಿಬ್ಬರ ಮಧ್ಯೆ ಹಣದ ವಿಷಯಕ್ಕೆ ಜಗಳ ಆಗುತ್ತೆ. ನಾನು ನನ್ನ ಕುಟುಂಬಕ್ಕೋಸ್ಕರ ಎಷ್ಟೆಲ್ಲಾ ಮಾಡ್ತೀನಿ. ಆದ್ರೂ ನನ್ನ ಗಂಡ ನನ್ನತ್ರ ದುಡ್ಡಿನ ಬಗ್ಗೆ ಏನೂ ಹೇಳಲ್ಲ. ಅದಕ್ಕೇ ನನಗೆ ಕೋಪ ಬರೋದು. ಎಷ್ಟೋ ಸಲ ವಾರಗಳವರೆಗೆ ನಮ್ಮಿಬ್ಬರ ಮಧ್ಯೆ ಮಾತೇ ಇರೋದಿಲ್ಲ” ಎಂದು ಮದುವೆಯಾಗಿ 17 ವರ್ಷವಾಗಿರುವ ಘಾನಾ ದೇಶದ ಸಾರ* ಹೇಳುತ್ತಾಳೆ.

“ಕೆಲವು ಸಲ ನಾವಿಬ್ಬರೂ ಕೋಪದಿಂದ ಮಾತಾಡಿದ್ದೇವೆ. ಅರ್ಥಮಾಡ್ಕೊಳ್ಳದೆ, ಕೂತು ಸರಿಯಾಗಿ ಮಾತಾಡದೆ ಇರೋದೇ ಇದಕ್ಕೆ ಕಾರಣ. ಕೆಲವೊಮ್ಮೆ ಚಿಕ್ಕ ವಿಷಯಾನ ದೊಡ್ಡದು ಮಾಡೋದರಿಂದನೂ ಜಗಳ ಆಗುತ್ತೆ” ಎಂದು ಸಾರಳ ಗಂಡ ಜೇಕಬ್ ಹೇಳುತ್ತಾನೆ.

ಇತ್ತೀಚಿಗಷ್ಟೇ ಮದುವೆಯಾದ ಭಾರತದ ನಿಖಿಲ್‌ ಹೀಗೆ ಹೇಳುತ್ತಾನೆ: ‘ಒಂದು ದಿನ ನನ್ನ ಮಾವ ಕೋಪದಿಂದ ಅತ್ತೆ ಮೇಲೆ ಕೂಗಾಡಿದರು. ಆಗ ಅತ್ತೆ ತುಂಬ ಬೇಜಾರು ಮಾಡ್ಕೊ೦ಡು ಮನೆ ಬಿಟ್ಟು ಹೋದರು. ನಾನು ನನ್ನ ಮಾವನ ಹತ್ತಿರ ಹೋಗಿ “ನೀವು ಯಾಕೆ ಹಾಗೆ ಮಾತಾಡಿದಿರಿ?” ಅಂತ ಕೇಳಿದೆ. ಆಗ ಅವರು ಅಳಿಯನಿಂದ ಅವಮಾನ ಆಯ್ತಲ್ಲಾ ಅಂತ ಅಂದುಕೊಂಡು ನಮ್ಮೆಲ್ಲರ ಮೇಲೂ ಕೂಗಾಡೋಕೆ ಶುರುಮಾಡಿದರು.’

* ಈ ಲೇಖನಗಳಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

ತಪ್ಪಾದ ಸಮಯದಲ್ಲಿ, ತಪ್ಪಾದ ಮಾತುಗಳನ್ನಾಡುವುದರಿಂದ ಮನೆಯಲ್ಲಿ ಜಗಳ ಆಗುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಸಮಾಧಾನದಿಂದ ಆರಂಭವಾಗುವ ಮಾತು ಕ್ಷಣದಲ್ಲೇ ಜ್ವಾಲಾಮುಖಿಯಂತೆ ಸ್ಪೋಟಿಸಬಹುದು. ಎಲ್ಲಾ ಸಮಯದಲ್ಲಿ ಸರಿಯಾಗಿ ಮಾತಾಡಲು ನಮಗ್ಯಾರಿಗೂ ಸಾಧ್ಯವಿಲ್ಲ. ಹಾಗಾಗಿ, ಇತರರ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಅಥವಾ ಅವರ ಉದ್ದೇಶ ಸರಿಯಿಲ್ಲ ಅಂತ ಅನಿಸುವುದು ಸಹಜ. ಆದರೂ ಒಬ್ಬರಿಗೊಬ್ಬರು ಹೊಂದಿಕೊಂಡು ಸಮಾಧಾನದಿಂದಿರಲು ನಮ್ಮೆಲ್ಲರಿಗೂ ಸಾಧ್ಯ.

ಇನ್ನೇನು ಜಗಳ ಆರಂಭವಾಗುತ್ತದೆ ಎಂದು ಗೊತ್ತಾದಾಗ ನೀವೇನು ಮಾಡಬಹುದು? ಒಂದುವೇಳೆ ಜಗಳವಾದರೆ, ಪುನಃ ಶಾಂತಿ-ಸಮಾಧಾನಕ್ಕೆ ಬರುವುದು ಹೇಗೆ? ಸಾರ-ಜೇಕಬ್ ಮತ್ತು ನಿಖಿಲ್‌ರ ಕುಟುಂಬಗಳಲ್ಲದೆ ಪ್ರತಿಯೊಂದು ಕುಟುಂಬ ಶಾಂತಿಯನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು? ಇದನ್ನೆಲ್ಲಾ ತಿಳಿಯಲು ಮುಂದಿನ ಲೇಖನಗಳನ್ನು ಓದಿ. (g15-E 12)