ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖ

ಮಾನಸಿಕ ತೊಂದರೆಗಳ ಬಗ್ಗೆ ಒಂದಿಷ್ಟು ಮಾಹಿತಿ

ಮಾನಸಿಕ ತೊಂದರೆಗಳ ಬಗ್ಗೆ ಒಂದಿಷ್ಟು ಮಾಹಿತಿ

ಕ್ಲಾಡಿಯಾ ಎಂಬಾಕೆಗೆ ಬೈಪೊಲಾರ್‌ ಮನೋರೋಗ ಮತ್ತು ಅಪಘಾತ-ನಂತರದ ಒತ್ತಡ ರೋಗ (ಪೋಸ್ಟ್‌ ಟ್ರಾಮಾಟಿಕ್‌ ಡಿಸಾರ್ಡರ್‌) ಇದೆಯೆಂದು ಹೇಳಲಾಯಿತು. ಆಗ ಆಕೆಗೆ ಹೇಗನಿಸಿತು? “ನನಗೆ ದಿಕ್ಕೇ ತೋಚದಂತಾಯಿತು. . . . ಮಾನಸಿಕ ಕಾಯಿಲೆ ಎಂದಾಕ್ಷಣ ಎದುರಿಸಬೇಕಾದ ನಾಚಿಕೆ ಅವಮಾನದ ಬಗ್ಗೆ ಯೋಚಿಸಿ ಕಂಗಾಲಾದೆ.”

ಕ್ಲಾಡಿಯಾಳ ಗಂಡ ಮಾರ್ಕ್‌ ಹೇಳುವುದು: “ಈ ವಿಷಯ ಅರಗಿಸಿಕೊಳ್ಳಲು ನನಗೆ ತುಂಬ ಸಮಯ ಹಿಡಿಯಿತು. ಆದರೆ ಇನ್ನು ಮುಂದೆ ನನ್ನೆಲ್ಲ ಗಮನವನ್ನು ಹೆಂಡತಿಗೆ ಕೊಟ್ಟು ಆಕೆಗೆ ಬೆಂಬಲ ಆಸರೆಯಾಗಿ ನಿಲ್ಲಬೇಕೆಂದು ನಾನು ಅರ್ಥಮಾಡಿಕೊಂಡೆ.”

ನಿಮಗೆ ಅಥವಾ ನೀವು ತುಂಬ ಪ್ರೀತಿಸುವ ಒಬ್ಬರಿಗೆ ಮಾನಸಿಕ ತೊಂದರೆ ಇದೆಯೆಂದು ತಿಳಿದುಬಂದಾಗ ನಿಮಗೆ ಹೇಗೆ ಅನಿಸಬಹುದು? ಮಾನಸಿಕ ಕಾಯಿಲೆಗೆ ಚಿಕಿತ್ಸೆ ಇದೆ ಎನ್ನುವುದು ಸಂತೋಷದ ಸಂಗತಿ. ಮಾನಸಿಕ ತೊಂದರೆಗಳನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ನೆರವಾಗುವ ಕೆಲವೊಂದು ವಿಷಯಗಳನ್ನು ನೋಡೋಣ. *

ಮಾನಸಿಕ ರೋಗದ ಕೆಲವು ನಿಜಾಂಶಗಳು

“ಲೋಕದ ಎಲ್ಲಾ ಕಡೆಗಳಲ್ಲೂ ಕೋಟಿಗಟ್ಟಲೆ ಜನರಿಗೆ ಮಾನಸಿಕ ತೊಂದರೆಗಳಿವೆ. ಇದು ಅವರ ಬಂಧುಮಿತ್ರರ ಬದುಕನ್ನೂ ಬಾಧಿಸುತ್ತದೆ. ಜೀವನದ ಒಂದಲ್ಲ ಒಂದು ಹಂತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬನು ಮಾನಸಿಕ ತೊಂದರೆಗೆ ಒಳಗಾಗುತ್ತಾನೆ. ಲೋಕದಲ್ಲಿ ಹೆಚ್ಚಿನವರನ್ನು ಬಾಧಿಸುವಂಥ ಕಾಯಿಲೆ ಖಿನ್ನತೆ. ಆದರೆ ಸ್ಕಿಜೋಫ್ರೇನಿಯಾ (ಇಚ್ಛಿತ್ತ ವಿಕಲತೆ) ಮತ್ತು ಬೈಪೊಲಾರ್‌ ಡಿಸಾರ್ಡರ್‌ ತುಂಬ ಗಂಭೀರವಾದ ಮಾನಸಿಕ ತೊಂದರೆಗಳು. ಅವು ಒಬ್ಬ ವ್ಯಕ್ತಿಯನ್ನು ಎಷ್ಟು ಬಾಧಿಸುತ್ತವೆಂದರೆ ಅವನಿಂದ ಸಾಮಾನ್ಯ ಕೆಲಸಗಳನ್ನು ಮಾಡಲಿಕ್ಕೂ ಕಷ್ಟವಾಗುತ್ತದೆ. . . . ಈ ತೊಂದರೆ ತುಂಬ ಜನರಿಗಿದ್ದರೂ ಅದನ್ನು ಹೆಚ್ಚಾಗಿ ಮುಚ್ಚಿಡಲಾಗುತ್ತದೆ ಅಥವಾ ಅಲಕ್ಷಿಸಲಾಗುತ್ತದೆ. ಅಂಥವರನ್ನು ಜನ ಕೀಳಾಗಿಯೂ ನೋಡುತ್ತಾರೆ.”—ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಏಚ್‌.ಓ).

ತಮಗೆ ಮಾನಸಿಕ ಕಾಯಿಲೆ ಇದೆಯೆಂದು ಹೆಚ್ಚಿನ ಜನ ಹೇಳಲು ಇಷ್ಟಪಡುವುದಿಲ್ಲ, ಬೇರೆಯವರಿಗೆ ಗೊತ್ತಾದರೆ ಅವಮಾನವಾಗುತ್ತದೆ ಎಂದು ನೆನಸುತ್ತಾರೆ. ಇದರಿಂದಾಗಿ ಅವರು ಚಿಕಿತ್ಸೆ ಪಡೆಯಲು ಮುಂದೆ ಬರುವುದಿಲ್ಲ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ಹೆಚ್ಚಿನ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಇದೆಯಾದರೂ ಅಮೆರಿಕದಲ್ಲಿ ಅಂಥ ಕಾಯಿಲೆ ಇರುವವರಲ್ಲಿ ಸುಮಾರು 60% ವಯಸ್ಕರಿಗೆ ಮತ್ತು 8-15 ವಯಸ್ಸಿನ ಹತ್ತಿರತ್ತಿರ 50% ಮಕ್ಕಳಿಗೆ ಕಳೆದ ವರ್ಷ ಚಿಕಿತ್ಸೆ ಸಿಗಲಿಲ್ಲ.—ಮಾನಸಿಕ ಕಾಯಿಲೆಗೆ ಸಂಬಂಧಪಟ್ಟ ಸಂಘದ (NAMI) ವರದಿ.

ಮಾನಸಿಕ ತೊಂದರೆಗಳ ಬಗ್ಗೆ ತಿಳಿಯಿರಿ

ಮಾನಸಿಕ ಕಾಯಿಲೆ ಅಂದರೇನು? ಒಬ್ಬನು ಯೋಚಿಸುವ ರೀತಿ, ಭಾವನೆಗಳ ಮೇಲಿನ ನಿಯಂತ್ರಣ ಮತ್ತು ವರ್ತನೆಯಲ್ಲಾಗುವ ಅಸಾಮಾನ್ಯ ಬದಲಾವಣೆಯೇ ಮಾನಸಿಕ ತೊಂದರೆ ಎಂದು ಪರಿಣತರು ವಿವರಿಸುತ್ತಾರೆ. ಒಬ್ಬನಿಗೆ ಈ ತೊಂದರೆ ಇದ್ದರೆ ಅವನಿಗೆ ಬೇರೆಯವರ ಜೊತೆ ಸರಿಯಾಗಿ ನಡಕೊಳ್ಳಲು ಮತ್ತು ಬದುಕಿನ ಸಮಸ್ಯೆಗಳನ್ನು ನಿಭಾಯಿಸಲು ಕಷ್ಟವಾಗುತ್ತದೆ.

ಒಬ್ಬರ ವ್ಯಕ್ತಿತ್ವ ಇಲ್ಲವೇ ಗುಣಗಳಲ್ಲಿರುವ ಯಾವುದೊ ಲೋಪ ಮಾನಸಿಕ ತೊಂದರೆಗಳಿಗೆ ಕಾರಣ ಆಗಿರುವುದಿಲ್ಲ

ಮಾನಸಿಕ ತೊಂದರೆಯ ಲಕ್ಷಣಗಳು ಎಷ್ಟು ಸಮಯ ಇರುತ್ತವೆ, ಎಷ್ಟು ತೀವ್ರ ಆಗಿರುತ್ತವೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿ ಮೇಲೆ, ಅವನಿಗಿರುವ ನಿರ್ದಿಷ್ಟ ಕಾಯಿಲೆ ಮೇಲೆ ಮತ್ತು ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿರುತ್ತವೆ. ಗಂಡು, ಹೆಣ್ಣು, ವಯಸ್ಸು, ಸಂಸ್ಕೃತಿ, ಜಾತಿ, ಧರ್ಮ ಎನ್ನದೆ ಅದು ಯಾರನ್ನೂ ಬಾಧಿಸಬಲ್ಲದು. ಶಿಕ್ಷಣ, ಸಂಪಾದನೆ ಲೆಕ್ಕಕ್ಕೆ ಬರುವುದಿಲ್ಲ. ವ್ಯಕ್ತಿತ್ವ ಇಲ್ಲವೇ ಗುಣಗಳಲ್ಲಿ ಯಾವುದೊ ಲೋಪ ಇದ್ದರೆ ಅದು ಮಾನಸಿಕ ತೊಂದರೆಗಳಿಗೆ ಕಾರಣವಾಗುವುದಿಲ್ಲ. ಮಾನಸಿಕ ತೊಂದರೆ ಇರುವವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಟ್ಟು ಆರೈಕೆ ಮಾಡಬಹುದು. ಹೀಗೆ ಅವರು ಸಾರ್ಥಕ, ತೃಪ್ತಿಕರ ಬದುಕನ್ನು ನಡೆಸಬಲ್ಲರು.

ಮಾನಸಿಕ ತೊಂದರೆಗಳಿಗೆ ಚಿಕಿತ್ಸೆ

ಮಾನಸಿಕ ಆರೋಗ್ಯ ತಜ್ಞರು ಅನೇಕ ಮಾನಸಿಕ ತೊಂದರೆಗಳಿಗೆ ಸರಿಯಾದ ಚಿಕಿತ್ಸೆ ಕೊಡಬಲ್ಲರು. ಹಾಗಾಗಿ ಅನುಭವೀ ತಜ್ಞರೊಬ್ಬರ ಅಭಿಪ್ರಾಯ ಪಡೆಯುವುದೇ ಮುಖ್ಯವಾದ ಮೊದಲ ಹೆಜ್ಜೆ.

ಆದರೆ ಅಂಥ ತಜ್ಞರ ಅನುಭವದಿಂದ ಪ್ರಯೋಜನವಾಗಬೇಕಾದರೆ ಮಾನಸಿಕ ತೊಂದರೆಯುಳ್ಳವರು ಸರಿಯಾದ ಚಿಕಿತ್ಸೆ ಸ್ವೀಕರಿಸಬೇಕು. ಚಿಕಿತ್ಸೆ ಪಡೆಯಬೇಕಾದರೆ ಮೊದಲಾಗಿ ಮಾನಸಿಕ ಕಾಯಿಲೆ ಬಗ್ಗೆ ಮಾತಾಡಲು ನಿಮಗಿರುವ ಹಿಂಜರಿಕೆಯನ್ನು ಮೆಟ್ಟಿನಿಲ್ಲಬೇಕು. ಈ ಚಿಕಿತ್ಸೆಯಲ್ಲಿ, ತರಬೇತಿಪಡೆದಿರುವ ಮಾನಸಿಕ ಆರೋಗ್ಯ ತಜ್ಞರೊಟ್ಟಿಗೆ ಮಾತಾಡುವುದೂ ಸೇರಿದೆ. ಕಾಯಿಲೆ ಏನೆಂದು ಅರ್ಥಮಾಡಿಕೊಳ್ಳಲು, ಕಾಯಿಲೆಯಿಂದಾಗಿ ದಿನಾಲೂ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು, ಚಿಕಿತ್ಸೆಯನ್ನು ಮಧ್ಯದಲ್ಲೇ ನಿಲ್ಲಿಸದಿರಲು ಈ ತಜ್ಞರು ಸಹಾಯಮಾಡಬಲ್ಲರು. ಈ ತೊಂದರೆ ಇರುವವರು ತಜ್ಞರನ್ನು ಭೇಟಿಯಾದಾಗ ಕುಟುಂಬ ಸದಸ್ಯರೊಬ್ಬರು ಇಲ್ಲವೆ ಮಿತ್ರರೊಬ್ಬರು ಧೈರ್ಯತುಂಬುವುದು, ಬೆಂಬಲ ಕೊಡುವುದು ಮುಖ್ಯ.

ಮಾನಸಿಕ ತೊಂದರೆಯಿರುವ ಅನೇಕರು ತಮ್ಮ ಸಮಸ್ಯೆಯನ್ನು ಚೆನ್ನಾಗಿ ನಿಭಾಯಿಸಲು ಕಲಿತಿದ್ದಾರೆ. ಯಾಕೆಂದರೆ ಅವರು ತಮ್ಮ ಸಮಸ್ಯೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ ಮತ್ತು ಮಾನಸಿಕ ಆರೋಗ್ಯ ತಜ್ಞರು ನೀಡಿರುವ ಚಿಕಿತ್ಸೆಯನ್ನು ತಪ್ಪದೇ ತಕ್ಕೊಂಡಿದ್ದಾರೆ. ಈ ಮುಂಚೆ ತಿಳಿಸಲಾದ ಮಾರ್ಕ್‌ ಹೇಳುವುದು: “ನನ್ನ ಹೆಂಡತಿಗೆ ಈ ಸಮಸ್ಯೆ ಇದೆಯೆಂದು ಗೊತ್ತಾಗುವ ಮುಂಚೆ ಮಾನಸಿಕ ಕಾಯಿಲೆಗಳ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿರಲಿಲ್ಲ. ಆದರೆ ಈಗ ಸನ್ನಿವೇಶವನ್ನು ನಿಭಾಯಿಸಲು, ಅದಕ್ಕೆ ಹೊಂದಿಕೊಳ್ಳಲು ಕಲಿತಿದ್ದೇವೆ. ಸಮಯ ಕಳೆದಂತೆ ನಮಗೆ ವಿಶ್ವಾಸಾರ್ಹ ತಜ್ಞರು ಹಾಗೂ ಬಂಧುಮಿತ್ರರು ಕೊಟ್ಟ ಬೆಂಬಲ ತುಂಬ ಸಹಾಯಮಾಡಿದೆ.”

ಅನುಭವೀ ಆರೋಗ್ಯ ತಜ್ಞರೊಬ್ಬರ ಅಭಿಪ್ರಾಯ ಪಡೆಯುವುದೇ ಮುಖ್ಯವಾದ ಮೊದಲ ಹೆಜ್ಜೆ

ಅವರ ಮಾತನ್ನು ಒಪ್ಪಿಕೊಳ್ಳುತ್ತಾ ಕ್ಲಾಡಿಯಾ ಹೇಳುವುದು: “ನನ್ನ ಕಾಯಿಲೆ ಬಗ್ಗೆ ತಜ್ಞರು ಹೇಳಿದಾಗ ನನ್ನೆಲ್ಲ ಸ್ವಾತಂತ್ರ್ಯ ಕಳೆದುಕೊಂಡುಬಿಟ್ಟೆ ಎಂದನಿಸಿತು. . . . ಈ ಕಾಯಿಲೆಯಿಂದಾಗಿ ನಮಗಿಬ್ಬರಿಗೆ ಏನು ಬೇಕೊ ಅದೆಲ್ಲ ಮಾಡಲಿಕ್ಕೆ ಆಗುವುದಿಲ್ಲ ನಿಜ. ಆದರೆ ಮಾಡಲು ಸಾಧ್ಯವೇ ಇಲ್ಲ ಎಂದನಿಸುವ ವಿಷಯಗಳನ್ನು ಮಾಡಲು ಕಲಿತಿದ್ದೇನೆ. ಡಾಕ್ಟರರು, ತಜ್ಞರು ಹೇಳಿದ ಹಾಗೆ ಮಾಡುವುದರಿಂದ, ಇತರರೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದರಿಂದ, ಏನೇ ಬಂದರೂ ಒಂದೊಂದಾಗಿ ಎದುರಿಸುವುದರಿಂದ ನನ್ನ ಕಾಯಿಲೆಯನ್ನು ನಿಭಾಯಿಸುತ್ತಿದ್ದೇನೆ.”

ಆಧ್ಯಾತ್ಮಿಕ ಆರೋಗ್ಯ ಮುಖ್ಯ

ನಮ್ಮ ಆರೋಗ್ಯ ಸಮಸ್ಯೆಗಳನ್ನು ಆಧ್ಯಾತ್ಮಿಕತೆ ಗುಣಪಡಿಸುತ್ತದೆಂದು ಬೈಬಲ್‌ ಎಲ್ಲೂ ಹೇಳುವುದಿಲ್ಲ. ಹಾಗಿದ್ದರೂ ಬೈಬಲ್‌ ಏನು ಕಲಿಸುತ್ತದೊ ಅದರಿಂದ ಲೋಕದಲ್ಲೆಲ್ಲ ಇರುವ ಅನೇಕ ಕುಟುಂಬಗಳಿಗೆ ಸಾಂತ್ವನ, ಮನೋಬಲ ಸಿಕ್ಕಿದೆ. ಉದಾಹರಣೆಗೆ ಬೈಬಲ್‍ನಲ್ಲಿ ಈ ಆಶ್ವಾಸನೆ ಇದೆ: ನಮ್ಮನ್ನು ಪ್ರೀತಿಸುವ ಸೃಷ್ಟಿಕರ್ತನು “ಮುರಿದ ಮನಸ್ಸುಳ್ಳವರಿಗೆ” ಮತ್ತು “ಕುಗ್ಗಿಹೋದವ”ರಿಗೆ ಸಾಂತ್ವನ ಕೊಡಲು ತುಂಬ ಇಷ್ಟಪಡುತ್ತಾನೆ.—ಕೀರ್ತನೆ 34:18.

ಬೈಬಲ್‌ ಆರೋಗ್ಯ ಆರೈಕೆಯ ಪುಸ್ತಕವಂತೂ ಅಲ್ಲ. ಹಾಗಿದ್ದರೂ ಅದು ಕೊಡುವ ಪ್ರಾಯೋಗಿಕ ಮಾರ್ಗದರ್ಶನ ನಮ್ಮ ನೋವಿನ ಭಾವನೆಗಳನ್ನು, ಕಷ್ಟದ ಪರಿಸ್ಥಿತಿಗಳನ್ನು ನಿಭಾಯಿಸಲು ನೆರವು ನೀಡುತ್ತದೆ. ನೋವು ಕಾಯಿಲೆಗಳು ಇಲ್ಲದ ದಿನಗಳು ಬರಲಿವೆ ಎಂದು ಅದು ಹೇಳುತ್ತದೆ. ಬೈಬಲ್‌ ಹೀಗೆ ಮಾತುಕೊಡುತ್ತದೆ: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.”—ಯೆಶಾಯ 35:5, 6. (g14-E 12)

^ ಪ್ಯಾರ. 5 ಈ ಲೇಖನದಲ್ಲಿ ಎಲ್ಲ ಕಡೆ ಒಂದೇ ರೀತಿಯ ಪದಗಳಿರಬೇಕೆಂಬ ಕಾರಣಕ್ಕೆ, “ಮಾನಸಿಕ ತೊಂದರೆ” ಎಂಬ ಪದಗಳನ್ನು ಬಳಸಲಾಗಿದೆ. ಇದರಲ್ಲಿ ಮಾನಸಿಕ ಕಾಯಿಲೆಗಳು ಮತ್ತು ವರ್ತನೆಗೆ ಸಂಬಂಧಿತ ತೊಂದರೆಗಳೂ ಸೇರಿವೆ.

^ ಪ್ಯಾರ. 32 ಎಚ್ಚರ! ಪತ್ರಿಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಶಿಫಾರಸು ಮಾಡುವುದಿಲ್ಲ. ಕ್ರೈಸ್ತರು ಯಾವುದೇ ಚಿಕಿತ್ಸೆ ಪಡೆಯಲಿ ಅದು ಬೈಬಲಿನ ತತ್ವಗಳಿಗೆ ವಿರುದ್ಧವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.

^ ಪ್ಯಾರ. 40 ಅಕ್ಟೋಬರ್‌-ಡಿಸೆಂಬರ್‌ 2010 ಎಚ್ಚರ! ಪತ್ರಿಕೆಯಲ್ಲಿ, “ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?” ಎಂಬ ಲೇಖನವನ್ನೂ ನೋಡಿ.