ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಆರೋಗ್ಯ ಕಾಪಾಡಿಕೊಳ್ಳಲು 5 ಹೆಜ್ಜೆಗಳನ್ನು ಅನುಸರಿಸಿರಿ

ಆರೋಗ್ಯ ಕಾಪಾಡಿಕೊಳ್ಳಲು ಐದು ಹೆಜ್ಜೆಗಳು

ಆರೋಗ್ಯ ಕಾಪಾಡಿಕೊಳ್ಳಲು ಐದು ಹೆಜ್ಜೆಗಳು

ಯಾರಿಗೆ ತಾನೇ ಕಾಯಿಲೆ ಬೀಳಲು ಇಷ್ಟ ಹೇಳಿ? ‘ಕಾಯಿಲೆ’ ಎಂಬ ಪದ ಕೇಳಿದ ತಕ್ಷಣ ಕಷ್ಟದ ಪರಿಸ್ಥಿತಿ ಮತ್ತು ವಿಪರೀತ ಖರ್ಚು ಮನಸ್ಸಿಗೆ ಬರಬಹುದು. ಕಾಯಿಲೆ ಬಂದಾಗ ಶಾಲೆಗೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ, ಹಣ ಸಂಪಾದಿಸಲು ಆಗುವುದಿಲ್ಲ, ಮನೆ ಜವಾಬ್ದಾರಿ ನೋಡಿಕೊಳ್ಳಲೂ ಆಗುವುದಿಲ್ಲ. ಜೊತೆಗೆ ಕಾಯಿಲೆ ಬಿದ್ದವರನ್ನು ನೋಡಿಕೊಳ್ಳಲು ಯಾರಾದರೂ ಬೇಕಾಗಬಹುದು. ಚಿಕಿತ್ಸೆಗೆ, ಔಷಧಿಗಳಿಗೆ ಹಣ ಸುರಿಯಬೇಕು. ಒಟ್ಟಾರೆ ಕಾಯಿಲೆ ಅನ್ನುವುದು ನಮ್ಮ ಶತ್ರು.

ಕಾಯಿಲೆ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ ಆ ಕಾಯಿಲೆ ಬರದಂತೆ ಮೊದಲೇ ಜಾಗ್ರತೆ ವಹಿಸುವುದು ಒಳ್ಳೆಯದು ಅಂತ ಎಲ್ಲರೂ ಹೇಳುತ್ತಾರೆ. ನಾವು ಏನು ಮಾಡಿದರೂ ಕೆಲವು ಕಾಯಿಲೆಗಳನ್ನು ತಡೆಯಲು ಆಗುವುದಿಲ್ಲ. ಆದರೆ ನಾವು ಮೊದಲೇ ಜಾಗ್ರತೆ ವಹಿಸಿ ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳುವುದಾದರೆ ಅನೇಕ ಕಾಯಿಲೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಅಂತಹ ಐದು ಹೆಜ್ಜೆಗಳನ್ನು ಈಗ ಪರಿಗಣಿಸೋಣ.

1 ಶುದ್ಧತೆ ಕಾಪಾಡಿಕೊಳ್ಳಿ

“ನಮಗೆ ಕಾಯಿಲೆ ಬರಬಾರದು ಅಂದರೆ ಮತ್ತು ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಾರದು ಅಂದರೆ ನಾವೆಲ್ಲರೂ ನಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು” ಎಂದು ಅಮೆರಿಕದ ಪ್ರಸಿದ್ಧ ಆರೋಗ್ಯ ಸಂಸ್ಥೆ ಹೇಳುತ್ತದೆ. ಸಾಮಾನ್ಯವಾಗಿ ನಮ್ಮ ಕೈಗಳಲ್ಲಿ ರೋಗಾಣುಗಳಿರುತ್ತವೆ. ಇವು ಕಣ್ಣಿಗೆ ಕಾಣಿಸುವುದಿಲ್ಲ. ಆದ್ದರಿಂದ, ಕೈ ತೊಳೆಯದೆ ಮೂಗು ಅಥವಾ ಕಣ್ಣುಗಳನ್ನು ಮುಟ್ಟುವುದಾದರೆ ಸುಲಭವಾಗಿ ಶೀತ, ನೆಗಡಿ, ಜ್ವರ ಬರುತ್ತದೆ. ಈ ಅಪಾಯದಿಂದ ದೂರವಿರಬೇಕಾದರೆ ನಾವು ಆಗಿಂದಾಗ್ಗೆ ನಮ್ಮ ಕೈ ತೊಳೆದುಕೊಳ್ಳುತ್ತಾ ಇರಬೇಕು. ಈ ರೀತಿ ಶುದ್ಧತೆ ಕಾಪಾಡಿಕೊಳ್ಳುವುದರಿಂದ ನ್ಯುಮೋನಿಯ ಮತ್ತು ಭೇದಿಯಂತಹ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದು. ಈ ಕಾಯಿಲೆಗಳಿಂದಾಗಿ ಪ್ರತಿ ವರ್ಷ 5 ವರ್ಷದೊಳಗಿನ ಸುಮಾರು 20 ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಕೈ ತೊಳೆಯುವುದು ಚಿಕ್ಕ ವಿಷಯ ಅಂತ ನಮಗನಿಸಬಹುದು, ಆದರೆ ಅದನ್ನು ಪಾಲಿಸಿದರೆ ಎಬೋಲದಂತಹ ಪ್ರಾಣಾಪಾಯ ತರುವಂಥ ರೋಗಗಳನ್ನೂ ಹರಡದಂತೆ ತಡೆಯಬಹುದು.

ನಾವು ಈ ಕೆಳಗಿನ ಸಂದರ್ಭಗಳಲ್ಲಂತೂ ಕೈಗಳನ್ನು ತೊಳೆಯಲೇಬೇಕು:

 • ಶೌಚಾಲಯಕ್ಕೆ ಹೋಗಿ ಬಂದ ನಂತರ

 • ಮಗುವಿನ ಡೈಪರ್‌ ಬದಲಾಯಿಸಿದ ನಂತರ ಮತ್ತು ಶೌಚಾಲಯಕ್ಕೆ ಹೋಗಲು ಮಗುವಿಗೆ ಸಹಾಯಮಾಡಿದ ನಂತರ

 • ಗಾಯಕ್ಕೆ ಔಷಧಿ ಹಚ್ಚುವ ಮುಂಚೆ ಮತ್ತು ನಂತರ

 • ಕಾಯಿಲೆ ಬಿದ್ದವರನ್ನು ಭೇಟಿಯಾಗುವ ಮುಂಚೆ ಮತ್ತು ನಂತರ

 • ಆಹಾರವನ್ನು ತಯಾರಿಸುವ, ಬಡಿಸುವ ಮತ್ತು ತಿನ್ನುವ ಮುಂಚೆ

 • ಕೆಮ್ಮಿದ, ಸೀನಿದ ಮತ್ತು ಮೂಗನ್ನು ಒರೆಸಿಕೊಂಡ ನಂತರ

 • ಪ್ರಾಣಿಯನ್ನು ಅಥವಾ ಪ್ರಾಣಿಯ ತ್ಯಾಜ್ಯವನ್ನು ಮುಟ್ಟಿದ ನಂತರ

 • ಕಸ ಎಸೆದ ನಂತರ

ಕೈ ತೊಳೆಯುವುದನ್ನು ಎಂದೂ ಹಗುರವಾಗಿ ಪರಿಗಣಿಸಬಾರದು. ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವ ಎಷ್ಟೋ ಜನ ತಮ್ಮ ಕೈ ತೊಳೆದುಕೊಳ್ಳುವುದೇ ಇಲ್ಲ ಅಥವಾ ಸರಿಯಾಗಿ ತೊಳೆದುಕೊಳ್ಳುವುದಿಲ್ಲ ಎಂದು ಅಧ್ಯಯನಗಳು ತೋರಿಸಿವೆ. ಹಾಗಾದರೆ ನಮ್ಮ ಕೈಯನ್ನು ಹೇಗೆ ತೊಳೆಯಬೇಕು?

 • ಶುದ್ಧ ನೀರಿನಲ್ಲಿ ಕೈಯನ್ನು ಒದ್ದೆ ಮಾಡಿಕೊಂಡು ಸೋಪು ಹಚ್ಚಿರಿ.

 • ನೊರೆ ಬರುವವರೆಗೆ ಕೈಯನ್ನು ಚೆನ್ನಾಗಿ ಉಜ್ಜಿರಿ. ಉಗುರುಗಳನ್ನು, ಹೆಬ್ಬೆರಳುಗಳನ್ನು, ಕೈ ಹಿಂಭಾಗವನ್ನು ಮತ್ತು ಬೆರಳುಗಳ ಮಧ್ಯ ಭಾಗವನ್ನೂ ಶುಚಿ ಮಾಡಿಕೊಳ್ಳಿ.

 • ಕನಿಷ್ಠ ಪಕ್ಷ 20 ಸೆಕೆಂಡುಗಳವರೆಗೆ ನಿಮ್ಮ ಕೈಗಳನ್ನು ಉಜ್ಜುತ್ತಾ ಇರಿ.

 • ನಂತರ ಶುದ್ಧವಾದ ನೀರಿನಲ್ಲಿ ಚೆನ್ನಾಗಿ ಕೈ ತೊಳೆದುಕೊಳ್ಳಿ.

 • ಕೈಯನ್ನು ಶುದ್ಧವಾದ ಬಟ್ಟೆಯಿಂದ ಅಥವಾ ಟಿಶ್ಯೂ ಪೇಪರ್‌ನಿಂದ ಒರೆಸಿಕೊಳ್ಳಿ.

ಈ ಮೇಲಿನ ಹೆಜ್ಜೆಗಳು ಸರಳವಾದರೂ ಅವುಗಳನ್ನು ಪಾಲಿಸುವುದಾದರೆ ಕಾಯಿಲೆಗಳಿಂದ ದೂರವಿದ್ದು ನಮ್ಮ ಪ್ರಾಣವನ್ನು ಕಾಪಾಡಿಕೊಳ್ಳುತ್ತೇವೆ.

2 ಶುದ್ಧ ನೀರನ್ನು ಬಳಸಿ

ಎಷ್ಟೋ ದೇಶಗಳಲ್ಲಿ ಇವತ್ತಿಗೂ ಶುದ್ಧ ನೀರಿಗೆ ಪ್ರತಿನಿತ್ಯ ಪರದಾಡುವ ಪರಿಸ್ಥಿತಿಯಿದೆ. ಹಾಗಂತ ಇನ್ನುಳಿದ ದೇಶಗಳಲ್ಲಿ ಶುದ್ಧ ನೀರಿದೆ ಅಂತೇನಿಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಪ್ರವಾಹ, ಬಿರುಗಾಳಿ ಸಂಭವಿಸಿದರೆ, ನೀರಿನ ಕೊಳವೆಗಳು ಒಡೆದು ಹೋದರೆ ಶುದ್ಧ ನೀರು ಕಲುಷಿತವಾಗುವ ಸಾಧ್ಯತೆಗಳಿವೆ. ನೀರನ್ನು ಶುದ್ಧ ಮೂಲದಿಂದ ಪಡೆಯದಿದ್ದರೆ ಅಥವಾ ನೀರನ್ನು ಸರಿಯಾಗಿ ಸಂಗ್ರಹಿಸಿ ಇಡದಿದ್ದರೆ ಕೀಟಾಣುಗಳು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಕಾಲರ, ಭೇದಿ, ಟೈಫಾಯಿಡ್, ಹೆಪಟೈಟಿಸ್‌ ಮತ್ತು ಇತರ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಪ್ರತಿ ವರ್ಷ ಸುಮಾರು 170 ಕೋಟಿ ಜನ ಭೇದಿಯಿಂದ ನರಳುತ್ತಿದ್ದಾರೆ, ಈ ಕಾಯಿಲೆಗೆ ಮುಖ್ಯ ಕಾರಣ ಅಶುದ್ಧ ನೀರಿನ ಉಪಯೋಗ.

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ

ನೊಣ ಅಥವಾ ಇತರ ಕ್ರಿಮಿಕೀಟಗಳ ಮೂಲಕ ಕಾಲರಾ ಇರುವ ಜನರ ಮಲದಲ್ಲಿರುವ ರೋಗಾಣುಗಳು ಆಹಾರ, ನೀರನ್ನು ಸೇರುತ್ತವೆ. ಇಂತಹ ಆಹಾರ, ನೀರನ್ನು ಸೇವಿಸಿದರೆ ಕಾಲರಾ ಬರುತ್ತದೆ. ಹಾಗಾದರೆ, ಕಲುಷಿತ ನೀರಿನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಯಾವ ಹೆಜ್ಜೆ ತೆಗೆದುಕೊಳ್ಳಬಲ್ಲಿರಿ?

 • ನೀವು ಉಪಯೋಗಿಸುವ ನೀರು ಸುರಕ್ಷಿತ ಮೂಲದಿಂದ ಬರುತ್ತಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಕೇವಲ ಕುಡಿಯುವ ನೀರು ಮಾತ್ರವಲ್ಲ ಅಡುಗೆ ಮಾಡಲು, ಹಲ್ಲು ಉಜ್ಜಲು, ತರಕಾರಿ ಮತ್ತು ಪಾತ್ರೆ ತೊಳೆಯಲು ಉಪಯೋಗಿಸುವ ನೀರು ಶುದ್ಧವಾಗಿದೆಯಾ ಎಂದೂ ನೋಡಬೇಕು. ಸರ್ಕಾರ ಒದಗಿಸುವ ಶುದ್ಧೀಕರಿಸಿದ ನೀರನ್ನು ಅಥವಾ ಶುದ್ಧತೆಗೆ ಹೆಸರುವಾಸಿಯಾದ ಕಂಪೆನಿಯ ಬಾಟಲಿ ನೀರನ್ನು ಉಪಯೋಗಿಸಿದರೆ ಒಳ್ಳೆಯದು.

 • ಕೊಳವೆಯ ನೀರು ಶುದ್ಧವಾಗಿಲ್ಲ ಎಂದು ನಿಮಗೆ ಅನಿಸಿದರೆ, ಆ ನೀರನ್ನು ಉಪಯೋಗಿಸುವ ಮುಂಚೆ ಚೆನ್ನಾಗಿ ಕುದಿಸಿ ಅಥವಾ ನೀರನ್ನು ರಾಸಾಯನಿಕದಿಂದ ಶುದ್ಧೀಕರಿಸಿ.

 • ಕ್ಲೋರಿನ್‌ ಅಥವಾ ನೀರನ್ನು ಶುದ್ಧೀಕರಿಸುವ ಇತರ ಕೆಮಿಕಲ್‌ಗಳನ್ನು ಉಪಯೋಗಿಸುವಾಗ ಅದರ ತಯಾರಕರ ನಿರ್ದೇಶನವನ್ನು ತಪ್ಪದೇ ಪಾಲಿಸಿ.

 • ಸಾಧ್ಯವಾದರೆ ಉತ್ತಮ ಗುಣಮಟ್ಟದ ವಾಟರ್‌ ಫಿಲ್ಟರ್‌ಗಳನ್ನು ಬಳಸಿ.

 • ಶುದ್ಧ ನೀರು ಕಲುಷಿತವಾಗದಂತೆ ಅದನ್ನು ಯಾವಾಗಲೂ ಸ್ವಚ್ಛವಾದ ಪಾತ್ರೆಯಲ್ಲಿ ಮುಚ್ಚಿಡಿ.

 • ನೀರನ್ನು ತೆಗೆದುಕೊಳ್ಳಲು ಉಪಯೋಗಿಸುವ ಎಲ್ಲ ಪಾತ್ರೆಗಳೂ ಶುದ್ಧವಾಗಿರುವಂತೆ ನೋಡಿಕೊಳ್ಳಿ.

 • ನೀರಿನ ಪಾತ್ರೆಯನ್ನು ಮುಟ್ಟುವ ಮುಂಚೆ ಕೈಗಳನ್ನು ತೊಳೆದುಕೊಳ್ಳಿ ಮತ್ತು ಕುಡಿಯುವ ನೀರಿನಲ್ಲಿ ನಿಮ್ಮ ಬೆರಳುಗಳನ್ನು ಅದ್ದಬೇಡಿ.

3 ಪೌಷ್ಟಿಕ ಆಹಾರ ಸೇವಿಸಿ

ಒಳ್ಳೆಯ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ಸೇವಿಸಬೇಕು. ಎಲ್ಲ ರೀತಿಯ ಆಹಾರವನ್ನು ಸೇವಿಸಿ, ಹಣ್ಣು ತರಕಾರಿಗಳನ್ನೂ ತಿನ್ನಿ. ಆದರೆ ನೀವು ತಿನ್ನುವ ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಅಂಶ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ನೀವು ಸೇವಿಸುವ ಆಹಾರ ಮಿತವಾಗಿರಲಿ. ಅಕ್ಕಿ, ಬೇಳೆಯಂತಹ ದವಸಧಾನ್ಯಗಳನ್ನು ಖರೀದಿಸುವಾಗ ಅವು ಪಾಲಿಷ್‌ ಮಾಡಿರದ ಪದಾರ್ಥಗಳಾ ಎಂದು ತಿಳಿದುಕೊಳ್ಳಿ. ಇಂತಹ ಪಾಲಿಷ್‌ ಮಾಡಿರದ ಆಹಾರ ಪದಾರ್ಥಗಳಲ್ಲಿ ನಾರಿನ ಅಂಶ, ಪೋಷಕಾಂಶಗಳು ಹೆಚ್ಚಾಗಿರುತ್ತವೆ. ಮೊಟ್ಟೆ, ಮಾಂಸ ಮತ್ತು ಮೀನಿನಲ್ಲಿ ಪ್ರೋಟೀನ್‌ ಅಂಶ ಹೆಚ್ಚಿರುತ್ತದೆ. ಆದರೆ ಕೊಬ್ಬು ಕಡಿಮೆಯಿರುವ ಮಾಂಸವನ್ನೇ ತಿನ್ನಿ, ಅದನ್ನೂ ಹೆಚ್ಚು ತಿನ್ನಬೇಡಿ. ವಾರಕ್ಕೆ ಎರಡು-ಮೂರು ಸಾರಿ ಮೀನು ತಿಂದರೆ ಒಳ್ಳೆಯದು. ಕೆಲವು ದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲೂ ಹೆಚ್ಚು ಪ್ರೋಟೀನ್‌ಗಳು ಇರುತ್ತವೆ.

ಸಕ್ಕರೆ ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗುವ ಅಪಾಯವಿದೆ. ಈ ಅಪಾಯವನ್ನು ತಪ್ಪಿಸಲು ಸಿಹಿ ಪಾನೀಯಗಳ ಬದಲು ಹೆಚ್ಚು ನೀರು ಕುಡಿಯುವುದು ಉತ್ತಮ. ಸಿಹಿ ತಿಂಡಿ ತಿನಿಸುಗಳನ್ನು ತಿನ್ನುವುದಕ್ಕಿಂತ ಹಣ್ಣುಗಳನ್ನು ತಿನ್ನಿ. ಬೆಣ್ಣೆ, ಮಾಂಸ, ಕೇಕ್‌ ಮತ್ತು ಬಿಸ್ಕತ್ತುಗಳಲ್ಲಿ ಹೆಚ್ಚು ಕೊಬ್ಬಿರುತ್ತದೆ. ಆದ್ದರಿಂದ ಇಂತಹ ಪದಾರ್ಥಗಳನ್ನು ಕಡಿಮೆ ತಿನ್ನಿ. ಅಡುಗೆಯಲ್ಲಿ ಡಾಲ್ಡಾ, ತುಪ್ಪ ಮುಂತಾದ ಘನರೂಪದ ಕೊಬ್ಬನ್ನು ಉಪಯೋಗಿಸುವ ಬದಲು ಕೊಬ್ಬಿನಾಂಶ ಕಡಿಮೆಯಿರುವ ಎಣ್ಣೆಯನ್ನೇ ಉಪಯೋಗಿಸಿ.

ಉಪ್ಪಿನಾಂಶ ಹೆಚ್ಚಿರುವ ಆಹಾರವನ್ನು ಉಪಯೋಗಿಸಿದರೆ ರಕ್ತದೊತ್ತಡ ಏರುಪೇರಾಗುವ ಅಪಾಯವಿದೆ. ನಿಮಗೆ ಈ ತೊಂದರೆ ಇದ್ದರೆ ಸೋಡಿಯಂ ಅಂಶ ಕಡಿಮೆ ಇರುವ ಉಪ್ಪನ್ನು ಬಳಸಿ. ಉಪ್ಪಿನಲ್ಲಿ ಸೋಡಿಯಂ ಅಂಶ ಎಷ್ಟಿದೆ ಎಂದು ಉಪ್ಪಿನ ಪ್ಯಾಕೆಟ್‌ ಮೇಲೆ ಬರೆದಿರುತ್ತದೆ.

ನೀವು ಏನು ತಿನ್ನುತ್ತೀರ ಅನ್ನುವುದು ಎಷ್ಟು ಮುಖ್ಯನೋ ಎಷ್ಟು ತಿನ್ನುತ್ತೀರ ಅನ್ನುವುದೂ ಅಷ್ಟೇ ಮುಖ್ಯ. ಆದ್ದರಿಂದ, ಹೊಟ್ಟೆ ತುಂಬಿದ ಮೇಲೆಯೂ ಆಹಾರ ಚೆನ್ನಾಗಿದೆ ಅಂತ ತಿನ್ನುತ್ತಲೇ ಇರಬೇಡಿ.

ನಾವು ಸೇವಿಸುವ ಆಹಾರ ಕೆಲವೊಮ್ಮೆ ವಿಷವಾಗಿ ಮಾರ್ಪಡುವುದರಿಂದ ಆರೋಗ್ಯಕ್ಕೆ ಹಾನಿಕರವಾಗುತ್ತದೆ. ಆಹಾರವನ್ನು ಸರಿಯಾಗಿ ತಯಾರಿಸದೆ ಅಥವಾ ಅದನ್ನು ಶುದ್ಧವಾಗಿ ಶೇಖರಿಸದೆ ಹೋದರೆ ಅದು ವಿಷವಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಜನರು ಅಸ್ವಸ್ಥರಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. ಹೆಚ್ಚಿನವರು ಈ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈ ಅಪಾಯದಿಂದ ನೀವು ದೂರವಿರಲು ಏನು ಮಾಡಬಹುದು?

 • ತರಕಾರಿಗಳನ್ನು ಔಷಧಿ, ಗೊಬ್ಬರ ಉಪಯೋಗಿಸಿ ಬೆಳೆಸುತ್ತಾರೆ. ಆದ್ದರಿಂದ ನೀವು ತರಕಾರಿಗಳನ್ನು ಉಪಯೋಗಿಸುವಾಗ ಅವುಗಳನ್ನು ಚೆನ್ನಾಗಿ ತೊಳೆಯಿರಿ.

 • ಆಹಾರ ತಯಾರಿಸುವ ಮುಂಚೆ ತರಕಾರಿ ಹೆಚ್ಚುವ ಮಣೆ, ಪಾತ್ರೆ, ತಟ್ಟೆ ಮತ್ತು ನಿಮ್ಮ ಕೈಗಳಿಗೆ ಸೋಪು ಹಚ್ಚಿ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಿರಿ.

 • ಮೊಟ್ಟೆ, ಮಾಂಸ, ಮೀನನ್ನು ಇಟ್ಟ ಪಾತ್ರೆ ಅಥವಾ ಸ್ಥಳವನ್ನು ತೊಳೆದು ಶುದ್ಧ ಮಾಡಿದ ನಂತರವೇ ಆಹಾರ ಪದಾರ್ಥಗಳನ್ನು ಇಡಿ.

 • ಆಹಾರವನ್ನು ಚೆನ್ನಾಗಿ ಬೇಯಿಸಿ, ಬೇಗನೇ ಕೆಡುವಂಥ ಆಹಾರವನ್ನು ತಕ್ಷಣ ಬಳಸದೇ ಇದ್ದಲ್ಲಿ ಅದನ್ನು ಫ್ರಿಜ್ನಲ್ಲಿ ಇಡಿ.

 • ಬೇಗ ಕೆಡುವಂಥ ಆಹಾರ ಪದಾರ್ಥಗಳನ್ನು ಸಾಮಾನ್ಯ ಉಷ್ಣತೆಯಲ್ಲಿ ಎರಡಕ್ಕಿಂತ ಹೆಚ್ಚು ಗಂಟೆ ಇಟ್ಟರೆ ಅಥವಾ 32° ಸೆಲ್ಸಿಯಸ್‌ಕ್ಕಿಂತ ಹೆಚ್ಚು ಉಷ್ಣತೆಯಲ್ಲಿ ಒಂದು ಗಂಟೆ ಇಟ್ಟರೆ ಆ ಪದಾರ್ಥಗಳನ್ನು ಉಪಯೋಗಿಸಬೇಡಿ.

4 ವ್ಯಾಯಾಮ ಮಾಡಿ

ಎಲ್ಲಾ ವಯಸ್ಸಿನವರಿಗೂ ವ್ಯಾಯಾಮ ಅತ್ಯಗತ್ಯ. ಆದರೆ ಇಂದು ಎಷ್ಟೋ ಜನ ವ್ಯಾಯಾಮ ಮಾಡುವುದೇ ಇಲ್ಲ. ಇಷ್ಟಕ್ಕೂ ವ್ಯಾಯಾಮ ಮಾಡುವುದರಿಂದ ಏನು ಪ್ರಯೋಜನ?

 • ಚೆನ್ನಾಗಿ ನಿದ್ದೆ ಬರುತ್ತದೆ.

 • ಹೆಚ್ಚು ಚುರುಕಾಗಿರಬಹುದು.

 • ಮೂಳೆ ಮತ್ತು ಮಾಂಸ ಖಂಡಗಳು ಗಟ್ಟಿಮುಟ್ಟಾಗುತ್ತವೆ.

 • ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದು.

 • ಮಾನಸಿಕವಾಗಿ ಕುಗ್ಗಿಹೋಗುವ ಸಾಧ್ಯತೆ ಕಡಿಮೆಯಿರುತ್ತದೆ.

 • ಆಯಸ್ಸು ಹೆಚ್ಚುತ್ತದೆ.

ವ್ಯಾಯಾಮ ಮಾಡದೆ ಇದ್ದರೆ ಯಾವ ಸಮಸ್ಯೆಗಳು ಎದುರಾಗಬಹುದು?

 • ಹೃದಯದ ಸಮಸ್ಯೆ.

 • ಸಕ್ಕರೆ ಕಾಯಿಲೆ.

 • ಅಧಿಕ ರಕ್ತದೊತ್ತಡ.

 • ಕೊಬ್ಬಿನಾಂಶ (ಕೊಲೆಸ್ಟರಾಲ್‌) ಹೆಚ್ಚಾಗುತ್ತದೆ.

 • ಲಕ್ವ.

ನೀವು ಯಾವ ರೀತಿಯ ವ್ಯಾಯಾಮ ಮಾಡಬೇಕು ಅನ್ನುವುದು ನಿಮ್ಮ ಆರೋಗ್ಯ ಮತ್ತು ವಯಸ್ಸಿನ ಮೇಲೆ ಹೊಂದಿಕೊಂಡಿದೆ. ಆದ್ದರಿಂದ ಯಾವುದೇ ರೀತಿಯ ವ್ಯಾಯಾಮ ಮಾಡುವ ಮುಂಚೆ ನಿಮ್ಮ ವೈದ್ಯರ ಸಲಹೆ ಕೇಳಿ. ಮಕ್ಕಳು ಮತ್ತು ಯುವಜನರು ಪ್ರತಿದಿನ 60 ನಿಮಿಷ ಸರಳ ಮತ್ತು ಕಠಿಣ ವ್ಯಾಯಾಮ ಮಾಡಬೇಕು. ವಯಸ್ಕರು ಒಂದು ವಾರಕ್ಕೆ 150 ನಿಮಿಷಗಳ ಸರಳ ವ್ಯಾಯಾಮ ಅಥವಾ 75 ನಿಮಿಷಗಳ ಕಠಿಣ ವ್ಯಾಯಾಮ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

ನಿಮಗೆ ಖುಷಿ ತರುವಂತಹ ವ್ಯಾಯಾಮವನ್ನೇ ಆರಿಸಿಕೊಳ್ಳಿರಿ. ಬಾಸ್ಕೆಟ್‌ ಬಾಲ್‌, ಟೆನ್ನಿಸ್‌, ಫುಟ್‌ ಬಾಲ್‌, ವೇಗದ ನಡಿಗೆ, ಸೈಕಲ್‌ ತುಳಿಯುವುದು, ತೋಟಗಾರಿಕೆ, ಕಟ್ಟಿಗೆ ಒಡೆಯುವುದು, ಈಜುವುದು, ದೋಣಿ ನಡೆಸುವುದು, ಜಾಗಿಂಗ್‌ ಅಥವಾ ಇನ್ನಿತರ ಚಟುವಟಿಕೆಗಳನ್ನು ಆರಿಸಿಕೊಳ್ಳಬಹುದು. ಯಾವುದು ಸರಳ ವ್ಯಾಯಾಮ, ಯಾವುದು ಕಠಿಣ ವ್ಯಾಯಾಮ ಅಂತ ಹೇಗೆ ತಿಳಿದುಕೊಳ್ಳುವುದು? ಸಾಮಾನ್ಯವಾಗಿ ಯಾವುದೇ ಚಟುವಟಿಕೆ ನಿಮಗೆ ಬೆವರು ತಂದರೆ ಅದನ್ನು ಸರಳ ವ್ಯಾಯಾಮ ಎನ್ನಬಹುದು. ಆದರೆ ಕಠಿಣ ವ್ಯಾಯಾಮ ಮಾಡುವಾಗ ಏದುಸಿರು ಬಂದು ಇನ್ನೊಬ್ಬರ ಜೊತೆ ಮಾತಾಡಲಿಕ್ಕೂ ನಿಮಗೆ ಆಗುವುದಿಲ್ಲ.

5 ಸಾಕಷ್ಟು ನಿದ್ದೆ ಮಾಡಿ

ಎಷ್ಟು ಹೊತ್ತು ನಿದ್ದೆ ಮಾಡಬೇಕು ಅನ್ನುವುದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಎಳೇ ಮಗು ದಿನಕ್ಕೆ 16ರಿಂದ 18 ಗಂಟೆ ನಿದ್ದೆ ಮಾಡಿದರೆ, 1ರಿಂದ 3 ವರ್ಷದ ಮಗು 14 ಗಂಟೆ ನಿದ್ದೆ ಮಾಡುತ್ತದೆ. 3ರಿಂದ 5 ವರ್ಷದ ಮಗು 11 ಅಥವಾ 12 ಗಂಟೆ ನಿದ್ದೆ ಮಾಡಬೇಕು. 6ರಿಂದ 12 ವರ್ಷದ ಮಕ್ಕಳು 10 ಗಂಟೆ, ಹದಿವಯಸ್ಕರು 9 ರಿಂದ 10 ಗಂಟೆ ಹಾಗೂ ವಯಸ್ಕರು 7 ರಿಂದ 8 ಗಂಟೆ ನಿದ್ದೆ ಮಾಡಬೇಕು.

ನಿದ್ದೆಯನ್ನು ಕಡೆಗಣಿಸಬಾರದು. ಎಲ್ಲರೂ ಸಾಕಷ್ಟು ನಿದ್ದೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ನಿದ್ದೆಯಿಂದ ಏನು ಪ್ರಯೋಜನ?

 • ಮಕ್ಕಳಲ್ಲಿ ಮತ್ತು ಹದಿಪ್ರಾಯದವರಲ್ಲಿ ಬೆಳವಣಿಗೆಯಾಗುತ್ತದೆ.

 • ಹೊಸ ವಿಷಯಗಳನ್ನು ಕಲಿಯಲು ಮತ್ತು ಅವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.

 • ದೇಹದ ಬೆಳವಣಿಗೆ ಮತ್ತು ತೂಕವನ್ನು ಸಮತೋಲನದಲ್ಲಿಡುವ ಹಾರ್ಮೋನುಗಳ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

 • ಹೃದಯ ಮತ್ತು ರಕ್ತ ನಾಳಗಳು ಸರಿಯಾಗಿ ಕೆಲಸ ಮಾಡುತ್ತವೆ.

 • ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಸಾಕಷ್ಟು ನಿದ್ದೆ ಮಾಡದಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ, ಖಿನ್ನತೆ, ಹೃದ್ರೋಗ, ಸಕ್ಕರೆ ಕಾಯಿಲೆ, ಮತ್ತು ಭೀಕರ ಅಪಘಾತ ನಡೆಯುವ ಸಾಧ್ಯತೆಯಿದೆ. ಈ ಎಲ್ಲ ಅಪಾಯಗಳಿಂದ ದೂರವಿರಲು ಸಾಕಷ್ಟು ನಿದ್ದೆ ಮಾಡಲೇಬೇಕು.

ಆದರೆ ನಿಮಗೆ ನಿದ್ದೆ ಮಾಡಲಿಕ್ಕೇ ಆಗದಿದ್ದರೆ ಏನು ಮಾಡಬೇಕು, ಏನು ಮಾಡಬಾರದು?

 • ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದು, ಏಳುವುದು ಮಾಡಬಾರದು.

 • ನಿಮ್ಮ ಮಲಗುವ ಕೋಣೆಯಲ್ಲಿ ಕತ್ತಲಿರುವಂತೆ, ಶಬ್ದವಿಲ್ಲದೆ ಶಾಂತಿಯಿರುವಂತೆ ಮತ್ತು ತೀರಾ ಸೆಕೆಯೂ ತೀರಾ ಚಳಿಯೂ ಇಲ್ಲದಂತೆ ನೋಡಿಕೊಳ್ಳಿ.

 • ಮಲಗಿರುವಾಗ ಮೊಬೈಲ್‌ ಉಪಯೋಗಿಸಬೇಡಿ ಅಥವಾ ಟಿ.ವಿ. ನೋಡಬೇಡಿ.

 • ನಿಮ್ಮ ಹಾಸಿಗೆಯನ್ನು ನಿಮಗೆ ಹೇಗೆ ಬೇಕೋ ಹಾಗೆ ಸಿದ್ಧಪಡಿಸಿಕೊಳ್ಳಿ.

 • ಮಲಗುವ ಸಮಯದಲ್ಲಿ ಕಾಫಿ, ಟೀ, ಮದ್ಯ ಸೇವನೆ ಅಥವಾ ಅತಿಯಾದ ಆಹಾರ ಸೇವನೆ ಬೇಡ.

 • ಈ ಸಲಹೆಗಳನ್ನು ಅನ್ವಯಿಸಿದ ಮೇಲೂ ನಿಮಗೆ ಇನ್ನೂ ನಿದ್ದೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. (g15-E 06)