ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಪ್ತರು ಅಸ್ವಸ್ಥರಾದಾಗ . . .

ಆಪ್ತರು ಅಸ್ವಸ್ಥರಾದಾಗ . . .

“ಅಪ್ಪ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗೋ ಮುಂಚೆ ಅವರ ರಕ್ತ ಪರೀಕ್ಷೆಯ ರೀಪೋರ್ಟನ್ನು ಪುನಃ ಒಮ್ಮೆ ನೋಡುವಂತೆ ಡಾಕ್ಟರ್‌ಗ ಹೇಳಿದೆ. ಆಗ ಅವರು ‘ಏನೂ ತೊಂದರೆ ಇಲ್ಲ’ ಅಂದ್ರು. ಆದ್ರೂ ಮತ್ತೊಮ್ಮೆ ಆ ರಿಪೋರ್ಟನ್ನು ನೋಡಿದ್ರು. ಎರಡು ವಿಷಯಗಳಲ್ಲಿ ಅಪ್ಪನಿಗೆ ಸಮಸ್ಯೆ ಇದೆ ಅಂತ ತಿಳೀತು. ಕೂಡಲೇ ಡಾಕ್ಟರ್‌ ಕ್ಷಮೆ ಕೇಳಿ, ತಜ್ಞರನ್ನು ವಿಚಾರಿಸಿದರು. ಈಗ ಅಪ್ಪ ಚೆನ್ನಾಗಿದ್ದಾರೆ. ಡಾಕ್ಟರ್‌ ಹತ್ರ ಮಾತಾಡಿದ್ದು ತುಂಬಾ ಒಳ್ಳೇದಾಯಿತು.”—ಮರೀಬೆಲ್.

ಡಾಕ್ಟರ್‌ ಹತ್ತಿರ ಹೋಗುವ ಮುನ್ನ ರೋಗಿಗಿರುವ ರೋಗ ಲಕ್ಷಣಗಳ ಬಗ್ಗೆ, ತೆಗೆದುಕೊಳ್ಳುತ್ತಿರುವ ಔಷಧಿಯ ಬಗ್ಗೆ ಬರೆದಿಟ್ಟುಕೊಳ್ಳಿ

ಸಾಮಾನ್ಯವಾಗಿ ಜನರಿಗೆ ಆಸ್ಪತ್ರೆಗಳಿಗೆ ಹೋಗುವುದು, ಅಡ್ಮಿಟ್‌ ಆಗುವುದು ದೊಡ್ಡ ತಲೆನೋವಿನ ವಿಷಯ. ಮರೀಬೆಲ್‍ನ ಅನುಭವದಲ್ಲಿ ನೋಡಿದಂತೆ ಅಂತಹ ಸಮಯದಲ್ಲಿ ಒಬ್ಬ ಆಪ್ತ ಸ್ನೇಹಿತ ಅಥವಾ ಸಂಬಂಧಿಕ ಜೊತೆಯಲ್ಲಿದ್ದರೆ ತುಂಬಾ ಸಹಾಯ ಆಗುತ್ತದೆ. ಕೆಲವೊಮ್ಮೆ ಪ್ರಾಣಾಪಾಯದಿಂದ ಪಾರುಮಾಡಬಹುದು. ನಮ್ಮ ಆಪ್ತರು ಅಸ್ವಸ್ಥರಾದಾಗ ನಾವು ಹೇಗೆ ಸಹಾಯ ಮಾಡಬಹುದು?

ಆಸ್ಪತ್ರೆಗೆ ಹೋಗುವ ಮುನ್ನ. ರೋಗಿಗಿರುವ ರೋಗ ಲಕ್ಷಣಗಳ ಬಗ್ಗೆ, ಅವನು ತೆಗೆದುಕೊಳ್ಳುತ್ತಿರುವ ಔಷಧಿಯ ಬಗ್ಗೆ ವಿವರಗಳನ್ನು ಬರೆದಿಟ್ಟುಕೊಳ್ಳಿ. ಡಾಕ್ಟರ್‌ ಹತ್ತಿರ ಏನಾದರೂ ಪ್ರಶ್ನೆ ಕೇಳಬೇಕಿದ್ದರೆ ಅದನ್ನು ಸಹ ಬರೆದಿಟ್ಟುಕೊಳ್ಳಿ. ಈ ಹಿಂದೆ ಅವರು ಅಸ್ವಸ್ಥರಾಗಿದ್ದರಾ ಅಥವಾ ಅವರ ಕುಟುಂಬದಲ್ಲಿ ಯಾರಿಗಾದರೂ ಆ ಕಾಯಿಲೆ ಇತ್ತಾ ಎಂದು ಕೇಳಿ ತಿಳಿದುಕೊಳ್ಳಿ. ‘ಇದೆಲ್ಲಾ ಡಾಕ್ಟರ್‌ಗ ಗೊತ್ತಿರುತ್ತೆ, ಇಲ್ಲ ಅಂದ್ರೆ ಅವರೇ ನಮ್ಮ ಹತ್ರ ಕೇಳ್ತಾರೆ’ ಅಂತ ಅಂದುಕೊಳ್ಳಬೇಡಿ.

ಗಮನಕೊಡಿ, ಗೌರವಭರಿತ ಪ್ರಶ್ನೆಗಳನ್ನು ಕೇಳಿ, ಮುಖ್ಯ ಅಂಶಗಳನ್ನು ಬರೆದಿಟ್ಟುಕೊಳ್ಳಿ

ಡಾಕ್ಟರನ್ನು ಭೇಟಿಯಾದಾಗ. ಡಾಕ್ಟರ್‌ ಮಾತಿಗೆ ನೀವು ಮತ್ತು ರೋಗಿ ಇಬ್ಬರೂ ಚೆನ್ನಾಗಿ ಗಮನಕೊಡಿ. ಅವರು ಹೇಳಿದ್ದು ಅರ್ಥ ಆಗದಿದ್ದಾಗ ಪ್ರಶ್ನೆ ಕೇಳಿ, ‘ಹೀಗಿರಬಹುದು’ ಎಂದು ಊಹೆ ಮಾಡಬೇಡಿ. ರೋಗಿಯೇ ಡಾಕ್ಟರ್‌ ಹತ್ತಿರ ಮಾತಾಡುವಂತೆ, ಪ್ರಶ್ನೆ ಕೇಳುವಂತೆ ಬಿಡಿ. ಅದನ್ನು ನೀವು ಗಮನಕೊಟ್ಟು ಕೇಳಿ. ಸಾಧ್ಯವಾದರೆ ಮುಖ್ಯ ವಿಷಯಗಳನ್ನು ಬರೆದಿಟ್ಟುಕೊಳ್ಳಿ. ಕಾಯಿಲೆಗಿರುವ ಬೇರೆ ಬೇರೆ ಚಿಕಿತ್ಸಾ ವಿಧಾನಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ. ಮತ್ತೊಬ್ಬ ತಜ್ಞನಲ್ಲಿ ಸಹ ವಿಚಾರಿಸುವಂತೆ ರೋಗಿಗೆ ನೀವು ಹೇಳಬಹುದು.

ಡಾಕ್ಟರ್‌ ಹೇಳಿದ ವಿಷಯವನ್ನು ಪುನಃ ಒಮ್ಮೆ ಪರಿಶೀಲಿಸಿ. ಡಾಕ್ಟರ್‌ ಬರೆದಿರುವ ಔಷಧಿಯನ್ನೇ ತಂದಿದ್ದೇವಾ ಎಂದು ಖಚಿತಪಡಿಸಿಕೊಳ್ಳಿ

ಡಾಕ್ಟರನ್ನು ಭೇಟಿಯಾದ ನಂತರ. ಡಾಕ್ಟರ್‌ ಹೇಳಿದ ವಿಷಯವನ್ನು ಪುನಃ ಒಮ್ಮೆ ಪರಿಶೀಲಿಸಿ. ಅವರು ಬರೆದಿರುವ ಔಷಧಿಯನ್ನೇ ತಂದಿದ್ದೇವಾ ಎಂದು ಖಚಿತಪಡಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳುವಂತೆ ಹೇಳಿ. ಒಂದುವೇಳೆ ಯಾವುದಾದರೂ ಔಷಧಿಯಿಂದ ಅಲರ್ಜಿ ಅಥವಾ ಬೇರೇನಾದರೂ ಸಮಸ್ಯೆಯಾದರೆ ತಕ್ಷಣ ಡಾಕ್ಟರನ್ನು ಸಂಪರ್ಕಿಸಿ. ಗುಣಮುಖರಾಗುತ್ತೀರೆಂದು ಧೈರ್ಯ ತುಂಬಿ. ಮತ್ತೆ ಮತ್ತೆ ಚಿಕಿತ್ಸೆ ಪಡೆಯಬೇಕಾಗಿರುವುದಾದರೆ ಅದನ್ನು ನೆನಪಿಸಿ. ರೋಗದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ಅವನಿಗೆ ಸಹಾಯ ಮಾಡಿ.

ಆಸ್ಪತ್ರೆಯಲ್ಲಿರುವಾಗ

ಯಾವುದೇ ಅರ್ಜಿ ತುಂಬಿಸುವಾಗ ಮಾಹಿತಿ ಸರಿಯಾಗಿದೆಯಾ ಎಂದು ನೋಡಿ

ಸಮಾಧಾನದಿಂದಿರಿ ಮತ್ತು ಗಮನಕೊಡಿ. ರೋಗಿ ಆಸ್ಪತ್ರೆಗೆ ಹೋದಾಗ ಅವನು ತುಂಬಾ ಒತ್ತಡದಲ್ಲಿರುತ್ತಾನೆ. ಹಾಗಾಗಿ ನೀವು ಸಮಾಧಾನದಿಂದ, ಎಚ್ಚರವಾಗಿರುವುದಾದರೆ ರೋಗಿ ಆರಾಮವಾಗಿರುತ್ತಾನೆ ಮತ್ತು ಯಾವುದೇ ಎಡವಟ್ಟುಗಳಾಗುವುದಿಲ್ಲ. ಆಸ್ಪತ್ರೆಗೆ ಸೇರಿಸುವಾಗ ಅರ್ಜಿಯಲ್ಲಿ ತುಂಬಿಸಿದ ಮಾಹಿತಿ ಸರಿಯಾಗಿದೆಯಾ ಎಂದು ನೋಡಿ. ಚಿಕಿತ್ಸೆ ಬಗ್ಗೆ ತಿಳಿದುಕೊಂಡು ಯಾವ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ನಿರ್ಣಯಿಸುವ ಹಕ್ಕು ರೋಗಿಗಿದೆ. ಆದುದರಿಂದ ಅವನ ನಿರ್ಧಾರವನ್ನು ಗೌರವಿಸಿ. ಒಂದುವೇಳೆ ಅವನು ನಿರ್ಧಾರ ತೆಗೆದುಕೊಳ್ಳದಷ್ಟು ಅಸ್ವಸ್ಥನಾಗಿದ್ದರೆ ಅವನು ಈಗಾಗಲೇ ಬರೆದಿರುವ ವಿಚಾರಕ್ಕನುಸಾರ ಚಿಕಿತ್ಸೆ ಕೊಡಿಸಿ ಅಥವಾ ಅವನ ಪರವಾಗಿ ಮಾತಾಡಲು ನೇಮಿಸಿರುವ ವ್ಯಕ್ತಿ ಹೇಳಿದಂತೆ ಮಾಡಿ. *

ನೀವು ಗಮನಿಸಿದ ವಿಷಯಗಳನ್ನು ಗೌರವಭರಿತವಾಗಿ ಸಿಬ್ಬಂದಿಗೆ ತಿಳಿಸಿ

ಮುಂದಾಳತ್ವ ವಹಿಸಿ. ಮಾತಾಡಲು ಹಿಂಜರಿಯಬೇಡಿ. ನಿಮ್ಮ ನಡತೆ ಮತ್ತು ಹೊರತೋರಿಕೆ ಉತ್ತಮವಾಗಿರಲಿ. ಆಗ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗೆ ಹೆಚ್ಚಿನ ಕಾಳಜಿ ವಹಿಸುವರು. ಕೆಲವೊಂದು ಆಸ್ಪತ್ರೆಗಳಲ್ಲಿ ರೋಗಿಯನ್ನು ಅನೇಕ ಡಾಕ್ಟರ್‌ಗಳು ಪರೀಕ್ಷಿಸುತ್ತಾರೆ. ಇನ್ನೊಬ್ಬ ಡಾಕ್ಟರ್‌ ಪರೀಕ್ಷಿಸುವಾಗ ಈ ಮಂಚೆ ಪರೀಕ್ಷಿಸಿದ ಡಾಕ್ಟರ್‌ ಏನು ಹೇಳಿದರೆಂದು ತಿಳಿಸಿ. ರೋಗಿಯ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುವುದರಿಂದ ಅವನ ಆರೋಗ್ಯದಲ್ಲಿ ಮತ್ತು ಅವನ ಮಾನಸಿಕ ಸ್ಥಿತಿಯಲ್ಲಿ ಯಾವುದೇ ಏರುಪೇರಾದಲ್ಲಿ ಅದನ್ನು ಕೂಡಲೇ ಡಾಕ್ಟರ್‌ಗ ಹೇಳಿ.

ನಿಮ್ಮಿಂದ ಆಗುವುದೆಲ್ಲವನ್ನೂ ಮಾಡಿ, ಆದರೆ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿ ಮಾಡಬೇಡಿ

ಗೌರವ ಮತ್ತು ಕೃತಜ್ಞತೆ ತೋರಿಸಿ. ಸಾಮಾನ್ಯವಾಗಿ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ತುಂಬಾ ಒತ್ತಡವಿರುತ್ತದೆ. ಆದ್ದರಿಂದ ಅವರು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಬಯಸುತ್ತೀರೋ ಅದೇ ರೀತಿಯಲ್ಲಿ ನೀವು ಅವರೊಂದಿಗೆ ನಡೆದುಕೊಳ್ಳಿ. (ಮತ್ತಾಯ 7:12) ಅವರಿಗೆ ಅನುಭವ, ಸಾಮರ್ಥ್ಯ ಇರುವುದರಿಂದ ಅವರನ್ನು ಗೌರವಿಸಿ. ಅವರ ಮೇಲೆ ಭರವಸೆ ಇಡಿ. ಅವರು ಮಾಡುವ ಕೆಲಸಕ್ಕೆ ಕೃತಜ್ಞತೆ ತಿಳಿಸಿ. ಇದು ಅವರು ತಮ್ಮ ಕೆಲಸವನ್ನು ಇನ್ನೂ ಉತ್ತಮವಾಗಿ ಮಾಡುವಂತೆ ಪ್ರೋತ್ಸಾಹಿಸುತ್ತದೆ.

ಕಾಯಿಲೆ ಬರುವುದನ್ನು ಯಾರೂ ತಡೆಯಲಾಗುವುದಿಲ್ಲ. ನಿಮ್ಮ ಆಪ್ತ ಸ್ನೇಹಿತ ಅಥವಾ ಸಂಬಂಧಿಕ ಅಸ್ವಸ್ಥನಾಗಿರುವುದಾದರೆ ಮುಂಜಾಗ್ರತೆ ವಹಿಸಿ, ಸೂಕ್ತ ನೆರವನ್ನು ನೀಡುವ ಮೂಲಕ ನೀವು ಅವನಿಗೆ ಸಹಾಯ ಮಾಡಬಹುದು.—ಜ್ಞಾನೋಕ್ತಿ 17:17. ▪ (g15-E 10)

^ ಪ್ಯಾರ. 8 ರೋಗಿಗಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಇರುವ ನಿಯಮಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ರೋಗಿಗೆ ಸಂಬಂಧಪಟ್ಟ ದಾಖಲೆಗಳು ಸರಿಯಾಗಿ ಮತ್ತು ಸಂಪೂರ್ಣವಾಗಿವೆಯಾ ಎಂದು ನೋಡಿ.