ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಧುಮೇಹ ತಡೆಯಲು ಸಾಧ್ಯನಾ?

ಮಧುಮೇಹ ತಡೆಯಲು ಸಾಧ್ಯನಾ?

ಸಕ್ಕರೆ ಕಾಯಿಲೆ ಎಂದು ಕರೆಯಲಾಗುವ ಈ ಕಾಯಿಲೆ ಇಂದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಈ ಕಾಯಿಲೆಯಲ್ಲಿ ಎರಡು ವಿಧಗಳಿವೆ. ಮೊದಲನೆ ವಿಧದ ಸಕ್ಕರೆ ಕಾಯಿಲೆ ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ ಇದು ಬರದಂತೆ ತಡೆಯುವುದು ಹೇಗೆಂದು ವೈದ್ಯರಿಗೂ ಗೊತ್ತಿಲ್ಲ. ಸಕ್ಕರೆ ರೋಗಿಗಳಲ್ಲಿ ಸುಮಾರು 90% ಜನರಿಗೆ ಎರಡನೇ ವಿಧದ ಕಾಯಿಲೆ ಇದೆ. ಇದರ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಹಿಂದೆ ಈ ಎರಡನೇ ವಿಧದ ಸಕ್ಕರೆ ಕಾಯಿಲೆ ಕೇವಲ ದೊಡ್ಡವರಲ್ಲಿ ಮಾತ್ರ ಕಾಣಿಸುತ್ತಿತ್ತು. ಆದರೆ ಇತ್ತೀಚಿಗೆ ಚಿಕ್ಕ ಮಕ್ಕಳಲ್ಲೂ ಕಾಣಿಸುತ್ತಿದೆ. ಇದನ್ನು ಬರದಿರುವ ಹಾಗೆ ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ವಿಷಯ ಏನೇ ಇರಲಿ, ಈ ಅಪಾಯಕಾರಿ ರೋಗದ ಬಗ್ಗೆ ತಿಳಿದುಕೊಂಡರೆ ಎಚ್ಚರವಹಿಸಲು ಸಹಾಯವಾಗುತ್ತದೆ. *

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅಂದರೇನು?

ಮನುಷ್ಯನ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವುದನ್ನು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎಂದು ಕರೆಯುತ್ತಾರೆ. ರಕ್ತದಲ್ಲಿರುವ ಸಕ್ಕರೆ ಅಂಶ ಜೀವಕೋಶಗಳಿಗೆ ಶಕ್ತಿ ಕೊಡುತ್ತದೆ. ಆದರೆ ಈ ಕಾಯಿಲೆ ಜೀವಕೋಶಗಳಿಗೆ ಸಕ್ಕರೆ ಅಂಶ ಸೇರದಂತೆ ಮಾಡುತ್ತದೆ. ಇದರಿಂದಾಗಿ ರಕ್ತ ಸರಾಗವಾಗಿ ಹರಿಯದೆ ಹೋಗಬಹುದು, ಕಣ್ಣು ಕುರುಡಾಗಬಹುದು, ಪಾದ ಅಥವಾ ಅದರ ಬೆರಳುಗಳನ್ನು ಕತ್ತರಿಸಬೇಕಾಗಬಹುದು ಮತ್ತು ಕಿಡ್ನಿಯಂತಹ ಕೆಲವು ಅಂಗಗಳು ಕೆಲಸಮಾಡದಿರಬಹುದು. ಸಕ್ಕರೆ ರೋಗಿಗಳಲ್ಲಿ ಹೆಚ್ಚಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ.

ದೇಹದಲ್ಲಿ ಅತಿರೇಕದ ಕೊಬ್ಬು ಕೂಡ ಈ ವಿಧದ ಸಕ್ಕರೆ ರೋಗಕ್ಕೆ ಕಾರಣವಾಗುತ್ತದೆ. ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾದರೆ ಈ ಕಾಯಿಲೆಯ ಸಂಭವ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ. ಲಿವರ್‌ (ಪಿತ್ತಜನಕಾಂಗ) ಮತ್ತು ಪ್ಯಾನ್‌ಕ್ರಿಯಾಸ್‍ನಲ್ಲಿರುವ (ಮೇದೋಜೀರಕಾಂಗ) ಕೊಬ್ಬು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರುಪೇರು ಮಾಡುತ್ತದೆ. ಅಪಾಯವನ್ನು ಕಡಿಮೆಮಾಡಲು ನಾವು ಹೇಗೆ ಎಚ್ಚರವಹಿಸಬಹುದು?

ತಡೆಯಲು ಮೂರು ಹೆಜ್ಜೆಗಳು

1. ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಆರಂಭಿಕ ಹಂತದ ಮಧುಮೇಹವನ್ನು ಪ್ರೀಡಯಾಬಿಟಿಸ್‌ ಎನ್ನುತ್ತಾರೆ. ಆ ಹಂತದಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶವು ಸಕ್ಕರೆ ಕಾಯಿಲೆಯಲ್ಲಿರುವುದಕ್ಕಿಂತ ಕಡಿಮೆಯಿದ್ದು ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಇದು ಎರಡನೇ ವಿಧದ ಸಕ್ಕರೆ ಕಾಯಿಲೆಯ ಮುನ್ಸೂಚನೆಯಾಗಿದೆ. ಎರಡನೇ ವಿಧದ ಸಕ್ಕರೆ ಕಾಯಿಲೆ ಮತ್ತು ಪ್ರೀಡಯಾಬಿಟಿಸ್‌ ಇವೆರಡೂ ಅಪಾಯಕಾರಿ. ಒಬ್ಬ ವ್ಯಕ್ತಿ ಪ್ರೀಡಯಾಬಿಟಿಸ್‌ ಹಂತದಲ್ಲಿರುವುದಾದರೆ ಅವನ ರಕ್ತದಲ್ಲಿನ ಸಕ್ಕರೆ ಅಂಶದ ಪ್ರಮಾಣವನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಿದೆ. ಆದರೆ ಎರಡನೇ ವಿಧದ ಸಕ್ಕರೆ ಕಾಯಿಲೆಯನ್ನು ಪೂರ್ತಿ ಗುಣಪಡಿಸಲು ಸಾಧ್ಯವಿಲ್ಲ, ಅದನ್ನು ಸ್ಪಲ್ಪ ಮಟ್ಟಿಗೆ ನಿಯಂತ್ರಿಸಲು ಮಾತ್ರ ಸಾಧ್ಯ. ಆದ್ದರಿಂದ ಆಗಾಗ ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಯಾಕೆಂದರೆ ಪ್ರೀಡಯಾಬಿಟಿಸ್‌ ಹಂತದಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಇದು ಜನರಲ್ಲಿ ಇದ್ದರೂ ಅವರಿಗೆ ತಿಳಿಯದೆ ಹೋಗಬಹುದು. ವರದಿಗಳಿಗನುಸಾರ ಭೂಮ್ಯಾದ್ಯಂತ ಸುಮಾರು 31,60,00,000 ಜನರಿಗೆ ಪ್ರೀಡಯಾಬಿಟಿಸ್‌ ಇದ್ದು, ಅವರಲ್ಲಿ ಹೆಚ್ಚಿನವರಿಗೆ ಅದರ ಅರಿವೇ ಇಲ್ಲ. ಕೇವಲ ಅಮೆರಿಕ ದೇಶದಲ್ಲೇ ಪ್ರೀಡಯಾಬಿಟಿಸ್‌ಗೆ ತುತ್ತಾದವರಲ್ಲಿ ಸುಮಾರು 90% ಜನರು ಅದರ ಅರಿವಿಲ್ಲದೆ ಜೀವಿಸುತ್ತಿದ್ದಾರೆ.

ಪ್ರೀಡಯಾಬಿಟಿಸ್‌ ಮೆದುಳಿನ ರೋಗಕ್ಕೂ ಎಡೆಮಾಡಿಕೊಡುತ್ತದೆ. ನೀವೀಗಾಗಲೇ ಹೆಚ್ಚು ತೂಕವಿದ್ದು, ದೈಹಿಕವಾಗಿ ಚುರುಕಾಗಿಲ್ಲದೇ ಇರುವುದಾದರೆ ಅಥವಾ ನಿಮ್ಮ ಕುಟುಂಬದವರಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದರೆ ಅದು ನಿಮಗೂ ಬರುವ ಸಾಧ್ಯತೆಯಿದೆ. ಹಾಗಾಗಿ, ನೀವು ಆಗಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.

2. ಆರೋಗ್ಯದಾಯಕ ಆಹಾರ ಸೇವಿಸಿ. ಸಾಧ್ಯವಿರುವುದಾದರೆ ಈ ಆಹಾರ ಪಥ್ಯವನ್ನು ಅನುಸರಿಸಿ, ಇದರಿಂದ ನಿಮಗೆ ಪ್ರಯೋಜನವಾಗಬಹುದು: ಸಾಮಾನ್ಯವಾಗಿ ತಿನ್ನುವುದಕ್ಕಿಂತ ಕಡಿಮೆ ತಿನ್ನಿ. ತುಂಬ ಸಿಹಿಯಾಗಿರುವ ಮತ್ತು ತಂಪು ಪಾನೀಯಗಳ ಬದಲು ನೀರು, ಕಾಫಿ ಅಥವಾ ಟೀ ಕುಡಿಯಿರಿ. ಅಕ್ಕಿ ಮತ್ತು ಧಾನ್ಯಗಳಿಂದ ಮಾಡಿದ ರೊಟ್ಟಿಯನ್ನು ಮಿತವಾಗಿ ಸೇವಿಸಿ, ಸಂಸ್ಕರಿಸಲಾದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಕಡಿಮೆ ಕೊಬ್ಬಿನಾಂಶವಿರುವ ಆಹಾರವನ್ನು ಅಂದರೆ ಮೀನು, ದವಸಧಾನ್ಯ ಮತ್ತು ಕಾಯಿಪಲ್ಯಗಳನ್ನು ಸೇವಿಸಬಹುದು.

3. ದೈಹಿಕವಾಗಿ ಚುರುಕಾಗಿರಿ. ಆರೋಗ್ಯಕರ ತೂಕವನ್ನು ಪಡೆಯಲು ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ವ್ಯಾಯಾಮ ಸಹಾಯಮಾಡುತ್ತದೆ. ಟಿ.ವಿ. ನೋಡುವುದನ್ನು ಕಡಿಮೆ ಮಾಡಿ ಆ ಸಮಯವನ್ನು ವ್ಯಾಯಾಮಕ್ಕೆಂದು ಬದಿಗಿರಿಸಿ ಎಂದು ಒಬ್ಬ ತಜ್ಞರು ಹೇಳುತ್ತಾರೆ.

ನೀವು ನಿಮ್ಮ ಹೆತ್ತವರಿಂದ ಅನುವಂಶೀಯವಾಗಿ ಸಕ್ಕರೆ ಕಾಯಿಲೆಯ ಅಂಶ ಬರದಂತೆ ತಡೆಯಲು ಸಾಧ್ಯವಿಲ್ಲ. ಆದರೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಲು ಸಾಧ್ಯ. ಆರೋಗ್ಯ ಕಾಪಾಡಿಕೊಳ್ಳಲು ಮಾಡುವ ಪ್ರಯತ್ನ ವ್ಯರ್ಥವಾಗುವುದಿಲ್ಲ. ▪ (g14-E 09)

^ ಪ್ಯಾರ. 3 ಎಚ್ಚರ! ಪತ್ರಿಕೆ ಯಾವುದೇ ನಿರ್ದಿಷ್ಟ ಆಹಾರ ಸೇವಿಸಬೇಕೆಂದು ಅಥವಾ ವ್ಯಾಯಾಮ ಮಾಡಬೇಕೆಂದು ಹೇಳಲ್ಲ. ಓದುಗರು ವೈಯಕ್ತಿಕವಾಗಿ ವೈದ್ಯರನ್ನು ಸಂಪರ್ಕಿಸಿ ತಮ್ಮ ಆರೋಗ್ಯದ ಬಗ್ಗೆ ನಿರ್ಣಯಮಾಡಬೇಕು.