ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನ ದೃಷ್ಟಿಕೋನ

ಕಷ್ಟ ಸಂಕಟ

ಕಷ್ಟ ಸಂಕಟ

‘ದೇವರೇ ಕಷ್ಟ ಕೊಡೋದು’ ಅಥವಾ ‘ದೇವರು ನಮ್ಮ ಕಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಅಂತ ಕೆಲವರು ಹೇಳುತ್ತಾರೆ. ಆದರೆ ನಿಜ ಏನಂತ ಬೈಬಲ್‌ ಹೇಳುತ್ತದೆ. ಅದನ್ನು ತಿಳಿದರೆ ನಿಮಗೆ ಆಶ್ಚರ್ಯ ಆಗಬಹುದು.

ದೇವರು ನಮಗೆ ಕಷ್ಟ ಕೊಡುತ್ತಾನಾ?

“ಹೌದು, ದೇವರು ಕೆಟ್ಟದ್ದನ್ನು ನಡಿಸುವದೇ ಇಲ್ಲ.”ಯೋಬ 34:12.

ಜನರು ಏನು ಹೇಳುತ್ತಾರೆ?

ಎಲ್ಲವೂ ದೇವರ ಇಚ್ಛೆಯಂತೆ ನಡೆಯುತ್ತಿರುವುದು ಅಂತ ಕೆಲವರು ಹೇಳುತ್ತಾರೆ. ಅಂದರೆ ಕೆಟ್ಟದ್ದಕ್ಕೂ ದೇವರೇ ಕಾರಣ ಅಂತ ಅವರು ನಂಬುತ್ತಾರೆ. ನೈಸರ್ಗಿಕ ವಿಪತ್ತು ಸಂಭವಿಸಿದಾಗ, ಕೆಟ್ಟವರಿಗೆ ಶಿಕ್ಷೆ ಕೊಡಲಿಕ್ಕೆ ದೇವರೇ ಇದನ್ನು ಮಾಡಿದ್ದು ಎಂದು ಅವರು ಭಾವಿಸುತ್ತಾರೆ.

ಬೈಬಲ್‌ ಏನು ಹೇಳುತ್ತದೆ?

ದೇವರು ನಮಗೆ ಕಷ್ಟ ಕೊಡುವುದಿಲ್ಲ ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. ಉದಾಹರಣೆಗೆ, ನಮಗೆ ಕಷ್ಟ ಬಂದಾಗ “ನಾನು ದೇವರಿಂದ ಪರೀಕ್ಷಿಸಲ್ಪಡುತ್ತಿದ್ದೇನೆ” ಅಂತ ಹೇಳುವುದು ತಪ್ಪು ಎಂದು ಬೈಬಲ್‌ ಹೇಳುತ್ತದೆ. ಯಾಕೆಂದರೆ, “ಕೆಟ್ಟ ಸಂಗತಿಗಳಿಂದ ದೇವರನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ, ಆತನು ತಾನೇ ಯಾರನ್ನೂ ಪರೀಕ್ಷಿಸುವುದೂ ಇಲ್ಲ.” (ಯಾಕೋಬ 1:13) ಇದರರ್ಥ, ಯಾವತ್ತೂ ದೇವರು ನಮಗೆ ಕಷ್ಟ ಕೊಡುವುದಿಲ್ಲ. ಆದ್ದರಿಂದಲೇ ಬೈಬಲ್‌, “ದೇವರು ಕೆಟ್ಟದ್ದನ್ನು ನಡಿಸುವುದೇ ಇಲ್ಲ” ಅಂತ ಹೇಳುತ್ತದೆ.—ಯೋಬ 34:12.

ಹಾಗಾದರೆ ನಮಗೆ ಯಾರು ಕಷ್ಟ ಕೊಡುತ್ತಿದ್ದಾರೆ? ಇದಕ್ಕೆಲ್ಲಾ ಏನು ಕಾರಣ ಇರಬಹುದು? ನಿಜ ಹೇಳಬೇಕೆಂದರೆ, ಎಷ್ಟೋ ಸಾರಿ ಮನುಷ್ಯರ ಕಷ್ಟಗಳಿಗೆ ಮನುಷ್ಯನೇ ಕಾರಣ ಆಗಿರುತ್ತಾನೆ. (ಪ್ರಸಂಗಿ 8:9) ಕೆಲವೊಮ್ಮೆ, ನೆನಸದ ಘಟನೆಗಳು ಎದುರಾಗಬಹುದು. ಅಂದರೆ ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿರುವುದರಿಂದ ಕಷ್ಟ ಬರಬಹುದು. (ಪ್ರಸಂಗಿ 9:11) ಆದರೆ ನಮಗೆ ಬರುತ್ತಿರುವ ಕಷ್ಟಗಳಿಗೆಲ್ಲಾ ಮುಖ್ಯ ಕಾರಣ ‘ಈ ಲೋಕದ ಅಧಿಪತಿಯಾದ’ ಸೈತಾನ. ಯಾಕೆಂದರೆ “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಅಂತ ಬೈಬಲ್‌ ಕಲಿಸುತ್ತದೆ. (ಯೋಹಾನ 12:31; 1 ಯೋಹಾನ 5:19) ಒಂದೇ ಮಾತಲ್ಲಿ ಹೇಳಬೇಕೆಂದರೆ ನಮಗೆ ಕಷ್ಟ ಕೊಡುವುದು ದೇವರಲ್ಲ, ಬದಲಿಗೆ ಆತನ ಶತ್ರುವಾದ ಸೈತಾನನೇ.

 ದೇವರು ಕಲ್ಲೆದೆಯವನಾ?

“ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು.”ಯೆಶಾಯ 63:9.

ಜನರು ಏನು ಹೇಳುತ್ತಾರೆ?

ನಾವು ಎಷ್ಟೇ ಕಷ್ಟ ಅನುಭವಿಸುತ್ತಿದ್ದರೂ ದೇವರಿಗೆ ಅದರ ಬಗ್ಗೆ ಒಂಚೂರೂ ಚಿಂತೆ ಇಲ್ಲ ಅಂತ ಕೆಲವರು ಹೇಳುತ್ತಾರೆ. ಉದಾಹರಣೆಗೆ, ‘ದೇವರು ಅಂತ ಒಬ್ಬ ನಿಜವಾಗಲೂ ಇದ್ದರೂ ಅವನಿಗೆ ಮನುಷ್ಯರ ಬಗ್ಗೆಯಾಗಲಿ, ಅವರ ಕಷ್ಟಗಳ ಬಗ್ಗೆಯಾಗಲಿ ಚಿಂತೆನೇ ಇಲ್ಲ. ಅವನು ಕಲ್ಲೆದೆಯವನು, ಕರುಣೆ ಇಲ್ಲದವನು’ ಎಂದು ಒಬ್ಬ ಬರಹಗಾರನು ಬರೆದಿದ್ದಾನೆ.

ಬೈಬಲ್‌ ಏನು ಹೇಳುತ್ತದೆ?

ದೇವರು ಕಲ್ಲೆದೆಯವನು, ಕರುಣೆ ಇಲ್ಲದವನು ಅಂತ ಬೈಬಲ್‌ ಹೇಳುವುದಿಲ್ಲ. ಬದಲಿಗೆ ನಾವು ಕಷ್ಟ ಪಡುವುದನ್ನು ನೋಡಿ ಅವನು ಸಂಕಟಪಡುತ್ತಾನೆ ಮಾತ್ರವಲ್ಲ ಬೇಗನೆ ಈ ಎಲ್ಲಾ ಕಷ್ಟಗಳನ್ನು ತೆಗೆದು ಹಾಕುತ್ತಾನೆ ಅಂತ ಹೇಳುತ್ತದೆ. ನೆಮ್ಮದಿ ಕೊಡುವಂಥ ಮೂರು ವಿಷಯಗಳನ್ನು ನೋಡೋಣ.

ನಮ್ಮ ಎಲ್ಲ ಕಷ್ಟ ದೇವರಿಗೆ ಗೊತ್ತಿದೆ. ಮಾನವರಿಗೆ ಕಷ್ಟ ಆರಂಭವಾದಾಗಿನಿಂದ ಅವರಿಟ್ಟ ಒಂದೊಂದು ಹನಿ ಕಣ್ಣೀರೂ ಯೆಹೋವನ * ಕಣ್ಣಿಗೆ ಮರೆಯಾಗಿಲ್ಲ. ಏಕೆಂದರೆ “ಆತನ ಕಣ್ಣುಗಳು” ಎಲ್ಲವನ್ನೂ ನೋಡುತ್ತವೆ. (ಕೀರ್ತನೆ 11:4; 56:8) ಹಿಂದಿನ ಕಾಲದಲ್ಲಿ, ತನ್ನ ಜನರು ಕಷ್ಟಪಡುತ್ತಿದ್ದಾಗ, “ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ” ಎಂದು ದೇವರು ಹೇಳಿದನು. ದೇವರು ಅದನ್ನು ನೋಡಿದ್ದು ಮಾತ್ರನಾ? ಇಲ್ಲ, ಅವರ ಕಷ್ಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದನು. ಆದ್ದರಿಂದಲೇ ಆತನು “ಅವರ ದುಃಖವನ್ನೆಲ್ಲಾ ನಾನು ಬಲ್ಲೆನು” ಎಂದು ಹೇಳಿದನು. (ವಿಮೋಚನಕಾಂಡ 3:7) ದೇವರಿಗೆ ನಮ್ಮೆಲ್ಲಾ ಕಷ್ಟಗಳು ಗೊತ್ತಿದೆ. ನಮ್ಮ ಸಮಸ್ಯೆಯನ್ನು ಇತರರು ಅರ್ಥ ಮಾಡಿಕೊಳ್ಳಲು ಆಗದೇ ಇದ್ದರೂ ಅಥವಾ ಇತರರಿಗೆ ಅದರ ಬಗ್ಗೆ ಗೊತ್ತಿಲ್ಲದೇ ಇದ್ದರೂ ದೇವರಿಗೆ ಅದರ ಬಗ್ಗೆ ಚೆನ್ನಾಗಿ ಗೊತ್ತಿದೆ. ಈ ನಿಜಾಂಶವನ್ನು ತಿಳಿದುಕೊಂಡಾಗ ಅನೇಕರು ಸಾಂತ್ವನ ಪಡೆದಿದ್ದಾರೆ.—ಕೀರ್ತನೆ 31:7; ಜ್ಞಾನೋಕ್ತಿ 14:10.

ನಮ್ಮ ಕಷ್ಟಗಳನ್ನು ನೋಡುವಾಗ ದೇವರಿಗೆ ನೋವಾಗುತ್ತದೆ. ಯೆಹೋವ ದೇವರಿಗೆ ನಮ್ಮ ಕಷ್ಟಗಳ ಬಗ್ಗೆ ಗೊತ್ತಿದೆ ಮಾತ್ರವಲ್ಲ ನಮ್ಮ ಕಷ್ಟವನ್ನು ನೋಡುವಾಗ ಆತನಿಗೆ ನೋವಾಗುತ್ತದೆ. ಉದಾಹರಣೆಗೆ, ಹಿಂದಿನ ಕಾಲದಲ್ಲಿ ತನ್ನ ಜನರು ಕಷ್ಟ ಪಡುವುದನ್ನು ನೋಡಿದಾಗ ದೇವರಿಗೆ ನೋವಾಯಿತು. ಆದ್ದರಿಂದ “ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು” ಎಂದು ಬೈಬಲ್‌ ಹೇಳುತ್ತದೆ. (ಯೆಶಾಯ 63:9) ದೇವರು ನಮಗಿಂತ ಉನ್ನತನಾಗಿದ್ದರೂ ನಾವು ಕಷ್ಟ ಪಡುವುದನ್ನು ನೋಡಿ ಕರುಣೆ ತೋರಿಸುತ್ತಾನೆ. ಯಾಕೆಂದರೆ “ಯೆಹೋವನು ಕೋಮಲವಾದ ಮಮತೆಯುಳ್ಳವನೂ ಕರುಣಾಳುವೂ ಆಗಿದ್ದಾನೆ.” (ಯಾಕೋಬ 5:11) ನಾವೆಷ್ಟು ನೋವು ಅನುಭವಿಸುತ್ತೇವೋ ಅಷ್ಟೇ ನೋವು ದೇವರಿಗೂ ಆಗುತ್ತದೆ. ಜೊತೆಗೆ ಆತನು ಕಷ್ಟಗಳನ್ನು ಸಹಿಸಿಕೊಳ್ಳಲು ನಮಗೆ ಸಹಾಯವನ್ನೂ ಮಾಡುತ್ತಾನೆ. —ಫಿಲಿಪ್ಪಿ 4:12, 13.

ದೇವರು ನಮ್ಮೆಲ್ಲಾ ಕಷ್ಟಗಳನ್ನು ತೆಗೆದು ಹಾಕುತ್ತಾನೆ. ಭೂಮಿಯಲ್ಲಿರುವ ಪ್ರತಿಯೊಬ್ಬನ ಕಷ್ಟಗಳನ್ನೂ ದೇವರು ತೆಗೆದು ಹಾಕುತ್ತಾನೆ ಎಂದು ಬೈಬಲ್‌ ಹೇಳುತ್ತದೆ. ತನ್ನ ರಾಜ್ಯ ಅಥವಾ ಸರಕಾರದ ಮೂಲಕ ಮಾನವರ ಎಲ್ಲಾ ಕಷ್ಟಗಳನ್ನು ತೆಗೆದು ಹಾಕಿ ಅತ್ಯುತ್ತಮ ಜೀವನ ಕೊಡುತ್ತಾನೆ. ಆಗ ದೇವರು ‘ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಮರಣವಿರುವುದಿಲ್ಲ; ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಈಗಿನ ಸಂಗತಿಗಳು ಇಲ್ಲದೆ ಹೋಗುತ್ತವೆ’ ಎಂದು ಬೈಬಲ್‌ ತಿಳಿಸುತ್ತದೆ. (ಪ್ರಕಟನೆ 21:4) ಆದರೆ ಈಗಾಗಲೇ ಸತ್ತವರಿಗೆ ಏನಾಗುತ್ತದೆ? ದೇವರು ಅವರಿಗೆ ಪುನಃ ಜೀವ ಕೊಡುತ್ತಾನೆ. ಅವರಿಗೂ ಯಾವುದೇ ಕಷ್ಟಗಳಿರುವುದಿಲ್ಲ. (ಯೋಹಾನ 5:28, 29) ಆಗ ಯಾರಾದರೂ ಹಿಂದೆ ತಾವು ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡು ದುಃಖ ಪಡುತ್ತಾರಾ? ಇಲ್ಲ. ಯಾಕೆಂದರೆ ಸ್ವತಃ ಯೆಹೋವ ದೇವರೇ, “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು” ಎಂದು ಹೇಳಿದ್ದಾನೆ.—ಯೆಶಾಯ 65:17. *▪ (g15-E 01)

^ ಪ್ಯಾರ. 13 ಬೈಬಲಿನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.